ನಮ್ಮ ದೇಶದ ರೈತರ ಸಂಕಟಗಳಿಗೆ ಕೊನೆಯೇ ಇಲ್ಲ. ಈ ವರುಷವೂ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯಿಂದ ನಮ್ಮ ರೈತರಿಗೆ ಸಂತೋಷವಾಗಿಲ್ಲ. ಸಂತೋಷದ ಮಾತಂತಿರಲಿ, ಅವರು ಬೀದಿಗಿಳಿದಿದ್ದಾರೆ - ಸರಕಾರ ತನ್ನ ಧೋರಣೆ ಬದಲಾಯಿಸಬೇಕು ಎಂಬುದವರ ಬೇಡಿಕೆ. ಹನ್ನೆರಡು ರಾಜ್ಯಗಳಲ್ಲಿ ಕಳೆದ ಎಂಟು ತಿಂಗಳಿನಿಂದ (ಅಂದರೆ ಎರಡು ಹಂಗಾಮು) ರೈತರ ಪ್ರತಿಭಟನೆ ಭುಗಿಲೆದ್ದಿದೆ. ೬ ಜೂನ್ ೨೦೧೭ರಂದು ಮಧ್ಯಪ್ರದೇಶದ ಭೋಪಾಲದಲ್ಲಿ ಪೊಲೀಸರ ಗುಂಡೇಟಿಗೆ ಆರು ರೈತರು ಬಲಿಯಾದ ಕ್ಷಣದಿಂದ ರೈತರ ಪ್ರತಿಭಟನೆ ಹಿಂಸಾ ರೂಪ ತಾಳಿದೆ.
ವಾಸ್ತವವಾಗಿ, ಈ ಹೊತ್ತಿನಲ್ಲಿ ನಮ್ಮ ರೈತರು ಮತ್ತು ಸರಕಾರ ಸಂಭ್ರಮಾಚರಣೆ ಮಾಡಬೇಕಾಗಿತ್ತು. ಯಾಕೆನ್ನುತ್ತೀರಾ? ಈ ಎರಡು ಮಹಾ ಸಾಧನೆಗಳಿಗಾಗಿ: ೨೦೧೬-೧೭ನೇ ವರುಷದಲ್ಲಿ ಆಹಾರ ಧಾನ್ಯಗಳ ದಾಖಲೆ ಉತ್ಪಾದನೆಗಾಗಿ ಮತ್ತು ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾರಣವಾದ “ಹಸುರುಕ್ರಾಂತಿ" ೫೦ ವರುಷಗಳನ್ನು ಪೂರೈಸಿದ್ದಕ್ಕಾಗಿ. ಆದರೆ ಆದದ್ದೇನು? ಫಸಲಿಗೆ ಚರಿತ್ರೆಯಲ್ಲೇ ಅತ್ಯಂತ ಕಡಿಮೆ ಬೆಲೆ ಸಿಕ್ಕಿದ್ದನ್ನು ಪ್ರತಿಭಟಿಸಲಿಕ್ಕಾಗಿ ಆಲೂಗಡ್ಡೆ, ಟೊಮೆಟೊ, ಹಾಲು ಮತ್ತು ಇತರ ಕೃಷಿಉತ್ಪನ್ನಗಳನ್ನು ರೈತರು ರಸ್ತೆಗೆ ಚೆಲ್ಲಿದರು. ಎದ್ದು ಕಾಣುವ ಉದಾಹರಣೆ ಈರುಳ್ಳಿ. ಇದರ ಬೆಲೆ ಏರಿದಾಗೆಲ್ಲ ರಾಜಕೀಯ ಸುಂಟರಗಾಳಿ ಎದ್ದಿದೆ. ಇದೀಗ, ಮೊದಲ ಬಾರಿ ರೈತರು ಮತ್ತು ರಾಜಕಾರಣಿಗಳು - ಇಬ್ಬರೂ ಕುಸಿಯುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಕೃಷಿರಂಗದಲ್ಲಿ ಏನೋ ಗಂಭೀರ ತಪ್ಪಾಗಿದೆ ಮತ್ತು ಅದನ್ನು ನಾವು ಅಸಡ್ಡೆ ಮಾಡುತ್ತಿದ್ದೇವೆ ಎಂಬುದನ್ನು.
