Agriculture and Rural Development
“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು.
ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳು ಇಂದಿಗೂ ವಿವಿಧ ಸಸ್ಯಗಳ ವಿಸ್ಮಯ ಖಜಾನೆಗಳು. ಈ ಸೊಪ್ಪಿನ ಬೆಟ್ಟಗಳು ಅನೇಕ ಕೃಷಿ ಚಟುವಟಿಕೆಗಳಿಗೆ ಆಧಾರ. ಅಲ್ಲಿ ಸಿಗುವ ಹಣ್ಣುಗಳಂತೂ ಹಲವಾರು. ಉತ್ತರಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಡಿಕೆ ಮತ್ತು ಕೆಲವು ಭತ್ತದ ಬೆಳೆಗಾರರು ಸೊಪ್ಪಿನ ಬೆಟ್ಟಗಳ ಸೊಪ್ಪಿನಮೇಲೆ ವಂಶಪಾರಂಪರ್ಯ ಹಕ್ಕು ಹೊಂದಿದ್ದಾರೆ. ತಮ್ಮ ತೋಟ ಮತ್ತು ಹೊಲಗಳಿಗೆ ಹಸುರುಗೊಬ್ಬರ ಮತ್ತು ಕಂಪೋಸ್ಟ್ ತಯಾರಿಗಾಗಿ ಸೊಪ್ಪಿನ ಬೆಟ್ಟದಿಂದ ಹಸಿಸೊಪ್ಪು ಮತ್ತು ಒಣಎಲೆ ಹೊತ್ತು ತರುವುದು ವಾಡಿಕೆ.
ಸೊಪ್ಪಿನ ಬೆಟ್ಟಗಳ ಸಸ್ಯರಾಶಿ ಅಲ್ಲಿ ಕಳೆಗಳ ಬೆಳವಣಿಗೆ ಮತ್ತು ಮಣ್ಣು ಸವಕಳಿ ಆಗುವುದನ್ನು ತಡೆಯುತ್ತದೆ. ಅಲ್ಲಿಂದ ಸಂಗ್ರಹಿಸಿದ ಸೌದೆ ಅಲ್ಲಿನ ರೈತರ ಮನೆಗಳ ಒಲೆಗಳಲ್ಲಿ ಬೆಂಕಿ ಉರಿಸಲು ಬಳಕೆ. ಜೊತೆಗೆ, ಸೊಪ್ಪಿನ ಬೆಟ್ಟಗಳು ಔಷಧೀಯ ಸಸ್ಯಗಳ ಆಗರಗಳು. ಸುತ್ತಮುತ್ತಲಿನ ಹಳ್ಳಿಗಳ ಪ್ರತಿಯೊಂದು ಕುಟುಂಬದವರಿಗೂ ಯಾವ್ಯಾವ ಸಾಮಾನ್ಯ ಅನಾರೋಗ್ಯಕ್ಕೆ ಸೊಪ್ಪಿನ ಬೆಟ್ಟದಿಂದ ಯಾವ್ಯಾವ ಗಿಡಮೂಲಿಕೆ ತಂದು ಔಷಧಿ ತಯಾರಿಸಬೇಕೆಂದು ಚೆನ್ನಾಗಿ ತಿಳಿದಿದೆ.
ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ ಸಮೃದ್ಧ ಹುಲ್ಲಿನ ಬೆಳೆ. ಆದ್ದರಿಂದಲೇ ರೈತರು ಅಲ್ಲಿ ತಮ್ಮ ಜಾನುವಾರು ಮೇಯಿಸುತ್ತಾರೆ. ಸ್ಥಳೀಯರು ಕರಡ ಎಂದು ಕರೆಯುವ ಹುಲ್ಲು ಅಲ್ಲಿ ಬೆಳೆಯುವ ಒಂದು ಹುಲ್ಲಿನ ಜಾತಿ. ಇದು ಅಡಿಕೆ ಮರಗಳಿಗೆ ಅತ್ಯುತ್ತಮ ಹೊದಿಕೆ ಹುಲ್ಲು. ಮಳೆಗಾಲ ಮುಗಿದ ನಂತರ ರೈತರು ಅಲ್ಲಿ ಜಾನುವಾರುಗಳನ್ನು ಮೇಯಿಸುವುದಿಲ್ಲ. ಯಾಕೆಂದರೆ, ಮಳೆ ಕಡಿಮೆಯಾದಂತೆ ಹುಲ್ಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ಸೊಪ್ಪಿನ ಬೆಟ್ಟದಿಂದ ಒಣಹುಲ್ಲು ಕೊಯ್ದು ತರುವ ರೈತರು ಅದನ್ನು ಜಾನುವಾರುಗಳಿಗೆ ಮೇವಾಗಿ ಹಾಕುತ್ತಾರೆ.
ರುದ್ರ ಗೌಡ ಅಡಿಕೆ ತೋಟಗಳು ಹಾಗೂ ಭತ್ತದ ಹೊಲಗಳ ನಡುವೆ ಮುನ್ನಡೆಯುತ್ತಿದ್ದರು. ಅವರ ಸೊಂಟಕ್ಕೆ ಕಟ್ಟಿದ್ದ ಮರದ ಕೊಕ್ಕೆಯಲ್ಲಿ ಹರಿತವಾದ ಕತ್ತಿ ನೇತಾಡುತ್ತಿತ್ತು. ಅವರೊಂದಿಗಿದ್ದ ತಂಡದ ಗುರಿ ಉತ್ತರಕನ್ನಡದ ಜಿಲ್ಲೆಯ ಹುಕ್ಲಿ ಹಳ್ಳಿಯ ಕಾಡಿನೊಳಗಿನ ಹುಲಿದೇವರ ತಾಣ ತಲಪುವುದು.
“ನಮ್ಮ ಹುಲಿದೇವರು ನಮ್ಮನ್ನು ಕಾಯುತ್ತಾರೆ. ಈ ದೇವರಿಗೆ ಎಷ್ಟು ವರ್ಷ ವಯಸ್ಸಾಯಿತೋ ಗೊತ್ತಿಲ್ಲ. ನಾವಂತೂ ಕಳೆದ ಒಂದು ನೂರು ವರುಷದಿಂದ ಹುಲಿ ದೇವರಿಗೆ ಪೂಜೆ ಮಾಡುತ್ತಲೇ ಇದ್ದೇವೆ” ಎನ್ನುತ್ತಾರೆ ರುದ್ರ ಗೌಡ.
