ಮಾರಕ ಪೀಡೆನಾಶಕಗಳಿಂದ ಮನುಷ್ಯರ ಮಾರಣಹೋಮ: ಅಂದು ಎಂಡೋಸಲ್ಫಾನ್, ಇಂದು ಪ್ರೊಫೆಕ್ಸ್ ಸುಪರ್


ಆಗಸ್ಟ್ ೧೯, ೨೦೧೭ರಂದು ಮಹಾರಾಷ್ಟ್ರದ ಪೂರ್ವ ದಿಕ್ಕಿನ ಯವತ್‌ಮಾಲ್ ಜಿಲ್ಲೆಯ ಬಿಟಿ-ಹತ್ತಿ ಹೊಲಗಳ ಕೆಲಸಗಾರರಿಗೆ ಬರಸಿಡಿಲಿನಂತೆ ಬಂದೆರಗಿತು ಆ ಸುದ್ದಿ -  ಅವರ ಜೊತೆ-ಕೆಲಸಗಾರನೊಬ್ಬನ ಮರಣದ ಸುದ್ದಿ.

ಕೇವಲ ೧೨ ದಿನಗಳ ಮುಂಚೆ, ಪ್ರೊಫೆನೊಫೋಸ್ ಮತ್ತು ಸೈಪರ್-ಮೆಥ್ರಿನ್ ಎಂಬ ಎರಡು ಕೀಟನಾಶಕಗಳ ಘೋರ ವಿಷಕಾರಿ ಮಿಶ್ರಣವಾದ “ಪ್ರೊಫೆಕ್ಸ್ ಸೂಪರ್” ಎಂಬ ಪೀಡೆನಾಶಕವನ್ನು ಬಿಟಿ-ಹತ್ತಿ ಹೊಲದಲ್ಲಿ ಆತ ಸಿಂಪಡಿಸಿದ್ದ. ಆತನ ಮರಣದ ನಂತರ, ಅದೇ ತಿಂಗಳಿನಲ್ಲಿ ಯವತ್‌ಮಾಲ್ ಜಿಲ್ಲೆಯಲ್ಲಿ ಇನ್ನೂ ೨೦ ರೈತರು ಮತ್ತು ಹತ್ತಿರದ ಬುಲ್ದಾನ, ನಾಗಪುರ, ಅಕೋಲ, ವಾರ್ಧಾ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಬೇರೆ ೧೬ ರೈತರು ಸಾವಿಗೀಡಾದರು. ಈ ಎಲ್ಲ ಸಾವುಗಳಿಗೆ ಕಾರಣ ಪೀಡೆನಾಶಕಗಳ ಮಾರಕ ವಿಷ.

ಆ ಜಿಲ್ಲೆಗಳಲ್ಲಿ ಈ ಜೀವನಾಶಕ ಪೀಡೆನಾಶಕವನ್ನು ಸಿಂಪಡಿಸಿ, ಅನಾರೋಗ್ಯದಿಂದ ಸಂಕಟ ಪಟ್ಟು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸೇರಿಸಲ್ಪಟ್ಟವರ ಸಂಖ್ಯೆ ೧,೮೦೦. ವಾಂತಿ, ಭೇದಿ, ಭಯಂಕರ ಹೊಟ್ಟೆನೋವು, ಉಸಿರಾಟದ ತೊಂದರೆ, ಮಂದದೃಷ್ಠಿ ಮತ್ತು ತಾತ್ಕಾಲಿಕ ಕುರುಡುತನ - ಇವೆಲ್ಲ ಅವರು ಅನುಭವಿಸಿದ ಸಂಕಟಗಳು. ಆ ಘೊರ ವಿಷರಾಸಾಯನಿಕ ತುಂಬಿದ ಗಾಳಿಯನ್ನು ಉಸಿರಾಡಿದ್ದೇ ಈ ಎಲ್ಲ ಸಂಕಟಗಳಿಗೆ ಕಾರಣ.

