ನಿಮ್ಮ ಕೈಯಲ್ಲಿದೆ: ದೇಸಿ ಭತ್ತದ ತಳಿಗಳ ಅನ್ನದ ಆಯ್ಕೆ


ಭಾರತ ಲಕ್ಷಾಂತರ ಭತ್ತದ ದೇಸಿ ತಳಿಗಳ ತವರೂರಾಗಿತ್ತು. ೧೯೯೦ರ ದಶಕದ ವರೆಗೂ ಭಾರತದ ವಿವಿಧ ಭಾಗಗಳಲ್ಲಿ ಬೆಳೆಯುತ್ತಿದ್ದ ಭತ್ತದ ತಳಿಗಳ ಸಂಖ್ಯೆ ಎರಡು ಲಕ್ಷ. ಅಂದರೆ, ದಿನಕ್ಕೊಂದು ತಳಿಯ ಭತ್ತದ ಅನ್ನ ಉಂಡರೂ, ೫೦೦ ವರುಷಗಳ ದೀರ್ಘ ಅವಧಿಯಲ್ಲಿ ಒಮ್ಮೆ ಉಂಡ ತಳಿಯ ಅನ್ನ ಇನ್ನೊಮ್ಮೆ ಉಣ್ಣ ಬೇಕಾಗಿಲ್ಲ!
ವೇದಗಳ ಕಾಲದಲ್ಲಿ ಭಾರತದಲ್ಲಿದ್ದ ದೇಸಿ ಭತ್ತದ ತಳಿಗಳ ಸಂಖ್ಯೆ ನಾಲ್ಕು ಲಕ್ಷ ಎಂದು ಅಂದಾಜಿಸಿದ್ದಾರೆ ಹೆಸರುವಾಸಿ ಭತ್ತವಿಜ್ನಾನಿ ಆರ್. ಎಚ್. ರಿಚಾರಿಯಾ. ಎಂತಹ ಅಗಾಧ ತಳಿ ವೈವಿಧ್ಯ!
ಆಯುರ್ವೇದ ಮತ್ತು “ಸಿದ್ಧ”ದ ಪುರಾತನ ಗ್ರಂಥಗಳಲ್ಲಿ ಭತ್ತದ ತಳಿಗಳ ಬಗ್ಗೆ ಇರುವ ಮಾಹಿತಿ ಅಪಾರ. ವಿವಿಧ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳ ಮತ್ತು ಪೋಷಕಾಂಶಗಳ ವಿವರ ಅವುಗಳಲ್ಲಿದೆ. ರೋಗನಿರೋಧ ಶಕ್ತಿ, ದೇಹದ ಮಾಂಸಖಂಡ, ತಲೆಗೂದಲ ಬೆಳವಣಿಗೆ - ಇವನ್ನು ಹೆಚ್ಚಿಸಿಬಲ್ಲ ತಳಿಗಳು, ಚರ್ಮರೋಗಗಳು/ ಕಣ್ಣಿನ ತೊಂದರೆ ನಿವಾರಿಸಬಲ್ಲ ತಳಿಗಳು – ಹೀಗೆ ವಿಭಿನ್ನ ಗುಣವಿಶೇಷಗಳ ದೇಸಿ ಭತ್ತದ ತಳಿಗಳ ಖಜಾನೆಯಾಗಿತ್ತು ನಮ್ಮ ದೇಶ.
ಆದರೆ ಕೆಲವು ರೈತರು ಮಾತ್ರ ದೇಸಿ ಭತ್ತದ ತಳಿವಿವಿಧತೆಗೆ ಬೆಲೆ ಕಟ್ಟಲಾಗದು ಎಂದು ಅರಿತಿದ್ದಾರೆ. ಬಹುಪಾಲು ರೈತರು ದೇಸಿ ತಳಿಗಳ ಸಂರಕ್ಷಣೆಗೆ ಕಾಳಜಿ ತೋರಲಿಲ್ಲ. ಅದರಿಂದಾಗಿ, ಲಕ್ಷಗಟ್ಟಲೆ ದೇಸಿ ಭತ್ತದ ತಳಿಗಳನ್ನು ಶಾಶ್ವತವಾಗಿ ಕಳೆದು ಕೊಂಡೆವು.