ನಮ್ಮ ಕೃಷಿರಂಗದ ಈಗಿನ ಬಿಕ್ಕಟ್ಟು, ದಶಕಗಳ ಕಾಲ ನಾವು ಹಾಗೆ ಅಸಡ್ಡೆ ಮಾಡುತ್ತಲೇ ಬಂದದ್ದರ ಒಟ್ಟು ಪರಿಣಾಮ. ಆಹಾರಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತಲೇ ಬಂದ ಕಾರ್ಯತಂತ್ರದ ಉದ್ದೇಶಗಳು ಎರಡು: ರೈತರ ಆದಾಯ ಬೆಂಬಲಿಸುವುದು ಮತ್ತು ನಮ್ಮ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವುದು. ಅದಕ್ಕಾಗಿಯೇ, ಬರಗಾಲ ಬಂದಾಗೆಲ್ಲ ರೈತರ ಹೊಲಗಳಿಗೆ ಹೇಗಾದರೂ ನೀರು ಒದಗಿಸಲು ಸರಕಾರದ ಕ್ರಮ. ಜೊತೆಗೆ ನೀರಾವರಿ ಜಾಲಗಳ ವಿಸ್ತರಣೆ ಮತ್ತು ಬರಗಾಲದ ಪರಿಹಾರ ಕ್ರಮಗಳು (ಅಂದರೆ, ಉದ್ಯೋಗ ಖಾತರಿ ಯೋಜನೆಯಂತೆ ಮಜೂರಿ ಪಾವತಿಸಿ, ತಾತ್ಕಾಲಿಕ ಆದಾಯ ಒದಗಿಸುವ ಕಾರ್ಯಕ್ರಮಗಳು) - ಕೃಷಿರಂಗದ ಅತ್ಯಂತ ಮುಖ್ಯ ಮಧ್ಯಪ್ರವೇಶ ಕ್ರಮಗಳಾಗಿ ಇವುಗಳ ಜ್ಯಾರಿ. ಈ ಕಾರ್ಯತಂತ್ರವು ರೈತರ ಸಂಕಟಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಕರಿಸಿದೆ. ಆದರೆ, ಇದು ಆಹಾರಧಾನ್ಯಗಳ ಹೇರಳ ಉತ್ಪಾದನೆಯಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೋತಿದೆ. ಕೃಷಿ ಉತ್ಪನ್ನಗಳು ಜಾಸ್ತಿಯಾದಂತೆ, ಮಾರುಕಟ್ಟೆಯು ಸರಕಾರದ ಮಧ್ಯಪ್ರವೇಶದ ಅತ್ಯಂತ ಮುಖ್ಯ ರಂಗಸ್ಥಳವಾಗಿದೆ. ಇಲ್ಲೇ ಸರಕಾರವು ಎಡವಿ ಬಿದ್ದಿದೆ ಮತ್ತು ಇಲ್ಲಿಯೇ ಈಗಿನ ಕೃಷಿರಂಗದ ಬಿಕ್ಕಟ್ಟು ಶುರುವಾಗಿದೆ. ಬಂಪರ್ ಬೆಳೆ ಬೆಳೆದ ರೈತರಿಗೆ ತಮ್ಮ ಫಸಲು ಮಾರಾಟ ಮಾಡಲು ಮಾರುಕಟ್ಟೆಗಳು ಬೇಕಾಗಿವೆ ಮತ್ತು ಅಲ್ಲಿ ಅವರ ಕೃಷಿಯ ಹೂಡಿಕೆಗೆ ನ್ಯಾಯೋಚಿತ ಪ್ರತಿಫಲ (ಬೆಲೆ) ಸಿಗಬೇಕಾಗಿದೆ.