ಕಾಡು ಹತ್ತಿರವಾಯಿತು. ಒಂದರ ಪಕ್ಕ ಇನ್ನೊಂದು ದಟ್ಟವಾಗಿ ಬೆಳೆದ ಮರಗಳು. ಅಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಂಡು ಓಡಾಡಬಾರದು. ಬರಿಗಾಲಿನಲ್ಲಿ ಕಾಡಿನೊಳಕ್ಕೆ ಹೋಗುತ್ತಿದ್ದಂತೆ ನಿಗೂಢ ಕಾಡುಲೋಕದ ಅನಾವರಣ. ನೆಲಕ್ಕೆ ಬಿದ್ದು ಒಣಗಿ ಕಪ್ಪಾದ ಎಲೆಗಳ ಮೆದುವಾದ ನೆಲಗಂಬಳಿ. ಒಂದಾದ ಮೇಲೊಂದರಂತೆ ಹಾಡುವ ಹಕ್ಕಿಗಳ ಗಾಢ ಕೂಗಿನ ಗಾನಲೋಕ. ಹಕ್ಕಿಗಳೊಂದಿಗೆ ಸ್ಪರ್ಧೆಗೆ ಬಿದ್ದಂತೆ ಚೀರಿಡುವ ಸಿಕಾಡಗಳ ಸದ್ದು. ತಮ್ಮ ಲಕ್ಷಗಟ್ಟಲೆ ಎಲೆಗಳ ಚಾವಣಿಯಿಂದ ಬಹುಪಾಲು ಸೂರ್ಯನ ಬೆಳಕಿಗೆ ತಡೆಯೊಡ್ಡುವ ೪೦ ಅಡಿ ಎತ್ತರದ ಮರಗಳು.
ಅಷ್ಟರಲ್ಲಿ ಎದುರಾಯಿತು ಇಳಿಜಾರು ನೆಲ. ಪಕ್ಕದಲ್ಲೇ ಬೃಹತ್ ಮರಗಳ ಬೇರುಗಳ ಮೇಲಿಂದ ಜಿಗಿದು ಓಡುತ್ತಿರುವ ನೀರಿನ ಝರಿ. ಅದರ ಪಕ್ಕದಲ್ಲೇ ಸುಮಾರು ಒಂದಡಿ ಎತ್ತರದ ಕಲ್ಲಿನ ಹುಲಿಯ ಮೂರ್ತಿ. ಸುತ್ತಲೂ ಗಿಡಗಂಟಿಗಳು. ಹುಲಿದೇವರ ಪದತಳದಲ್ಲಿ ಮಳೆನೀರಿನಲ್ಲಿ ನೆನೆದುನೆನೆದು ಕಪ್ಪಾದ ಎರಡು ತೆಂಗಿನಕಾಯಿಗಳು. ಪಕ್ಕದಲ್ಲಿ ಕಂಚಿನ ಹುಲಿದೇವರ ಮೂರ್ತಿ; ಅದಕ್ಕೆ ಉದ್ದಬಾಲ ಹಾಗೂ ಕಂಚಿನ ಪುಟ್ಟ ಆನೆಯ ತಲೆಯ ಮೇಲೆ ಎತ್ತಿ ಹಿಡಿದ ಪಂಜ.
“ಇದು ನಮ್ಮ ಹುಲಿದೇವರು” ಎನ್ನುತ್ತಾರೆ ತಗ್ಗಿದ ಸ್ವರದಲ್ಲಿ ರುದ್ರ ಗೌಡ. “ನಮಗೆ ಹುಲಿದೇವರಲ್ಲಿ ಅಗಾಧ ನಂಬಿಕೆ. ಹುಲಿದೇವರಿಗೆ ತೊಂದರೆ ಆಗಬಾರದೆಂದು ನಾವು ಇಲ್ಲಿ ಸುತ್ತಮುತ್ತಲಿನ ಕಾಡಿನಿಂದ ಏನನ್ನೂ ಒಯ್ಯುವುದಿಲ್ಲ. ಈ ನಿಯಮ ಮುರಿದರೆ ಹುಲಿದೇವರು ನಮ್ಮ ಹಳ್ಳಿಗೇ ಬರುತ್ತಾರೆ” ಎಂಬುದು ರುದ್ರಗೌಡರ ವಿವರಣೆ.
ಆಗಸ್ಟ್ ೧೯, ೨೦೧೭ರಂದು ಮಹಾರಾಷ್ಟ್ರದ ಪೂರ್ವ ದಿಕ್ಕಿನ ಯವತ್‌ಮಾಲ್ ಜಿಲ್ಲೆಯ ಬಿಟಿ-ಹತ್ತಿ ಹೊಲಗಳ ಕೆಲಸಗಾರರಿಗೆ ಬರಸಿಡಿಲಿನಂತೆ ಬಂದೆರಗಿತು ಆ ಸುದ್ದಿ - ಅವರ ಜೊತೆ-ಕೆಲಸಗಾರನೊಬ್ಬನ ಮರಣದ ಸುದ್ದಿ.
ಕೇವಲ ೧೨ ದಿನಗಳ ಮುಂಚೆ, ಪ್ರೊಫೆನೊಫೋಸ್ ಮತ್ತು ಸೈಪರ್-ಮೆಥ್ರಿನ್ ಎಂಬ ಎರಡು ಕೀಟನಾಶಕಗಳ ಘೋರ ವಿಷಕಾರಿ ಮಿಶ್ರಣವಾದ “ಪ್ರೊಫೆಕ್ಸ್ ಸೂಪರ್” ಎಂಬ ಪೀಡೆನಾಶಕವನ್ನು ಬಿಟಿ-ಹತ್ತಿ ಹೊಲದಲ್ಲಿ ಆತ ಸಿಂಪಡಿಸಿದ್ದ. ಆತನ ಮರಣದ ನಂತರ, ಅದೇ ತಿಂಗಳಿನಲ್ಲಿ ಯವತ್‌ಮಾಲ್ ಜಿಲ್ಲೆಯಲ್ಲಿ ಇನ್ನೂ ೨೦ ರೈತರು ಮತ್ತು ಹತ್ತಿರದ ಬುಲ್ದಾನ, ನಾಗಪುರ, ಅಕೋಲ, ವಾರ್ಧಾ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಬೇರೆ ೧೬ ರೈತರು ಸಾವಿಗೀಡಾದರು. ಈ ಎಲ್ಲ ಸಾವುಗಳಿಗೆ ಕಾರಣ ಪೀಡೆನಾಶಕಗಳ ಮಾರಕ ವಿಷ.
