ನಮ್ಮ ದೇಶದ ಎಲ್ಲೆಡೆಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಸರಕಾರದ ನಿರ್ಲಕ್ಷ್ಯದಿಂದಾಗಿ ಕಳೆದ ಇಪ್ಪತ್ತು ವರುಷಗಳಲ್ಲಿ ಮೂರು ಲಕ್ಷಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದೇ ಅವರ ಆಕ್ರೋಶಕ್ಕೆ ಕಾರಣ.
ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳು ಹಲವು. ಪ್ರಧಾನ ಕಾರಣ, ಒಳಸುರಿಗಳ (ಬೀಜ, ಗೊಬ್ಬರ, ಕೆಲಸದಾಳುಗಳ ಮಜೂರಿ, ಕೃಷಿಯಂತ್ರಗಳು) ವೆಚ್ಚ ಏರುತ್ತಿದ್ದರೂ ಕೃಷಿ ಉತ್ಪನ್ನಗಳ ಬೆಲೆ ಒಂದೇ ಮಟ್ಟದಲ್ಲಿದೆ; ಹಾಗಾಗಿ, ರೈತರ ಸಾಲದ ಹೊರೆ ಜೀವಭಾರವಾಗುವಷ್ಟು ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೆಲವು ರಾಜ್ಯಗಳು ತಾವು ರೈತರ ಪರ ಎಂದು ತೋರಿಸಿಕೊಳ್ಳಲಿಕ್ಕಾಗಿ, ಹಲವಾರು ಷರತ್ತುಗಳೊಂದಿಗೆ, ಸಾಲಮನ್ನಾದ ಯೋಜನೆ ಜ್ಯಾರಿ ಮಾಡಿವೆ.
ಇಂತಹ ಸಮಯಕ್ಕಾಗಿ ಕಾದಿರುವ ಕೆಲವು ಕೃಷಿ ಪರಿಣತರು “ಕೃಷಿರಂಗದ ಬಿಕ್ಕಟ್ಟಿಗೆ ಕಾರಣಗಳೇನು?” ಎಂದು ವಿಶ್ಲೇಷಣೆಗೆ ತೊಡಗಿದ್ದಾರೆ. ಅವರು ನೀಡುವ ಕಾರಣಗಳು ಹೀಗಿವೆ: ಹಿಡುವಳಿಗಳ ವಿಭಜನೆ, ಜಾಗತೀಕರಣದ ಬೆನ್ನೇರಿ ಬಂದ ಹೊಸ ಆರ್ಥಿಕ ನೀತಿಗಳಿಂದಾಗಿ ಮಾರುಕಟ್ಟೆಯಲ್ಲಿ ಏರಿಳಿತ, ರೈತರ ಜಮೀನುಗಳಿಗೆ ನೀರಾವರಿಯ ಕೊರತೆ, ಉಗ್ರಾಣಗಳ ಕೊರತೆ, ಕೃಷಿಯ ಒಳಸುರಿಗಳ ಬೆಲೆಯೇರಿಕೆ, ಕಣ್ಣುಮುಚ್ಚಾಲೆಯಾಡುವ ಮಳೆ.
ಇವುಗಳಲ್ಲಿ ಪ್ರತಿಯೊಂದು ಕಾರಣವೂ ಕೃಷಿರಂಗದ ಬಿಕ್ಕಟ್ಟಿನ ಒಂದು ಮಗ್ಗುಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಆದರೆ ಈ ಬಿಕ್ಕಟ್ಟಿನ ಮೂಲ ಕಾರಣ ಬೇರೆಯೇ ಆಗಿದೆ. ನಾವೆಲ್ಲ ಶಾಲೆಗಳಲ್ಲಿ, ಹೈಸ್ಕೂಲುಗಳಲ್ಲಿ ಕಲಿಯುತ್ತಿದ್ದಾಗ “ಹಸುರು ಕ್ರಾಂತಿ”ಯನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ಅದು ಆಹಾರದ ಕೊರತೆಯಿಂದ ನಮ್ಮ ದೇಶವನ್ನು ಪಾರು ಮಾಡಿತೆಂದು ಮತ್ತೆಮತ್ತೆ ಬೋಧನೆ. ಈ ಹೊಸವಿಧಾನದ ಕೃಷಿಗೆ ಆಧಿಕ ಇಳುವರಿ ತಳಿಗಳು, ರಾಸಾಯನಿಕ ಗೊಬ್ಬರಗಳು ಹಾಗೂ ವಿಷಭರಿತ ಪೀಡೆನಾಶಕಗಳೇ ಅಡಿಪಾಯವೆಂದು ವಿವರಿಸಲಾಗಿತ್ತು.
