ರಕ್ತಚಂದನದ ರಕ್ತಸಿಕ್ತ ಕತೆ


ಡಿಸೆಂಬರ್ ೨೦೧೪ರ ಮೂರನೇ ವಾರದಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಳ್ಳಸಾಗಾಟದ ೧೬ ಟನ್ ರಕ್ತಚಂದನದ ಬೆಲೆ ರೂ.೪೭ ಕೋಟಿ (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ).
ಕಳ್ಳಸಾಗಣೆದಾರರ ಒಂದು ಗ್ಯಾಂಗ್ ತುಮಕೂರು ಜಿಲ್ಲೆಯ ಸಿರಾದಿಂದ, ಇನ್ನೊಂದು ಗ್ಯಾಂಗ್ ಹೊಸಕೋಟೆಯ ಕಟ್ಟಿಗೇನ ಹಳ್ಳಿಯಿಂದ ಈ ಕಳ್ಳವ್ಯವಹಾರ ನಡೆಸುತ್ತಿತ್ತು. ಪೊಲೀಸರು ಕಳ್ಳಸಾಗಣೆದಾರರ ಸೋಗು ಹಾಕಿ, ಗ್ಯಾಂಗ್ಗಳನ್ನು ಸಂಪರ್ಕಿಸಿದ್ದರಿಂದ ಭಾರೀ ಕಳ್ಳಮಾಲು ವಶಪಡಿಸಿಕೊಳ್ಳಲು ಸಾಧ್ಯವಾಯಿತು.
ನಾಲ್ಕು ತಿಂಗಳ ಮುಂಚೆ, ೨೦ ಆಗಸ್ಟ್ ೨೦೧೪ರಂದು ಮಂಗಳೂರು ಬಂದರಿನಲ್ಲಿಯೂ ೧೭ ಟನ್ ಅಕ್ರಮ ಸಾಗಾಟದ ರಕ್ತಚಂದನ ವಶ. ಆ ರೋಚಕ ಪ್ರಕರಣ, ಡಿಆರ್ಎ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳ ಕಾರ್ಯಾಚರಣೆಯ ಫಲ. ಎಂವಿ ಟೈಗರ್ ಮ್ಯಾಂಗೊ ಎಂಬ ಹಡಗಿನಲ್ಲಿ ಮೀನಿನೆಣ್ಣೆ, ಗೇರುಬೀಜ ಇತ್ಯಾದಿಗಳ ಕನ್ಟೈನರುಗಳನ್ನು ಮಂಗಳೂರಿನಿಂದ ಶ್ರೀಲಂಕಾಕ್ಕೆ ಸಾಗಿಸಲಾಗಿತ್ತು. ಅದರ ಒಂದು ಕನ್ಟೈನರಿನಲ್ಲಿ ೧೭ ಟನ್ ರಕ್ತಚಂದನ ಇದೆಯೆಂದು ಆ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಹಾಗಾಗಿ, ಅದನ್ನು ಅದೇ ಹಡಗಿನಲ್ಲಿ ಮುಂದಿನ ಟ್ರಿಪ್ನಲ್ಲಿ ಮಂಗಳೂರು ಬಂದರಿಗೆ ತರಿಸಿಕೊಂಡು, ಇಲ್ಲಿ ವಶಪಡಿಸಿಕೊಂಡರು. ಆ ಕನ್ಟೈನರಿನಲ್ಲಿದ್ದ ರಕ್ತಚಂದನವನ್ನು ಬೆಂಗಳೂರಿನಿಂದ ಮಂಗಳೂರಿಗೆ ಟ್ರಕ್ಕಿನಲ್ಲಿ ಕಳ್ಳಸಾಗಾಟ ಮಾಡಲಾಗಿತ್ತು.