ಆ ಜಿಲ್ಲೆಗಳಲ್ಲಿ ಈ ಜೀವನಾಶಕ ಪೀಡೆನಾಶಕವನ್ನು ಸಿಂಪಡಿಸಿ, ಅನಾರೋಗ್ಯದಿಂದ ಸಂಕಟ ಪಟ್ಟು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸೇರಿಸಲ್ಪಟ್ಟವರ ಸಂಖ್ಯೆ ೧,೮೦೦. ವಾಂತಿ, ಭೇದಿ, ಭಯಂಕರ ಹೊಟ್ಟೆನೋವು, ಉಸಿರಾಟದ ತೊಂದರೆ, ಮಂದದೃಷ್ಠಿ ಮತ್ತು ತಾತ್ಕಾಲಿಕ ಕುರುಡುತನ - ಇವೆಲ್ಲ ಅವರು ಅನುಭವಿಸಿದ ಸಂಕಟಗಳು. ಆ ಘೊರ ವಿಷರಾಸಾಯನಿಕ ತುಂಬಿದ ಗಾಳಿಯನ್ನು ಉಸಿರಾಡಿದ್ದೇ ಈ ಎಲ್ಲ ಸಂಕಟಗಳಿಗೆ ಕಾರಣ.
ಈ ಸಾವುಗಳ ವೃತ್ತಾಂತ ದೊಡ್ಡ ಸುದ್ದಿಯಾಗಲೇ ಇಲ್ಲ. ಅದೇನೂ ಹೊಸತಲ್ಲ. ಯಾಕೆಂದರೆ, ಪ್ರತಿ ವರುಷವೂ ಅಲ್ಲಿ ಪೀಡೆನಾಶಕಗಳನ್ನು ಸಿಂಪಡಿಸುವವರಲ್ಲಿ ಕೆಲವರು ಸಾಯುತ್ತಾರೆ. ಹಾಗಾಗಿ, ಅಲ್ಲಿನ ಆಸ್ಪತ್ರೆಗಳಿಗೆ ಆ ಹಂಗಾಮಿನಲ್ಲಿ ಇಂತಹ ರೋಗಿಗಳ ದಾಖಲಾತಿ ಮಾಮೂಲಿ ವಿಷಯ. ಆದರೆ, ಈ ವರುಷ ಹಲವು ಜಿಲ್ಲೆಗಳಲ್ಲಿ ಮರಣಗಳು ಸಂಭವಿಸಿದ ಕಾರಣ, “ಇಲ್ಲೇನೋ ಸಮಸ್ಯೆಯಿದೆ" ಎಂಬುದು ಸರಕಾರದ ಗಮನಕ್ಕೆ ಬಂತು - ಅದೂ ಸ್ಥಳೀಯ ಪತ್ರಿಕೆಗಳಲ್ಲಿ ರೈತರ ಮತ್ತು ಕೃಷಿಕೆಲಸಗಾರರ ಸರಣಿ ಸಾವುಗಳ ಸುದ್ದಿ ಪ್ರಕಟವಾದ ನಂತರ.
ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ ಚಹಾ ಹುಡಿಗೆ “ಆನೆಸ್ನೇಹಿ ಚಹಾ” ಎಂಬ ಸರ್ಟಿಫಿಕೇಟ್ ಹಾಗೂ ಆ ಮೂಲಕ ಜಾಸ್ತಿ ಬೆಲೆ ಪಡೆದು ಸುದ್ದಿ ಮಾಡಿದೆ.
ಆ ಚಹಾ ತೋಟದ ಮಾಲೀಕ ತೆನ್ಜಿಂಗ್ ಬೊಡೊಸಾ. ಬ್ರಹ್ಮಪುತ್ರಾ ನದಿ ಕಣಿವೆ ಭೂತಾನಿನ ಬೆಟ್ಟಗಳನ್ನು ಸಂಧಿಸುವಲ್ಲಿ, ರಾಜಕೀಯವಾಗಿ ತಲ್ಲಣದಲ್ಲಿರುವ ಬೋಡೋಲ್ಯಾಂಡ್ ಪ್ರದೇಶದ ಅಂಚಿನಲ್ಲಿದೆ ಆ ಚಹಾ ತೋಟ. ಅದಕ್ಕೆ ಸರ್ಟಿಫಿಕೇಟ್ ನೀಡಿರುವುದು ಯುಎಸ್ಎ ದೇಶದ ಮೊಂಟಾನಾ ವಿಶ್ವವಿದ್ಯಾಲಯದ “ಬ್ರಾಡರ್ ಇಂಪಾಕ್ಟ್ಸ್ ಗ್ರೂಪ್”. ಈ ಯೋಜನೆಗೆ ವೈಲ್ಡ್ ಲೈಫ್ ಫ್ರೆಂಡ್ಲಿ ಎಂಟರ್ಪ್ರೈಸ್ ನೆಟ್ ವರ್ಕ್ಸ್ (ಡಬ್ಲ್ಯು.ಎಫ್.ಇ.ಎನ್.) ಸಹಭಾಗಿತ್ವ. ಇದು ನಿರ್ವಂಶವಾಗಬಹುದಾದ ವನ್ಯಜೀವಿಗಳ ಸಂರಕ್ಷಣೆಗಾಗಿ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಮೀಸಲಾದ ಜಾಗತಿಕ ಸಮುದಾಯ.
