ಜಲಜಾಗೃತಿ(26) ಮಂಗಳೂರಿನ ನೀರಿನ ಬಿಲ್‍ಗಳ "ಸುದ್ದಿ"

ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒಟ್ಟು ಆದಾಯ ರೂ.೧೭೫.೩೮ ಕೋಟಿ ಮತ್ತು ಒಟ್ಟು ವೆಚ್ಚ ರೂ. ೧೭೩.೯೦ ಕೋಟಿ)

ನೀರಿನ ಶುಲ್ಕದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಅದರ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಮಂಗಳೂರು ಮಹಾನಗರಪಾಲಿಕೆ ಪ್ರದೇಶದಲ್ಲಿ ಸುಮಾರು ೫೪,೦೦೦ ನೀರಿನ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ನೀರಿನ ಬಳಕೆದಾರರಿಗೆ ಜೂನ್ ೨೦೦೮ರ ವರೆಗೆ ಅರ್ಧ ವಾರ್ಷಿಕ (ಆರು ತಿಂಗಳಿಗೊಮ್ಮೆ) ನೀರಿನ ಬಿಲ್ ನೀಡಲಾಗುತ್ತಿತ್ತು.

ಅಲ್ಲಿಂದೀಚೆಗೆ ಬಳಕೆದಾರರಿಗೆ ಪ್ರತಿ ತಿಂಗಳೂ ನೀರಿನ ಬಿಲ್ ನೀಡಲಾಗುತ್ತಿದೆ. (ಅವನ್ನು ಪಾವತಿಸಲು ಎರಡು ಸಾರ್ವಜನಿಕ ರಂಗದ ಬ್ಯಾಂಕಿನ ಬ್ರಾಂಚ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲ ಬ್ರಾಂಚ್‍ಗಳಲ್ಲಿ ಎಲ್ಲ ವ್ಯವಹಾರದ ದಿನಗಳಲ್ಲಿ ನೀರಿನ ಬಿಲ್ ಪಾವತಿ ಸ್ವೀಕರಿಸುತ್ತಿಲ್ಲ.) ಮುಂಚೆ ವರುಷಕ್ಕೆ ಎರಡು ಸಲ ಮಾತ್ರ ನೀರಿನ ಬಿಲ್ ಕಟ್ಟಬೇಕಾಗಿದ್ದ ನಾಗರಿಕರು ಈಗ ಬಿಲ್ ಪಾವತಿಸಲಿಕ್ಕಾಗಿ ಪ್ರತಿ ತಿಂಗಳೂ ಬ್ಯಾಂಕಿಗೆ ಹೋಗಬೇಕಾಗಿದೆ. ಇದರಿಂದಾಗಿ, ನೀರಿನ ಬಿಲ್ ಪಾವತಿಸಲು ಮಾಡಬೇಕಾದ (ಬಸ್, ರಿಕ್ಷಾ ಇತ್ಯಾದಿ) ವೆಚ್ಚದಲ್ಲಿ ಆರು ಪಟ್ಟು ಹೆಚ್ಚಳ. ಅದಲ್ಲದೆ, ವರುಷಕ್ಕೆ ೧೨ ಬಾರಿ ಉದ್ದ ಕ್ಯೂನಲ್ಲಿ ಕಾದು ನಿಲ್ಲುವ ಕಷ್ಟ.

ಹಾಗಾದರೆ ಈ ಹೊಸ ವ್ಯವಸ್ಥೆಯಿಂದ ಯಾರಿಗೆ ಲಾಭ? ಎಂಬ ಪ್ರಶ್ನೆಗೆ ಮಹಾನಗರಪಾಲಿಕೆಯ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಈ ನಡುವೆ, ನೀರಿನ ಬಿಲ್‍ಗಳನ್ನು (ಅಂಗೈಯಗಲದ ಸಾಧನದಿಂದ) ಮನೆಮನೆಗೆ ಹೋಗಿ ಕೊಡುವ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಒಂದು ನೀರಿನ ಮೀಟರ್ ರೀಡಿಂಗ್ ಮಾಡಿ ಬಿಲ್ ಕೊಟ್ಟದ್ದಕ್ಕೆ ಪಾಲಿಕೆ ಪಾವತಿಸುವ ಸೇವಾಶುಲ್ಕ ರೂಪಾಯಿ ೬.೭೦  ಎಂಬ ಮಾಹಿತಿ ಸಿಕ್ಕಿದೆ.

