ಬೆಂಬಿಡದ ಬರಗಾಲ ಗ್ರಾಮೀಣ ಭಾರತದ ರೈತ ಕುಟುಂಬಗಳ ಬದುಕಿಗೆ ಕೊಳ್ಳಿಯಿಟ್ಟ ವಾಸ್ತವದ ಚಿತ್ರಣ ಈ ಲೇಖನದಲ್ಲಿದೆ.
ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಮಲೆಗಾಂವ್ ಹಳ್ಳಿಯ ರೈತ ಮುಕುಂದ ವಾಗ್ಗೆ ಬದುಕು ಬೇಡವಾಗಿತ್ತು. ತನ್ನ ಮನೆಯ ಪಕ್ಕದ ದನದ ಹಟ್ಟಿಯಲ್ಲಿ ಕೀಟನಾಶಕ ನುಂಗಿದ ವಾಗ್, ಬಾಯಿಯಿಂದ ನೊರೆ ಬಿಡುತ್ತಾ ಮೂರ್ಛೆ ತಪ್ಪಿ ಬಿದ್ದಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಪತ್ನಿ ಇವರನ್ನು ತಕ್ಷಣ ಆಸ್ಪತ್ರೆಗೆ ಒಯ್ದಳು. ಅಲ್ಲಿ ಡಾಕ್ಟರ್ ಅವರಿಗೆ ಚಿಕಿತ್ಸೆ ನೀಡಿದ್ದರಿಂದಾಗಿ ಬದುಕುಳಿದರು. ಇದು ನಡೆದದ್ದು ೨೦೦೯ರಲ್ಲಿ.
ಮೂರು ವರುಷಗಳ ನಂತರ ೨೦೧೨ರಲ್ಲಿ ಮುಕುಂದ ವಾಗ್ಗೆ ಪುನಃ ಬದುಕು ಬೇಡವೆನಿಸಿತು. ಯಾಕೆಂದರೆ ಎರಡು ಎಕ್ರೆಯಲ್ಲಿ ಅವರು ಬಿತ್ತಿದ ಸೋಯಾಬೀನಿನಿಂದ ಏನೂ ಫಸಲು ಸಿಗಲಿಲ್ಲ. ಅದಕ್ಕಾಗಿ ಸ್ನೇಹಿತರಿಂದ ಮತ್ತು ಬಂಧುಗಳಿಂದ ಅವರು ಪಡೆದ ರೂ.೬೦,೦೦೦ ಸಾಲ ಹೊರೆಯಾಗಿತ್ತು. ಅದೊಂದು ದಿನ ಮುಕುಂದ ವಾಗ್ ತನ್ನ ಜೀವವನ್ನೇ ಬಲಿಗೊಟ್ಟರು. ಆಗ ಮುಕುಂದರ ವಯಸ್ಸು ೩೮.
“ಅವರು ಮದ್ಯ ಕುಡಿದು ಕುಡಿದು ತೀರಿಕೊಂಡರು ಎನ್ನುತ್ತಾರೆ ಕೆಲವರು. ಇನ್ನು ಕೆಲವರ ಪ್ರಕಾರ ಅವರು ಕರೆಂಟಿನ ಷಾಕ್ಗೆ ಬಲಿಯಾದರು. ಅವರ ಶವ ಕಪ್ಪಗಾಗಿತ್ತು. ಅವರು ಪ್ರಾಣ ಬಿಟ್ಟಾಗ ನಾನು ನನ್ನ ತವರು ಮನೆಗೆ ಹೋಗಿದ್ದೆ. ನೀನು ಮನೆಯಲ್ಲೇ ಇದ್ದಿದ್ದರೆ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ ನನ್ನ ಮಕ್ಕಳು” ಎನ್ನುತ್ತಾ ಕಣ್ಣೀರಾಗುತ್ತಾಳೆ, ಮುಕುಂದ ವಾಗ್ರ ೩೮ ವರುಷ ವಯಸ್ಸಿನ ಪತ್ನಿ ಬಾಬಿ.
