ಮಾರ್ಚ್ ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನೆ. "ತಮ್ಮ ಬ್ಲಾಕಿನ ನಳ್ಳಿಗಳಲ್ಲಿ ನೀರು ಬರುತ್ತಿಲ್ಲ, ಮಾರ್ಚ್ ಏಳರ ಶನಿವಾರ ಕೇವಲ ಒಂದು ಗಂಟೆ ನೀರು ಬಂದಿತ್ತು" ಎಂಬುದು ಅಲ್ಲಿನ ನಿವಾಸಿಗಳ ಆಕ್ರೋಶ.
ಈ ಸಮಸ್ಯೆ ಪರಿಹರಿಸಲು ನೀರಿನ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡಬೇಕಾಗಿಲ್ಲ. ಮಳೆ ನೀರಿಂಗಿಸಿದರೆ ಸಾಕು.
ಯಾಕೆಂದರೆ, ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಜೂನ್‍ನಿಂದ ಸಪ್ಟಂಬರ ತನಕ ನಾಲ್ಕು ತಿಂಗಳ ಮಳೆಗಾಲ. ಆಗ ಇಲ್ಲಿ ಬೀಳುವ ಮಳೆ ಬರೋಬ್ಬರಿ ೪೪೦೦ ಮಿಲಿಮೀಟರ್(ವಾರ್ಷಿಕ ಸರಾಸರಿ). ಇದು, ಕರ್ನಾಟಕದ ವಾರ್ಷಿಕ ಸರಾಸರಿ ಮಳೆಯ ನಾಲ್ಕು ಪಟ್ಟು! ಇಷ್ಟು ಮಳೆ ಬೀಳುವ ದಕ್ಷಿಣ ಕನ್ನಡದಲ್ಲಿ ಕೂಡ ಮಾರ್ಚ್ ತಿಂಗಳ ಆರಂಭದಲ್ಲಿಯೇ ನೀರಿನ ಸಮಸ್ಯೆ ಎದುರಾದರೆ, ನಾವು ಲೆಕ್ಕಾಚಾರ ಮಾಡಿಲ್ಲ ಎನ್ನಬೇಕು.
ನಮ್ಮ ಮನೆ ಚಾವಣಿ ಮತ್ತು ಮನೆಯಂಗಳದಲ್ಲಿ ಎಷ್ಟು ಮಳೆನೀರು ಬೀಳುತ್ತದೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಒಂದು ಚದರ ಮೀಟರ್ ಜಾಗದ ಮೇಲೆ ಒಂದು ಮಿಲಿಮೀಟರ್ ಮಳೆ ಸುರಿದರೆ, ಸಿಗುವ ನೀರು ಒಂದು ಲೀಟರ್. ಅಂದರೆ, ನಮ್ಮ ಊರಿನ ವಾರ್ಷಿಕ ಸರಾಸರಿ ಮಳೆ ಎಷ್ಟು ಮಿಮೀ ಇದೆಯೂ, ಅಷ್ಟು ಲೀಟರ್ ನೀರು ನಮ್ಮ ಪ್ರತಿ ಚ.ಮೀ. ಜಾಗದ ಮೇಲೆ ಸುರಿಯುತ್ತದೆ. ಈ ಸೂತ್ರ ಬಳಸಿದರೆ, ೧೫೦ ಚ.ಮೀ. ಚಾವಣಿಯ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ೧೫೦ * ೪೦೦೦ ಅಂದರೆ ೬ ಲಕ್ಷ ಲೀಟರು. (ನಿಮ್ಮ ಮನೆ ಸೈಟಿನ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ನೀರು ಎಷ್ಟು? ನೀವೇ ಲೆಕ್ಕ ಮಾಡಿ. ನಿಮಗೊಂದು ಸೂಚನೆ: ಒಂದು ಸೆಂಟ್ಸ್ ಅಂದರೆ ೪೦ ಚ.ಮೀ.)
ಒಬ್ಬರಿಗೆ ದಿನಕ್ಕೆ ಸುಮಾರು ೧೦೦ ಲೀಟರ್ ನೀರು ಬೇಕು. ಅದರಂತೆ, ೫ ಜನರ ಕುಟುಂಬಕ್ಕೆ ವರ್ಷಕ್ಕೆ ೧,೮೨,೫೦೦ ಲೀಟರ್ ನೀರು ಬೇಕು. ಅಂದರೆ ಕರಾವಳಿಯಲ್ಲಿ ಮನೆ ಚಾವಣಿ ಮೇಲೆ ಬೀಳುವ ಮಳೆ ಪ್ರಮಾಣವೇ ಕುಟುಂಬದ ವಾರ್ಷಿಕ ಅವಶ್ಯಕತೆಗಿಂತ ಮೂರು ಪಟ್ಟು ಜಾಸ್ತಿ. ಹಾಗಾಗಿ ದಕ್ಷಿಣ ಕನ್ನಡದವರ ನೀರ ಸಮಸ್ಯೆಗೆ ಪರಿಹಾರ ಅವರ ಕೈಯಲ್ಲೇ ಇದೆ. ಭೂಮಿ ಪುಕ್ಕಟೆಯಾಗಿ ನೀಡುವ ಮಳೆ ನೀರನ್ನು ಅವರು ಭೂಮಿಯಲ್ಲಿ ಇಂಗಿಸಿದರಾಯಿತು ಅಥವಾ ಕೊಯ್ಲು ಮಾಡಿ ಸಂಗ್ರಹಿಸಿದರಾಯಿತು.
