ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಮುದ್ರ ತೀರದ ದಾಪೋಲಿ ಊರಿನ ಗುಡ್ಡದಲ್ಲಿರುವ ಆ ಮಾವಿನ ತೋಟದಲ್ಲಿ ಮುನ್ನೂರು ಮಾವಿನ ಮರಗಳು. ಪ್ರತಿಯೊಂದು ಮರದಲ್ಲಿಯೂ ಮೇ ತಿಂಗಳಿನಲ್ಲಿ ಗೊಂಚಲುಗೊಂಚಲು ಮಾವಿನ ಕಾಯಿಗಳು - ಅಲ್ಫಾನ್ಸೋ ಮಾವು.
ಆ ಹೊತ್ತಿಗೆ ಅಲ್ಲಿ ಬೇಸಗೆಯ ಬಿಸಿ ಜೋರು. ಜೊತೆಗೆ ಸಮುದ್ರದಿಂದ ಗಾಳಿಯಲ್ಲಿ ತೇಲಿ ಬರುವ ತೇವಾಂಶ. ಇವೆರಡೂ ಅಗತ್ಯ - ಅಲ್ಫಾನ್ಸೋ ಮಾವು ಮಾಗಲು, ಕೊಯ್ಲಿಗೆ ತಯಾರಾಗಲು.
ನೊಷಿರ್ ವಾನ್ ಮಿಸ್ತ್ರಿ ೧೪ ಎಕ್ರೆಗಳ ಈ ತೋಟ ಖರೀದಿಸಿದ್ದು ೧೦ ವರುಷಗಳ ಮುಂಚೆ. ಪ್ರತಿಯೊಂದು ಮಾವಿನ ಮರದ ಬಳಿ ಹೋಗಿ ನಿಂತು, ಅದರಿಂದ ನೇತಾಡುವ ಕಾಯಿಗಳನ್ನು ಕಣ್ಣಿಟ್ಟು ಪರಿಶೀಲಿಸುತ್ತಾರೆ. ಅಲ್ಫಾನ್ಸೋ ಕಾಯಿಗಳ ಮೇಲ್-ಮುಂಭಾಗದ ಡುಬ್ಬವು ತರುಣಿಯ ನಸುಗೆಂಪು ಕೆನ್ನೆಯಂತಿರಬೇಕು - ಹಾಗಿದ್ದರೆ, ಆ ಕಾಯಿ ರುಚಿರುಚಿ ಹಣ್ಣಾಗಿ ಬಲಿಯುತ್ತದೆ ಎಂಬುದವರ ಅನುಭವ. ಅದರ ಬದಲಾಗಿ, ಮಾವಿನ ಕಾಯಿಯ ಮೇಲ್ಭಾಗ ಸಪಾಟವಾಗಿದ್ದರೆ ಅದು ಮಾಗುವುದಿಲ್ಲ.
ಇವೆಲ್ಲ ಸಣ್ಣಪುಟ್ಟ ವಿವರಗಳು, ಬಿರುಸಿನ ಬೆಲೆ ಸ್ಪರ್ಧೆಯಿರುವ ಹಾಪುಸ್ (ಮಹಾರಾಷ್ಟ್ರದವರ ಮಾತಿನಲ್ಲಿ ಅಲ್ಫಾನ್ಸೋ ಮಾವಿನ ಮುದ್ದಿನ ಹೆಸರು) ಮಾವು ಮಾರಾಟದಲ್ಲಿ ಮಿಸ್ತ್ರಿ ಅವರಿಗೆ ಮುಖ್ಯವಾಗುತ್ತವೆ. ಈ ಮಾವುಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ, ಸಂಪೂರ್ಣ ಸಾವಯವ ವಿಧಾನದಲ್ಲೇ ಬೆಳೆಸಿ, ಹಣ್ಣು ಮಾಡಬೇಕೆಂಬುದು ಮಿಸ್ತ್ರಿಯವರ ಅಭಿಪ್ರಾಯ.