ಕಳೆದ ನಾಲ್ಕು ವರುಷಗಳಲ್ಲಿ ಆಕೆ ಪುನಃ ತನ್ನ ಬದುಕು ಕಟ್ಟಿಕೊಂಡಿದ್ದಾಳೆ. ತನ್ನ ಜಮೀನಿನಲ್ಲಿ ಬೇಸಾಯ ಮಾಡುತ್ತಾ, ಇತರ ರೈತರ ಜಮೀನಿನಲ್ಲಿಯೂ ದುಡಿಯುತ್ತಾ, ದಿನದಿನವೂ ಗಂಟೆಗಟ್ಟಲೆ ಕೆಲಸ ಮಾಡುತ್ತಾ ಒಂದಷ್ಟು ಆದಾಯ ಗಳಿಸಿದ್ದಾಳೆ. ಮಗ ಮತ್ತು ಮಗಳನ್ನು ಪಾಲಿಟೆಕ್ನಿಕ್ ಶಿಕ್ಷಣಕ್ಕೆ ಕಳಿಸಲು, ದನ ಖರೀದಿಸಿ ಸಾಕಲು, ಗಂಡನ ಸಾಲದ ಬಹುಪಾಲು ಮರುಪಾವತಿಸಲು – ಇವಕ್ಕೆಲ್ಲ ಸ್ವಸಹಾಯ ಸಂಘದ ಕಡಿಮೆ ಬಡ್ಡಿಯ ಸಾಲದಿಂದ ದೊಡ್ಡ ಸಹಾಯವಾಯಿತು ಎನ್ನುತ್ತಾಳೆ. ಇಷ್ಟೆಲ್ಲ ಬವಣೆ ಪಟ್ಟ ಆಕೆ, ತನ್ನ ಮನೆಯ ಟಿನ್-ಷೀಟಿನ ಚಾವಣಿ ದಿಟ್ಟಿಸುತ್ತ ಕೊನೆಗೆ ಹೇಳಿದ ಮಾತು, “ನಾನು ಸಂಕಟವನ್ನೆಲ್ಲ ಹೇಗೋ ನಿಭಾಯಿಸಿದ್ದೇನೆ. ಬೇರೆ ವಿಧವೆಯರು ನನ್ನಷ್ಟು ಅದೃಷ್ಟವಂತರಲ್ಲ.”
ಅಂತಹ ಅದೃಷ್ಟವಂಚಿತ ವಿಧವೆಯರಲ್ಲಿ ಒಬ್ಬಾಕೆ, ೨೨ ವರುಷ ವಯಸ್ಸಿನ ಅರ್ಚನಾ ಬುರಾರೆ. ವಾಸಿಂ ಜಿಲ್ಲೆಯ ಹಳ್ಳಿಯೊಂದರಲ್ಲಿ, ತನ್ನ ಹೆತ್ತವರು ಮತ್ತು ಪುಟ್ಟ ಮಗನೊಂದಿಗೆ ಈಗ ಅವಳ ಜೀವನ. ಯಾಕೆಂದರೆ,೨೦೧೪ರಲ್ಲಿ ಅವಳ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾಗ, ಅತ್ತೆಮಾವ ಅವಳನ್ನು ಮನೆಯಿಂದ ಹೊರದಬ್ಬಿದರು.
ಅರ್ಚನಾ ಬುರಾರೆಗೆ ಮದುವೆಯಾದಾಗ ಅವಳ ವಯಸ್ಸು ಕೇವಲ ೧೯ ವರುಷ. ರೂ.೫೦,೦೦೦ ಸಾಲ ಪಡೆದು, ೧೨ ಎಕರೆ ಹೊಲ ಗೇಣಿಗೆ ವಹಿಸಿಕೊಂಡ ಅವಳ ಪತಿ ಬೆಳೆಸಿದ್ದು ಭತ್ತ, ನೆಲಗಡಲೆ ಮತ್ತು ಸೋಯಾಬೀನ್. ಮೊದಲ ವರುಷ ಉತ್ತಮ ಫಸಲು ಕೈಸೇರಿತು. ಬೇರೆಯವರ ಹೊಲದಲ್ಲಿ ದುಡಿದ ಅರ್ಚನಾ ಗಳಿಸಿದ ದಿನಗೂಲಿಯೂ ಇತ್ತು. ಬದುಕು ಪರವಾಗಿಲ್ಲ ಎಂಬತ್ತಿದ್ದಾಗ, ಮಳೆ ಕೈಕೊಟ್ಟಿತು. ಬಾವಿ ಬತ್ತಿ ಹೋಯಿತು. ಹೊಲ-ಬೆಳೆ ಒಣಗಿ ಹೋಯಿತು.
