ಜಗತ್ತಿನಲ್ಲೆಡೆ ಕೃಷಿ ಮತ್ತು ವಿಜ್ನಾನ ರಂಗದಲ್ಲಿ ಅಲ್ಲೋಲಕಲ್ಲೋಲವಾದದ್ದು ಜೂನ್ ೨೦೧೩ರಲ್ಲಿ. ಅದಕ್ಕೆ ಕಾರಣ: ಅಮೇರಿಕಾದ ಯುಎಸ್ ದೇಶದ ಒರೆಗಾಂವ್ ಪ್ರಾಂತ್ಯದ ಹೊಲವೊಂದರಲ್ಲಿ ಬೆಳೆಯುತ್ತಿದ್ದ ಗೋಧಿಯ ಜೈವಿಕ ಮಾರ್ಪಾಡಾದ (ಜೈಮಾ) ಸಸಿಗಳು ಪತ್ತೆಯಾದದ್ದು.
ಆ ಕಳೆನಾಶಕ - ಸಹನೀಯವಾದ (ಹರ್ಬಿಸೈಡ್ – ಟಾಲರೆಂಟ್) ಜೈಮಾ ಗೋಧಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಮೊನ್ಸಾಂಟೊ ಕಂಪೆನಿ. (ಅದು ಜಗತ್ತಿನ ಅತಿ ದೊಡ್ಡ ಕೃಷಿಜೈವಿಕ ತಂತ್ರಜ್ನಾನ ಕಂಪೆನಿ) ಆದರೆ, ಆ ತಳಿಗೆ ಯುಎಸ್ಡಿಎ (ಯುಎಸ್ ದೇಶದ ಕೃಷಿ ಇಲಾಖೆ)ಯ ಪರವಾನಗಿ ಇರಲಿಲ್ಲ. ಆ ತಳಿಯ ಕ್ಷೇತ್ರಪ್ರಯೋಗ ನಿಲ್ಲಿಸಿ ಒಂಭತ್ತು ವರುಷಗಳ ಬಳಿಕ ಅಲ್ಲಿಯ ರೈತನೊಬ್ಬನ ಹೊಲದಲ್ಲಿ ಅದು ಅಚಾನಕ್ ಕಂಡುಬಂದದ್ದು ಜಗತ್ತಿನ ಕೃಷಿ ಮತ್ತು ವಿಜ್ನಾನ ರಂಗವನ್ನು ತಲ್ಲಣಗೊಳಿಸಿದೆ.
ಜೈಮಾ ಗೋಧಿಯನ್ನು ಜಗತ್ತಿನಲ್ಲಿ ಎಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ ಬಿಡುಗಡೆ ಮಾಡಿಲ್ಲ. ಆದ್ದರಿಂದಲೇ ಈ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ಕಂಡುಬಂದಿದೆ: ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಗೋಧಿ ಆಮದನ್ನು ತಕ್ಷಣವೇ ತಡೆಹಿಡಿದವು. ಯುಎಸ್ ದೇಶದ ಮೃದು ಬಿಳಿ ಗೋಧಿಯನ್ನು ಪರೀಕ್ಷಿಸಿದ ನಂತರವೇ ಆಮದು ಮಾಡಿಕೊಳ್ಳ ಬೇಕೆಂದು ಯುರೋಪಿಯನ್ ಯೂನಿಯನ್ ತನ್ನ ಸದಸ್ಯ ದೇಶಗಳಿಗೆ ಸಲಹೆ ನೀಡಿತು.
