Agriculture and Rural Development

ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು.

ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು. ಅದಕ್ಕಾಗಿ ವಾರಕ್ಕೊಮ್ಮೆ ಕಾರಿಗೆ "ಸ್ನಾನ" ಮಾಡಿಸಬೇಕು, ಏಳೆಂಟು ಬಕೆಟ್ ನೀರಿನಲ್ಲಿ.

ಮನೆಯ ಮುಂದೆ, ಹಿಂದೆ ಅಥವಾ ಪಕ್ಕದಲ್ಲಿ ಚಂದದ ಕೈತೋಟ. ಬಣ್ಣಬಣ್ಣದ ಹೂಗಿಡಗಳು, ಎಲೆಗಿಡಗಳು. ಅವು ನಳನಳಿಸಬೇಕಾದರೆ ನೀರು ಎರೆಯಬೇಕಲ್ಲವೇ? ಅದಕ್ಕಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಬಳಕೆ - ದಿನದಿನವೂ ಹತ್ತಿಪ್ಪತ್ತು ಬಕೆಟ್ ನೀರು.

ಸ್ನಾನ ಮಾಡುವಾಗ, ನೀರು ಎರೆದುಕೊಳ್ಳುವುದೇ ಖುಷಿ. ಸ್ನಾನಕ್ಕಾಗಿ ೨ - ೩ ಬಕೆಟ್ ನೀರು. ಹಲ್ಲುಜ್ಜುವಾಗ ಮತ್ತು ಗಡ್ಡ ತೆಗೆಯುವಾಗ ನಳ್ಳಿಯಿಂದ ನೀರು ಸುರಿಯುತ್ತಲೇ ಇರಬೇಕು. ಯಾಕೆಂದರೆ ಅದು ಕೆಲವರ ಅಭ್ಯಾಸ - ಹಲವಾರು ವರುಷಗಳಿಂದ ಬೆಳೆಸಿಕೊಂಡು ಬಂದ ಅಭ್ಯಾಸ.

ಇಂತಹ ಸಂಗತಿಗಳು ನಮ್ಮ ಮನೆಗಳಲ್ಲೇ ನಡೆಯುತ್ತಿರಬಹುದು. ಈ ರೀತಿಯಲ್ಲಿ ನೀರು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಖಂಡಿತವಾಗಿ ಸಾಧ್ಯವಿದೆ. ಅದಕ್ಕಾಗಿ ನಮ್ಮ ಅಭ್ಯಾಸಗಳನ್ನು ಬದಲಾಯಿಸಬೇಕು, ಅಷ್ಟೇ.

ಉದಾಹರಣೆಗೆ, ಬಟ್ಟೆ ಒಗೆದ ನೀರಿನಿಂದ ಅಂಗಳ ಶುಚಿಮಾಡಬಹುದು. ಒಂದು ತುಂಡು ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಅದರಿಂದ ಕಾರಿನ ಧೂಳು ತೆಗೆಯಲು ಒಂದು ಬಕೆಟ್ ನೀರು ಸಾಕು. ಕೈತೋಟಕ್ಕೂ ಬಟ್ಟೆ ಒಗೆದ ನೀರನ್ನೇ ಹಾಕಬಹುದು. ಸ್ನಾನ ಮಾಡಲು ಒಂದು ಬಕೆಟ್ ನೀರು ಧಾರಾಳ ಸಾಕು. ಹಲ್ಲುಜ್ಜುವುದು ಮತ್ತು ಗಡ್ಡ ತೆಗೆಯುವುದು, ೨ - ೩ ಮಗ್ ನೀರಿನಲ್ಲಿ ಈ ಕೆಲಸಗಳು ಸಾಧ್ಯ.

ಹೀಗೆ ಅಭ್ಯಾಸಗಳನ್ನು ಬದಲಾಯಿಸಲು ನಾವು ಮನಸ್ಸು ಮಾಡಬೇಕು, ಅಷ್ಟೇ. "ಅದೇ ಕಷ್ಟದ ಕೆಲಸ. ಈ ಅಭ್ಯಾಸಗಳು ಬೇರು ಬಿಟ್ಟಿವೆ, ಹೇಗೆ ಬದಲಾಯಿಸುವುದು" ಅಂತೀರಾ?

"ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨ ಮಾರ್ಚ್ ೨೦೦೯ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಪ್ರಶ್ನಿಸಿದರು: ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನೀರಿನ ಪ್ರಮಾಣ ಕಡಿಮೆ. ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಹರಿವು ಇರುವುದಿಲ್ಲ. ವಾಸ್ತವ ಹೀಗಿರುವಾಗ ನದಿ ತಿರುವು ಯೋಜನೆ ಎಷ್ಟರ ಮಟ್ಟಿಗೆ ಸರಿ?

