Agriculture and Rural Development
ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ.
ಯಾಕೆಂದರೆ, ಹತ್ತು ವರುಷಗಳ ನಂತರ, ಈ ವರುಷ ೨೦೧೫ರ ಜೂನ್ ಮೊದಲ ವಾರದಲ್ಲಿ ಬೊಸ್ತಮಿ ಆಮೆಗಳು ಮೊಟ್ಟೆಯಿಟ್ಟವು – ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ೫೫ ಕಿಮೀ ದೂರದ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಸರೋವರದಲ್ಲಿ. ಅನಂತರ, ಭಾರೀ ಮಳೆ ಸುರಿದ ದಿನ, ಹತ್ತು ವರುಷಗಳ ನಂತರ ಮೊದಲ ಬಾರಿಗೆ ಹತ್ತು ಆಮೆ ಮರಿಗಳು ರಾಷ್ಟ್ರೀಯ ಹೆದ್ದಾರಿ ೪೪ಎಯಲ್ಲಿ ಕಾಣಿಸಿಕೊಂಡವು. ಸುಮಾರು ೧೬೩ ಮೊಟ್ಟೆಗಳು ಒಡೆದು ಹೊರಬಂದ ಆಮೆ ಮರಿಗಳಲ್ಲಿ ಇವು ಕೆಲವು.
ಬೊಸ್ತಮಿ ಆಮೆಗಳನ್ನು ಆ ಪರಿತ್ರ ಸರೋವರಕ್ಕೆ ತಂದದ್ದು ತ್ರಿಪುರಾದ ರಾಜನಾಗಿದ್ದ ಮಾಣಿಕ್ಯ ರಾಜ ಎಂದು ಪ್ರತೀತಿ. ದಕ್ಷಿಣ ಬಾಂಗ್ಲಾ ದೇಶದ ಚಿತ್ತಗಾಂಗ್ ಗುಡ್ಡಗಳಿಂದ ಪವಿತ್ರತೆಯ ಸಂಕೇತವಾಗಿ ಆತ ಆಮೆಗಳನ್ನು ತಂದನಂತೆ. ತ್ರಿಪುರೇಶ್ವರಿ ದೇವಸ್ಥಾನ ಭಾರತದ ೫೧ ಶಕ್ತಿ ಪೀಠಗಳಲ್ಲೊಂದು. ಅದು ರಾಜಾ ಧನ್ಯಮಾಣಿಕ್ಯ ೧೫ನೇ ಶತಮಾನದಲ್ಲಿ ಕಟ್ಟಿಸಿದ ದೇವಸ್ಥಾನ.
ಆ ದೇವಸ್ಥಾನದ ೧.೧೧ ಹೆಕ್ಟೇರ್ ವಿಸ್ತೀರ್ಣದ ಸರೋವರ ಕಳೆದ ೬೦೦ ವರುಷಗಳಿಂದ ಬೊಸ್ತಮಿ ಆಮೆಗಳ ಆವಾಸಸ್ಥಾನ. ಅವು ಸರೋವರದ ಆಳದಿಂದ ತೀರಕ್ಕೆ ಬರುತ್ತಿದ್ದವು – ಭಕ್ತರು ಎಸೆದ ಆಹಾರ ಹುಡುಕುತ್ತಾ. ಆಮೆಗಳಿಗಾಗಿ ಅಕ್ಕಿ ಮತ್ತು ಬಿಸ್ಕಿಟ್ ಸರೋವರದ ಕಟ್ಟೆಯಲ್ಲಿ ಇರಿಸುವುದೂ ಅಲ್ಲಿನ ಭಕ್ತರ ಪೂಜಾವಿಧಿಯ ಅಂಗ.
ಡೆಲ್ಲಿ ಪಕ್ಕದ ಗುರ್ಗಾಂವ್ನಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ!
ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಐವತ್ತು ರೂಪಾಯಿಗೆ ಎರಡು ಊಟ ಸಿಕ್ಕೀತೇ? ಇಲ್ಲ. ಆದರೆ ಗುರ್ಗಾಂವ್ನಲ್ಲಿ ಆ ಬೆಲೆಗೆ ಎರಡು ಜನತಾ ಮೀಲ್ಸ್ ಲಭ್ಯ. ಉದಾಹರಣೆಗೆ, ಬಿಹಾರದಿಂದ ಗುರ್ಗಾಂವಿಗೆ ಬಂದು ರಿಕ್ಷಾ ತಳ್ಳುತ್ತಾ ಬದುಕು ಸಾಗಿರುತ್ತಿರುವ ಮನೋಜ್ ಮಹತೋ ಜನತಾ ಮೀಲ್ಸಿನಿಂದ ದಿನನಿತ್ಯ ಖರೀದಿಸುವ ಎರಡು ಊಟಗಳ ವೆಚ್ಚ ರೂ.೫೦. ಮಧ್ಯಾಹ್ನ ರೂ.೩೦ರ ಊಟದಲ್ಲಿ ಚಪಾತಿಗಳು, ತೊವ್ವೆ, ಅನ್ನ, ತರಕಾರಿ ಸಾಂಬಾರ್ ಮತ್ತು ಸಲಾಡ್. ರಾತ್ರಿಯ ರೂ.೨೦ರ ಊಟದಲ್ಲಿ ಐದು ಚಪಾತಿಗಳು, ತರಕಾರಿ ಪಲ್ಯ, ಚಟ್ನಿ ಮತ್ತು ಸಲಾಡ್. ಜೊತೆಗೆ ಇದು ಸುರಕ್ಷಿತ ಎಂಬ ವಿಶ್ವಾಸ ಆತನಿಗೆ.