ಯುಎಸ್ ದೇಶದ ಈ ಪ್ರಕರಣ ಜೈಮಾ ಬೆಳೆಗಳ ಸುರಕ್ಷಿತತೆ ಬಗ್ಗೆ ಇಡೀ ಜಗತ್ತಿನಲ್ಲಿ ಇನ್ನೊಮ್ಮೆ ವಾದವಿವಾದಕ್ಕೆ ಕಾರಣವಾಯಿತು. ಯಾಕೆಂದರೆ, ಬೇರೆಬೇರೆ ದೇಶಗಳಲ್ಲಿ ಪರವಾನಗಿಯಿಲ್ಲದ ಜೈಮಾ ಬೆಳೆಗಳು ಪತ್ತೆಯಾಗುತ್ತಲೇ ಇವೆ. ಭಾರತದಲ್ಲಿಯೂ ಇದೇ ಕತೆ. ಇಲ್ಲಿನ ಮೂರು ರಾಜ್ಯಗಳಲ್ಲಿ, ಮೊನ್ಸಾಂಟೊದ “ರೌಂಡಪ್ ರೆಡಿ” ಗುಣದ ಜೈಮಾ ಹತ್ತಿಬೀಜಗಳನ್ನು ಪರವಾನಗಿ ಇಲ್ಲದಿದ್ದರೂ ಮಾರಲಾಗುತ್ತಿದೆ! ಭಾರತದ ಜಿಇಎಸಿ (ಜೆನೆಟಿಕ್ ಎಂಜಿನಿಯರಿಂಗ್ ಎಪ್ರೈಸಲ್ ಕಮಿಟಿ) ಹಲ್ಲಿಲ್ಲದ ಹುಲಿಯಂತಾಗಿದೆ.
ಆದರೆ ಯುಎಸ್ ದೇಶದಲ್ಲಿ ಹಾಗಲ್ಲ. ಅಲ್ಲಿ “ಜೈಮಾ ಮಾಲಿನ್ಯ”ವಾದರೆ ಕಂಪೆನಿಗಳು ರೈತರಿಗೂ ಇತರ ಬಾಧಿತರಿಗೂ ದೊಡ್ಡ ಮೊತ್ತದ ಪರಿಹಾರ ಕೊಡಬೇಕಾಗುತ್ತದೆ. ಈ ಪ್ರಕರಣದಲ್ಲಿ ವಾಷಿಂಗಟನ್ ಪ್ರಾಂತ್ಯದ ಹಲವು ರೈತರು ಮೊನ್ಸಾಂಟೊ ವಿರುದ್ಧ ದಾವೆ ಹೂಡಿ ಯುದ್ಧ ಸಾರಿದ್ದಾರೆ – ತಾವು ಬೆಳೆಸಿದ ಮೃದು ಬಿಳಿ ಗೋಧಿಯನ್ನು ರಫ್ತು ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ. ಕಾನ್ ಸಾಸ್ ಪ್ರಾಂತ್ಯದ ರೈತನೊಬ್ಬ ಆ ಜೈಮಾ ಗೋಧಿಯಿಂದಾಗಿ ನಷ್ಟ ಅನುಭವಿಸಿದ ಎಲ್ಲ ಜನರ ಪರವಾಗಿ ವರ್ಗ-ಕ್ರಿಯಾ (ಕ್ಲಾಸ್-ಆಕ್ಷನ್) ದಾವೆ ಹೂಡಿದ್ದಾನೆ.