ಒಂದು ಬುಟ್ಟಿ ತುಂಬ ಬಲಿತ ಮಾವಿನ ಕಾಯಿಗಳನ್ನು ಕೆಲಸಗಾರರು ಅಂಗಳಕ್ಕೆ ತಂದಾಗ ಮಿಸ್ತ್ರಿ ಅವರಿಂದ ಪುಟ್ಟ ಪರೀಕ್ಷೆ. ಪಾತ್ರೆಯಲ್ಲಿರುವ ನೀರಿಗೆ ಎರಡು ಅಥವಾ ಮೂರು ಕಾಯಿಗಳನ್ನು ಹಾಕುತ್ತಾರೆ. ಅವು ನೀರಿನಲ್ಲಿ ಮುಳುಗಿದರೆ ಚೆನ್ನಾಗಿವೆ ಎಂದರ್ಥ. ಅವು ನೀರಿನಲ್ಲಿ ತೇಲಿದರೆ ಚೆನ್ನಾಗಿಲ್ಲ; ಅಂದರೆ ಆ ಮಾವಿನೊಳಗೆ ಕೆಲವೆಡೆ ಟೊಳ್ಳು ಇರಬಹುದು ಎಂದರ್ಥ. ಅಂಥ ಮಾವುಗಳನ್ನು ದಾಪೋಲಿಯಲ್ಲೇ ಮಾರಾಟ ಮಾಡುತ್ತಾರೆ - ಉಪ್ಪಿನಕಾಯಿ ತಯಾರಿಸಲಿಕ್ಕಾಗಿ.
ಒಳ್ಳೆಯ ಮಾವಿನ ಕಾಯಿಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಜೋಪಾನವಾಗಿ ಪ್ಯಾಕ್ ಮಾಡುತ್ತಾರೆ. ಅನಂತರ, ಒಂದು ಟೆಂಪೋ ಟ್ರಾವಲರ್ ವಾಹನದಲ್ಲಿ ರಾತ್ರಿಯ ಹೊತ್ತಿನಲ್ಲಿ ಏಳು ಗಂಟೆ ಹಾದಿ ಕ್ರಮಿಸಿ, ಅವು ಮುಂಬೈ ತಲಪುತ್ತವೆ. ಹಗಲಿನಲ್ಲಿ ಸಾಗಿಸಿದರೆ ಬೇಸಗೆಯ ಬಿಸಿಯಿಂದಾಗಿ ಹಣ್ಣುಗಳ ಗುಣಮಟ್ಟ ಕೆಡುತ್ತದೆಂಬ ಆತಂಕ ಮಿಸ್ತ್ರಿಗೆ. ಮುಂಬೈಯ ಮೆರೈನ್ ಲೈನಿನ ಅವರ ಫ್ಲಾಟಿನಲ್ಲಿ ಈ ಮಾವಿನ ಪೆಟ್ಟಿಗೆಗಳ ಶೇಖರಣೆ. ಅವು ಅಲ್ಲಿನ ಬೆಚ್ಚಗೆಯಲ್ಲಿ ಸಹಜವಾಗಿ ಹಣ್ಣಾಗಲು ೧೦ - ೧೫ ದಿನಗಳು ಅಗತ್ಯ. ಅನಂತರ, ಅವರ ಅಲ್ಫಾನ್ಸೋ ಮಾವುಗಳಿಗೆ ಗ್ರಾಹಕರಿಂದ ಬೇಡಿಕೆ ಬರಲು ಆರಂಭ - ಬಹುಪಾಲು ಬೇಡಿಕೆ ಬರುವುದು ಅವರ ಫೇಸ್ ಬುಕ್ ಪುಟದಲ್ಲಿ! ಆ ಎಲ್ಲ ಗ್ರಾಹಕರಿಗೆ, ಸೂರ್ಯಾಸ್ತಮಾನವಾಗಿ ಬಹಳ ಹೊತ್ತಿನ ನಂತರ ಟ್ಯಾಕ್ಸಿಯಲ್ಲಿ ಹೋಗಿ ಮನೆಬಾಗಿಲಿಗೆ ಮಾವು ತಲಪಿಸುತ್ತಾರೆ ಮಿಸ್ತ್ರಿ.
ಅಲ್ಫಾನ್ಸೋ ಮಾವಿನ ಮರಗಳ ಕತೆ ಮಿಸ್ತ್ರಿಯವರ ಮಾತಿನಲ್ಲೇ ಕೇಳುವುದು ಚಂದ. ಒಂದು ವರುಷ ಭರ್ಜರಿ ಇಳುವರಿ ಬಂತೆಂದರೆ, ಮುಂದಿನೆರಡು ವರುಷ ಇಳುವರಿ ತೀರಾ ಕಡಿಮೆಯಾಗಲಿದೆ ಎಂದರ್ಥ ಎನ್ನುತ್ತಾರೆ ಮಿಸ್ತ್ರಿ. "ನಾನು ಈ ತೋಟ ಖರೀದಿಸಿದ ಮೊದಲ ವರುಷ, ನನಗೆ ಹಣ್ಣುಗಳ ಮಾರಾಟದಿಂದ ಕೈತುಂಬ ಸಿಕ್ಕಿದ್ದು ಆರು ಲಕ್ಷ ರೂಪಾಯಿ. ಅಬ್ಬ, ಹಾಕಿದ ಭಂಡವಾಳಕ್ಕೆ ಇದಕ್ಕಿಂತ ಜಾಸ್ತಿ ಆದಾಯ ಯಾವುದೇ ಬ್ಯಾಂಕಿನಲ್ಲಿ ಸಿಗಲಿಕ್ಕಿಲ್ಲ ಎಂದುಕೊಂಡೆ. ಆದರೆ, ಎರಡನೇ ವರುಷ ಮುನ್ನೂರು ಮಾವಿನ ಮರಗಳಿಂದ ನನಗೆ ಸಿಕ್ಕಿದ್ದು ಕೇವಲ ನೂರಿಪ್ಪತ್ತು ಮಾವು" ಎಂದು ಆ ಕತೆ ಬಿಚ್ಚಿಡುತ್ತಾರೆ ಮಿಸ್ತ್ರಿ.
ಎಪ್ರಿಲ್ ತಿಂಗಳಿನಲ್ಲಿ ರತ್ನಗಿರಿಯ ಮಾವಿನ ಮರಗಳಲ್ಲಿ ನೇತಾಡುತ್ತವೆ ಗೊಂಚಲುಗೊಂಚಲು ಮಾವಿನಕಾಯಿಗಳು. ಅವನ್ನು ಕಣ್ತುಂಬಿಕೊಳ್ಳುವ ಅಲ್ಲಿನ ಮಾವಿನ ಬೆಳೆಗಾರರಿಗೆ ಭರ್ಜರಿ ಲಾಭ ಮಾಡಿಕೊಳ್ಳುವ ಕನಸು ಸಹಜ. ಆದರೆ, ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಆಲಿಕಲ್ಲಿನ ಮಳೆ ಯಾವಾಗ ಅಪ್ಪಳಿಸೀತೆಂದು ಹೇಳುವಂತಿಲ್ಲ. ಹಾಗೇನಾದರೂ ಮಳೆ ಹೊಡೆದರೆ, ಒಂದು ವರುಷದ ಫಸಲೆಲ್ಲ ನಾಶ! ಅಲ್ಫಾನ್ಸೋ ಮಾವಿಗೆ ಒಳ್ಳೆಯ ರೇಟು ಸಿಗಲಿ ಎಂದು ಬೆಳೆಗಾರರು ಕಾಯುವಂತೆಯೂ ಇಲ್ಲ. ಮಾವಿನ ರೇಟು ಯಾವಾಗ ಕುಸಿದೀತೆಂದು ಹೇಳುವಂತಿಲ್ಲ. ಹಾಗಾಗಿ, ಬೇಗನೇ ಮಾವಿನ ಕಾಯಿಗಳನ್ನು ಕೊಯ್ಯುತ್ತಾರೆ; ಅವಕ್ಕೆ ಹಳದಿ ಬಣ್ಣ ಬರುವಂತಾಗಲು ಕ್ಯಾಲ್ಸಿಯಮ್ ಕಾರ್ಬೈಡಿನಂತಹ ರಾಸಾಯನಿಕ ಬಳಸಿ, ಬೇಗನೇ ಹಣ್ಣು ಮಾಡಿ ಮಾರುವುದೇ ಮಾವಿನ ಬೆಳೆಗಾರರ ಸುಲಭ ಆಯ್ಕೆ ಎಂದು ವಿವರಿಸುತ್ತಾರೆ ಮಿಸ್ತ್ರಿ.
