Agriculture and Rural Development
ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿರುವ ಪದವಿಪೂರ್ವ ಕಾಲೇಜುಗಳು ೧೫೦. ಈ ಕಾಲೇಜುಗಳು ಮಳೆಕೊಯ್ಲಿನ ಹಾಗೂ ಮಳೆನೀರಿಂಗಿಸುವ ರಚನೆಗಳನ್ನು ನಿರ್ಮಿಸಿದರೆ ಅದುವೇ ಜಲಜಾಗೃತಿ ಹಬ್ಬಿಸಬಲ್ಲ ಅಭಿಯಾನ.
ಯಾಕೆಂದರೆ ಅಲ್ಲಿ ಪಿ.ಯು.ಸಿ. ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೩೦,೦೦೦. ತಮ್ಮ ಕಾಲೇಜಿನಲ್ಲಿ ಮಳೆಕೊಯ್ಲು ಹಾಗೂ ಮಳೆನೀರು ಇಂಗಿಸುವುದನ್ನು ಅವರು ಕಣ್ಣಾರೆ ಕಾಣುವಂತಾದರೆ, ಆ ಸಂದೇಶ ಕನಿಷ್ಠ ೩೦,೦೦೦ ಮನೆಗಳನ್ನು ತಲಪುತ್ತದೆ.
ಇದೆಲ್ಲ ಸಾಧ್ಯವೇ? ಖಂಡಿತ ಸಾಧ್ಯವಿದೆ. ಇದು ನನ್ನ ಅನುಭವ. ೨೦೦೪ರಲ್ಲಿ ಚಿಕ್ಕಮಗಳೂರಿನ ಕಾಬ್‍ಸೆಟ್ ಸಂಸ್ಥೆಯ ನಿರ್ದೇಶಕನಾಗಿ ನನ್ನ ನೇಮಕ. ಆ ವರುಷ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಕಟ್ಟಿಸಬೇಕೆಂದು ಕಾರ್ಪೊರೇಷನ್ ಬ್ಯಾಂಕಿನ ನಿರ್ಧಾರ. ಕಟ್ಟಡ ನಿರ್ಮಿಸುವಾಗಲೇ ಮಳೆಕೊಯ್ಲು ಹಾಗೂ ಮಳೆನೀರಿಂಗಿಸುವ ವ್ಯವಸ್ಥೆ ಮಾಡಬೇಕೆಂದು ನನ್ನ ಆಗ್ರಹ. ಆ ಮೂಲಕ ಪ್ರತಿ ವರುಷ ಅಲ್ಲಿ ತರಬೇತಿಗೆ ಬರುವ ಒಂದು ಸಾವಿರ ಅಭ್ಯರ್ಥಿಗಳ ಮನೆಗಳಿಗೆ ಜಲಜಾಗೃತಿಯ ಸಂದೇಶ ರವಾನಿಸುವ ಯೋಜನೆ.
ಅದರಂತೆ ಸುಮಾರು ೨,೩೦೦ ಚದರಡಿ ಚಾವಣಿಯಿಂದ ಮಳೆನೀರು ಇಳಿಸಲು ಪೈಪ್‍ಗಳ ಜೋಡಣೆ. ಹಿಂಭಾಗದ ಚಾವಣಿಯಿಂದ ಇಳಿಯುವ ಮಳೆನೀರು ಎರಡು ಫಿಲ್ಟರುಗಳ ಮೂಲಕ ಶುದ್ಧೀಕರಣ. ಸಂಪಿನಲ್ಲಿ ಆ ನೀರಿನ ಸಂಗ್ರಹ. ಸಂಪ್‍ನಿಂದ ನೀರೆತ್ತಲು ಪಂಪ್. ಆ ಸಂಪ್ (ನೆಲದಡಿಯ ಟ್ಯಾಂಕ್) ತುಂಬಿದಾಗ ಹೆಚ್ಚಾದ ನೀರು ಕೊಳವೆಬಾವಿಗೆ ಹರಿದುಹೋಗಲು ಪೈಪ್ ಜೋಡಣೆ (ಫೋಟೋ ನೋಡಿ).
ಹಿಂಭಾಗದ ಇಳಿಪೈಪಿಗೆ ತಗಲಿಸಿದ್ದು ಎರಡು ವಿಶಿಷ್ಟ ವಿನ್ಯಾಸದ ಫಿಲ್ಟರುಗಳನ್ನು. ಅವುಗಳ ತಳದಲ್ಲಿ ತೂತು. ಹಾಗಾದರೆ ಚಾವಣಿಯಿಂದ ರಭಸದಲ್ಲಿ ಇಳಿಯುವ ಮಳೆನೀರು ಈ ಫಿಲ್ಟರುಗಳ ತೂತಿನಲ್ಲಿ ನೆಲಕ್ಕೆ ಸುರಿಯುತ್ತದೆ ಅಂದುಕೊಂಡಿರಾ? ಹಾಗೆ ಆಗೋದಿಲ್ಲ. ಫಿಲ್ಟರ್ ಪ್ರವೇಶಿಸುವ ಮಳೆನೀರು ಅದರೊಳಗೆ ಬುಗರಿಯಂತೆ ತಿರುಗುತ್ತದೆ. ಆಗ ಅದರಲ್ಲಿರುವ ಕಸವೆಲ್ಲ ಬೇರ್ಪಟ್ಟು ತೂತಿನಲ್ಲಿ ಕೆಳಕ್ಕೆ ಬೀಳುತ್ತದೆ; ಶುದ್ಧವಾದ ಮಳೆನೀರು ಮಾತ್ರ ಪೈಪಿನಲ್ಲಿ ಇಳಿದು ಕೊಳವೆಬಾವಿಗೆ ಹರಿಯುತ್ತದೆ.
ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.