     ಈ ಯೋಜನೆಗಾಗಿ ೨೦೦೪ರಲ್ಲಿ ಉಪಗ್ರಹ ಸರ್ವೆ ನಡೆಸಲಾಗಿತ್ತು.(ರೂ.೧೫ ಕೋಟಿ ವೆಚ್ಚದಲ್ಲಿ) ಯೋಜನೆಯ ಲಾಭಗಳ ಬಗ್ಗೆ "ನದಿ ನೀರು ತಿರುಗಿಸುವ ಸಮಿತಿ"ಯ ಚೇರ್‍ಮನ್ ಆಗ ನೀಡಿದ್ದ ರಂಗುರಂಗಿನ ಚಿತ್ರಣ ಹೀಗಿದೆ: ನೇತ್ರಾವತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಕರ್ನಾಟಕದ ಬಳಕೆಗಾಗಿ ಸರಾಸರಿ ವರುಷಕ್ಕೆ ೪೬೪ ಟಿಎಂಸಿ ನೀರನ್ನು ಪಡೆಯಬಹುದು. ಇದರಿಂದ ೫೦ ಲಕ್ಷ ಎಕರೆಗಳನ್ನು ನೀರಾವರಿ ಜಮೀನಾಗಿ ಪರಿವರ್ತಿಸಬಹುದು. ರೂ.೧೨,೦೦೦ ಕೋಟಿ ವೆಚ್ಚದ ಯೋಜನೆಯಲ್ಲಿ ಹೂಹಾರದ ವಿನ್ಯಾಸದ ೭೦೦ ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ ರಾಜ್ಯದ ೧೦ ಜಿಲ್ಲೆಗಳಿಗೆ ನೀರುಣಿಸಬಹುದು.

     ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ಕಬಳಿಸುವ ಈ ಯೋಜನೆಯ ಬದಲಾಗಿ ಬೇರೆ ದಾರಿಗಳಿಲ್ಲವೇ? ನೀರ ನೆಮ್ಮದಿಗೆ ನೂರಾರು ದಾರಿಗಳಿವೆ. ಅವನ್ನು ಒಪ್ಪುವ, ಕೃತಿಗಿಳಿಸುವ ಮನಸ್ಸು ಬೇಕು, ಅಷ್ಟೇ.

 ಒಂದು ಬೋರ್‍ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್‍ವೆಲ್‍ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ ಕನ್ನಡದ ಪುತ್ತೂರು ಹತ್ತಿರದ ಇಡ್ಕಿದು ಗ್ರಾಮದ ಅಮೃತ ಸಿಂಚನ ರೈತರ ಸೇವಾ ಒಕ್ಕೂಟದ ಅಧ್ಯಕ್ಷರು.

     "ವರ್ಷದಲ್ಲಿ ಆರು ತಿಂಗಳ ಕಾಲ, ಕರೆಂಟು ಇರುವಾಗೆಲ್ಲ, ಸುಮಾರು ೬೦ ಅಡಿ ವ್ಯಾಸದ ಪೈಪ್ ಲೈನ್ ಬಳಸಿ ಎತ್ತಬಹುದಾದಷ್ಟು ನೀರನ್ನು ನಮ್ಮ ಗ್ರಾಮದಲ್ಲಿ ಬೋರ್‍ವೆಲ್‍ಗಳಿಂದ ಮೇಲೆತ್ತುತ್ತೇವೆ. ಯೋಚಿಸಿ ನೋಡಿ. ಇಷ್ಟು ನೀರನ್ನು ಭೂಮಿಗೆ ಪುನಃ ತುಂಬಿ ಕೊಡಲು ಸಾಧ್ಯವೇ?" ಎಂದವರು ಕೇಳುವಾಗ ನಮ್ಮ ತಲೆಗೆ ಮಿಂಚು ಹೊಡೆದಂತಾಗುತ್ತದೆ.

     ೧೯೬೦ರ ದಶಕದ ವರೆಗೆ ನಮ್ಮ ದೇಶದಲ್ಲಿ ಬೋರ್‍ವೆಲ್‍ಗಳ ಹಾವಳಿ ಇರಲಿಲ್ಲ. ಅನಂತರ ಜನಸಂಖ್ಯಾ ಹೆಚ್ಚಳ, ವಾಣಿಜ್ಯ ಬೆಳೆಗಳ ಕೃಷಿ, ನಗರಗಳ ಬೆಳವಣಿಗೆಗಳಿಂದಾಗಿ ನೀರಿನ ಬೇಡಿಕೆ ಹೆಚ್ಚಿತು. ನೀರಿನ ಸಮಸ್ಯೆಗೆ ಬೋರ್‍ವೆಲ್ ಪರಿಹಾರ ಎಂದು ಜನ ಭಾವಿಸಿದರು.