ಈ ಸಾವುಗಳ ವೃತ್ತಾಂತ ದೊಡ್ಡ ಸುದ್ದಿಯಾಗಲೇ ಇಲ್ಲ. ಅದೇನೂ ಹೊಸತಲ್ಲ. ಯಾಕೆಂದರೆ, ಪ್ರತಿ ವರುಷವೂ ಅಲ್ಲಿ ಪೀಡೆನಾಶಕಗಳನ್ನು ಸಿಂಪಡಿಸುವವರಲ್ಲಿ ಕೆಲವರು ಸಾಯುತ್ತಾರೆ. ಹಾಗಾಗಿ, ಅಲ್ಲಿನ ಆಸ್ಪತ್ರೆಗಳಿಗೆ ಆ ಹಂಗಾಮಿನಲ್ಲಿ ಇಂತಹ ರೋಗಿಗಳ ದಾಖಲಾತಿ ಮಾಮೂಲಿ ವಿಷಯ. ಆದರೆ, ಈ ವರುಷ ಹಲವು ಜಿಲ್ಲೆಗಳಲ್ಲಿ ಮರಣಗಳು ಸಂಭವಿಸಿದ ಕಾರಣ, “ಇಲ್ಲೇನೋ ಸಮಸ್ಯೆಯಿದೆ" ಎಂಬುದು ಸರಕಾರದ ಗಮನಕ್ಕೆ ಬಂತು - ಅದೂ ಸ್ಥಳೀಯ ಪತ್ರಿಕೆಗಳಲ್ಲಿ ರೈತರ ಮತ್ತು ಕೃಷಿಕೆಲಸಗಾರರ ಸರಣಿ ಸಾವುಗಳ ಸುದ್ದಿ ಪ್ರಕಟವಾದ ನಂತರ.

ಆಗ, ಸರಕಾರಿ ಅಧಿಕಾರಿಗಳು ಮಾಡಿದ್ದೇನು ಗೊತ್ತೇ? “ವಿಷ ರಾಸಾಯನಿಕ(ಪೀಡೆನಾಶಕ)ದಲ್ಲಿ ಕಲಬೆರಕೆ ಆಗಿತ್ತೇ?” ಎಂಬುದನ್ನು ಪರೀಕ್ಷಿಸಲಿಕ್ಕಾಗಿ “ಗುಣಮಟ್ಟ ನಿಯಂತ್ರಣಾ ತಂಡ”ಗಳನ್ನು ಆ ಜಿಲ್ಲೆಗಳಿಗೆ ಕಳಿಸಿದ್ದು! ಇದರ ಹೊರತಾಗಿ, ತಕ್ಷಣ ಆ ಘೋರ ವಿಷದ ಬಳಕೆ ತಡೆಗಟ್ಟಲು ಅಥವಾ ಅದರ ಅಪಾಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

“ಪೀಡೆನಾಶಕಗಳು ಅಪಾಯಕಾರಿ ವಸ್ತುಗಳು" ಎಂದು ವರ್ಗೀಕರಿಸಲ್ಪಟ್ಟಿವೆ. ಆದರೆ ಅವನ್ನು ಸಿಂಪಡಿಸುವವರ ಸುರಕ್ಷಿತತೆಗಾಗಿ ಯಾವುದೇ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಕೈಗವಸು, ಕನ್ನಡಕ, ಮುಖಕವಚ, ಸುರಕ್ಷತಾ ಉಡುಪು (ಪ್ಯಾಂಟ್, ತುಂಬು- ತೋಳಿನ ಷರಟು) ಇತ್ಯಾದಿ ಅವರು ಹಾಕಿಕೊಳ್ಳುವುದೇ ಇಲ್ಲ. ತುರ್ತು ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ನೆರವು ಇಲ್ಲವೇ ಇಲ್ಲ.

