ಮೊನ್ಸಾಂಟೊ ಬೀಜಕಂಪೆನಿ ಪರಿಹಾರ ಪಾವತಿಸಲಿ


ಬಹುರಾಷ್ಟ್ರೀಯ ಬೀಜಕಂಪೆನಿ ಮೊನ್ಸಾಂಟೊ ಮತ್ತೆ ಸುದ್ದಿಯಲ್ಲಿದೆ. ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಇತ್ತೀಚೆಗೆ ಅದರ ವಿರುದ್ಧ ಆದೇಶ ನೀಡಿದೆ: ಮೇಲ್ನೋಟಕ್ಕೆ ಸ್ಫರ್ಧಾ ಕಾಯಿದೆ (ಕಾಂಪಿಟೀಷನ್ ಆಕ್ಟ್)ಯ ಸೆಕ್ಷನ್ ೩(೪) ಮತ್ತು ೪ ಅನ್ನು ಮೊನ್ಸಾಂಟೊ ಉಲ್ಲಂಘಿಸಿದೆಯೆಂದು ಕಾಣಿಸುತ್ತಿದ್ದು, ಇದನ್ನು ಸಿಸಿಐಯ ಡೈರೆಕ್ಟರ್-ಜನರಲ್ ತನಿಖೆ ಮಾಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣ, ಮೊನ್ಸಾಂಟೊದ ಜಂಟಿಉದ್ಯಮವು ಭಾರತದಲ್ಲಿ ಕುಲಾಂತರಿ ಹತ್ತಿಬೀಜಗಳ ಪ್ರಧಾನ ಪೂರೈಕೆದಾರನೆಂಬ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿದೆಯೆಂಬ ಸಂಶಯವೆಂದು ಸಿಸಿಐ ಹೇಳಿದೆ.

ಮೊನ್ಸಾಂಟೊ ಬೀಜಕಂಪೆನಿಯು ಕೆಲವು ರಾಜ್ಯ ಸರಕಾರಗಳು ಮತ್ತು ನಮ್ಮ ದೇಶದ ಕೆಲವು ಬೀಜಕಂಪೆನಿಗಳು ಹೂಡಿರುವ ದಾವೆಗಳನ್ನೂ ಎದುರಿಸುತ್ತಿದೆ; ಮೊನ್ಸಾಂಟೊ ಅತಿ ದುಬಾರಿ ರಾಯಧನ ವಸೂಲಿ ಮಾಡುತ್ತಿದೆ ಎಂಬುದೇ ದಾವೆಗಳ ತಕರಾರು. ಆದರೆ, ತಾನು ವಸೂಲಿ ಮಾಡುತ್ತಿರುವುದು ರಾಯಧನವಲ್ಲ, “ವಿಶೇಷಗುಣ ಶುಲ್ಕ" (ಟ್ರೇಯಿಟ್ ಫೀಸ್) ಎಂಬುದು ಮೊನ್ಸಾಂಟೊ ಕಂಪೆನಿಯ ವಾದ. ನಮ್ಮ ದೇಶದ ಕಾಯಿದೆಗಳ ಬಗ್ಗೆ ಮೊನ್ಸಾಂಟೊ ಕಂಪೆನಿಯ ಧೋರಣೆ ಏನೆಂದರೆ ಅವು ನಮ್ಮ ರೈತರನ್ನು ಸುಲಿಯುವ ದಂಧೆಯಲ್ಲಿ ಎದುರಾಗುವ ತೊಡಕುಗಳು, ಅಷ್ಟೇ.

ಇದೆಲ್ಲ ಶುರುವಾದದ್ದು ೧೦ ಮಾರ್ಚ್ ೧೯೯೫ರಂದು ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿ (ಜಿಇಎಸಿ)ಯ ಅನುಮತಿ ಪಡೆಯದೆ ಮಹಿಕೊ (ಮೊನ್ಸಾಂಟೊ - ಮಹಿಕೊ ಜಂಟಿ ಉದ್ಯಮ) ೧೦೦ ಗ್ರಾಮ್ ಹತ್ತಿ ಬೀಜಗಳನ್ನು ಭಾರತಕ್ಕೆ ತಂದಾಗ. ಆ ಬೀಜಗಳು ಎಂಒಎನ್ ೫೩೧ ಎಂಬ ಬಿಟಿ ಜೀನ್ ಹೊಂದಿದ್ದವು.