     ಆರಂಭದಲ್ಲಿ ೧೦೦ - ೧೫೦ ಅಡಿಗಳ ಆಳದಲ್ಲಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿತ್ತು. ವರುಷಗಳು ಸರಿದಂತೆ ಹೆಚ್ಚೆಚ್ಚು ಆಳಕ್ಕೆ ಬೋರ್ ಕೊರೆಯಬೇಕಾಯಿತು. ೩೦೦ ಅಡಿಗಳಲ್ಲ, ೫೦೦ ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಸಿಗಲಿಲ್ಲ. ಇನ್ನೂ ಆಳಕ್ಕೆ ಬೋರ್ ಕೊರೆದದ್ದೇ ಕೊರೆದದ್ದು. ಕೊನೆಕೊನೆಗೆ ಕರ್ನಾಟಕದ ಚಿತ್ರದುರ್ಗ ಹಾಗೂ ತಮಿಳುನಾಡಿನ ಕೊಯಂಬತ್ತೂರು ಇಂತಹ ಪ್ರದೇಶಗಳಲ್ಲಿ ೧,೦೦೦ ಅಡಿಗಳಿಗಿಂತ ಹೆಚ್ಚು ಆಳಕ್ಕೆ ಬೋರ್ ಕೊರೆದರೂ ನೀರು ಸಿಗದಿದ್ದಾಗ ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಗತೊಡಗಿತು.

ಮಾರ್ಚ್  ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನೆ. "ತಮ್ಮ ಬ್ಲಾಕಿನ ನಳ್ಳಿಗಳಲ್ಲಿ ನೀರು ಬರುತ್ತಿಲ್ಲ, ಮಾರ್ಚ್ ಏಳರ ಶನಿವಾರ ಕೇವಲ ಒಂದು ಗಂಟೆ ನೀರು ಬಂದಿತ್ತು" ಎಂಬುದು ಅಲ್ಲಿನ ನಿವಾಸಿಗಳ ಆಕ್ರೋಶ.

     ಈ ಸಮಸ್ಯೆ ಪರಿಹರಿಸಲು ನೀರಿನ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡಬೇಕಾಗಿಲ್ಲ. ಮಳೆ ನೀರಿಂಗಿಸಿದರೆ ಸಾಕು.

     ಯಾಕೆಂದರೆ, ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಜೂನ್‍ನಿಂದ ಸಪ್ಟಂಬರ ತನಕ ನಾಲ್ಕು ತಿಂಗಳ ಮಳೆಗಾಲ. ಆಗ ಇಲ್ಲಿ ಬೀಳುವ ಮಳೆ ಬರೋಬ್ಬರಿ ೪೪೦೦ ಮಿಲಿಮೀಟರ್(ವಾರ್ಷಿಕ ಸರಾಸರಿ). ಇದು, ಕರ್ನಾಟಕದ ವಾರ್ಷಿಕ ಸರಾಸರಿ ಮಳೆಯ ನಾಲ್ಕು ಪಟ್ಟು! ಇಷ್ಟು ಮಳೆ ಬೀಳುವ ದಕ್ಷಿಣ ಕನ್ನಡದಲ್ಲಿ ಕೂಡ ಮಾರ್ಚ್ ತಿಂಗಳ ಆರಂಭದಲ್ಲಿಯೇ ನೀರಿನ ಸಮಸ್ಯೆ ಎದುರಾದರೆ, ನಾವು ಲೆಕ್ಕಾಚಾರ ಮಾಡಿಲ್ಲ ಎನ್ನಬೇಕು.

     ನಮ್ಮ ಮನೆ ಚಾವಣಿ ಮತ್ತು ಮನೆಯಂಗಳದಲ್ಲಿ ಎಷ್ಟು ಮಳೆನೀರು ಬೀಳುತ್ತದೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಒಂದು ಚದರ ಮೀಟರ್ ಜಾಗದ ಮೇಲೆ ಒಂದು ಮಿಲಿಮೀಟರ್ ಮಳೆ ಸುರಿದರೆ, ಸಿಗುವ ನೀರು ಒಂದು ಲೀಟರ್. ಅಂದರೆ, ನಮ್ಮ ಊರಿನ ವಾರ್ಷಿಕ ಸರಾಸರಿ ಮಳೆ ಎಷ್ಟು ಮಿಮೀ ಇದೆಯೂ, ಅಷ್ಟು ಲೀಟರ್ ನೀರು ನಮ್ಮ ಪ್ರತಿ ಚ.ಮೀ. ಜಾಗದ ಮೇಲೆ ಸುರಿಯುತ್ತದೆ. ಈ ಸೂತ್ರ ಬಳಸಿದರೆ, ೧೫೦ ಚ.ಮೀ. ಚಾವಣಿಯ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ೧೫೦ * ೪೦೦೦ ಅಂದರೆ ೬ ಲಕ್ಷ ಲೀಟರು. (ನಿಮ್ಮ ಮನೆ ಸೈಟಿನ ಮೇಲೆ  ಒಂದು ವರುಷದಲ್ಲಿ ಸುರಿಯುವ ಮಳೆ ನೀರು ಎಷ್ಟು? ನೀವೇ ಲೆಕ್ಕ ಮಾಡಿ. ನಿಮಗೊಂದು ಸೂಚನೆ: ಒಂದು ಸೆಂಟ್ಸ್ ಅಂದರೆ ೪೦ ಚ.ಮೀ.)