ಮೂವತ್ತೊಂದು ವರುಷ ವಯಸ್ಸಿನ ತೆನ್ಜಿಂಗ್ ಬೊಡೊಸಾ ಜಾಗತಿಕ ಮಟ್ಟಕ್ಕೆ ಏರಿಬಂದ ಹಾದಿ ಕುತೂಹಲಕಾರಿ. ಅಸ್ಸಾಂನ ಉದಾಲ್ಗುರಿ ಜಿಲ್ಲೆಯ ದಕ್ಷಿಣ ಕಹಿಬಾರಿ ಗ್ರಾಮದಲ್ಲಿ ಬೊಡೊಸಾ ಅವರ ವಾಸ. ಅಲ್ಲಿಗೆ ವಿದ್ಯುತ್ ಬಂದು ಕೇವಲ ಮೂರು ವರುಷಗಳಾಗಿವೆ, ಅಷ್ಟೇ! ಅಲ್ಲಿನ ನಿವಾಸಿಗಳು ಸಣ್ಣರೈತರು. ಬೊಡೊಸಾರ ಕುಟುಂಬ ಭತ್ತ ಬೆಳೆಸುತ್ತಿತ್ತು. ಅವರ ತಂದೆಯ ಮದುವೆಯಾದಾಗ ಬಳುವಳಿಯಾಗಿ ಬಂದಿದ್ದವು ಕೆಲವು ದನ ಮತ್ತು ಎಮ್ಮೆಗಳು. ಅವುಗಳ ಜೊತೆಗೆ ಕೋಳಿ ಮತ್ತು ಆಡುಗಳ ಸಾಕಣೆ. ಅವರ ಕೃಷಿ ಹೊಂಡಗಳಲ್ಲಿ ಸಾಕಷ್ಟು ಮೀನುಗಳು. “ಬಾಲ್ಯದಲ್ಲಿ ಅದೊಂದು ಅದ್ಭುತ ಬದುಕು. ದಿನನಿತ್ಯ ಬೇಕಾಗುವ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಹೋಗುವ ಅಗತ್ಯವೇ ಇರಲಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ ಬೊಡೊಸಾ.
ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್ ಬಿಟ್ಟುಹೋಗಿರುವ ಆತ್ಮಹತ್ಯಾ ಹೇಳಿಕೆಯ ವಿಡಿಯೋ ರೆಕಾರ್ಡಿಂಗಿನಲ್ಲಿರುವ ಮಾತು: “ನನ್ನ ಬಲಿದಾನ ಭಾರತದಲ್ಲಿ ಪ್ಲಾಸ್ಟಿಕಿನ ಬಳಕೆ ಬಗ್ಗೆ ಗಂಭೀರ ಚಿಂತನೆಯನ್ನು ಹುಟ್ಟು ಹಾಕುತ್ತದೆಂಬ ಆಶಯದಿಂದ ನನ್ನ ಪ್ರಾಣತ್ಯಾಗ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಶಾಂತಿಯುತ ಪ್ರತಿಭಟನೆಗಳೆಲ್ಲವೂ ವ್ಯರ್ಥವಾದ ಕಾರಣ, ನನಗೆ ಆತ್ಮಹತ್ಯೆಯ ಆಯ್ಕೆ ಅನಿವಾರ್ಯವಾಯಿತು.”
ಪ್ಲಾಸ್ಟಿಕಿನ ಅವಾಂತರ ಇಷ್ಟು ತೀವ್ರವಾಗಿದೆಯೇ? ಒಮ್ಮೆ ನಿಮ್ಮ ಮನೆಯಲ್ಲಿ ಇರುವುದನ್ನೆಲ್ಲ ಗಮನಿಸಿ. ನೀವು ಖರೀದಿ ಮಾಡುವುದನ್ನೆಲ್ಲ ಪರಿಶೀಲಿಸಿ. ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದೆ, ಅಲ್ಲವೇ? ಹೌದು, ಪ್ಲಾಸ್ಟಿಕ್ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಅದು ಅಗ್ಗ, ಅದರ ಬಾಳಿಕೆ ದೀರ್ಘ, ಅದು ಭಾರೀ ಅನುಕೂಲ ಎಂಬ ಸಬೂಬುಗಳನ್ನು ಹೇಳುತ್ತಾ, ಮತ್ತೆಮತ್ತೆ ದಿನದಿನವೂ ಪ್ಲಾಸ್ಟಿಕನ್ನು ಮನೆಯೊಳಗೆ ತರುತ್ತಿದ್ದೇವೆ, ಅಲ್ಲವೇ? ಅದರಿಂದಾಗಿಯೇ, ೫೦ ವರುಷಗಳ ಮುಂಚೆ ಉತ್ಪಾದನೆ ಮಾಡುತ್ತಿದ್ದ ಪರಿಮಾಣಕ್ಕಿಂತ ೨೦ ಪಟ್ಟು ಅಧಿಕ ಪ್ಲಾಸ್ಟಿಕನ್ನು ಈಗ ಉತ್ಪಾದಿಸುತ್ತಿದ್ದೇವೆ! ಮುಂದಿನ ೨೦ ವರುಷಗಳಲ್ಲಿ ಪ್ಲಾಸ್ಟಿಕಿನ ಉತ್ಪಾದನೆ ಇಮ್ಮಡಿಯಾಗಲಿದೆ!
ಅಬ್ಬ, ಎಲ್ಲಿ ಕಂಡರಲ್ಲಿ ಪ್ಲಾಸ್ಟಿಕ್! ಕೆರೆಗಳಲ್ಲಿ, ನದಿಗಳ ಬದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನಗಳಲ್ಲಿ, ಕಾಡುಗಳ ಅಂಚಿನಲ್ಲಿ, ಗುಡ್ಡಗಳಲ್ಲಿ, ಪರ್ವತಗಳಲ್ಲಿ, ರಸ್ತೆಗಳ ಇಬ್ಬದಿಗಳಲ್ಲಿ, ರೈಲುಹಳಿಗಳ ಇಕ್ಕಡೆಗಳಲ್ಲಿ, ಸಮುದ್ರಗಳ ತಳಗಳಲ್ಲಿ – ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟಗಳು, ಚೀಲಗಳು, ಬಾಟಲಿಗಳು, ಕವರುಗಳು, ಬ್ಯಾಗುಗಳು, ಕನ್-ಟೈನರುಗಳು ತುಂಬಿಕೊಂಡಿವೆ. “ಪ್ರಾಕೃತಿಕ ಪರಿಸರವನ್ನು ಶಾಶ್ವತವಾಗಿ ಮಾಲಿನ್ಯ ಮಾಡುವ” ಪ್ಲಾಸ್ಟಿಕಿನ ಅಪಾಯ ನಿಜವಾಗುತ್ತಿದೆ ಎನ್ನುತ್ತದೆ ಪ್ಲಾಸ್ಟಿಕಿನ ಬಗ್ಗೆ ೨೦೧೭ರಲ್ಲಿ ಪ್ರಕಟವಾಗಿರುವ ಜಾಗತಿಕ ವರದಿ.
