ಕೃಷಿ ಸಂಶೋಧನಾ ವ್ಯವಸ್ಥೆಯ ಜಾಲದೊಳಗೆ….

ನಮ್ಮ ದೇಶದ ಕೃಷಿ ಸಂಶೋಧನೆಯ ಸಾಂಸ್ಥಿಕ ವ್ಯವಸ್ಥೆ ಬಹಳ ದೊಡ್ಡದು. ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ವ್ಯಾಪ್ತಿಗೆ ಒಳಪಟ್ಟ ಸಂಶೋಧನಾ ಸಂಸ್ಥೆಗಳ ಸಂಖ್ಯೆ ೯೮.
ಜೋಳದಿಂದ ತೊಡಗಿ ಭತ್ತದ ವರೆಗಿನ ಎಲ್ಲ ಆಹಾರ ಬೆಳೆಗಳು, ಸೇಬಿನಿಂದ ಆರಂಭಿಸಿ ಮಾವಿನ ತನಕದ ಎಲ್ಲ ಹಣ್ಣಿನ ಬೆಳೆಗಳು – ಹೀಗೆ ಬಹುಪಾಲು ಬೆಳೆಗಳಿಗೆ ಪ್ರತ್ಯೇಕ ಸಂಶೋಧನಾ ಸಂಸ್ಥೆಗಳು. ಇವಲ್ಲದೆ ೫೬ ಕೃಷಿ ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆಯೂ ಐಸಿಎಆರಿನ ಜವಾಬ್ದಾರಿ. ಇವೆಲ್ಲ ವ್ಯವಸ್ಥೆಗೆ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ಎನ್ಎಆರ್ಎಸ್) ಎಂಬ ಹೆಸರು. ಈ ವ್ಯವಸ್ಥೆಯಲ್ಲಿರುವ ವಿಜ್ನಾನಿಗಳ ಸಂಖ್ಯೆ ೨೪,೦೦೦. ಇವರಲ್ಲಿ ೪,೮೦೦ ವಿಜ್ನಾನಿಗಳು ಐಸಿಎಆರ್ ಸಂಸ್ಥೆಗಳಲ್ಲಿದ್ದರೆ, ಉಳಿದವರು ಕೃಷಿವಿಶ್ವವಿದ್ಯಾಲಯಗಳಲ್ಲಿ ಇದ್ದಾರೆ.
ಅದೆಲ್ಲ ಸರಿ. ಇವರೆಲ್ಲ ಏನು ಮಾಡುತ್ತಿದ್ದಾರೆ? ಭಾರತದ ಕೃಷಿರಂಗದ ಪ್ರಗತಿಗೆ ಇವರ ಕೊಡುಗೆ ಏನು? ಕಳೆದ ೧೬ ವರುಷಗಳಲ್ಲಿ ೨,೮೫,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಿರುವಾಗ, ಕೃಷಿರಂಗದ ಸಮಸ್ಯೆಗಳನ್ನು ಪರಿಹರಿಸುವಂತಹ ಯಾವುದೇ ಸಂಶೋಧನೆಯನ್ನು ಈ ವಿಜ್ನಾನಿಗಳು ಮಾಡಿದ್ದಿದೆಯೇ?
ಇದಕ್ಕೆ ವಿಜ್ನಾನಿಗಳ ಪ್ರತಿಕ್ರಿಯೆ ಹೀಗಿರುತ್ತದೆ: ೧೯೫೦ರಲ್ಲಿ ಆಹಾರಧಾನ್ಯಗಳ ಉತ್ಪಾದನೆ ೫೦ ಮಿಲಿಯ ಟನ್ ಇತ್ತು; ಅದನ್ನೀಗ ೨೫೯ ಮಿಲಿಯ ಟನ್ನುಗಳಿಗೆ ಹೆಚ್ಚಿಸಿದ್ದೇ ನಮ್ಮ ಸಂಶೋಧನೆಗಳ ದೊಡ್ಡ ಸಾಧನೆ.