ಹೀಗೆ “ಕಳ್ಳಸಾಗಣೆ" ಮಾಡಿದ ಎಂಒಎನ್ ೫೩೧ ಜೀನನ್ನು ಬಳಸಿಕೊಂಡು, ಭಾರತದಲ್ಲಿ ಹತ್ತಿ ಬೀಜ ಪೂರೈಕೆಯ ಏಕಸ್ವಾಮ್ಯ ಸಾಧಿಸಬೇಕೆಂಬುದು  ಮೊನ್ಸಾಂಟೊ - ಮಹಿಕೊ ಕಂಪೆನಿಯ ಉದ್ದೇಶವಾಗಿತ್ತು; ಅದಕ್ಕಾಗಿ ಒಂಭತ್ತು ರಾಜ್ಯಗಳಲ್ಲಿ ೪೦ ಜಾಗಗಳಲ್ಲಿ ಕ್ಷೇತ್ರಪ್ರಯೋಗಗಳನ್ನು ಆರಂಭಿಸಿತು - ಇದಕ್ಕೂ ಜಿಇಎಸಿಯ ಅನುಮತಿ ಪಡೆದಿರಲಿಲ್ಲ.

ಈ ವಿಷಯದಲ್ಲಿ, ಪರಿಸರ ರಕ್ಷಣಾ ಕಾಯಿದೆ (೧೯೮೬)ಯ ಪರಿಚ್ಛೇದ (೭) ಹೀಗೆನ್ನುತ್ತದೆ: "ಯಾವುದೇ ಅಪಾಯಕಾರಿ ಸೂಕ್ಷ್ಮಜೀವಿ ಅಥವಾ ಕುಲಾಂತರಿ ಜೀವಿ ಅಥವಾ ವಸ್ತು ಅಥವಾ ಜೀವಕೋಶವನ್ನು, ಜಿಇಎಸಿಯ ಅನುಮತಿಯಿಲ್ಲದೆ, ಯಾರೂ ಆಮದು, ರಫ್ತು, ಸಾಗಣೆ, ಉತ್ಪಾದನೆ, ಸಂಸ್ಕರಣೆ, ಬಳಕೆ ಅಥವಾ ಮಾರಾಟ ಮಾಡಬಾರದು.” ಯಾಕೆಂದರೆ, ಕುಲಾಂತರಿ (ಜೈವಿಕವಾಗಿ ಮಾರ್ಪಡಿಸಿದ) ವಿಶೇಷ ಗುಣಲಕ್ಷಣಗಳನ್ನು ಒಮ್ಮೆ ಪರಿಸರದಲ್ಲಿ ಬಿಡುಗಡೆ ಮಾಡಿದರೆ, ಅನಂತರ ಅವನ್ನು ನಿಯಂತ್ರಿಸಲಾಗದು ಅಥವಾ ಹಿಂಪಡೆಯಲಾಗದು.

ಅನಂತರ ಮೊನ್ಸಾಂಟೊ ಮಾಡಿದ್ದೇನು? ಆ ಕ್ಷೇತ್ರಪ್ರಯೋಗಗಳಿಂದ ಪಡೆದ ಬೀಜಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿದ್ದು. ಕೆಲವು ರಾಜ್ಯಗಳಲ್ಲಂತೂ, ಆ ಕ್ಷೇತ್ರಪ್ರಯೋಗ ಮಾಡಿದ ಹೊಲಗಳಲ್ಲಿ ಮುಂದಿನ ಹಂಗಾಮಿನಲ್ಲಿಯೇ ಗೋಧಿ, ಅರಿಶಿನ ಮತ್ತು ನೆಲಗಡಲೆ ಬೆಳೆಸಿದ್ದು. ಇದು ೧೯೯೪ರ ಜೈವಿಕ ಸುರಕ್ಷತಾ ಮಾರ್ಗದರ್ಶಿ ಸೂತ್ರಗಳ ನೇರಾನೇರ ಉಲ್ಲಂಘನೆ. “ಕುಲಾಂತರಿ ಸಸ್ಯಗಳ ಕೊಯ್ಲೋತ್ತರ ವಿಧಿವಿಧಾನಗಳ” ಬಗೆಗಿನ ಆ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಕುಲಾಂತರಿ ಸಸ್ಯಗಳ ಕ್ಷೇತ್ರಪ್ರಯೋಗ ನಡೆಸಿದ ಹೊಲಗಳಲ್ಲಿ ಕನಿಷ್ಠ ಒಂದು ವರುಷ ಏನೂ ಬೆಳೆಸಬಾರದು.

