ಕೃಷಿರಂಗದ ಕೃಷಿಕಸ್ನೇಹಿ ಧ್ವನಿ: ಕೃಷಿಕ ಉತ್ಪಾದಕ ಕಂಪೆನಿ


ಎರಡು ವರುಷಗಳ ಮುಂಚೆ, ಮಂಡ್ಯ ಜಿಲ್ಲೆಯ ಉಪ್ಪುಲಗೇರಿಕೊಪ್ಲು ಗ್ರಾಮದ ನಾಗಣ್ಣ (೩೪) ತನ್ನ ಮುಕ್ಕಾಲು ಎಕ್ರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಕೃಷಿಯಿಂದ ಜೀವನ ನಿರ್ವಹಣೆ ಕಷ್ಟ ಅನಿಸಿತು. ಹಾಗಾಗಿ, ಹಳ್ಳಿ ತೊರೆದು ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ಗುಳೆ ಹೊರಟರು - ಮಹಾನಗರ ಬೆಂಗಳೂರಿಗೆ. ಅಲ್ಲಿ ಸಿಕ್ಕಿದ್ದು ಮದುವೆ ಸಭಾಭವನಗಳ ಅಲಂಕಾರ ಮಾಡುವ ಕೆಲಸ. ಅವರ ಗಳಿಕೆ ತಿಂಗಳಿಗೆ ಕೇವಲ ರೂ.೬,೦೦೦.

ಎರಡು ತಿಂಗಳು ಬೆಂಗಳೂರಿನಲ್ಲಿ ಹೇಗೋ ದಿನಗಳೆದರು. ಅಷ್ಟರಲ್ಲಿ ಮದುವೆಗಳ ಸೀಸನ್ ಮುಗಿಯಿತು, ನಾಗಣ್ಣನ ಕೆಲಸವೂ ಕೊನೆಯಾಯಿತು. "ಆ ದೊಡ್ಡ ಊರಿನಲ್ಲಿ ನನ್ನ ಕುಟುಂಬ ಸಾಕೋದು ಕಷ್ಟ ಅಂತ ಗೊತ್ತಾಗಿತ್ತು. ಹೆಂಡತಿ-ಮಕ್ಕಳೊಂದಿಗೆ ನಮ್ಮೂರಿಗೆ ವಾಪಾಸು ಬಂದೆ" ಎಂದು ನೆನಪು ಮಾಡಿ ಕೊಳ್ಳುತ್ತಾರೆ ನಾಗಣ್ಣ.

ಮುಂದೇನು? ಎಂದು ಚಿಂತಿಸುತ್ತಿದ್ದಾಗ ನಾಗಣ್ಣನಿಗೆ ಎಲ್. ಆನಂದ ಎಂಬ ಕೃಷಿ ಪದವೀಧರ ಯುವಕನ ಪರಿಚಯ. ಪಕ್ಕದ ಹಾಸನ ಜಿಲ್ಲೆಯವರಾದ ಆನಂದ ರೈತರನ್ನು ಭೇಟಿಯಾಗಿ ಆಗ್ರಹಿಸುತ್ತಿದ್ದರು - ಸುಧಾರಿತ ರೀತಿಯಲ್ಲಿ ಕೃಷಿ ಮಾಡಬೇಕೆಂದು. ಅವರು ತಾಜಾ ಕೃಷಿ ಉತ್ಪನ್ನ ಸರಬರಾಜು ಕಂಪೆನಿ ಲಾರೆನ್ಸ್ ಡೇಲ್ ಅಗ್ರೋ ಪ್ರೊಸೆಸಿಂಗ್ (ಎಲ್.ಇ.ಎ.ಎಫ್.) ಕಂಪೆನಿಯ ಪ್ರತಿನಿಧಿ. ಉತ್ತಮ ಬೀಜ, ಕಡಿಮೆ ರಾಸಾಯನಿಕ ಗೊಬ್ಬರ, ಅಂತರ ಬೆಳೆಗಳು ಮತ್ತು ತಂತ್ರಜ್ನಾನ ಬಳಸಿ, ನಾಗಣ್ಣರ ಸಣ್ಣ ಜಮೀನಿನಿಂದ ಹೆಚ್ಚು ಇಳುವರಿ ಪಡೆಯುವುದು ಹೇಗೆಂದು ಆನಂದ ವಿವರಿಸಿದರು. ನಾಗಣ್ಣ ಬೆಳೆಯುತ್ತಿದ್ದ ತರಕಾರಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ, ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಲು ಸಾಧ್ಯವೆಂದು ತಿಳಿಸಿದರು.