ಇದೀಗ, ಚೆನ್ನೈಯ ಒಂದು ಸಂಸ್ಥೆ ದೇಸಿ ಭತ್ತದ ತಳಿಗಳ ಪುನರುಜ್ಜೀವನಕ್ಕೆ ಟೊಂಕ ಕಟ್ಟಿದೆ. ಅದುವೇ, ಸೆಂಟರ್ ಫಾರ ಇಂಡಿಯನ್ ನಾಲೆಜ್ ಸಿಸ್ಟಮ್ಸ್ (ಸಿ.ಐ.ಕೆ.ಎಸ್.). ಈ ಸಂಸ್ಥೆ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳು ಮತ್ತು ಪೋಷಕಾಂಶಗಳ ದಾಖಲೀಕರಣ ಮತ್ತು ಸಂಶೋಧನೆ ಮಾಡುತ್ತಿದೆ. ಇತ್ತೀಚೆಗೆ ಸಿ.ಐ.ಕೆ.ಎಸ್. ಸಂಶೋಧನೆಯೊಂದನ್ನು ಪೂರೈಸಿದೆ. ಈ ಸಂಶೋಧನೆಯ ಫಲಿತಾಂಶಗಳು ನಾವು ಯಾವ ಅನ್ನ ಉಣ್ಣುತ್ತೇವೆ ಎಂಬ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸಬಲ್ಲವು.
ಉದಾಹರಣೆ: ಆ ಸಂಶೋಧನೆಯ ಪ್ರಕಾರ, ಕರುಂಗ್ಕುರುವಾಯ್ ತಳಿಯ ಅಕ್ಕಿಯಲ್ಲಿರುವ ಕಬ್ಬಿಣದ ಅಂಶ, ಪೊನ್ನಿ ತಳಿಯ ಅಕ್ಕಿಯಲ್ಲಿ ಇರುವುದಕ್ಕಿಂತ ನಾಲ್ಕು ಪಟ್ಟು ಜಾಸ್ತಿ. ಜೊತೆಗೆ, ಕರುಂಗ್ಕುರುವಾಯ್ ತಳಿಯ ಅಕ್ಕಿಯಲ್ಲಿರುವ ಕ್ಯಾಲ್ಸಿಯಂ ಮತ್ತು ಶಕ್ತಿ (ಎನರ್ಜಿ) ಅಂಶವೂ ಅಧಿಕ. ನೀಲಮ್ ಸಾಂಬಾ ಎಂಬ ತಳಿಯ ಅಕ್ಕಿಯಲ್ಲಿದೆ ಸಮೃದ್ಧ ಕ್ಯಾಲ್ಸಿಯಂ. ಪಾರಂಪರಿಕವಾಗಿ, ಈ ತಳಿಯ ಅನ್ನವನ್ನು ಮಕ್ಕಳಿಗೆ ಹಾಲೂಡುವ ಅಮ್ಮಂದಿರಿಗೆ ಉಣಿಸುತ್ತಿದ್ದರು.
ಹಾಗೆಯೇ, ಮಾಪ್ಪಿಳ್ಳೈ ಸಾಂಬಾ ತಳಿಯ ಅಕ್ಕಿಯಲ್ಲಿ ಶರ್ಕರಪಿಷ್ಟ ಮತ್ತು ನಾರಿನಂಶ ಜಾಸ್ತಿ. ಆದ್ದರಿಂದಲೇ, ಪಾರಂಪರಿಕವಾಗಿ ಈ ತಳಿಯನ್ನು ತಾಕತ್ತಿನ ಮೂಲವೆಂದು ಪರಿಗಣಿಸಲಾಗಿದೆ. ಪೆರುಂಗಾರ್, ಕರುಂಗ್ಕುರುವಾಯ್ ಮತ್ತು ಕುಳ್ಳಕಾರ್ ಭತ್ತದ ತಳಿಗಳು ಪ್ರೊಟೀನಿನ ಸಮೃದ್ಧ ಆಕರಗಳೆಂದು ಆ ಸಂಶೋಧನೆ ತಿಳಿಸಿದೆ.