ಆದರೆ, ರಕ್ತಚಂದನ ಕಳ್ಳಸಾಗಾಟದ ರಕ್ತಸಿಕ್ತ ಘಟನೆ ನಡೆದದ್ದು ಒಂದು ವರುಷದ ಮುಂಚೆ. ಅಂದು, ೧೫ ಡಿಸೆಂಬರ್ ೨೦೧೩ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಕರಾಳ ದಿನ. ಒಂದು ನೂರು ಕಳ್ಳಸಾಗಣೆದಾರರ ಗ್ಯಾಂಗ್ ನಡೆಸಿದ ದಾಳಿಯಲ್ಲಿ ಡೆಪ್ಯುಟಿ ರೇಂಜ್ ಆಫೀಸರ್ ಎನ್.ಆರ್. ಶ್ರೀಧರ್ ಮತ್ತು ಸಹಾಯಕ ಬೀಟ್ ಆಫೀಸರ್ ಡೇವಿಡ್ ಕರುಣಾಕರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಇನ್ನೂ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಘಾತಕ ಏಟುಗಳು. ಮರಗಳನ್ನು ಕಡಿದು ನಾಟಾ ಸಾಗಿಸುವ ಕಳ್ಳಸಾಗಣೆದಾರರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯ ಎಂಟು ಸಿಬ್ಬಂದಿ ಕಾಡಿಗೆ ಹೋಗಿದ್ದರು. ಇವರ ಜಾಡು ಹಿಡಿಯಲು ಹೋದ ಆ ಅಧಿಕಾರಿಗಳು ಅಂದು ದಾಳಿಗೆ ಬಲಿ.
ಈ ಎಲ್ಲ ಘಟನೆಗಳಿಗೆ ಮೂಲಕಾರಣ ಆಂಧ್ರಪ್ರದೇಶದ ಶೇಷಾಚಲಂನ ಕಾಡುಗಳಲ್ಲಿ ಮಾತ್ರ ಸಹಜವಾಗಿ ಬೆಳೆಯುವ ರಕ್ತಚಂದನದ ಕಳ್ಳಸಾಗಾಟ ಈಗ ಕೋಟಿಗಟ್ಟಲೆ ರೂಪಾಯಿಗಳ ದಂಧೆಯಾಗಿ ಬೆಳೆದಿರುವುದು. ಯಾಕೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆ. ಕಳ್ಳಸಾಗಣೆದಾರರು ಮರಕಡಿಯುವವರಿಂದ ಟನ್ನಿಗೆ ರೂ.೨,೦೦೦ ದರದಲ್ಲಿ ರಕ್ತಚಂದನದ ನಾಟಾ ಖರೀದಿಸಿ, ಮುಂಬೈಯ ಗ್ಯಾಂಗುಗಳಿಗೆ ರೂ.೮,೦೦೦ ದರದಲ್ಲಿ ಮಾರುತ್ತಾರೆ. ಅಲ್ಲಿಂದ ಚೀನಾಕ್ಕೆ ಅದರ ಕಳ್ಳಸಾಗಣೆ. ಯಾಕೆಂದರೆ, ಚೀನಾದಲ್ಲಿ ರಕ್ತಚಂದನದ ಬೆಲೆ ಟನ್ನಿಗೆ ರೂ.೩೦,೦೦೦ದಿಂದ ರೂ. ಒಂದು ಲಕ್ಷ!
ಕಡುಗೆಂಪು ಬಣ್ಣದ ರಕ್ತಚಂದನ ಮರದ ತುಂಡುಗಳು ಕೆತ್ತನೆಗೆ ಸೂಕ್ತ. ಚೀನಾ ಮತ್ತು ಜಪಾನಿನಲ್ಲಿ, ಸಂಗೀತ ವಾದ್ಯಗಳು, ಮೂರ್ತಿಗಳು, ಪೀಠೋಪಕರಣಗಳು ಮತ್ತು ಔಷಧಿಗಳ ತಯಾರಿಗೆ ರಕ್ತಚಂದನದ ಬಳಕೆ. ಆದ್ದರಿಂದಲೇ ಆಂಧ್ರಪ್ರದೇಶದ ಅರಣ್ಯದಿಂದ ಪ್ರತಿ ವರುಷ ಕಾನೂನು ಬಾಹಿರವಾಗಿ ಕಡಿದು ಸಾಗಿಸುವ ರಕ್ತಚಂದನದ ಪರಿಮಾಣ ೩,೦೦೦ ಟನ್ನುಗಳಿಗೇರಿದೆ.