ನಮ್ಮ ದೇಶದ ಎಲ್ಲೆಡೆಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಸರಕಾರದ ನಿರ್ಲಕ್ಷ್ಯದಿಂದಾಗಿ ಕಳೆದ ಇಪ್ಪತ್ತು ವರುಷಗಳಲ್ಲಿ ಮೂರು ಲಕ್ಷಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದೇ ಅವರ ಆಕ್ರೋಶಕ್ಕೆ ಕಾರಣ.
ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳು ಹಲವು. ಪ್ರಧಾನ ಕಾರಣ, ಒಳಸುರಿಗಳ (ಬೀಜ, ಗೊಬ್ಬರ, ಕೆಲಸದಾಳುಗಳ ಮಜೂರಿ, ಕೃಷಿಯಂತ್ರಗಳು) ವೆಚ್ಚ ಏರುತ್ತಿದ್ದರೂ ಕೃಷಿ ಉತ್ಪನ್ನಗಳ ಬೆಲೆ ಒಂದೇ ಮಟ್ಟದಲ್ಲಿದೆ; ಹಾಗಾಗಿ, ರೈತರ ಸಾಲದ ಹೊರೆ ಜೀವಭಾರವಾಗುವಷ್ಟು ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೆಲವು ರಾಜ್ಯಗಳು ತಾವು ರೈತರ ಪರ ಎಂದು ತೋರಿಸಿಕೊಳ್ಳಲಿಕ್ಕಾಗಿ, ಹಲವಾರು ಷರತ್ತುಗಳೊಂದಿಗೆ, ಸಾಲಮನ್ನಾದ ಯೋಜನೆ ಜ್ಯಾರಿ ಮಾಡಿವೆ.
ಇಂತಹ ಸಮಯಕ್ಕಾಗಿ ಕಾದಿರುವ ಕೆಲವು ಕೃಷಿ ಪರಿಣತರು “ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳೇನು?” ಎಂದು ವಿಶ್ಲೇಷಣೆಗೆ ತೊಡಗಿದ್ದಾರೆ. ಅವರು ನೀಡುವ ಕಾರಣಗಳು ಹೀಗಿವೆ: ಹಿಡುವಳಿಗಳ ವಿಭಜನೆ, ಜಾಗತೀಕರಣದ ಬೆನ್ನೇರಿ ಬಂದ ಹೊಸ ಆರ್ಥಿಕ ನೀತಿಗಳಿಂದಾಗಿ ಮಾರುಕಟ್ಟೆಯಲ್ಲಿ ಏರಿಳಿತ, ರೈತರ ಜಮೀನುಗಳಿಗೆ ನೀರಾವರಿಯ ಕೊರತೆ, ಉಗ್ರಾಣಗಳ ಕೊರತೆ, ಕೃಷಿಯ ಒಳಸುರಿಗಳ ಬೆಲೆಯೇರಿಕೆ, ಕಣ್ಣುಮುಚ್ಚಾಲೆಯಾಡುವ ಮಳೆ.
ಇವುಗಳಲ್ಲಿ ಪ್ರತಿಯೊಂದು ಕಾರಣವೂ ಕೃಷಿರಂಗದ ಬಿಕ್ಕಟ್ಟಿನ ಒಂದು ಮಗ್ಗುಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಆದರೆ ಈ ಬಿಕ್ಕಟ್ಟಿನ ಮೂಲ ಕಾರಣ ಬೇರೆಯೇ ಆಗಿದೆ. ನಾವೆಲ್ಲ ಶಾಲೆಗಳಲ್ಲಿ, ಹೈಸ್ಕೂಲುಗಳಲ್ಲಿ ಕಲಿಯುತ್ತಿದ್ದಾಗ “ಹಸುರು ಕ್ರಾಂತಿ”ಯನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ಅದು ಆಹಾರದ ಕೊರತೆಯಿಂದ ನಮ್ಮ ದೇಶವನ್ನು ಪಾರು ಮಾಡಿತೆಂದು ಮತ್ತೆಮತ್ತೆ ಬೋಧನೆ. ಈ ಹೊಸವಿಧಾನದ ಕೃಷಿಗೆ ಆಧಿಕ ಇಳುವರಿ ತಳಿಗಳು, ರಾಸಾಯನಿಕ ಗೊಬ್ಬರಗಳು ಹಾಗೂ ವಿಷಭರಿತ ಪೀಡೆನಾಶಕಗಳೇ ಅಡಿಪಾಯವೆಂದು ವಿವರಿಸಲಾಗಿತ್ತು.
ನಮ್ಮ ದೇಶದ ರೈತರ ಸಂಕಟಗಳಿಗೆ ಕೊನೆಯೇ ಇಲ್ಲ. ಈ ವರುಷವೂ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯಿಂದ ನಮ್ಮ ರೈತರಿಗೆ ಸಂತೋಷವಾಗಿಲ್ಲ. ಸಂತೋಷದ ಮಾತಂತಿರಲಿ, ಅವರು ಬೀದಿಗಿಳಿದಿದ್ದಾರೆ - ಸರಕಾರ ತನ್ನ ಧೋರಣೆ ಬದಲಾಯಿಸಬೇಕು ಎಂಬುದವರ ಬೇಡಿಕೆ. ಹನ್ನೆರಡು ರಾಜ್ಯಗಳಲ್ಲಿ ಕಳೆದ ಎಂಟು ತಿಂಗಳಿನಿಂದ (ಅಂದರೆ ಎರಡು ಹಂಗಾಮು) ರೈತರ ಪ್ರತಿಭಟನೆ ಭುಗಿಲೆದ್ದಿದೆ. ೬ ಜೂನ್ ೨೦೧೭ರಂದು ಮಧ್ಯಪ್ರದೇಶದ ಭೋಪಾಲದಲ್ಲಿ ಪೊಲೀಸರ ಗುಂಡೇಟಿಗೆ ಆರು ರೈತರು ಬಲಿಯಾದ ಕ್ಷಣದಿಂದ ರೈತರ ಪ್ರತಿಭಟನೆ ಹಿಂಸಾ ರೂಪ ತಾಳಿದೆ.