ನಮ್ಮ ದೇಶದ ಕೃಷಿ ಸಂಶೋಧನಾ ವ್ಯವಸ್ಥೆ ಬಗ್ಗೆ ನಮಗೀರೋದು ರಮ್ಯ ಕಲ್ಪನೆ. ಆದರೆ ಅಲ್ಲಿ ಆಗುತ್ತಿರೋದು ಏನು?
ಸಸ್ಯ ಜೈವಿಕ ತಂತ್ರಜ್ನಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರದ (ಎನ್ಆರ್ಸಿಪಿಬಿ) ಮುಖ್ಯಸ್ಥ ಎಸ್. ಕೆ. ರೈನಾ ಕೆಲವು ವರುಷಗಳ ಮುಂಚೆ ದೊಡ್ಡ ಸುದ್ದಿ ಮಾಡಿದರು. ದೆಹಲಿಯ ಪುಸಾ ಕಾಂಪ್ಲೆಕ್ಸಿನಲ್ಲಿರುವ ಆ ಸಂಸ್ಥೆಯಿಂದ “ಇಂಡಿಕಾ ಭತ್ತದ ತಳಿಗಳ ದಕ್ಷ ಜೈವಿಕ ಪರಿವರ್ತನಾ ವ್ಯವಸ್ಥೆ ರೂಪಿಸಿದ ಭಾರತದ ಮೊದಲ ಸಂಸ್ಥೆ ನಮ್ಮದು” ಎಂಬ ಘೋಷಣೆ. ಇವರ ಸಂಶೋಧನಾ ತಂಡದ ಬಗ್ಗೆ ಟ್ರಾನ್ಸ್ಜೆನಿಕ್ ಬಿಟಿ ಭತ್ತದ ಕ್ಷೇತ್ರ ಪ್ರಯೋಗಗಳನ್ನು ೧೯೯೯ರಲ್ಲಿ ನಡೆಸಿದ ಮೊದಲ ವಿಜ್ನಾನಿನಳ ತಂಡ ಎಂಬ ಹೆಗ್ಗಳಿಕೆಯೂ ಭಾರತದ ರಾಷ್ಟ್ರೀಯ ವಿಜ್ನಾನ ಅಕಾಡೆಮಿಯ ವೆಬ್ಸೈಟಿನಲ್ಲಿದೆ.
ಆದರೆ ೨೦೦೪ರಲ್ಲಿ ರೈನಾ ಸ್ವಯಂ ನಿವೃತ್ತಿ ಪಡೆದು, ಔರಂಗಾಬಾದಿನ ಖಾಸಗಿ ಬೀಜ ಕಂಪೆನಿಯಾದ ನಾಥ್ ಗ್ರೂಪಿನಲ್ಲಿ ದೊಡ್ಡ ಹುದ್ದೆಗೆ ಸೇರಿಕೊಂಡರು. ಈಗ ಎನ್ಆರ್ಪಿಬಿಬಿಯನ್ನು ಬಿಟಿ ಭತ್ತದ ಸಂಶೋಧನಾ ಯೋಜನೆಯಿಂದ ಏನಾಯಿತು? ಎಂದು ಪ್ರಶ್ನಿಸಿದರೆ, ಅದರ ಬಳಿ ಉತ್ತರವಿಲ್ಲ.
ಇನ್ನೊಂದು ಆತಂಕದ ಸುದ್ದಿಯೂ ಎನ್ಆರ್ಸಿಪಿಬಿಗೆ ಸಂಬಂಧಿಸಿದ್ದು. ಅಲ್ಲಿನ ಪ್ರಧಾನ ವಿಜ್ನಾನಿಯಾಗಿದ್ದ ಕೆ. ಸಿ. ಬನ್ಸಾಲ್ ಅಕ್ಟೋಬರ ೨೦೧೧ರಲ್ಲಿ ಅದನ್ನು ತೊರೆದು, ಭಾರತದ ಜೀನ್ ಬ್ಯಾಂಕಿನ ನಿರ್ದೇಶಕರಾಗಿ ಸೇರಿಕೊಂಡರು. ಆ ಸಂಸ್ಥೆಯಲ್ಲಿ ಅವರು ಈ ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರು: ಜೈವಿಕವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆ, ನಿಧಾನವಾಗಿ ಮಾಗುವ ಟೊಮೆಟೊ, ಕ್ಲೋರೋಪ್ಲಾಸ್ಟ್ ಪರಿವರ್ತಿತ ಸಾಸಿವೆ. ಆದರೆ ಇವುಗಳಿಗೆ ಸಂಬಂಧಿಸಿದ ವಸ್ತುದಾಖಲೆಗಳನ್ನು ಬನ್ಸಾಲ್ ಹಸ್ತಾಂತರಿಸಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಆಗಿನ ಯೋಜನಾ ನಿರ್ದೇಶಕ ಪಿ. ಆನಂದ ಕುಮಾರ್ ಅವರು ಬನ್ಸಾಲರಿಗೆ ಹಲವು ಪತ್ರ ಬರೆದರು. ಅನಂತರ, ಬನ್ಸಾಲರ ಮೇಲಧಿಕಾರಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ಉಪಮಹಾ ನಿರ್ದೇಶಕ ಸ್ವಪನ್ ಕುಮಾರ್ ದತ್ತರಿಗೂ ಪತ್ರ ಬರೆದರು. ಆದರೆ ಇವೆಲ್ಲ ಪತ್ರಗಳಿಂದ ಏನೂ ಆಗಿಲ್ಲ.