ದೇಶದ ಉದ್ದಗಲಕ್ಕೆ ವ್ಯಾಪಿಸಿರುವ ಕೃಷಿರಂಗದ ಬಿಕ್ಕಟ್ಟನ್ನು ಗಮನಿಸಿದರೆ ಕುಸಿದ ಬೆಲೆಗಳು ಇದರ ಮೂಲದಲ್ಲಿವೆ ಎಂಬುದು ಸ್ಪಷ್ಟ. ಸರಕಾರವು ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿಕ್ಕಾಗಿ ಕ್ರಮ ಕೈಗೊಳ್ಳಬೇಕಾಗಿತ್ತು. ಅದರ ಬದಲಾಗಿ ಸರಕಾರವು ರೂಪಾಯಿ ೧.೪ ಲಕ್ಷ ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳ ಆಮದಿಗೆ ಹೆಬ್ಬಾಗಿಲು ತೆರೆಯಿತು. ಇದು ಕ್ರಿಮಿನಲ್ ತಪ್ಪು. ಯಾಕೆಂದರೆ, ಮೂರು ವರುಷಗಳ ನಷ್ಟದ ನಂತರ ಉತ್ತಮ ಫಸಲು ಬೆಳೆಸಿದ ರೈತರಿಗೆ, ಆ ಅವಧಿಯ ನಷ್ಟ ಪರಿಹರಿಸಿ ಕೊಳ್ಳಲು ಸರಕಾರ ಸಹಾಯ ಮಾಡಬೇಕಾದ್ದು ವಿವೇಕದ ಕ್ರಮವಾಗಿತ್ತು.
ಇದಕ್ಕೆ ತಿಲಾಂಜಲಿ ಇತ್ತಾಗ ಆದದ್ದೇನು? ಆಮದು ಮಾಡಿದ ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ತುಂಬಿಕೊಂಡ ಕಾರಣ ರೈತರಿಗೆ ಚಿಕ್ಕಾಸಿನ ಆದಾಯವೂ ಸಿಗಲಿಲ್ಲ. ಉದಾಹರಣೆಗೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರೈತರಿಗೆ ಸಿಕ್ಕಿದ್ದು ಒಂದು ಕಿಲೋ ಈರುಳ್ಳಿಗೆ ೩ ರೂಪಾಯಿ ಮತ್ತು ಒಂದು ಕಿಲೋ ಗೋಧಿಗೆ ೪ ರೂಪಾಯಿ. ಇದರಿಂದಾಗಿ ಅವರ ಸಾಲದ ಹೊರೆ ಹೆಚ್ಚಿತು. ಆದ್ದರಿಂದಲೇ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಬಹುಪಾಲು ರೈತರು ಬಂಪರ್ ಬೆಳೆಯ ಪ್ರದೇಶದವರು.
ಈ ಬಿಕ್ಕಟ್ಟಿನಿಂದ ಪಾರಾಗುವ ದಾರಿ ಇದೆಯೇ? ಸರಕಾರದ ಕಾರ್ಯತಂತ್ರ ಗಮನಿಸಿದರೆ, ಅದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿರುವ ಬಗ್ಗೆ ಚಿಂತಿಸುತ್ತಿಲ್ಲ ಎನಿಸುತ್ತದೆ. ಆಹಾರಧಾನ್ಯ ಹಾಗೂ ಕೃಷಿಉತ್ಪನ್ನಗಳ ಆಮದು ಅತ್ಯಗತ್ಯ ಎಂದು ಸರಕಾರ ನಿರ್ಧರಿಸಿದೆ. ಈ ಕಾರ್ಯತಂತ್ರದ ಅನುಸಾರ, ಭಾರತದ ರೈತರ ಫಸಲು ಮತ್ತು ಅದಕ್ಕೆ ಅವರು ಪಡೆಯುವ ಬೆಲೆ ಬಗ್ಗೆ ಸರಕಾರಕ್ಕೆ ಕಾಳಜಿಯಿಲ್ಲ. ಇದಕ್ಕೆ ಪುರಾವೆ: ಹಣದುಬ್ಬರವನ್ನು, ಮುಖ್ಯವಾಗಿ ಆಹಾರದ- ಹಣದುಬ್ಬರವನ್ನು ನಿಯಂತ್ರಿಸುವ ಬಗ್ಗೆ ಸರಕಾರದ ಪಟ್ಟು ಬಿಡದ ಕ್ರಮಗಳು. ಕಳೆದೊಂದು ದಶಕದಲ್ಲಿ ಈಗಿನ ಹಣದುಬ್ಬರ ಅತ್ಯಂತ ಕಡಿಮೆ. ಈ ಮಟ್ಟಕ್ಕೆ ಹಣದುಬ್ಬರ ಇಳಿಯಲಿಕ್ಕಾಗಿಯೇ ಸರಕಾರ ಆಮದು ಮಾಡಿದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತುಂಬಿದೆ, ಅಲ್ಲವೇ?