ಹಲವಾರು ವರುಷಗಳಿಂದ ರಕ್ತಚಂದನದ ಕಳ್ಳಸಾಗಾಟ ನಡೆಯುತ್ತಿದ್ದರೂ ಕಳೆದ ಐದಾರು ವರುಷಗಳಲ್ಲಿ ಇದು ಜಾಸ್ತಿಯಾಗಿದೆ. ೨೦೧೪ರ ಕೊನೆಯಲ್ಲಿ, ಬೇರೆಬೇರೆ ರಾಜ್ಯಗಳಲ್ಲಿ ವಶಪಡಿಸಿಕೊಂಡಿರುವ ೧೧,೮೦೦ ಟನ್ ರಕ್ತಚಂದನ ಲಭ್ಯವಿದೆ. ಆಂಧ್ರಪ್ರದೇಶ ರಾಜ್ಯವೊಂದರಲ್ಲೇ ೨೦೦೨ರಂದೀಚೆಗ ವಶಪಡಿಸಿಕೊಂಡ ರಕ್ತಚಂದನದ ಕಳ್ಳಮಾಲಿನ ಪರಿಮಾಣ ೮,೫೦೦ ಟನ್.
ಇದನ್ನು ರಫ್ತು ಮಾಡಲು ಅನುಮತಿ ನೀಡಬೇಕೆಂದು ಆಂಧ್ರಪ್ರದೇಶ ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಲೇ ಇದೆ. ಈ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ ಅಂತೂ ಆಗಸ್ಟ್ ೨೦೧೪ರಲ್ಲಿ ಅನುಮತಿ ನೀಡಿದೆ. ಆ ರಕ್ತಚಂದನದ ರಫ್ತಿನಿಂದ ಆಂಧ್ರ ಸರಕಾರಕ್ಕೆ ಸಿಗಲಿರುವ ಆದಾಯ ಸುಮಾರು ರೂ.೧,೦೦೦ ಕೋಟಿ.
ಆದರೆ, ಇದರಲ್ಲೊಂದು ಸಮಸ್ಯೆಯಿದೆ. ಅಳಿವಿನಂಚಿನಲ್ಲಿರುವ ಸಸ್ಯ ಜಾತಿಗಳಲ್ಲೊಂದು ರಕ್ತಚಂದನ. ಆದ್ದರಿಂದ, ಇದರ ರಫ್ತಿಗೆ ಕನ್ವೆನ್ಷನ್ ಆನ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಎನ್ಡೇಂಜರ್ಡ್ ಸ್ಪಿಷೀಸ್ ಆಫ್ ವೈಲ್ಡ್ ಫಾನಾ ಆಂಡ್ ಫ್ಲೋರಾ (ಸಿಐಟಿಇಎಸ್) ಪ್ರಕಾರ ಅನುಮತಿ ಅಗತ್ಯ. (ಇದು ಭಾರತವೂ ಸೇರಿದಂತೆ ೧೭೯ ದೇಶಗಳು ಸಹಿ ಮಾಡಿರುವ ಒಪ್ಪಂದ).
ಜೂನ್ ೨೦೧೦ರಲ್ಲಿ ಭಾರತದಿಂದ ರಕ್ತಚಂದನದ ರಫ್ತನ್ನು ಸಿಐಟಿಇಎಸ್ ನಿಷೇಧಿಸಿತು. ಇದಕ್ಕೆ ಕಾರಣ: ರಕ್ತಚಂದನದ ಉತ್ಪನ್ನಗಳ ಸರ್ಟಿಫಿಕೇಷನಿನಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಅಗತ್ಯವಾದ ಅಧ್ಯಯನ ನಡೆಸದಿರುವುದು. ಅದಾದ ಬಳಿಕ, ನವದೆಹಲಿಯ ಪರಿಸರ ಮತ್ತು ಅರಣ್ಯ ಮಂತ್ರಾಲಯ ಎಚ್ಚೆತ್ತಿತು. ಕೊಯಂಬತ್ತೂರಿನ ಸಂಶೋಧನಾ ಸಂಸ್ಥೆಯ ಮೂಲಕ ಅಧ್ಯಯನ ನಡೆಸಿ, ಎಪ್ರಿಲ್ ೨೦೧೨ರಲ್ಲಿ ಅದರ ವರದಿ ಸಲ್ಲಿಸಿತು. ಆ ವರದಿಯಿಂದಾಗಿ, ವಶಪಡಿಸಿಕೊಂಡ ರಕ್ತಚಂದನದ ಅರ್ಧಭಾಗದ ರಫ್ತಿಗೆ ಆಂಧ್ರಪ್ರದೇಶ ಸರಕಾರಕ್ಕೆ ಅನುಮತಿ ನೀಡಲಾಗಿದೆ.
