ಚೀನಾದಲ್ಲಿ ಮಹಾರಾಜರ ಭೋಜನಕ್ಕೆ ಮಾತ್ರ ಮೀಸಲಾಗಿತ್ತು ಕಪ್ಪಕ್ಕಿ. ಪೋಷಕಾಂಶಗಳಿಂದ ಸಮೃದ್ಧವಾದ ಕಪ್ಪಕ್ಕಿ, ಭತ್ತ ಬೆಳೆಯುವ ವಿಸ್ತಾರ ಪ್ರದೇಶಗಳಲ್ಲಿ ಜನಸಾಮಾನ್ಯರ ಊಟದ ಬಟ್ಟಲಿಗೆ ಬರಲೇ ಇಲ್ಲ. ಇತ್ತೀಚೆಗೆ ಇದರ ಬಗ್ಗೆ ನಡೆದ ಸಂಶೋಧನೆಗಳಿಂದಾಗಿ ಇದರ ಪೋಷಕಾಂಶ ಮತ್ತು ಔಷಧೀಯ ಗುಣಗಳು ಬೆಳಕಿಗೆ ಬರುತ್ತಿವೆ.
ಕಪ್ಪಕ್ಕಿಯಲ್ಲಿ ಕ್ಯಾನ್ಸರ್ ನಿರೋಧಿ ಗುಣಗಳಿವೆ ಮತ್ತು ಇದರ ತವುಡು ಅಲರ್ಜಿ ಹಾಗೂ ಅಸ್ತಮಾದಿಂದಾಗುವ ಉರಿಯೂತ ಶಮನ ಮಾಡುತ್ತದೆಂದು ಪತ್ತೆ ಮಾಡಲಾಗಿದೆ.
ಈಶಾನ್ಯ ಭಾರತ, ಪಶ್ಚಿಮ ಬಂಗಾಳ, ಜಾರ್ಖಡ ಮತ್ತು ಒರಿಸ್ಸಾದಲ್ಲಿ ಬೆಳೆಯಲಾಗುವ ಕಪ್ಪಕ್ಕಿ ಅಲ್ಲಿಯ ನೆಲಮೂಲ ಭತ್ತದ ತಳಿ. ಇದರ ಸಸ್ಯಶಾಸ್ತ್ರೀಯ ಹೆಸರು ಒರೈಜಾ ಸಟೈವಾ. ಮಣಿಪುರದಲ್ಲಿ ನಿತ್ಯ ಆಹಾರವಾಗಿ ಮತ್ತು ಪಾರಂಪರಿಕ ಔಷಧಿಯಾಗಿ ಇದರ ಬಳಕೆ. ಅಲ್ಲಿ ಚಕ್ಹಾವೊ (ಅಂದರೆ ರುಚಿಯಾದ ಅಕ್ಕಿ) ಎಂದು ಕರೆಯಲಾಗುವ ಇದರಿಂದ ತಯಾರಿಸುವ ಚಕ್ಹಾವೊ-ಖೀರ್ ಹಬ್ಬಗಳಲ್ಲಿ ಇರಲೇಬೇಕಾದ ತಿನಿಸು. ಇದರ ಗಂಜಿನೀರಿನಿಂದ ತಲೆಗೂದಲು ತೊಳೆದರೆ ಕೂದಲು ಶಕ್ತಿಯುತವಾಗುತ್ತದೆಂಬ ನಂಬಿಕೆಯಿಂದೆ.
ಕಪ್ಪಕ್ಕಿಯ ಬಣ್ಣ ಮತ್ತು ಪೋಷಕಾಂಶಗಳ ಬಗ್ಗೆ ಇಂಫಾಲದ ಜೈವಿಕ ಸಂಪನ್ಮೂಲ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ದೀನಬಂಧು ಸಾಹೂ ಹೀಗೆನ್ನುತ್ತಾರೆ, “ಈ ಅಕ್ಕಿಯ ಬಣ್ಣ ಕಪ್ಪು ಅಥವಾ ಅತಿನೇರಳೆ ಆಗಲು ಕಾರಣ ಅದರಲ್ಲಿ ಸಮೃದ್ಧವಾಗಿರುವ ಅಂತೊಸಯಾನಿನ್ಗಳು. ಇವು ಶಕ್ತಿಶಾಲಿ ಆಂಟಿಒಕ್ಸಿಡೆಂಟುಗಳು.”