ವಾಸ್ತವವಾಗಿ, ಈ ಹೊತ್ತಿನಲ್ಲಿ ನಮ್ಮ ರೈತರು ಮತ್ತು ಸರಕಾರ ಸಂಭ್ರಮಾಚರಣೆ ಮಾಡಬೇಕಾಗಿತ್ತು. ಯಾಕೆನ್ನುತ್ತೀರಾ? ಈ ಎರಡು ಮಹಾ ಸಾಧನೆಗಳಿಗಾಗಿ: ೨೦೧೬-೧೭ನೇ ವರುಷದಲ್ಲಿ ಆಹಾರ ಧಾನ್ಯಗಳ ದಾಖಲೆ ಉತ್ಪಾದನೆಗಾಗಿ ಮತ್ತು ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾರಣವಾದ “ಹಸುರುಕ್ರಾಂತಿ" ೫೦ ವರುಷಗಳನ್ನು ಪೂರೈಸಿದ್ದಕ್ಕಾಗಿ. ಆದರೆ ಆದದ್ದೇನು? ಫಸಲಿಗೆ ಚರಿತ್ರೆಯಲ್ಲೇ ಅತ್ಯಂತ ಕಡಿಮೆ ಬೆಲೆ ಸಿಕ್ಕಿದ್ದನ್ನು ಪ್ರತಿಭಟಿಸಲಿಕ್ಕಾಗಿ ಆಲೂಗಡ್ಡೆ, ಟೊಮೆಟೊ, ಹಾಲು ಮತ್ತು ಇತರ ಕೃಷಿಉತ್ಪನ್ನಗಳನ್ನು ರೈತರು ರಸ್ತೆಗೆ ಚೆಲ್ಲಿದರು. ಎದ್ದು ಕಾಣುವ ಉದಾಹರಣೆ ಈರುಳ್ಳಿ. ಇದರ ಬೆಲೆ ಏರಿದಾಗೆಲ್ಲ ರಾಜಕೀಯ ಸುಂಟರಗಾಳಿ ಎದ್ದಿದೆ. ಇದೀಗ, ಮೊದಲ ಬಾರಿ ರೈತರು ಮತ್ತು ರಾಜಕಾರಣಿಗಳು - ಇಬ್ಬರೂ ಕುಸಿಯುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಕೃಷಿರಂಗದಲ್ಲಿ ಏನೋ ಗಂಭೀರ ತಪ್ಪಾಗಿದೆ ಮತ್ತು ಅದನ್ನು ನಾವು ಅಸಡ್ಡೆ ಮಾಡುತ್ತಿದ್ದೇವೆ ಎಂಬುದನ್ನು.
ಒಂದು ಕಿಲೋಕ್ಕೆ ರೂಪಾಯಿ ೧.೧೦ ಲಕ್ಷ ಬೆಲೆಯ ಚಹಾ ಬಗ್ಗೆ ಕೇಳಿದ್ದೀರಾ? ಅದುವೇ ಜಗತ್ತಿನ ಅತ್ಯಂತ ದುಬಾರಿ ಚಹಾ. ಅದರ ತವರು ಡಾರ್ಜಿಲಿಂಗಿನ ಮಕೈಬಾರಿ ಟೀ ಎಸ್ಟೇಟ್.
೧೮೫೯ರಲ್ಲಿ ಗಿರೀಶ್ ಚಂದ್ರ ಬ್ಯಾನರ್ಜಿ ಆರಂಭಿಸಿದ ಈ ಎಸ್ಟೇಟಿಗೆ ೧೫೮ ವರುಷಗಳ ದೀರ್ಘ ಇತಿಹಾಸ. ೧,೬೫೦ ಎಕ್ರೆ ವಿಸ್ತಾರದ ಮಕೈಬಾರಿ ಟೀ ಎಸ್ಟೇಟಿನಲ್ಲಿ ಸುತ್ತಾಡುವಾಗ ಅಲ್ಲಿ ಮೂರನೆಯ ಎರಡು ಭಾಗ ಪ್ರದೇಶದಲ್ಲಿ (೧,೧೦೦ ಎಕ್ರೆ) ಅರಣ್ಯವೇ ಕಾಣಿಸುತ್ತದೆ. ಉಳಿದ ಮೂರನೆಯ ಒಂದು ಭಾಗ ಪ್ರದೇಶದಲ್ಲಿ (೫೫೦ ಎಕ್ರೆ) ಮಾತ್ರ, ಅರಣ್ಯದ ನಡುನಡುವೆ ಚಹಾ ಗಿಡಗಳ ಉದ್ಯಾನಗಳಿವೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಟೀ ಉತ್ಪಾದನೆಯಾಗಲು ಇದುವೇ ಪ್ರಧಾನ ಕಾರಣ, ಎನ್ನುತ್ತಾರೆ ಮಕೈಬಾರಿ ಟೀ ಎಸ್ಟೇಟಿನ ಮಾಲೀಕ ರಾಜಾ ಬ್ಯಾನರ್ಜಿ (೭೦).
೧೯೬೦ ಮತ್ತು ೧೯೭೦ರ ದಶಕಗಳಲ್ಲಿ, ಈ ಎಸ್ಟೇಟಿನಲ್ಲಿ ನೂರಾರು ಎಕ್ರೆ ಕಾಡು ನಾಶ ಮಾಡಲಾಯಿತು. ಅದರ ದುಷ್ಪರಿಣಾಮಗಳು ಕೆಲವೇ ವರುಷಗಳಲ್ಲಿ ಕಂಡು ಬಂದವು. ಭಾರೀ ಭೂಕುಸಿತದಿಂದಾಗಿ, ವ್ಯಾಪಕ ಪ್ರದೇಶದಲ್ಲಿ ಚಹಾ ಉದ್ಯಾನಗಳು ನಾಶವಾದವು. ಅದಲ್ಲದೆ, ರಾಸಾಯನಿಕ ಪೀಡೆನಾಶಕಗಳ ಅಧಿಕ ಬಳಕೆಯಿಂದಾಗಿ ಅಲ್ಲಿನ ಮಣ್ಣು ವಿಷಮಯವಾಯಿತು. “ಇದರಿಂದ ನಾವು ಪಾಠ ಕಲಿತು, ಕಾಡು ಬೆಳೆಸುವ ದೊಡ್ಡ ಕಾರ್ಯಕ್ರಮ ಕೈಗೆತ್ತಿಕೊಂಡೆವು” ಎಂದು ವಿವರಿಸುತ್ತಾರೆ ರಾಜಾ ಬ್ಯಾನರ್ಜಿ.