ಇದಾದ ನಂತರ ನಾಗಣ್ಣ ಕೈಗೊಂಡ ದೊಡ್ಡ ನಿರ್ಧಾರ: ಸುಧಾರಿತ ರೀತಿಯಲ್ಲಿ ಕೃಷಿ ಮಾಡುವುದು. ಅದಕ್ಕಾಗಿ ಮಂಡ್ಯದ ಮಳವಳ್ಳಿ ತೋಟಗಾರಿಕಾ ಕೃಷಿಕ ಉತ್ಪಾದಕರ ಕಂಪೆನಿ ನಿಯಮಿತದಲ್ಲಿ ರೂ.೧,೦೦೦ದ ಷೇರು ಭಂಡವಾಳ ಹೂಡಿದರು. ಇದು ಎಲ್.ಇ.ಎ.ಎಫ್.ನ ಸಹಭಾಗಿ ಕಂಪೆನಿ. ಅನಂತರ ಸುಧಾರಿತ ಬೀಜ ಖರೀದಿಸಿ, ಆನಂದರ ಸಲಹೆಯಂತೆಯೇ ಕೃಷಿ ಮಾಡಿದರು.

“ಇಪ್ಪತ್ತು ಗುಂಟೆಯಲ್ಲಿ ಬೆಂಡೆ ಬೀಜ ಬಿತ್ತಿದೆ. ಆನಂದರ ಸಲಹೆಯಂತೆ, ಸಾಲಿನಿಂದ ಸಾಲಿಗೆ ಹೆಚ್ಚು ಅಂತರ ಇಟ್ಟೆ. ಬೀಜ ಬಿತ್ತುವ ಮುಂಚೆಯೇ ಮಣ್ಣಿನ ಪರೀಕ್ಷೆ ಮಾಡಿಸಿದ್ದೆ. ಅದರ ವರದಿ ಆಧರಿಸಿ, ಬೇಕಾದಷ್ಟೇ ರಾಸಾಯನಿಕ ಗೊಬ್ಬರ ಹಾಕಿದೆ. ಇದು ನಾನು ಮುಂಚೆ ಹೊಲಕ್ಕೆ ಹಾಕುತ್ತಿದ್ದ ಗೊಬ್ಬರಕ್ಕಿಂತ ಬಹಳ ಕಡಿಮೆ. ಬೆಂಡೆ ಬೀಜ ಬಿತ್ತಿದ ದಿನವೇ ಗೊಬ್ರಾನೂ ಹಾಕಿದ್ದೆ. ಇದು ಹೊಸ ಪದ್ಧತಿ. ಮುಂಚೆ ಬೀಜ ಬಿತ್ತಿ, ಒಂದೆರಡು ವಾರದ ನಂತರ ಗೊಬ್ಬರ ಹಾಕ್ತಿದ್ದೆ” ಎನ್ನುತ್ತಾರೆ ನಾಗಣ್ಣ.   