ಅನಂತರ ಅವಳ ಗಂಡ ಕುಡಿತ ಶುರು ಮಾಡಿದ; ಪತ್ನಿಯನ್ನು ಹೊಡೆಯ ತೊಡಗಿದ. ಅದೊಂದು ದಿನ ರಸ್ತೆ ಅಪಘಾತದಲ್ಲಿ ಅವನ ಕಾಲು ಮುರಿಯಿತು. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚದಲ್ಲಿ ಸರ್ಜರಿ ಮಾಡಿಸಲು ಅವರಿಂದ ಆಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಸಾಲ ಹೆಚ್ಚುತ್ತಲೇ ಹೋಯಿತು: ತಂಗಿಯ ಮದುವೆಗಾಗಿ ರೂ.೨೫,೦೦೦ ಮತ್ತು ಒಣಗಿ ಹೋದ ಬೆಳೆಗಳಿಗಾಗಿ ರೂ.೨೦,೦೦೦ ಹೆಚ್ಚುವರಿ ಸಾಲದ ಹೊರೆ.
“ನಾನು ತವರಿಗೆ ಹೋಗಿದ್ದೆ. ಮನೆಯಲ್ಲಿ ಒಬ್ಬರೇ ಇದ್ದ ನನ್ನ ಗಂಡ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡರು” ಎಂದು ನೋವು ನುಂಗುತ್ತ ಹೇಳುತ್ತಾರೆ ಅರ್ಚನಾ ಬುರಾರೆ. “ನನಗೆ (ಸರಕಾರದಿಂದ) ಯಾವುದೇ ಪರಿಹಾರ ಸಿಕ್ಕಿಲ್ಲ. ಯಾಕೆಂದರೆ ಬೇಸಾಯ ಮಾಡಿದ್ದ ಜಮೀನಿನ ಮಾಲೀಕ ಅವರಲ್ಲ. ಗಂಡನ ಮನೆಯವರೂ ಈಗ ನನ್ನಿಂದ ದೂರವಾಗಿದ್ದಾರೆ” ಎಂದು ಮನದಾಳದ ವೇದನೆಗೆ ದನಿಯಾಗುತ್ತಾರೆ ಅರ್ಚನಾ ಬುರಾರೆ.
ಶಿಶುಪಾಲನಾ ಕೇಂದ್ರವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಅರ್ಚನಾರಿಗೆ ಸಿಗುವ ತಿಂಗಳ ವೇತನ ರೂ.೮೫೦. ಆದರೆ ಕಳೆದ ಎಂಟು ತಿಂಗಳಿಂದ ಅವರಿಗೆ ವೇತನವನ್ನೇ ಪಾವತಿಸಿಲ್ಲ ಎಂಬುದು ಬೇರೆಯೇ ಮಾತು. ಆಕೆಯ ವಿಧವಾ ಮಾಸಾಶನದ ಅರ್ಜಿ ನೌಕರಷಾಯಿಯ ಕೆಂಪುಪಟ್ಟಿಯಲ್ಲಿ ಸಿಲುಕಿಕೊಂಡಿದೆ. ಬೇರೆಯವರ ಜಮೀನಿನಲ್ಲಿ ದಿನಗೂಲಿಗೆ ದುಡಿಯುತ್ತ ದಿನದೂಡುತ್ತಿದ್ದಾರೆ ಅರ್ಚನಾ.
