ಬರಗಾಲದ ಭೂತ ಬಿಡಿಸಬಲ್ಲೆವೇ?

       
ಜೂನ್ ೨೦೧೬ರ ಆರಂಭದಿಂದಲೇ ಕರ್ನಾಟಕದ ಹಲವೆಡೆ ಭಾರೀ ಮಳೆ. ಕರಾವಳಿಯಲ್ಲಂತೂ ಪ್ರತಿ ದಿನವೂ ಭರ್ಜರಿ ಮಳೆ. ಜೂನ್ ೯ರಂದು ಕೇರಳಕ್ಕೆ ನೈಋತ್ಯ ಮಳೆ ಮಾರುತ ನುಗ್ಗಲಿದೆ ಎಂಬುದು ಹವಾಮಾನ ಇಲಾಖೆಯ ಘೋಷಣೆ. ಜೊತೆಯಲ್ಲೇ, ಈ ವರುಷ ಕಳೆದ ಕೆಲವು ವರುಷಗಳಿಗಿಂತ ಹೆಚ್ಚಿಗೆ ಮಳೆ ಸುರಿಯಲಿದೆ ಎಂಬ ನಿರೀಕ್ಷೆ.
ಈ ಎಲ್ಲ ಮಳೆಗದ್ದಲದಲ್ಲಿ ನಾವು ೨೦೧೬ರ ಭೀಕರ ಬರಗಾಲ, ಬಿರು ಬಿಸಿಲು, ಕುಡಿನೀರಿಗಾಗಿ ಜನರ ಬವಣೆ – ಇವೆಲ್ಲವನ್ನೂ ಮರೆತೇ ಬಿಡುತ್ತೇವೆ. ಮರೆತು ಬಿಡುವ ಮುನ್ನ, ಮೊನ್ನೆಮೊನ್ನೆಯ ವರೆಗೆ ನಮ್ಮ ಬೆವರಿಳಿಸಿದ ಬರಗಾಲದ ಭೀಕರತೆಯ ಚಿತ್ರಣ ದಾಖಲಿಸೋಣ. ೨೦೧೬ರ ಬರಗಾಲದಿಂದ (ಸತತ ಎರಡನೇ ವರುಷ ಕಾಡಿದ ಬರಗಾಲ) ತತ್ತರಿಸಿದ್ದು ಭಾರತದ ಅರ್ಧ ಭೂಪ್ರದೇಶ. ಅಂದರೆ ಭಾರತದ ೬೭೮ ಜಿಲ್ಲೆಗಳಲ್ಲಿ ೨೫೪ರಲ್ಲಿ ಸರಕಾರಗಳನ್ನೂ ಜನರನ್ನೂ ಕಂಗೆಡಿಸಿದ ಬರಗಾಲ. ಭಾರತದ ಉದ್ದಗಲದಲ್ಲಿ ಹರಡಿದ ೬ ಲಕ್ಷ ಹಳ್ಳಿಗಳಲ್ಲಿ ೨ ಲಕ್ಷ ಹಳ್ಳಿಗಳಲ್ಲಿ ನೀರಿಲ್ಲದೆ ಹಾಹಾಕಾರ. ಹತ್ತು ರಾಜ್ಯಗಳಲ್ಲಿ ಸುಮಾರು ೬೦,೦೦೦ ಟ್ಯಾಂಕರುಗಳ ಮೂಲಕ ಜನರಿಗೆ ನೀರಿನ ಪೂರೈಕೆ. ಸುಮಾರು ಒಂದೂವರೆ ಕೋಟಿ ಹೆಕ್ಟೇರ್ ಕೃಷಿಭೂಮಿಯಲ್ಲಿ ಬೆಳೆನಾಶ. ಈ ದೇಶದ ೧೨೫ ಕೋಟಿ ಜನರಲ್ಲಿ ಸುಮಾರು ೩೩ ಕೋಟಿ ಜನರು ಬರಗಾಲದಿಂದ ಕಂಗಾಲು.
