Agriculture and Rural Development


ಎರಡು ವರುಷಗಳ ಮುಂಚೆ, ಮಂಡ್ಯ ಜಿಲ್ಲೆಯ ಉಪ್ಪುಲಗೇರಿಕೊಪ್ಲು ಗ್ರಾಮದ ನಾಗಣ್ಣ (೩೪) ತನ್ನ ಮುಕ್ಕಾಲು ಎಕ್ರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಕೃಷಿಯಿಂದ ಜೀವನ ನಿರ್ವಹಣೆ ಕಷ್ಟ ಅನಿಸಿತು. ಹಾಗಾಗಿ, ಹಳ್ಳಿ ತೊರೆದು ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ಗುಳೆ ಹೊರಟರು - ಮಹಾನಗರ ಬೆಂಗಳೂರಿಗೆ. ಅಲ್ಲಿ ಸಿಕ್ಕಿದ್ದು ಮದುವೆ ಸಭಾಭವನಗಳ ಅಲಂಕಾರ ಮಾಡುವ ಕೆಲಸ. ಅವರ ಗಳಿಕೆ ತಿಂಗಳಿಗೆ ಕೇವಲ ರೂ.೬,೦೦೦.

ಎರಡು ತಿಂಗಳು ಬೆಂಗಳೂರಿನಲ್ಲಿ ಹೇಗೋ ದಿನಗಳೆದರು. ಅಷ್ಟರಲ್ಲಿ ಮದುವೆಗಳ ಸೀಸನ್ ಮುಗಿಯಿತು, ನಾಗಣ್ಣನ ಕೆಲಸವೂ ಕೊನೆಯಾಯಿತು. "ಆ ದೊಡ್ಡ ಊರಿನಲ್ಲಿ ನನ್ನ ಕುಟುಂಬ ಸಾಕೋದು ಕಷ್ಟ ಅಂತ ಗೊತ್ತಾಗಿತ್ತು. ಹೆಂಡತಿ-ಮಕ್ಕಳೊಂದಿಗೆ ನಮ್ಮೂರಿಗೆ ವಾಪಾಸು ಬಂದೆ" ಎಂದು ನೆನಪು ಮಾಡಿ ಕೊಳ್ಳುತ್ತಾರೆ ನಾಗಣ್ಣ.

ಮುಂದೇನು? ಎಂದು ಚಿಂತಿಸುತ್ತಿದ್ದಾಗ ನಾಗಣ್ಣನಿಗೆ ಎಲ್. ಆನಂದ ಎಂಬ ಕೃಷಿ ಪದವೀಧರ ಯುವಕನ ಪರಿಚಯ. ಪಕ್ಕದ ಹಾಸನ ಜಿಲ್ಲೆಯವರಾದ ಆನಂದ ರೈತರನ್ನು ಭೇಟಿಯಾಗಿ ಆಗ್ರಹಿಸುತ್ತಿದ್ದರು - ಸುಧಾರಿತ ರೀತಿಯಲ್ಲಿ ಕೃಷಿ ಮಾಡಬೇಕೆಂದು. ಅವರು ತಾಜಾ ಕೃಷಿ ಉತ್ಪನ್ನ ಸರಬರಾಜು ಕಂಪೆನಿ ಲಾರೆನ್ಸ್ ಡೇಲ್ ಅಗ್ರೋ ಪ್ರೊಸೆಸಿಂಗ್ (ಎಲ್.ಇ.ಎ.ಎಫ್.) ಕಂಪೆನಿಯ ಪ್ರತಿನಿಧಿ. ಉತ್ತಮ ಬೀಜ, ಕಡಿಮೆ ರಾಸಾಯನಿಕ ಗೊಬ್ಬರ, ಅಂತರ ಬೆಳೆಗಳು ಮತ್ತು ತಂತ್ರಜ್ನಾನ ಬಳಸಿ, ನಾಗಣ್ಣರ ಸಣ್ಣ ಜಮೀನಿನಿಂದ ಹೆಚ್ಚು ಇಳುವರಿ ಪಡೆಯುವುದು ಹೇಗೆಂದು ಆನಂದ ವಿವರಿಸಿದರು. ನಾಗಣ್ಣ ಬೆಳೆಯುತ್ತಿದ್ದ ತರಕಾರಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ, ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಲು ಸಾಧ್ಯವೆಂದು ತಿಳಿಸಿದರು.

ಇದಾದ ನಂತರ ನಾಗಣ್ಣ ಕೈಗೊಂಡ ದೊಡ್ಡ ನಿರ್ಧಾರ: ಸುಧಾರಿತ ರೀತಿಯಲ್ಲಿ ಕೃಷಿ ಮಾಡುವುದು. ಅದಕ್ಕಾಗಿ ಮಂಡ್ಯದ ಮಳವಳ್ಳಿ ತೋಟಗಾರಿಕಾ ಕೃಷಿಕ ಉತ್ಪಾದಕರ ಕಂಪೆನಿ ನಿಯಮಿತದಲ್ಲಿ ರೂ.೧,೦೦೦ದ ಷೇರು ಭಂಡವಾಳ ಹೂಡಿದರು. ಇದು ಎಲ್.ಇ.ಎ.ಎಫ್.ನ ಸಹಭಾಗಿ ಕಂಪೆನಿ. ಅನಂತರ ಸುಧಾರಿತ ಬೀಜ ಖರೀದಿಸಿ, ಆನಂದರ ಸಲಹೆಯಂತೆಯೇ ಕೃಷಿ ಮಾಡಿದರು.


ಹದಿನಾರು ವರುಷಗಳ ಮುಂಚೆ, ಫೆಬ್ರವರಿ ೨೦೦೧ರಲ್ಲಿ ಢೆಲ್ಲಿಯ “ಡೌನ್ ಟು ಅರ್ತ್” ಪಾಕ್ಷಿಕ ಪತ್ರಿಕೆ ಪ್ರಕಟಿಸಿದ ಕೇರಳದ ಕಾಸರಗೋಡಿನ ಪಡ್ರೆಯಲ್ಲಿ ಎಂಡೋಸಲ್ಫಾನಿನ ಮಾರಕ ವಿಷದಿಂದಾಗಿ ಜನರು ಸಾಯುತ್ತಿರುವ ಹಗರಣದ ವರದಿ ದೊಡ್ಡ ಸುದ್ದಿಯಾಯಿತು.