ನಮ್ಮ ದೇಶದ ಕಾಯಿದೆಗಳನ್ನು ಮೊನ್ಸಾಂಟೊ ಉದ್ದಟತನದಿಂದ ಉಲ್ಲಂಘಿಸಿದ್ದನ್ನು ಮತ್ತು ಇದರಿಂದಾಗಿ ನಮ್ಮ ದೇಶ ಎದುರಿಸಬೇಕಾದ “ಜೈವಿಕ ಮಾಲಿನ್ಯ”ದ ಅಪಾಯಗಳನ್ನು ಆರ್ ಎಫ್ ಎಸ್ ಟಿ ಇ (ರೀಸರ್ಚ್ ಫೌಂಡೇಷನ್ ಫಾರ್ ಸೈನ್ಸ್, ಟೆಕ್ನಾಲಜಿ ಆಂಡ್ ಇಕಾಲಜಿ) ಗಮನಿಸಿತು. ಕುಲಾಂತರಿ (ಜೈವಿಕವಾಗಿ ಮಾರ್ಪಡಿಸಿದ) ವಸ್ತುಗಳ ಬಳಕೆ ಬಗ್ಗೆ ಪರಿಸರ ರಕ್ಷಣಾ ಕಾಯಿದೆಯ ೧೯೮೯ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೊನ್ಸಾಂಟೊ ಮತ್ತು ಮಹಿಕೊ ಕಂಪೆನಿಗಳ ವಿರುದ್ಧ ೧೯೯೯ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಹೂಡಿ, ಆ ಪ್ರತಿಷ್ಠಾನ ಕಾನೂನಿನ ಸಮರ ಆರಂಭಿಸಿತು.

ಬೀಜಗಳ ಬಗ್ಗೆ ಪೇಟೆಂಟುಗಳಿಗೆ ಭಾರತದ ಕಾಯಿದೆಗಳು ಅನುಮತಿ ನೀಡುವುದಿಲ್ಲ. ಇದು ಮೊನ್ಸಾಂಟೊ ಬೀಜಕಂಪೆನಿಗೆ ಸಮಸ್ಯೆಯಾಗಿದೆ. ಅದಕ್ಕಾಗಿ ಈ ದೈತ್ಯ ಕಂಪೆನಿಯು, ಯುಎಸ್‌ಎ ದೇಶದ ಮೂಲಕ ಭಾರತದ ಬೌದ್ಧಿಕ ಸೊತ್ತಿನ (ಬೀಜಗಳ ಸಹಿತ) ಕಾಯಿದೆಗಳನ್ನು ಬದಲಾಯಿಸಬೇಕೆಂದು ಭಾರತದ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಲೇ ಇದೆ.

ನಮ್ಮ ದೇಶದ ಕಾಯಿದೆಗಳನ್ನು ಗಾಳಿಗೆ ತೂರಿ, ಮೊನ್ಸಾಂಟೊ - ಮಹಿಕೊ ಬಯೊಟೆಕ್ (ಎಂಎಂಬಿ) ಲಿಮಿಟೆಡ್ ಬಿಟಿ-ಹತ್ತಿ ಬೀಜ ಮಾರಿದಾಗ ರೂ.೫,೪೦೦ ಕೋಟಿ “ತಂತ್ರಜ್ನಾನ ಶುಲ್ಕ” ಮತ್ತು “ವಿಶೇಷಗುಣ ಶುಲ್ಕ” ವಸೂಲಿ ಮಾಡಿತು. ಆ ಕಂಪೆನಿಗಳಿಗೆ ಕೋಟಿಗಟ್ಟಲೆ ರೂಪಾಯಿ ಪಾವತಿಸಿದ ನಮ್ಮ ರೈತರು ಸಾಲದಲ್ಲಿ ಮುಳುಗಿದರು.

ಎಂಎಂಬಿ ೨೦೦೬ರಲ್ಲಿ ಬಿಟಿ ಹತ್ತಿ ಬೀಜ ಮಾರಿದ್ದು ಕಿಲೋಗ್ರಾಂಗೆ ರೂ.೩,೫೫೫ ದರದಲ್ಲಿ. ಅಂದರೆ ೪೫೦ ಗ್ರಾಂ ಪ್ಯಾಕೆಟಿನ ಬೆಲೆ ರೂ.೧,೬೦೦. ಇದರಲ್ಲಿ ರೂ.೧,೨೫೦ (ಶೇಕಡಾ ೮೦)  ಎಂಎಂಬಿ ಪಡೆದುಕೊಂಡ “ವಿಶೇಷಗುಣ ಶುಲ್ಕ”. ಇದರಲ್ಲಿ ನಡೆದ ಸುಲಿಗೆ ಅರ್ಥವಾಗಬೇಕಾದರೆ, ಬಿಟಿ ಹತ್ತಿ ಬೀಜಗಳನ್ನು ಮೊನ್ಸಾಂಟೊ ರೈತರಿಗೆ ಮಾರಾಟ ಮಾಡುವ ಮುನ್ನ ನಮ್ಮ ದೇಶದಲ್ಲಿ ಹತ್ತಿ ಬೀಜಗಳ (ಹೈಬ್ರಿಡ್ ಹತ್ತಿಬೀಜಗಳ ಸಹಿತ) ಬೆಲೆ ಎಷ್ಟಿತ್ತು? ಎಂಬುದನ್ನು ಗಮನಿಸಬೇಕು. ಅದು ಕಿಲೋಗ್ರಾಂಗೆ ಕೇವಲ ರೂ.೫ರಿಂದ ರೂ.೯ ಆಗಿತ್ತು.  