ಆ ಜೈಮಾ ಗೋಧಿ ತಳಿಯ ಮಾಲಿನ್ಯ ಹೇಗೆ ಆಯಿತೆಂಬುದೇ ದೊಡ್ಡ ಪ್ರಶ್ನೆ. ರೌಂಡ್ ಅಪ್ ರೆಡಿ ಗೋಧಿ ತಳಿ ಪ್ರೋಗ್ರಾಮನ್ನು ಮುಕ್ತಾಯಗೊಳಿಸುವ ತನ್ನ ಪ್ರಕ್ರಿಯೆ ಅಚ್ಚುಕಟ್ಟಾಗಿ ದಾಖಲಿಸಲ್ಪಟ್ಟಿದೆ ಹಾಗೂ ಲೆಕ್ಕಪರಿಶೋಧನೆಗೆ ಒಳಪಟ್ಟಿದೆ ಎಂಬುದು ಮೊನ್ಸಾಂಟೊ ಕಂಪೆನಿಯ ವಕ್ತಾರರ ಆರಂಭದ ಅಂಬೋಣ. ಅನಂತರ ಮೊನ್ಸಾಂಟೊ ಕಂಪೆನಿಯ ನಿಯಂತ್ರಣ ವಿಭಾಗದ ಉಪಾಧ್ಯಕ್ಷ ಫಿಲಿಪ್ ಮಿಲ್ಲರ್ “ನಾವು ಈ ಘಟನೆಯ ಮೂಲಕ್ಕೆ ಹೋಗಿ ತನಿಖೆ ಮಾಡಲಿದ್ದೇವೆ” ಎಂದು ಹೇಳಿಕೆ ನೀಡಿದರು. ಅದಾದ ನಂತರ, ಮೊನ್ಸಾಂಟೊ ಕಂಪೆನಿಯ ವಕ್ತಾರರು ಪತ್ರಿಕಾ ವರದಿಗಾರರೊಡನೆ “ಉದ್ದೇಶಪೂರ್ವಕವಾಗಿ ಬೀಜಗಳನ್ನು ಬೆರಕೆ ಮಾಡಿದ್ದರಿಂದಾಗಿ” ಒರೆಗಾಂವ್ ವಿದ್ಯಮಾನ ನಡೆದಿರಬಹುಕು ಎಂದರು.
ಜೈಮಾ ಗೋಧಿಗೆ ಸಂಬಧಿಸಿದ ವಿವರಗಳು ಹೀಗಿವೆ: ೧೯೯೮ರಿಂದ ೨೦೦೫ರ ವರೆಗೆ, ಯುಎಸ್ಡಿಎಯ ಪ್ರಾಣಿ ಮತ್ತು ಸಸ್ಯ ಆರೋಗ್ಯ ತಪಾಸಣಾ ಸೇವಾ ವಿಭಾಗವು, ಅಂತಹ ಗ್ಲೈಫೋಸೇಟ್ ನಿರೋಧಿ ಗೋಧಿ ತಳಿಗಳ ೧೦೦ಕ್ಕಿಂತ ಅಧಿಕ ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ನೀಡಿದೆ. ಇಂತಹ ೨೭೯ ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಯಿತೆಂಬುದು ನ್ಯೂಸ್ ಏಜೆನ್ಸಿಗಳ ಅಂದಾಜು.(೧೬ ಪ್ರಾಂತ್ಯಗಳಲ್ಲಿ ಒಟ್ಟು ೧,೬೧೯ ಹೆಕ್ಟೇರು ಪ್ರದೇಶದಲ್ಲಿ.) ಹಾಗಿರುವಾಗ, ಪರವಾನಗಿಯಿಲ್ಲದ ಜೈಮಾ ಗೋಧಿ ಒಂದೇ ಒಂದು ಹೊಲದಲ್ಲಿ ಕಂಡುಬಂದದ್ದು ಹೇಗೆ?
ಯೂನಿಯನ್ ಆಫ್ ಕನ್ ಸರನ್ಡ್ ಸೈಂಟಿಸ್ಟ್ಸ್ (ಯುಸಿಎಸ್) ಎಂಬ ವಿಜ್ನಾನಿಗಳ ಸಂಘಟನೆಯ ಸಸ್ಯರೋಗ ತಜ್ನ ಡೌಗ್ ಗುರಿಯನ್ ಶೆರಮನ್ ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದು ಹೀಗೆ: “ನಮಗೆ ಗೊತ್ತಾದ ಈ ಒಂದು ಪ್ರಕರಣ ಸಾಗರದ ನೀರ್ಗಲ್ಲಿನ ತುದಿಯಂತಿದೆ. ಇಂತಹ ಇನ್ನೆಷ್ಟು ಪ್ರಕರಣಗಳು ಆಗಿವೆಯೊ ನಮಗೆ ಗೊತ್ತಿಲ್ಲ. ಯಾಕೆಂದರೆ ಕ್ಷೇತ್ರ ಪ್ರಯೋಗಗಳ ಜೈಮಾ ತಳಿಗಳಿಂದಾಗುವ ಮಾಲಿನ್ಯದ ಬಗ್ಗೆ ತಪಾಸಣೆಯೇ ಇಲ್ಲ ಎನ್ನಬಹುದು. ಈ ವಿಷಯದಲ್ಲಿ ನಮಗೆ ಏನೂ ಗೊತ್ತಿಲ್ಲ.”