ಯಾಕೆಂದರೆ, ಎಲ್ಲ ಸುರಕ್ಷಿತಾ ನಿಯಮಗಳನ್ನು ಗಾಳಿಗೆ ತೂರಿ, ಮರಣಾಂತಿಕ ಕೀಟನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರಿನ ಮೂಲಕ ಕೇರಳದ ಗೇರು ಅಭಿವೃದ್ಧಿ ನಿಗಮದ ಗೇರು ತೋಟಗಳ ಮೇಲೆ ಇಪ್ಪತ್ತು ವರುಷಗಳ ಅವಧಿಯುದ್ದಕ್ಕೂ ಸಿಂಪಡಿಸಲಾಗಿತ್ತು. ಅದರಿಂದಾಗಿ, ಸೆರೆಬ್ರಲ್ ಪಾಲ್ಸಿ, ಎಪಿಲೆಪ್ಸಿ, ಹುಟ್ಟುವಾಗಲೇ ಅಂಗವಿಕಲತೆ, ಮಾನಸಿಕ ಮತ್ತು ದೈಹಿಕ ವಿಕಲತೆ, ಬಂಜೆತನ, ಪಿತ್ತಕೋಶದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಅಸ್ತಮಾ ಇಂತಹ ಭೀಕರ ರೋಗಗಳಿಂದ ಪಡ್ರೆ ಪ್ರದೇಶದ ಹಲವಾರು ಜನರು ನರಳುತ್ತಿದ್ದಾರೆ. ಹೆಲಿಕಾಪ್ಟರಿನಿಂದ ಎಂಡೋಸಲ್ಫಾನ್ ಸಿಂಪಡಣೆ ಆರಂಭಿಸಿದಾಗ ಆದ ಅನಾಹುತಗಳನ್ನು ಗಮನಿಸಿದ್ದ ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆಯವರು “ಮನುಷ್ಯ ಜೀವ ಗೇರುಬೀಜಗಳಿಗಿಂತ ಅಗ್ಗ” ಎಂಬ ಇಂಗ್ಲಿಷ್ ಲೇಖನ ಬರೆದು ಎಲ್ಲರನ್ನೂ ಎಚ್ಚರಿಸಿದ್ದರು.

ಎಂಡೋಸಲ್ಫಾನಿನ ಅವಿವೇಕದ ಹಾಗೂ ಬೇಜವಾಬ್ದಾರಿಯ ಸಿಂಪಡಣೆಯಿಂದಾಗಿ ಭೀಕರ ದುಷ್ಪರಿಣಾಮಗಳು ಆದದ್ದು ಮನುಷ್ಯರ ಮೇಲೆ ಮಾತ್ರವಲ್ಲ; ಅಲ್ಲಿನ ಪರಿಸರವೂ ವಿಷಮಯವಾಗಿ ಜೇನ್ನೊಣಗಳು, ಕಪ್ಪೆಗಳು ಮತ್ತು ಮೀನುಗಳು ನಿರ್ನಾಮವಾದವು. ಢೆಲ್ಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರೊನ್ಮೆಂಟ್ (ಸಿ.ಎಸ್.ಇ.)ಯ ಮಾಲಿನ್ಯ ಕಣ್ಗಾವಲು ಪ್ರಯೋಗಾಲಯವು, ಈ ಎಲ್ಲ ದುಷ್ಪರಿಣಾಮಗಳಿಗೆ ಎಂಡೋಸಲ್ಫಾನ್ ಸಿಂಪಡಣೆ ಕಾರಣವೆಂದು ಪುರಾವೆಗಳನ್ನು ಒದಗಿಸಿತು.

ಅನಂತರ ನಡೆದದ್ದು ಜನಸಮುದಾಯ ಮತ್ತು ಪೀಡೆನಾಶಕ ಉತ್ಪಾದಕ ಕಂಪೆನಿಗಳ ನಡುವೆ ೧೬ ವರುಷಗಳ ದೀರ್ಘ ಕಾನೂನಿನ ಸಮರ. ಇದರ ಪರಿಣಾಮವಾಗಿ, ೨೦೧೧ರಲ್ಲಿ ಸುಪ್ರೀಂ ಕೋರ್ಟ್ ಎಂಡೋಸಲ್ಫಾನನ್ನು ನಿಷೇಧಿಸಿದ್ದು ಈಗ ಚರಿತ್ರೆ.

