ನಿರುಪಯುಕ್ತ ಪೇಟೆಂಟ್ ಕಿತ್ತು ಬಿಸಾಕಲು ಆದೇಶ

       
ಉಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಿ. ಅವು ಆದಾಯದ ಮೂಲ. ನಿರುಪಯುಕ್ತ ಪೇಟೆಂಟುಗಳ ಬಗ್ಗೆ ಕೇಳಿದ್ದೀರಾ? ಇವು ಕೆಲಸಕ್ಕೆ ಬಾರದ ಪೇಟೆಂಟುಗಳು. ಅದನ್ನು ಪಡೆದ ವಿಜ್ನಾನಿಯ “ಸ್ವ-ವಿವರ” ದಲ್ಲಿ ಮಾತ್ರ ಇದು ಚಂದ. ಕಾಣಬಹುದು.
ಅದಕ್ಕಾಗಿಯೇ ಇತ್ತೀಚೆಗೆ ಭಾರತದ ಪ್ರಧಾನ ಸಂಶೋಧನಾ ಸಂಸ್ಥೆ ಸಿಎಸ್ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್) ವಿವಿಧ ಅಂಗಸಂಸ್ಥೆಗಳಲ್ಲಿ ಇರುವ ಸುಮಾರು ೧೮,೦೦೦ ವಿಜ್ನಾನಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಿದೆ: “ಪೇಟೆಂಟುಗಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸಿ ಮತ್ತು ನಿರುಪಯುಕ್ತ ಪೇಟೆಂಟುಗಳನ್ನು ಕಿತ್ತು ಬಿಸಾಡಿ.” ಸಿಎಸ್ಐಆರ್ನ ಡೈರೆಕ್ಟರ್ ಜನರಲ್ ಗಿರೀಶ್ ಸಾಹ್ನಿ ತನ್ನ ಇತ್ತೀಚೆಗೆನ ಕಠಿಣ ನುಡಿಗಳ ಪತ್ರದಲ್ಲಿ ಈ ಆದೇಶ ನೀಡಿದ್ದಾರೆ.
ಸರಕಾರದ ಸಂಸ್ಥೆಗಳಲ್ಲಿರುವ ವಿಜ್ನಾನಿಗಳಿಗೆ ಬಹುಶಃ ಇದೇ ಮೊದಲ ಬಾರಿ ಇಂತಹ ಆದೇಶ ನೀಡಲಾಗಿದೆ. ಕಳೆದ ದಶಕದಲ್ಲಿ ನಮ್ಮ ದೇಶದ ವಿಜ್ನಾನಿಗಳಿಗೆ ಪೇಟೆಂಟಿನ “ಜ್ವರ” ಬಂದಿತ್ತು. ಅಂದರೆ, ಬೌದ್ಧಿಕ ಸೊತ್ತಿನ ಹಕ್ಕುಗಳ (ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ – ಐಪಿಆರ್) ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಬೇಕೆಂದು ವಿಜ್ನಾನಿಗಳಿಗೆ ಆಗ್ರಹ. ಸಣ್ಣಪುಟ್ಟ ವಿಷಯಗಳ ಬಗ್ಗೆಯೂ ಪೇಟೆಂಟ್ ಪಡೆಯಲು ಅವರಿಗೆ ಪ್ರೋತ್ಸಾಹ. ಇದು ಯಾವ ಮಟ್ಟಕ್ಕೆ ಮುಟ್ಟಿತೆಂದರೆ, ಭಾರತೀಯ ಕೃಷಿ ಸಂಶೋಧನಾ ಮಂಡಲಿಯಲ್ಲಿ ಸಹಾಯಕ ಡೈರೆಕ್ಟರ್ ಜನರಲ್ ನೇತೃತ್ವದಲ್ಲಿ ವಿಶೇಷ ವಿಭಾಗವೊಂದನ್ನು ಸ್ಥಾಪಿಸಲಾಯಿತು – ಪೇಟೆಂಟುಗಳನ್ನು ಪಡೆಯುವುದನ್ನು ಪ್ರೋತ್ಸಾಹಿಸಲಿಕ್ಕಾಗಿ. ಇದರ ಪರಿಣಾಮವಾಗಿ, ವಿಜ್ನಾನಿಗಳು ಉಪ್ಪಿನಕಾಯಿಯ ಪೇಟೆಂಟಿಗೆ ಅರ್ಜಿ ಸಲ್ಲಿಸಲಿಕ್ಕೂ ಅನುಮತೆತಿ ನೀಡಲಾಯಿತು!