(ಬಾಕ್ಸ್ ಆರಂಭ) ಅಲ್ಫಾನ್ಸೋ ಮಾವಿನ ಮರಗಳ ಇಳುವರಿ ಹೆಚ್ಚಿಸಲಿಕ್ಕಾಗಿ ಹಲವು ಬೆಳೆಗಾರರು ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಪೀಡೆನಾಶಕಗಳು ಮತ್ತು ಬೂಷ್ಟು ನಾಶಕಗಳನ್ನು ಪ್ರಯೊಗಿಸುವುದು ಸಾಮಾನ್ಯ. ಇದರಿಂದಾಗಿ ಮಾವಿನ ಮರಗಳ ಆರೋಗ್ಯ ಕೆಡುತ್ತದೆ ಎಂಬುದು ಮಿಸ್ತ್ರಿಯವರ ವಾದ. ಅಲ್ಫಾನ್ಸೋ ಮಾವಿನ ಕೃಷಿಯ ಗುಟ್ಟುಗಳನ್ನೆಲ್ಲ ಅವರಿಗೆ ಕಲಿಸಿದ ಅನಿಲ್ ಶಾಂತಾರಾಮ್ ಬಾಲ್ (ದಾಪೋಲಿಯ ಹಿರಿಯ ಮಾವು ಬೆಳೆಗಾರ) ಮತ್ತು ಇತರ ಹಲವು ಮಾವು ಬೆಳೆಗಾರರು ರಾಸಾಯನಿಕಗಳನ್ನು ತಮ್ಮ ತೋಟದಲ್ಲಿ ಬಳಸುತ್ತಾರೆ.
“ಇದರಿಂದಾಗಿ ಅವರ ಮಾವಿನ ಮರಗಳ ಉತ್ಪಾದಕತೆ ಕುಸಿದಿದೆ ಎಂಬುದು ನನ್ನ ಸಂಶಯ. ಉದಾಹರಣೆಗೆ, ಕುಲ್-ತಾರ್ ಎಂಬ ರಾಸಾಯನಿಕವನ್ನು ಮಾವಿನ ಮರಗಳಿಗೆ ಹಾಕಿದರೆ, ವರುಷಕ್ಕೆ ೨೦೦ ಮಾವಿನಕಾಯಿ ಬಿಡುವ ಮರ ೫೦೦ ಕಾಯಿಗಳನ್ನು ಬಿಡುತ್ತದೆ. ಇದರರ್ಥ ಏನೆಂದರೆ, ಆ ಮರ ಬೇಗನೇ ಸಾಯುತ್ತದೆ" ಎಂದು ವಿಷಾದಿಸುತ್ತಾರೆ ಮಿಸ್ತ್ರಿ. ಕೆಲವು ವರುಷ ಅವರೂ ರಾಸಾಯನಿಕ ಬೂಷ್ಟುನಾಶಕವನ್ನು ತನ್ನ ತೋಟದ ಮಾವಿನ ಮರಗಳಿಗೆ ಸಿಂಪಡಿಸಿದ್ದರು. ಅನಂತರ ಅದು ಪ್ರಯೋಜನವಿಲ್ಲದ ಕೆಲಸವೆಂದು ನಿರ್ಧರಿಸಿದರು. "ಆ ವಿಷವರ್ತುಲದಿಂದ ಬಚಾವಾಗಲು ನನ್ನ ಮಾವಿನ ಮರಗಳಿಗೆ ಕೆಲವು ವರುಷಗಳೇ ಬೇಕಾಯಿತು" ಎಂದು ನೆನಪು ಮಾಡಿಕೊಳ್ಳುತ್ತಾರೆ ಮಿಸ್ತ್ರಿ. ಈಗ ಅವರು ಮಾವಿನ ಮರಗಳ ಪೋಷಣೆಗಾಗಿ ಅನುಸರಿಸುವುದು ಸರಳ ವಿಧಾನ: ಮರಗಳ ನಡುವೆ ಬೆಳೆಯುವ ಕಳೆಗಿಡಗಳನ್ನು ಕಿತ್ತು, ಅವನ್ನು ಅಲ್ಲೇ ಬಿಡುವುದು - ಕೊಳೆತು ಗೊಬ್ಬರವಾಗಲಿಕ್ಕಾಗಿ. ಈ ವರುಷ ಆಡಿನ ಹಿಕ್ಕೆ ಗೊಬ್ಬರ ತೋಟಕ್ಕೆ ಹಾಕಬೇಕೆಂದಿದ್ದಾರೆ. (ಬಾಕ್ಸ್ ಮುಕ್ತಾಯ)
