ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು.
ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು. ಅದಕ್ಕಾಗಿ ವಾರಕ್ಕೊಮ್ಮೆ ಕಾರಿಗೆ "ಸ್ನಾನ" ಮಾಡಿಸಬೇಕು, ಏಳೆಂಟು ಬಕೆಟ್ ನೀರಿನಲ್ಲಿ.
ಮನೆಯ ಮುಂದೆ, ಹಿಂದೆ ಅಥವಾ ಪಕ್ಕದಲ್ಲಿ ಚಂದದ ಕೈತೋಟ. ಬಣ್ಣಬಣ್ಣದ ಹೂಗಿಡಗಳು, ಎಲೆಗಿಡಗಳು. ಅವು ನಳನಳಿಸಬೇಕಾದರೆ ನೀರು ಎರೆಯಬೇಕಲ್ಲವೇ? ಅದಕ್ಕಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಬಳಕೆ - ದಿನದಿನವೂ ಹತ್ತಿಪ್ಪತ್ತು ಬಕೆಟ್ ನೀರು.
ಸ್ನಾನ ಮಾಡುವಾಗ, ನೀರು ಎರೆದುಕೊಳ್ಳುವುದೇ ಖುಷಿ. ಸ್ನಾನಕ್ಕಾಗಿ ೨ - ೩ ಬಕೆಟ್ ನೀರು. ಹಲ್ಲುಜ್ಜುವಾಗ ಮತ್ತು ಗಡ್ಡ ತೆಗೆಯುವಾಗ ನಳ್ಳಿಯಿಂದ ನೀರು ಸುರಿಯುತ್ತಲೇ ಇರಬೇಕು. ಯಾಕೆಂದರೆ ಅದು ಕೆಲವರ ಅಭ್ಯಾಸ - ಹಲವಾರು ವರುಷಗಳಿಂದ ಬೆಳೆಸಿಕೊಂಡು ಬಂದ ಅಭ್ಯಾಸ.
ಇಂತಹ ಸಂಗತಿಗಳು ನಮ್ಮ ಮನೆಗಳಲ್ಲೇ ನಡೆಯುತ್ತಿರಬಹುದು. ಈ ರೀತಿಯಲ್ಲಿ ನೀರು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಖಂಡಿತವಾಗಿ ಸಾಧ್ಯವಿದೆ. ಅದಕ್ಕಾಗಿ ನಮ್ಮ ಅಭ್ಯಾಸಗಳನ್ನು ಬದಲಾಯಿಸಬೇಕು, ಅಷ್ಟೇ.
ಉದಾಹರಣೆಗೆ, ಬಟ್ಟೆ ಒಗೆದ ನೀರಿನಿಂದ ಅಂಗಳ ಶುಚಿಮಾಡಬಹುದು. ಒಂದು ತುಂಡು ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಅದರಿಂದ ಕಾರಿನ ಧೂಳು ತೆಗೆಯಲು ಒಂದು ಬಕೆಟ್ ನೀರು ಸಾಕು. ಕೈತೋಟಕ್ಕೂ ಬಟ್ಟೆ ಒಗೆದ ನೀರನ್ನೇ ಹಾಕಬಹುದು. ಸ್ನಾನ ಮಾಡಲು ಒಂದು ಬಕೆಟ್ ನೀರು ಧಾರಾಳ ಸಾಕು. ಹಲ್ಲುಜ್ಜುವುದು ಮತ್ತು ಗಡ್ಡ ತೆಗೆಯುವುದು, ೨ - ೩ ಮಗ್ ನೀರಿನಲ್ಲಿ ಈ ಕೆಲಸಗಳು ಸಾಧ್ಯ.
ಹೀಗೆ ಅಭ್ಯಾಸಗಳನ್ನು ಬದಲಾಯಿಸಲು ನಾವು ಮನಸ್ಸು ಮಾಡಬೇಕು, ಅಷ್ಟೇ. "ಅದೇ ಕಷ್ಟದ ಕೆಲಸ. ಈ ಅಭ್ಯಾಸಗಳು ಬೇರು ಬಿಟ್ಟಿವೆ, ಹೇಗೆ ಬದಲಾಯಿಸುವುದು" ಅಂತೀರಾ?
ಅದಕ್ಕಾಗಿ ಆ ಸಂದರ್ಭಗಳಲ್ಲಿ ಅಮ್ಮಂದಿರನ್ನು ನೆನೆಯೋಣ. ನಮ್ಮ ದೇಶದ ಯಾವುದೋ ಕೊನೆಯಲ್ಲಿ ಒಂದು ಬಕೆಟ್ ನೀರಿಗಾಗಿ ಸಂಕಟ ಪಡುತ್ತಿರುವ ಅಮ್ಮಂದಿರ ಪರಿಸ್ಧಿತಿ ನೆನಪುಮಾಡಿಕೊಳ್ಳೋಣ. ಮನೆಮಂದಿಗೆ ಕುಡಿಯಲಿಕ್ಕಾಗಿ, ಆಹಾರ ಬೇಯಿಸಲಿಕ್ಕಾಗಿ ನೀರು ತರುವವರು ಆ ತಾಯಂದಿರು. ಗರ್ಭಿಣಿಯಿರಲಿ, ಬಾಣಂತಿಯಿರಲಿ ನೀರು ತರುವ ಕೆಲಸವಂತೂ ತಾಯಂದಿರಿಗೆ ತಪ್ಪದು. ಸುಡು ಬೇಸಗೆಯಲ್ಲಿ ನೀರಿಗಾಗಿ ಪರದಾಡುವ ಭಾರತದ ಹಳ್ಳಿಗಳಲ್ಲಿರುವ ಇಂತಹ ಲಕ್ಷಗಟ್ಟಲೆ ಅಮ್ಮಂದಿರ ಚಿತ್ರ ನಮ್ಮ ಮನಸ್ಸನ್ನು ತಟ್ಟಲಿ.
ನಗರಗಳಲ್ಲಿ ಮತ್ತು ಮಹಾನಗರಗಳಲ್ಲಿ ಟಾಯ್ಲೆಟ್ ಫ್ಲಶ್ ಮಾಡುವಾಗ, ಧೂಳಿರುವ ಜಾಗ ತೊಳೆಯಲಿಕ್ಕಾಗಿ ಶುದ್ಧೀಕರಿಸಿದ ನೀರನ್ನೇ ಬಸಬಸನೆ ಸುರಿಯುವಾಗ, ಕಣ್ಣ ಮುಂದೆ ನಾವು ತಂದುಕೊಳ್ಳಬೇಕಾದ ಚಿತ್ರ: ತಲೆಯಲ್ಲೊಂದು, ಕಂಕುಳಲ್ಲೊಂದು ನೀರು ತುಂಬಿದ ಕೊಡ ಹೊತ್ತು, ನೋವು ನುಂಗಿ ನಗುತ್ತ ಮನೆಯತ್ತ ನಡೆದು ಬರುವ ಹೆಣ್ಣುಮಗಳೊಬ್ಬಳ ಚಿತ್ರ. ಆ ಚಿತ್ರ , ನೀರು ಪೋಲು ಮಾಡುವ ನಮ್ಮ ಅಭ್ಯಾಸವನ್ನು ಬದಲಾಯಿಸಲಿ.