ಆದರೆ, ಸರಕಾರ ಆಯ್ದ ಬೆಳೆಗಳ ಫಸಲಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡಿದೆಯಲ್ಲವೇ? ರೈತರ ಕಲ್ಯಾಣಕ್ಕಾಗಿ ಸರಕಾರ ಜ್ಯಾರಿ ಮಾಡಿರುವ ಯೋಜನೆಗಳು ಒಂದೆರಡಲ್ಲ - ಅವು ೨೦೦ ಯೋಜನೆಗಳು. ಬೆಲೆ ಸ್ಥಿರೀಕರಣ ನಿಧಿ (ಕೆಲವು ಕೃಷಿ ಉತ್ಪನ್ನಗಳ ಬೆಲೆಯ ಸ್ಥಿರತೆಗಾಗಿ), ಬೆಳೆ ವಿಮಾ ಯೋಜನೆ (ಹವಾಮಾನದ ಅನಿಶ್ಚಿತತೆಗಳಿಂದ ರಕ್ಷಣೆಗಾಗಿ) ಇತ್ಯಾದಿ. ಆದರೆ, ಈ ಯಾವುದೇ ಯೋಜನೆಯ ವ್ಯಾಪ್ತಿಗೆ ದೇಶದ ಶೇಕಡಾ ೧೦ರಷ್ಟು ರೈತರೂ ಒಳಪಟ್ಟಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆಯ ವ್ಯಾಪ್ತಿಯಿಂದ ಹೊರಗಿರುವ ರೈತರು ಶೇಕಡಾ ೯೪. ಜೊತೆಗೆ, ಈ ಬೆಲೆಯ ಅರ್ಥ ರೈತರಿಗೆ ಲಾಭದಾಯಕ ಬೆಲೆ ಎಂದೇನಲ್ಲ.