ರೈತ ಸಂಘಟನೆ "ಶೇತ್‌ಕಾರಿ ಸಂಘಟನೆ”ಯ ವಿಜಯ ಜವಾನ್‌ಧಿಯಾ “ಪೀಡೆನಾಶಕಗಳನ್ನು ಬಳಸುವುದರ ಗಂಡಾಂತರಗಳನ್ನು ರೈತರಿಗೆ ತಿಳಿಸಲೇ ಬೇಕು. ಆದರೆ ಕೃಷಿ ಇಲಾಖೆ ಇದನ್ನು ಮಾಡುತ್ತಲೇ ಇಲ್ಲ. ಕೈಗವಸುಗಳು, ಕನ್ನಡಕಗಳು ಮತ್ತು ಮುಖಕವಚಗಳ ಬೆಲೆಯನ್ನು ಬೆಳೆಯ ಉತ್ಪಾದನಾ ವೆಚ್ಚದಲ್ಲಿ ಸೇರಿಸಬೇಕು. ಆದರೆ ಅದನ್ನು ಸೇರಿಸುತ್ತಿಲ್ಲ” ಎಂದು ವಿವರಿಸುತ್ತಾರೆ.

ಸರಕಾರಿ ವ್ಯವಸ್ಥೆಯ ಅಸಡ್ಡೆಗೆ ಉದಾಹರಣೆ, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಔಷಧಿಯಾದ “ಅಟ್ರೊಪಿನ್" ಕೂಡ ಇಲ್ಲದಿರುವುದು. ಪೀಡೆನಾಶಕಗಳ ರಾಸಾಯನಿಕ ವಿಷಗಳಿಂದ ಕಣ್ಣುಗಳಿಗೆ ಹಾನಿಯಾದಾಗ ಚಿಕಿತ್ಸೆಗೆ ಪ್ರತಿವಿಷ ಅಟ್ರೊಪಿನ್ ಬೇಕೇಬೇಕು. ಈ ಪ್ರತಿವಿಷ ಇದ್ದಿದ್ದರೆ, ಅಲ್ಲಿ ಹಲವರಿಗೆ ತಾತ್ಕಾಲಿಕ ಕುರುಡುತನ ಬಾರದಂತೆ ತಡೆಯಬಹುದಾಗಿತ್ತು.


ದುರಂತದ ಕಾರಣಗಳು

ನಮ್ಮ ದೇಶದಲ್ಲಿ ಪೀಡೆನಾಶಕಗಳ ಆಮದು, ಉತ್ಪಾದನೆ,  ಮಾರಾಟ, ಸಾಗಾಟ, ವಿತರಣೆ ಮತ್ತು ಬಳಕೆ ನಿಯಂತ್ರಿಸುವುದು “ಪೀಡೆನಾಶಕಗಳ ಕಾಯಿದೆ, ೧೯೬೮”. ಇದರ ಅನುಸಾರ, ಪೀಡೆನಾಶಕಗಳ ಸೂಕ್ತ ಬಳಕೆ ಬಗ್ಗೆ ತರಬೇತಿ ನೀಡಬೇಕಾದವರು ಸರಕಾರಿ ಅಧಿಕಾರಿಗಳು. ಆದರೆ, ವಾಸ್ತವವಾಗಿ ಈ ಬಗ್ಗೆ ಸಲಹೆ ನೀಡುವವರು ಕೃಷಿ ಸೇವಾ ಕೇಂದ್ರಗಳ ಸಿಬ್ಬಂದಿ. ಅವರಿಗೆ ಲಾಭವೇ ಮುಖ್ಯ; ಹಾಗಾಗಿ ಅವರು ಅಗತ್ಯಕ್ಕಿಂತ ಜಾಸ್ತಿ ಪೀಡೆನಾಶಕ ಸಿಂಪಡಿಸಬೇಕೆಂದು ರೈತರಿಗೆ ಸಲಹೆ ನೀಡುತ್ತಾರೆ. ಬಹುಪಾಲು ರೈತರು ಮತ್ತು ಕೃಷಿಕೆಲಸಗಾರರು ಓದುಬರಹ ಕಲಿಯದವರು; ಆದ್ದರಿಂದ ಪೀಡೆನಾಶಕಗಳ ಪೊಟ್ಟಣಗಳಲ್ಲಿ ಇರುವ ಬಳಕೆ ನಿರ್ದೇಶನಗಳನ್ನು ಅವರು ಓದಲಾರರು.