ಈಗಿನ ಮಾಸಿಕ ಬಿಲ್ ವ್ಯವಸ್ಥೆಯ ಬದಲಿಗೆ ಹಿಂದಿನಂತೆ ಆರು ತಿಂಗಳಿಗೊಮ್ಮೆ ಬಿಲ್ ಪಾವತಿಸುವ ವ್ಯವಸ್ಥೆಯೇ ಉತ್ತಮವೆಂದು ಬಹುಪಾಲು ನಾಗರಿಕರ ಅಭಿಪ್ರಾಯ. ಐದು ಜನರ ಕುಟುಂಬದ ಮಾಸಿಕ ನೀರಿನ ಬಿಲ್ ಸುಮಾರು ರೂ.೬೦ರಿಂದ ರೂ.೧೦೦. ಹಾಗಾಗಿ ವರುಷಕ್ಕೊಮ್ಮೆ ನೀರಿನ ಬಿಲ್ ಪಾವತಿಸುವ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ. ಹೊಸ ವ್ಯವಸ್ಥೆಯಿಂದ ನಾಗರಿಕರಿಗೆ ಅನುಕೂಲವಾಗಬೇಕೇ ಹೊರತು ತೊಂದರೆಯಾಗಬಾರದು, ಅಲ್ಲವೇ?

ನೀರಿನ ಮೀಟರ್ ರೀಡಿಂಗ್‍ನಲ್ಲಿ ಕೂಡ ಎಲ್ಲವೂ ಸರಿಯಾಗಿಲ್ಲ. ವಾಣಿಜ್ಯ ಬಳಕೆಯ ನೀರಿನ ಮೀಟರ್‍ಗಳ ಬಗ್ಗೆ ಮಹಾನಗರಪಾಲಿಕೆ ಅಧಿಕಾರಿಗಳು ನಿಗಾ ವಹಿಸಿದರೆ, ನೀರಿನ ಶುಲ್ಕದ ಆದಾಯ ಎಲ್ಲಿ ಸೋರಿ ಹೋಗುತ್ತಿದೆ ಎಂದು ತಿಳಿಯುತ್ತದೆ. ಉದಾಹರಣೆಗೆ, ಮನೆಬಳಕೆಯ ನೀರಿನ ಬಿಲ್ ಕುಟುಂಬಕ್ಕೆ ತಿಂಗಳಿಗೆ ರೂ.೧೦೦ ಆಗುತ್ತಿದ್ದರೆ, ಜಾಸ್ತಿ ನೀರಿನ ಬಳಕೆ ಆಗುವ ಹೋಟೆಲ್, ಉತ್ಪಾದನಾ ಘಟಕ ಇತ್ಯಾದಿಗಳ ನೀರಿನ ಬಿಲ್ ಪ್ರತಿ ತಿಂಗಳಿಗೆ ಅದಕ್ಕಿಂತ ಜಾಸ್ತಿ ಆಗಲೇ ಬೇಕು, ಅಲ್ಲವೇ?

ಬಳಸಿದ ನೀರಿಗೆ ಶುಲ್ಕ ಪಾವತಿಸುವ ಜವಾಬ್ದಾರಿಯ ಪ್ರಶ್ನೆ ಬಂದಾಗ, ಮಂಗಳೂರಿನ ನಾಗರಿಕರು ಈ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದಾರೆಯೇ? ಸುರತ್ಕಲ್‍ನಲ್ಲಿ ೧ ಜುಲೈ ೨೦೦೯ರಂದು ಜರಗಿದ "ನೀರಿನ ಅದಾಲತ್"ನಲ್ಲಿ ಆಗಿನ ಮೇಯರ್ ಶಂಕರ ಭಟ್, "ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶೇಕಡಾ ೫೩ ಬಳಕೆದಾರರು ನೀರಿನ ಬಿಲ್ ಪಾವತಿಸುತ್ತಿಲ್ಲ" ಎಂದು ತಿಳಿಸಿದ್ದಾರೆ. ಅದಲ್ಲದೆ, ಹಲವರು ಮೀಟರ್ ಅಳವಡಿಸದೆ ನೀರಿನ ಸಂಪರ್ಕ ಪಡೆದಿರುವುದೂ ಮಹಾನಗರಪಾಲಿಕೆಯ ಗಮನಕ್ಕೆ ಬಂದಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ೩ ಅಥವಾ ೬ ದಿನಗಳಿಗೊಮ್ಮೆ ಮಹಾನಗರಪಾಲಿಕೆ ನೀರು ಸರಬರಾಜು ಮಾಡುತ್ತಿದೆ. ಮಂಗಳೂರಿನಲ್ಲಿ ದಿನವೂ ನೀರು ಸರಬರಾಜು ಆಗುತ್ತಿದೆ. ಇಲ್ಲಿ ಈ ವ್ಯವಸ್ಥೆ ಉಳಿಸಿಕೊಳ್ಳಬೇಕಾದರೆ, ಎಲ್ಲರೂ ತಮ್ಮತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಅಲ್ಲವೇ?