ಮಂಗಳೂರಿನ ಬಾವುಟಗುಡ್ಡೆಯ ನೆತ್ತಿಯಲ್ಲಿದೆ ಸೈಂಟ್ ಎಲೋಸಿಯಸ್ ಕಾಲೇಜು. ಅಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಳೆಕೊಯ್ಲಿನ ವಿಷಯ ತಿಳಿದಾಗ ಹೊಸಲೋಕವೊಂದರ ಪರಿಚಯ. ಪ್ರಿನ್ಸಿಪಾಲರೊಂದಿಗೆ ಮಳೆಕೊಯ್ಲಿನ ಯೋಜನೆಯ ಪ್ರಸ್ತಾಪ. ಪೆನ್ನು ಹಿಡಿಯುತ್ತಿದ್ದ ಕೈಗಳು ಹಾರೆಪಿಕ್ಕಾಸು ಹಿಡಿದವು. ಕಾಲೇಜಿನ ಹಾಸ್ಟೆಲಿನ ಹತ್ತಿರ ಮಳೆನೀರ ಇಂಗುಗುಂಡಿಗಳ ಮತ್ತು ತಡೆಗೋಡೆಗಳ ನಿರ್ಮಾಣ. ಚಾವಣಿ ನೀರನ್ನೂ ಇಂಗುಗುಂಡಿಗೆ ತಿರುಗಿಸಿದರು ವಿದ್ಯಾರ್ಥಿಗಳು. ಇದರಿಂದಾಗಿ ಅವರು ಕಣ್ಣಾರೆ ಕಂಡ ಪರಿಣಾಮ, "ಗುಂಡಿಯ ನೀರೆಲ್ಲ ನಾಲ್ಕೇ ಗಂಟೆಗಳಲ್ಲಿ ಇಂಗುತ್ತದೆ." ಆ ಕಾಲೇಜಿಗೆ ’ಮಂಗಳೂರಿನಲ್ಲಿ ಮಳೆಕೊಯ್ಲು ಮಾಡಿದ ಮೊದಲ ಕಾಲೇಜು’ ಎಂಬ ಹೆಗ್ಗಳಿಕೆ. ’ಕಾಲೇಜಿನ ಕ್ಯಾಂಪಸ್ಸಿನಲ್ಲಿ ಬೀಳುವ ಎಲ್ಲ ನೀರನ್ನೂ ನಾವು ಇಂಗಿಸುತ್ತೇವೆ; ಒಂದು ಹನಿಯನ್ನೂ ಚರಂಡಿಗೆ ಹರಿಯಲು ಬಿಡುವುದಿಲ್ಲ’ ಎಂಬುದು ಅವರ ನಿರ್ಧಾರ.
ಮಂಗಳೂರಿನಿಂದ ಹತ್ತು ಕಿಮೀ ದೂರದಲ್ಲಿದೆ ವಾಮಂಜೂರು. ಅಲ್ಲಿಂದ ೨ ಕಿಮೀ ದೂರದಲ್ಲಿದೆ ಪಿಲಿಕುಳ ನಿಸರ್ಗಧಾಮ. ಅಲ್ಲೀಗ ವಾರಾಂತ್ಯಗಳಲ್ಲಿ ಜನರ ಜಾತ್ರೆ. ಅಲ್ಲೇ ಹತ್ತಿರದಲ್ಲಿದೆ ಹಳ್ಳಿ ಕಿರಾಮ್. ಅಲ್ಲಿನ ೪೫ ಸಣ್ಣ ಹಿಡುವಳಿ ಕುಟುಂಬಗಳ ಅಡಿಕೆ ತೋಟಗಳು ಕೊಳ್ಳದಲ್ಲಿವೆ. ಕಿರಾಮಿನ ಗುಡ್ಡದ ಆ ಬದಿಯ ಬಯಲಿನಲ್ಲಿ ೫ ಸೆಂಟ್ಸ್ ಮನೆಗಳು. ಅವುಗಳಿಗೆ ನಳ್ಳಿ ನೀರು ಒದಗಿಸಲಿಕ್ಕಾಗಿ ಕೊಳವೆಬಾವಿಗಳನ್ನು ಕೊರೆದಾಗಿನಿಂದ ಕಿರಾಮಿಗೆ ನೀರಿನ ಸಮಸ್ಯೆ. ಅದಕ್ಕೆ ಅಲ್ಲಿನವರು ಕಂಡುಕೊಂಡ ಪರಿಹಾರ ಮಳೆನೀರ ಕೊಯ್ಲು.
"ನಮ್ ಕಡೆ ಹಿಂದಿನ್ ವರ್ಷ ಮಳೇನೇ ಆಗಿಲ್ಲ. ನಿಮ್ ಕಡೆ ಸ್ವಲ್ಪನಾದ್ರೂ ಮಳೆ ಆಗೈತಿ. ನಿಮ್ ತೋಟದಾಗೆ ಮಣ್ ಅಗೆದ್ರೆ ಎಷ್ಟಡಿ ಆಳ ನೀರಿನ್ ಪಸೆ ಇರ್ತದೆ?" ಎಂಬ ಪ್ರಶ್ನೆ ವಿಠಲಾಪುರದ ವೀರಪ್ಪ ಅವರದು.
ನನ್ನೊಂದಿಗಿದ್ದ ಚಿಕ್ಕಮಗಳೂರು ತಾಲೂಕಿನ ಕುನ್ನಾಳು ಗ್ರಾಮದ ಹದಿನೈದು ರೈತರು ತಮ್ಮೊಳಗೆ ಮಾತಾಡಿಕೊಂಡು ಉತ್ತರಿಸಿದರು, "ಮಣ್ಣಲ್ಲಿ ಐದಾರು ಇಂಚು ಆಳದ ವರೆಗೆ ನೀರಿನ್ ಪಸೆ ಇರ‍್ಬೋದು."
"ನಮ್ ತೋಟದಲ್ಲಿ ಹೆಂಗೈತೆ ನೋಡಿ" ಎಂದು ವೀರಪ್ಪ ಹಾರೆ ಎತ್ತಿಕೊಂಡು ಮಣ್ಣು ಅಗೆಯತೊಡಗಿದರು. ಎರಡು ಅಡಿ ಆಳಕ್ಕೆ ಅಗೆದು ತೋರಿಸಿದರು. ಅಷ್ಟು ಆಳದ ವರೆಗೂ ಮಣ್ಣಿನಲ್ಲಿ ತೇವಾಂಶವಿತ್ತು. ಅದರಿಂದಾಗಿಯೇ ಅವರ ೧೫ ಎಕ್ರೆ ತೋಟದಲ್ಲಿ ಮರಗಿಡಗಳೆಲ್ಲ ಹಸುರಾಗಿದ್ದವು. ತೆಂಗು ಮತ್ತು ಅಡಿಕೆ ಮುಖ್ಯ ಬೆಳೆಗಳು. ಜಾಯಿಕಾಯಿ, ವೀಳ್ಯದೆಲೆ, ಅರಸಿನ, ಕರಿಮೆಣಸು, ವೆನಿಲ್ಲಾ, ಪಪ್ಪಾಯಿ ಉಪಬೆಳೆಗಳು.