ಪೀಡೆನಾಶಕಗಳ ಸಿಂಪಡಣೆ ಮಾಡಲು ಅಲ್ಲಿ ಕೃಷಿಕೆಲಸಗಾರರು ಸದಾ ಸಿದ್ಧ. ಯಾಕೆಂದರೆ, ಕೃಷಿಯ ಇತರ ಕೆಲಸಗಳಿಗೆ ದಿನಮಜೂರಿ ರೂ.೨೫೦ ಆಗಿದ್ದರೆ, ಸಿಂಪಡಣೆಯ ಕೆಲಸಕ್ಕೆ ದಿನಮಜೂರಿ ರೂ.೩೫೦. ಪ್ರತಿ ಎಕರೆಗೆ ಅಥವಾ ಪ್ರತಿ ಬ್ಯಾರೆಲ್ ಸಿಂಪಡಣೆಗೆ ಇಂತಿಷ್ಟು ಮಜೂರಿ ಪಾವತಿಸುವ ಪರಿಪಾಠವೂ ಇದೆ. ಹಾಗಾಗಿ, ಹೆಚ್ಚು ದಿನಮಜೂರಿ ಗಳಿಸಲಿಕ್ಕಾಗಿ ಹೆಚ್ಚು ಬ್ಯಾರೆಲ್ ಪೀಡೆನಾಶಕ ಸಿಂಪಡಿಸಲು ಕೃಷಿಕೆಲಸಗಾರರು ಮುಂದಾಗುತ್ತಾರೆ.

ಯವತ್‌ಮಾಲ್ ಜಿಲ್ಲೆಯಲ್ಲಿ ಹಲವೆಡೆ ಈ ಮಳೆಗಾಲದಲ್ಲಿ ಹತ್ತಿ ಗಿಡಗಳು ಐದಡಿ (೧.೫ ಮೀ.) ಎತ್ತರಕ್ಕೆ ಬೆಳೆದು ನಿಂತಿದ್ದವು. ಅಂತಹ ಹೊಲಗಳಲ್ಲಿ ಯಾವುದೇ ಸುರಕ್ಷತಾ ದಿರಿಸು ಧರಿಸದೆ, ಸ್ಪ್ರೇಯರಿನಿಂದ ಪೀಡೆನಾಶಕಗಳನ್ನು ಸಿಂಪಡಿಸುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿರಿ. ಅಲ್ಲಿ ಸಿಂಪಡಿಸಿದ ಪೀಡೆನಾಶಕಗಳಲ್ಲಿದ್ದ ಆರ್ಗನೋಫಾಸ್ಫೇಟ್ ಮತ್ತು ಆರ್ಗನೋಕ್ಲೋರೈಡ್ ವರ್ಗದ ಘೋರವಿಷಗಳು ಶ್ವಾಸಕೋಶ ಮತ್ತು/ ಅಥವಾ ಚರ್ಮರಂಧ್ರಗಳಿಂದ ಹೀರುವಿಕೆ ಮೂಲಕ ಮಾನವ ಶರೀರ ಪ್ರವೇಶಿಸುತ್ತವೆ. ಅವು ಮನುಷ್ಯರ ರಕ್ತದಲ್ಲಿ ಸೇರಿಕೊಂಡು ಇಡೀ ಶರೀರದಲ್ಲಿ ವ್ಯಾಪಿಸುತ್ತವೆ. ವಸಂತರಾವ್ ನಾಯಕ್ ಶೇತ್ಕಾರಿ ಸ್ವಾವಲಂಬ್ ಮಿಷನಿನ ಕಿಶೋರ್ ತಿವಾರಿ ಅವರು, ಯವತ್‌ಮಾಲಿನ ಸಾವುಗಳಿಗೆ ವಿಷರಾಸಾಯನಿಕಗಳ ಅಧಿಕ ಉಸಿರಾಟವೇ ಕಾರಣವೆಂದು ಖಚಿತಪಡಿಸುತ್ತಾರೆ.