ಸೆಕ್ಯುರಿಟಿ ಗಾರ್ಡ್ ಆಗಿರುವ ರಣಜಿತ್ ಗಲ್ ಸಿನ್ಹಾ ದಿನದಿನವೂ ಜನತಾ ಊಟ ಮಾಡಲು ಕಾರಣ: ಊಟದಲ್ಲಿರುವ ತಾಜಾ ತರಕಾರಿಗಳು ಮತ್ತು ಊಟದ ಕಡಿಮೆ ಬೆಲೆ. ಈಗಂತೂ ಅಲ್ಲಿನ ಶಾಲೆ, ಕಾರ್ಖಾನೆ, ಕೆಫೆತೀರಿಯ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಲ್ಲಿ ಜನತಾ ಮೀಲ್ಸ್ ಭಾರೀ ಜನಪ್ರಿಯ.
ಇದೆಲ್ಲ ಶುರುವಾದದ್ದು ಎರಡು ವರುಷಗಳ ಮುಂಚೆ, ೨೦೧೩ರಲ್ಲಿ. ಭಾರತದ ನಗರಗಳಲ್ಲಿ ಅದ್ದೂರಿಯ ಊಟ ಒದಗಿಸುವ ದುಬಾರಿ ಹೋಟೆಲುಗಳು ಅನೇಕ. ಕಡಿಮೆ ಬೆಲೆಯ ಊಟ ಮಾರುವ ಕ್ಯಾಂಟೀನುಗಳು ಹಲವಾರು ಇದ್ದರೂ ಇಲ್ಲಿ ಸಿಗುವ ಊಟ ಆರೋಗ್ಯಯುತ ಅನ್ನುವಂತಿಲ್ಲ. ಇಂತಹ ಸನ್ನಿವೇಶದಲ್ಲಿ, ಭಾರತದ ನಗರಗಳ ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಒಳ್ಳೆಯ ಊಟ ಒದಗಿಸುವ ದೊಡ್ದ ಅವಕಾಶವನ್ನು ಗುರುತಿಸಿದವರು ಜೆಸ್ಸಿ ವಾನ್ ಡೆ ಜಾಂಡ್ ಎಂಬ ಡಚ್ ವ್ಯಕ್ತಿ ಮತ್ತು ಪ್ರಭಾತ್ ಅಗರ್ವಾಲ್. ಇವರಿಬ್ಬರು ಅಪೇಕ್ಷಾ ಪೊರ್ವಾಲ್ ಜೊತೆ ಸೇರಿ ಸ್ಥಾಪಿಸಿದ ಉದ್ಯಮ ಜನತಾ ಮೀಲ್ಸ್.
ಡಿಸೆಂಬರ್ ೨೦೧೪ರ ಮೂರನೇ ವಾರದಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಳ್ಳಸಾಗಾಟದ ೧೬ ಟನ್ ರಕ್ತಚಂದನದ ಬೆಲೆ ರೂ.೪೭ ಕೋಟಿ (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ).
ಕಳ್ಳಸಾಗಣೆದಾರರ ಒಂದು ಗ್ಯಾಂಗ್ ತುಮಕೂರು ಜಿಲ್ಲೆಯ ಸಿರಾದಿಂದ, ಇನ್ನೊಂದು ಗ್ಯಾಂಗ್ ಹೊಸಕೋಟೆಯ ಕಟ್ಟಿಗೇನ ಹಳ್ಳಿಯಿಂದ ಈ ಕಳ್ಳವ್ಯವಹಾರ ನಡೆಸುತ್ತಿತ್ತು. ಪೊಲೀಸರು ಕಳ್ಳಸಾಗಣೆದಾರರ ಸೋಗು ಹಾಕಿ, ಗ್ಯಾಂಗ್ಗಳನ್ನು ಸಂಪರ್ಕಿಸಿದ್ದರಿಂದ ಭಾರೀ ಕಳ್ಳಮಾಲು ವಶಪಡಿಸಿಕೊಳ್ಳಲು ಸಾಧ್ಯವಾಯಿತು.
ನಾಲ್ಕು ತಿಂಗಳ ಮುಂಚೆ, ೨೦ ಆಗಸ್ಟ್ ೨೦೧೪ರಂದು ಮಂಗಳೂರು ಬಂದರಿನಲ್ಲಿಯೂ ೧೭ ಟನ್ ಅಕ್ರಮ ಸಾಗಾಟದ ರಕ್ತಚಂದನ ವಶ. ಆ ರೋಚಕ ಪ್ರಕರಣ, ಡಿಆರ್ಎ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳ ಕಾರ್ಯಾಚರಣೆಯ ಫಲ. ಎಂವಿ ಟೈಗರ್ ಮ್ಯಾಂಗೊ ಎಂಬ ಹಡಗಿನಲ್ಲಿ ಮೀನಿನೆಣ್ಣೆ, ಗೇರುಬೀಜ ಇತ್ಯಾದಿಗಳ ಕನ್ಟೈನರುಗಳನ್ನು ಮಂಗಳೂರಿನಿಂದ ಶ್ರೀಲಂಕಾಕ್ಕೆ ಸಾಗಿಸಲಾಗಿತ್ತು. ಅದರ ಒಂದು ಕನ್ಟೈನರಿನಲ್ಲಿ ೧೭ ಟನ್ ರಕ್ತಚಂದನ ಇದೆಯೆಂದು ಆ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಹಾಗಾಗಿ, ಅದನ್ನು ಅದೇ ಹಡಗಿನಲ್ಲಿ ಮುಂದಿನ ಟ್ರಿಪ್ನಲ್ಲಿ ಮಂಗಳೂರು ಬಂದರಿಗೆ ತರಿಸಿಕೊಂಡು, ಇಲ್ಲಿ ವಶಪಡಿಸಿಕೊಂಡರು. ಆ ಕನ್ಟೈನರಿನಲ್ಲಿದ್ದ ರಕ್ತಚಂದನವನ್ನು ಬೆಂಗಳೂರಿನಿಂದ ಮಂಗಳೂರಿಗೆ ಟ್ರಕ್ಕಿನಲ್ಲಿ ಕಳ್ಳಸಾಗಾಟ ಮಾಡಲಾಗಿತ್ತು.
