ಪ್ರಾಣಿಪಕ್ಷಿಗಳ ಪೃಕೃತಿ ಜ್ನಾನ

       
ಅದೊಂದು ದಿನ ಸಿಲ್ಬಿಯಾ ತೊಪ್ನೊ ಎಂಬಾಕೆ ತನ್ನ ಹಳ್ಳಿಯಲ್ಲಿ ನಡೆದು ಹೋಗುತ್ತಿದ್ದಳು. ತುಸು ದೂರದಲ್ಲಿ ಅವಳೊಂದು ವಿಚಿತ್ರ ವಿದ್ಯಮಾನ ಕಂಡಳು.
ಜಾರ್ಖಡದ ಗುಮ್ಲಾ ಜಿಲ್ಲೆಯ ಕನಕಲೊಯಾ ಎಂಬ ಆ ಹಳ್ಳಿಯಲ್ಲಿ, ಹಕ್ಕಿಯೊಂದು ಹಾರುತ್ತ ಮಣ್ಣಿನೆಡೆಗೆ ಧುಮುಕುತ್ತಿತ್ತು; ಪುನಃ ಮೇಲಕ್ಕೆ ಹಾರಿ ಕರ್ಕಶವಾಗಿ ಕೂಗುತ್ತ ಮತ್ತೆ ಮಣ್ಣಿನೆಡೆಗೆ ಧುಮುಕುತ್ತಿತ್ತು. ಅದು ಕೆಂಪು-ಕೊಕ್ಕುಪಟ್ಟಿಯ ಟಿಟ್ಟಿಭ ಹಕ್ಕಿ.
ಕುತೂಹಲದಿಂದ ಸಿಲ್ಬಿಯಾ ತೊಪ್ನೊ ಆ ಜಾಗದ ಹತ್ತಿರಕ್ಕೆ ನಡೆದಳು. ಅಲ್ಲಿ ಅವಳು ಕಂಡದ್ದೇನು? ನಾಗರ ಹಾವೊಂದು ಹೆಡೆಯೆತ್ತಿ ಭುಸುಗುಡುತ್ತಿತ್ತು. ಆ ಟಿಟ್ಟಿಭ ಮತ್ತೆಮತ್ತೆ ನಾಗರ ಹಾವಿನೆಡೆಗೆ ಧುಮುಕುತ್ತ ಅದನ್ನು ಬೆದರಿಸಲು ಯತ್ನಿಸುತ್ತಿತ್ತು. ಈ ತಂತ್ರಕ್ಕೆ ನಾಗರಹಾವು ಹೆದರದಿದ್ದಾಗ, ಆ ಹಕ್ಕಿ ಇನ್ನೊಂದು ತಂತ್ರ ಝಳಪಿಸಿತು. ಹತ್ತಿರದ ಗಿಡವೊಂದರ ಪುಟ್ಟಪುಟ್ಟ ಗೆಲ್ಲುಗಳನ್ನು ಕೊಕ್ಕಿನಿಂದ ಮುರಿದು ತಂದು, ನಾಗರಹಾವಿನ ಸುತ್ತಲೂ ಚೆಲ್ಲಲು ಆರಂಭಿಸಿತು.
ಸ್ವಲ್ಪ ಹೊತ್ತಿನಲ್ಲಿ ನಾಗರಹಾವು ತನ್ನ ಹೆಡೆ ಇಳಿಸಿ, ನಿಧಾನವಾಗಿ ಅಲ್ಲಿಂದ ಸರಿದು ಹೋಯಿತು. ಅನಂತರ ಸಿಲ್ಬಿಯಾ ತೊಪ್ನೊ ಎಚ್ಚರಿಕೆಯಿಂದ ಹಾವು ಹೆಡೆಯೆತ್ತಿದ್ದ ಜಾಗ ತಲಪಿದಳು. ಅಲ್ಲಿದ್ದವು ಒಂದು ಪುಟ್ಟ ಹಕ್ಕಿಗೂಡಿನಲ್ಲಿ ಎರಡು ಮೊಟ್ಟೆಗಳು. ಅಂದರೆ, ಆ ಮೊಟ್ಟೆಗಳನ್ನು ನುಂಗಲು ಹವಣಿಸುತ್ತಿದ್ದ ನಾಗರಹಾವನ್ನು ತಡೆಯಲು ಟಿಟ್ಟಿಭ ಶಕ್ತಿಮೀರಿ ಪ್ರಯತ್ನಿಸುತ್ತಿತ್ತು.