      
ಮಂಗೋಲಿಯಾದಿಂದ ಗಗನಕ್ಕೇರಿ ಸಾಗುವ ಅಮುರ್ ಗಿಡುಗಗಳ ಆಕಾಶಯಾನ ಕೊನೆಗೊಳ್ಳುವುದು ೨೨,೦೦೦ ಕಿಮೀ ದೂರದ ದಕ್ಷಿಣ ಆಫ್ರಿಕಾದಲ್ಲಿ. ತಮ್ಮ ದೀರ್ಘ ಪ್ರಯಾಣದ ನಡುವೆ ಅವು ನಾಗಾಲ್ಯಾಂಡಿನಲ್ಲಿ ಸಾವಿರಸಾವಿರ ಸಂಖ್ಯೆಯಲ್ಲಿ ಕೆಳಕ್ಕೆ ಇಳಿಯುತ್ತಿದ್ದವು – ಒಂದು ತಿಂಗಳು ಕೀಟಗಳನ್ನು ತಿಂದು ಮತ್ತೆ ಆಕಾಶಯಾನಕ್ಕೆ ಸಜ್ಜಾಗಲಿಕ್ಕಾಗಿ.
ಆದರೆ, ಅಲ್ಲಿ ವರುಷವರುಷವೂ ಅವುಗಳ ಮಾರಣಹೋಮ. ಲೊತಾ ಮತ್ತು ಇತರ ಬುಡಕಟ್ಟು ಜನರಿಂದ ಪ್ರತಿ ವರುಷ ೧೨,೦೦೦ – ೧೪,೦೦೦ ಅಮುರ್ ಗಿಡುಗಗಳ ಕೊಲೆ – ಬುಲೆಟ್ ಮತ್ತು ಬಾಣಗಳಿಂದ – ಆಹಾರಕ್ಕಾಗಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ.
ಅಮಾಯಕ ಅಮುರ್ ಗಿಡುಗಗಳನ್ನು ಉಳಿಸಲು ಏನಾದರೂ ಮಾಡಲೇ ಬೇಕಾಗಿತ್ತು. ನಾಗಾಲ್ಯಾಂಡ್ ಸರಕಾರ ಮತ್ತು ಆಶಾ ಹಾಗೂ ಪಾನ್ಗ್ಟಿ ಗ್ರಾಮಗಳ ಮುಖ್ಯಸ್ಥರು ಇದಕ್ಕಾಗಿ ಕೈಜೋಡಿಸಿದರು. “ಅಮುರ್ ಗಿಡುಗಗಳ ರಕ್ಷಣಾ ಸಂಘಟನೆ” ಸ್ಥಾಪಿಸಿ, ಅವುಗಳ ಬೇಟೆ ನಿಷೇಧಿಸಿದರು. ಇದನ್ನು ಉಲ್ಲಂಘಿಸಿದವರನ್ನು ಬಂಧಿಸಿ ಶಿಕ್ಷೆ ನೀಡಲಾಯಿತು.
ಈ ಆಂದೋಲನದಿಂದಾಗಿ ಕ್ರಮೇಣ ಅಮುರ್ ಗಿಡುಗಗಳ ಕೊಲೆಗಡುಕರೇ ಅವನ್ನು ರಕ್ಷಿಸುವ ಯೋಧರಾದರು. ಇದೆಷ್ಟು ಯಶಸ್ವಿಯಾಯಿತೆಂದರೆ, ಮುಂದಿನ ವರುಷ ನಾಗಾಲ್ಯಾಂಡಿನಲ್ಲಿ ಒಂದೇ ಒಂದು ಅಮುರ್ ಗಿಡುಗವನ್ನೂ ಕೊಲ್ಲಲಿಲ್ಲ.
ಈ ಅಪ್ರತಿಮ ಸಾಧನೆಗಾಗಿ ಇಡೀ ಜಗತ್ತು ನಾಗಾಲ್ಯಾಂಡಿನ ಜನತೆಯನ್ನು ಅಭಿನಂದಿಸಿತು. ಈಗ ನಾಗಾಲ್ಯಾಂಡಿಗೆ “ಜಗತ್ತಿನ ಗಿಡುಗಗಳ ರಾಜಧಾನಿ” ಎಂಬ ಹೆಸರು. ಇದರಿಂದಾಗಿ ಲಾಭವಾಗಿರುವುದು ಪಾನ್ಗ್ಟಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ – ಅಲ್ಲೀಗ ಪ್ರವಾಸೋದ್ಯಮದ ಪ್ರಗತಿ. ಇದರಿಂದಾಗಿ ಹೆಚ್ಚೆಚ್ಚು ಭಂಡವಾಳ ಹೂಡಿಕೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ. ಪರಿಸರ ಹಾಗೂ ಜೀವಸಂಕುಲದ ಸಂರಕ್ಷಣೆ ಹೇಗೆ ಲಾಭದಾಯಕವಾಗ ಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

       
ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು.
ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಲ್ಲಿ ಹೂವಿನ ಬೇಸಾಯದ ಸುಗ್ಗಿಯಿಂದಾಗಿ ಬದಲಾವಣೆಯ ಗಾಳಿ ಬೀಸಿದೆ. ಅಲ್ಲಿ ಹಾದು ಹೋಗುವ ಮೈಸೂರು – ಕೊಝಿಕೋಡ್ ಹೆದ್ದಾರಿಯ ಇಬ್ಬದಿಗಳಲ್ಲಿ ಕಿತ್ತಳೆ ಬಣ್ಣದ ಚೆಂಡುಮಲ್ಲಿಗೆ ಮತ್ತು ಹೊಳಪು-ಹಳದಿ ಬಣ್ಣದ ಸೂರ್ಯಕಾಂತಿ ಹೂಗಳ ಹೊಲಗಳ ಸಾಲು. ಇದರಿಂದಾಗಿ ಅಲ್ಲಿನ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರಫ್ತು ಮಾರುಕಟ್ಟೆಯ ಪರಿಚಯವಾಗಿದೆ. ಮಾತ್ರವಲ್ಲ, ಹಲವು ಕಂಪೆನಿಗಳಿಗೆ ಅಲ್ಲಿ ತಮ್ಮ ಕಾರ್ಖಾನೆ ಸ್ಥಾಪಿಸಲು ಆಕರ್ಷಣೆ. ಅವುಗಳಲ್ಲೊಂದು ಕಂಪೆನಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದೆ.
ಇತ್ತೀಚೆಗೆ ಸುಮಾರು ೧,೦೦೦ ರೈತರು ಕಗ್ಗದಲಹುಂಡಿ ಗ್ರಾಮದಲ್ಲಿ ಜಮಾಯಿಸಿದ್ದರು – ತ್ರಿಯಂಬಕಪುರ ಗ್ರಾಮದಲ್ಲಿ ಚೈನಾ ಕಂಪೆನಿಯೊಂದು ಚೆಂಡುಮಲ್ಲಿಗೆ ಸಾರ ಭಟ್ಟಿಯಿಳಿಸುವ ಕಾರ್ಖಾನೆ ಸ್ಥಾಪಿಸುವುದನ್ನು ಪ್ರತಿಭಟಿಸಲಿಕ್ಕಾಗಿ. ಚೆಂಗುವಾಂಗ್ ನ್ಯಾಚುರಲ್ ಎಕ್ಸ್ಟ್ರಾಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಆ ಕಂಪೆನಿಯ ಮುಖ್ಯ ಉತ್ಪನ್ನಗಳು: ಪ್ರಾಕೃತಿಕ ಬಣ್ಣಗಳು ಮತ್ತು ಚೆಂಡುಮಲ್ಲಿಗೆ ಹೂಗಳಿಂದ ಒಲಿಯೋರೆಸಿನ್ ಎಂಬ ಔಷಧೀಯ ಸಾರ.
ರೈತರ ಪ್ರತಿಭಟನೆಯ ಸೊಲ್ಲು ಅಡಗಿಸಲಿಕ್ಕಾಗಿ ಪೊಲೀಸರಿಂದ ಲಾಠೀ ಚಾರ್ಚ್ ಮತ್ತು ೨೯ ಪ್ರತಿಭಟನಾಕಾರರ ಬಂಧನ. ಅವರನ್ನು ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಜಿಲ್ಲಾಡಳಿತವು ಈಗ ಆ ಘಟಕದ ಸುತ್ತಮುತ್ತ ನಿಷೇಧಾಜ್ನೆ ಹೇರಿದೆ. ಕಾರ್ಖಾನೆಯ ಗೇಟಿಗೆ ಬೀಗ ಹಾಕಲಾಗಿದ್ದು, ಗೇಟಿನ ಹೊರಗಡೆ ಪೊಲೀಸ್ ವ್ಯಾನಿನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮತ್ತು ಟೀ ಸ್ಟಾಲುಗಳಲ್ಲಿ ಗುಂಪು ಸೇರುವ ಹಳ್ಳಿಗರಿಂದ ತಮಗಾದ ಅನ್ಯಾಯ ಮತ್ತು ಜಿಲ್ಲಾಡಳಿತದ ಅಸಡ್ಡೆಯ ಬಗ್ಗೆ ಚರ್ಚೆ.
ರೂಪಾಯಿ ೩೬ ಕೋಟಿಯ ಚೈನಾ ಕಂಪೆನಿ