ಸಾರ್ವಜನಿಕ ಹಣದ ಅನುದಾನದಿಂದ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳಲ್ಲಿ ಸಿಎಸ್ಐಆರ್ನ ಪೇಟೆಂಟುಗಳ ಪಟ್ಟಿ ದೀರ್ಘವಾಗಿದೆ. ಇದರಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ಅದರ ಪ್ರಯೋಗಾಲಯಗಳು ನೂರಾರು ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿವೆ: ರಾಸಾಯನಿಕಗಳಿಂದ ತೊಡಗಿ ನ್ಯಾನೋ ತಂತ್ರಜ್ನಾನದ ವರೆಗೆ, ಔಷಧಿಗಳಿಂದ ತೊಡಗಿ ಬಾಹ್ಯಾಕಾಶ ಭೌತಶಾಸ್ತ್ರದ ವರೆಗೆ. ಪೇಟೆಂಟುಗಳ ಬಳಕೆಗಾಗಿ ಶುಲ್ಕಾಧಾರಿತ ಪರವಾನಗಿ ನೀಡುವುದರಲ್ಲಿಯೂ ಸಿಎಸ್ಐಆರ್ ಮುಂದಿದೆ. ಸ್ಪೈಸಿಐಪಿ (ಐಪಿಆರ್ ವಿಷಯಗಳಿಗೆ ಸಂಬಂಧಿಸಿದ ವೆಬ್ಸೈಟ್) ೨೦೧೨ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಿಎಸ್ಐಆರ್ನ ಶೇ.೨೧.೩ ಪೇಟೆಂಟುಗಳ ಬಳಕೆಗೆ ಪರವಾನಗಿ ನೀಡಲಾಗಿದೆ. ಕೊನೆಗೆ, ಸಿಎಸ್ಐಆರ್ನ ೧,೮೭೨ ಪೇಟೆಂಟುಗಳಲ್ಲಿ ೪೦೦ಕ್ಕೆ ಮಾತ್ರ ಪರವಾನಗಿ ನೀಡಲಾಗಿದೆ ಎಂದು ಸ್ಪೈಸಿಐಪಿ ನಿರ್ಧರಿಸಿತು. ಇದಾಗಿ ಒಂದೇ ತಿಂಗಳಿನಲ್ಲಿ ವಿಜ್ನಾನ ಮತ್ತು ತಂತ್ರಜ್ನಾನದ ಕೇಂದ್ರ ಸಚಿವರ ಪತ್ರಿಕಾ ಪ್ರಕಟಣೆ ತಿಳಿಸಿದ ಸತ್ಯಾಂಶ: ಸಿಎಸ್ಐಆರ್ನ ಕೇವಲ ಶೇಕಡಾ ೯ ಪೇಟೆಂಟುಗಳ ಬಳಕೆಗೆ ಪರವಾನಗಿ ನೀಡಲಾಗಿದೆ!