ಭಾರತ ಲಕ್ಷಾಂತರ ಭತ್ತದ ದೇಸಿ ತಳಿಗಳ ತವರೂರಾಗಿತ್ತು. ೧೯೯೦ರ ದಶಕದ ವರೆಗೂ ಭಾರತದ ವಿವಿಧ ಭಾಗಗಳಲ್ಲಿ ಬೆಳೆಯುತ್ತಿದ್ದ ಭತ್ತದ ತಳಿಗಳ ಸಂಖ್ಯೆ ಎರಡು ಲಕ್ಷ. ಅಂದರೆ, ದಿನಕ್ಕೊಂದು ತಳಿಯ ಭತ್ತದ ಅನ್ನ ಉಂಡರೂ, ೫೦೦ ವರುಷಗಳ ದೀರ್ಘ ಅವಧಿಯಲ್ಲಿ ಒಮ್ಮೆ ಉಂಡ ತಳಿಯ ಅನ್ನ ಇನ್ನೊಮ್ಮೆ ಉಣ್ಣ ಬೇಕಾಗಿಲ್ಲ!
ವೇದಗಳ ಕಾಲದಲ್ಲಿ ಭಾರತದಲ್ಲಿದ್ದ ದೇಸಿ ಭತ್ತದ ತಳಿಗಳ ಸಂಖ್ಯೆ ನಾಲ್ಕು ಲಕ್ಷ ಎಂದು ಅಂದಾಜಿಸಿದ್ದಾರೆ ಹೆಸರುವಾಸಿ ಭತ್ತವಿಜ್ನಾನಿ ಆರ್. ಎಚ್. ರಿಚಾರಿಯಾ. ಎಂತಹ ಅಗಾಧ ತಳಿ ವೈವಿಧ್ಯ!
ಆಯುರ್ವೇದ ಮತ್ತು “ಸಿದ್ಧ”ದ ಪುರಾತನ ಗ್ರಂಥಗಳಲ್ಲಿ ಭತ್ತದ ತಳಿಗಳ ಬಗ್ಗೆ ಇರುವ ಮಾಹಿತಿ ಅಪಾರ. ವಿವಿಧ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳ ಮತ್ತು ಪೋಷಕಾಂಶಗಳ ವಿವರ ಅವುಗಳಲ್ಲಿದೆ. ರೋಗನಿರೋಧ ಶಕ್ತಿ, ದೇಹದ ಮಾಂಸಖಂಡ, ತಲೆಗೂದಲ ಬೆಳವಣಿಗೆ - ಇವನ್ನು ಹೆಚ್ಚಿಸಿಬಲ್ಲ ತಳಿಗಳು, ಚರ್ಮರೋಗಗಳು/ ಕಣ್ಣಿನ ತೊಂದರೆ ನಿವಾರಿಸಬಲ್ಲ ತಳಿಗಳು – ಹೀಗೆ ವಿಭಿನ್ನ ಗುಣವಿಶೇಷಗಳ ದೇಸಿ ಭತ್ತದ ತಳಿಗಳ ಖಜಾನೆಯಾಗಿತ್ತು ನಮ್ಮ ದೇಶ.
ಆದರೆ ಕೆಲವು ರೈತರು ಮಾತ್ರ ದೇಸಿ ಭತ್ತದ ತಳಿವಿವಿಧತೆಗೆ ಬೆಲೆ ಕಟ್ಟಲಾಗದು ಎಂದು ಅರಿತಿದ್ದಾರೆ. ಬಹುಪಾಲು ರೈತರು ದೇಸಿ ತಳಿಗಳ ಸಂರಕ್ಷಣೆಗೆ ಕಾಳಜಿ ತೋರಲಿಲ್ಲ. ಅದರಿಂದಾಗಿ, ಲಕ್ಷಗಟ್ಟಲೆ ದೇಸಿ ಭತ್ತದ ತಳಿಗಳನ್ನು ಶಾಶ್ವತವಾಗಿ ಕಳೆದು ಕೊಂಡೆವು.
ಇದೀಗ, ಚೆನ್ನೈಯ ಒಂದು ಸಂಸ್ಥೆ ದೇಸಿ ಭತ್ತದ ತಳಿಗಳ ಪುನರುಜ್ಜೀವನಕ್ಕೆ ಟೊಂಕ ಕಟ್ಟಿದೆ. ಅದುವೇ, ಸೆಂಟರ್ ಫಾರ ಇಂಡಿಯನ್ ನಾಲೆಜ್ ಸಿಸ್ಟಮ್ಸ್ (ಸಿ.ಐ.ಕೆ.ಎಸ್.). ಈ ಸಂಸ್ಥೆ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳು ಮತ್ತು ಪೋಷಕಾಂಶಗಳ ದಾಖಲೀಕರಣ ಮತ್ತು ಸಂಶೋಧನೆ ಮಾಡುತ್ತಿದೆ. ಇತ್ತೀಚೆಗೆ ಸಿ.ಐ.ಕೆ.ಎಸ್. ಸಂಶೋಧನೆಯೊಂದನ್ನು ಪೂರೈಸಿದೆ. ಈ ಸಂಶೋಧನೆಯ ಫಲಿತಾಂಶಗಳು ನಾವು ಯಾವ ಅನ್ನ ಉಣ್ಣುತ್ತೇವೆ ಎಂಬ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸಬಲ್ಲವು.
ಸಸ್ಯಗಳಲ್ಲಿ ನಡೆಯುವ ಪ್ರಧಾನ ಕ್ರಿಯೆ ದ್ಯುತಿಸಂಶ್ಲೇಷಣೆ – ಸೂರ್ಯನ ಬೆಳಕು ಮತ್ತು ಇಂಗಾಲದ ಡೈಆಕ್ಸೈಡ್ ಬಳಸಿ ನಡೆಯುವ ಕ್ರಿಯೆ. ಇದರ ದಕ್ಷತೆಯನ್ನು ಹಲವು ಪಟ್ಟು ಹೆಚ್ಚಿಸಿದರೆ ಏನಾದೀತು? ಗೋಧಿ, ಭತ್ತ ಇತ್ಯಾದಿ ಬೆಳೆಗಳ ಇಳುವರಿ ಶೇಕಡಾ 36ರಿಂದ ಶೇಕಡಾ 60 ಜಾಸ್ತಿಯಾದೀತು.