       
ಜೂನ್ ೨೦೧೬ರ ಆರಂಭದಿಂದಲೇ ಕರ್ನಾಟಕದ ಹಲವೆಡೆ ಭಾರೀ ಮಳೆ. ಕರಾವಳಿಯಲ್ಲಂತೂ ಪ್ರತಿ ದಿನವೂ ಭರ್ಜರಿ ಮಳೆ. ಜೂನ್ ೯ರಂದು ಕೇರಳಕ್ಕೆ ನೈಋತ್ಯ ಮಳೆ ಮಾರುತ ನುಗ್ಗಲಿದೆ ಎಂಬುದು ಹವಾಮಾನ ಇಲಾಖೆಯ ಘೋಷಣೆ. ಜೊತೆಯಲ್ಲೇ, ಈ ವರುಷ ಕಳೆದ ಕೆಲವು ವರುಷಗಳಿಗಿಂತ ಹೆಚ್ಚಿಗೆ ಮಳೆ ಸುರಿಯಲಿದೆ ಎಂಬ ನಿರೀಕ್ಷೆ.
ಈ ಎಲ್ಲ ಮಳೆಗದ್ದಲದಲ್ಲಿ ನಾವು ೨೦೧೬ರ ಭೀಕರ ಬರಗಾಲ, ಬಿರು ಬಿಸಿಲು, ಕುಡಿನೀರಿಗಾಗಿ ಜನರ ಬವಣೆ – ಇವೆಲ್ಲವನ್ನೂ ಮರೆತೇ ಬಿಡುತ್ತೇವೆ. ಮರೆತು ಬಿಡುವ ಮುನ್ನ, ಮೊನ್ನೆಮೊನ್ನೆಯ ವರೆಗೆ ನಮ್ಮ ಬೆವರಿಳಿಸಿದ ಬರಗಾಲದ ಭೀಕರತೆಯ ಚಿತ್ರಣ ದಾಖಲಿಸೋಣ. ೨೦೧೬ರ ಬರಗಾಲದಿಂದ (ಸತತ ಎರಡನೇ ವರುಷ ಕಾಡಿದ ಬರಗಾಲ) ತತ್ತರಿಸಿದ್ದು ಭಾರತದ ಅರ್ಧ ಭೂಪ್ರದೇಶ. ಅಂದರೆ ಭಾರತದ ೬೭೮ ಜಿಲ್ಲೆಗಳಲ್ಲಿ ೨೫೪ರಲ್ಲಿ ಸರಕಾರಗಳನ್ನೂ ಜನರನ್ನೂ ಕಂಗೆಡಿಸಿದ ಬರಗಾಲ. ಭಾರತದ ಉದ್ದಗಲದಲ್ಲಿ ಹರಡಿದ ೬ ಲಕ್ಷ ಹಳ್ಳಿಗಳಲ್ಲಿ ೨ ಲಕ್ಷ ಹಳ್ಳಿಗಳಲ್ಲಿ ನೀರಿಲ್ಲದೆ ಹಾಹಾಕಾರ. ಹತ್ತು ರಾಜ್ಯಗಳಲ್ಲಿ ಸುಮಾರು ೬೦,೦೦೦ ಟ್ಯಾಂಕರುಗಳ ಮೂಲಕ ಜನರಿಗೆ ನೀರಿನ ಪೂರೈಕೆ. ಸುಮಾರು ಒಂದೂವರೆ ಕೋಟಿ ಹೆಕ್ಟೇರ್ ಕೃಷಿಭೂಮಿಯಲ್ಲಿ ಬೆಳೆನಾಶ. ಈ ದೇಶದ ೧೨೫ ಕೋಟಿ ಜನರಲ್ಲಿ ಸುಮಾರು ೩೩ ಕೋಟಿ ಜನರು ಬರಗಾಲದಿಂದ ಕಂಗಾಲು.