ಹಸುರುಕ್ರಾಂತಿಯ ಆರಂಭದ ವರುಷಗಳಲ್ಲಿ ಎಕ್ರೆವಾರು ಇಳುವರಿ ಹೆಚ್ಚಾದದ್ದು ನಿಜ. ಕ್ರಮೇಣ, ಒಳಸುರಿಗಳ ವೆಚ್ಚ ವರುಷದಿಂದ ವರುಷಕ್ಕೆ ಹೆಚ್ಚಳ. ಬಹುಪಾಲು ರೈತರು ಬಡವರಾದ ಕಾರಣ, ಸರಕಾರದಿಂದ ಒಳಸುರಿಗಳ ವೆಚ್ಚಕ್ಕೆ ಸಬ್ಸಿಡಿ ನೀಡಿಕೆ ಆರಂಭ. ಜೊತೆಗೆ, ಫಸಲನ್ನು ನಿಗದಿತ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲು ಶುರು. ಅದೇನಿದ್ದರೂ, ಆಹಾರ ಭದ್ರತೆ ಎಲ್ಲಕ್ಕಿಂತ ಮುಖ್ಯವಾಯಿತು.
ಆದರೆ, ೧೯೯೦ರ ದಶಕದಲ್ಲಿ ಜಾಗತೀಕರಣದ ಹೆಸರಿನಲ್ಲಿ ಕೇಂದ್ರ ಸರಕಾರ ನಮ್ಮ ದೇಶದ ದಿಡ್ಡಿ ಬಾಗಿಲುಗಳನ್ನು ತೆರೆಯಿತು. ಮಾರುಕಟ್ಟೆಯ ಬಿರುಗಾಳಿಗೆ, ಬೆಳೆನಷ್ಟ ಹಾಗೂ ಬೆಲೆಕುಸಿತದ ವಿರುದ್ಧ ಸರಕಾರದ ಸುರಕ್ಷಿತಾ ಕಾರ್ಯಕ್ರಮಗಳು ತೂರಿ ಹೋದವು. ಆದರೆ, ಆಹಾರ ಭದ್ರತೆ ಬೇಕೇ ಬೇಕು ತಾನೇ? ಅದಕ್ಕಾಗಿ ಸರಕಾರದಿಂದ ಎಕರೆವಾರು ಇಳುವರಿ ಹೆಚ್ಚಿಸುವ ಮಂತ್ರಪಠಣ. ಒಂದೇ ಮಟ್ಟದಲ್ಲಿ ಉಳಿದ ಬೆಂಬಲ ಬೆಲೆಗಳು, ಏರುತ್ತಿರುವ ಒಳಸುರಿಗಳ ವೆಚ್ಚ, ಫಸಲಿನ ಕುಸಿದ ಮಾರುಕಟ್ಟೆ ಬೆಲೆಗಳು – ಇವುಗಳ ಮುಮ್ಮಡಿ ಏಟಿನಿಂದಾಗಿ ರೈತರು ತತ್ತರಿಸಿ ಹೋದರು.