“ಬಿಳಿ ಅಕ್ಕಿಗೆ ಹೋಲಿಸಿದಾಗ,ವಿಟಮಿನ್ – ಬಿ ಮತ್ತು ಇ, ನಿಯಾಸಿನ್, ಕ್ಯಾಲ್ಸಿಯಂ, ಮೆಗ್ನೇಸಿಯಂ, ಕಬ್ಬಿಣ, ಸತು – ಇವೆಲ್ಲ ಕಪ್ಪಕ್ಕಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಇದರ ರುಚಿ ಸ್ವಲ್ಪ ಸಿಹಿ. ಪಾಲಿಷ್ ಮಾಡದ ಕಪ್ಪಕ್ಕಿಯಲ್ಲಿ ನಾರಿನಂಶವೂ ಜಾಸ್ತಿ” ಎಂದು ಅವರು ವಿವರಿಸುತ್ತಾರೆ. ಮಣಿಪುರದಲ್ಲಿ ಬೆಳೆಯುವ ಕಪ್ಪಕ್ಕಿಯ ಜೀನೋಮ್ (ಜೀನ್ ವಿವರ) ಪತ್ತೆ ಮಾಡಲಿಕ್ಕಾಗಿ ಅವರ ಸಂಸ್ಥೆ ಸಂಶೋಧನೆ ನಡೆಸುತ್ತಿದೆ.
ಏಷ್ಯಾ-ಫೆಸಿಪಿಕ್ ಜರ್ನಲ್ ಫಾರ್ ಕ್ಯಾನ್ಸರ್ ಪ್ರಿವೆನ್ಷನ್ ಎಂಬ ವೈದ್ಯಕೀಯ ನಿಯತಕಾಲಿಕದಲ್ಲಿ ೨೦೧೪ರಲ್ಲಿ ಪ್ರಕಟವಾದ ಸಂಶೋಧನೆಯ ವರದಿಯೊಂದು ಕಪ್ಪಕ್ಕಿಯ ಹಲವಾರು ಔಷಧೀಯ ಗುಣಗಳನ್ನು ಪ್ರಕಟಿಸಿದೆ: ಕಪ್ಪಕ್ಕಿಯ ಅಂತೊಸಯಾನಿನ್ಗಳು ಆಂಟಿಒಕ್ಸಿಡೆಂಟುಗಳಂತೆ ಕೆಲಸ ಮಾಡುವುದಲ್ಲದೆ, ವಿಷನಿರ್ಮೂಲನಾ ಕಿಣ್ವಗಳನ್ನು ಚುರುಕುಗೊಳಿಸುತ್ತವೆ. ಅವು ಕ್ಯಾನ್ಸರ್ ಕೋಶಗಳ ಸಂಖ್ಯಾ ಹೆಚ್ಚಳವನ್ನು ತಡೆಯುತ್ತವೆ. ಜೊತೆಗೆ, ಕ್ಯಾನ್ಸರ್ ಕೋಶಗಳ ಸಾವಿಗೂ ಕಾರಣವಾಗುತ್ತದೆ. ಉರಿಯೂತ ಶಮನ ಮಾಡುತ್ತದೆ. ಮಾತ್ರವಲ್ಲ, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ ಉತ್ತೇಜಿಸುವ ರಕ್ತನಾಳಗಳ ರಚನೆಯನ್ನು ತಡೆಯುತ್ತದೆ. ಕ್ಯಾನ್ಸರ್ ಕೋಶಗಳ ಹರಡುವಿಕೆ ತಡೆಗಟ್ಟುತ್ತವೆ. ಆ ಸಂಶೋಧನಾ ತಂಡದ ಮುಖ್ಯಸ್ಥರು ಚೀನಾದ ಕ್ಯಾನ್ಸರ ಪರಿನತ ಲಿ-ಪಿಂಗ್ ಲುವೊ.
ಕಪ್ಪಕ್ಕಿಯ ಅಂತೊಸಯಾನಿನ್ಗಳು ಸ್ತನದ ಕ್ಯಾನ್ಸರಿನ ಕೋಶಗಳ ಸಂಖ್ಯಾ ಹೆಚ್ಚಳವನ್ನು ಕಡಿಮೆ ಮಾಡುತ್ತವೆಯೆಂದು ಆ ಅಧ್ಯಯನ ತೋರಿಸಿಕೊಟ್ಟಿದೆ.