ಅಕ್ಕಪಕ್ಕದ ತೋಟಗಳಲ್ಲಿ ಮರಗಿಡಗಳೆಲ್ಲ ಒಣಗಿ ಸೊರಗಿದ್ದವು. ಯಾಕೆಂದರೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಹಿಂದಿನ ಎರಡು ವರುಷಗಳಲ್ಲಿ ಮಳೆ ಬಂದದ್ದೇ ಇಲ್ಲ ಅನ್ನಬೇಕು. ವೀರಪ್ಪರ ತೋಟಕ್ಕೆ ನಾವು ಭೇಟಿ ಕೊಟ್ಟ ವರುಷ ಅಕ್ಟೋಬರ್ ತನಕ ಅಲ್ಪಸ್ವಲ್ಪ ಮಳೆ. ಅನಂತರ ಒಂದು ಹನಿ ಮಳೆ ಬಿದ್ದಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಇವರ ತೋಟದ ಮರಗಿಡಗಳು ಬಾಡಿದ್ದರೂ ಹಸುರು ಉಳಿದಿತ್ತು.
"ನಿಮ್ ತೋಟದಾಗೆ ನೀರಿನ್ ಪಸೆ ಉಳಿಸಿಕೊಳ್ಳಾಕೆ ಏನ್ ಮಾಡಿದ್ರಿ?" ಎಂಬ ನಮ್ಮ ಪ್ರಶ್ನೆಗೆ ವೀರಪ್ಪರ ಉತ್ತರ, "ನಮ್ ತೋಟದಾಗೆ ಏನೂ ಬೇಸಾಯ ಮಾಡಿಲ್ಲ. ಅಂದ್ರೆ ಶೂನ್ಯ ಬೇಸಾಯ. ಹಾಗಂತ ಒಂದೇಟಿಗೆ ನಾನ್ ಇಡೀ ತೋಟ ಶೂನ್ಯ ಬೇಸಾಯಕ್ಕೆ ತರ‍್ಲಿಲ್ಲ. ಹತ್ತುಹತ್ತು ಗುಂಟೇನೇ ಬಿಡಿಸ್ತಾ ಬಂದೆ. ಇಡೀ ತೋಟಾನ ಶೂನ್ಯ ಬೇಸಾಯಕ್ಕೆ ತರೋದಕ್ಕೆ ನಂಗೆ ಇಪ್ಪತ್ತು ವರ್ಷ ಬೇಕಾತು."
ಮೇ ೨, ೨೦೦೯ರಂದು ಅಪರಾಹ್ನ ಬೈಕಿನಲ್ಲಿ ಮಂಚಿಗೆ ಹೋಗಿದ್ದೆ, ಆಪ್ತರಾದ ಶ್ರೀನಿವಾಸ ಆಚಾರ್ ಅವರ ಮನೆಗೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ದಾಟಿ, ಪುತ್ತೂರು ರಸ್ತೆಯಲ್ಲಿ ಮೇಲ್ಕಾರಿನಲ್ಲಿ ಬಲಕ್ಕೆ ತಿರುಗಿ ಸಾಗಿದ್ದೆ. ಬಿಸಿಲಿನಲ್ಲಿ ಒಂದು ತಾಸಿನ ಪಯಣ ಬೇಸಗೆಯ ಬಿಸಿ ಮುಟ್ಟಿಸಿತ್ತು.
ಅಂದು ಸಂಜೆಯಾಗುತ್ತಿದ್ದಂತೆ ಶ್ರೀನಿವಾಸ ಆಚಾರ್ ಕರೆದರು, "ಗುಡ್ಡದಲ್ಲಿ ದೊಡ್ಡ ಹೊಂಡ ಮಾಡಿಸಿದ್ದೇನೆ. ನೋಡಿ ಬರುವಾ". ಅವರ ಮನೆಯ ಹಿಂಭಾಗದಲ್ಲಿರುವ ಗುಡ್ಡ ಏರಿದೆವು. ಅಲ್ಲಿ ಆಯಕಟ್ಟಿನ ಜಾಗದಲ್ಲಿ ವಿಸ್ತಾರವಾದ ಹೊಂಡ. ಸುಮಾರು ೮೦ ಅಡಿ ಉದ್ದ, ೬೦ ಅಡಿ ಅಗಲ, ೩ ಅಡಿ ಆಳ. ಅದರ ಅಕ್ಕಪಕ್ಕದಿಂದ ಮಳೆನೀರು ಹರಿದು ಬರಲು ತೋಡುಗಳ ಜಾಲ. ಅಲ್ಲಿ ವರುಷಕ್ಕೆ ೪,೦೦೦ ಮಿಮೀ ಮಳೆ. ಮಳೆನೀರು ತುಂಬಿದರೆ ಆ ಹೊಂಡ ೪.೫ ಲಕ್ಷ ಲೀಟರಿನ ನೀರ ಖಜಾನೆ.
ಮೊನ್ನೆ ಶ್ರೀನಿವಾಸ ಆಚಾರ್ ಬಂದು ಹೇಳಿದ ಸಿಹಿಸುದ್ದಿ, "ಜುಲಾಯಿ ತಿಂಗಳ ಮಳೆಗೆ ಹೊಂಡ ತುಂಬಿ ನೀರು ಹೊರಕ್ಕೆ ಹರಿದಿದೆ ಮಾರಾಯರೇ". ಮುಂದಿನ ವರುಷ ಅದರ ಬದಿಯ ಕಚ್ಚಾ ಹಾದಿಗೆ ಮಣ್ಣು ಹಾಕಿ ಇನ್ನೂ ಎರಡಡಿ ಏರಿಸಬೇಕು. ಇನ್ನಷ್ಟು ನೀರು ಹೊಂಡದಲ್ಲಿ ತುಂಬಲಿ, ಎಂಬುದು ಅವರ ಯೋಜನೆ.