ಇದೇನು ಕನಸೇ? ಅಲ್ಲಲ್ಲ, ಇದೀಗ ಎರಡು ಹಂತಗಳನ್ನು ದಾಟಿ ಕೊನೆಯ ಹಂತಕ್ಕೆ ಬಂದಿರುವ ಸಂಶೋಧನೆ. (ಇದರ ಫಲಿತಾಂಶಗಳು “ನೇಚರ್” ನಿಯತಕಾಲಿಕದಲ್ಲಿ ಪ್ರಕಟವಾಗಿವೆ.) ಇದು ಯಶಸ್ವಿಯಾದರೆ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ನೀರಿನ ಬಳಕೆಯೂ ಕಡಿಮೆಯಾಗಲಿದೆ.
ಈ ಸಂಶೋಧನೆಯ (ಎರಡನೇ ಹಂತದ) ಅಂಗವಾಗಿ, ೨೦೧೪ರಲ್ಲಿ ಸೈಯಾನೋ ಬ್ಯಾಕ್ಟೀರಿಯಾದಿಂದ ಜೀನುಗಳನ್ನು ವಿಜ್ನಾನಿಗಳು ತಂಬಾಕು ಸಸ್ಯಗಳಿಗೆ ವರ್ಗಾಯಿಸಿದ್ದಾರೆ – ಕೊರ್ನೆಲ್ ವಿಶ್ವವಿದ್ಯಾಲಯ ಮತ್ತು ಬ್ರಿಟನಿನ ರೊಥಂಸ್ಟೆಡ್ ಸಂಶೋಧನಾ ಸಂಸ್ಥೆಯ ವಿಜ್ನಾನಿಗಳು. ಸಸ್ಯಗಳು ಅಧಿಕ ದಕ್ಷತೆಯ ಕಿಣ್ವ (ಎನ್ಜೈಮ್) ಉತ್ಪಾದಿಸಲು ಈ ಜೀನುಗಳು ಉತ್ತೇಜಿಸುತ್ತವೆ. ವಾತಾವರಣದ ಇಂಗಾಲದ ಡೈಆಕ್ಸೈಡನ್ನು ಸಕ್ಕರೆ ಮತ್ತು ಇತರ ಶರ್ಕರಪಿಷ್ಟಗಳಾಗಿ ಸಸ್ಯಗಳು ಪರಿವರ್ತಿಸಲು ಈ ಕಿಣ್ವ ಕಾರಣ.
ಆ ಪರಿವರ್ತನೆಯನ್ನು ಕೆಲವು ಸಸ್ಯಗಳು ಹೆಚ್ಚು ದಕ್ಷತೆಯಿಂದ ಮಾಡುತ್ತವೆ ಎಂಬುದು ಹಲವು ದಶಕಗಳಿಂದ ವಿಜ್ನಾನಿಗಳಿಗೆ ಗೊತ್ತು. ಇಂತಹ ವೇಗವಾಗಿ ಬೆಳೆಯುವ ಸಸ್ಯಗಳಿಗೆ (ಕಾರ್ನ್ ಮತ್ತು ಹಲವು ಕಳೆಗಿಡಗಳು) ವಿಜ್ನಾನಿಗಳಿತ್ತ ಹೆಸರು ಸಿ-4 ಸಸ್ಯಗಳು. ಆದರೆ ಭೂಮಿಯ ಶೇಕಡಾ 75 ಸಸ್ಯಗಳು ಸಿ-3 ವರ್ಗದವು; ಇವು ನಿಧಾನವಾಗಿ ಮತ್ತು ಕಡಿಮೆ ದಕ್ಷತೆಯಿಂದ ದ್ಯುತಿಸಂಶ್ಲೇಷಣೆ ಮಾಡುತ್ತವೆ.
ಈ ನಿಟ್ಟಿನಲ್ಲಿ, ಹಲವಾರು ವರುಷಗಳಿಂದ ವಿಜ್ನಾನಿಗಳು ದೊಡ್ಡ ಪ್ರಯತ್ನದಲ್ಲಿ ಮುಳುಗಿದ್ದಾರೆ: ಗೋಧಿ, ಭತ್ತ, ಬಟಾಟೆ ಸಹಿತ ಕೆಲವು ಮುಖ್ಯ ಸಸ್ಯಗಳನ್ನು ಸಿ-3 ವರ್ಗದಿಂದ ಸಿ-4 ವರ್ಗಕ್ಕೆ ಪರಿವರ್ತಿಸುವ ಪ್ರಯತ್ನದಲ್ಲಿ. ಇತ್ತೀಚೆಗೆ ಅತಿ ನಿಖರವಾದ ಜೀನ್ ಬದಲಾವಣೆ ತಂತ್ರಜ್ನಾನ ಬಳಸಿ “ಸಿ-4 ಭತ್ತ ಯೋಜನೆ”ಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ.
ಸಕ್ಕರೆ ಕಾಹಿಲೆ ಬಾಧಿತರಿಗೊಂದು ಸಿಹಿ ಸುದ್ದಿ: ಹಸುರು (ಅಂದರೆ ಹುರಿಯದ) ಕಾಫಿ ಬೀಜಗಳಿಂದ ತೆಗೆಯಲಾದ ಸಾರವು ರಕ್ತದ ಸಕ್ಕರೆಯಂಶ ನಿಯಂತ್ರಿಸುವ ಮೂಲಕ ಸಕ್ಕರೆ ಕಾಯಿಲೆ ಹತೋಟಿ ಮಾಡುತ್ತದೆಯೆಂದು ಅಧ್ಯಯನದಿಂದ ತಿಳಿದು ಬಂದಿದೆ.