ನಮ್ಮ ದೇಶದ ಕೃಷಿ ಸಂಶೋಧನೆಯ ಸಾಂಸ್ಥಿಕ ವ್ಯವಸ್ಥೆ ಬಹಳ ದೊಡ್ಡದು. ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ವ್ಯಾಪ್ತಿಗೆ ಒಳಪಟ್ಟ ಸಂಶೋಧನಾ ಸಂಸ್ಥೆಗಳ ಸಂಖ್ಯೆ ೯೮.
ಜೋಳದಿಂದ ತೊಡಗಿ ಭತ್ತದ ವರೆಗಿನ ಎಲ್ಲ ಆಹಾರ ಬೆಳೆಗಳು, ಸೇಬಿನಿಂದ ಆರಂಭಿಸಿ ಮಾವಿನ ತನಕದ ಎಲ್ಲ ಹಣ್ಣಿನ ಬೆಳೆಗಳು – ಹೀಗೆ ಬಹುಪಾಲು ಬೆಳೆಗಳಿಗೆ ಪ್ರತ್ಯೇಕ ಸಂಶೋಧನಾ ಸಂಸ್ಥೆಗಳು. ಇವಲ್ಲದೆ ೫೬ ಕೃಷಿ ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆಯೂ ಐಸಿಎಆರಿನ ಜವಾಬ್ದಾರಿ. ಇವೆಲ್ಲ ವ್ಯವಸ್ಥೆಗೆ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ಎನ್ಎಆರ್ಎಸ್) ಎಂಬ ಹೆಸರು. ಈ ವ್ಯವಸ್ಥೆಯಲ್ಲಿರುವ ವಿಜ್ನಾನಿಗಳ ಸಂಖ್ಯೆ ೨೪,೦೦೦. ಇವರಲ್ಲಿ ೪,೮೦೦ ವಿಜ್ನಾನಿಗಳು ಐಸಿಎಆರ್ ಸಂಸ್ಥೆಗಳಲ್ಲಿದ್ದರೆ, ಉಳಿದವರು ಕೃಷಿವಿಶ್ವವಿದ್ಯಾಲಯಗಳಲ್ಲಿ ಇದ್ದಾರೆ.
ಅದೆಲ್ಲ ಸರಿ. ಇವರೆಲ್ಲ ಏನು ಮಾಡುತ್ತಿದ್ದಾರೆ? ಭಾರತದ ಕೃಷಿರಂಗದ ಪ್ರಗತಿಗೆ ಇವರ ಕೊಡುಗೆ ಏನು? ಕಳೆದ ೧೬ ವರುಷಗಳಲ್ಲಿ ೨,೮೫,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಿರುವಾಗ, ಕೃಷಿರಂಗದ ಸಮಸ್ಯೆಗಳನ್ನು ಪರಿಹರಿಸುವಂತಹ ಯಾವುದೇ ಸಂಶೋಧನೆಯನ್ನು ಈ ವಿಜ್ನಾನಿಗಳು ಮಾಡಿದ್ದಿದೆಯೇ?
ಇದಕ್ಕೆ ವಿಜ್ನಾನಿಗಳ ಪ್ರತಿಕ್ರಿಯೆ ಹೀಗಿರುತ್ತದೆ: ೧೯೫೦ರಲ್ಲಿ ಆಹಾರಧಾನ್ಯಗಳ ಉತ್ಪಾದನೆ ೫೦ ಮಿಲಿಯ ಟನ್ ಇತ್ತು; ಅದನ್ನೀಗ ೨೫೯ ಮಿಲಿಯ ಟನ್ನುಗಳಿಗೆ ಹೆಚ್ಚಿಸಿದ್ದೇ ನಮ್ಮ ಸಂಶೋಧನೆಗಳ ದೊಡ್ಡ ಸಾಧನೆ.
ಯಾವುದರ ಬಗ್ಗೆ ಸಂಶೋಧನೆ ನಡೆಸಬೇಕು? ಈ ವಿಚಾರದಲ್ಲಿ ಐಸಿಎಆರಿಗೆ ಸ್ವಾತಂತ್ರ್ಯವಿಲ್ಲ ಎಂಬುದು ವಾಸ್ತವ. “ಆಹಾರಧಾನ್ಯಗಳು ಕಡಿಮೆ ಬೆಲೆಯ ಹೆಚ್ಚು ಪರಿಮಾಣದ ವಸ್ತುಗಳು. ಇವುಗಳ ಬಗ್ಗೆಯೇ ಸಂಶೋಧನೆ ನಡೆಸಬೇಕೆಂದು ನಮಗೆ ತಾಕೀತು ಮಾಡಲಾಗಿದೆ. ನಾವು ಅದರಂತೆ ಸಂಶೋಧನೆ ನಡೆಸುತ್ತಿದ್ದೇವೆ. ನಮ್ಮ ದೇಶದ ಆಹಾರ ಭದ್ರತೆಗೆ ಇದು ಅಡಿಪಾಯ” ಎನ್ನುತ್ತಾರೆ ಐಸಿಎಆರಿನ ಡೈರೆಕ್ಟರ್ ಜನರಲ್ ಸುಬ್ಬಣ್ಣ ಅಯ್ಯಪ್ಪನ್.