ಯಾವುದರ ಬಗ್ಗೆ ಸಂಶೋಧನೆ ನಡೆಸಬೇಕು? ಈ ವಿಚಾರದಲ್ಲಿ ಐಸಿಎಆರಿಗೆ ಸ್ವಾತಂತ್ರ್ಯವಿಲ್ಲ ಎಂಬುದು ವಾಸ್ತವ. “ಆಹಾರಧಾನ್ಯಗಳು ಕಡಿಮೆ ಬೆಲೆಯ ಹೆಚ್ಚು ಪರಿಮಾಣದ ವಸ್ತುಗಳು. ಇವುಗಳ ಬಗ್ಗೆಯೇ ಸಂಶೋಧನೆ ನಡೆಸಬೇಕೆಂದು ನಮಗೆ ತಾಕೀತು ಮಾಡಲಾಗಿದೆ. ನಾವು ಅದರಂತೆ ಸಂಶೋಧನೆ ನಡೆಸುತ್ತಿದ್ದೇವೆ. ನಮ್ಮ ದೇಶದ ಆಹಾರ ಭದ್ರತೆಗೆ ಇದು ಅಡಿಪಾಯ” ಎನ್ನುತ್ತಾರೆ ಐಸಿಎಆರಿನ ಡೈರೆಕ್ಟರ್ ಜನರಲ್ ಸುಬ್ಬಣ್ಣ ಅಯ್ಯಪ್ಪನ್.
ಕೃಷಿ ಸಂಶೋಧನೆಯ ಈಗಿನ ಅವಸ್ಥೆಗೆ ಕಾರಣಗಳೇನು? ಹೊಸ ಚಿಂತನೆಯ ನಾಪತ್ತೆ, ಸಮಸ್ಯಾ ಪರಿಹಾರಕ್ಕಾಗಿ ವಿಭಿನ್ನ ಐಡಿಯಾಗಳಿಗೆ ಪ್ರೋತ್ಸಾಹದ ಕೊರತೆ ಇದಕ್ಕೆ ಕಾರಣ ಎನ್ನಬಹುದೇನೋ? “ಬಹುಪಾಲು ಸಂಶೋಧನಾ ಸಂಸ್ಥೆಗಳಲ್ಲಿ ಮುಂಚಿನ ಹಳಸಲು ಯೋಜನೆಗಳ ರೀತಿಯಲ್ಲೇ ಹೊಸ ಸಂಶೋಧನಾ ಯೋಜನೆಗಳನ್ನು ರೂಪಿಸುತ್ತಾರೆ. ಹೊಸ ಹಾದಿಯಲ್ಲಿ ಮುನ್ನಡೆಯುವ ಪ್ರಯತ್ನವೇ ಕಂಡು ಬರುತ್ತಿಲ್ಲ” ಎನ್ನುತ್ತಾರೆ ರಾಷ್ಟ್ರೀಯ ಬೆಳೆ ಸಂಶೋಧನಾ ಕೇಂದ್ರವೊಂದರ ನಿರ್ದೇಶಕರು. “ಕೃಷಿರಂಗದ ತಕ್ಷಣದ ರಾಷ್ಟ್ರೀಯ ಸವಾಲುಗಳನ್ನು” ಗುರುತಿಸುವ ಚಿಂತಕರ ಚಾವಡಿಯ ಕೊರತೆಯು ಕೃಷಿ ಸಂಶೋಧನೆ ದಿಕ್ಕೆಟ್ಟು ಹೋಗಿರುವುದಕ್ಕೆ ಪ್ರಧಾನ ಕಾರಣ ಎಂಬುದು ಅವರ ನಂಬಿಕೆ. ಯುವ ಪ್ರತಿಭಾವಂತ ವಿಜ್ನಾನಿಗಳನ್ನು ಯಾವ್ಯಾವುದೋ ಸಂಶೋಧನಾ ಸಂಸ್ಥೆಗಳಲ್ಲಿ ಹಂಚಿ ಹಾಕಿದ್ದರಿಂದಾಗಿ ಅವರ ಸಾಮರ್ಥ್ಯ ವ್ಯರ್ಥವಾಗುತ್ತಿರುವುದು ಹಿನ್ನಡೆಗೆ ಇನ್ನೊಂದು ಕಾರಣ.