ಬಿಟಿ ಹತ್ತಿಯ ಹುನ್ನಾರ

ಬಿಟಿ ಹತ್ತಿ ತಳಿಯನ್ನು ಬಿಡುಗಡೆ ಮಾಡಿದಾಗ ಅದು “ಕಾಯಿಕೊರಕಕ್ಕೆ ಪ್ರತಿರೋಧ ಹೊಂದಿರುವ ತಳಿ" ಎಂದು ಅದರ ಉತ್ಪಾದಕ ಕಂಪೆನಿ ಪ್ರಚಾರ ಮಾಡಿದ್ದೇ ಮಾಡಿದ್ದು. ಹಾಗಿದ್ದರೆ, ಆ ತಳಿಯ ಹತ್ತಿ ಬೆಳೆಗೆ ಕೀಟನಾಶಕಗಳನ್ನು ಯಾಕೆ ಸಿಂಪಡಿಸ ಬೇಕಾಗುತ್ತದೆ? ಈ ಬಗ್ಗೆ ಜವಾನ್‌ಧಿಯಾ ಅವರ ಪ್ರತಿಕ್ರಿಯೆ ಹೀಗಿದೆ: "ಆ ತಳಿ ಪ್ರತಿರೋಧ ಹೊಂದಿದೆ ಎಂಬುದು ಮೊನ್-ಸಾಂಟೋ ಕಂಪೆನಿಯ ಪ್ರಚಾರ ಅಷ್ಟೇ. ಆ ತಳಿಯ ಬಗ್ಗೆ ಅವರ ಮಾಹಿತಿಪತ್ರದಲ್ಲಿ ಸಣ್ಣ ಅಕ್ಷರಗಳಲ್ಲಿ ಅವರು ಹೀಗೆಂದು ಮುದ್ರಿಸಿದ್ದಾರೆ - ಪ್ರತಿ ವಾರ ರೈತರು ತಮ್ಮ ಹೊಲಗಳಲ್ಲಿ ಬೆಳೆ ಪರಿಶೀಲನೆ ಮಾಡಲೇ ಬೇಕು; ಮತ್ತು ಯವುದೇ ೨೦ ಹತ್ತಿ ಗಿಡಗಳನ್ನು ಪರೀಕ್ಷಿಸಬೇಕು. ಆಗ ೨೦ಕ್ಕಿಂತ ಜಾಸ್ತಿ ಕಾಯಿಕೊರಕ ಕೀಟಗಳಿದ್ದರೆ, ರೈತರು ಹತ್ತಿ ಬೆಳೆಗೆ (ಪೀಡೆನಾಶಕ) ಸಿಂಪಡಣೆ ಮಾಡಲೇ ಬೇಕು.”

ಬಿಟಿ ಹತ್ತಿ ತಳಿ “ಕಾಯಿಕೊರಕದ ಪ್ರತಿರೋಧ ಗುಣ" ಕಳೆದುಕೊಂಡಿದೆ ಎಂಬುದನ್ನು ಕಿಶೋರ್ ತಿವಾರಿ ಅವರೂ ಒಪ್ಪುತ್ತಾರೆ. ಹತ್ತಿ ಬೆಳೆಯ ಆದಾಯವೆಚ್ಚದ ಲೆಕ್ಕಾಚಾರದ ಬಗ್ಗೆ ಅವರ ವಿವರಣೆ ಹೀಗಿದೆ: ಬಿಟಿ ಹತ್ತಿ ಬೀಜಗಳನ್ನು ಬಿತ್ತಿದಾಗ ತಮ್ಮ ಒಳಸುರಿಗಳ ವೆಚ್ಚ ಕಡಿಮೆಯಾಗುತ್ತದೆ ಎಂಬುದು ರೈತರ ನಿರೀಕ್ಷೆಯಾಗಿತ್ತು; ಆದರ ಆ ವೆಚ್ಚ ಯಾವತ್ತೂ ಕಡಿಮೆಯಾಗಲಿಲ್ಲ. ನಿಜ ಹೇಳಬೇಕೆಂದರೆ, ಕೀಟನಾಶಕಗಳ ಮತ್ತು ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆಯಿಂದಾಗಿ ರೈತರ ಒಟ್ಟು ಕೃಷಿವೆಚ್ಚ ಏರಿಕೆಯಾಯಿತು. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿಟಿ ಹತ್ತಿಯ ಇಳುವರಿ ಎಕ್ರೆಗೆ ಸುಮಾರು ಎಂಟು ಕ್ವಿಂಟಾಲ್. ಆದರೆ ಹೊಲಗಳಿಗೆ ರಾಸಾಯನಿಕಗಳನ್ನು ಸಿಂಪಡಣೆ ಮಾಡದಿದ್ದರೆ, ಇಳುವರಿ ಎಕ್ರೆಗೆ ಎರಡು ಕ್ವಿಂಟಾಲಿಗೆ ಕುಸಿಯುತ್ತದೆ. ಆದ್ದರಿಂದಲೇ ರೈತರು ಹತ್ತಿ ಬೆಳೆಗೆ ಜಬರದಸ್ತಿನಿಂದ ರಾಸಾಯನಿಕಗಳನ್ನು ಪ್ರಯೋಗಿಸುತ್ತಾರೆ.

ತಿವಾರಿ ತಿಳಿಸಿದ ಇನ್ನಷ್ಟು ಮಾಹಿತಿ ಇಂತಿದೆ: ಎರಡು ವರುಷಗಳ ಮುಂಚೆ, ಈಗ ಬಳಕೆಯಲ್ಲಿರುವ ಬಿಟಿ ಹತ್ತಿಯ ಬಿಜಿ-೨ ತಳಿಯನ್ನು ಬೀಜ ಉತ್ಪಾದನಾ ಕಂಪೆನಿಗಳು ಬಿಡುಗಡೆ ಮಾಡಿದವು. ಆಗ, ಆ ಕಂಪೆನಿಗಳು ಈ ತಳಿ ಗುಲಾಲಿ-ಕಾಯಿಕೊರಕ ಪ್ರತಿರೋಧ ಹೊಂದಿದೆ ಎಂದು ಅಬ್ಬರದ ಪ್ರಚಾರ ಮಾಡಿದ್ದವು. ಆದರೆ, ಹತ್ತಿ ಹೊಲಗಳನ್ನು ಪರಿಶೀಲಿಸಿದಾಗ, ಕೀಟನಾಶಕಗಳನ್ನು ಸಿಂಪಡಿಸದ ಹೊಲಗಳಲ್ಲಿ ಆ ಕೀಟವು ಹತ್ತಿ ಬೆಳೆಯನ್ನು ಆಕ್ರಮಿಸಿದ್ದು ಕಂಡು ಬಂತು. ಇದೀಗ, ಬಿಜಿ-೩ ತಳಿಯನ್ನು ಬಿಡುಗಡೆ ಮಾಡಲು ಬೀಜ ಉತ್ಪಾದನಾ ಕಂಪೆನಿಗಳು ಕಾದು ನಿಂತಿವೆ. ಅದು ಅಧಿಕೃತವಾಗಿ ಬಿಡುಗಡೆ ಆಗಿಲ್ಲ. ಆದರೂ, ಅದರ ಪರವಾನಗಿಯಿಲ್ಲದ ಎಂಟು ಲಕ್ಷ ಬೀಜದ ಪ್ಯಾಕೆಟುಗಳು ಯವತ್‌ಮಾಲ್ ಜಿಲ್ಲೆಯಲ್ಲಿ ಈ ವರುಷ ಮಾರಾಟವಾಗಿವೆ!