“ಬಂಗಾರದ ಅಕ್ಕಿ ಈಗ ತಿನ್ನಿ” ಎಂಬ ಪ್ರಚಾರಾಂದೊಲನ ೪ ಮಾರ್ಚ್ ೨೦೧೫ರಿಂದ ಫಿಲಿಫೈನ್ಸ್, ಬಾಂಗ್ಲಾದೇಶ ಮತ್ತು ಭಾರತ ದೇಶಗಳಲ್ಲಿ ನಡೆಯಿತು. ಇದು ಜರಗಿದ್ದು ನವದೆಹಲಿಯಲ್ಲಿ ಮಾರ್ಚ್ ೧೪ರಿಂದ ೧೮ ಮತ್ತು ಮುಂಬೈಯಲ್ಲಿ ಮಾರ್ಚ್ ೧೭ರಿಂದ ೨೧.
ಏನಿದು ಬಂಗಾರದ ಅಕ್ಕಿ? ಇದು ಜೈವಿಕವಾಗಿ ಮಾರ್ಪಡಿಸಿದ ಭತ್ತದಿಂದಾದ ಅಕ್ಕಿ. ಹೇಗೆ? ಡ್ಯಾಫೋಡಿಲ್ ಸಸ್ಯದಿಂದ ಒಂದು ಜೀನ್ ಮತ್ತು ಒಂದು ಬ್ಯಾಕ್ಟೀರಿಯಾದಿಂದ (ಬೀಟಾ-ಕೆರೊಟಿನ್ ಉತ್ಪಾದಿಸಲಿಕ್ಕಾಗಿ) ಒಂದು ಜೀನ್ ಸೇರಿಸಿ ಮಾರ್ಪಡಿಸಲಾದ ಭತ್ತದ ಅಕ್ಕಿ. ವಿಟಮಿನ್-ಎ ಕೊರತೆಗೆ ಇದು ಪರಿಹಾರ ಎಂದು ಪ್ರಚಾರ ಮಾಡಲಾಗುತ್ತಿದೆ. ವಿಟಮಿನ್-ಎ ಕೊರತೆ ಹಲವು ದೇಶಗಳ ಬಡಜನರಲ್ಲಿ ಕಂಡು ಬರುವ ಬಾಧೆ. ಕೃಷಿ-ಕೈಗಾರಿಕಾ ರಂಗದ ಭರವಸೆ ಏನೆಂದರೆ ತಂತ್ರಜ್ನಾನದ ಮಂತ್ರದಂಡದಿಂದ ಈ ಸಮಸ್ಯೆಯ ಪರಿಹಾರ!
ವಿಟಮಿನ್-ಎ ಕೊರತೆಗೆ ಕಾರಣಗಳೇನು? ಬಡತನ ಮತ್ತು ಪೌಷ್ಟಿಕ ಆಹಾರ ಸಿಗದಿರುವುದು. ಹಾಗಿರುವಾಗ, ಬಂಗಾರದ ಅಕ್ಕಿ ಈ ಸಮಸ್ಯೆಗೆ ಪರಿಹಾರವಲ್ಲ. ಬದಲಾಗಿ, ಸ್ಥಳೀಯ ಪೌಷ್ಟಿಕ ಆಹಾರ ಧಾನ್ಯಗಳ ಸೇವನೆಯೇ ಇದಕ್ಕೆ ಪರಿಹಾರ. ವಿಟಮಿನ್-ಎ ಪೂರೈಸುವ ಸೊಪ್ಪು ತರಕಾರಿಗಳು ಸಮೃದ್ಧವಾಗಿ ಬೆಳೆಯುವ ದೇಶ ಭಾರತ. ಉದಾಹರಣೆಗೆ ಹರಿವೆ, ಬಸಳೆ, ನೆಲಬಸಳೆ, ಚಕ್ರಮುನಿ, ಹೊನಗನೆ, ಗೊಂಗರ ಇತ್ಯಾದಿ ಸೊಪ್ಪುಗಳು ಹಾಗೂ ಹಳದಿ ತರಕಾರಿಗಳು. ಗೆಣಸು ಇತ್ಯಾದಿ ಬೇರುತರಕಾರಿಗಳೂ ಮಾವು, ಪಪ್ಪಾಯಿ ಇನ್ನಿತರ ಹಣ್ಣುಗಳೂ ವಿಟಮಿನ್-ಎಯ ಸುಲಭ ಮೂಲಗಳು. ಮಕ್ಕಳಿಗಂತೂ ತಾಯಂದಿರ ಹಾಲು ವಿಟಮಿನ್-ಎಯ ಅತ್ಯುತ್ತಮ ಆಕರ.