ಅಮೇರಿಕಾದ ಯುಎಸ್ಎ ದೇಶದ ಪೆನ್ಸಿಲವೇನಿಯಾದ ಸ್ಕ್ರಾನ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಜೋ ವಿನ್ಸನ್ ನಡೆಸಿದ ಅಧ್ಯಯನದಿಂದ ತಿಳಿದ ವಿಷಯ ಹೀಗಿದೆ: ಹಸುರುಕಾಫಿ ಬೀಜಗಳಲ್ಲಿರುವ ಕ್ಲೊರೊಜೆನಿಕ್ ಆಮ್ಲವು ರಕ್ತದಲ್ಲಿ ಹೆಚ್ಚಾದ ಸಕ್ಕರೆಯಂಶ ಮತ್ತು ದೇಹತೂಕವನ್ನು ಕಡಿಮೆ ಮಾಡುತ್ತದೆ.
ಕ್ಲೊರೊಜೆನಿಕ್ ಆಮ್ಲಗಳು ಸೇಬು, ಚೆರ್ರಿ, ಪ್ಲಮ್ ಇತ್ಯಾದಿ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿರುವ ಅಂಶ. ಕಾಫಿ ಬೀಜಗಳು ಕ್ಲೊರೊಜೆನಿಕ್ ಆಮ್ಲಗಳ ಪ್ರಧಾನ ಆಕರ. ಹಸುರುಕಾಫಿ ಬೀಜಗಳಲ್ಲಿ ಇದರ ಪರಿಮಾಣ ಜಾಸ್ತಿ. ಆದರೆ ಅಧಿಕ ಉಷ್ಣತೆಯಲ್ಲಿ ಕಾಫಿಬೀಜಗಳನ್ನು ಹುರಿಯುವಾಗ (ಕಾಫಿಹುಡಿ ಮಾಡಲಿಕ್ಕಾಗಿ) ಅದರಲ್ಲಿರುವ ಈ ಆಮ್ಲದಂಶ ಕಡಿಮೆಯಾಗುತ್ತದೆ.
ಆದ್ದರಿಂದ, ಸಕ್ಕರೆ ಕಾಯಿಲೆ ನಿಯಂತ್ರಿಸಲಿಕ್ಕಾಗಿ ಹಸುರು ಕಾಫಿಬೀಜಗಳ ಸಾರ ಸೇವಿಸುವುದು ಪರಿಣಾಮಕಾರಿ. ಹಲವರು ಜನರ ಮೇಲೆ ನಡೆಸಿದ ಇನ್ನೊಂದು ಅಧ್ಯಯನದ ಫಲಿತಾಂಶ ಹೀಗಿದೆ ಎನ್ನುತ್ತಾರೆ ವಿನ್ಸನ್, “ಪ್ರತಿದಿನ ಎರಡು ಕಪ್ ಕಾಫಿ ಕುಡಿಯುವವರಿಗೆ ಹೋಲಿಸಿದಾಗ, ಏಳು ಕಪ್ ಕಾಫಿ ಕುಡಿಯುವವರಿಗೆ ಸಕ್ಕರೆ ಕಾಯಿಲೆ ಬಾಧಿಸುವ ಅಪಾಯ ಶೇಕಡಾ ೫೦ರಷ್ಟು ಕಡಿಮೆ”.
ಕ್ಲೊರೊಜೆನಿಕ್ ಆಮ್ಲಗಳು ಸಕ್ಕರೆಕಾಯಿಲೆ ಬಾಧಿತರಲ್ಲಿ ಮತ್ತು ಆ ಕಾಯಿಲೆ ಇಲ್ಲದವರಲ್ಲಿ ಒಂದೇ ರೀತಿಯ ಪರಿಣಾಮ ಉಂಟು ಮಾಡುತ್ತವೆ. ಇದರ ಸಾರ ಸೇವಿಸಿದ ಅಧಿಕ ದೇಹತೂಕದ ವ್ಯಕ್ತಿಗಳ ದೇಹತೂಕ ೨೨ ವಾರಗಳಲ್ಲಿ ಶೇಕಡಾ ೧೦ ಕಡಿಮೆಯಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದ ಸಹಜ (ನಾರ್ಮಲ್) ರಕ್ತದ ಸಕ್ಕರೆಯಂಶ ಹೊಂದಿದ ಮಹಿಳೆಯರು ಮತ್ತು ಪುರುಷರ ಸಂಖ್ಯೆ ೫೬.
ಜಗತ್ತಿನಲ್ಲೆಡೆ ಕೃಷಿ ಮತ್ತು ವಿಜ್ನಾನ ರಂಗದಲ್ಲಿ ಅಲ್ಲೋಲಕಲ್ಲೋಲವಾದದ್ದು ಜೂನ್ ೨೦೧೩ರಲ್ಲಿ. ಅದಕ್ಕೆ ಕಾರಣ: ಅಮೇರಿಕಾದ ಯುಎಸ್ ದೇಶದ ಒರೆಗಾಂವ್ ಪ್ರಾಂತ್ಯದ ಹೊಲವೊಂದರಲ್ಲಿ ಬೆಳೆಯುತ್ತಿದ್ದ ಗೋಧಿಯ ಜೈವಿಕ ಮಾರ್ಪಾಡಾದ (ಜೈಮಾ) ಸಸಿಗಳು ಪತ್ತೆಯಾದದ್ದು.
ಆ ಕಳೆನಾಶಕ - ಸಹನೀಯವಾದ (ಹರ್ಬಿಸೈಡ್ – ಟಾಲರೆಂಟ್) ಜೈಮಾ ಗೋಧಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಮೊನ್ಸಾಂಟೊ ಕಂಪೆನಿ. (ಅದು ಜಗತ್ತಿನ ಅತಿ ದೊಡ್ಡ ಕೃಷಿಜೈವಿಕ ತಂತ್ರಜ್ನಾನ ಕಂಪೆನಿ) ಆದರೆ, ಆ ತಳಿಗೆ ಯುಎಸ್ಡಿಎ (ಯುಎಸ್ ದೇಶದ ಕೃಷಿ ಇಲಾಖೆ)ಯ ಪರವಾನಗಿ ಇರಲಿಲ್ಲ. ಆ ತಳಿಯ ಕ್ಷೇತ್ರಪ್ರಯೋಗ ನಿಲ್ಲಿಸಿ ಒಂಭತ್ತು ವರುಷಗಳ ಬಳಿಕ ಅಲ್ಲಿಯ ರೈತನೊಬ್ಬನ ಹೊಲದಲ್ಲಿ ಅದು ಅಚಾನಕ್ ಕಂಡುಬಂದದ್ದು ಜಗತ್ತಿನ ಕೃಷಿ ಮತ್ತು ವಿಜ್ನಾನ ರಂಗವನ್ನು ತಲ್ಲಣಗೊಳಿಸಿದೆ.