ರಕ್ತಚಂದನ ರಫ್ತು ಮಾಡಿದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೇಡಿಕೆ ಕುಸಿದು, ಕಳ್ಳಸಾಗಾಟ ಕಡಿಮೆಯಾಗುತ್ತದೆ ಎಂಬುದು ಆಂಧ್ರಪ್ರದೇಶ ಸರಕಾರದ ಲೆಕ್ಕಾಚಾರ. ಆದರೆ ಹಾಗಾಗುತ್ತಿಲ್ಲ. ೨೦೦೬ ಮತ್ತು ೨೦೦೮ರಲ್ಲಿಯೂ ಆಂಧ್ರಪ್ರದೇಶದಿಂದ ಸುಮಾರು ೧,೦೦೦ ಟನ್ ರಕ್ತಚಂದನ ರಫ್ತು ಮಾಡಲಾಗಿತ್ತು. ಹಾಗಿದ್ದರೂ ಕಳ್ಳಸಾಗಾಟ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗಿನ ಪ್ರಕರಣಗಳೇ ಪುರಾವೆ. ಕಳೆದ ಹತ್ತು ವರುಷಗಳಲ್ಲಿ (೨೦೦೪ – ೨೦೧೪) ರಕ್ತಚಂದನ ಕಳ್ಳಸಾಗಾಟದ ೪,೫೦೦ ಪ್ರಕರಣಗಳಲ್ಲಿ ೩,೫೦೦ ಜನರನ್ನು ಬಂಧಿಸಲಾಗಿದೆ. ಡಿಸೆಂಬರ್ ೨೦೧೩ರಲ್ಲಿ ಅಧಿಕಾರಿಗಳೂ ಕಳ್ಳಸಾಗಣೆದಾರರ ದಾಳಿಗೆ ಬಲಿಯಾಗಿದ್ದಾರೆ.
ಈಗ ಎದುರಾಗುವ ಪ್ರಶ್ನೆ: ರಕ್ತಚಂದನವನ್ನು ಸಾವಿರಾರು ಎಕರೆಗಳಲ್ಲಿ ಬೆಳೆಸಿ, ರಫ್ತು ಮಾಡಬಹುದಲ್ಲವೇ? ಅದು ಸುಲಭವಲ್ಲ. ಯಾಕೆಂದರೆ ರಕ್ತಚಂದನ ನಿಧಾನವಾಗಿ ಬೆಳೆಯುವ ಸಸ್ಯ. ಅದೇನಿದ್ದರೂ, ಈಗಲೂ ಕಾಲ ಮಿಂಚಿಲ್ಲ. ಯಾಕೆಂದರೆ, ರಕ್ತಚಂದನಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯ ವಾರ್ಷಿಕ ಬೇಡಿಕೆ ೩,೦೦೦ ಟನ್. ಈಗಲಾದರೂ ಸಸಿ ನೆಟ್ಟು ಬೆಳೆಸಿದರೆ, ದಶಕಗಳ ನಂತರ ಅದುವೇ ದೊಡ್ಡ ಆದಾಯದ ಮೂಲ ಆದೀತು. ಈ ನಿಟ್ಟಿನಲ್ಲಿ ಸರಕಾರ ಸ್ಪಷ್ಟ ನೀತಿನಿರೂಪಣೆ ಮಾಡಿ ರೈತರನ್ನು ಪ್ರೋತ್ಸಾಹಿಸ ಬೇಕಾಗಿದೆ.
(ಅಡಿಕೆ ಪತ್ರಿಕೆ, ಎಪ್ರಿಲ್ ೨೦೧೫ ಸಂಚಿಕೆಯಲ್ಲಿ ಪ್ರಕಟ)