"ನಾಲ್ಕನೇ ದಿನಕ್ಕೆ ನೂರಕ್ಕೆ ೯೫ ಬೀಜ ಮೊಳಕೆ ಬಂತು. ಆನಂದರನ್ನು ಕರೆದು ಕೇಳಿದೆ, ಈಗ ಯೂರಿಯಾ ಹಾಕಬೇಕಾ ಎಂದು. ಅವರು ಖಡಾಖಂಡಿತವಾಗಿ ಹೇಳಿದ್ರು, ಇಪ್ಪತ್ತೊಂದು ದಿನ ಏನೂ ಹಾಕಬೇಡಿ. ನನಗೆ ಆಶ್ಚರ್ಯವಾಯಿತು; ಯಾಕೆಂದರೆ ನಾನು ಮುಂಚೆ ಹೊಲಕ್ಕೆ ಯೂರಿಯಾ ಸುರೀತಿದ್ದೆ” ಎಂದು ತಮ್ಮ ಅನುಭವ ಹೇಳುತ್ತಾರೆ ನಾಗಣ್ಣ.

ಕೊನೆಯ ಕೊಯ್ಲು ಮಾಡಿದಾಗ ಸಿಕ್ಕಿದ ಇಳುವರಿ ಕಂಡು ನಾಗಣ್ಣರಿಗೆ ಭಾರೀ ಬೆರಗು. ಮುಂಚೆ ಅವರು ಅರ್ಧ ಎಕ್ರೆಯಲ್ಲಿ ಬೆಂಡೆ ಬೆಳೆದಿದ್ದಾಗ ಆರು ಕೊಯ್ಲಿನಿಂದ ಸಿಕ್ಕಿದ್ದು ೬೦೦ ಕಿಲೋ ಫಸಲು. ಈಗ ೨೪ ಕೊಯ್ಲಿನಿಂದ ಸಿಕ್ಕಿದ್ದು ಒಟ್ಟು ೧,೮೩೦ ಕಿಲೋ ಬೆಂಡೆ. ಎರಡೇ ತಿಂಗಳ ಬೆಳೆಯಿಂದ ನಾಗಣ್ಣರ ಕೈಗೆ ಬಂದ ಲಾಭ ೪೮,೦೦೦ ರೂಪಾಯಿ - ಅದೂ ಬರಗಾಲದ ಸಮಯದಲ್ಲಿ. ತನ್ನ ಹೊಲದ ಉಳಿದ ೧೦ ಗುಂಟೆ (ಕಾಲೆಕ್ರೆ)ಯಲ್ಲಿ ಬೆಳೆಸಿದ್ದ ಎಲೆಕೋಸು ಬೆಳೆಯಿಂದ ಅವರಿಗೆ ಸಿಕ್ಕಿದ ಲಾಭ ೨೨,೦೦೦ ರೂಪಾಯಿ.

“ನನಗಂತೂ ಬರಗಾಲದ ಬಿಸಿ ತಟ್ಟಿಲ್ಲ. ನನ್ನ ಆರು ಜನ ಸಂಬಂಧಿಕರೂ ನನ್ನ ಒತ್ತಾಯದಂತೆ ಇದೇ ಯೋಜನೆ ಸೇರಿಕೊಂಡು ಬೆಳೆ ಬೆಳೆಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿನವರಿಗೆ ನನ್ನ ಅನುಭವ ಹೇಳಬೇಕೆಂದಿದ್ದೇನೆ” ಎನ್ನುತ್ತಾರೆ ನಾಗಣ್ಣ. ಮಳವಳ್ಳಿ ಕೃಷಿಕ ಉತ್ಪಾದಕ ಕಂಪೆನಿಯ ೯೬೪ ಸದಸ್ಯರಲ್ಲಿ ಈ ಯೋಜನೆಗಾಗಿ ಆಯ್ದ ೧೩೦ ಕೃಷಿಕರಲ್ಲಿ ಒಬ್ಬರು ನಾಗಣ್ಣ. ಆ ಕಂಪೆನಿಯು ಎಲ್.ಇ.ಎ.ಎಫ್. ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಕಾರ್ಯಗತಗೊಳಿಸುತ್ತಿರುವ ಈ ಯೋಜನೆಯ ಹೆಸರು: ಸಾರ್ವಜನಿಕ - ಖಾಸಗಿ ಪಾಲುದಾರಿಕೆಯ ಸಮಗ್ರ ತೋಟಗಾರಿಕಾ ಅಭಿವೃದ್ಧಿ. ಈ ಯೋಜನೆ ಜ್ಯಾರಿಯಾದದ್ದು ೨೦೧೫ರ ಕೊನೆಯಲ್ಲಿ.