       
ಅದೊಂದು ದಿನ ಸಿಲ್ಬಿಯಾ ತೊಪ್ನೊ ಎಂಬಾಕೆ ತನ್ನ ಹಳ್ಳಿಯಲ್ಲಿ ನಡೆದು ಹೋಗುತ್ತಿದ್ದಳು. ತುಸು ದೂರದಲ್ಲಿ ಅವಳೊಂದು ವಿಚಿತ್ರ ವಿದ್ಯಮಾನ ಕಂಡಳು.
ಜಾರ್ಖಡದ ಗುಮ್ಲಾ ಜಿಲ್ಲೆಯ ಕನಕಲೊಯಾ ಎಂಬ ಆ ಹಳ್ಳಿಯಲ್ಲಿ, ಹಕ್ಕಿಯೊಂದು ಹಾರುತ್ತ ಮಣ್ಣಿನೆಡೆಗೆ ಧುಮುಕುತ್ತಿತ್ತು; ಪುನಃ ಮೇಲಕ್ಕೆ ಹಾರಿ ಕರ್ಕಶವಾಗಿ ಕೂಗುತ್ತ ಮತ್ತೆ ಮಣ್ಣಿನೆಡೆಗೆ ಧುಮುಕುತ್ತಿತ್ತು. ಅದು ಕೆಂಪು-ಕೊಕ್ಕುಪಟ್ಟಿಯ ಟಿಟ್ಟಿಭ ಹಕ್ಕಿ.
ಕುತೂಹಲದಿಂದ ಸಿಲ್ಬಿಯಾ ತೊಪ್ನೊ ಆ ಜಾಗದ ಹತ್ತಿರಕ್ಕೆ ನಡೆದಳು. ಅಲ್ಲಿ ಅವಳು ಕಂಡದ್ದೇನು? ನಾಗರ ಹಾವೊಂದು ಹೆಡೆಯೆತ್ತಿ ಭುಸುಗುಡುತ್ತಿತ್ತು. ಆ ಟಿಟ್ಟಿಭ ಮತ್ತೆಮತ್ತೆ ನಾಗರ ಹಾವಿನೆಡೆಗೆ ಧುಮುಕುತ್ತ ಅದನ್ನು ಬೆದರಿಸಲು ಯತ್ನಿಸುತ್ತಿತ್ತು. ಈ ತಂತ್ರಕ್ಕೆ ನಾಗರಹಾವು ಹೆದರದಿದ್ದಾಗ, ಆ ಹಕ್ಕಿ ಇನ್ನೊಂದು ತಂತ್ರ ಝಳಪಿಸಿತು. ಹತ್ತಿರದ ಗಿಡವೊಂದರ ಪುಟ್ಟಪುಟ್ಟ ಗೆಲ್ಲುಗಳನ್ನು ಕೊಕ್ಕಿನಿಂದ ಮುರಿದು ತಂದು, ನಾಗರಹಾವಿನ ಸುತ್ತಲೂ ಚೆಲ್ಲಲು ಆರಂಭಿಸಿತು.
ಸ್ವಲ್ಪ ಹೊತ್ತಿನಲ್ಲಿ ನಾಗರಹಾವು ತನ್ನ ಹೆಡೆ ಇಳಿಸಿ, ನಿಧಾನವಾಗಿ ಅಲ್ಲಿಂದ ಸರಿದು ಹೋಯಿತು. ಅನಂತರ ಸಿಲ್ಬಿಯಾ ತೊಪ್ನೊ ಎಚ್ಚರಿಕೆಯಿಂದ ಹಾವು ಹೆಡೆಯೆತ್ತಿದ್ದ ಜಾಗ ತಲಪಿದಳು. ಅಲ್ಲಿದ್ದವು ಒಂದು ಪುಟ್ಟ ಹಕ್ಕಿಗೂಡಿನಲ್ಲಿ ಎರಡು ಮೊಟ್ಟೆಗಳು. ಅಂದರೆ, ಆ ಮೊಟ್ಟೆಗಳನ್ನು ನುಂಗಲು ಹವಣಿಸುತ್ತಿದ್ದ ನಾಗರಹಾವನ್ನು ತಡೆಯಲು ಟಿಟ್ಟಿಭ ಶಕ್ತಿಮೀರಿ ಪ್ರಯತ್ನಿಸುತ್ತಿತ್ತು.
ಟಿಟ್ಟಿಭ ತಂದು ಚೆಲ್ಲಿದ್ದ ಗಿಡದ ಗೆಲ್ಲುಗಳಲ್ಲಿ ನಾಗರಹಾವನ್ನು ವಿಕರ್ಷಿಸುವ ಯಾವುದೋ ಅಂಶ ಇದ್ದದಂತೂ ನಿಜ. ಈ ರೀತಿಯಲ್ಲಿ ಆ ಗಿಡದ ಔಷಧೀಯ ಗುಣ ಆಕಸ್ಮಿಕವಾಗಿ ಪತ್ತೆಯಾಯಿತು. ಗುಜರಾತಿ ಭಾಷೆಯಲ್ಲಿ ಆ ಗಿಡದ ಹೆಸರು ಗುಸುಂಪುತು (ಮುಂಡಾರಿ). ಅದರ ಸಸ್ಯಶಾಸ್ತ್ರೀಯ ಹೆಸರು ಇಂಡೋನೀಸಿಯೆಲ್ಲ ಇಕೆಯೊಡಿಸ್ (ಕುಟುಂಬ: ಅಕಾಂತಸಿಯೇ). ಈ ಗಿಡದ ಸಾರವನ್ನು ಹಾವು-ಕಡಿತದ ಚಿಕಿತ್ಸೆಗೆ ಬಳಸಲಾಗುತ್ತಿದೆ.
ಆಫ್ರಿಕಾದ ಚಿಂಪಾಂಜಿಗಳಲ್ಲಿಯೂ ಇಂತಹದೇ ಜ್ನಾನಸಂಪತ್ತಿದೆ. ಅದನ್ನು ಬಳಸುವ ಅವುಗಳ ಜಾಣತನ ದಾಖಲಿಸಿದ್ದಾರೆ ಮೈಖೇಲ್ ಎ. ಹಫ್ಮಾನ್.