ಶ್ರೀನಿವಾಸ ಆಚಾರ್ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ. ’ನೀರಿಂಗಿಸುವ ವಿಷಯ ಬರೀ ಹೇಳಿದ್ರೆ ಸಾಲದು. ಮಾಡಿ ತೋರಿಸಬೇಕು’ ಎಂಬುದು ಅವರ ನಿಲುವು. ಆ ಗುಡ್ಡದ ಬುಡದಲ್ಲಿರುವ ಅವರ ಅಡಿಕೆ ತೋಟಕ್ಕೆ ನೀರಿನಾಸರೆ ಹಳೆಯ ಕೆರೆ. ಅದರಲ್ಲಿ ಬೇಸಗೆಯಲ್ಲಿ ಕೂಡ ಸಾಕಷ್ಟು ನೀರಿರುತ್ತದೆ. ಆದರೂ ಧುಮುಕಿ ಹೋಗುವ ಮಳೆನೀರನ್ನು ಹಿಡಿದಿಡುವ, ಇಂಗಿಸುವ ಕಾಯಕಕ್ಕೆ ಕೈಹಾಕಿದ್ದಾರೆ.
ಮೇ ೧೨, ೨೦೦೯ರಂದು ಸುಳ್ಯದಲ್ಲಿ ಪ್ರಸಾದ್ ರಕ್ಷಿದಿ ಅವರ ಭೇಟಿ. ಆಗ, ತನ್ನ ಜಮೀನಿನ ನೀರಿನ ಕೊರತೆ ಎದುರಿಸಲಿಕ್ಕಾಗಿ ಮಳೆನೀರಿಂಗಿಸಿದ ಅನುಭವ ಹಂಚಿಕೊಂಡಿದ್ದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳ್ಳಿ ರಕ್ಷಿದಿಯಲ್ಲಿ ಅವರ ಜಮೀನು. ಅದು ವಾರ್ಷಿಕ ೨,೫೦೦ರಿಂದ ೩,೦೦೦ ಮಿಮೀ ಮಳೆಯಾಗುವ ಮಲೆನಾಡು ಪ್ರದೇಶ.
ನಮ್ಮ ಮನೆಗಳಿಗೆ ನಳ್ಳಿ ನೀರು ಸರಬರಾಜು ಇಲ್ಲವೆಂದಾದರೆ ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಅಥವಾ ಮಹಾನಗರಪಾಲಿಕೆ ಟ್ಯಾಂಕರಿನಲ್ಲಿ ನೀರು ಒದಗಿಸಬೇಕು ಎಂಬ ನಿರೀಕ್ಷೆ ನಮ್ಮದು.
ನೀರಿನ ಅಭಾವ ಇದ್ದಲ್ಲಿ ಇದು ಸರಿ. ಆದರೆ ಕರಾವಳಿ ಜಿಲ್ಲೆಗಳಲ್ಲಿ? ಇಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ೪,೪೦೦ ಮಿಮೀ. ಅಂದರೆ ೫ ಸೆಂಟ್ಸಿನ ಮನೆಸೈಟಿನಲ್ಲಿ ವರುಷಕ್ಕೆ ಸುರಿಯುವ ಮಳೆ ೮ ಲಕ್ಷ ಲೀಟರ್. ಇದು ೨೦ ಜನರಿಗೆ ಒಂದು ವರುಷಕ್ಕೆ ಧಾರಾಳ ಸಾಕು. ಇಂಥಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಏನೆನ್ನಬೇಕು?
ಕೇವಲ ೫೪೦ ಮಿಮೀ ವಾರ್ಷಿಕ ಮಳೆ ಬೀಳುವ ಬಾಗಲಕೋಟೆಯಲ್ಲಿ ಮಳೆನೀರು ಕೊಯ್ಲು ಮಾಡಿ ಬಳಸುತ್ತಾರೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಮಾರ್ಚ್ ತಿಂಗಳಿನಲ್ಲಿಯೇ ಟ್ಯಾಂಕರ್‍ಗಳಲ್ಲಿ ನೀರಿನ ಸರಬರಾಜು ಆರಂಭ! ಮಂಗಳೂರಿನ ಕೆಲವು ಪ್ರದೇಶಗಳಿಗೂ ಬೇಸಗೆಯಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು. ಆದರೆ ಯಾರಿಗೂ ಏನೂ ಅನಿಸುವುದಿಲ್ಲ.
ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ನೀರು ಒದಗಿಸಲಿಕ್ಕಾಗಿ ೨೦೦೮ - ೦೯ರಲ್ಲಿ ಜಿಲ್ಲಾ ಪಂಚಾಯತಿ ಮಾಡಿದ ವೆಚ್ಚ ರೂಪಾಯಿ ೧೩ ಕೋಟಿ. (ಹೊಸ ಬೋರ್‍ವೆಲ್ ಕೊರೆಸುವುದು, ಪೈಪ್‍ಲೈನ್ ಜೋಡಣೆ, ಹ್ಯಾಂಡ್‍ಪಂಪ್ ರಿಪೇರಿ ಇತ್ಯಾದಿ ಉದ್ದೇಶಗಳಿಗಾಗಿ) ಆದರೆ ಯಾರಿಗೂ ಏನೂ ಅನಿಸುವುದಿಲ್ಲ.
ಮಧ್ಯಪ್ರದೇಶದ ಸೆಹೊರೆ ಪಟ್ಟಣವಾಸಿ ಅನುಪ್ ಚೌಧರಿ. ಸೈಕಲಿನಲ್ಲಿ ಸುತ್ತಾಡಿ ಹಾಲು ಮಾರಿ ಜೀವನ ನಡೆಸುವವರು. ಅವರು ಎಲ್ಲರಂತಲ್ಲ. ಪ್ರತಿ ವರುಷ ಬೇಸಗೆಯಲ್ಲಿ ಅವರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತತ್ವಾರ. ಆಗ ಟ್ಯಾಂಕರ್-ಲಾರಿಗಳಲ್ಲಿ ನೀರಿನ ಸರಬರಾಜು. ಇದರಿಂದ ಕೆಲವು ಕಾರ್ಪೊರೇಟರ್‍ಗಳಿಗೆ ಹಣ ಲಪಟಾಯಿಸಲು ಅವಕಾಶ. ಆದರೆ ಪ್ರತಿಯೊಂದು ಟ್ಯಾಂಕರ್ ನೀರು ಸರಬರಾಜು ಮಾಡಿದಾಗ, ಅದರಿಂದ ನೀರು ಪಡೆದ ಐವರು ಸ್ಥಳೀಯರು ರಶೀದಿಗೆ ಸಹಿ ಮಾಡಬೇಕು ಎಂಬುದು ನಿಯಮ. ಹಾಗಾಗಿ, ಅನುಪ್ ಚೌಧರಿ "ಮಾಹಿತಿ ಹಕ್ಕು ಕಾಯಿದೆ" ಪ್ರಕಾರ ರೂ.೧೦ ಶುಲ್ಕ ಪಾವತಿಸಿ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಕೇಳಿದರು; ಆ ರಶೀದಿಗಳ ಯಥಾಪ್ರತಿಗಳನ್ನು ಕೇಳಿದರು.