ಕೃಷಿರಂಗದ ಬಿಕ್ಕಟ್ಟಿನ ಮೂಲ ಕಾರಣವನ್ನು ಎಲ್ಲರೂ ಮರೆತೇ ಬಿಟ್ಟರು. ನಮ್ಮ ಹಿರಿಯರಿಗೆ ಚೆನ್ನಾಗಿ ಗೊತ್ತಿದ್ದ ಆ ಕಾರಣವನ್ನು, ಯುಎಸ್ಎ ದೇಶದ ಕೃಷಿ ಇಲಾಖೆಯ ಸಂಶೋಧಕರಾದ ರಿಕ್ ಹಾನೆ ಈಗ ಹೀಗೆಂದು ಎತ್ತಿ ತೋರಿಸಿದ್ದಾರೆ: ಮಣ್ಣಿನಲ್ಲಿ ಆಳವಾಗಿ ಉಳುಮೆ ಮಾಡಿ, ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿದ್ದರೆ, ಆ ಮಣ್ಣು ಕೆಲವು ವರುಷಗಳಲ್ಲಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಅಂತಹ ಮಣ್ಣಿನಿಂದ ವರುಷವರುಷವೂ ಅಧಿಕ ಇಳುವರಿ ಪಡೆಯಬೇಕಾದರೆ, ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಮಣ್ಣಿಗೆ ಸುರಿಯುತ್ತಲೇ ಇರಬೇಕು; ಇದರಿಂದಾಗಿ ಒಳಸುರಿಗಳ ವೆಚ್ಚ ಹೆಚ್ಚುತ್ತದೆ ಮತ್ತು ಲಾಭ (ಇದ್ದರೆ) ಕುಸಿಯುತ್ತದೆ.
ಅವರೊಬ್ಬರೇ ಇದನ್ನು ಕಣ್ಣಿಗೆ ರಾಚುವಂತೆ ತೋರಿಸಿ ಕೊಟ್ಟದ್ದಲ್ಲ. ಸಿಯಾಟೈಲ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಭೂವಿಜ್ನಾನಗಳ ಪ್ರೊಫೆಸರ್ ಡೇವಿಡ್ ಮೊಂಟ್ಗೊಮೆರಿ ಇತ್ತೀಚೆಗೆ ಪ್ರಕಟಿಸಿರುವ “ಗ್ರೋಯಿಂಗ್ ಎ ರೆವುಲ್ಯೂಷನ್: ಬ್ರಿಂಗಿಂಗ್ ಅವರ್ ಸಾಯಿಲ್ ಬ್ಯಾಕ್ ಟು ಲೈಫ್” ಎಂಬ ಪುಸ್ತಕದಲ್ಲಿ, ಆಧುನಿಕ ಕೃಷಿಯ ಹಲವು ಆಳವಾದ ಮಿಥ್ಯೆಗಳನ್ನು ಚಿಂದಿ ಮಾಡಿದ್ದಾರೆ: ಮೊದಲನೆಯದಾಗಿ, ದೊಡ್ಡ ವಿಸ್ತೀರ್ಣದ ಹೊಲಗಳು ಜಗತ್ತಿನ ಆಹಾರದ ಕಣಜಗಳೆಂಬ ಜನಜನಿತ ಅಭಿಪ್ರಾಯ ಸರಿಯಲ್ಲ. ಯಾಕೆಂದರೆ, ವಿಶ್ವಸಂಸ್ಥೆಯ “ಆಹಾರ ಮತ್ತು ಕೃಷಿ ಸಂಸ್ಥೆ”ಯ (ಎಫ್ಎಓ) ೨೦೧೪ರ ವರದಿಯ ಪ್ರಕಾರ, ಜಗತ್ತಿನ ಆಹಾರದ ಮುಕ್ಕಾಲು ಭಾಗ ಉತ್ಪಾದಿಸುತ್ತಿರುವುದು ಒಂದು ಹೆಕ್ಟೇರ್ ವಿಸ್ತೀರ್ಣದ ಸಣ್ಣ ಹೊಲಗಳು.
