ಎಲ್ಲಿ ಹೋದರು ಕೃಷಿ ಕಾರ್ಮಿಕರು?


ಈಗ ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ: ಕೃಷಿ ಕಾರ್ಮಿಕರ ಕೊರತೆ.
ಈ ಬಗ್ಗೆ ಅಂಕೆಸಂಖ್ಯೆಗಳು ಏನು ಹೇಳುತ್ತವೆ? ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ೨೦೦೪-೦೫ರಿಂದ ೨೦೧೧-೧೨ ಅವಧಿಯ ದತ್ತಾಂಶ ಪರಿಶೀಲಿಸಿದಾಗ ತಿಳಿದು ಬರುವ ಮಾಹಿತಿ: ಈ ಅವಧಿಯಲ್ಲಿ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆ ೧೦ ಮಿಲಿಯ (ದಶಲಕ್ಷ) ಹೆಚ್ಚಿತು; ಆದರೆ ಕೃಷಿ ಕಾರ್ಮಿಕರ ಸಂಖ್ಯೆ ೩೪ ಮಿಲಿಯ ಕಡಿಮೆಯಾಯಿತು!
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ)ಯ ಜ್ಯಾರಿಯಿಂದಾಗಿ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ ಎಂಬುದು ರೈತಾಪಿ ವರ್ಗದ ಅಭಿಪ್ರಾಯ. ಇದನ್ನು ಪರೀಕ್ಷಿಸಲು ಮುಂದಾದವರು ನವದೆಹಲಿಯ ರಾಷ್ಟ್ರೀಯ ಕೃಷಿ ಆರ್ಥಿಕತೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪಿ. ಎಸ್. ಬಿರ್ತಾಲ್. ಅದಕ್ಕಾಗಿ ಅವರು ವಿಶ್ಲೇಷಿಸಿದ್ದು ೬೧ನೇ ಸುತ್ತಿನ (೨೦೦೪-೦೫) ಮತ್ತು ೬೮ನೇ ಸುತ್ತಿನ (೨೦೧೧-೧೨) “ಉದ್ಯೋಗ ಮತ್ತು ನಿರುದ್ಯೋಗ ಸರ್ವೆ”ಯ ಅಂಕೆಸಂಖ್ಯೆಗಳನ್ನು.
ಈ ಅವಧಿಯಲ್ಲಿ ಕೃಷಿ ಉದ್ಯೋಗ ತೊರೆದವರು ೩೪ ಮಿಲಿಯ ಕಾರ್ಮಿಕರು. ಇವರಲ್ಲಿ ಶೇಕಡಾ ೭೯ ಮಹಿಳೆಯರು. ಅವರಲ್ಲಿ ಶೇಕಡಾ ೮೧ ಮಹಿಳೆಯರು ಅನಂತರ ಕೃಷಿಯೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗಮನಿಸಬೇಕಾದ ಇನ್ನೊಂದು ಬೆಳವಣಿಗೆ: ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆಯಲ್ಲಿ ೨೭ ಮಿಲಿಯ ಹೆಚ್ಚಳ. ಈ ಬೆಳವಣಿಗೆಯ ಮುಂಚೂಣಿಯಲ್ಲಿದೆ ಕಟ್ಟಡ ನಿರ್ಮಾಣ ರಂಗ. ಇದು ಅದೇ ಅವಧಿಯಲ್ಲಿ ಶೇ.೧೦.೩ ವಾರ್ಷಿಕ ಬೆಳವಣಿಗೆ ದರ ದಾಖಲಿಸಿದೆ.
ಕಾರ್ಮಿಕರ ವಯಸ್ಸು ಮತ್ತು ಸಾಮಾಜಿಕ – ಆರ್ಥಿಕ ಸ್ಥಿತಿಗತಿಯೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ ಲಭ್ಯತೆ ಮೇಲೆ ಪರಿಣಾಮ ಬೀರಿದೆ. ದುಡಿಯುವ ವಯಸ್ಸಿನ (೧೫ರಿಂದ ೫೯ ವರುಷ ವಯಸ್ಸಿನ) ಗ್ರಾಮೀಣ ಮಹಿಳೆಯರಲ್ಲಿ ಶೇ.೬೬ಕ್ಕಿಂತ ಜಾಸ್ತಿ ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಿಲ್ಲ; ಯಾಕೆಂದರೆ ಅವರು ತಮ್ಮ ಮನೆಗೆಲಸದಲ್ಲಿ ಮುಳುಗಿದ್ದಾರೆ. ಕುಟುಂಬದ ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತಿದ್ದಂತೆ ಲಕ್ಷಗಟ್ಟಲೆ ಮಹಿಳೆಯರು ಮನೆಯ ಹೊರಗಿನ ದುಡಿತ ಬೇಡವೆಂದು ನಿರ್ಧರಿಸಿದರು. ಅದರೊಂದಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಹೆಚ್ಚುತ್ತಿರುವ ಉದ್ಯೊಗ ಅವಕಾಶಗಳು, ಇನ್ನಷ್ಟು ಕಾರ್ಮಿಕರು ಕೃಷಿರಂಗ ತೊರೆಯಲು ಕಾರಣವಾದವು.