"ಏನು ಮಾತನಾಡುತ್ತಿದ್ದೀರಿ ನೀವೆಲ್ಲ?" ಎಂಬ ಪ್ರಶ್ನೆ ಆ ಸಭೆಯಲ್ಲಿ ಇದ್ದವರನ್ನೆಲ್ಲ ಬೆಚ್ಚಿ ಬೀಳಿಸಿತು. ಯಾಕೆಂದರೆ ಪ್ರಶ್ನೆ ಕೇಳಿದವನು ಬಹುರಾಷ್ಟ್ರೀಯ ಕಪ್ಪುಕೋಲಾ ಕಂಪೆನಿಯನ್ನು ವಾರದ ಮುಂಚೆ ಸೇರಿದ್ದ ಯುವಕ. ವಯಸ್ಸಿನಲ್ಲಿ ಅಲ್ಲಿದ್ದ ಎಲ್ಲರಿಗಿಂತ ಕಿರಿಯ.
ಕಳೆದ ಒಂದು ತಾಸಿನಿಂದ ಆ ಸಭೆಯಲ್ಲಿ ಬಿರುಸಿನ ಚರ್ಚೆ. ಎದುರಾಳಿ ಕಂಪೆನಿಯ ಕೆಂಪುಕೋಲಾಕ್ಕಿಂತ ಕಪ್ಪುಕೋಲಾವನ್ನು ಜಾಸ್ತಿ ಮಾರಾಟ ಮಾಡುವುದು ಹೇಗೆ? ಎಂಬ ಬಗ್ಗೆ. ಹಲವು ಐಡಿಯಾಗಳ, ಸಲಹೆಗಳ ಪರಿಶೀಲನೆ. ಮಾರಾಟಗಾರರಿಗೆ ಹೆಚ್ಚು ಕಮಿಷನ್ ಪಾವತಿ ಮತ್ತು ಹೆಚ್ಚು ಕೋಲಾ ಕುಡಿಯುವವರಿಗೆ ಲಾಟರಿ ಎತ್ತಿ ಬಹುಮಾನ ಇತ್ಯಾದಿ ಪ್ರಸ್ತಾಪಗಳು. ಇದನ್ನೆಲ್ಲ ಕೇಳಿಕೇಳಿ ಬೇಸತ್ತ ಯುವಕ ಎದ್ದು ನಿಂತು, ಏರಿದ ಸ್ವರದಲ್ಲಿ ಆ ಪ್ರಶ್ನೆ ಕೇಳಿದ್ದ.
"ಮಾರಾಟದಲ್ಲಿ ನಮ್ಮ ಪ್ರತಿಸ್ಫರ್ಧಿ ಕೆಂಪುಕೋಲಾ ಎಂದು ಭಾವಿಸಿ ನೀವೆಲ್ಲ ಚರ್ಚೆ ಮಾಡುತ್ತಿದ್ದೀರಿ, ಹಾಗಂತ ಹೇಳಿದವರು ಯಾರು?" ಎನ್ನುತ್ತಾ ಯುವಕ ಅಲ್ಲಿದ್ದ ಹಳೆಯ ತಲೆಗಳತ್ತ ಒಮ್ಮೆ ಕಣ್ಣು ಹಾಯಿಸಿದ. ಅಲ್ಲಿ ಅಚ್ಚರಿಯ ಮೌನ ನೆಲೆಸಿತ್ತು. "ನಮ್ಮ ಕಪ್ಪುಕೋಲಾದ ಪ್ರತಿಸ್ಫರ್ಧಿ ಕೆಂಪುಕೋಲಾ ಅಲ್ಲ" ಎಂದು ದೃಢವಾದ ಸ್ವರದಲ್ಲಿ ಹೇಳಿದ ಯುವಕ ಒಮ್ಮೆ ತನ್ನ ಮಾತು ನಿಲ್ಲಿಸಿದ.
"ನಿನ್ನ ಪ್ರಕಾರ ನಮ್ಮ ಪ್ರತಿಸ್ಫರ್ಧಿ ಯಾರು?" ಎಂದು ತಲೆ ನರೆತ ಒಬ್ಬರು ತಡೆಯಲಾಗದೆ ಕೇಳಿಯೇ ಬಿಟ್ಟರು. ಆ ಯುವಕ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಹೇಳಿದ, "ನಮ್ಮ ಪ್ರತಿಸ್ಫರ್ಧಿ ನೀರು." ಅಲ್ಲಿದ್ದ ಎಲ್ಲರೂ ಇನ್ನೊಮ್ಮೆ ಬೆಚ್ಚಿ ಬಿದ್ದರು.
ಆ ಯುವಕ ತನ್ನ ಮಾತು ಮುಂದುವರಿಸಿದ. "ಹೌದು, ನಮ್ಮ ಪ್ರತಿಸ್ಫರ್ಧಿ ನೀರು. ಜನರು ನೀರಿನ ಬದಲಾಗಿ ನಮ್ಮ ಕಪ್ಪುಕೋಲಾ ಕುಡಿಯುವಂತೆ ಮಾಡೋದು ಹೇಗೆ? ಎಂದು ನಾವು ಯೋಚನೆ ಮಾಡಬೇಕೇ ವಿನಃ ಕೆಂಪುಕೋಲಾದ ಮಾರಾಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ."
ವ್ಯಾಪಾರಿ ಮನಸ್ಸು ಹೇಗೆ ಯೋಚನೆ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಇದರ ಸತ್ಯಾಸತ್ಯತೆ ಏನೇ ಇರಲಿ. ಈ ರೀತಿಯ ಮಾರಾಟತಂತ್ರಗಳು ಬಳಕೆಗೆ ಬರುತ್ತಿವೆಯೇ? ಎಂಬುದರ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ.
ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ ಸರಕಾರವು ರೂಪಾಯಿ ೧,೦೦೦ ಕೋಟಿಗಳಿಗಿಂತ ಜಾಸ್ತಿ ವೆಚ್ಚ ಮಾಡಿದೆ.
ಆದರೆ ನಮ್ಮ ದೇಶದ ಸಾವಿರಾರು ಹಳ್ಳಿಗಳ ಲಕ್ಷಗಟ್ಟಲೆ ಮನೆಗಳಿಗೆ ಇಂದಿಗೂ ಕುಡಿಯುವ ನೀರು ಒದಗಿಸುವ ವ್ಯವಸ್ಥೆಯಿಲ್ಲ. ಅಂತಹ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಿಕ್ಕಾಗಿ ಕೆಲವು ಕೋಟಿ ರೂಪಾಯಿಗಳನ್ನು ಸರಕಾರ ಬಜೆಟಿನಲ್ಲಿ ಒದಗಿಸಿದರೆ ಅದುವೇ ವಿಶೇಷ. ಅಂತಹ ಒಂದು ಹಳ್ಳಿಯ ಮಹಿಳೆ ಕಮಲಾ ಹೆಂಟಾಲಾ. ಗುಡ್ಡದ ತೊರೆಯಿಂದ ಮನೆಗೆ ನೀರು ತರಲಿಕ್ಕಾಗಿ ಪ್ರತಿ ದಿನ ೨ ಕಿಲೋಮೀಟರ್ ದೂರ ಕಲ್ಲುಮುಳ್ಳಿನ ಹಾದಿ ನಡೆಯುವಾಗ ಅವಳಿಗೆ ಒಂದೇ ಯೋಚನೆ, ’ಇದಕ್ಕೇನು ಪರಿಹಾರ?’
ಕಮಲಾಳ ಹಳ್ಳಿ ಮಹುಪದರ್ ಒರಿಸ್ಸಾದ ಮೈಕನ್‍ಗಿರಿ ಜಿಲ್ಲೆಯಲ್ಲಿದೆ. ಯೋಜನಾ ಆಯೋಗದ ಪ್ರಕಾರ ಭಾರತದ ಹತ್ತು ಅತ್ಯಂತ ಬಡ ಜಿಲ್ಲೆಗಳಲ್ಲಿ ಅದೊಂದು. ಅವಳ ಹಳ್ಳಿ ತಲಪಬೇಕಾದರೆ ತಾರ್‍ಕೋಟೆ ಗ್ರಾಮ ಪಂಚಾಯತಿನಿಂದ ೧೨ ಕಿಮೀ ನಡೆದು ಹೋಗಬೇಕು.
ಒರಿಸ್ಸಾದ ಮುಚ್ಚುಕೊಂಡ ನೀರಾವರಿ ಯೋಜನೆಗಾಗಿ ಹಲವಾರು ಕುಟುಂಬಗಳನ್ನು ಅವರ ಪೂರ್ವಿಕರ ಜಮೀನಿನಿಂದ ಒಕ್ಕಲೆಬ್ಬಿಸಲಾಯಿತು. ಅವರೆಲ್ಲರ ಜಮೀನು ಜಲಾಶಯದ ನೀರಿನಲ್ಲಿ ಮುಳುಗಡೆಯಾಯಿತು. ಮೈಕನ್‍ಗಿರಿ ಜಿಲ್ಲೆಯೊಂದರಲ್ಲೇ ೮೦೦ ಕುಟುಂಬಗಳು ಹೀಗೆ ನಿರ್ವಸಿತವಾದವು.
ಕಮಲಾ ಮತ್ತು ಇತರ ಮಹಿಳೆಯರು ಕಾಡಿನ ಹಾದಿಯಲ್ಲಿ ನೀರು ತರಲಿಕ್ಕಾಗಿ ನಡೆದೇ ಹೋಗಬೇಕು. ಕಾಡು ಪ್ರಾಣಿಗಳಿಂದ ಅವರನ್ನು ಕಾಪಾಡಲಿಕ್ಕಾಗಿ ಬಿಲ್ಲುಬಾಣ ಹಿಡಿದ ಗಂಡಸರು ಅವರೊಂದಿಗೇ ನಡೆಯುತ್ತಿದ್ದರು. ನೀರಿಗಾಗಿ ಅವರು ಕೆಲವು ತಿಂಗಳು ಹೀಗೇ ಪಡುಪಾಟಲು ಪಟ್ಟರು. ಅನಂತರ ಕಮಲಾ ಹಳ್ಳಿಯ ಮಹಿಳೆಯರ ಸಭೆ ಕರೆದಳು. "ಇದಕ್ಕೇನು ಪರಿಹಾರ?" ಎಂಬುದೇ ಚರ್ಚೆಯ ವಿಷಯ. ಅಂತಿಮವಾಗಿ ಅವರೆಲ್ಲ ನಿರ್ಧರಿಸಿದರು: ಬಿದಿರು ಗಳಗಳನ್ನು ಜೋಡಿಸಿ ತೊರೆಯಿಂದ ಹಳ್ಳಿಗೆ ನೀರು ಹಾಯಿಸಬೇಕೆಂದು.
"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"
"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."
ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.
ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.
ಇದೆಲ್ಲದರ ಹಿನ್ನೆಲೆ ಏನು? ವಸಂತಕುಂಜ ಪ್ರದೇಶದ ನಿವಾಸಿಗಳಿಗೆ ಹಲವು ವರುಷಗಳಿಂದ ನೀರಿನ ಪರದಾಟ ತಪ್ಪಿಲ್ಲ. ಆದರೂ ಹಲವಾರು ಮನೆಗಳವರಿಗೆ ನೀರೆಂದರೆ ಅಸಡ್ಡೆ. ಉದಾಹರಣೆಗೆ ಪಂಪ್ ಚಾಲೂ ಮಾಡಿದರೆ ಓವರ್‍ಹೆಡ್ ಟ್ಯಾಂಕ್ ತುಂಬಿದೊಡನೆ ನಿಲ್ಲಿಸುತ್ತಿರಲಿಲ್ಲ. ಕುಡಿಯುವ ನೀರು ಗಂಟೆಗಟ್ಟಲೆ ಉಕ್ಕಿ ಹರಿದು ಪೋಲಾಗುತ್ತಿತ್ತು. ಎಪ್ರಿಲ್ ೨೦೦೯ರಲ್ಲಿ ಅಲ್ಲಿನ ಕೆಲವು ಶಾಲಾಮಕ್ಕಳು ಈ ಸಮಸ್ಯೆ ಕೈಗೆತ್ತಿಕೊಂಡರು. ೯೦೦ ಮನೆಗಳಿರುವ ತಮ್ಮ ಕಾಲೊನಿಯಲ್ಲಿ ಜಲಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದರು.