ಅಲ್ಫಾನ್ಸೋ ಮಾವಿನ ಮಾರುಕಟ್ಟೆಯ ಏರುಪೇರು
ಮಿಸ್ತ್ರಿಯಂತೆ ಏಕವ್ಯಕ್ತಿಯ ಮೇಲುಸ್ತುವಾರಿಯಲ್ಲಿ ಅಲ್ಫಾನ್ಸೋ ಮಾವು ಬೆಳೆಸಿ, ದೂರದ ನಗರಕ್ಕೆ ಸಾಗಿಸಿ, ಮನೆಮನೆಗೆ ತಲಪಿಸಿ ಮಾರುವುದು ಸುಲಭವಿಲ್ಲ. ಮಾವುಗಳನ್ನು ಮುಂಬೈಗೆ ತಂದ ನಂತರ “ಸಾವಯವ ಮಾವು" ಎಂಬ ಕಾರಣಕ್ಕಾಗಿ, ಹೆಚ್ಚಿನ ಬೆಲೆ ತೆತ್ತು ಖರೀದಿಸಲು ಎಷ್ಟು ಗ್ರಾಹಕರು ತಯಾರಿದ್ದಾರೆಂದು ಹೇಳುವಂತಿಲ್ಲ.
ಮಾವಿನ ಮಾರುಕಟ್ಟೆಯಲ್ಲಿ ಬಿರುಸಿನ ಸ್ಪರ್ಧೆಯಿದೆ. ಆಂಧ್ರಪ್ರದೇಶದ ಬಂಗನಪಲ್ಲಿ ಮಾವು, ತಮಿಳುನಾಡಿನ ಇಮಾಂ ಪಸಂದ್ ಮಾವು, ಗುಜರಾತಿನ ಕೇಸರ್ ಮಾವು ಮತ್ತು ರಾಜಪುರಿ - ಇವು ಅಲ್ಫಾನ್ಸೋ ಮಾವಿಗಿಂತ ಉತ್ತಮವೆಂದು ವಾದಿಸುವವರೂ ಇದ್ದಾರೆ. ಅದೇನಿದ್ದರೂ, ದಂತಕತೆಗಳಾಗಿರುವ ಇಂತಹ ಮಾವಿನ ತಳಿಗಳು ಮುಂಬೈ ಮಾರುಕಟ್ಟೆಯಲ್ಲಿ ಅಲ್ಫಾನ್ಸೋ ಮಾವಿಗೆ ಸರಿಸಾಟಿಯಾಗಿಲ್ಲ. ಮುಂಬೈವಾಸಿಗಳ ಪ್ರಕಾರ, ಜಗತ್ತಿನಲ್ಲೇ ಅತ್ಯುತ್ತಮ ಮಾವು ಅಲ್ಫಾನ್ಸೋ.
ಜೊತೆಗೆ, ರಫ್ತು ಮಾಡಲು ಅತ್ಯಂತ ಸುಲಭದ ಮಾವು ಅಲ್ಫಾನ್ಸೋ - ಅದರ ದಪ್ಪ ಸಿಪ್ಪೆಯಿಂದಾಗಿ ದೂರದೂರದ ದೇಶಗಳಿಗೆ ಸಾಗಾಟಕ್ಕೆ ಅನುಕೂಲ. ಹೀಗಿದ್ದರೂ, ೧೬ ಮೇ ೨೦೧೭ರ ಒಂದು ಪತ್ರಿಕಾ ವರದಿಯಂತೆ, ಪುಣೆಯ ಸೆಂಟ್ರಲ್ ಮಾರ್ಕೆಟಿನಲ್ಲಿ ರತ್ನಗಿರಿಯ ಅಲ್ಫಾನ್ಸೋ ಮಾವಿನ ೮೦,೦೦೦ ಪೆಟ್ಟೆಗೆಗಳು ಮಾರಾಟವಾಗದೆ ಉಳಿದಿವೆ. ಮುಂಬೈ ಮಾರುಕಟ್ಟೆಯಲ್ಲಂತೂ ಮೇ ತಿಂಗಳ ಮೂರನೇ ವಾರದಲ್ಲಿ ಅಲ್ಫಾನ್ಸೋ ಮಾವಿನ ಬೆಲೆ ತೀರಾ ಕುಸಿದಿದೆ. ಮಾರುಕಟ್ಟೆಗೆ ಈ ವರುಷ ಜಾಸ್ತಿ ಅಲ್ಫಾನ್ಸೋ ಮಾವು ಪೂರೈಕೆ ಆಗಿರುವುದೇ ಇದಕ್ಕೆ ಕಾರಣ.
ರತ್ನಗಿರಿಯ ಅಲ್ಫಾನ್ಸೋ ಮಾವು ಸರಿಯಾಗಿ ಹಣ್ಣಾಗಬೇಕಾದರೆ ಎಪ್ರಿಲ್ ಕೊನೆಯ ವಾರಗಳ ಮತ್ತು ಇಡೀ ಮೇ ತಿಂಗಳ ಬೇಸಗೆಯ ಕಾವು ಸಿಗಬೇಕು. ಆದರೆ, ಇತ್ತೀಚೆಗಿನ ವರುಷಗಳಲ್ಲಿ “ದಕ್ಷಿಣ ಭಾರತದ ಅಲ್ಫಾನ್ಸೋ ತಳಿಗಳು” ಮಾರುಕಟ್ಟೆಗೆ ಬೇಗನೇ ಲಗ್ಗೆಯಿಡುತ್ತಿವೆ. “ರತ್ನಗಿರಿಯ ದಕ್ಷಿಣದಲ್ಲಿರುವ ಗೋವಾ ಮತ್ತು ಕರ್ನಾಟಕದಲ್ಲಿ ಬೆಳೆಸಿದ ಅಲ್ಫಾನ್ಸೋ ಮಾವು ಬೇಗನೇ ಹಣ್ಣಾಗುತ್ತವೆ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬೆಳೆಸುತ್ತಿರುವ ಅಲ್ಫಾನ್ಸೋ ಮಾವು ಈಗೀಗ ಬೇಗನೇ ಮಾರುಕಟ್ಟೆಗೆ ಬರುತ್ತಿವೆ” ಎನ್ನುತ್ತಾರೆ ನವಮುಂಬೈಯ ಮಾವು ಮಾರಾಟಗಾರ ಅಶೋಕ್ ಪನಸಾರೆ.
ಅಲ್ಫಾನ್ಸೋ ಮಾವಿಗೆ ಬೇಡಿಕೆಯಂತೂ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ. ಹಾಗಾಗಿ, ತಮಿಳ್ನಾಡು ಮತ್ತು ಕೇರಳದ ಬೆಳೆಗಾರರೂ ಈ ತಳಿಯನ್ನು ಬೆಳೆಸುತ್ತಿದ್ದಾರೆ. ತಮಿಳ್ನಾಡಿನ ಕೃಷ್ಣಗಿರಿ ಪ್ರದೇಶ ತೋತಾಪುರಿ ಮಾವಿನ ತಳಿಗೆ ಹೆಸರುವಾಸಿ; ಆದರೆ, ಚೆನ್ನೈಯಲ್ಲಿ ಅಲ್ಫಾನ್ಸೋಗೆ ಏರುತ್ತಿರುವ ಬೇಡಿಕೆ ಪೂರೈಸಲು ಕೃಷ್ಣಗಿರಿಯ ಹೆಚ್ಚೆಚ್ಚು ಬೆಳೆಗಾರರು ಇದೇ ತಳಿ ಬೆಳೆಸ ತೊಡಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುತಾಲಮಡ ಪ್ರದೇಶದ ಅಲ್ಫಾನ್ಸೋ ಮಾವು ಮಹಾರಾಷ್ಟ್ರ ಮತ್ತು ದೆಹಲಿಯ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಲಗ್ಗೆಯಿಟ್ಟಿದೆ. ಯಾಕೆಂದರೆ, ಅಲ್ಲಿ ಅಲ್ಫಾನ್ಸೋ ಮಾವುಗಳು ಫೆಬ್ರವರಿ ತಿಂಗಳಿನಲ್ಲೇ ಕೊಯ್ಲಿಗೆ ತಯಾರು.