ಕೃಷಿರಂಗಕ್ಕೆ ಆರ್ಥಿಕತೆಯ ದೃಷ್ಠಿಯಿಂದ ನೀಡಬೇಕಾದ ಬೆಂಬಲವನ್ನು ಸರಕಾರ ನೀಡಿದೆಯೇ ಎಂಬುದು ನಮ್ಮೆದುರಿನ ಪ್ರಶ್ನೆ. ಹಸುರುಕ್ರಾಂತಿಯ ನಂತರ ಭಾರತದ ಆರ್ಥಿಕ ನಕ್ಷೆಯಲ್ಲಿ ಹಲವು ಬದಲಾವಣೆಗಳಾಗಿವೆ. ಐವತ್ತು ವರುಷಗಳ ಮುಂಚೆ ನಾವು ಕಲ್ಪಿಸಿರದಿದ್ದ ಹಲವು ಆರ್ಥಿಕ ವಿಭಾಗಗಳು ಈಗ ಚಾಲ್ತಿಯಲ್ಲಿವೆ. ಅವನ್ನು ನಮ್ಮ ದೇಶ ಮುಂಚೂಣಿಗೆ ತಂದು ನಿಲ್ಲಿಸಿದೆ. ಉದಾಹರಣೆಗೆ ಮಾಹಿತಿ ತಂತ್ರಜ್ನಾನ. ಇದು ಶುರುವಾದ ಎರಡೇ ದಶಕಗಳಲ್ಲಿ ನಮ್ಮ ದೇಶ ಇದಕ್ಕೆ ಇನ್ನಿಲ್ಲದ ಆರ್ಥಿಕ ಬೆಂಬಲ ನೀಡಿತು; ಈ ರಂಗದಲ್ಲಿ ಕಾಲೂರಲಿಕ್ಕಾಗಿ ಹೊಸ ಕೆಲಸಗಾರರ ಸಮುದಾಯಕ್ಕೆ ಎಲ್ಲ ರೀತಿಯ ನೆರವು ಒದಗಿಸಿತು. ಈಗ, ಮಾಹಿತಿ ತಂತ್ರಜ್ನಾನದಲ್ಲಿ (ಐಟಿ) ನಮ್ಮ ದೇಶ ಜಗತ್ತಿನಲ್ಲೇ ಪ್ರಥಮ ಶ್ರೇಣಿಯಲ್ಲಿದೆ ಮತ್ತು ನಮ್ಮ ಐಟಿ ಕಂಪೆನಿಗಳ ಸೇವೆಗಳು ಜಗತ್ತಿಗೆ ಅಗತ್ಯವಾಗಿವೆ. ಐಟಿ ರಂಗದ ಬಗ್ಗೆ ಮತ್ತು ಕೃಷಿರಂಗದ ಬಗ್ಗೆ ಸರಕಾರದ ಧೋರಣೆಯನ್ನು ಹೋಲಿಸಿ ನೋಡಿರಿ. ಕೃಷಿರಂಗಕ್ಕೆ ಸರಕಾರ ನಿರಂತರ ಬೆಂಬಲ ನೀಡಲೇ ಇಲ್ಲ (ಬಜೆಟಿನ ಘೋಷಣೆಗಳ ಹೊರತಾಗಿ).
ನಿಜ ಹೇಳಬೇಕೆಂದರೆ, ೪೦ ಕೋಟಿ ಜನರನ್ನು ಕೃಷಿರಂಗದಿಂದ ದೂರ ಮಾಡಿ, ಇತರ ಆರ್ಥಿಕರಂಗಗಳಲ್ಲಿ ತೊಡಗಿಸುವುದೇ ಸರಕಾರದ ಧೋರಣೆ. ಇದನ್ನು ಸಮರ್ಥಿಸಲು ವಾದಗಳು ಇರಬಹುದು. ಆದರೆ, ಭಾರತದ ಜನಸಂಖ್ಯೆಯಲ್ಲಿ ಶೇಕಡಾ ೬೦ರಷ್ಟು ಇಂದಿಗೂ ಆದಾಯಕ್ಕಾಗಿ ಕೃಷಿಯನ್ನೇ ಆವಲಂಬಿಸಿದೆ ಎಂಬುದು ವಾಸ್ತವ. ಕೃಷಿರಂಗದಿಂದ ೪೦ ಕೋಟಿ ಜನರನ್ನು ಕೃಷಿಯೇತರ ರಂಗಗಳಲ್ಲಿ ತೊಡಗಿಸ ಬೇಕಾದರೆ, ಅವು ಅಪ್ರತಿಮ ವೇಗದಲ್ಲಿ ಅಭಿವೃದ್ಧಿ ಹೊಂದಬೇಕು. ಆ ಬೆಳವಣಿಗೆ ಈಗ ಆಗುತ್ತಿಲ್ಲ.