ಮರುದಿನದಿಂದ ಪ್ರತಿ ದಿನ ಬೆಳಗ್ಗೆ ಕಾಲೊನಿಯಲ್ಲಿ ಈ ಶಾಲಾಮಕ್ಕಳ ಸಣ್ಣ ತಂಡಗಳ ದಂಡಯಾತ್ರೆ ಆರಂಭ. ಅದಕ್ಕಾಗಿ ದಿನದಿನವೂ ಆ ಕಾಲೊನಿಯ ಒಂದು ರಸ್ತೆಯ ಆಯ್ಕೆ. ಅಲ್ಲಿ ನಡೆದು ಹೋಗುವಾಗ, ಯಾವುದಾದರೂ ಮನೆಯ ಓವರ್‍ಹೆಡ್ ಟ್ಯಾಂಕಿನಿಂದ ನೀರು ಉಕ್ಕಿ ಹರಿಯುತ್ತಿದ್ದರೆ, ಆ ಮನೆಯ ಬಾಗಿಲು ತಟ್ಟುತ್ತಿದ್ದರು. ಮನೆಯವರೊಂದಿಗೆ "ನೀರಿನ ಕೊರತೆ ನಮ್ಮ ಕಾಲೊನಿಯ ಸಮಸ್ಯೆ. ನಿಮ್ಮ ಟ್ಯಾಂಕಿನಿಂದ ನೀರು ಪೋಲಾಗುತ್ತಿದೆ. ನಿಮ್ಮ ಪಂಪ್ ನಿಲ್ಲಿಸಿ" ಎಂದು ವಿನಂತಿಸುತ್ತಿದ್ದರು.
ತಮ್ಮ ಸಾಹಸದ ಬಗ್ಗೆ ಮದರ್ಸ್ ಇಂಟರ್‍ನ್ಯಾಷನಲ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಸಿದ್ಧಾರ್ಥ ವಾರ್‍ಷ್ನೇಯ ಹೇಳುತ್ತಾನೆ, "ಅವರಲ್ಲಿ ಕೆಲವರಿಗೆ ತಮ್ಮ ತಪ್ಪು ತಿಳಿಯುತ್ತಿತ್ತು. ಅವರು ತಕ್ಷಣವೇ ಪಂಪ್ ನಿಲ್ಲಿಸುತ್ತಿದ್ದರು. ಆದರೆ ಹಲವರು ನಮ್ಮನ್ನು ಗದರಿಸಿ, ರಪ್ಪನೆ ಬಾಗಿಲು ಮುಚ್ಚುತ್ತಿದ್ದರು."
ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒಟ್ಟು ಆದಾಯ ರೂ.೧೭೫.೩೮ ಕೋಟಿ ಮತ್ತು ಒಟ್ಟು ವೆಚ್ಚ ರೂ. ೧೭೩.೯೦ ಕೋಟಿ)
ನೀರಿನ ಶುಲ್ಕದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಅದರ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಮಂಗಳೂರು ಮಹಾನಗರಪಾಲಿಕೆ ಪ್ರದೇಶದಲ್ಲಿ ಸುಮಾರು ೫೪,೦೦೦ ನೀರಿನ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ನೀರಿನ ಬಳಕೆದಾರರಿಗೆ ಜೂನ್ ೨೦೦೮ರ ವರೆಗೆ ಅರ್ಧ ವಾರ್ಷಿಕ (ಆರು ತಿಂಗಳಿಗೊಮ್ಮೆ) ನೀರಿನ ಬಿಲ್ ನೀಡಲಾಗುತ್ತಿತ್ತು.
ಅಲ್ಲಿಂದೀಚೆಗೆ ಬಳಕೆದಾರರಿಗೆ ಪ್ರತಿ ತಿಂಗಳೂ ನೀರಿನ ಬಿಲ್ ನೀಡಲಾಗುತ್ತಿದೆ. (ಅವನ್ನು ಪಾವತಿಸಲು ಎರಡು ಸಾರ್ವಜನಿಕ ರಂಗದ ಬ್ಯಾಂಕಿನ ಬ್ರಾಂಚ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲ ಬ್ರಾಂಚ್‍ಗಳಲ್ಲಿ ಎಲ್ಲ ವ್ಯವಹಾರದ ದಿನಗಳಲ್ಲಿ ನೀರಿನ ಬಿಲ್ ಪಾವತಿ ಸ್ವೀಕರಿಸುತ್ತಿಲ್ಲ.) ಮುಂಚೆ ವರುಷಕ್ಕೆ ಎರಡು ಸಲ ಮಾತ್ರ ನೀರಿನ ಬಿಲ್ ಕಟ್ಟಬೇಕಾಗಿದ್ದ ನಾಗರಿಕರು ಈಗ ಬಿಲ್ ಪಾವತಿಸಲಿಕ್ಕಾಗಿ ಪ್ರತಿ ತಿಂಗಳೂ ಬ್ಯಾಂಕಿಗೆ ಹೋಗಬೇಕಾಗಿದೆ. ಇದರಿಂದಾಗಿ, ನೀರಿನ ಬಿಲ್ ಪಾವತಿಸಲು ಮಾಡಬೇಕಾದ (ಬಸ್, ರಿಕ್ಷಾ ಇತ್ಯಾದಿ) ವೆಚ್ಚದಲ್ಲಿ ಆರು ಪಟ್ಟು ಹೆಚ್ಚಳ. ಅದಲ್ಲದೆ, ವರುಷಕ್ಕೆ ೧೨ ಬಾರಿ ಉದ್ದ ಕ್ಯೂನಲ್ಲಿ ಕಾದು ನಿಲ್ಲುವ ಕಷ್ಟ.