ಬೆಳಕಿಗೆ ಬಂದಿರುವ ಜೈಮಾ ಮಾಲಿನ್ಯ ಪ್ರಕರಣಗಳು ಅವರ ಆತಂಕವನ್ನು ಸಮರ್ಥಿಸುತ್ತವೆ. ಅಂತಹ ಅತಿ ದೊಡ್ಡ ಪ್ರಕರಣ ಜರ್ಮನಿಯ ಬೇಯರ್ ಎಜಿ ಹಾಗೂ ಅದರ ಸಹಸಂಸ್ಥೆ ಬೇಯರ್ ಕ್ರಾಪ್ ಸೈನ್ಸ್ ಮತ್ತು ಅಮೇರಿಕಾದ ಭತ್ತದ ಕೃಷಿಕರದು. ೨೦೧೧ರಲ್ಲಿ ಈ ಪ್ರಕರಣದಲ್ಲಿ ಆ ಕಂಪೆನಿಗಳು ಕೃಷಿಕರಿಗೆ ನೀಡಲು ಒಪ್ಪಿಕೊಂಡ ಪರಿಹಾರ ೭೫೦ ಮಿಲಿಯನ್ ಡಾಲರ್. (ಸುಮಾರು ೪,೫೦೦ ಕೋಟಿ ರೂಪಾಯಿ) ಲಿಬರ್ಟಿ ಲಿಂಕ್ ಎಂಬುದು ಬೇಯರ್ ಕಂಪೆನಿ ಅಭಿವೃದ್ಧಿ ಪಡಿಸಿದ ಜೈಮಾ ಭತ್ತದ ತಳಿ. ಇದರಿಂದಾದ ಜೈಮಾ ಮಾಲಿನ್ಯ ಅಮೇರಿಕಾದ ಹಲವು ಭತ್ತದ ಕೃಷಿಕರ ಹೊಲಗಳಲ್ಲಿ ಪತ್ತೆ. ಅದಕ್ಕಾಗಿ ಅವರು ೨೦೦೬ರಲ್ಲಿ ಬೇಯರ್ ವಿರುದ್ಧ ಹೂಡಿದ ದಾವೆಗಳ ಫಲ ಆ ಪರಿಹಾರ ಪಾವತಿ ಒಪ್ಪಂದ. ಆ ಪ್ರಕರಣದಲ್ಲಿ ಭತ್ತದ ನಿರ್ಯಾತದಾರರು, ಆಯಾತದಾರರು, ಭತ್ತದ ಮಿಲ್ಲುಗಳು, ಬೀಜಗಳ ಡೀಲರುಗಳು ಇಂತಹ ಇತರ ದಾವೆದಾರರಿಗೆ ಬೇಯರ್ ಕಂಪೆನಿ ಪ್ರತ್ಯೇಕ ಪರಿಹಾರ ಪಾವತಿಸ ಬೇಕಾಯಿತು.