ನಮ್ಮ ಜಾಗದಲ್ಲಿ ಬಿದ್ದ ಮಳೆನೀರನ್ನು ಅಲ್ಲೇ ಇಂಗಿಸುವುದು ಬಹಳ ಸುಲಭ. ಇಬ್ಬರ ಅನುಭವ ಹೀಗಿದೆ: ಮಂಗಳೂರಿನಿಂದ ೧೭ ಕಿ.ಮೀ. (ವಾಮಂಜೂರು ರಸ್ತೆ ) ದೂರದ ಗುರುಪುರದಲ್ಲಿದೆ ಗಣೇಶ ಪ್ರಭುಗಳ ದೊಡ್ಡ ಮನೆ. ಅದರ ವಿಶಾಲ ಚಾವಣಿಯ ಮಳೆ ನೀರನ್ನೆಲ್ಲ ಮೂರು ತೆಂಗಿನ ಮರಗಳ ಬುಡದಲ್ಲಿ ಕಟ್ಟಿರುವ ಕಟ್ಟೆಗಳಿಗೆ ಹಾಯಿಸಿ ಇಂಗಿಸುತ್ತಿದ್ದಾರೆ. ಇದರಿಂದಾಗಿ ಇವರ ಬಾವಿಯಲ್ಲಿ ಮಾತ್ರವಲ್ಲ, ಸುತ್ತಲಿನ ಮನೆಗಳ ಬಾವಿಗಳಲ್ಲೂ ನೀರಿನ ಮಟ್ಟ ಏರಿದೆ.
ಮಂಗಳೂರಿನ ಬೊಂದೇಲಿನ ನಿವೃತ್ತ ಶಿಕ್ಷಕ ಜೋಸೆಫ್ ಫ್ರಾನ್ಸಿಸ್ ಡಿಸೋಜಾ ಅವರ ಬಾವಿಯ ಆಳ ೩೫ ಅಡಿ. ಕೆಲವು ವರುಷಗಳ ಮುನ್ನ ಅದರಲ್ಲಿ ಬೇಸಗೆಯಲ್ಲಿ ನೀರು ಬತ್ತಿತ್ತು. ಆದರೆ ಈಗ ಕಡು ಬೇಸಗೆಯಲ್ಲಿ ಅವರ ಬಾವಿಯಲ್ಲಿ ಹತ್ತು ಅಡಿಗಿಂತ ಜಾಸ್ತಿ ನೀರು! ನೀರಿಂಗಿಸಲು ಅವರೇನೂ ಹಣ ಖರ್ಚು ಮಾಡಿಲ್ಲ. ಆದರೆ ಎರಡು ಗಂಟೆ ಶ್ರಮ ಪಟ್ಟಿದ್ದಾರೆ. ಅವರ ತೆಂಗಿನ ತೋಟ ಹಿಂದೊಮ್ಮೆ ಗದ್ದೆಯಾಗಿತ್ತು. ಅದರಲ್ಲಿ ಅಲ್ಲಲ್ಲಿ ಮಣ್ಣು ಪೇರಿಸಿ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ತೋಟದ ತಗ್ಗು ಪ್ರದೇಶದಿಂದ ಮಳೆ ನೀರನ್ನೆಲ್ಲ ತೂಬುಗಳನ್ನಿಟ್ಟು ಹೊರಕ್ಕೆ ಹಾಯಿಸುತ್ತಿದ್ದರು. ಈಗ ಮಣ್ಣು ಮತ್ತು ಬಾಳೆದಿಂಡುಗಳನ್ನು ಅಡ್ಡವಾಗಿಟ್ಟು ತೂಬುಗಳನ್ನೆಲ್ಲ ಮುಚ್ಚಿ, ಮಳೆ ನೀರ ಹರಿವಿಗೆ ತಡೆ ಒಡ್ಡಿ ಮಳೆ ನೀರು ಇಂಗಿಸುತ್ತಾರೆ.
ಇವರ ಅನುಭವದಲ್ಲಿ ಮಳೆ ನೀರಿಂಗಿಸುವ ಕೆಲಸ ಬಹಳ ಸುಲಭ. ಇಂತಹ ಅನೇಕ ಮಾದರಿಗಳು ನಮ್ಮ ಸುತ್ತಮುತ್ತಲಿವೆ. ನಮ್ಮ ಜಮೀನು,ಸೈಟು, ಮಣ್ಣು, ಚಾವಣಿ ಇವುಗಳಿಗೆ ಹೊಂದುವಂತೆ ಕೊಂಚ ಬದಲಾಯಿಸಿಕೊಳ್ಳ ಬೇಕಾದೀತು, ಅಷ್ಟೇ. ಅದಕ್ಕೇ ಹೇಳಿದ್ದು, ನೀರಿಂಗಿಸುವ ಆಲೋಚನೆ ಮನದಾಳಕ್ಕೆ ಇಳಿಯಲಿಕ್ಕಾಗಿ ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ.