“ಬಂಗಾರದ ಅಕ್ಕಿ” ತಿನ್ನಬೇಕೇ?

“ಬಂಗಾರದ ಅಕ್ಕಿ ಈಗ ತಿನ್ನಿ” ಎಂಬ ಪ್ರಚಾರಾಂದೊಲನ ೪ ಮಾರ್ಚ್ ೨೦೧೫ರಿಂದ ಫಿಲಿಫೈನ್ಸ್, ಬಾಂಗ್ಲಾದೇಶ ಮತ್ತು ಭಾರತ ದೇಶಗಳಲ್ಲಿ ನಡೆಯಿತು. ಇದು ಜರಗಿದ್ದು ನವದೆಹಲಿಯಲ್ಲಿ ಮಾರ್ಚ್ ೧೪ರಿಂದ ೧೮ ಮತ್ತು ಮುಂಬೈಯಲ್ಲಿ ಮಾರ್ಚ್ ೧೭ರಿಂದ ೨೧.
ಏನಿದು ಬಂಗಾರದ ಅಕ್ಕಿ? ಇದು ಜೈವಿಕವಾಗಿ ಮಾರ್ಪಡಿಸಿದ ಭತ್ತದಿಂದಾದ ಅಕ್ಕಿ. ಹೇಗೆ? ಡ್ಯಾಫೋಡಿಲ್ ಸಸ್ಯದಿಂದ ಒಂದು ಜೀನ್ ಮತ್ತು ಒಂದು ಬ್ಯಾಕ್ಟೀರಿಯಾದಿಂದ (ಬೀಟಾ-ಕೆರೊಟಿನ್ ಉತ್ಪಾದಿಸಲಿಕ್ಕಾಗಿ) ಒಂದು ಜೀನ್ ಸೇರಿಸಿ ಮಾರ್ಪಡಿಸಲಾದ ಭತ್ತದ ಅಕ್ಕಿ. ವಿಟಮಿನ್-ಎ ಕೊರತೆಗೆ ಇದು ಪರಿಹಾರ ಎಂದು ಪ್ರಚಾರ ಮಾಡಲಾಗುತ್ತಿದೆ. ವಿಟಮಿನ್-ಎ ಕೊರತೆ ಹಲವು ದೇಶಗಳ ಬಡಜನರಲ್ಲಿ ಕಂಡು ಬರುವ ಬಾಧೆ. ಕೃಷಿ-ಕೈಗಾರಿಕಾ ರಂಗದ ಭರವಸೆ ಏನೆಂದರೆ ತಂತ್ರಜ್ನಾನದ ಮಂತ್ರದಂಡದಿಂದ ಈ ಸಮಸ್ಯೆಯ ಪರಿಹಾರ!
ವಿಟಮಿನ್-ಎ ಕೊರತೆಗೆ ಕಾರಣಗಳೇನು? ಬಡತನ ಮತ್ತು ಪೌಷ್ಟಿಕ ಆಹಾರ ಸಿಗದಿರುವುದು. ಹಾಗಿರುವಾಗ, ಬಂಗಾರದ ಅಕ್ಕಿ ಈ ಸಮಸ್ಯೆಗೆ ಪರಿಹಾರವಲ್ಲ. ಬದಲಾಗಿ, ಸ್ಥಳೀಯ ಪೌಷ್ಟಿಕ ಆಹಾರ ಧಾನ್ಯಗಳ ಸೇವನೆಯೇ ಇದಕ್ಕೆ ಪರಿಹಾರ. ವಿಟಮಿನ್-ಎ ಪೂರೈಸುವ ಸೊಪ್ಪು ತರಕಾರಿಗಳು ಸಮೃದ್ಧವಾಗಿ ಬೆಳೆಯುವ ದೇಶ ಭಾರತ. ಉದಾಹರಣೆಗೆ ಹರಿವೆ, ಬಸಳೆ, ನೆಲಬಸಳೆ, ಚಕ್ರಮುನಿ, ಹೊನಗನೆ, ಗೊಂಗರ ಇತ್ಯಾದಿ ಸೊಪ್ಪುಗಳು ಹಾಗೂ ಹಳದಿ ತರಕಾರಿಗಳು. ಗೆಣಸು ಇತ್ಯಾದಿ ಬೇರುತರಕಾರಿಗಳೂ ಮಾವು, ಪಪ್ಪಾಯಿ ಇನ್ನಿತರ ಹಣ್ಣುಗಳೂ ವಿಟಮಿನ್-ಎಯ ಸುಲಭ ಮೂಲಗಳು. ಮಕ್ಕಳಿಗಂತೂ ತಾಯಂದಿರ ಹಾಲು ವಿಟಮಿನ್-ಎಯ ಅತ್ಯುತ್ತಮ ಆಕರ.
ಈಗ ವಿಟಮಿನ್-ಎ ಕೊರತೆಗೆ ಪ್ರಧಾನ ಕಾರಣ ನಮ್ಮ ಆಹಾರದಲ್ಲಿ ವಿವಿಧತೆಯ ಕೊರತೆ. ಸಮತೋಲನದ ಆಹಾರ ಒದಗಿಸುವ ಸ್ಥಳೀಯ ಪಾರಂಪರಿಕ ಆಹಾರ ಪದ್ಧತಿಗಳನ್ನು ಹಸುರುಕ್ರಾಂತಿಯಂತಹ ತಂತ್ರಜ್ನಾನದ ಮುನ್ನಡೆಯ ಗೊಂದಲಗಳಲ್ಲಿ ನಾವು ಕಳೆದುಕೊಂಡಿದ್ದೇವೆ. ಅದರಿಂದಾಗಿ ಮಣ್ಣು ಫಲವತ್ತತೆ ಕಳಕೊಂಡು, ನೀರಿನ ಆಸರೆಗಳು ಕಲುಷಿತವಾಗಿವೆ. ಕೈಗಾರಿಕೆ ಆಧಾರಿತ ಆಹಾರ ಸರಬರಾಜು ವ್ಯವಸ್ಥೆಯಂತೂ ಬಡತನ ಮತ್ತು ಪೌಷ್ಟಿಕ ಆಹಾರದ ಕೊರತೆಯನ್ನು ಹೆಚ್ಚಿಸಿದೆ. ಯಾಕೆಂದರೆ, ನಾವು ಏನು ಮತ್ತು ಹೇಗೆ ತಿನ್ನಬೇಕು ಎಂಬುದನ್ನು ಈ ವ್ಯವಸ್ಥೆ ನಿರ್ದೇಶಿಸುತ್ತದೆ (ಪಡಿತರ ವ್ಯವಸ್ಥೆ ಜ್ಯಾರಿಯಾದ ನಂತರ ರಾಗಿ, ನವಣೆ, ಸಣ್ಣಜೋಳ ಇತ್ಯಾದಿ ಪೋಷಕಾಂಶ ಸಮೃದ್ಧ ಸ್ಥಳೀಯ ಸಿರಿಧಾನ್ಯಗಳು ನಮ್ಮ ಊಟದ ಬಟ್ಟಲಿನಿಂದ ಕಣ್ಮರೆಯಾದದ್ದನ್ನು ಗಮನಿಸಿ. ಬದಲಾಗಿ, ಕಳಪೆ ಗುಣಮಟ್ಟದ, ಪಾಲಿಷ್ ಮಾಡಿದ (ಅಂದರೆ ಪೌಷ್ಟಿಕಾಂಶ ಕಿತ್ತುಹಾಕಲಾದ) ಧಾನ್ಯಗಳು ಮತ್ತು ಪಾರಂಪರಿಕವಾಗಿ ನಮ್ಮದಲ್ಲದ
ಪಾಮೊಲಿನ್ ಎಣ್ಣೆ ನಮ್ಮ ಊಟದ ಬಟ್ಟಲಿನಲ್ಲಿ ತುಂಬಿರುವುದನ್ನು ನೋಡಿ.)
ಇಂದು ನಾವು ತಿನ್ನುವ ಧಾನ್ಯ, ತರಕಾರಿ, ಹಣ್ಣುಗಳು, ಮೀನು, ಮೊಟ್ಟೆ, ಹಾಲು, ಮಾಂಸ ಇವೆಲ್ಲ ರಾಸಾಯನಿಕ ವಿಷಗಳಿಂದ ತುಂಬಿವೆ. ಜೈವಿಕವಾಗಿ ಮಾರ್ಪಡಿಸಿದ ಬೆಳೆಗಳ ಫಸಲಿನ ಮೂಲಕವೂ ನಮ್ಮ ಆಹಾರದಲ್ಲಿ ಹೆಚ್ಚಿನ ವಿಷ ಸೇರಿಕೊಳ್ಳುತ್ತಿದೆ. ಸೂಪರ್ ಮಾರ್ಕೆಟುಗಳಲ್ಲಂತೂ ಸಂಸ್ಕರಿಸಿದ ದಿಢೀರ್ ಆಹಾರವಸ್ತುಗಳೇ ತುಂಬಿವೆ.
ಹಾಗಿರುವಾಗ, ಈ ಬಂಗಾರದ ಅಕ್ಕಿ ನಮಗೆ ಬೇಕೇ? ಇದು ನಮ್ಮ ಬೀಜ ವೈವಿಧ್ಯಕ್ಕೆ ದೊಡ್ಡ ಅಪಾಯ. ಯಾಕೆಂದರೆ, ನಮ್ಮ ಪಾರಂಪರಿಕ ಭತ್ತದ ತಳಿಗಳನ್ನು ಇದು ಕಲುಷಿತಗೊಳಿಸುತ್ತದೆ. ಜೊತೆಗೆ, ಪಾರಂಪರಿಕವಾಗಿ ಸಿರಿಧಾನ್ಯ ಉಣ್ಣುತ್ತಿದ್ದ (ಮಳೆಯಾಶ್ರಿತ ಬೇಸಾಯ ಸಾಗುತ್ತಿದ್ದ ಪ್ರದೇಶಗಳ) ನೂರಾರು ಕೋಟಿ ಜನರ ಆಹಾರವಾಗಿ ಅಕ್ಕಿ ಮುಂದುವರಿಯಲು ಕಾರಣವಾಗುತ್ತದೆ.  
ಇಂತಹ ಆತಂಕಕಾರಿ ಬಂಗಾರದ ಅಕ್ಕಿ ಯೋಜನೆಗೆ ಒಂದು ನೂರು ಮಿಲಿಯನ್ ಅಮೆರಿಕನ್ ಡಾಲರುಗಳ ಭಂಡವಾಳ ಹೂಡಿದ ಸಂಸ್ಥೆಗಳು: ರಾಕ್ಫೆಲರ್ ಫೌಂಡೇಷನ್, ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುರೋಪಿಯನ್ ಕಮ್ಯುನಿಟಿ ಬಯೋಟೆಕ್ ಪ್ರೊಗ್ರಾಂ ಮತ್ತು ಸ್ವಿಸ್ ಫೆಡರಲ್ ಆಫೀಸ್ ಫಾರ್ ಎಜುಕೇಷನ್ ಆಂಡ್ ಸಯನ್ಸ್. ಇಂತಹ ಸಂಸ್ಥೆಗಳು ಬೆಂಬಲಿಸುವ ಕೈಗಾರಿಕೆ ಆಧಾರಿತ ಆಹಾರ ವ್ಯವಸ್ಥೆ ಮತ್ತು ಆಡಳಿತಯಂತ್ರ – ಇವು ಆಹಾರವನ್ನು ಲಾಭ ಮಾಡಿಕೊಳ್ಳುವ ಒಂದು ವಸ್ತುವಾಗಿ ಪರಿಗಣಿಸುತ್ತಿರುವುದೇ ದೊಡ್ಡ ದುರಂತ. ಸಮಗ್ರ ಆಹಾರ ವ್ಯವಸ್ಥೆ ಪರಿಶೀಲಿಸಿ, ಪೌಷ್ಟಿಕ ಆಹಾರ ಕೊರತೆಯ ಮೂಲ ಕಾರಣಗಳನ್ನು ಪರಿಹರಿಸುವ ಬದಲಾಗಿ ಕೇವಲ ಒಂದು ಪೋಷಕಾಂಶದ ಕೊರತೆಗೆ ಗಮನ ನೀಡುತ್ತಿರುವುದು ದೊಡ್ಡ ತಪ್ಪು.