ಎರಡನೆಯದಾಗಿ, ಸಾಮಾನ್ಯವಾಗಿ ಸಾವಯವ ಕೃಷಿ ಮಾಡುವ ಸಣ್ಣ ಹೊಲಗಳಿಗಿಂತ ಆಧುನಿಕ ಕೃಷಿ ಮಾಡುವ ಹೊಲಗಳ ಉತ್ಪಾದನೆ ಹೆಚ್ಚು ದಕ್ಷವಾಗಿಲ್ಲ. ಇದನ್ನು ಸಮರ್ಥಿಸಲಿಕ್ಕಾಗಿ ಅವರು ಹಲವು ಅಧ್ಯಯನಗಳನ್ನು ಉದ್ಧರಿಸುತ್ತಾರೆ. ಉದಾಹರಣೆಗೆ, ೧೯೯೨ರ ಯುಎಸ್ಎ ದೇಶದ ಕೃಷಿ ಖಾನೇಷುಮಾರಿಯ ವರದಿಯ ಅನುಸಾರ, ದೊಡ್ಡ ಹೊಲಗಳ ಇಳುವರಿಗೆ ಹೋಲಿಸಿದಾಗ, ಸಣ್ಣ ಹೊಲಗಳ ಎಕರೆವಾರು (೦.೪ ಹೆಕ್ಟೇರ್) ಇಳುವರಿ ಎರಡು ಪಟ್ಟು ಜಾಸ್ತಿ. ಹಾಗೆಯೇ, ಯುಎಸ್ಎ ದೇಶದ ರಾಷ್ಟ್ರೀಯ ಸಂಶೋಧನಾ ಮಂಡಲಿಯ ಪರ್ಯಾಯ ಕೃಷಿ ಪದ್ಧತಿಗಳ ಬಗೆಗಿನ ೧೯೮೯ರ ವರದಿ ಹೀಗಿದೆ: ಆಧುನಿಕ ಕೃಷಿ ಪದ್ಧತಿಯ ಹೊಲಗಳಿಗೆ ಹೋಲಿಸಿದಾಗ, ಉತ್ತಮ ನಿರ್ವಹಣೆಯ ಪರ್ಯಾಯ ಕೃಷಿಪದ್ಧತಿಯ ಹೊಲಗಳು ಉತ್ಪಾದನೆಯ ಪ್ರತಿ ಘಟಕಕ್ಕೆ (ಕಿಲೋಗ್ರಾಮ್, ಕ್ವಿಂಟಾಲ್ ಅಥವಾ ಟನ್)
ಕಡಿಮೆ ರಾಸಾಯನಿಕಗಳನ್ನು ಬಳಸುತ್ತವೆ. “ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ”ಯಲ್ಲಿ ಪ್ರಕಟವಾದ, ೧೧೫ ಅಧ್ಯಯನಗಳ ೨೦೧೪ರ ಬೃಹತ್ ವಿಶ್ಲೇಷಣಾ ವರದಿ ಹೇಳುವುದಿಷ್ಟು: ಆ ಎರಡು ಪದ್ಧತಿಗಳ ಹೊಲಗಳ ಇಳುವರಿಯ ವ್ಯತ್ಯಾಸ ಶೇ.೨೦ಕ್ಕಿಂತ ಜಾಸ್ತಿಯಿಲ್ಲ. ಪರ್ಯಾಯ ಬೆಳೆ ಹಾಗೂ ಮುಚ್ಚಿಗೆ ಬೆಳೆಗಳನ್ನು ಹೆಚ್ಚೆಚ್ಚು ಬೆಳೆಸಿದಂತೆ ಆ ವ್ಯತ್ಯಾಸ ಕಡಿಮೆಯಾಗುತ್ತಾ ಹೋಗುತ್ತದೆ.