ಈ ಅಪ್ರಾಮಾಣಿಕ ಬೆಲೆಯನ್ನು ವಿರೋಧಿಸಿದ ಆಂಧ್ರಪ್ರದೇಶ ಸರಕಾರವು ಏಕಸೌಮ್ಯದ ಮತ್ತು ನಿರ್ಬಂಧಿತ ವಾಣಿಜ್ಯ ವ್ಯವಹಾರಗಳ ಕಮಿಷನಿಗೆ (ಎಂಆರ್ ಟಿಪಿಸಿ) ಎಂಎಂಬಿ ವಿರುದ್ಧ ದೂರು ನೀಡಿತು. ಇದೇ ಬೀಜಗಳಿಗೆ ಯುಎಸ್‌ಎ ದೇಶದ ರೈತರಿಗೆ ವಿಧಿಸುವ ಬೆಲೆಯ ಒಂಭತ್ತು ಪಟ್ಟು ಜಾಸ್ತಿ ಬೆಲೆಗೆ ಇದನ್ನು ಎಂಎಂಬಿ ನಮ್ಮ ರೈತರಿಗೆ ಮಾರುತ್ತಿದೆ ಎಂದು ಆ ದೂರಿನಲ್ಲಿ ತೋರಿಸಿಕೊಟ್ಟಿತು.  ಭಾರತದ ರೈತರಿಂದ ರಾಯಧನ ವಸೂಲಿ ಮಾಡುತ್ತಿರುವುದನ್ನು ಎಂಎಂಬಿ ಒಪ್ಪಿಕೊಂಡಿತು. ಆದರೆ ಈ ರಾಯಧನವು ಬಿಟಿ ಹತ್ತಿಯ ಬಗ್ಗೆ ತನ್ನ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚ ಎಂದು ವಾದಿಸಿತು.

ಭಾರತದ ಹತ್ತಿ ಬೆಳೆಗಾರರು ಎದುರಿಸುತ್ತಿರುವ ಸಂಕಟಗಳಿಗೆ ಮೂಲಕಾರಣ ಮೊನ್ಸಾಂಟೊ ಬೀಜಕಂಪೆನಿಯ ದುಷ್ಟತನ ಎನ್ನಬಹುದಲ್ಲವೇ? ಅತಿ ದುಬಾರಿ ಬಿಟಿ ಹತ್ತಿಬೀಜಗಳು ಮತ್ತು ಆ ಹತ್ತಿ ಗಿಡಗಳಿಗೆ ಬೇಕಾದ ಪೀಡೆನಾಶಕ ರಾಸಾಯನಿಕಗಳನ್ನು ಖರೀದಿಸಲು ಲಕ್ಷಗಟ್ಟಲೆ ಹತ್ತಿ ಬೆಳೆಗಾರರು ತಮ್ಮ ಜಮೀನನ್ನೇ ಅಡವಿಟ್ಟರು. ಆದರೆ, ಮೊನ್ಸಾಂಟೊ-ಮಹಿಕೋ ಬಯೋಟೆಕ್ ಲಿಮಿಟೆಡ್ ತನ್ನ ಬಿಟಿ ಹತ್ತಿ ಬಗ್ಗೆ ಪ್ರಚಾರ ಮಾಡಿದ್ದ ಭಾರೀ ಫಸಲು ಮತ್ತು  ಪೀಡೆನಾಶಕಗಳ ಕಡಿಮೆ ವೆಚ್ಚದ ಆಶ್ವಾಸನೆಗಳು ಟೊಳ್ಳಾದಾಗ, ನಮ್ಮ ಹತ್ತಿ ಬೆಳೆಗಾರರು ದಿವಾಳಿಯಾದರು.