ಸ್ವಸಹಾಯ ಸಂಘದಿಂದ ಸಾಲ ಪಡೆದು ಕೆಲವು ಆಡು, ಮತ್ತೊಂದು ಎಮ್ಮೆ ಖರೀದಿಸಿ, ಆದಾಯ ಹೆಚ್ಚಿಸಿಕೊಳ್ಳಲು ಹೆಣಗುತ್ತಿದ್ದಾಳೆ ಆಕೆ. ಈ ನಡುವೆ ಅವಳ ಮೂರು ವರುಷದ ಮಗ ಅಪಘಾತದಲ್ಲಿ ಸಿಲುಕಿದ. ಖಾಸಗಿ ಆಸ್ಪತ್ರೆಗೆ ಪ್ರತೀ ಬಾರಿ ಹೋದಾಗಲೂ ದುಬಾರಿ ವೆಚ್ಚ. ಸರಕಾರಿ ಆಸ್ಪತ್ರೆಗೆ ಹೋದರೆ, ಅಲ್ಲಿಯ ಜನಸಂದಣಿಯಿಂದಾಗಿ ಒಂದು ಸ್ಕಾನ್ ಮಾಡಿಸಲು ಮೂರು ದಿನ ಕಾಯಬೇಕಾದ ಪರಿಸ್ಥಿತಿ.
ಕೃಷಿಯಿಂದ ಅಲ್ಪ ಆದಾಯ ಗಳಿಸಿದ ಮತ್ತೊಬ್ಬ ರೈತ ವಾರ್ಧಾ ಜಿಲ್ಲೆಯ ಶರದ್. ಮೂರು ಎಕರೆಯಲ್ಲಿ ಆತ ಬೆಳೆಸಿದ್ದ ಸೋಯಾಬೀನ್ ಮತ್ತು ಹತ್ತಿ ಬೆಳೆ ಮಣ್ಣು ಪಾಲಾಯಿತು. ಅನಂತರ ಆತ ಸಾಲ ಮಾಡಿ, ಆಟೋರಿಕ್ಷಾ ಖರೀದಿಸಿ ಓಡಿಸ ತೊಡಗಿದ. ಆದರೆ ೨೦೧೧ರಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿ ಗಾಯಾಳುವಾದ. ಆತನಿಗೆ ಹಲವಾರು ಸರ್ಜರಿ ಮಾಡಲೇ ಬೇಕಾಯಿತು. ಅದಕ್ಕಾಗಿ ಹೆಂಡತಿಯ ಒಡವೆಗಳನ್ನು ಮಾರಿದ; ಜಮೀನಿನ ಒಂದು ಭಾಗವನ್ನೂ ಮಾರಿದ. ಅನಂತರ, ಎರಡು ಲಕ್ಷ ರೂಪಾಯಿ ಸಾಲ ಪಡೆದು, ಅದರ ಕಂತುಗಳ ಪಾವತಿ ಮಾಡಲಾಗದೆ ಎದೆಗುಂದಿದ.
ಅವನ ಪತ್ನಿ ಮಂದಾ, ಆ ದಿನಗಳನ್ನು ನೆನೆದು ಹೇಳುತ್ತಾಳೆ, “ಅವನು ಪೂರಾ ಸೋತು ಹೋದ. ಅವನ ಮದ್ಯಪಾನ ಜಾಸ್ತಿಯಾಯಿತು. ನನಗೆ ಹೊಡೆದು ಬಡಿಯುತ್ತಿದ್ದ. ಕೊನೆಗೆ ೨೦೧೩ರ ಹೋಳಿಯ ದಿನ, ನಮ್ಮ ಹಳ್ಳಿಯ ಹತ್ತಿರದ ಹೊಳೆಗೆ ಬಿದ್ದು ತೀರಿಕೊಂಡ.”