ಬಾಂಗ್ಲಾದೇಶ ಮತ್ತು ಫಿಲಿಫೈನ್ಸ್, ಕೈತೋಟ ಹಾಗೂ ಸಮುದಾಯ ತೋಟಗಳ ಮೂಲಕ ವಿಟಮಿನ್-ಎ ಕೊರತೆಯನ್ನು ಹೇಗೆ ಪರಿಹರಿಸ ಬಹುದೆಂದು ತೋರಿಸಿ ಕೊಟ್ಟಿವೆ. ವಿಶ್ವಸಂಸ್ಥೆಯ ಪೌಷ್ಟಿಕ ಆಹಾರದ ಉಪಸಮಿತಿಯ ೧೯೯೮ರ ವರದಿ ಪ್ರಕಾರ, ಕೈತೋಟಗಳಿಂದ ಹಸುರುಸೊಪ್ಪು ಮತ್ತು ತರಕಾರಿಗಳ ಸರಬರಾಜು ವಿಟಮಿನ್-ಎ ಕೊರತೆಯನ್ನು ಹೋಗಲಾಡಿಸುವ ಪರಿಣಾಮಕಾರಿ ವಿಧಾನ. ಆದ್ದರಿಂದಲೇ “ಬಂಗಾರದ ಅಕ್ಕಿ ಈಗ ತಿನ್ನಿ” ಪ್ರಚಾರಂದೋಲನದ ಕೆನಡಾ ದೇಶದ ತಂಡದ ಪ್ರವಾಸವನ್ನು ಫಿಲಿಫೈನ್ಸಿನ ರೈತ ಸಂಘಟನೆಗಳು ವಿರೋಧಿಸಿದವು.
ಭಾರತದಲ್ಲಿ ಈ ಪ್ರಚಾರಂದೋಲನ ಸುದ್ದಿಯಾಗಲಿಲ್ಲ. ಆದರೆ ನಾವು ಸುಮ್ಮನೆ ಕೂರುವಂತಿಲ್ಲ. ನಮ್ಮ ಪಡಿತರ ವ್ಯವಸ್ಥೆಯ ಮೂಲಕ ಯಾವಾಗ ಬಂಗಾರದ-ಅಕ್ಕಿಯನ್ನು ನಮ್ಮ ಊಟದ ಬಟ್ಟಲಿಗೆ ಸದ್ದಿಲ್ಲದೆ ಸುರಿಯುವರೋ ಹೇಳುವಂತಿಲ್ಲ. ಆದ್ದರಿಂದ ಈಗಲೇ ಅದನ್ನು ವಿರೋಧಿಸಬೇಕಾಗಿದೆ. ಜೊತೆಗೆ, ನಮ್ಮ ಆಹಾರದ ಆಯ್ಕೆ ಸ್ವಾತಂತ್ರ್ಯ ರಕ್ಷಿಸಲಿಕ್ಕಾಗಿ ಪಾರಂಪರಿಕ ಆಹಾರ ಪದ್ಧತಿಗಳನ್ನು ಉಳಿಸಿಕೊಳ್ಳಬೇಕಾಗಿದೆ.