ಹಾಗೆಯೇ ಡಿಸೆಂಬರ್ ೨೦೦೬ರಲ್ಲಿ ಸಿನ್ ಜೆಂಟಾ ಕಂಪೆನಿಗೆ ೧೫ ಲಕ್ಷ ಡಾಲರ್ ದಂಡ ವಿಧಿಸಲಾಯಿತು. ಯಾಕೆಂದರೆ, ಪರವಾನಗಿಯಿಲ್ಲದ ಪೀಡೆನಿರೋಧಿ ಬಿಟಿ-೧೦ ಜೋಳದ ಬೀಜವನ್ನು ಅದು ಆಹಾರಕ್ಕಾಗಿ ವಿತರಿಸಿದ ಜೋಳದ ಬೀಜದೊಂದಿಗೆ ಬೆರೆಸಿತ್ತು. ೧೯೯೭ರಲ್ಲಿ ಫ್ರಾನ್ಸಿನ ಲಿಮಾಗ್ರೇಯ್ನ್ ಸೀಡ್ ಮತ್ತು ಮೊನ್ಸಾಂಟೊ ಕಂಪೆನಿ ಕೆನಡಿಯನ್ ಕನೋಲಾ (ರೇಪ್ ಸೀಡ್) ಧಾನ್ಯದ ೬೦,೦೦೦ ಬ್ಯಾಗುಗಳನ್ನು ಹಿಂದೆಗೆಯ ಬೇಕಾಯಿತು; ಯಾಕೆಂದರೆ ಅದರಲ್ಲಿ ಪರವಾನಗಿಯಿಲ್ಲದ ಕಳೆನಾಶಕ ನಿರೋಧಿ ಬೀಜಗಳು ಬೆರಕೆಯಾಗಿದ್ದವು. ೨೦೦೧ರಲ್ಲಿ ಮೊನ್ಸಾಂಟೊ ಕಂಪೆನಿ ಮತ್ತೊಂದು ಅನಾಹುತ ಮಾಡಿತ್ತು; ಅದರ ಪರವಾನಗಿಯಿಲ್ಲದ ಕೀಟನಿರೋಧಿ ಜೋಳ (ಕಾರ್ನ್)ದ ಸಸಿಗಳ ಪರಾಗವು ಕ್ಷೇತ್ರಪ್ರಯೋಗದ ಹೊಲದಿಂದ ಬಿಡುಗಡೆಯಾಗಿ ವಾಣಿಜ್ಯ ಬೆಳೆಯೊಂದನ್ನು ಮಾಲಿನ್ಯಗೊಳಿಸಿತು. ಕೊನೆಗೆ ಆ ವಾಣಿಜ್ಯ ಬೆಳೆಯನ್ನು ನಾಶ ಪಡಿಸಲಾಯಿತು.
ಅಮೇರಿಕಾದ ಯುಎಸ್ ದೇಶದಲ್ಲಿ ಪ್ರತಿ ವರುಷ ವಿವಿಧ ಬೆಳೆಗಳ ಜೈಮಾ ತಳಿಗಳ ಕ್ಷೇತ್ರಪ್ರಯೋಗಗಳ ಸಂಖ್ಯೆ ಒಂದು ಸಾವಿರಕ್ಕಿಂತ ಜಾಸ್ತಿ. ಹಾಗಿರುವಾಗ, ಜೈಮಾ ತಳಿಗಳಿಂದಾಗ ಬಹುದಾದ “ಮಾಲಿನ್ಯ”ದ ಬೃಹತ್ ಸಾಧ್ಯತೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಭಾರತದಲ್ಲಿ ಏನಾಗುತ್ತಿದೆ ಎಂಬುದು ಸುಲಭದಲ್ಲಿ ಬಹಿರಂಗವಾಗದು. ಆದ್ದರಿಂದ ನಾವು ಜೈಮಾ ತಳಿಗಳ ಅಪಾಯದ ಬಗ್ಗೆ ಜಾಗೃತರಾಗಲೇ ಬೇಕಾಗಿದೆ.
(ಅಡಿಕೆ ಪತ್ರಿಕೆ, ಜೂನ್ ೨೦೧೪)