ಸಿಎಸ್ಐಆರ್ನ ಪೇಟೆಂಟುಗಳ ನಿರ್ವಹಣೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ. “ಪೇಟೆಂಟ್ ಪಡೆಯಲು ಹೇಗಾದರೂ ಅರ್ಜಿ ಸಲ್ಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗುತ್ತಿದೆ; ತಾಂತ್ರಿಕ, ವಾಣಿಜ್ಯ ಮತ್ತು ಕಾನೂನಿನ ನೆಲೆಯಲ್ಲಿ ಪೇಟೆಂಟುಗಳ ಮೌಲ್ಯಮಾಪನ ಮಾಡುತ್ತಿಲ್ಲ.” ಹಾಗಾಗಿ, ಬಹುಪಾಲು ಪೇಟೆಂಟುಗಳು ವಿಜ್ನಾನಿಗಳ ಸ್ವ-ವಿವರದ ಅಲಂಕಾರದಂತಿವೆ. ಡೈರೆಕ್ಟರ್ ಜನರಲ್ ಸಾಹ್ನಿಯವರ ನಿದ್ದೆಗೆಡಲು ಇನ್ನೊಂದು ಕಾರಣ: ಪೇಟೆಂಟ್ ಅರ್ಜಿ ಸಲ್ಲಿಸಲಿಕ್ಕಾಗಿ ಅತಾರ್ಕಿಕವಾದ ದೇಶಗಳ ಆಯ್ಕೆ. ೨೦೧೩ರ ತನಕ ಪಡೆದಿರುವ ಪೇಟೆಂಟುಗಳನ್ನು ಪರಿಶೀಲಿಸಿದರೆ, ಅಂತಹ ದೇಶಗಳ ಪಟ್ಟಿ ಸಿಗುತ್ತದೆ. ಕ್ರೊಯೇಷಿಯಾ, ಅಜೆರ್ಬೈಜಾನ್, ಕೈರ್ಗಿಜಸ್ತಾನ್,ಉಗಾಂಡಾ ಮತ್ತು ಈಜಿಪ್ಟ್.
“ವಿಜ್ನಾನಿಗಳು ಭಡ್ತಿ ಪಡೆಯಲಿಕ್ಕಾಗಿ ಮಾತ್ರ ತಮ್ಮ ಪೇಟೆಂಟುಗಳ ಪಟ್ಟಿಯನ್ನು ಉಪಯೋಗಿಸುತ್ತಿದ್ದಾರೆ; ಪ್ರಯೋಗಾಲಗಳು ತಮ್ಮ ಪೇಟೆಂಟುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಚಾಳಿಗೆ ಬಿದ್ದಿವೆ. ಪೇಟೆಂಟ್ ಸಿಕ್ಕಿದ ನಂತರ, ವಿಜ್ನಾನಿ ಅಥವಾ ಪ್ರಯೋಗಾಲಯಗಳು ಅದರ ಗೊಡವೆಗೇ ಹೋಗುತ್ತಿಲ್ಲ. ಪೇಟೆಂಟುಗಳ ಬಳಕೆಗೆ ಪರವಾನಗಿ ನೀಡುವ ಬಗ್ಗೆ ಗಂಭೀರ ಪ್ರಯತ್ನ ನಡೆಯುತ್ತಿಲ್ಲ. ಪೇಟೆಂಟುಗಳ ಗತಿ ಏನಾಗಿದೆ ಎಂದು ಪರಿಶೀಲನೆ ಮಾಡುವ ವ್ಯವಸ್ಥೆಯೂ ಇಲ್ಲ” ಎಂದು ಡೈರೆಕ್ಟರ್ ಜನರಲ್ ಸಾಹ್ನಿಯವರು ತಮ್ಮ ಪತ್ರದಲ್ಲಿ ಖಾರವಾಗಿ ಬರೆದಿದ್ದಾರೆ. ಇದರಿಂದಾಗಿ, ಕೋಟಿಗಟ್ಟಲೆ ರೂಪಾಯಿ ಸಾರ್ವಜನಿಕ ಹಣವು ಪೇಟೆಂಟ್ ಶುಲ್ಕದ ರೂಪದಲ್ಲಿ ಪೋಲಾಗುತ್ತಿದೆ ಎಂದು ಅವರು ಬೊಟ್ಟು ಮಾಡಿ ತೋರಿಸಿದ್ದಾರೆ.
ಪೇಟೆಂಟ್ ಶುಲ್ಕವನ್ನು ಮನಸ್ಸಿಗೆ ಬಂದಂತೆ ಪಾವತಿಸುವುದನ್ನು ಸಿಎಸ್ಐಆರ್ ಕೊನೆಗೂ ರದ್ದು ಮಾಡಿದೆ. ಇನ್ನು ಮುಂದೆ, ಪೇಟೆಂಟ್ ಅರ್ಜಿ ಸಲ್ಲಿಸುವ ವೆಚ್ಚದ ಮತ್ತು ಪೇಟೆಂಟ್ ಊರ್ಜಿತವಾಗಿಸುವ ಶುಲ್ಕದ ಶೇ.೨೫ರಿಂದ ೫೦ನ್ನು ಮಾತ್ರ ಪ್ರಯೋಗಾಲಯಗಳು ಭರಿಸಲಿವೆ. ಅದೇನಿದ್ದರೂ, ಪ್ರಯೋಗಾಲಯಗಳು ತಮ್ಮ ಪೇಟೆಂಟುಗಳ ಬಳಕೆಗೆ ಪರವಾನಗಿ ನೀಡಲು ಸಮರ್ಥವಾದರೆ, ಅದಕ್ಕೆ ಸಿಎಸ್ಐಆರ್ ಸೂಕ್ತ ಅನುದಾನ (ಮ್ಯಾಚಿಂಗ್ ಗ್ರಾಂಟ್) ನೀಡಲಿದೆ. ಚುಟುಕಾಗಿ ಹೇಳಬೇಕೆಂದರೆ, ಪೇಟೆಂಟಿನಿಂದ ಆದಾಯ ಬಾರದಿದ್ದರೆ, ಅದಕ್ಕೆ ಅನುದಾನ ಸಿಗುವುದಿಲ್ಲ.

ಅಂತೂ, ಕೋಟಿಗಟ್ಟಲೆ ರೂಪಾಯಿ ಸಾರ್ವಜನಿಕ ಹಣ ಪೋಲಾಗುವುದಕ್ಕೆ ತಡೆ ಬಿದ್ದಿದೆ. ಇದು, ಸಾರ್ವಜನಿಕ ಹಿತಕ್ಕಾಗಿ ಸಿಎಸ್ಐಆರ್ ಸಂಸ್ಥೆಯ ಪರಿಣಾಮಕಾರಿ ಕ್ರಮ, ಅಲ್ಲವೇ?

(ಅಡಿಕೆ ಪತ್ರಿಕೆ, ಮಾರ್ಚ್ ೨೦೧೭)