ಈ ಯೋಜನೆಯ ರಾಜ್ಯಮಟ್ಟದ ಮೇಲುಸ್ತುವಾರಿ ಘಟಕದ ಉಪನಿರ್ದೇಶಕರಾದ ಕ್ಷಮಾ ಪಾಟೀಲ್ ನೀಡುವ ಮಾಹಿತಿ: ಕರ್ನಾಟಕದಲ್ಲಿ ಈಗಾಗಲೇ ೭೬ ಕೃಷಿಕ ಉತ್ಪಾದಕ ಕಂಪೆನಿಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ ಏಳು ಕಂಪೆನಿಗಳು ದೊಡ್ಡ ಕಂಪೆನಿಗಳೊಂದಿಗೆ ಉತ್ಪನ್ನಗಳ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಿಂದಾಗಿ ಬರಪೀಡಿತ ಜಿಲ್ಲೆಗಳ ರೈತರಿಗೆ ಸಹಾಯವಾಗಿದೆ ಎಂಬುದು ಅವರ ಹೇಳಿಕೆ.

ನಾಗಣ್ಣರ ಮಳವಳ್ಳಿ ಪ್ರದೇಶದಲ್ಲಿ ಆರು ಹಂಗಾಮುಗಳ ಬೆಂಬಿಡದ ಬರಗಾಲದಿಂದಾಗಿ ನೀರಾವರಿ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಅದಕ್ಕಾಗಿಯೇ ಎಲ್.ಇ.ಎ.ಎಫ್. ೪೦೪ ಎಕ್ರೆ ಪ್ರದೇಶದಲ್ಲಿ ಕೊಳವೆ ಬಾವಿಯ ನೀರಿನಾಸರೆ ಹೊಂದಿರುವ ರೈತರೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಇದೇ ಯೋಜನೆಯ ಅನುಷ್ಠಾನ ಸದಾಲಮ್ಮ ತೋಟಗಾರಿಕಾ ಕೃಷಿಕ ಉತ್ಪಾದಕ ಕಂಪೆನಿ ನಿಯಮಿತ ಮತ್ತು ವಿಕ್ರಮ್ ಗ್ಲೋಬಲ್ ಕಮೋಡಿಟೀಸ್ ಪ್ರೈವೇಟ್ ಲಿಮಿಟೆಡ್ ಇವರಿಂದ. ಈ ಕಂಪೆನಿ ೩೫೦ ಎಕ್ರೆಗಳಲ್ಲಿ ೨೫೦ ರೈತರ ಸಹಕಾರದಿಂದ ಕೇವಲ ರಫ್ತಿಗಾಗಿ ಈರುಳ್ಳಿ ಬೆಳೆಸುತ್ತಿದೆ. ಇಲ್ಲಿಯೂ ಬರಗಾಲದ ಬೇಗೆ. ಆದರೆ ಯಾವ ಕೃಷಿಕನಿಗೂ ನಷ್ಟವಾಗಿಲ್ಲ. ಯೋಜನೆಯಲ್ಲಿ ಭಾಗವಹಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಫಸಲಿನ ಮೌಲ್ಯ ಪಾವತಿಸಲಾಗಿದೆ.