ಈ ಅಂಕೆಸಂಖ್ಯೆಗಳು ನಮ್ಮ ಮನಕಲಕದಿದ್ದರೆ, ಬರಗಾಲದಿಂದ ಬೆಂದು ಬೆಂಡಾದ ಹಳ್ಳಿಗಳ ವಾಸ್ತವ ಚಿತ್ರಣ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ನದಿ ಮತ್ತು ದೊಡ್ಡ ಕೆರೆಗಳ ಒಣಗಿದ ತಳದಲ್ಲಿರುವ ನೀರಿನ ಹೊಂಡಗಳನ್ನು ರಕ್ಷಿಸಲಿಕ್ಕಾಗಿ ಪೊಲೀಸರನ್ನು ನೇಮಿಸಲಾಗಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ; ಅಮ್ಮನ ಜೊತೆ ನೀರು ಹುಡುಕುತ್ತಾ ಸುತ್ತಾಡುತ್ತಾರೆ. ಆ ರಾಜ್ಯದ ಹಲವು ಹಳ್ಳಿಗಳ ದಾರುಣ ಸ್ಥಿತಿಯ ಸೂಚಕ: ದೂರದ ಕೊಳವೆಬಾವಿಗಳಿಂದ ನೀರು ತಂದು ಒಣ ಬಾವಿಗಳಿಗೆ ತುಂಬಿಸುತ್ತಿರುವುದು. ಅಲ್ಲಿನ ಧಾರ್ ಜಿಲ್ಲೆಯ ಚಾಂದ್ವಾಟ್ ಹಳ್ಳಿಗೆ ನೀರಿನಾಸರೆಯಾಗಿದ್ದ ೫ ಕಿಮೀ ದೂರದ ನೀರಿನ ಹೊಂಡ ಬತ್ತಿದೆ. ಆ ಹಳ್ಳಿಯ ನಿವಾಸಿ ಹೇಳುವ ಕಣ್ಣೀರ ಕತೆ: “ಈಗ ನಾವು ನೀರಿನ ಭಿಕ್ಷೆ ಬೇಡಲಿಕ್ಕಾಗಿ ದೂರದೂರದ ಹಳ್ಳಿಗಳಿಗೆ ಬಾಟಲಿ ಹಿಡಿದುಕೊಂಡು ಹೋಗುತ್ತಿದ್ದೇವೆ.” ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದಲ್ಲಿ ಮಹಿಳೆಯರು ದಿನದಿನವೂ ಅರ್ಧ ದಿನ ಹೈರಾಣಾಗುತ್ತಿದ್ದಾರೆ – ೯ ಕಿಮೀ ದೂರದಿಂದ ಎರಡು ಬಕೆಟ್ ನೀರು ತರಲಿಕ್ಕಾಗಿ. ನೀರಿನ ಕೊರತೆಯಿಂದಾಗಿ ಸುದ್ದಿ ಮಾಡಿರುವ ಲಾತುರಿನಲ್ಲಿ ನೀರಿನಾಸರೆಗಳ ಸುತ್ತಲೂ ಸೆಕ್ಷನ್ ೧೪೪ ಜ್ಯಾರಿ ಮಾಡಲಾಗಿದೆ ಎಂದರೆ ನಂಬುತ್ತೀರಾ? ಥಾನಾದಲ್ಲಿ ತಳ ಕಾಣುವ ಬಾವಿಯಿಂದ ನೀರೆತ್ತಲು ೬೦–೭೦ ಜನರು ಹಗ್ಗದಿಂದ ಕೊಡವಿಳಿಸಿ ಕೊಸರಾಡುವ ಚಿತ್ರ ಮತ್ತೆಮತ್ತೆ ಕಾಡುತ್ತದೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ.
ಇಂತಹ ಪರಿಸ್ಥಿತಿ ಭಾರತಕ್ಕೆ ಹೊಸತಲ್ಲ. ೧೯೬೫-೬೬ರಲ್ಲಿಯೂ ಇಂತಹದೇ ಭಯಂಕರ ಬರಗಾಲದಿಂದ ಭಾರತ ಹೈರಾಣ. ಅನಂತರದ ವರುಷಗಳ ಅಂಕೆಸಂಖ್ಯೆ ಪರಿಶೀಲಿಸಿದರೆ ಬರಗಾಲ ಭಾರತದ ಬೆಂಬಿಡದ ಭೂತ. ಪ್ರತಿ ವರುಷ ಸರಾಸರಿ ೫ ಕೋಟಿ ಜನರು ಪೀಡಿತರು. ಭಾರತದ ಭೂಪ್ರದೇಶದ ಶೇಕಡಾ ೬೮ ಸದಾ ಬರಪೀಡಿತ.