ಬೆಂಬಿಡದ ಬರಗಾಲ ಗ್ರಾಮೀಣ ಭಾರತದ ರೈತ ಕುಟುಂಬಗಳ ಬದುಕಿಗೆ ಕೊಳ್ಳಿಯಿಟ್ಟ ವಾಸ್ತವದ ಚಿತ್ರಣ ಈ ಲೇಖನದಲ್ಲಿದೆ.
ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಮಲೆಗಾಂವ್ ಹಳ್ಳಿಯ ರೈತ ಮುಕುಂದ ವಾಗ್ಗೆ ಬದುಕು ಬೇಡವಾಗಿತ್ತು. ತನ್ನ ಮನೆಯ ಪಕ್ಕದ ದನದ ಹಟ್ಟಿಯಲ್ಲಿ ಕೀಟನಾಶಕ ನುಂಗಿದ ವಾಗ್, ಬಾಯಿಯಿಂದ ನೊರೆ ಬಿಡುತ್ತಾ ಮೂರ್ಛೆ ತಪ್ಪಿ ಬಿದ್ದಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಪತ್ನಿ ಇವರನ್ನು ತಕ್ಷಣ ಆಸ್ಪತ್ರೆಗೆ ಒಯ್ದಳು. ಅಲ್ಲಿ ಡಾಕ್ಟರ್ ಅವರಿಗೆ ಚಿಕಿತ್ಸೆ ನೀಡಿದ್ದರಿಂದಾಗಿ ಬದುಕುಳಿದರು. ಇದು ನಡೆದದ್ದು ೨೦೦೯ರಲ್ಲಿ.
ಮೂರು ವರುಷಗಳ ನಂತರ ೨೦೧೨ರಲ್ಲಿ ಮುಕುಂದ ವಾಗ್ಗೆ ಪುನಃ ಬದುಕು ಬೇಡವೆನಿಸಿತು. ಯಾಕೆಂದರೆ ಎರಡು ಎಕ್ರೆಯಲ್ಲಿ ಅವರು ಬಿತ್ತಿದ ಸೋಯಾಬೀನಿನಿಂದ ಏನೂ ಫಸಲು ಸಿಗಲಿಲ್ಲ. ಅದಕ್ಕಾಗಿ ಸ್ನೇಹಿತರಿಂದ ಮತ್ತು ಬಂಧುಗಳಿಂದ ಅವರು ಪಡೆದ ರೂ.೬೦,೦೦೦ ಸಾಲ ಹೊರೆಯಾಗಿತ್ತು. ಅದೊಂದು ದಿನ ಮುಕುಂದ ವಾಗ್ ತನ್ನ ಜೀವವನ್ನೇ ಬಲಿಗೊಟ್ಟರು. ಆಗ ಮುಕುಂದರ ವಯಸ್ಸು ೩೮.
“ಅವರು ಮದ್ಯ ಕುಡಿದು ಕುಡಿದು ತೀರಿಕೊಂಡರು ಎನ್ನುತ್ತಾರೆ ಕೆಲವರು. ಇನ್ನು ಕೆಲವರ ಪ್ರಕಾರ ಅವರು ಕರೆಂಟಿನ ಷಾಕ್ಗೆ ಬಲಿಯಾದರು. ಅವರ ಶವ ಕಪ್ಪಗಾಗಿತ್ತು. ಅವರು ಪ್ರಾಣ ಬಿಟ್ಟಾಗ ನಾನು ನನ್ನ ತವರು ಮನೆಗೆ ಹೋಗಿದ್ದೆ. ನೀನು ಮನೆಯಲ್ಲೇ ಇದ್ದಿದ್ದರೆ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ ನನ್ನ ಮಕ್ಕಳು” ಎನ್ನುತ್ತಾ ಕಣ್ಣೀರಾಗುತ್ತಾಳೆ, ಮುಕುಂದ ವಾಗ್ರ ೩೮ ವರುಷ ವಯಸ್ಸಿನ ಪತ್ನಿ ಬಾಬಿ.


ಬಹುರಾಷ್ಟ್ರೀಯ ಬೀಜಕಂಪೆನಿ ಮೊನ್ಸಾಂಟೊ ಮತ್ತೆ ಸುದ್ದಿಯಲ್ಲಿದೆ. ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಇತ್ತೀಚೆಗೆ ಅದರ ವಿರುದ್ಧ ಆದೇಶ ನೀಡಿದೆ: ಮೇಲ್ನೋಟಕ್ಕೆ ಸ್ಫರ್ಧಾ ಕಾಯಿದೆ (ಕಾಂಪಿಟೀಷನ್ ಆಕ್ಟ್)ಯ ಸೆಕ್ಷನ್ ೩(೪) ಮತ್ತು ೪ ಅನ್ನು ಮೊನ್ಸಾಂಟೊ ಉಲ್ಲಂಘಿಸಿದೆಯೆಂದು ಕಾಣಿಸುತ್ತಿದ್ದು, ಇದನ್ನು ಸಿಸಿಐಯ ಡೈರೆಕ್ಟರ್-ಜನರಲ್ ತನಿಖೆ ಮಾಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣ, ಮೊನ್ಸಾಂಟೊದ ಜಂಟಿಉದ್ಯಮವು ಭಾರತದಲ್ಲಿ ಕುಲಾಂತರಿ ಹತ್ತಿಬೀಜಗಳ ಪ್ರಧಾನ ಪೂರೈಕೆದಾರನೆಂಬ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿದೆಯೆಂಬ ಸಂಶಯವೆಂದು ಸಿಸಿಐ ಹೇಳಿದೆ.