ಹಾಗಾದರೆ ಈ ಹೊಸ ವ್ಯವಸ್ಥೆಯಿಂದ ಯಾರಿಗೆ ಲಾಭ? ಎಂಬ ಪ್ರಶ್ನೆಗೆ ಮಹಾನಗರಪಾಲಿಕೆಯ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಈ ನಡುವೆ, ನೀರಿನ ಬಿಲ್‍ಗಳನ್ನು (ಅಂಗೈಯಗಲದ ಸಾಧನದಿಂದ) ಮನೆಮನೆಗೆ ಹೋಗಿ ಕೊಡುವ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಒಂದು ನೀರಿನ ಮೀಟರ್ ರೀಡಿಂಗ್ ಮಾಡಿ ಬಿಲ್ ಕೊಟ್ಟದ್ದಕ್ಕೆ ಪಾಲಿಕೆ ಪಾವತಿಸುವ ಸೇವಾಶುಲ್ಕ ರೂಪಾಯಿ ೬.೭೦ ಎಂಬ ಮಾಹಿತಿ ಸಿಕ್ಕಿದೆ.
ಹೈದರಾಬಾದಿಗೆ ಹೋಗಿದ್ದಾಗ, ಮಹಾನಗರದ ಕೇಂದ್ರ ಭಾಗದಲ್ಲಿದ್ದ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿಯ ಬಾತ್‍ರೂಂನ ಬೇಸಿನ್‍ನ ಮೇಲ್ಗಡೆ ಗೋಡೆಯಲ್ಲಿ ದೊಡ್ಡ ಕನ್ನಡಿ. ಅದರ ಪಕ್ಕದಲ್ಲಿ ಕಣ್ಣಿಗೆ ರಾಚುವಂತೆ ಒಂದು ಭಿತ್ತಿಪತ್ರ.
ಆ ಭಿತ್ತಿಪತ್ರದಲ್ಲಿದ್ದ ಮಾಹಿತಿ: "ನೀರು ಬೆಲೆ ಕಟ್ಟಲಾಗದ ಸಂಪತ್ತು. ಅದನ್ನು ಉಳಿಸೋಣ. ದಯವಿಟ್ಟು ಸಹಕರಿಸಿ. ಅದಕ್ಕಾಗಿ ನೀವೇನು ಮಾಡಬಹುದು?
೧) ಹಲ್ಲುಜ್ಜುವಾಗ: ಮಗ್‍ನಲ್ಲಿ ನೀರು ತುಂಬಿಸಿಕೊಂಡು ಹಲ್ಲುಜ್ಜಿ. ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ ನಳ (ಟ್ಯಾಪ್) ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀಟರ್ ನೀರು ಹಾಳು.
೨) ಮುಖ ಮತ್ತು ಕೈ ತೊಳೆಯುವಾಗ: ಬಕೆಟಿನಲ್ಲಿ ನೀರು ತುಂಬಿಸಿ, ಆ ನೀರನ್ನು ಮಗ್‍ನಿಂದ ಎತ್ತಿಕೊಂಡು ತೊಳೆಯಿರಿ. ಅರ್ಧ ಲೀಟರ್ ನೀರು ಸಾಕಾಗುತ್ತದೆ. ಇದರ ಬದಲಾಗಿ, ನಳ ತೆರೆದಿಟ್ಟರೆ, ಎರಡೇ ನಿಮಿಷಗಳಲ್ಲಿ ೧೮ ಲೀಟರ್ ನೀರು ಖಾಲಿ.
೩) ಗಡ್ಡ ತೆಗೆಯುವಾಗ: ಮಗ್‍ನಲ್ಲಿ ನೀರು ತುಂಬಿಟ್ಟು ಬಳಸಿದರೆ, ಕಾಲು ಅಥವಾ ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ, ನಳ ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀ.ನೀರು ಹಾಳು.
೪) ಷವರ್‍ನಿಂದ ಸ್ನಾನ ಮಾಡುವಾಗ: ಮೈ ಒದ್ದೆ ಮಾಡಿಕೊಂಡು, ನಳದ ನೀರು ನಿಲ್ಲಿಸಿ, ಸೋಪು ಹಚ್ಚಿಕೊಂಡು, ಅನಂತರ ನಳದ ನೀರಿನಿಂದ ಮೈ ತೊಳೆದುಕೊಂಡರೆ ೨೦ ಲೀಟರ್ ನೀರು ಸಾಕು. ಇದರ ಬದಲಾಗಿ, ಷವರ್‍ನಿಂದ ಅಷ್ಟು ಹೊತ್ತೂ ನೀರು ಸುರಿಯುತ್ತಿದ್ದರೆ, ೧೦ ನಿಮಿಷಗಳಲ್ಲಿ ೧೦೦ ಲೀಟರ್ ನೀರು ಖಾಲಿ.
೫) ಟಬ್‍ನಲ್ಲಿ ಸ್ನಾನ: ಇದರ ಬದಲಾಗಿ ಷವರ್‍ನಿಂದ ಸ್ನಾನ ಮಾಡುವಿರಾ? ಯಾಕೆಂದರೆ, ಒಮ್ಮೆ ಟಬ್ ಭರ್ತಿ ಮಾಡಲು ೧೧೦ ಲೀಟರ್ ನೀರು ಬೇಕು. ಎರಡು ಸಲ ಭರ್ತಿ ಮಾಡಬೇಕಾದರೆ ೨೨೦ ಲೀಟರ್ ನೀರು ಅಗತ್ಯ.
೬) ನೀರು ಲೀಕ್ ಆಗುತ್ತಿದ್ದರೆ....... ತಕ್ಷಣ ನಮಗೆ ತಿಳಿಸಿ. ಅದನ್ನು ಹಾಗೇ ಬಿಟ್ಟರೆ ಎಂತಹ ನಷ್ಟ ಗೊತ್ತೇ? ಹನಿಹನಿ ನೀರು ನಿಧಾನವಾಗಿ ಬೀಳುತ್ತಿದ್ದರೆ, ಒಂದು ದಿನಕ್ಕೆ ೪೦೦ ಲೀಟರ್ ನೀರು ಹಾಳು, ಅದೇ ಹನಿಹನಿ ನೀರು ವೇಗವಾಗಿ ಬೀಳುತ್ತಿದ್ದರೆ, ದಿನಕ್ಕೆ ೩,೦೦೦ ಲೀಟರ್ ನೀರು ಹಾಳು."