ಗಮನಿಸಿ: ಕರಿಬಂಗಾರವಾದ ಕಪ್ಪಕ್ಕಿಯ ತಳಿಗಳನ್ನು ಉಳಿಸಿದವರು ಈಶಾನ್ಯ ಭಾರತದ ರೈತರು. ಅವರಲ್ಲೊಬ್ಬರು ಮಣಿಪುರದ ಪೊಟ್ಶಂಗ್ಬಾಮ್ ದೇವಕಾಂತ. ಒಂದು ನೂರು ಪಾರಂಪರಿಕ ಭತ್ತದ ತಳಿಗಳನ್ನು ಉಳಿಸಿಕೊಂಡು ಬಂದಿದ್ದಾರೆ ಅವರು. ಕಪ್ಪಕ್ಕಿ ಬರನಿರೋಧ ಗುಣವಿರುವ ತಳಿ ಎನ್ನುತ್ತಾರೆ ದೇವಕಾಂತ. ಸಸ್ಯ ವೈವಿಧ್ಯ ರಕ್ಷಣೆ ಮತ್ತು ರೈತರ ಹಕ್ಕು ರಕ್ಷಣೆಗಾಗಿ ೨೦೧೨ರಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಪ್ಪಕ್ಕಿ ತಳಿಗಳ ಕೃಷಿಯನ್ನು ಇತರ ರೈತರೂ ಕೈಗೆತ್ತಿಕೊಳ್ಳಲಿಕ್ಕಾಗಿ ಮುತುವರ್ಜಿ ವಹಿಸಿದ್ದಾರೆ ದೇವಕಾಂತ.
ದೀನಬಂಧು ಸಾಹೂ ನೀಡುವ ಮಾಹಿತಿಯಂತೆ, ಮಣಿಪುರದ ಒಟ್ಟು ಭತ್ತ ಬೆಳೆಯುವ ಪ್ರದೇಶದ ಶೇ.೧೦ ಭಾಗದಲ್ಲಿ ಮಾತ್ರ ಕಪ್ಪಕ್ಕಿ ಬೆಳೆಸಲಾಗುತ್ತಿದೆ. ಇದಕ್ಕೆ ಕಾರಣ ಅದರ ಇಳುವರಿ ಕಡಿಮೆ. ಮಣಿಪುರ ರಾಜ್ಯದ ಕೃಷಿ ಇಲಾಖೆಯು, ಕಪ್ಪಕ್ಕಿಯ ಇಳುವರಿ ಹೆಚ್ಚಿಸಲಿಕ್ಕಾಗಿ ಶ್ರೀ ಪದ್ಧತಿ ಪ್ರಚಾರ ಮಾಡುತ್ತಿದೆ. ಸಾವಯವ ಕೃಷಿ ಪದ್ಧತಿಯಲ್ಲಿಯೇ ಬೆಳೆಯುವ ಕಪ್ಪಕ್ಕಿ ಕೃಷಿಗೆ ಕಡಿಮೆ ನೀರು ಸಾಕು. ಬೀಜದ ಮಡಿಯಲ್ಲಿ ಭತ್ತದ ಸಸಿಗಳನ್ನು ಬೆಳೆಸಿ, ಅನಂತರ ಸಸಿಗಳನ್ನು ಒಂದೊಂದಾಗಿ ಗದ್ದೆಯಲ್ಲಿ ನಾಟಿ ಮಾಡುತ್ತಾರೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಕಿಲೋಕ್ಕೆ ರೂ.೩೦೦ ದರದಲ್ಲಿ ಕಪ್ಪಕ್ಕಿ ಮಾರಾಟವಾಗುತ್ತಿದೆ. ವಿದೇಶಗಳಲ್ಲಿ ಕಪ್ಪಕ್ಕಿಯ ಬೆಲೆ ದುಬಾರಿ. ಆದ್ದರಿಂದ, ಅಸ್ಸಾಂನ ಕೃಷಿ ಇಲಾಖೆಯು ರಫ್ತಿಗಾಗಿ ಕಪ್ಪಕ್ಕಿ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಕಳೆದ ಹಂಗಾಮಿನಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಲ್ಲಿ ಗೋಲ್ಪಾರಾ ಜಿಲ್ಲೆಯ ಅಮುಗುರಿಪಾರಾದಲ್ಲಿ ೧೩.೨ ಹೆಕ್ಟೇರುಗಳಲ್ಲಿ ಕಪ್ಪಕ್ಕಿ ಬೆಳೆದು ೧,೨೦೦ ಕ್ವಿಂಟಾಲ್ ಇಳುವರಿ ಪಡೆಯಲಾಗಿದೆ. ಆ ಯೋಜನೆಯನ್ನು ೨೦೧೬-೧೭ನೇ ಸಾಲಿನಲ್ಲಿ ಮುಂದುವರಿಸಲು ಅಸ್ಸಾಂನ ಕೃಷಿ ಇಲಾಖೆ ನಿರ್ಧರಿಸಿದೆ.
ಸಮೃದ್ಧ ಪೋಷಕಾಂಶ ಹಾಗೂ ಔಷಧೀಯ ಗುಣ ತುಂಬಿದ ಕಪ್ಪಕ್ಕಿ ಎಂಬ ನಮ್ಮ ದೇಶದ ಕರಿಬಂಗಾರ ಬಹುಜನರಿಗೆ ಸಿಗುವಂತಾಗಲಿ.