ಮಂದಾಳಿಗೆ ಪರಿಹಾರದ ಹಣ ಸಿಗಲೇ ಇಲ್ಲ. ಯಾಕೆಂದರೆ ಶರದ್ನ ದೇಹದ ಅಟಾಪ್ಸಿಯಿಂದ, ಆತ ಮದ್ಯಪಾನ ಮಾಡಿದ್ದು ದೃಢ ಪಟ್ಟಿತ್ತು. ಕಂಗಾಲಾಗಿ ಕೂತಿದ್ದ ಮಂದಾಳ ಮನೆಬಾಗಿಲಿಗೆ ಬಂದು ಸಣ್ಣ ಮೊತ್ತದ ಸಾಲ ಕೊಟ್ಟದ್ದು ಒಂದು ಸ್ವಸಹಾಯ ಸಂಘ – ಅದರಿಂದ ಹೊಲಿಗೆಯಂತ್ರ ಖರೀದಿಸಿದ ಆಕೆ, ಈಗ ಉಡುಪು ಹೊಲಿಯುತ್ತಾಳೆ. ರೈತರ ಹೊಲಗಳಲ್ಲಿ ದಿನಗೂಲಿಗೆ ದುಡಿಯುತ್ತ, ಪತಿಯ ಜಮೀನನ್ನು ಗೇಣಿಗೆ ಕೊಡುತ್ತಾ ಹೇಗೋ ಬದುಕು ನೂಕುತ್ತಿದ್ದಾಳೆ.
ಅವಳ ಪತಿಯ ಸಾಲ ಬಾಕಿಯಾಗಿ ಉಳಿದಿದೆ. ಅದರ ಬಗ್ಗೆ ಅವಳ ಹತಾಶ ಮಾತು: “ನಾನು ಬ್ಯಾಂಕಿನವರಿಗೂ ಸಾಲ ಕೊಟ್ಟವರಿಗೂ ಕೊನೆಯ ಮಾತು ಹೇಳಿ ಬಿಟ್ಟಿದ್ದೇನೆ – ನನ್ನಿಂದ ಸಾಲದ ಮರುಪಾವತಿ ಇನ್ನು ಸಾಧ್ಯವಿಲ್ಲವೆಂದು. ನಾನು ಅವರಿಗೆ ಹೇಳೋದಿಷ್ಟೇ: ನನ್ನ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಿ, ಮತ್ತೆ ನಿಮಗೆ ಇಷ್ಟ ಬಂದಂತೆ ಮಾಡಿ.”
ಬದುಕಿನ ಬುಡವನ್ನೇ ಅಲುಗಾಡಿಸಿದ ಸಂಕಟಗಳ ಸರಣಿಯಿಂದ ತತ್ತರಿಸಿದ ಮಂದಾಳ ಒಡಲಾಳದ ಮಾತು: “ಇನ್ನು ಬೇಸಾಯದಲ್ಲಿ ಭವಿಷ್ಯವಿಲ್ಲ. ಹಳ್ಳಿಗಳಲ್ಲಿ ರೈತರು ಈಗ ರಿಕ್ಷಾ ಓಡಿಸುತ್ತಿದ್ದಾರೆ; ಇಟ್ಟಿಗೆ ಗೂಡುಗಳಲ್ಲಿ ದುಡಿಯುತ್ತಿದ್ದಾರೆ. ಅವರ ಹೆಣ್ಣುಮಕ್ಕಳು ಮನೆಯಲ್ಲೇ ಕೂತಿರುತ್ತಾರೆ. ಯಾಕೆಂದರೆ ಅವರನ್ನು ಮದುವೆಯಾಗಲು ಒಳ್ಳೆಯ ಗಂಡುಗಳು ಸಿಗುತ್ತಿಲ್ಲ. ಹತ್ತು ವರುಷಗಳ ನಂತರ ನೀವು ಇಲ್ಲಿಗೆ ಬಂದರೆ, ಬಹಳ ಬಹಳ ಜಾಸ್ತಿ ವಿಧವೆಯರನ್ನು ಕಾಣುತ್ತೀರಿ.”
(ಬಾಕ್ಸ್ – ಐದು ಪಾರಾ): ಸಾವಿರಾರು ರೈತರ ಆತ್ಮಹತ್ಯೆಗಳು ಏನನ್ನು ಎತ್ತಿ ತೋರಿಸುತ್ತಿವೆ?