ಟಿಟ್ಟಿಭ ತಂದು ಚೆಲ್ಲಿದ್ದ ಗಿಡದ ಗೆಲ್ಲುಗಳಲ್ಲಿ ನಾಗರಹಾವನ್ನು ವಿಕರ್ಷಿಸುವ ಯಾವುದೋ ಅಂಶ ಇದ್ದದಂತೂ ನಿಜ. ಈ ರೀತಿಯಲ್ಲಿ ಆ ಗಿಡದ ಔಷಧೀಯ ಗುಣ ಆಕಸ್ಮಿಕವಾಗಿ ಪತ್ತೆಯಾಯಿತು. ಗುಜರಾತಿ ಭಾಷೆಯಲ್ಲಿ ಆ ಗಿಡದ ಹೆಸರು ಗುಸುಂಪುತು (ಮುಂಡಾರಿ). ಅದರ ಸಸ್ಯಶಾಸ್ತ್ರೀಯ ಹೆಸರು ಇಂಡೋನೀಸಿಯೆಲ್ಲ ಇಕೆಯೊಡಿಸ್ (ಕುಟುಂಬ: ಅಕಾಂತಸಿಯೇ). ಈ ಗಿಡದ ಸಾರವನ್ನು ಹಾವು-ಕಡಿತದ ಚಿಕಿತ್ಸೆಗೆ ಬಳಸಲಾಗುತ್ತಿದೆ.
ಆಫ್ರಿಕಾದ ಚಿಂಪಾಂಜಿಗಳಲ್ಲಿಯೂ ಇಂತಹದೇ ಜ್ನಾನಸಂಪತ್ತಿದೆ. ಅದನ್ನು ಬಳಸುವ ಅವುಗಳ ಜಾಣತನ ದಾಖಲಿಸಿದ್ದಾರೆ ಮೈಖೇಲ್ ಎ. ಹಫ್ಮಾನ್.
ಅನಾರೋಗ್ಯದಿಂದ ಬಳಲುವಾಗ ಚಿಂಪಾಂಜಿಗಳು ಒಂದು ಗಿಡದ ಕಾಂಡದ ಕಹಿಯಾದ ತಿರುಳನ್ನು ಜಗಿಯುತ್ತವೆ. ಆಫ್ರಿಕಾದ ವಾಟೊಂಗ್ವೆ ಬುಡಕಟ್ಟಿನ ಜನರು ಆ ಗಿಡವನ್ನು ಮ್ಜೊನ್ಸೊ ಎಂದು ಕರೆಯುತ್ತಾರೆ. ಅದರ ಸಸ್ಯಶಾಸ್ತ್ರೀಯ ಹೆಸರು ವೆರ್ನೊನಿಯಾ ಅಮಿಗ್ಡಲಿನಾ. ಚಿಂಪಾಜಿಗಳು ಜಗಿಯುವುದು ಆ ಗಿಡದ ಎಳೆರೆಂಬೆಗಳನ್ನು. ಅವುಗಳ ಎಲೆಗಳನ್ನೂ ತೊಗಟೆಯನ್ನೂ ಕಿತ್ತು ಹಾಕಿ, ಒಳಗಿನ ತಿರುಳನ್ನು ಮಾತ್ರ ಜಗಿಯುತ್ತವೆ. ಅವು ಹಾಗೆ ಜಗಿಯುವಾಗ, ಅದರಿಂದ ಒಸರುತ್ತದೆ ತೀವ್ರ ಕಹಿಯಾದ ರಸ.
ಅನಂತರ ಆ ಗಿಡದ ಬಗ್ಗೆ ಅಧ್ಯಯನ ಮಾಡಿದಾಗ ತಿಳಿದು ಬಂದ ವಿಷಯ: ಆ ಗಿಡದ ಎಲೆಗಳು ಮತ್ತು ತೊಗಟೆಯಲ್ಲಿ ವಿಷಕಾರಿ ರಾಸಾಯನಿಕಗಳಿವೆ. ಆ ಗಿಡಗಳನ್ನು ಕೀಟಗಳು ಹಾಗೂ ಪ್ರಾಣಿಗಳು ತಿನ್ನದಿರುವುದಕ್ಕೆ ಇದುವೇ ಕಾರಣ. ಅನಾರೋಗ್ಯದಿಂದ ಬಳಲುವ ಚಿಂಪಾಂಜಿಗಳು ಆ ಗಿಡದ ತಿರುಳನ್ನು ಜಗಿಯುವಾಗ, ಅಕ್ಕಪಕ್ಕದಲ್ಲಿರುವ ವಯಸ್ಕ ಚಿಂಪಾಂಜಿಗಳು ಆ ಬಗ್ಗೆ ಯಾವುದೇ ಆಸಕ್ತಿ ತೋರುವುದಿಲ್ಲ. ಯಾಕೆಂದರೆ, ಅದನ್ನು ಔಷಧಿಯಾಗಿ ಜಗಿಯಲಾಗುತ್ತಿದೆ ಎಂಬುದು ಅವುಗಳಿಗೆ ತಿಳಿದಿರುವಂತಿದೆ. ಅನಾರೋಗ್ಯ ಪೀಡಿತ ತಾಯಿ-ಚಿಂಪಾಂಜಿ ಜಗಿದು ಉಗುಳಿದ ತಿರುಳನ್ನು ಮರಿ-ಚಿಂಪಾಂಜಿಗಳೂ ಜಗಿದು ರುಚಿ ನೋಡುತ್ತವೆ.