ಹಲವಾರು ಪಾರಂಪರಿಕ ಭತ್ತದ ತಳಿಗಳ ಅಕ್ಕಿಯ ಗ್ಲೈಸಿಮಿಕ್ ಸೂಚಕ (ಜಿ-ಸೂಚಕ) ತೀರಾ ಕಡಿಮೆ. (ಜಿ-ಸೂಚಕ ಅಂದರೆ ಮನುಷ್ಯನ ರಕ್ತದ ಗ್ಲುಕೋಸ್ ಮಟ್ಟದ ಮೇಲೆ ಒಂದು ಆಹಾರದ ಪರಿಣಾಮ ಸೂಚಿಸುವ ಸಂಖ್ಯೆ. ಇದರ ವ್ಯಾಪ್ತಿ ೫೦ರಿಂದ ೧೦೦. ಶುದ್ಧ ಗ್ಲುಕೋಸಿನ ಜಿ-ಸೂಚಕ ೧೦೦). ಉದಾಹರಣೆಗೆ ಕರುಂಗ್ಕುರುವಾಯ್, ಕುಳ್ಳಕಾರ್, ಕೌನಿ ಮತ್ತು ಕಾಲಾನಮಕ್ ತಳಿಗಳ ಅಕ್ಕಿಯ ಜಿ-ಸೂಚಕ ೫೦ – ೫೫. ಹಾಗೆಯೇ ಮಾಪಿಳ್ಳೈ ಸಾಂಬಾ ಮತ್ತು ಕುಡೈವಾಜೈ ತಳಿಗಳದ್ದು ೬೬ – ೬೯. ಇವಕ್ಕೆ ಹೋಲಿಸಿದಾಗ, ಬಿಳಿ ಪೊನ್ನಿ ತಳಿಯದ್ದು ತೀರಾ ಜಾಸ್ತಿ, ಅಂದರೆ ೧೦೦.
“ಈ ತಳಿಗಳು ವ್ಯಾಪಕ ಪ್ರದೇಶದಲ್ಲಿ ಬೆಳೆಸುವುದಕ್ಕೆ ಸೂಕ್ತ. ಪೋಷಕಾಂಶ ಚಿಕಿತ್ಸೆಗೆ ಮತ್ತು ಔಷಧಿ ತಯಾರಿಕೆಗೂ ಇವನ್ನು ಬಳಸಬಹುದು ಎನ್ನುತ್ತಾರೆ ಸಿ.ಐ.ಕೆ.ಎಸ್. ನಿರ್ದೇಶಕರಾದ ಎ.ವಿ. ಬಾಲಸುಬ್ರಮಣಿಯನ್.
ಭತ್ತದ ತಳಿಗಳ ಬಗ್ಗೆ ಆಧುನಿಕ ತಾಂತ್ರಿಕ ಮಾಹಿತಿ, ಗ್ರಾಮೀಣ ಸಮುದಾಯಗಳ / ರೈತರ ಸಂಪ್ರದಾಯಗಳು, ಜಾನಪದ – ಇವನ್ನು ಸಂಶೋಧನೆಯ ಮೊದಲ ಹಂತದಲ್ಲಿ ಸಿ.ಐ.ಕೆ.ಎಸ್. ಪರಿಶೀಲಿಸಿತು. ಅನಂತರ, ಬೆಂಗಳೂರಿನ ಫೌಂಡೇಷನ್ ಫಾರ್ ರೀವೈಟಲೈಸೇಷನ್ ಆಫ್ ಲೋಕಲ್ ಹೆಲ್ತ್ ಟ್ರೆಡಿಷನ್ಸ್ (ಎಫ್.ಆರ್.ಎಲ್.ಎಚ್.ಟಿ.) ಎಂಬ ಪ್ರತಿಷ್ಠಾನದ ಜೊತೆಗೂಡಿ, ಆಯುರ್ವೇದ ಮತ್ತು ಪಾರಂಪರಿಕ ಪಾಕಶಾಸ್ತ್ರ ಬಗೆಗಿನ ಪಠ್ಯ/ದಾಖಲೆಗಳ ಸರ್ವೆ ನಡೆಸಿತು. ಸಂಶೋಧನೆಯ ಮೂರನೇ ಹಂತದಲ್ಲಿ, ಚೆನ್ನೈಯ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಆಂಡ್ ರೀಸರ್ಚ್ ಜೊತೆ ಸೇರಿ “ಸಿದ್ಧ”ದ ಪಠ್ಯಗಳನ್ನು ಸರ್ವೆ ಮಾಡಿತು.
