ಜಲಜಾಗೃತಿ(31) ಗುಡ್ಡದಲ್ಲಿ ಮಳೆನೀರಿಂಗಿಸಿದರೆ ತೋಟಕ್ಕೆ ಲಾಭ

ಮೇ ೨, ೨೦೦೯ರಂದು ಅಪರಾಹ್ನ ಬೈಕಿನಲ್ಲಿ ಮಂಚಿಗೆ ಹೋಗಿದ್ದೆ, ಆಪ್ತರಾದ ಶ್ರೀನಿವಾಸ ಆಚಾರ್ ಅವರ ಮನೆಗೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ದಾಟಿ, ಪುತ್ತೂರು ರಸ್ತೆಯಲ್ಲಿ ಮೇಲ್ಕಾರಿನಲ್ಲಿ ಬಲಕ್ಕೆ ತಿರುಗಿ ಸಾಗಿದ್ದೆ. ಬಿಸಿಲಿನಲ್ಲಿ ಒಂದು ತಾಸಿನ ಪಯಣ ಬೇಸಗೆಯ ಬಿಸಿ ಮುಟ್ಟಿಸಿತ್ತು.

ಅಂದು ಸಂಜೆಯಾಗುತ್ತಿದ್ದಂತೆ ಶ್ರೀನಿವಾಸ ಆಚಾರ್ ಕರೆದರು, "ಗುಡ್ಡದಲ್ಲಿ ದೊಡ್ಡ ಹೊಂಡ ಮಾಡಿಸಿದ್ದೇನೆ. ನೋಡಿ ಬರುವಾ". ಅವರ ಮನೆಯ ಹಿಂಭಾಗದಲ್ಲಿರುವ ಗುಡ್ಡ ಏರಿದೆವು. ಅಲ್ಲಿ ಆಯಕಟ್ಟಿನ ಜಾಗದಲ್ಲಿ ವಿಸ್ತಾರವಾದ ಹೊಂಡ. ಸುಮಾರು ೮೦ ಅಡಿ ಉದ್ದ, ೬೦ ಅಡಿ ಅಗಲ, ೩ ಅಡಿ ಆಳ. ಅದರ ಅಕ್ಕಪಕ್ಕದಿಂದ ಮಳೆನೀರು ಹರಿದು ಬರಲು ತೋಡುಗಳ ಜಾಲ. ಅಲ್ಲಿ ವರುಷಕ್ಕೆ ೪,೦೦೦ ಮಿಮೀ ಮಳೆ. ಮಳೆನೀರು ತುಂಬಿದರೆ ಆ ಹೊಂಡ ೪.೫ ಲಕ್ಷ ಲೀಟರಿನ ನೀರ ಖಜಾನೆ.

ಮೊನ್ನೆ ಶ್ರೀನಿವಾಸ ಆಚಾರ್ ಬಂದು ಹೇಳಿದ ಸಿಹಿಸುದ್ದಿ, "ಜುಲಾಯಿ ತಿಂಗಳ ಮಳೆಗೆ ಹೊಂಡ ತುಂಬಿ ನೀರು ಹೊರಕ್ಕೆ ಹರಿದಿದೆ ಮಾರಾಯರೇ". ಮುಂದಿನ ವರುಷ ಅದರ ಬದಿಯ ಕಚ್ಚಾ ಹಾದಿಗೆ ಮಣ್ಣು ಹಾಕಿ ಇನ್ನೂ ಎರಡಡಿ ಏರಿಸಬೇಕು. ಇನ್ನಷ್ಟು ನೀರು ಹೊಂಡದಲ್ಲಿ ತುಂಬಲಿ, ಎಂಬುದು ಅವರ ಯೋಜನೆ.

ಶ್ರೀನಿವಾಸ ಆಚಾರ್ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ. ’ನೀರಿಂಗಿಸುವ ವಿಷಯ ಬರೀ ಹೇಳಿದ್ರೆ ಸಾಲದು. ಮಾಡಿ ತೋರಿಸಬೇಕು’ ಎಂಬುದು ಅವರ ನಿಲುವು. ಆ ಗುಡ್ಡದ ಬುಡದಲ್ಲಿರುವ ಅವರ ಅಡಿಕೆ ತೋಟಕ್ಕೆ ನೀರಿನಾಸರೆ ಹಳೆಯ ಕೆರೆ. ಅದರಲ್ಲಿ ಬೇಸಗೆಯಲ್ಲಿ ಕೂಡ ಸಾಕಷ್ಟು ನೀರಿರುತ್ತದೆ. ಆದರೂ ಧುಮುಕಿ ಹೋಗುವ ಮಳೆನೀರನ್ನು ಹಿಡಿದಿಡುವ, ಇಂಗಿಸುವ ಕಾಯಕಕ್ಕೆ ಕೈಹಾಕಿದ್ದಾರೆ.  

ಮೇ ೧೨, ೨೦೦೯ರಂದು ಸುಳ್ಯದಲ್ಲಿ ಪ್ರಸಾದ್ ರಕ್ಷಿದಿ ಅವರ ಭೇಟಿ. ಆಗ, ತನ್ನ ಜಮೀನಿನ ನೀರಿನ ಕೊರತೆ ಎದುರಿಸಲಿಕ್ಕಾಗಿ ಮಳೆನೀರಿಂಗಿಸಿದ ಅನುಭವ ಹಂಚಿಕೊಂಡಿದ್ದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳ್ಳಿ ರಕ್ಷಿದಿಯಲ್ಲಿ ಅವರ ಜಮೀನು. ಅದು ವಾರ್ಷಿಕ ೨,೫೦೦ರಿಂದ ೩,೦೦೦ ಮಿಮೀ ಮಳೆಯಾಗುವ ಮಲೆನಾಡು ಪ್ರದೇಶ.