ಆ ವಿಶ್ಲೇಷಣೆ ಬೆಟ್ಟು ಮಾಡಿ ತೋರಿಸಿದ ಇನ್ನೊಂದು ಕಾರಣ (ಕಾರ್ಮಿಕರು ಕೃಷಿರಂಗ ತೊರೆಯುವುದಕ್ಕೆ) ಗಂಡಸರಲ್ಲಿ ಮತ್ತು ಹೆಂಗಸರಲ್ಲಿ ಹೆಚ್ಚುತ್ತಿರುವ ಸಾಕ್ಷರತೆ. ೨೦೦೪-೦೫ರಿಂದ ೨೦೧೧-೧೨ ಅವಧಿಯಲ್ಲಿ ಗ್ರಾಮೀಣ ಗಂಡಸರ ಸಾಕ್ಷರತಾ ಪ್ರಮಾಣ ಶೇ.೮ ಹೆಚ್ಚಾಗಿದ್ದರೆ, ಹೆಂಗಸರದ್ದು ಶೇ.೧೧ ಹೆಚ್ಚಾಗಿದೆ. ಶಾಲಾ ಶಿಕ್ಷಣ ಪಡೆದ ಗ್ರಾಮೀಣ ಯುವಜನರು ಜಾಸ್ತಿ ಮಜೂರಿ ಸಿಗುವ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿಯಲು ಇಷ್ಟ ಪಡುವುದು ಸಾಮಾನ್ಯ.
ಕೃಷಿರಂಗ ಮತ್ತು ಕೃಷಿಯೇತರ ರಂಗಗಳಲ್ಲಿ ೨೦೦೮-೦೯ ತನಕ ಮಜೂರಿ ಸ್ಥಿರವಾಗಿತ್ತು. ಅನಂತರ ಅದು ಹೆಚ್ಚಾಗ ತೊಡಗಿತು. ಇದಕ್ಕೆ ಕಾರಣ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ) ಎನ್ನಬಹುದು. ಗ್ರಾಮೀಣ ಪ್ರದೇಶಗಳಲ್ಲಿ ೨೦೧೧-೧೨ರಲ್ಲಿ ಒಟ್ಟು ಉದ್ಯೋಗದ ಶೇಕಡಾ ಮೂರು ಮಾತ್ರ ಈ ಕಾಯಿದೆ ಒದಗಿಸಿದೆ; ಆದರೆ, ಇದರ ಕೆಲಸಕ್ಕೆ ದೊರಕುವ ಹೆಚ್ಚಿನ ಮಜೂರಿಯಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಮಜೂರಿ ಹೆಚ್ಚಾಗುತ್ತಾ ಬಂತು. ಇದರಿಂದಾಗಿ, ಕೃಷಿಕಾರ್ಮಿಕರು ಪ್ರತಿ ತಿಂಗಳಿನಲ್ಲಿ ದುಡಿಯುವ ಅವಧಿ ಇದೀಗ ಕಡಿಮೆಯಾಗಿದೆ (ಆದರೂ, ಹೆಚ್ಚಾಗಿರುವ ದಿನಮಜೂರಿಯಿಂದಾಗಿ ಅವರ ತಿಂಗಳ ಆದಾಯ ಅಧಿಕವಾಗಿದೆ). ಕೃಷಿಕಾರ್ಮಿಕರ ಕೊರತೆಗೆ ಇದೂ ಕಾರಣ.