ಜುಲಾಯಿ ೨೦೧೭ರಲ್ಲಿ ಯವತ್‌ಮಾಲ್ ಜಿಲ್ಲೆಯಲ್ಲಿ ಭಯಂಕರ ವಿಷಕಾರಿ ಪೀಡೆನಾಶಕದಿಂದಾಗಿ ಮೊದಲ ರೈತನ ಸಾವು ಸಂಭವಿಸಿದ ನಂತರ, ಈ ಬಗ್ಗೆ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಎರಡೂವರೆ ತಿಂಗಳು ಬೇಕಾಯಿತು. ಅಲ್ಲಿನ ಸರಣಿ ಸಾವುಗಳ ಬಗ್ಗೆ ತನಿಖೆಗೆ ಸರಕಾರ ಆದೇಶಿಸಿದ್ದು ೩ ಅಕ್ಟೋಬರ್ ೨೦೧೭ರಂದು! ಆಗಲೇ, ಸಾವಿಗೀಡಾದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಕ್ಕೆ ರೂ.೨ ಲಕ್ಷ ಪರಿಹಾರವನ್ನೂ ಕಾದಿರಿಸಿದೆ. ೬ ಅಕ್ಟೋಬರ್ ೨೦೧೭ರಂದು ಮುಂಬೈ ಹೈಕೋರ್ಟಿನ ನಾಗಪುರ ವಿಭಾಗ ಪೀಠವು ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ವಿಚಾರಣೆಗೆ ಸ್ವೀಕರಿಸಿ, ನೋಟೀಸ್ ಜ್ಯಾರಿ ಮಾಡಿದೆ; ಅದು, ಯವತ್‌ಮಾಲ್ ಪ್ರದೇಶದ ರೈತರ ಸಾವಿಗಾಗಿ ಸರಕಾರಿ ಅಧಿಕಾರಿಗಳು ಮತ್ತು ಪೀಡೆನಾಶಕ ಉತ್ಪಾದಕರ ವಿರುದ್ಧ ಕ್ರಿಮಿನಲ್ ಅಪರಾಧಕ್ಕಾಗಿ ಕ್ರಮ ಕೈಗೊಳ್ಳಬೇಕೆಂಬ ದಾವೆ.

ಮಹಾರಾಷ್ಟ್ರದ ಯವತ್‌ಮಾಲ್ ಮತ್ತು ಪಕ್ಕದ ಜಿಲ್ಲೆಗಳಲ್ಲಿ ರೈತರ ಸರಣಿಸಾವು ಗಮನಿಸಿದಾಗ ನೆನಪಾಗುತ್ತದೆ: ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆ ಮತ್ತು ಕರ್ನಾಟಕದ ದಕ್ಷಿಣಕನ್ನಡದ ಪಟ್ರಮೆ ಪ್ರದೇಶಗಳಲ್ಲಿ ಗೇರುತೋಟಗಳ ಮೇಲೆ ನಿರಂತರವಾಗಿ ೨೦ ವರುಷ ಹೆಲಿಕಾಪ್ಟರಿನಿಂದ ಘೋರ ಕೀಟನಾಶಕ ಎಂಡೋಸಲ್ಫಾನ್ ಸಿಂಪಡಿಸಿದ್ದರಿಂದಾಗಿ ನೂರಾರು ಜನರು ಸಾವಿಗೆ ಬಲಿಯಾಗಿ, ಸಾವಿರಾರು ಜನರು ಭಯಂಕರ ರೋಗಗಳಿಂದ ಈಗಲೂ ನರಳುತ್ತಿರುವ ಪ್ರಕರಣ. ಇಂತಹ ಮಾರಣಹೋಮಗಳಿಗೆ ಕೊನೆಯಿಲ್ಲವೇ? ನಾವು ಪಾಠ ಕಲಿಯುವುದು ಯಾವಾಗ?

(ಅಡಿಕೆ ಪತ್ರಿಕೆ, ಜನವರಿ ೨೦೧೮)