ಇಬ್ಬರು ಸಂಶೋಧಕರ ಆಗ್ರಹ ಒಂದೇ ಆಗಿದೆ: ಸಾಮಾನ್ಯ ರೈತರನ್ನು ಉಳಿಸಬೇಕಾದರೆ ಹೆಚ್ಚೆಚ್ಚು ಉತ್ಪಾದಕತೆಯ “ಹುಚ್ಚು” ಬಿಡಬೇಕು. “ಯೇಲ್೩೬೦.ಕಾಮ್” ಎಂಬ ವೆಬ್-ಸೈಟಿನಲ್ಲಿ ಪ್ರಕಟವಾಗಿರುವ ರಿಕ್ ಹಾನೆ ಅವರ ವಿನಂತಿ ಉಲ್ಲೇಖಾರ್ಹ: “ಎಲ್ಲ ಸಸ್ಯಸಂಕುಲ ನಾಶ ಮಾಡಿ, ನಮಗೆ ಬೇಕಾದ ಸಸ್ಯಗಳನ್ನು ಬೆಳೆಯುವ” ಪ್ರವೃತ್ತಿಯ ಬದಲಾಗಿ ನಾವು ಅಳವಡಿಸಿಕೊಳ್ಳಬೇಕಾದ ಧೋರಣೆ: “ಹಲವಾರು ಬಗೆಬಗೆಯ ಸಸ್ಯಗಳನ್ನು ಬೆಳೆಸೋಣ – ನಮಗೆ ಬೇಕಾದ ಸಸ್ಯಗಳನ್ನು ಇನ್ನೂ ಚೆನ್ನಾಗಿ ಬೆಳೆಯಲು ಪೂರಕವಾಗಿ.”
ಇವೆಲ್ಲ ನಮ್ಮ ಹಿರಿಯರಿಗೆ ಚೆನ್ನಾಗಿ ಗೊತ್ತಿತ್ತು. ಹಸುರುಕ್ರಾಂತಿಯ ಮುಂಚೆ ನಮ್ಮ ದೇಶದಲ್ಲಿ ಹೇಗೆ ಕೃಷಿ ಮಾಡುತ್ತಿದ್ದರು? ಈ ಬಗ್ಗೆ ನಮ್ಮ ಹಳ್ಳಿಗಳಲ್ಲಿರುವ ಹಿರಿಯರನ್ನು ಮಾತನಾಡಿಸಿದರೆ, ಈ ಸಂಶೋಧನೆಗಳು ಕಂಡುಹಿಡಿದ ವಿಷಯಗಳನ್ನೇ ಹೇಳುತ್ತಾರೆ. ರಾಸಾಯನಿಕ ಗೊಬ್ಬರ ಮಣ್ಣಿಗೆ ಸುರಿದರೆ ಹೆಚ್ಚು ಪ್ರಯೋಜನವಿಲ್ಲ. ಅದರ ಬಹುಪಾಲು ಸಸ್ಯಗಳಿಗೆ ಒದಗುವುದೇ ಇಲ್ಲ. ಪೋಷಕಾಂಶಗಳು ಸಸ್ಯಗಳಿಗೆ ಒದಗಬೇಕಾದರೆ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳು ಮತ್ತು ಎರೆಹುಳಗಳು ತುಂಬಿರಬೇಕು. ಆದರೆ ರಾಸಾಯನಿಕ ಗೊಬ್ಬರ ಮಣ್ಣಿಗೆ ಹಾಕಿದಾಗ ಇವು ನಾಶವಾಗುತ್ತವೆ. ಕ್ರಮೇಣ ಮಣ್ಣು “ಸಾಯುತ್ತದೆ” (ನಿಷ್ಪ್ರಯೋಜಕ ಆಗುತ್ತದೆ). ಎಂಥ ನಷ್ಟ! ಆದ್ದರಿಂದ, ಕೃಷಿಯ ಉತ್ಪಾದಕತೆ (ಅಂದರೆ ಎಕ್ರೆವಾರು ಫಸಲು) ಹೆಚ್ಚಾಗ ಬೇಕಾದರೆ, ಮಣ್ಣು ಜೀವಂತವಾಗಿ ಇರಿಸಬೇಕು. ಅದಕ್ಕಾಗಿ, ನಮ್ಮ ಪಾರಂಪರಿಕ ಕೃಷಿ ಪದ್ಧತಿಗಳನ್ನು ಪುನಃ ಅಳವಡಿಸಿಕೊಳ್ಳಬೇಕು, ಅಲ್ಲವೇ? ಮತ್ತೆ ಮಣ್ಣಿಗೆ ನಮೋ!
(ಅಡಿಕೆ ಪತ್ರಿಕೆ, ಅಕ್ಟೋಬರ್ ೨೦೧೭)