ಜೈಮಾ ಗೋಧಿಯನ್ನು ಜಗತ್ತಿನಲ್ಲಿ ಎಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ ಬಿಡುಗಡೆ ಮಾಡಿಲ್ಲ. ಆದ್ದರಿಂದಲೇ ಈ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ಕಂಡುಬಂದಿದೆ: ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಗೋಧಿ ಆಮದನ್ನು ತಕ್ಷಣವೇ ತಡೆಹಿಡಿದವು. ಯುಎಸ್ ದೇಶದ ಮೃದು ಬಿಳಿ ಗೋಧಿಯನ್ನು ಪರೀಕ್ಷಿಸಿದ ನಂತರವೇ ಆಮದು ಮಾಡಿಕೊಳ್ಳ ಬೇಕೆಂದು ಯುರೋಪಿಯನ್ ಯೂನಿಯನ್ ತನ್ನ ಸದಸ್ಯ ದೇಶಗಳಿಗೆ ಸಲಹೆ ನೀಡಿತು.
ಯುಎಸ್ ದೇಶದ ಈ ಪ್ರಕರಣ ಜೈಮಾ ಬೆಳೆಗಳ ಸುರಕ್ಷಿತತೆ ಬಗ್ಗೆ ಇಡೀ ಜಗತ್ತಿನಲ್ಲಿ ಇನ್ನೊಮ್ಮೆ ವಾದವಿವಾದಕ್ಕೆ ಕಾರಣವಾಯಿತು. ಯಾಕೆಂದರೆ, ಬೇರೆಬೇರೆ ದೇಶಗಳಲ್ಲಿ ಪರವಾನಗಿಯಿಲ್ಲದ ಜೈಮಾ ಬೆಳೆಗಳು ಪತ್ತೆಯಾಗುತ್ತಲೇ ಇವೆ. ಭಾರತದಲ್ಲಿಯೂ ಇದೇ ಕತೆ. ಇಲ್ಲಿನ ಮೂರು ರಾಜ್ಯಗಳಲ್ಲಿ, ಮೊನ್ಸಾಂಟೊದ “ರೌಂಡಪ್ ರೆಡಿ” ಗುಣದ ಜೈಮಾ ಹತ್ತಿಬೀಜಗಳನ್ನು ಪರವಾನಗಿ ಇಲ್ಲದಿದ್ದರೂ ಮಾರಲಾಗುತ್ತಿದೆ! ಭಾರತದ ಜಿಇಎಸಿ (ಜೆನೆಟಿಕ್ ಎಂಜಿನಿಯರಿಂಗ್ ಎಪ್ರೈಸಲ್ ಕಮಿಟಿ) ಹಲ್ಲಿಲ್ಲದ ಹುಲಿಯಂತಾಗಿದೆ.
ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ?
ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ ಪೂರ್ವ ಗಡಿಯಲ್ಲಿರುವ ಬಲ್ಲಿಯಾ ಜಿಲ್ಲೆಯ ಸಣ್ಣರೈತರು ಸುಮಾರು ಒಂದು ನೂರು ವರುಷಗಳಿಂದ ಬೆಳೆಸಿ, ಸುಧಾರಿಸಿ, ಕಾಪಾಡಿದ ಬಾರ್ಲಿಯನ್ನು. ಆದರೆ ಒಂದು ಶತಮಾನಕ್ಕಿಂತ ಅಧಿಕ ಅವಧಿಯಲ್ಲಿ ಆ ಬಾರ್ಲಿ ತಳಿಯನ್ನು ಜೋಪಾನವಾಗಿ ರಕ್ಷಿಸಿದ ಸಣ್ಣರೈತರಿಗೆ ಇದಕ್ಕಾಗಿ ಕಿಂಚಿತ್ ರಾಯಧನ ಪಾವತಿಯಾಗಿಲ್ಲ. ಅದು ಹಾಗಿರಲಿ, ಇದೀಗ ಆ ಬಾರ್ಲಿ ತಳಿಯು ಸಪ್ಪೊರೊ ಕಂಪೆನಿಯ ಬೌದ್ಧಿಕ ಸೊತ್ತಾಗಿದೆ!
ಮಾದಕ ಪೇಯ ಬಿಯರಿನ ಮಾಲ್ಟಿಂಗ್ ಗುಣಮಟ್ಟವನ್ನು ಹೆಚ್ಚಿಸಿ, ಅದರ “ಬಳಸಲು ಯೋಗ್ಯ ಅವಧಿ” (ಶೆಲ್ಫ್ ಲೈಫ್)ಯನ್ನು ಹೆಚ್ಚಿಸುವ ಜೀನಿಗೆ ಸಪ್ಪೊರೋ ಕಂಪೆನಿಯು ಪೇಟೆಂಟ್ ಪಡೆದುಕೊಂಡಿದೆ. ಜಾಗತಿಕ ದೈತ್ಯ ಧಾನ್ಯ ಕಂಪೆನಿ ಕಾರ್ಗಿಲ್ ಮತ್ತು ಕೆನಡಾದ ಸಾಸ್ಕತಚೆವಾನ್ ವಿಶ್ವವಿದ್ಯಾಲಯದ ಜೊತೆಯಲ್ಲಿ ಸಪ್ಪೊರೊ ಕಂಪೆನಿ ಕೆಲಸ ಮಾಡುತ್ತಿದೆಯೆಂದು ತಿಳಿದು ಬಂದಿದೆ – ಆ ಜೀನ್ ಒಳಗೊಂಡ ಖಾಸಗಿ ಮಾಲೀಕತ್ವದ ಬಾರ್ಲಿ ತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ.