ಚರಿತ್ರೆಯನ್ನು ಅವಲೋಕಿಸಿದರೆ, ಬರಗಾಲವನ್ನು ಎದುರಿಸುವುದರಲ್ಲಿ ನಮ್ಮ ದೇಶಕ್ಕೆ ೧೫೦ ವರುಷಗಳ ದೀರ್ಘ ಅನುಭವ. ೧೯೬೫-೬೬ರ ಭೀಕರ ಬರಗಾಲದ ನಂತರ, ನಮ್ಮ ಸರಕಾರದ ಧೋರಣೆಯಲ್ಲಿ ಬದಲಾವಣೆ. ಬರಗಾಲದ ಬಿಸಿ ತಟ್ಟಿದ ಬಳಿಕ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದಲಾಗಿ, ದೇಶವನ್ನು ಬರಮುಕ್ತಗೊಳಿಸಲು ನಿರ್ಧಾರ. ಈ ನಿಟ್ಟಿನಲ್ಲಿ, ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಕಾಮಗಾರಿ ನಡೆಸುವ ಮೂಲಕ ಹಳ್ಳಿಗಳನ್ನು ಬರಗಾಲದ ಆಘಾತ ಎದುರಿಸಲು ಸಜ್ಜಾಗಿಸುವ ಪ್ರಯತ್ನ.
ಅಬ್ಬ, ಇದಕ್ಕಾಗಿ ಸರಕಾರ ಮಾಡಿದ ವೆಚ್ಚವೆಷ್ಟು? ಕಳೆದ ಆರು ದಶಕಗಳಲ್ಲಿ, ಜಲ ಸಂರಕ್ಷಣಾ ಮತ್ತು ಬರಮುಕ್ತ ಸಂರಚನಾ ಕಾಮಗಾರಿಗಳಿಗಾಗಿ ಮಾಡಿದ ವೆಚ್ಚ ಬರೋಬ್ಬರಿ ರೂಪಾಯಿ ೩.೫ ಲಕ್ಷ ಕೋಟಿಗಿಂತ ಅಧಿಕ! ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಅನುಸಾರ ಇಂತಹ ೧.೨೩ ಕೋಟಿ ಸಂರಚನೆಗಳನ್ನು ನಿರ್ಮಿಸಲಾಗಿದೆ. (ಅಂದರೆ ಪ್ರತಿಯೊಂದು ಹಳ್ಳಿಯಲ್ಲಿ ಸರಾಸರಿ ೨೧ ಸಂರಚನೆಗಳು). ಈ ಕಾಯಿದೆ ಪ್ರಕಾರ, ೨೦೦೬ರಿಂದ ಮಾರ್ಚ್ ೨೦೧೬ರ ವರೆಗೆ ಸರಕಾರ ಮಾಡಿದ ವೆಚ್ಚ ರೂಪಾಯಿ ಮೂರು ಲಕ್ಷ ಕೋಟಿಗಿಂತ ಜಾಸ್ತಿ.
ಇಷ್ಟೆಲ್ಲ ಆದರೂ, ೨೦೧೬ರಲ್ಲಿ ಬರಗಾಲದ ಬಿರುಸನ್ನು ಕಡಿಮೆ ಮಾಡಲು ಯಾಕೆ ಸಾಧ್ಯವಾಗಲಿಲ್ಲ? ಯಾಕೆಂದರೆ, ಜಲ ಸಂರಕ್ಷಣಾ ಮತ್ತು ಬರಮುಕ್ತ ಸಂರಚನಾ ಕಾಮಗಾರಿಗಳ ಸ್ಥಳ ನಿರ್ಧರಿಸುವಾಗ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲಿಲ್ಲ; ಅವರ ಪಾರಂಪರಿಕ ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸಲಿಲ್ಲ. ಭ್ರಷ್ಟಾಚಾರದಿಂದಾಗಿಯೂ ಕೋಟಿಗಟ್ಟಲೆ ರೂಪಾಯಿ ಸೋರಿ ಹೋಗಿದೆ. ಅಂತೂ, ಭಾರತವನ್ನು ಬರಮುಕ್ತಗೊಳಿಸಲು ಆರು ದಶಕಗಳಲ್ಲಿ ರೂಪಾಯಿ ೩.೫ ಲಕ್ಷ ಕೋಟಿ ಖರ್ಚು ಮಾಡಿದರೂ ಗ್ರಾಮೀಣ ಜನರಿಗೆ ಪ್ರಯೋಜನವಾಗಲಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ೨೦೧೫ರ “ಭಾರತದಲ್ಲಿ ಕೃಷಿಯ ಕೆಲವು ಸಂಗತಿಗಳು” ವರದಿಯ ಪ್ರಕಾರ, ಬೆಳೆನಾಶಕ್ಕೆ (ಮುಖ್ಯವಾಗಿ ಗೋಧಿ ಮತ್ತು ಭತ್ತ) ಅತಿಮುಖ್ಯ ಕಾರಣ, ಕಡಿಮೆ ಮಳೆ ಮತ್ತು ಬರಗಾಲ ಎನ್ನುತ್ತಾರೆ ರೈತರು. ಅಂತಿಮವಾಗಿ, ಲಕ್ಷಗಟ್ಟಲೆ ಬಡವರು ಅತಿ ಬಡವರಾಗುತ್ತಿರುವ ದುರಂತ ನಮ್ಮ ಕಣ್ಣೆದುರಿಗಿದೆ!