ಜೊತೆಗೆ, ಅಲ್ಲಿ ಬಯೋಡೈನಮಿಕ್ ಕೃಷಿ ಎಂಬ ಸಾವಯವ ಪದ್ಧತಿಯಲ್ಲಿ ಚಹಾ ಗಿಡಗಳ ಕೃಷಿ ಮಾಡುತ್ತಿರುವುದೂ ಅಲ್ಲಿನ ಚಹಾದ ಗುಣಮಟ್ಟ ವೃದ್ಧಿಗೆ ಪೂರಕ. ಡಾರ್ಜಿಲಿಂಗಿನಲ್ಲಿ ಚಹಾದ ಸಾವಯವ ಕೃಷಿ ಆರಂಭಿಸಿದ ಮೊದಲನೆಯ ಎಸ್ಟೇಟ್ ಮಕೈಬಾರಿ. “ನಾವು ಕಾಡು ಬೆಳೆಸುವ ಮತ್ತು ಸಾವಯವ ಕೃಷಿಯ ಕ್ರಮಗಳನ್ನು ಜ್ಯಾರಿ ಮಾಡಿದ್ದರಿಂದಾಗಿ ನಮ್ಮ ಟೀ ಎಸ್ಟೇಟ್ ಉಳಿಯಿತು. ಜೊತೆಗೆ, ಜಗತ್ತಿನ ಎಲ್ಲ ಪ್ರದೇಶಗಳ ಚಹಾಪ್ರೇಮಿಗಳಿಗೆ ನಮ್ಮ ಉತ್ಪನ್ನಗಳು ಇಷ್ಟವಾದವು. ಡಾರ್ಜಿಲಿಂಗಿನ ಇತರ ಟೀ ಎಸ್ಟೇಟಿನವರು ಇದೇ ಕ್ರಮಗಳನ್ನು ಅನುಸರಿಸಿದರು. ಹಾಗಾಗಿ, ಈಗ ಡಾರ್ಜಿಲಿಂಗಿನಲ್ಲಿ ಎಲ್ಲೆಡೆ ಸಾವಯವ ಟೀ ಎಸ್ಟೇಟುಗಳೇ ಇವೆ” ಎಂದು ಮಾಹಿತಿ ನೀಡುತ್ತಾರೆ ರಾಜಾ ಬ್ಯಾನರ್ಜಿ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಮುದ್ರ ತೀರದ ದಾಪೋಲಿ ಊರಿನ ಗುಡ್ಡದಲ್ಲಿರುವ ಆ ಮಾವಿನ ತೋಟದಲ್ಲಿ ಮುನ್ನೂರು ಮಾವಿನ ಮರಗಳು. ಪ್ರತಿಯೊಂದು ಮರದಲ್ಲಿಯೂ ಮೇ ತಿಂಗಳಿನಲ್ಲಿ ಗೊಂಚಲುಗೊಂಚಲು ಮಾವಿನ ಕಾಯಿಗಳು - ಅಲ್ಫಾನ್ಸೋ ಮಾವು.
ಆ ಹೊತ್ತಿಗೆ ಅಲ್ಲಿ ಬೇಸಗೆಯ ಬಿಸಿ ಜೋರು. ಜೊತೆಗೆ ಸಮುದ್ರದಿಂದ ಗಾಳಿಯಲ್ಲಿ ತೇಲಿ ಬರುವ ತೇವಾಂಶ. ಇವೆರಡೂ ಅಗತ್ಯ - ಅಲ್ಫಾನ್ಸೋ ಮಾವು ಮಾಗಲು, ಕೊಯ್ಲಿಗೆ ತಯಾರಾಗಲು.
ನೊಷಿರ್ ವಾನ್ ಮಿಸ್ತ್ರಿ ೧೪ ಎಕ್ರೆಗಳ ಈ ತೋಟ ಖರೀದಿಸಿದ್ದು ೧೦ ವರುಷಗಳ ಮುಂಚೆ. ಪ್ರತಿಯೊಂದು ಮಾವಿನ ಮರದ ಬಳಿ ಹೋಗಿ ನಿಂತು, ಅದರಿಂದ ನೇತಾಡುವ ಕಾಯಿಗಳನ್ನು ಕಣ್ಣಿಟ್ಟು ಪರಿಶೀಲಿಸುತ್ತಾರೆ. ಅಲ್ಫಾನ್ಸೋ ಕಾಯಿಗಳ ಮೇಲ್-ಮುಂಭಾಗದ ಡುಬ್ಬವು ತರುಣಿಯ ನಸುಗೆಂಪು ಕೆನ್ನೆಯಂತಿರಬೇಕು - ಹಾಗಿದ್ದರೆ, ಆ ಕಾಯಿ ರುಚಿರುಚಿ ಹಣ್ಣಾಗಿ ಬಲಿಯುತ್ತದೆ ಎಂಬುದವರ ಅನುಭವ. ಅದರ ಬದಲಾಗಿ, ಮಾವಿನ ಕಾಯಿಯ ಮೇಲ್ಭಾಗ ಸಪಾಟವಾಗಿದ್ದರೆ ಅದು ಮಾಗುವುದಿಲ್ಲ.
ಇವೆಲ್ಲ ಸಣ್ಣಪುಟ್ಟ ವಿವರಗಳು, ಬಿರುಸಿನ ಬೆಲೆ ಸ್ಪರ್ಧೆಯಿರುವ ಹಾಪುಸ್ (ಮಹಾರಾಷ್ಟ್ರದವರ ಮಾತಿನಲ್ಲಿ ಅಲ್ಫಾನ್ಸೋ ಮಾವಿನ ಮುದ್ದಿನ ಹೆಸರು) ಮಾವು ಮಾರಾಟದಲ್ಲಿ ಮಿಸ್ತ್ರಿ ಅವರಿಗೆ ಮುಖ್ಯವಾಗುತ್ತವೆ. ಈ ಮಾವುಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ, ಸಂಪೂರ್ಣ ಸಾವಯವ ವಿಧಾನದಲ್ಲೇ ಬೆಳೆಸಿ, ಹಣ್ಣು ಮಾಡಬೇಕೆಂಬುದು ಮಿಸ್ತ್ರಿಯವರ ಅಭಿಪ್ರಾಯ.