ಪೊಲಾರ್ ಸ್ಟಾರ್ ಎಂಬ ಹೆಸರಿನ ಆ ತಳಿಯನ್ನು ಸಪ್ಪೊರೊ ಕಂಪೆನಿಯ ಬಿಯರ್ ಉತ್ಪಾದಕ ಘಟಕಗಳಿಗಾಗಿ ಕೆನಡಾದಲ್ಲಿ ಬೆಳೆಯಲಾಗುತ್ತಿದೆ. ಬೃಹತ್ ಕಂಪೆನಿಗಳು ಜೈವಿಕ ಸಂಪನ್ಮೂಲಗಳ ಅನ್ಯಾಯದ ಬಳಕೆ ಮಾಡುವುದದ ಬಗ್ಗೆ ಸಂಶೋಧನೆ ನಡೆಸುವ ಎಡ್ವರ್ಡ್ ಹ್ಯಾಮ್ಮೊಂಡ್ ಎಂಬ ಪರಿಣತರು ಈ ಪ್ರಕರಣದ ಬಗ್ಗೆ ತಿಳಿಸಿದ ಅಭಿಪ್ರಾಯ ಹೀಗಿದೆ: ಬಿಯರ್ ಉತ್ಪಾದಕರ ಅಚ್ಚುಮೆಚ್ಚಿನ ಈ ಜೀನ್ ಬೆಳಕಿಗೆ ಬಂದದ್ದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ರೈತರ ಮತ್ತು ಸರಕಾರಿ ಸಂಸ್ಥೆಗಳ ವಿಜ್ನಾನಿಗಳ ಪ್ರಯತ್ನದಿಂದಾಗಿ.
"ಈ ವರುಷ ನಮ್ಮ ದೇಶದ ೧೬೧ ಜಿಲ್ಲೆಗಳಲ್ಲಿ ಬರಗಾಲ ಸಂಭವ. ಬೀಜ ಬಿತ್ತನೆ ಆಗಬೇಕಿದ್ದ ಶೇಕಡಾ ೨೦ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ" ಎಂದು ಕೇಂದ್ರ ವಿತ್ತ ಸಚಿವರು ತಿಳಿಸಿದ್ದಾರೆ. ಕರ್ನಾಟಕ ಸರಕಾರವು ೨೦ ಜಿಲ್ಲೆಗಳ ೮೬ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.(೧೨ ಆಗಸ್ಟ್ ೨೦೦೯ರ ಪತ್ರಿಕಾ ವರದಿ) ಹಾಗಂತ, ನೀರನ್ನು ತಯಾರಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಹಾಗಾದರೆ, ನಾವೇನು ಮಾಡಬಹುದು?
ನಮಗೆ ಈಗ ಬೇಕಾಗಿರುವುದು ಸುರಕ್ಷಿತ ಭವಿಷ್ಯಕ್ಕಾಗಿ ಒಂದು "ನೀರಿನ ಧೋರಣೆ". ಅದರ ಆರು ಮುಖ್ಯ ಅಂಶಗಳ ಬಗ್ಗೆ ಚಿಂತಿಸೋಣ.
ಒಂದನೆಯದಾಗಿ, ನಮ್ಮ ದೇಶದಲ್ಲೊಂದು ನೀರಿನ ಮಾಹಿತಿ ಮಿಷನ್ ಅಗತ್ಯ. ದೇಶದ ಯಾವ ಭಾಗದಲ್ಲಿ ನೀರಿನ ಪರಿಸ್ಠಿತಿ ಹೇಗಿದೆ? ನಮಗೆ ಗೊತ್ತಿಲ್ಲ. ಈ ಮಿಷನ್ ಆ ಮಾಹಿತಿ ಒದಗಿಸಬೇಕು - ಉಪಗ್ರಹ ಮತ್ತು ಅಂತರ್ಜಲ ಸಂವೇದಿ ಉಪಕರಣಗಳ ಸಹಾಯದಿಂದ. ನೀರಿನ ಕೊರತೆ ಉಂಟಾಗಬಹುದಾದ ಸ್ಥಳಗಳ ಮನೆಮನೆಗೆ ಹಾಗೂ ಪ್ರತಿಯೊಬ್ಬ ರೈತನಿಗೆ ಈ ಮಿಷನ್ ಮಾಹಿತಿ ನೀಡಿ ಎಚ್ಚರಿಸಬೇಕು.
ಎರಡನೆಯದಾಗಿ, ನೀರಿನ ಬಳಕೆಗಾಗಿ ಯೋಜನೆ ಅಗತ್ಯ: ಪ್ರತಿಯೊಂದು ಹಳ್ಳಿಗೆ, ನಗರಕ್ಕೆ ಮತ್ತು ಕಾರ್ಖಾನೆಗೆ. ಗ್ರಾಮ ಪಂಚಾಯತಿ ಕಚೇರಿ ಮತ್ತು ಶಾಲೆಯ ಗೋಡೆಗಳಲ್ಲಿ ಇರಬೇಕು - ಅಲ್ಲಿಯ ಬಾವಿಗಳ ಭೂಪಟ ಮತ್ತು ಬಾವಿಗಳ ನೀರಿನ ಮಟ್ಟದ ಮಾಹಿತಿ. ಆಯಾ ಹಳ್ಳಿಯ ನೆಲದಡಿಯ ನೀರಿನಾಸರೆಗಳಿಗೆ ಏನಾಗುತ್ತಿದೆ? ಇದು ಅಲ್ಲಿನ ಎಲ್ಲರಿಗೂ ತಿಳಿದಿರಬೇಕು - ಬಳಕೆ ವಿಧಾನದಲ್ಲಿ ಬದಲಾವಣೆ ರೂಪಿಸಲಿಕ್ಕಾಗಿ.