ಆದ್ದರಿಂದಲೇ, ಮಹಾರಾಷ್ಟ್ರದ ದೇವಘಡ ಮತ್ತು ರತ್ನಗಿರಿಯ ಅಲ್ಫಾನ್ಸೋ ಮಾವಿಗೆ ಎಪ್ರಿಲ್ ೨೦೧೭ರಲ್ಲಿ ಭೌಗೋಲಿಕ ಸೂಚಕ (ಜಿಐ) ಮಾನ್ಯತೆ ನೀಡಲಾಗಿದೆ. ಇದರ ಪ್ರಕಾರ, ಇತರ ಪ್ರದೇಶಗಳಲ್ಲಿ ಬೆಳೆಸಿದ ಅಲ್ಫಾನ್ಸೋ ಮಾವುಗಳನ್ನು “ರತ್ನಗಿರಿಯ ಅಲ್ಫಾನ್ಸೋ ಮಾವು" ಎಂಬ ಹೆಸರಿನಲ್ಲಿ ಮಾರುವಂತಿಲ್ಲ. ಆದರೆ, ಈ ಆದೇಶ ಇಲ್ಲಿಯ ವರೆಗೆ ಪರಿಣಾಮಕಾರಿಯಾಗಿ ಜ್ಯಾರಿಯಾಗಿಲ್ಲ.
ನೊಷಿರ್ ವಾನ್ ಮಿಸ್ತ್ರಿಯವರ ಅಲ್ಫಾನ್ಸೋ ಮಾವು ರುಚಿ ಹಾಗೂ ಪರಿಮಳದಲ್ಲಿ ಅತ್ಯುತ್ತಮ. ಹಾಗಾಗಿ, ಈ ಮಾವಿಗಾಗಿ ಕಾಯುವವರು ಮುಂಬೈ ಮಾತ್ರವಲ್ಲ, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿಯೂ ಇದ್ದಾರೆ. ಅವರ ಎರಡು-ಡಜನ್ ಮಾವುಗಳ ಪೆಟ್ಟಿಗೆಯ ಬೆಲೆ ರೂ.೨,೦೦೦. ಇದಲ್ಲದೆ, ಹೆಚ್ಚಿಗೆ ರೂ.೨,೦೦೦ ಸಾಗಾಟಕ್ಕಾಗಿ ಪಾವತಿಸಿ, ಮಿಸ್ತ್ರಿಯಿಂದ ಮಾವು ತರಿಸಿಕೊಳ್ಳುತ್ತಾರೆ ಆ ಗ್ರಾಹಕರು. ಅದೇನಿದ್ದರೂ, ಕಳೆದೆರಡು ವರುಷಗಳಲ್ಲಿ, ಅಲ್ಫಾನ್ಸೋ ಮಾವನ್ನು ಪಲ್ಪ್ ಮಾಡಿಸುವುದು ಉತ್ತಮವೆಂದು ಮಿಸ್ತ್ರಿ ಕಂಡುಕೊಂಡಿದ್ದಾರೆ. ಹಲವು ಹೋಟೆಲಿನವರು ಈ ಉತ್ತಮ ಗುಣಮಟ್ಟದ ಅಲ್ಫಾನ್ಸೋ ಮಾವಿನ ಪಲ್ಪಿನ ಖರೀದಿಗೆ ಮುಂದಾಗಿದ್ದಾರೆ. ಅವರು ವರುಷವಿಡೀ ಇದನ್ನು ಬಳಸಿ, ಆಮ್-ರಸ್, ಮಾವಿನ ಐಸ್ ಕ್ರೀಮ್ ಇತ್ಯಾದಿ ತಿನಿಸು ತಯಾರಿಸಿ ಮಾರುತ್ತಾರೆ. ಮಿಸ್ತ್ರಿಯವರ ಅಲ್ಫಾನ್ಸೋ ಮಾವಿನ ಸವಿಯಂತೆಯೇ ಅದರ ನೆನಪುಗಳೂ ಮಧುರ, ಅಲ್ಲವೇ?
(ಅಡಿಕೆ ಪತ್ರಿಕೆ, ಜುಲಾಯಿ ೨೦೧೭)