ಒಂದು ಬುಟ್ಟಿ ತುಂಬ ಬಲಿತ ಮಾವಿನ ಕಾಯಿಗಳನ್ನು ಕೆಲಸಗಾರರು ಅಂಗಳಕ್ಕೆ ತಂದಾಗ ಮಿಸ್ತ್ರಿ ಅವರಿಂದ ಪುಟ್ಟ ಪರೀಕ್ಷೆ. ಪಾತ್ರೆಯಲ್ಲಿರುವ ನೀರಿಗೆ ಎರಡು ಅಥವಾ ಮೂರು ಕಾಯಿಗಳನ್ನು ಹಾಕುತ್ತಾರೆ. ಅವು ನೀರಿನಲ್ಲಿ ಮುಳುಗಿದರೆ ಚೆನ್ನಾಗಿವೆ ಎಂದರ್ಥ. ಅವು ನೀರಿನಲ್ಲಿ ತೇಲಿದರೆ ಚೆನ್ನಾಗಿಲ್ಲ; ಅಂದರೆ ಆ ಮಾವಿನೊಳಗೆ ಕೆಲವೆಡೆ ಟೊಳ್ಳು ಇರಬಹುದು ಎಂದರ್ಥ. ಅಂಥ ಮಾವುಗಳನ್ನು ದಾಪೋಲಿಯಲ್ಲೇ ಮಾರಾಟ ಮಾಡುತ್ತಾರೆ - ಉಪ್ಪಿನಕಾಯಿ ತಯಾರಿಸಲಿಕ್ಕಾಗಿ.
ಉಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಿ. ಅವು ಆದಾಯದ ಮೂಲ. ನಿರುಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಾ? ಇವು ಕೆಲಸಕ್ಕೆ ಬಾರದ ಪೇಟೆಂಟುಗಳು. ಅದನ್ನು ಪಡೆದ ವಿಜ್ನಾನಿಯ “ಸ್ವ-ವಿವರ” ದಲ್ಲಿ ಮಾತ್ರ ಇದು ಚಂದ. ಕಾಣಬಹುದು.
ಅದಕ್ಕಾಗಿಯೇ ಇತ್ತೀಚೆಗೆ ಭಾರತದ ಪ್ರಧಾನ ಸಂಶೋಧನಾ ಸಂಸ್ಥೆ ಸಿಎಸ್ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್) ವಿವಿಧ ಅಂಗಸಂಸ್ಥೆಗಳಲ್ಲಿ ಇರುವ ಸುಮಾರು ೧೮,೦೦೦ ವಿಜ್ನಾನಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಿದೆ: “ಪೇಟೆಂಟುಗಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸಿ ಮತ್ತು ನಿರುಪಯುಕ್ತ ಪೇಟೆಂಟುಗಳನ್ನು ಕಿತ್ತು ಬಿಸಾಡಿ.” ಸಿಎಸ್ಐಆರ್ನ ಡೈರೆಕ್ಟರ್ ಜನರಲ್ ಗಿರೀಶ್ ಸಾಹ್ನಿ ತನ್ನ ಇತ್ತೀಚೆಗೆನ ಕಠಿಣ ನುಡಿಗಳ ಪತ್ರದಲ್ಲಿ ಈ ಆದೇಶ ನೀಡಿದ್ದಾರೆ.
ಸರಕಾರದ ಸಂಸ್ಥೆಗಳಲ್ಲಿರುವ ವಿಜ್ನಾನಿಗಳಿಗೆ ಬಹುಶಃ ಇದೇ ಮೊದಲ ಬಾರಿ ಇಂತಹ ಆದೇಶ ನೀಡಲಾಗಿದೆ. ಕಳೆದ ದಶಕದಲ್ಲಿ ನಮ್ಮ ದೇಶದ ವಿಜ್ನಾನಿಗಳಿಗೆ ಪೇಟೆಂಟಿನ “ಜ್ವರ” ಬಂದಿತ್ತು. ಅಂದರೆ, ಬೌದ್ಧಿಕ ಸೊತ್ತಿನ ಹಕ್ಕುಗಳ (ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ – ಐಪಿಆರ್) ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಬೇಕೆಂದು ವಿಜ್ನಾನಿಗಳಿಗೆ ಆಗ್ರಹ. ಸಣ್ಣಪುಟ್ಟ ವಿಷಯಗಳ ಬಗ್ಗೆಯೂ ಪೇಟೆಂಟ್ ಪಡೆಯಲು ಅವರಿಗೆ ಪ್ರೋತ್ಸಾಹ. ಇದು ಯಾವ ಮಟ್ಟಕ್ಕೆ ಮುಟ್ಟಿತೆಂದರೆ, ಭಾರತೀಯ ಕೃಷಿ ಸಂಶೋಧನಾ ಮಂಡಲಿಯಲ್ಲಿ ಸಹಾಯಕ ಡೈರೆಕ್ಟರ್ ಜನರಲ್ ನೇತೃತ್ವದಲ್ಲಿ ವಿಶೇಷ ವಿಭಾಗವೊಂದನ್ನು ಸ್ಥಾಪಿಸಲಾಯಿತು – ಪೇಟೆಂಟುಗಳನ್ನು ಪಡೆಯುವುದನ್ನು ಪ್ರೋತ್ಸಾಹಿಸಲಿಕ್ಕಾಗಿ. ಇದರ ಪರಿಣಾಮವಾಗಿ, ವಿಜ್ನಾನಿಗಳು ಉಪ್ಪಿನಕಾಯಿಯ ಪೇಟೆಂಟಿಗೆ ಅರ್ಜಿ ಸಲ್ಲಿಸಲಿಕ್ಕೂ ಅನುಮತೆತಿ ನೀಡಲಾಯಿತು!