ಸದಾಲಮ್ಮ ಕೃ.ಉ. ಕಂಪೆನಿಯದು ಕಹಿ ಅನುಭವ. ಯಾಕೆಂದರೆ, ಹಲವು ರೈತರು ತಾವು ಸಹಿ ಮಾಡಿದ ಒಪ್ಪಂದ ಮುರಿದಿದ್ದಾರೆ. ಫಸಲಿನ ಅರ್ಧಾಂಶವನ್ನು ವಿಕ್ರಮ್ ಗ್ಲೋ.ಕ. ಕಂಪೆನಿಗೆ ಒದಗಿಸುವ ಬದಲಾಗಿ, ಸ್ಥಳೀಯ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಿ, ಎಲ್ಲ ಫಸಲನ್ನೂ ಅವರಿಗೇ ಮಾರಿದ್ದಾರೆ. ಈ ಮಧ್ಯವರ್ತಿಗಳು ತೂಕದಲ್ಲಿ ಮಾಡುವ ಮೋಸ, ಹಣ ಪಾವತಿ ಮಾಡದೆ ವರುಷಗಟ್ಟಲೆ ಸತಾಯಿಸುವುದು - ಇವೆಲ್ಲ ಗೊತ್ತಿದ್ದೂ ಮಧ್ಯವರ್ತಿಗಳ ಆಮಿಷದ ಬಲೆಗೆ ಬಿದ್ದಿದ್ದಾರೆ!

ವಿಕ್ರಮ್ ಗ್ಲೋಬಲ್ ಕಮೋಡಿಟೀಸ್ ರೈತರಿಗೆ ತಕ್ಷಣವೇ ಫಸಲಿನ ಹಣ ಪಾವತಿಸುತ್ತದೆ. ಮಲೇಷ್ಯಾದ ಈರುಳ್ಳಿ ರಫ್ತು ಮಾರುಕಟ್ಟೆ ಆಧರಿಸಿ ದರ ನಿಗದಿ ಪಡಿಸುತ್ತದೆ ಮತ್ತು ಆ ದರಗಳು ಕುಸಿದರೂ ತಾನು ಒಪ್ಪಿದ ದರ ಕಡಿಮೆ ಮಾಡುವುದಿಲ್ಲ. ಇವರು ಮಾಡಿದ ತೂಕವನ್ನು ಯಾರೂ ಪರೀಕ್ಷಿಸಬಹುದು. ಈ ಎಲ್ಲ ಕಾರಣಗಳಿಂದಾಗಿ, ರೈತರು ಇನ್ನಾದರೂ ತಮ್ಮ ಒಪ್ಪಂದದಂತೆ ನಡೆದುಕೊಳ್ಳುವರು ಎಂಬ ಆಶಯ ವ್ಯಕ್ತ ಪಡಿಸುತ್ತಾರೆ, ಸದಾಲಮ್ಮ ಕೃಷಿಕ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ಡಿ. ಶ್ರೀನಿವಾಸ್.

ಮಧ್ಯವರ್ತಿಗಳ ಶೋಷಣೆಗೆ ಶತಮಾನಗಳಿಂದ ಬಲಿಪಶುಗಳಾಗಿರುವ ಕೃಷಿಕರಿಗೆ ಕೃಷಿಕ ಉತ್ಪಾದಕ ಕಂಪೆನಿಗಳು ಪಾರದರ್ಶಕ ವ್ಯವಹಾರದ ಭರವಸೆ ನೀಡಿವೆ. ಇವುಗಳ ಶುದ್ಧ ಆಡಳಿತಕ್ಕೆ ಸದಸ್ಯರಾದ ಕೃಷಿಕರೇ ಜವಾಬ್ದಾರಿ. ಆದ್ದರಿಂದ, ಇವನ್ನು ಬಲಪಡಿಸಲು ಕೃಷಿಕರು ಮುಂದಾಗಬೇಕಾಗಿದೆ - ತಮ್ಮದೇ ಒಳಿತಿಗಾಗಿ.   

(ಅಡಿಕೆ ಪತ್ರಿಕೆ, ಜೂನ್ ೨೦೧೭)

ಫೋಟೋ ಕೃಪೆ: ಡೌನ್ ಟು ಅರ್ತ್ ಪಾಕ್ಷಿಕ ಪತ್ರಿಕೆ