ಒಟ್ಟಾರೆಯಾಗಿ, ಪ್ರತಿಯೊಂದು ಬೆಳೆಯ ಒಟ್ಟು ಕೃಷಿವೆಚ್ಚದಲ್ಲಿ ಕೃಷಿಕಾರ್ಮಿಕರ ಮಜೂರಿಯ ಪಾಲು ಹೆಚ್ಚಾಗುತ್ತಿದೆ ಮತ್ತು ಪ್ರತಿ ಹೆಕ್ಟೇರಿಗೆ ಕೃಷಿಕಾರ್ಮಿಕರ ಮಜೂರಿ ವೆಚ್ಚ ಏರುತ್ತಲೇ ಇದೆ. ಇದೆಲ್ಲದರ ಹೊಡೆತ ಬಲವಾಗಿ ಬಿದ್ದದ್ದು ದೊಡ್ಡ ಹಿಡುವಳಿಗಳ ಕೃಷಿಕರಿಗೆ. ನಮ್ಮ ದೇಶದ ಒಟ್ಟು ಕೃಷಿ ಜಮೀನಿನ ಶೇ.೬೬ ಇವರ ಒಡೆತನದಲ್ಲಿದೆ. ಕೃಷಿಕಾರ್ಮಿಕರ ತೀವ್ರ ಅಗತ್ಯ ಇವರಿಗಿದೆ (ಯಾಕೆಂದರೆ, ಸಣ್ಣ ಹಿಡುವಳಿದಾರರಿಗೆ ಕುಟುಂಬದ ಸದಸ್ಯರ ಕೆಲಸದ ಮೂಲಕ ತಮ್ಮ ಜಮೀನು ನಿರ್ವಹಣೆ ಸಾಧ್ಯ). ಈ ಸಮಸ್ಯಾ ಪರಿಹಾರಕ್ಕಾಗಿ ಇವರು ಕೃಷಿಯ ಯಾಂತ್ರೀಕರಣ ಮಾಡಲೇ ಬೇಕಾಗಿದೆ. ಕಾಫಿಹಣ್ಣು ಕೊಯ್ಲು, ಚಹಾ ಚಿಗುರು ಕೊಯ್ಲು – ಇಂತಹ ಕೆಲಸಗಳ ಹೊರತಾಗಿ ಇತರ ಕೃಷಿಕೆಲಸಗಳನ್ನು ಯಂತ್ರಗಳು ನಿಭಾಯಿಸಬಲ್ಲವು. ಹಣ್ಣುಹಂಪಲು ಇತ್ಯಾದಿ ಒಣಗಿಸಲು ಆಧುನಿಕ ಡ್ರೈಯರುಗಳ ಬಳಕೆ, ಪೀಡೆನಾಶಕ ಸಿಂಪಡಿಸಲು ಡ್ರೋನ್ (ಚಾಲಕನಿಲ್ಲದ ಪುಟ್ಟ ಹಾರಾಟ ಯಂತ್ರ) ಬಳಕೆ – ಇಂತಹ ಅತ್ಯಾಧುನಿಕ ತಂತ್ರಜ್ನಾನ ಬಳಕೆಯೂ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯಕ.
ರಾಜಕೀಯ ಕಾರಣಗಳಿಂದಾಗಿ ನರೇಗಾ ಯೋಜನೆಯಂತಹ ಸಮಾಜ ಕಲ್ಯಾಣ ಯೋಜನೆಗಳನ್ನು ಯಾವುದೇ ಸರಕಾರ ರದ್ದು ಮಾಡುವಂತಿಲ್ಲ. ಹಾಗೆ ಮಾಡಿದರೂ, ಅದರ ಬದಲಾಗಿ ಅಂತಹದೇ ಬೇರೊಂದು ಯೋಜನೆಯನ್ನು ಸರಕಾರ ಜ್ಯಾರಿ ಮಾಡಲೇ ಬೇಕಾಗುತ್ತದೆ. ಆದ್ದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ವರುಷಗಳಲ್ಲಿ ಕಾರ್ಮಿಕರ ಮಜೂರಿ ಕಡಿಮೆಯಾಗುವ ಸಾಧ್ಯತೆಗಳಿಲ್ಲ. ಜೊತೆಗೆ, ಮುಂದಿನ ಐದು ವರುಷಗಳಲ್ಲಿ (೨೦೨೦ರ ಹೊತ್ತಿಗೆ) ಅಲ್ಲಿ ಕಾರ್ಮಿಕರ ಸಂಖ್ಯೆ ಇನ್ನೂ ೨೩ ಮಿಲಿಯ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇವೆಲ್ಲದರ ಹಿನ್ನೆಲೆಯಲ್ಲಿ, ತಮ್ಮ ಹಿಡುವಳಿಯ ವಿಸ್ತೀರ್ಣ ಮತ್ತು ಬೆಳೆಗಳನ್ನು ಗಮನಿಸಿ, ರೈತರೆಲ್ಲರೂ ತಮ್ಮ ಬೇಸಾಯದ ವೆಚ್ಚ ತಗ್ಗಿಸಲು ಮತ್ತು ಆದಾಯ ಹೆಚ್ಚಿಸಲು ನಿಶ್ಚಿತ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ವೈಯುಕ್ತಿಕ ಮತ್ತು ಸಾಮುದಾಯಿಕ ನೆಲೆಗಳಲ್ಲಿ, ಬೇಸಾಯದಲ್ಲಿ ಬದಲಾವಣೆಗಳು ಅನಿವಾರ್ಯ. ಈ ನಿಟ್ಟಿನಲ್ಲಿ, ಹೈದರಾಬಾದಿನ ಇಕ್ರಿಸಾಟ್ (ಇಂಟರ್ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ ಏರಿಡ್ ಟ್ರಾಪಿಕ್ಸ್) ಮೇ ೨೦೦೯ರಿಂದ ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದ ೧೮ ಗ್ರಾಮಗಳಲ್ಲಿ ನಡೆಸಿದ ಅಧ್ಯಯನದ ಫಲಿತಾಂಶಗಳು ದಿಕ್ಸೂಚಿ. ಅದರ ಪ್ರಕಾರ, ವಿವಿಧ ಕೃಷಿಕೆಲಸಗಳ ದಿನಮಜೂರಿಯ ಹೆಚ್ಚಳ ೩.೬ರಿಂದ ೪.೨ ಪಟ್ಟು. ರೈತರು ಈ ಸಮಸ್ಯೆ ಎದುರಿಸಿದ್ದು ಯಂತ್ರಗಳ ಬಳಕೆ ಮೂಲಕ. ಸೋಯಾಬೀನ್ ಮತ್ತು ತೊಗರಿ ಹೊಲಗಳಲ್ಲಿ ಕೃಷಿಕಾರ್ಮಿಕರ ಕೆಲಸದ ಪ್ರಮಾಣ ಅರ್ಧಭಾಗ ಕಡಿಮೆ ಮಾಡಿದ್ದಾರೆ. ಮಹಾರಾಷ್ಟ್ರದ ಅಕೋಲಾ ಗ್ರಾಮದ ರೈತರು, ಜಾಸ್ತಿ ಕೃಷಿಕಾರ್ಮಿಕರು ಬೇಕಾಗುವ ಹತ್ತಿಯ ಕೃಷಿ ತೊರೆದಿದ್ದಾರೆ; ಬದಲಾಗಿ ಮೂರು ಪಟ್ಟು ಕಡಿಮೆ ಕೃಷಿಕಾರ್ಮಿಕರ ಕೆಲಸ ಸಾಲುವ ಸೋಯಾಬೀನ್ ಬೆಳೆಯುತ್ತಿದ್ದಾರೆ.
ಕೃಷಿಯ ತಳಮಳ ನಮ್ಮ ದೇಶಕ್ಕೆ ಸೀಮಿತವಲ್ಲ. ಇತರ ದೇಶಗಳ ಮತ್ತು ರಾಜ್ಯಗಳ ರೈತರು ಅಳವಡಿಸಿಕೊಂಡ ನೂತನ ವಿಧಾನಗಳು ಸಮಸ್ಯಾ ಪರಿಹಾರದ ದಾರಿ ತೋರಬಲ್ಲವು. ಇಂತಹ ಮಾಹಿತಿ ವಿನಿಮಯಕ್ಕಾಗಿ ತಂತ್ರಜ್ನಾನ ರೈತರ ಅಂಗೈಯಲ್ಲೇ (ಮೊಬೈಲ್ ಫೋನಿನ ರೂಪದಲ್ಲಿ) ಇದೆ, ಅಲ್ಲವೇ?
(ಅಡಿಕೆ ಪತ್ರಿಕೆ, ಫೆಬ್ರವರಿ ೨೦೧೬ ಸಂಚಿಕೆಯಲ್ಲಿ ಪ್ರಕಟ)
ಫೋಟೋ ಕೃಪೆ: ರಾಯಿಟರ್ಸ್