ಅಂತೂ, ಕೃಷಿರಂಗದ ಮಹಾ ಬಿಕ್ಕಟ್ಟು ನಮ್ಮ ಎದುರಿಗಿದೆ. ೨೦೧೫-೧೬ರಲ್ಲಿ ನಮ್ಮ ದೇಶದ ಕೃಷಿ ಉತ್ಪನ್ನಗಳ ಆಮದಿನ ಮೌಲ್ಯ ರೂ.೧.೪ ಲಕ್ಷ ಕೋಟಿ ಎಂದರೆ ಅದು ನಮ್ಮ ಒಟ್ಟು ಆಮದಿನ ಮೌಲ್ಯದ ಶೇ.೫.೬೩. ಇದು, ಮೊದಲ ಸ್ಥಾನದಲ್ಲಿರುವ ಕಚ್ಚಾ ತೈಲದ ಆಮದಿನ ಮೌಲ್ಯದ ನಂತರ ೨ನೇ ಸ್ಥಾನದಲ್ಲಿದೆ.
ಹಾಗಾದರೆ, ಮುಂದೇನಾದೀತು? ಪೆಟ್ರೋಲಿಯಮ್ ಉತ್ಪನ್ನಗಳ ಬೆಲೆಯಲ್ಲಿ ಸರಕಾರ ಮಾಡಿದ್ದೇನು? ಅದನ್ನೇ ಇಲ್ಲಿಯೂ ಮಾಡುವ ಸಂಭವ ಜಾಸ್ತಿ; ಅಂದರೆ, ಕೃಷಿಗೆ ಈಗ ಒದಗಿಸಿರುವ ಸಬ್ಸಿಡಿಗಳನ್ನು ಕಡಿಮೆ ಮಾಡುತ್ತಾ ಬರುವುದು. (ಈಗ, ಕೃಷಿರಂಗದಲ್ಲಿ ಅತ್ಯಧಿಕ ಸಬ್ಸಿಡಿ ಒದಗಿಸುತ್ತಿರುವುದು ರಾಸಾಯನಿಕ ಗೊಬ್ಬರ ಉತ್ಪಾದನಾ ಕಾರ್ಖಾನೆಗಳಿಗೆ ಎಂಬುದನ್ನು ಗಮನಿಸಿರಿ.) ಮುಂದೊಮ್ಮೆ, ನೀರಾವರಿ ಯೋಜನೆಗಳಿಗೆ ಹಾಗೂ ಕೃಷಿಯಲ್ಲಿ ವಿದ್ಯುತ್ ಬಳಕೆಗೆ ನೀಡುತ್ತಿರುವ ಸಬ್ಸಿಡಿ ಇಲ್ಲವಾದೀತು. ಯಾಕೆಂದರೆ, ಹಣ ಪಾವತಿಸಿ ಆಹಾರವಸ್ತುಗಳನ್ನು ಆಮದು ಮಾಡಿಕೊಳ್ಳುವಾಗ, ದೇಶದ ರೈತರಿಗೆ ಅವುಗಳ ಉತ್ಪಾದನೆಗಾಗಿ ಸಬ್ಸಿಡಿ ಅಥವಾ ಆರ್ಥಿಕ ಸಹಾಯ ಯಾಕೆ ನೀಡಬೇಕು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ.
ಅಂತಿಮವಾಗಿ, ರೈತರು ಕೃಷಿ ಉತ್ಪನ್ನಗಳನ್ನು ಲಾಭಸಹಿತವಾಗಿ ಮಾರಾಟ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿಲ್ಲ. ಹಾಗಿರುವಾಗ, ನಷ್ಟ ಖಚಿತವಾದ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಬೇಕೇ ಬೇಡವೇ ಎಂದು ಪ್ರತಿಯೊಬ್ಬ ರೈತನೂ ಪ್ರತೀ ಹಂಗಾಮಿನ ಆರಂಭದಲ್ಲಿ ನಿರ್ಧರಿಸಬೇಕಾಗಿದೆ, ಅಲ್ಲವೇ?
(ಅಡಿಕೆ ಪತ್ರಿಕೆ, ಸಪ್ಟಂಬರ್ ೨೦೧೭)