ಅದಲ್ಲದೆ, ಹಳ್ಳಿಹಳ್ಳಿಯ ಪ್ರತಿಯೊಬ್ಬರಿಗೂ ಗೊತ್ತಿರಬೇಕು - ಅಲ್ಲಿ ಬಿದ್ದ ಮಳೆನೀರು ಏನಾಗುತ್ತಿದೆ? ಅಲ್ಲೆಲ್ಲ ನೆಲದಾಳದಿಂದ ನೀರು ಎತ್ತುತ್ತಲೇ ಇದ್ದೇವೆ. ಆದರೆ ನಮಗೆ ಗೊತ್ತಿಲ್ಲ: ನಮ್ಮ ಹಳ್ಳಿ ಅಥವಾ ಊರಿನಲ್ಲಿ ಎಷ್ಟು ತೆರೆದ ಬಾವಿ ಹಾಗೂ ಕೊಳವೆಬಾವೆಗಳಿವೆ? ಅವುಗಳ ನೀರಿನ ಮಟ್ಟ ಹಾಗೂ ನೀರಿನ ಗುಣಮಟ್ಟ ವರುಷದಿಂದ ವರುಷಕ್ಕೆ ಹೇಗೆ ಕುಸಿಯುತ್ತಿದೆ? ಈ ಮಾಹಿತಿ ಸಂಗ್ರಹಿಸಿ, ಸಮುದಾಯಕ್ಕೆ ತಿಳಿಸಿದರೆ ಹನಿಹನಿ ಮಳೆನೀರ ಕೊಯ್ಲಿಗೆ ಜನ ತಯಾರಾಗುತ್ತಾರೆ.
ಯಾರನ್ನೇ ಕೇಳಿ: ನಿಮ್ಮ ಬೆಳ್ಳಿಬಂಗಾರ, ಮನೆ, ಆಸ್ತಿಪಾಸ್ತಿ, ಬ್ಯಾಂಕ್‍ಬ್ಯಾಲೆನ್ಸ್ - ಇವೆಲ್ಲ ಯಾರಿಗಾಗಿ? "ನಮ್ಮ ಮಕ್ಕಳಿಗಾಗಿ" ಅಂತಾರೆ. ಮಕ್ಕಳಿಗಾಗಿ ಇವನ್ನೆಲ್ಲ ಜೋಪಾನವಾಗಿ ಕೂಡಿಡುವ ನಾವು, ಅವರಿಗೆ ನೀರು ಸಿಕ್ಕೀತೇ? ಎಂದು ಯಾವತ್ತಾದರೂ ಚಿಂತಿಸಿದ್ದೇವೆಯೇ?
ಇನ್ನಾದರೂ ಚಿಂತಿಸಬೇಕಾಗಿದೆ. ಯಾಕೆಂದರೆ ಆಗಸ್ಟ್ ೧೨, ೨೦೦೯ರ ಪತ್ರಿಕಾ ವರದಿ (ಡೆಕ್ಕನ್ ಹೆರಾಲ್ಡ್, ಪುಟ ೯) ನಮ್ಮ ಮಕ್ಕಳ ಕಾಲದಲ್ಲಿ ನೀರಿನ ಪರಿಸ್ಥಿತಿ ಹೇಗಿರುತ್ತದೆ? ಎಂಬ ಚಿತ್ರಣ ನೀಡಿದೆ.
ಅದು, ನಾಸಾ (ಎನ್‍ಎಎಸ್‍ಎ) ಉಪಗ್ರಹ ತೆಗೆದ ಪೋಟೋಗಳನ್ನು ಅಧ್ಯಯನ ಮಾಡಿ, ಯುಎಸ್‍ಎ ದೇಶದ ಪರಿಣತರು ಸಿದ್ಧಪಡಿಸಿದ ವರದಿ. ಮೂಲತಃ "ನೇಚರ್" ಪತ್ರಿಕೆಯಲ್ಲಿ ಪ್ರಕಟವಾಗಿರುವ ಆ ವರದಿಯ ಸತ್ಯಾಸತ್ಯತೆ ಬಗ್ಗೆ ಸಂದೇಹ ಪಡಬೇಕಾಗಿಲ್ಲ. ಅದರ ಪ್ರಕಾರ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಡೆಲ್ಲಿಯಲ್ಲಿ ೨೦೦೨ರಿಂದ ೨೦೦೮ರ ತನಕ, ಅಂತರ್ಜಲ ಮಟ್ಟ ಕುಸಿದಿದೆ; ವರುಷಕ್ಕೆ ೪ ಸೆಂಟಿಮೀಟರಿನಂತೆ ಒಟ್ಟು ೨೪ ಸೆಮೀ ಕುಸಿದಿದೆ.
ಇದರ ಅರ್ಥವೇನು? ಆ ಪ್ರದೇಶಗಳು ವರುಷಕ್ಕೆ ೧೮ ಘನ ಕಿ.ಮೀ.ನಂತೆ, ೬ ವರುಷಗಳಲ್ಲಿ ೧೦೯ ಘನ ಕಿ.ಮೀ. ನೀರು ಕಳೆದುಕೊಂಡಿವೆ. ಇದು ಭಾರತದ ಅತಿ ದೊಡ್ಡ ಜಲಾಶಯ (ಮಧ್ಯಪ್ರದೇಶದ ಅಪ್ಪರ್ ವಾಯಿನ್‍ಗಂಗಾ ಜಲಾಶಯ)ದಲ್ಲಿರುವ ನೀರಿನ ಪರಿಮಾಣಕ್ಕಿಂತ ಜಾಸ್ತಿ!
ಅಂತರ್ಜಲ ಮಟ್ಟದ ಇಂತಹ ಆತಂಕಕಾರಿ ಕುಸಿತದ ಪರಿಣಾಮಗಳೇನು? ಅಲ್ಲಿನ ಸುಮಾರು ೧೧ ಕೋಟಿ ನಿವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾದೀತು. ಮಾತ್ರವಲ್ಲ, ಕೃಷಿಗೆ ನೀರು ಸಾಕಾಗದೆ ಆಹಾರದ ಕೊರತೆ ಎದುರಾದೀತು.