ಮೊನ್ಸಾಂಟೊ ಬೀಜಕಂಪೆನಿಯು ಕೆಲವು ರಾಜ್ಯ ಸರಕಾರಗಳು ಮತ್ತು ನಮ್ಮ ದೇಶದ ಕೆಲವು ಬೀಜಕಂಪೆನಿಗಳು ಹೂಡಿರುವ ದಾವೆಗಳನ್ನೂ ಎದುರಿಸುತ್ತಿದೆ; ಮೊನ್ಸಾಂಟೊ ಅತಿ ದುಬಾರಿ ರಾಯಧನ ವಸೂಲಿ ಮಾಡುತ್ತಿದೆ ಎಂಬುದೇ ದಾವೆಗಳ ತಕರಾರು. ಆದರೆ, ತಾನು ವಸೂಲಿ ಮಾಡುತ್ತಿರುವುದು ರಾಯಧನವಲ್ಲ, “ವಿಶೇಷಗುಣ ಶುಲ್ಕ" (ಟ್ರೇಯಿಟ್ ಫೀಸ್) ಎಂಬುದು ಮೊನ್ಸಾಂಟೊ ಕಂಪೆನಿಯ ವಾದ. ನಮ್ಮ ದೇಶದ ಕಾಯಿದೆಗಳ ಬಗ್ಗೆ ಮೊನ್ಸಾಂಟೊ ಕಂಪೆನಿಯ ಧೋರಣೆ ಏನೆಂದರೆ ಅವು ನಮ್ಮ ರೈತರನ್ನು ಸುಲಿಯುವ ದಂಧೆಯಲ್ಲಿ ಎದುರಾಗುವ ತೊಡಕುಗಳು, ಅಷ್ಟೇ.

ಇದೆಲ್ಲ ಶುರುವಾದದ್ದು ೧೦ ಮಾರ್ಚ್ ೧೯೯೫ರಂದು ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿ (ಜಿಇಎಸಿ)ಯ ಅನುಮತಿ ಪಡೆಯದೆ ಮಹಿಕೊ (ಮೊನ್ಸಾಂಟೊ - ಮಹಿಕೊ ಜಂಟಿ ಉದ್ಯಮ) ೧೦೦ ಗ್ರಾಮ್ ಹತ್ತಿ ಬೀಜಗಳನ್ನು ಭಾರತಕ್ಕೆ ತಂದಾಗ. ಆ ಬೀಜಗಳು ಎಂಒಎನ್ ೫೩೧ ಎಂಬ ಬಿಟಿ ಜೀನ್ ಹೊಂದಿದ್ದವು.

ಹೀಗೆ “ಕಳ್ಳಸಾಗಣೆ" ಮಾಡಿದ ಎಂಒಎನ್ ೫೩೧ ಜೀನನ್ನು ಬಳಸಿಕೊಂಡು, ಭಾರತದಲ್ಲಿ ಹತ್ತಿ ಬೀಜ ಪೂರೈಕೆಯ ಏಕಸ್ವಾಮ್ಯ ಸಾಧಿಸಬೇಕೆಂಬುದು  ಮೊನ್ಸಾಂಟೊ - ಮಹಿಕೊ ಕಂಪೆನಿಯ ಉದ್ದೇಶವಾಗಿತ್ತು; ಅದಕ್ಕಾಗಿ ಒಂಭತ್ತು ರಾಜ್ಯಗಳಲ್ಲಿ ೪೦ ಜಾಗಗಳಲ್ಲಿ ಕ್ಷೇತ್ರಪ್ರಯೋಗಗಳನ್ನು ಆರಂಭಿಸಿತು - ಇದಕ್ಕೂ ಜಿಇಎಸಿಯ ಅನುಮತಿ ಪಡೆದಿರಲಿಲ್ಲ.


ಈಗ ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ: ಕೃಷಿ ಕಾರ್ಮಿಕರ ಕೊರತೆ.
ಈ ಬಗ್ಗೆ ಅಂಕೆಸಂಖ್ಯೆಗಳು ಏನು ಹೇಳುತ್ತವೆ? ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ೨೦೦೪-೦೫ರಿಂದ ೨೦೧೧-೧೨ ಅವಧಿಯ ದತ್ತಾಂಶ ಪರಿಶೀಲಿಸಿದಾಗ ತಿಳಿದು ಬರುವ ಮಾಹಿತಿ: ಈ ಅವಧಿಯಲ್ಲಿ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆ ೧೦ ಮಿಲಿಯ (ದಶಲಕ್ಷ) ಹೆಚ್ಚಿತು; ಆದರೆ ಕೃಷಿ ಕಾರ್ಮಿಕರ ಸಂಖ್ಯೆ ೩೪ ಮಿಲಿಯ ಕಡಿಮೆಯಾಯಿತು!
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ)ಯ ಜ್ಯಾರಿಯಿಂದಾಗಿ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ ಎಂಬುದು ರೈತಾಪಿ ವರ್ಗದ ಅಭಿಪ್ರಾಯ. ಇದನ್ನು ಪರೀಕ್ಷಿಸಲು ಮುಂದಾದವರು ನವದೆಹಲಿಯ ರಾಷ್ಟ್ರೀಯ ಕೃಷಿ ಆರ್ಥಿಕತೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪಿ. ಎಸ್. ಬಿರ್ತಾಲ್. ಅದಕ್ಕಾಗಿ ಅವರು ವಿಶ್ಲೇಷಿಸಿದ್ದು ೬೧ನೇ ಸುತ್ತಿನ (೨೦೦೪-೦೫) ಮತ್ತು ೬೮ನೇ ಸುತ್ತಿನ (೨೦೧೧-೧೨) “ಉದ್ಯೋಗ ಮತ್ತು ನಿರುದ್ಯೋಗ ಸರ್ವೆ”ಯ ಅಂಕೆಸಂಖ್ಯೆಗಳನ್ನು.
ಈ ಅವಧಿಯಲ್ಲಿ ಕೃಷಿ ಉದ್ಯೋಗ ತೊರೆದವರು ೩೪ ಮಿಲಿಯ ಕಾರ್ಮಿಕರು. ಇವರಲ್ಲಿ ಶೇಕಡಾ ೭೯ ಮಹಿಳೆಯರು. ಅವರಲ್ಲಿ ಶೇಕಡಾ ೮೧ ಮಹಿಳೆಯರು ಅನಂತರ ಕೃಷಿಯೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗಮನಿಸಬೇಕಾದ ಇನ್ನೊಂದು ಬೆಳವಣಿಗೆ: ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆಯಲ್ಲಿ ೨೭ ಮಿಲಿಯ ಹೆಚ್ಚಳ. ಈ ಬೆಳವಣಿಗೆಯ ಮುಂಚೂಣಿಯಲ್ಲಿದೆ ಕಟ್ಟಡ ನಿರ್ಮಾಣ ರಂಗ. ಇದು ಅದೇ ಅವಧಿಯಲ್ಲಿ ಶೇ.೧೦.೩ ವಾರ್ಷಿಕ ಬೆಳವಣಿಗೆ ದರ ದಾಖಲಿಸಿದೆ.


ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ?

ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ. ಅಸ್ಸಾಂನಲ್ಲಿ ಖಡ್ಗಮೃಗಗಳನ್ನು ಹೊಂಚು ಹಾಕಿ ಕೊಲ್ಲುವ ದಂಧೆ ನಡೆಯುತ್ತಲೇ ಇದೆ. ಅವನ್ನು ಉಳಿಸಲಿಕ್ಕಾಗಿ ಕೈಗೊಂಡ ಕ್ರಮಗಳು ಹಲವು. ಆದರೆ, ಎಲ್ಲ ಕ್ರಮಗಳೂ ವೈಜ್ನಾನಿಕ ಅಧ್ಯಯನಗಳನ್ನು ಆಧರಿಸಿವೆ ಎನ್ನುವಂತಿಲ್ಲ.

ಉದಾಹರಣೆಗೆ, ರಾಷ್ಟ್ರೀಯ ಉದ್ಯಾನಗಳ ಕಣ್ಗಾವಲಿಗಾಗಿ ಪೈಲಟ್-ರಹಿತ ವಿಮಾನಗಳನ್ನು ಬಳಸಲಾಯಿತು. ಇದರಿಂದಾಗಿ ಸಾರ್ವಜನಿಕ ಹಣ ಪೋಲಾಯಿತು ವಿನಃ ಬೇರೇನೂ ಪ್ರಯೋಜನವಾಗಲಿಲ್ಲ. ಹಾಗೆಯೇ, ಕೊಂಬುಗಳ್ಳರ ಪತ್ತೆಗಾಗಿ ತರಬೇತಾದ ನಾಯಿಗಳನ್ನು ಬಳಸಬೇಕೆಂದು ಕೆಲವು ಸರಕಾರೇತರ ಸಂಸ್ಥೆಗಳ ಸಲಹೆ! ಇತ್ತೀಚೆಗಿನದು ರಾಜ್ಯ ಅರಣ್ಯ ಇಲಾಖೆಯ ಸಲಹೆ: ಖಡ್ಗಮೃಗಗಳ ಕೊಂಬು ಕತ್ತರಿಸುವುದು.

ಜನವರಿ ೨೦೧೪ರಲ್ಲಿ ಜರಗಿದ “ಇಂಡಿಯಾ ರೈನೋ ವಿಷನ್ ೨೦೨೦” ಎಂಬ ಕಾರ್ಯಕ್ರಮದಲ್ಲಿ ಇದರ ಚರ್ಚೆ. ಈ ಯೋಜನೆಯು ಕೊಂಬು ಕತ್ತರಿಸಿದ ಖಡ್ಗಮೃಗಗಳ ಬಗೆಗಿನ ಈ ಮುಂಚಿನ ಅಧ್ಯಯನಗಳ ಫಲಿತಾಂಶಗಳನ್ನೂ ನಿರ್ಲಕ್ಷಿಸಿದೆ. ಆದ್ದರಿಂದ, ಜಿಂಬಾಬ್ವೆ, ನಮಿಬಿಯ ಮತ್ತು ಸ್ವಾಜಿಲ್ಯಾಂಡುಗಳಲ್ಲಿ ಕೊಂಬುಗಳ್ಳರಿಂದ ಖಡ್ಗಮೃಗಗಳನ್ನು ಪಾರು ಮಾಡಲಿಕ್ಕಾಗಿ ಅವುಗಳ ಕೊಂಬು ಕತ್ತರಿಸಿದ್ದನ್ನು ವಿಶ್ಲೇಷಣೆ ಮಾಡಿದ ಅಧ್ಯಯನಗಳನ್ನು ಭಾರತದ ತಜ್ನರು ಪರಿಶೀಲಿಸಬೇಕಾಗಿದೆ.

ಕರೋಲ್ ಕನ್ನಿಂಗ್ಹ್ಯಾಮ್ ಮತ್ತು ಜೋಯಲ್ ಬರ್ಜರ್ ಬರೆದಿರುವ “ಹೋರ್ನ್ ಆಫ್ ಡಾರ್ಕ್ ನೆಸ್: ರೈನೋಸ್ ಆನ್ ದ ಎಜ್” ಎಂಬ ಪುಸ್ತಕದಲ್ಲಿ ಅಂತಹ ಒಂದು ಅಧ್ಯಯನವನ್ನು ಪ್ರಸ್ತಾಪಿಸಿದ್ದಾರೆ. ಪರಿಸರ ರಕ್ಷಣೆಯ ರಾಜಕೀಯದ ನೀಚ ಜಗತ್ತಿಗೆ ಈ ಪುಸ್ತಕ ನಮ್ಮನ್ನು ಒಯ್ಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಶಿಸುತ್ತಿರುವ ದೊಡ್ಡ ಸಸ್ತನಿಗಳನ್ನು ರಕ್ಷಿಸುವ ಕಾಯಕದ ಸಂಕೀರ್ಣತೆಗಳನ್ನು ಈ ಪುಸ್ತಕ ಬಹಿರಂಗ ಪಡಿಸುತ್ತದೆ.

Pages