ಬರಗಾಲಕ್ಕೂ ಆಹಾರ ಭದ್ರತೆಗೂ ಬಿಡಿಸಲಾಗದ ನಂಟು. ನಮ್ಮ ದೇಶದ ಒಟ್ಟು ಕೃಷಿಭೂಮಿಯ ಶೇ.೪೨ ಬರಪೀಡಿತ. ಬೇಸಾಯ ಭೂಮಿಯ ಶೇ.೬೮ ಮಳೆಯಾಧಾರಿತ; ಹಾಗಾಗಿ ಭಾರತದ ಆರ್ಥಿಕತೆಯಲ್ಲಿ ಮಳೆಯಾಧಾರಿತ ಬೇಸಾಯಕ್ಕೆ ಮಹತ್ವ. ಆಹಾರ ಭದ್ರತೆಗಾಗಿ, ೨೦೨೦ರ ಹೊತ್ತಿಗೆ ನಮ್ಮ ದೇಶ ಉತ್ಪಾದಿಸಬೇಕಾದ ಹೆಚ್ಚುವರಿ ಆಹಾರಧಾನ್ಯ ೧೦ ಕೋಟಿ ಟನ್. ನೀರಾವರಿ ಜಮೀನಿನ ವಿಸ್ತರಣೆ ಮತ್ತು ನೀರಾವರಿ ಜಮೀನಿನಲ್ಲಿ ಉತ್ಪಾದನೆಯ ಹೆಚ್ಚಳದಿಂದ ೨೦೨೦ರಲ್ಲಿ ಗರಿಷ್ಠ ೬.೪ ಕೋಟಿ ಟನ್ ಹೆಚ್ಚುವರಿ ಆಹಾರಧಾನ್ಯ ನಿರೀಕ್ಷಿಸಬಹುದು. ಉಳಿದ ೩.೬ ಕೋಟಿ ಟನ್ ಹೆಚ್ಚುವರಿ ಆಹಾರಧಾನ್ಯವನ್ನು ಮಳೆಯಾಧಾರಿತ ಹಾಗೂ ಬರಪೀಡಿತ ಜಮೀನಿನಿಂದಲೇ ಉತ್ಪಾದಿಸಬೇಕಾಗಿದೆ.
ಈ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡರೆ, “ಬರಗಾಲದ ಭೂತ ಬಿಡಿಸಬಲ್ಲೆವೇ?” ಎಂಬ ಪ್ರಶ್ನೆಗೆ ಅವಕಾಶವಿಲ್ಲ. ಅಂದರೆ, ಅದನ್ನು ಬಿಡಿಸಲೇ ಬೇಕಾಗಿದೆ. ಕಾರಣ, ಇನ್ನೊಂದು ಬರಗಾಲ ಬರಬಾರದು. ಇದರರ್ಥ, ಕನಿಷ್ಠ ಮಳೆಯಿಂದಲೇ ಹೆಚ್ಚುವರಿ ಆಹಾರಧಾನ್ಯ ಉತ್ಪಾದನೆ ಸಾಧಿಸಿ, ಬದುಕುವ ಕಲೆ ಕಲಿಯಬೇಕಾಗಿದೆ. ಇದೀಗ, ನಾವು ಎದುರಿಸಬೇಕಾದ ಬಹುದೊಡ್ಡ ಸವಾಲು.
(ಅಡಿಕೆ ಪತ್ರಿಕೆ, ಸಪ್ಟಂಬರ್ ೨೦೧೬)