೨೦೦೪ರಿಂದ ೨೦೧೩ರ ವರೆಗೆ ಮಹಾರಾಷ್ಟ್ರದಲ್ಲಿ ಪ್ರತಿ ವರುಷ ಆತ್ಮಹತ್ಯೆ ಮಾಡಿಕೊಂಡ ರೈತರ ಸರಾಸರಿ ಸಂಖ್ಯೆ ೩,೦೦೦. ಕಳೆದ ವರುಷ (೨೦೧೫ರಲ್ಲಿ) ತಮ್ಮ ಜೀವ ಬಲಿಗೊಟ್ಟ ರೈತರ ಸಂಖ್ಯೆ ೩,೨೨೮. ಇದು ಕಳೆದ ೧೪ ವರುಷಗಳಲ್ಲಿ ಅತ್ಯಧಿಕ ಎಂದು ಸಂಸತ್ತಿನಲ್ಲೇ ಮಂತ್ರಿ ಹೇಳಿಕೆ ನೀಡಿದ್ದಾರೆ. ಇವರಲ್ಲಿ ೧,೮೧೮ ರೈತರ ವಿಧವೆಯರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿದೆ. ಉಳಿದವರು ಈ ಪರಿಹಾರಕ್ಕೆ ಅರ್ಹರಲ್ಲ ಎಂದು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದ ೧೧ ಜಿಲ್ಲೆಗಳಲ್ಲಿ ವ್ಯಾಪಿಸಿರುವ ವಿದರ್ಭದ ಮಳೆಯಾಶ್ರಿತ ಪ್ರದೇಶ ಬರಗಾಲದಿಂದ ನಲುಗಿ ಹೋಗಿದೆ. ಹಿಂದಿನ ವರುಷದ ಬೇಸಾಯದಲ್ಲಿ ನಷ್ಟ ಅನುಭವಿಸಿ, ಅದರ ಸಾಲ ಮರುಪಾವತಿಸದೆ, ಈಗಿನ ಹಂಗಾಮಿಗೆ ಪುನಃ ಸಾಲ ಪಡೆದ ರೈತರು ಹಲವರು. ಹೀಗೆ ಸಾಲ ಬಾಕಿ ಉಳಿಸಿಕೊಂಡವರಿಗೆ ಬ್ಯಾಂಕ್ ಹಾಗೂ ಇತರ ಹಣಕಾಸಿನ ಸಂಸ್ಥೆಗಳಿಂದ ಸಾಲ ಸಿಗುವುದಿಲ್ಲ. ಹಾಗಾಗಿ, ಖಾಸಗಿ ಲೇವಾದೇವಿದಾರರಿಂದ ಈ ರೈತರು ದುಬಾರಿ ಬಡ್ಡಿಗೆ ಸಾಲ ಪಡೆಯುತ್ತಾರೆ – ಬೀಜ, ರಾಸಾಯನಿಕ ಗೊಬ್ಬರ, ಪಂಪ್ಸೆಟ್ ಖರೀದಿಗಾಗಿ ಮತ್ತು ಕುಟುಂಬದ ಮದುವೆಯ ವೆಚ್ಚಕ್ಕಾಗಿ. ಆದರೆ ಉತ್ತಮ ಫಸಲು ಮತ್ತು ಆದಾಯದ ಅವರ ನಿರೀಕ್ಷೆಗಳಿಲ್ಲ ನುಚ್ಚುನೂರಾಗಿವೆ – ಸತತ ಎರಡು ವರುಷ ಮಳೆ ಬಾರದೆ ಬರಗಾಲ ಬಾಯ್ದೆರೆದು ನಿಂತ ಕಾರಣ.
ಇವನ್ನೆಲ್ಲ ಪರಿಶೀಲಿಸಿದರೆ, ಸಾವಿರಾರು ರೈತರ ಆತ್ಮಹತ್ಯೆಗಳು ಏನನ್ನು ಎತ್ತಿ ತೋರಿಸುತ್ತಿವೆ? ಇಂದಿಗೂ ಬಹುಪಾಲು ರೈತರು ತಮ್ಮ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಆದಾಯವನ್ನು ಕೃಷಿಯಿಂದ ಗಳಿಸುತ್ತಿಲ್ಲ ಎಂಬುದನ್ನು.