ಕೃಷಿ ಸಂಶೋಧನೆಗೆ ಸರಕಾರ ಒದಗಿಸುವ ಹಣವೂ ಸಾಲದು ಎಂಬುದು ಐಸಿಎಆರಿನ ಡೆಪ್ಯುಟಿ ಡೈರೆಕ್ಟರ್ ಜನರಲ್ ಸ್ವಪನ್ ಕುಮಾರ್ ದತ್ತ ಅವರ ಅಭಿಪ್ರಾಯ. “ನಾವು ೧೨ನೇ ಪಂಚವಾರ್ಷಿಕ ಯೋಜನೆಯಲ್ಲಿ ೫೦,೦೦೦ ಕೋಟಿ ರೂಪಾಯಿ ಬಜೆಟ್ ಕೇಳಿದ್ದರೂ ನಮಗೆ ಕೊಟ್ಟಿರೋದು ೨೫,೦೦೦ ಕೋಟಿ ರೂಪಾಯಿ ಮಾತ್ರ. ಸುಮಾರು ೧೦೦ ಸಂಶೋಧನಾ ಸಂಸ್ಥೆಗಳಿಗೆ ಮತ್ತು ೫೬ ಕೃಷಿ ವಿಶ್ವವಿದ್ಯಾಲಯಗಳಿಗೆ ಐದು ವರುಷಗಳಿಗೆ ದಕ್ಕಿದ್ದು ಇಷ್ಟೇ” ಎನ್ನುತ್ತಾರೆ.
ಇಂತಹ ಕಾರಣಗಳಿಂದಾಗಿ, ಜಿಎಂ (ಜೈವಿಕವಾಗಿ ಮಾರ್ಪಡಿಸಿದ) ಹತ್ತಿಯ ಸಂಶೋಧನೆಯಲ್ಲಿ ಖಾಸಗಿ ಸಂಸ್ಥೆಗಳು ಸರಕಾರಿ ಸಂಸ್ಥೆಗಳನ್ನು ಹಿಂದಿಕ್ಕಿ,ಭಾರೀ ಲಾಭ ಮಾಡಿಕೊಳ್ಳುತ್ತಿವೆ. ಖಾಸಗಿ ಕಂಪೆನಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಬಿಡುಗಡೆ ಮಾಡಿರುವ ಜಿಎಂ-ಹತ್ತಿ ಬೀಜಗಳನ್ನು ಬಹುಪಾಲು ಹತ್ತಿ ಬೆಳೆಗಾರರು ಖರೀದಿಸುತ್ತಿದ್ದಾರೆ. ಅಮೆರಿಕಾದ ಮೊನ್ಸಾಂಟೋ ಕಂಪೆನಿ ಈ ವ್ಯವಹಾರದಲ್ಲಿ ಈಗಾಗಲೇ ರೂ.೨,೦೦೦ ಕೋಟಿ ರಾಯಧನ ಗಳಿಸಿದೆ ಎಂದು ವರದಿಯಾಗಿದೆ.
ಅದೇನಿದ್ದರೂ, ನಮ್ಮ ದೇಶದ ೨೪,೦೦೦ ಕೃಷಿ ವಿಜ್ನಾನಿಗಳಿಗೆ ಒದಗಿಸಿದ ತಲಾ ಬಜೆಟ್ ಕಡಿಮೆಯೇನಲ್ಲ. ಅದು ೨೦೦೦ -೨೦೦೧ರಲ್ಲಿ ರೂ.೧೪ ಲಕ್ಷದಿಂದ ೨೦೦೯ -೨೦೧೦ರಲ್ಲಿ ರೂ.೪೨ ಲಕ್ಷಕ್ಕೆ ಏರಿಕೆಯಾಗಿದೆ. ಈ ಮೊತ್ತದಿಂದ ಎಷ್ಟೆಲ್ಲ ಕೃಷಿಕಪರ ಸಂಶೋಧನೆ ಮಾಡಬಹುದಾಗಿತ್ತು! ಕೃಷಿಕರ ಸಮಸ್ಯೆಗಳನ್ನು ಪರಿಹಾರ ಮಾಡದಿದ್ದರೂ ನಡೆಯುತ್ತದೆ ಎಂಬ ಮನೋಭಾವ ಬದಲಾದರೆ ಮಾತ್ರ ಈ ಬೃಹತ್ ವ್ಯವಸ್ಥೆಯಿಂದ ಕೃಷಿಕರಿಗೆ ಪ್ರಯೋಜನವಾದೀತು.