ಆದರೂ ಅಲ್ಲಿ ನೀರಿನ ಸಮಸ್ಯೆ. ಹಾಗಾಗಿ ಇಪ್ಪತ್ತು ವರುಷಗಳ ಮುಂಚೆ ಅಲ್ಲೊಂದು ಕೆರೆ ತೋಡಿಸಿದ್ದರು. ಅದರಲ್ಲಿ ಡಿಸೆಂಬರ್ ವರೆಗೆ ಮಾತ್ರ ನೀರು. ಅನಂತರ ಬತ್ತುತ್ತಿತ್ತು.  ಆ ಕೆರೆ ಪ್ರಸಾದರ ಮನೆಯ ಹತ್ತಿರವಿರಲಿಲ್ಲ, ತೋಟದ ಅಂಚಿನಲ್ಲಿತ್ತು. ಕೆರೆಯಲ್ಲಿ ಡಿಸೆಂಬರ್ ನಂತರವೂ ೩ - ೪ ತಿಂಗಳು ನೀರು ಇರಬೇಕಾದರೆ ಏನು ಮಾಡಬೇಕೆಂಬ ಚಿಂತೆ ಪ್ರಸಾದರಿಗೆ.

ಆಗ "ನೆಲ-ಜಲ ಉಳಿಸುವ" ಲೇಖನಗಳನ್ನು ಓದುತ್ತಿದ್ದಂತೆ ಅವರಿಗೊಂದು ಯೋಚನೆ. ಆ ಕೆರೆಯ ಮೇಲ್ಭಾಗದ ತೋಟದಲ್ಲಿ ಮಳೆನೀರ ಕೊಯ್ಲು ಮಾಡಿದರೆ ಹೇಗೆ? ಅದು ಒಣ ಜಾಗ. ಆದರೂ ಅಲ್ಲಿ ಮಳೆನೀರಿಂಗಿಸಲು ೩ - ೪ ಎಕ್ರೆ ಜಾಗದಲ್ಲಿ ಕತ್ತರಿಗುಂಡಿ ತೆಗೆಸಿದರು ಪ್ರಸಾದ್ ರಕ್ಷಿದಿ.

 ಸುತ್ತಮುತ್ತಲಿನ ಜನರ ಪ್ರಕಾರ ಅದು ಪ್ರಯೋಜನವಿಲ್ಲದ ಕೆಲಸ. ಅವರೆಲ್ಲ ಪ್ರಸಾದರ ಇಂಗುಗುಂಡಿಗಳ ಬಗ್ಗೆ ಆಡಿಕೊಂಡರು. ಅದನ್ನೆಲ್ಲ ಕೇಳಿಕೊಂಡು ಸುಮ್ಮನಾದರು ಪ್ರಸಾದ್. ಫಲಿತಾಂಶಕ್ಕಾಗಿ ಕಾದರು. ಡಿಸೆಂಬರ್‍ನಲ್ಲಿ ಕೆರೆಯ ನೀರಿನ ಮಟ್ಟದಲ್ಲಿ ಬದಲಾವಣೆ ಕಾಣಿಸಲಿಲ್ಲ. ಜನವರಿ ದಾಟಿ ಫೆಬ್ರವರಿ ಬಂದಾಗ ಪ್ರಯೋಗದ ಪ್ರಯೋಜನ ಕಂಡು ಬಂತು - ಕೆರೆಯಲ್ಲಿ ನೀರಿನ ಮಟ್ಟ ತಗ್ಗಲಿಲ್ಲ! ಅನಂತರ ನೀರಿನ ಮಟ್ಟ ತಗ್ಗಿದರೂ ಕೆರೆ ಬತ್ತಲಿಲ್ಲ! ಕೊನೆಗೆ ಮೊದಲ ಮಳೆ ಸುರುಯುವ ತನಕ ಕೆರೆಯಲ್ಲಿತ್ತು ಒಂದೂವರೆ ಅಡಿ ನೀರು.  ತನ್ನ ಬಗ್ಗೆ ಆಡಿಕೊಂಡಿದ್ದ ಸುತ್ತಮುತ್ತಲಿನವರಿಗೆ ಇದನ್ನು ತಿಳಿಸಿದರು ಪ್ರಸಾದ್. ಈಗ ಸುಮ್ಮನಾಗುವ ಸರದಿ ಅವರದಾಯಿತು.

ನಮ್ಮ ಒಟ್ಟಾರೆ ನೀರಿನ ಬಳಕೆಯಲ್ಲಿ ಕೃಷಿಯ ಪಾಲು ಶೇಕಡಾ ೭೦. ಆದ್ದರಿಂದ ಇಂಥವರ ಅನುಭವಗಳು ಮುಖ್ಯವಾಗುತ್ತವೆ. ಓಡುವ ನೀರನ್ನು ನಿಲ್ಲಿಸಿ, ನಿಲ್ಲಿಸಿದ ನೀರನ್ನು ಇಂಗಿಸಿದಷ್ಟೂ ನೀರನೆಮ್ಮದಿ ಹೆಚ್ಚುತ್ತದೆ, ಅಲ್ಲವೇ?