ಇಂತಹ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಬವಣೆ ಹೆಚ್ಚಲು ಕಾರಣ: ಅವರಿಗೆ ಪರಿಹಾರ ಪಾವತಿಯಾಗದಿರುವುದು. ಇದಕ್ಕೆ ಎರಡು ಪ್ರಮುಖ ಕಾರಣಗಳು: ಗಂಡ ತೀರಿಕೊಂಡ ಬಳಿಕ ಆತನ ಜಮೀನಿನ ಮಾಲೀಕತ್ವದ ಬಗ್ಗೆ ಕುಟುಂಬದವರಿಂದ ತಕರಾರು. (ನಾಲ್ಕು ಜಿಲ್ಲೆಗಳಲ್ಲಿ ಇಂತಹ ೮೦ ಪ್ರಕರಣಗಳಲ್ಲಿ ಪರಿಹಾರ ಪಾವತಿಯಾಗಿಲ್ಲ.) ಇನ್ನೊಂದು ಕಾರಣ, ಆತ್ಮಹತ್ಯೆ ಮಾಡಿಕೊಂಡ ರೈತನ ದೇಹದಲ್ಲಿ ಮದ್ಯದ ಅಂಶವಿತ್ತೆಂದು ಮರಣೋತ್ತರ ಪರೀಕ್ಷೆಯಲ್ಲಿ ದಾಖಲು.
ಮಹಾರಾಷ್ಟ್ರ ಸರಕಾರವು ರೈತರ ಆತ್ಮಹತ್ಯೆ ತಡೆಯಲಿಕ್ಕಾಗಿ ರಚಿಸಿರುವ ಸಮಿತಿಯ ಮುಖ್ಯಸ್ಥರಾದ ಕಿಶೋರ್ ತಿವಾರಿ ಆ ಎರಡು ಕಾರಣಗಳಿಂದಾಗಿ ವಿಧವೆಯರು ಹೈರಾಣಾಗಿರುವುದನ್ನು ವಿವರಿಸುತ್ತಾರೆ. ವಿದರ್ಭದ ಸುಮಾರು ೧೦,೦೦೦ ವಿಧವೆಯರಲ್ಲಿ ೬,೦೦೦ ವಿಧವೆಯರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅವರು ತಿಳಿಸುತ್ತಾರೆ. ಇಂತಹ ಅಸಹಾಯಕ ವಿಧವೆಯರ ಬೆಂಬಲಕ್ಕೆ ನಿಂತಿರುವುದು ಸ್ವಸಹಾಯ ಸಂಘಗಳು ಮತ್ತು ಲಾಭದ ಉದ್ದೇಶವಿಲ್ಲದ ಕೆಲವು ಸಂಸ್ಥೆಗಳು. ಇವೆಲ್ಲ “ಕಿಸಾನ್ ಮಿತ್ರ”ದಂತಹ ಸರಕಾರೇತರ ಸಂಸ್ಥೆಗಳ ಜೊತೆ ನೆಟ್ವರ್ಕ್ ಮಾಡಿಕೊಂಡು, ವಿಧವೆಯರಿಗೆ ಆತ್ಮಸ್ಥೈರ್ಯ ನೀಡುತ್ತಿವೆ – ಕಡಿಮೆ ಬಡ್ದಿ ದರದ ಸಾಲಗಳನ್ನು ನೀಡುವ ಮೂಲಕ, ಪತಿಯ ಜಮೀನಿನ ಮೇಲೆ ಅವರ ಹಕ್ಕು ತಿಳಿಸುವ ಮೂಲಕ ಮತ್ತು ಲೈಂಗಿಕ ಶೋಷಣೆಯಿಂದ ಅವರನ್ನು ರಕ್ಷಿಸುವ ಮೂಲಕ.
(ಅಡಿಕೆ ಪತ್ರಿಕೆ, ಮೇ ೨೦೧೬)