ಚೀನಾದಲ್ಲಿ ಮಹಾರಾಜರ ಭೋಜನಕ್ಕೆ ಮಾತ್ರ ಮೀಸಲಾಗಿತ್ತು ಕಪ್ಪಕ್ಕಿ. ಪೋಷಕಾಂಶಗಳಿಂದ ಸಮೃದ್ಧವಾದ ಕಪ್ಪಕ್ಕಿ, ಭತ್ತ ಬೆಳೆಯುವ ವಿಸ್ತಾರ ಪ್ರದೇಶಗಳಲ್ಲಿ ಜನಸಾಮಾನ್ಯರ ಊಟದ ಬಟ್ಟಲಿಗೆ ಬರಲೇ ಇಲ್ಲ. ಇತ್ತೀಚೆಗೆ ಇದರ ಬಗ್ಗೆ ನಡೆದ ಸಂಶೋಧನೆಗಳಿಂದಾಗಿ ಇದರ ಪೋಷಕಾಂಶ ಮತ್ತು ಔಷಧೀಯ ಗುಣಗಳು ಬೆಳಕಿಗೆ ಬರುತ್ತಿವೆ.
ಕಪ್ಪಕ್ಕಿಯಲ್ಲಿ ಕ್ಯಾನ್ಸರ್ ನಿರೋಧಿ ಗುಣಗಳಿವೆ ಮತ್ತು ಇದರ ತವುಡು ಅಲರ್ಜಿ ಹಾಗೂ ಅಸ್ತಮಾದಿಂದಾಗುವ ಉರಿಯೂತ ಶಮನ ಮಾಡುತ್ತದೆಂದು ಪತ್ತೆ ಮಾಡಲಾಗಿದೆ.
ಈಶಾನ್ಯ ಭಾರತ, ಪಶ್ಚಿಮ ಬಂಗಾಳ, ಜಾರ್ಖಡ ಮತ್ತು ಒರಿಸ್ಸಾದಲ್ಲಿ ಬೆಳೆಯಲಾಗುವ ಕಪ್ಪಕ್ಕಿ ಅಲ್ಲಿಯ ನೆಲಮೂಲ ಭತ್ತದ ತಳಿ. ಇದರ ಸಸ್ಯಶಾಸ್ತ್ರೀಯ ಹೆಸರು ಒರೈಜಾ ಸಟೈವಾ. ಮಣಿಪುರದಲ್ಲಿ ನಿತ್ಯ ಆಹಾರವಾಗಿ ಮತ್ತು ಪಾರಂಪರಿಕ ಔಷಧಿಯಾಗಿ ಇದರ ಬಳಕೆ. ಅಲ್ಲಿ ಚಕ್ಹಾವೊ (ಅಂದರೆ ರುಚಿಯಾದ ಅಕ್ಕಿ) ಎಂದು ಕರೆಯಲಾಗುವ ಇದರಿಂದ ತಯಾರಿಸುವ ಚಕ್ಹಾವೊ-ಖೀರ್ ಹಬ್ಬಗಳಲ್ಲಿ ಇರಲೇಬೇಕಾದ ತಿನಿಸು. ಇದರ ಗಂಜಿನೀರಿನಿಂದ ತಲೆಗೂದಲು ತೊಳೆದರೆ ಕೂದಲು ಶಕ್ತಿಯುತವಾಗುತ್ತದೆಂಬ ನಂಬಿಕೆಯಿಂದೆ.
ಕಪ್ಪಕ್ಕಿಯ ಬಣ್ಣ ಮತ್ತು ಪೋಷಕಾಂಶಗಳ ಬಗ್ಗೆ ಇಂಫಾಲದ ಜೈವಿಕ ಸಂಪನ್ಮೂಲ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ದೀನಬಂಧು ಸಾಹೂ ಹೀಗೆನ್ನುತ್ತಾರೆ, “ಈ ಅಕ್ಕಿಯ ಬಣ್ಣ ಕಪ್ಪು ಅಥವಾ ಅತಿನೇರಳೆ ಆಗಲು ಕಾರಣ ಅದರಲ್ಲಿ ಸಮೃದ್ಧವಾಗಿರುವ ಅಂತೊಸಯಾನಿನ್ಗಳು. ಇವು ಶಕ್ತಿಶಾಲಿ ಆಂಟಿಒಕ್ಸಿಡೆಂಟುಗಳು.”
“ಬಿಳಿ ಅಕ್ಕಿಗೆ ಹೋಲಿಸಿದಾಗ,ವಿಟಮಿನ್ – ಬಿ ಮತ್ತು ಇ, ನಿಯಾಸಿನ್, ಕ್ಯಾಲ್ಸಿಯಂ, ಮೆಗ್ನೇಸಿಯಂ, ಕಬ್ಬಿಣ, ಸತು – ಇವೆಲ್ಲ ಕಪ್ಪಕ್ಕಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಇದರ ರುಚಿ ಸ್ವಲ್ಪ ಸಿಹಿ. ಪಾಲಿಷ್ ಮಾಡದ ಕಪ್ಪಕ್ಕಿಯಲ್ಲಿ ನಾರಿನಂಶವೂ ಜಾಸ್ತಿ” ಎಂದು ಅವರು ವಿವರಿಸುತ್ತಾರೆ. ಮಣಿಪುರದಲ್ಲಿ ಬೆಳೆಯುವ ಕಪ್ಪಕ್ಕಿಯ ಜೀನೋಮ್ (ಜೀನ್ ವಿವರ) ಪತ್ತೆ ಮಾಡಲಿಕ್ಕಾಗಿ ಅವರ ಸಂಸ್ಥೆ ಸಂಶೋಧನೆ ನಡೆಸುತ್ತಿದೆ.

ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು.
ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ. ಈಜಿಪ್ಟಿನ ಪಿರಮಿಡ್ಡುಗಳೊಳಗೆ, ಮಮ್ಮಿಗಳ ಹತ್ತಿರ ಹಾಗೂ ಹರಪ್ಪ ಮತ್ತು ಮೆಹೆಂಜೊದಾರೋಗಳಲ್ಲಿ ಪ್ರಾಚೀನ ಅವಶೇಷಗಳ ಜೊತೆಗೆ ಸಿರಿಧಾನ್ಯಗಳು ಪತ್ತೆಯಾಗಿವೆ. ಅಂದರೆ ಇವುಗಳಿಗೆ ೧೦,೦೦೦ ವರುಷಗಳ ಇತಿಹಾಸವಿದೆ. ಪೂರ್ವ ಏಷ್ಯಾದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಇವುಗಳ ಬೇಸಾಯ ಮಾಡಲಾಗುತ್ತಿತ್ತು.
ಕಡಿಮೆ ಮಳೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಸಿರಿಧಾನ್ಯಗಳು ನಮ್ಮ ಪೂರ್ವಿಕರ ಆಹಾರವಾಗಿದ್ದವು. ಇವುಗಳ ಸೇವನೆಯಿಂದ ಅವರು ಆರೋಗ್ಯವಂತರಾಗಿ ಬಾಳಿದರು.  ಕ್ರಮೇಣ ನಾಗರಿಕತೆ ಹರಡಿದಂತೆ ಸಿರಿಧಾನ್ಯಗಳ ಬಳಕೆ ಕಡಿಮೆಯಾಯಿತು. ಹೊಸ ಜೀವನಶೈಲಿಗೆ ಮಾರುಹೋದ ಜನರು ಅವು ಬಡವರ ಆಹಾರವೆಂದು ಪರಿಗಣಿಸಿದರು; ಅವನ್ನು “ತೃಣಧಾನ್ಯಗಳು" ಎಂದು ಹೆಸರಿಸಿ ಮೂಲೆಗುಂಪಾಗಿಸಿದರು.
ಈಗ ನಾಗರಿಕತೆಯ ನಾಗಾಲೋಟದಲ್ಲಿ ಸಿಲುಕಿದ ಜನರಿಗೆ ಪ್ಯಾಕೆಟ್ ಆಹಾರ, ಪಿಜ್ಜಾ, ಬರ್ಗರ್ ಇವನ್ನೆಲ್ಲ ತಿನ್ನುವುದು ಅಭ್ಯಾಸವಾಗಿದೆ. ಅವಸರದಲ್ಲಿ ಒಂದಷ್ಟು ತಿಂದು, ಕೆಲಸಕಾರ್ಯಗಳಿಗೆ ಧಾವಿಸಬೇಕಾದ ಧಾವಂತದಲ್ಲಿರುವ ನಗರವಾಸಿಗಳಿಗೆ ಇವೆಲ್ಲ “ತುರ್ತಿನ ಆಹಾರ”ವಾಗಿದೆ. ಆದರೆ ಇದರಿಂದಾಗಿಯೇ ಅವರ ಆರೋಗ್ಯ ಹದಗೆಡುತ್ತಿದೆ.

Pages