ಪುರಾತನ ಪಠ್ಯ, ಸಾಹಿತ್ಯ ಹಾಗೂ ದಾಖಲೆಗಳಲ್ಲಿ ಹೆಸರಿಸಲಾದ ತಳಿಗಳು ಯಾವುವು ಎಂದು ಗುರುತಿಸುವುದೇ ದೊಡ್ದ ಸವಾಲಾಗಿತ್ತು . ಇದನ್ನು, ಗಂಧಶಾಲಿ ತಳಿಯ ಉದಾಹರಣೆ ನೀಡಿ ವಿವರಿಸುತ್ತಾರೆ ಬಾಲಸುಬ್ರಮಣಿಯನ್: “ಆಯುರ್ವೇದದ ಮೂರು ದೊಡ್ದ ಪಠ್ಯಗಳಾದ ಚರಕ ಸಂಹಿತೆ, ಶುಶ್ರುತ ಸಂಹಿತೆ ಮತ್ತು ಅಷ್ಟಾಂಗ ಹೃದಯಗಳಲ್ಲಿ ಹಾಗೂ ಆಯುರ್ವೇದದ ನಿಘಂಟುಗಳಲ್ಲಿ ಗಂಧಶಾಲಿ ತಳಿಯನ್ನು ಪ್ರಸ್ತಾಪಿಸಲಾಗಿದೆ. ಆದರೆ, ಕೃಷಿಯ ಹಂತದಲ್ಲಿ ಈ ಗಂಧಶಾಲಿ ಯಾವ ತಳಿ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಆದರೆ, ಕರುಂಗ್ಕುರುವಾಯ್ ಭತ್ತದ ತಳಿಯ ಗುಣವಿಶೇಷಗಳು, “ಸಿದ್ಧ”ದ ಪಠ್ಯಗಳಲ್ಲಿ ವಿವರಿಸಿದ ತಳಿಯ ಮಾಹಿತಿಗೆ ಸರಿದೂಗಿದವು; ಆದ್ದರಿಂದ, ಈ ತಳಿಯ ಪೋಷಕಾಂಶ ವಿಶ್ಲೇಷಣೆ ಶುರು ಮಾಡಿದೆವು.”
ಮುಂದಿನ ಹಂತದಲ್ಲಿ, ಸಿ.ಐ.ಕೆ.ಎಸ್. ವಿವಿಧ ಆಯ್ದ ದೇಸಿ ಭತ್ತದ ತಳಿಗಳ ಬಗ್ಗೆ ಪ್ರಯೋಗಾಲಯದಲ್ಲಿ ಈ ಗುಣಾಂಶಗಳ ಅಧ್ಯಯನ ನಡೆಸಿತು: ಭೌತಿಕ-ರಾಸಾಯನಿಕ ಗುಣಗಳು (ಬೇಯಲು ತಗಲುವ ಸಮಯ ಮತ್ತು ಬೇಯುವಾಗ ಹೀರಿಕೊಳ್ಳುವ ನೀರಿನ ಪರಿಮಾಣ), ಪೋಷಕಾಂಶಗಳ ವಿಶ್ಲೇಷಣೆ (ಶಕ್ತಿಯ ಪ್ರಮಾಣ, ಶರ್ಕರಪಿಷ್ಟ, ಪ್ರೊಟೀನ್, ಕೊಬ್ಬು, ನಾರು, ಕಬ್ಬಿಣ, ಕ್ಯಾಲ್ಸಿಯಂ, ಪೊಟಾಸಿಯಂ, ಸೋಡಿಯಂ ಮತ್ತು ರಂಜಕದ ಅಂಶ), ಗ್ಲೈಸಿಮಿಕ್ ಸೂಚಕ, ಜನಮೆಚ್ಚುಗೆಯ ಗುಣಗಳು (ರುಚಿ, ಪರಿಮಳ, ಮೇಲ್ಮೈ ರಚನೆ, ಅಕ್ಕಿಕಾಳಿನ ಉದ್ದ). ಚೆನ್ನೈಯ ಇತಿರಾಜ್ ಕಾಲೇಜ್ ಫಾರ್ ವುಮೆನ್ ಸಹಯೋಗದಲ್ಲಿ ಈ ಅಧ್ಯಯನ ನಡೆಸಲಾಯಿತು. ಸಾವಯವ ಕ್ರಮದಲ್ಲಿ ಬೆಳೆ ಬೆಳೆಸಿ, ಅವುಗಳ ಪಾಲಿಷ್ ಮಾಡದ ಅಕ್ಕಿಯನ್ನು ಬಳಸಿ, ಅಧ್ಯಯನದಲ್ಲಿ ಏಕರೂಪದ ಮಾನದಂಡಗಳನ್ನು ಖಚಿತ ಪಡಿಸಿಕೊಂಡರು.