ಮೊನ್ಸಾಂಟೊ ೧೯೯೫ರಲ್ಲಿ ನಮ್ಮ ದೇಶದೊಳಕ್ಕೆ ಬಿಟಿ-ಜೀನ್ “ಕಳ್ಳಸಾಗಣೆ" ಮಾಡಿದಾಗಿನಿಂದ, ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮೂರು ಲಕ್ಷ. ಇವರಲ್ಲಿ ೨,೫೨,೦೦೦ (ಶೇ.೮೪) ರೈತರ ಆತ್ಮಹತ್ಯೆಗೆ ಮೊನ್ಸಾಂಟೊದ ಬಿಟಿ-ಹತ್ತಿ ಬೀಜದ ಕೃಷಿಯೇ ಕಾರಣವೆಂದು ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರಕಾರವು ಬುಲ್ದಾನಾದಲ್ಲಿ ದೊಡ್ಡ ಬೀಜೋತ್ಪಾದನಾ ಘಟಕ ಸ್ಥಾಪಿಸಲಿಕ್ಕಾಗಿ ಮೊನ್ಸಾಂಟೊ ಕಂಪೆನಿ ಜೊತೆ ಎಂಒಯು (ಒಪ್ಪಂದ) ಮಾಡಿಕೊಂಡಿರುವುದು ಸರಿಯೇ? (ಇದನ್ನು “ಮೇಕ್ ಇನ್ ಇಂಡಿಯಾ ಸಪ್ತಾಹ”ದಲ್ಲಿ ಇತ್ತೀಚೆಗೆ ಘೋಷಿಸಲಾಗಿದೆ.)

ನಿಜಹೇಳಬೇಕೆಂದರೆ, ನಮ್ಮ ದೇಶದ ಕಾಯಿದೆಗಳನ್ನು ಉದ್ದಟತನದಿಂದ ಉಲ್ಲಂಘಿಸಿದ್ದಕ್ಕಾಗಿ ಮೊನ್ಸಾಂಟೊ ಕಂಪೆನಿಯನ್ನು ಹೊಣೆಗಾರ ಆಗಿಸಬೇಕಾಗಿದೆ. ಪೊಳ್ಳು ಆಶ್ವಾಸನೆ ನೀಡಿ ಮಾರಿದ್ದ ಬಿಟಿ ಹತ್ತಿಯ ವೈಫಲ್ಯಕ್ಕಾಗಿ ನಮ್ಮ ಹತ್ತಿ ಬೆಳೆಗಾರರಿಗೆ ಮೊನ್ಸಾಂಟೊ ಕಂಪೆನಿಯಿಂದ ಪರಿಹಾರ ಕೊಡಿಸಬೇಕಾಗಿದೆ. ಮಣ್ಣುಮುಕ್ಕಿದ ಬಿಟಿ ತಂತ್ರಜ್ನಾನಕ್ಕಾಗಿ ನಮ್ಮ ದೇಶದ ಬೀಜಕಂಪೆನಿಗಳಿಂದ ಮೊನ್ಸಾಂಟೊ ವಸೂಲಿ ಮಾಡಿದ್ದ “ತಂತ್ರಜ್ನಾನ ಶುಲ್ಕ"ವನ್ನು ಪರಿಹಾರ ಸಹಿತ ಅವುಗಳಿಗೆ ಮೊನ್ಸಾಂಟೊ ಮರುಪಾವತಿಸುವಂತೆ ಮಾಡಬೇಕಾಗಿದೆ.

ಮೊನ್ಸಾಂಟೊ ಬೀಜಕಂಪೆನಿಯಿಂದ ಆಗಿರುವ ಅನ್ಯಾಯಗಳ ವಿರುದ್ಧ ನಮ್ಮ ಸರಕಾರಗಳು ಇಂತಹ ತೀವ್ರ ಕ್ರಮ ಕೈಗೊಳ್ಳ ಬೇಕಾಗಿದೆ. ಇಲ್ಲವಾದರೆ, ಆ ದೈತ್ಯ ಕಂಪೆನಿ ನಮ್ಮ ದೇಶದ ರೈತರ ಸುಲಿಗೆ ಮಾಡುತ್ತಾ, ನಮ್ಮ ನಿಯಂತ್ರಣ ವ್ಯವಸ್ಥೆಗಳನ್ನು ಭ್ರಷ್ಟ ಮಾಡುತ್ತಾ ನಮ್ಮ ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲಿದೆ. ಇದಕ್ಕೆ ಅವಕಾಶ ನೀಡಿದರೆ, ನಮ್ಮ ಮುಂದಿನ ತಲೆಮಾರುಗಳು ನಮ್ಮನ್ನು ಕ್ಷಮಿಸಲಾರವು, ಅಲ್ಲವೇ?
(ಆಡಿಕೆ ಪತ್ರಿಕೆ, ಎಪ್ರಿಲ್ ೨೦೧೬)