ಈ ರೀತಿಯಲ್ಲಿ ಮರಿ-ಚಿಂಪಾಂಜಿಗಳು ಬದುಕಿನ ಮೊದಲ ಕೆಲವು ಪಾಠಗಳನ್ನು ಕಲಿಯುತ್ತವೆ: ಅನಾರೋಗ್ಯ ಪೀಡಿತ ಅಮ್ಮನ ವರ್ತನೆಯ ಬಗ್ಗೆ ಮತ್ತು ಆ ಗಿಡದ ತೀವ್ರ ಕಹಿರುಚಿಯ ತಿರುಳನ್ನು ಜಗಿಯುವ ಬಗ್ಗೆ. ಚಿಂಪಾಂಜಿಗಳು ಹಾಗೂ ಬಹುಪಾಲು ಪ್ರಾಣಿಗಳು ತಮ್ಮ ಮರಿಗಳಿಗೆ ಏನನ್ನು ತಿನ್ನಬೇಕೆಂದು ನೇರವಾಗಿ ಕಲಿಸುವುದಿಲ್ಲ. ಬದಲಾಗಿ, ತಮ್ಮ ಹಿರಿಯರು ಏನು ತಿನ್ನುತ್ತಾರೆ ಎಂಬುದನ್ನು ನೋಡುತ್ತ, ಹಿರಿಯರು ತಿನ್ನುವ ಆಹಾರದ ರುಚಿ ನೋಡುತ್ತ ಮರಿಗಳು ತಾವೇ ಕಲಿಯುತ್ತವೆ.
ಅಂದ ಹಾಗೆ ಆಫ್ರಿಕಾದ ಉದ್ದಗಲದಲ್ಲಿ ಹಲವು ಬುಡಕಟ್ಟುಗಳ ಜನರು ಆ ಗಿಡವನ್ನು ಔಷಧಿಯಾಗಿ ಬಳಸುತ್ತಾರೆ: ಮಲೇರಿಯಾ ಜ್ವರ, ಅಮೀಬಿಕ್ ಡಿಸೆಂಟ್ರಿ, ಹೊಟ್ಟೆನೋವುಗಳ ಚಿಕಿತ್ಸೆಗೆ ಮತ್ತು ಸಣ್ಣಕರುಳಿನಲ್ಲಿರುವ ಹಾನಿಕಾರಕ ಪರೋಪಜೀವಿಗಳನ್ನು ಕೊಲ್ಲಲಿಕ್ಕಾಗಿ ಹಾಗೂ ಇನ್ನೂ ಹಲವು ರೋಗಗಳ ಚಿಕಿತ್ಸೆಗೆ. ಬುಡಕಟ್ಟು ಜನರಂತೆ ಕಾಡುಗಳಲ್ಲಿರುವ ಚಿಂಪಾಂಜಿಗಳೂ ಡಯಾರಿಯಾ ಮತ್ತು ಹೊಟ್ಟಿನೋವಿನ ಚಿಕಿತ್ಸೆಗೆ ಹಾಗೂ ಸಣ್ಣಕರುಳಿನ ಪರೋಪಜೀವಿಗಳ ನಿವಾರಣೆಗೆ ಆ ಗಿಡದ ತಿರುಳಿನ ಕಹಿರಸ ಬಳಸುತ್ತವೆ ಎಂಬುದು ದಾಖಲಾಗಿದೆ.
ಈ ಎರಡು ಪ್ರಕರಣಗಳ ಪಾಠ: ಪೃಕೃತಿಯ ಗುಟ್ಟುಗಳ ಜ್ನಾನ ಮತ್ತು ಅದನ್ನು ಬಳಸುವ ಜಾಣ್ಮೆ ಪ್ರಾಣಿಪಕ್ಷಿಗಳಲ್ಲಿಯೂ ಇದೆ.
(ಅಡಿಕೆ ಪತ್ರಿಕೆ, ಜೂನ್ ೨೦೧೬)