ಮುಂದೇನು? “ದೇಸಿ ಭತ್ತದ ತಳಿಗಳ ವೈದ್ಯಕೀಯ ಚಿಕಿತ್ಸಾ ಗುಣಗಳನ್ನು ಮೌಲ್ಯಮಾಪನ ಮಾಡಲಿಕ್ಕಾಗಿ ಇನ್ನಷ್ಟು ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳು ನಡೆಯಬೇಕಾಗಿದೆ” ಎನ್ನುತ್ತಾರೆ ಬಾಲಸುಬ್ರಮಣಿಯನ್. ಈಗ, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆ ಮುಂದುವರಿಸಲು ಪ್ರಯತ್ನ ನಡೆದಿದೆ. ಉದಾಹರಣೆಗೆ, ಸಕ್ಕರೆಕಾಯಿಲೆ ಬಗ್ಗೆ ಉನ್ನತ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳಿಗೆ ಕಡಿಮೆ ಜಿ-ಸೂಚಕದ ದೇಸಿ ಭತ್ತದ ತಳಿಗಳಲ್ಲಿ ಹೆಚ್ಚಿನ ಸಂಶೋಧನೆ ಬಗ್ಗೆ ತೀವ್ರ ಆಸಕ್ತಿಯಿದೆ.
ದೇಸಿ ಭತ್ತದ ತಳಿಗಳ ಪೋಷಕಾಂಶ ಆಧಾರಿತ ಸಂಶೋಧನೆಗಳೇ ಅಂತಿಮ ಗುರಿಯಲ್ಲ. ಉದಾಹರಣೆಗೆ, ಕಪ್ಪು ಭತ್ತ ಕಾಲಾನಮಕ್, ಉತ್ತರ ಭಾರತದ ಒಂದು ಪರಿಮಳದ ಭತ್ತದ ತಳಿ. ಇದು ಉಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. “೨೦೦೪ರ ಸುನಾಮಿಯಿಂದಾಗಿ ನಾಗಪಟ್ಟಿನಂ ಪ್ರದೇಶದಲ್ಲಿ ವಿಸ್ತಾರ ಜಮೀನು ಉಪ್ಪಾದ ಭೂಮಿಯಾಗಿ ಕೃಷಿಗೆ ಯೋಗ್ಯವಲ್ಲವಾಗಿದೆ. ಈ ತಳಿಯನ್ನು ಅಲ್ಲಿ ಬೆಳೆಸಿದಾಗ ಚೆನ್ನಾಗಿ ಬೆಳೆದಿದೆ. ಹಾಗೆಯೇ, ಬೇರೆ ಯಾವ ತಳಿಯೂ ಬೆಳೆಯದ ಉಪ್ಪಾದ ಮಣ್ಣಿನಲ್ಲಿ ಕಲರ್ಪಾಲಯ್ ಎಂಬ ತಳಿ ಉತ್ತಮ ಇಳುವರಿ ನೀಡಿದೆ” ಎಂದು ವಿವರಿಸುತ್ತಾರೆ ಬಾಲಸುಬ್ರಮಣಿಯನ್.
ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ: ಕೃಷಿ ಮಂತ್ರಾಲಯ / ಕೃಷಿ ಇಲಾಖೆ ಮೂಲಕ ದೇಸಿ ಭತ್ತದ ತಳಿಗಳ ಕೃಷಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಆದರೆ ಈ ಆಯ್ಕೆ ನಿಮ್ಮ ಕೈಯಲ್ಲಿಲ್ಲ. ಆದರೆ, ಜೀವಮಾನವಿಡೀ ಪೋಷಕಾಂಶವಿಲ್ಲದ ಒಂದೇ ಭತ್ತದ ತಳಿಯ ಅನ್ನ ಉಣ್ಣುವ ಬದಲಾಗಿ ಪ್ರತೀ ವಾರದಲ್ಲಿ ಪ್ರತಿದಿನವೂ ಬೇರೊಂದು ದೇಸಿ ತಳಿಯ ಅನ್ನ ಉಣ್ಣುವ ಮೂಲಕ ನಿಮ್ಮ ಆರೋಗ್ಯ ಉತ್ತಮ ಪಡಿಸಿಕೊಳ್ಳ ಬಹುದಾಗಿದೆ. ಈ ಆಯ್ಕೆ ನಿಮ್ಮ ಕೈಯಲ್ಲಿದೆ!      
(ಅಡಿಕೆ ಪತ್ರಿಕೆ, ಡಿಸೆಂಬರ್ ೨೦೧೪)