ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು.
ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆಯ ರೈತ ಉಮ್ಮಪ್ಪ ಯಾನೆ ಉಮೇಶ ಪೂಜಾರಿ (೫೦) ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಉಮ್ಮಪ್ಪ ಅವರು ಕೆಲವು ದಿನಗಳ ಹಿಂದೆ ತನ್ನ ತೋಟದಲ್ಲಿ ಬೋರ್ವೆಲ್ ತೋಡಿಸಿದ್ದರು. ಸುಮಾರು ೭೦ ಸಾವಿರ ರೂಪಾಯಿ ಸಾಲ ಮಾಡಿ ತೋಡಿಸಿದ ಬೋರ್ವೆಲ್ ನಲ್ಲಿ ನೀರು ಸಿಗದೇ ಇದ್ದ ಕಾರಣ ಅವರು ಚಿಂತಿತರಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ."
ಇದನ್ನೋದಿದಾಗ ನನಗೆ ನೆನಪಾದದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಕಾಡಕೋಳಿ ಮನೆಯ ದೇವರು ಭಟ್ ಸೋದರರು. ಅಲ್ಲಿಗೆ ಹೋಗಿದ್ದಾಗ ಅವರು ಹೇಳಿದ್ದ ಮಾತು, "ಎರಡು ವರುಷ ಮುಂಚೆ ನಾವು ನಮ್ಮ ಅಡಿಕೆ ತೋಟ ಮಾರಿ ಊರು ಬಿಟ್ಟು ಹೋಗೋದಂತ ಮಾಡಿದ್ವು. ಈಗ ಧೈರ್ಯ ಬಂದಿದೆ. ಒಂದು ವರುಷ ಮಳೆ ಬಾರದಿದ್ರೂ ತೊಂದರೆ ಇಲ್ಲ. ನಮ್ಮ ಅಡಿಕೆ ತೋಟ ಉಳಿಸಿಕೊಳ್ತೇವೆ."
ತಮ್ಮ ಅಡಿಕೆ ತೋಟದ ಮೇಲ್ಭಾಗದ ಗುಡ್ಡದಲ್ಲಿ ನೀರಿಂಗಿಸುವ ಸಮತಲ ಅಗಳು ತೋರಿಸುತ್ತಾ ಅವರು ಕೇಳಿದ ಪ್ರಶ್ನೆ, "ಇದರ ಉದ್ದ ಎಷ್ಟು ಹೇಳಿ?" ಎಲ್ಲರ ಕಣ್ಣಂದಾಜಿನ ಲೆಕ್ಕ ತಪ್ಪಿತ್ತು. ಕೆಲವರು ಹೆಜ್ಜೆಗಳಿಂದ ಅಳೆಯುತ್ತಿದ್ದಂತೆ ಶ್ರೀಪತಿ ದೇವರು ಭಟ್ ಉತ್ತರ ಹೇಳಿಬಿಟ್ಟರು, "ಇಪ್ಪತ್ತು ಅಡಿ." ತಕ್ಷಣ ಹೊರಬಿತ್ತು ಎರಡನೆಯ ಪ್ರಶ್ನೆ, "ಇದರ ಅಗಲ ನಾಲ್ಕಡಿ, ಆಳ ೩ ಅಡಿ. ಇದರಲ್ಲಿ ಎಷ್ಟು ನೀರು ಹಿಡೀತದೆ?" ಉತ್ತರಿಸಲು ನಾವು ತಡಕಾಡುತ್ತಿರುವಾಗ "ಹೆಚ್ಚುಕಮ್ಮಿ ೫ ಸಾವಿರ ಲೀಟರ್ ನೀರು ಹಿಡೀತದೆ. ಇಂತಹ ನಲುವತ್ತು ಅಗಳು ಮಾಡಿಸಿದ್ದೇವೆ. ಅಲ್ಲಿಗೆ ಎಷ್ಟು ಮಳೆ ನೀರು ಈ ಗುಡ್ಡದಲ್ಲಿ ಕೊಯ್ಲಾಗುತ್ತದೆ, ನೀವೇ ಲೆಕ್ಕ ಹಾಕಿ" ಎಂದು ಸವಾಲೆಸೆದರು ಶ್ರೀಪತಿ ಭಟ್.
ಚುರುಕಾಗಿ ಗುಡ್ಡವೇರುತ್ತಾ ಅವರು ಆರೇಳು ಇಂಗುಗುಂಡಿಗಳನ್ನು ನಮಗೆ ತೋರಿಸಿದರು. ಕೆಲವಂತೂ ಒಂದಾಳು ಆಳ. ಅವರ ಮನೆಯ ಎದುರಿನ ಗುಡ್ಡದ ಕಾಡನ್ನು ಕಾಡು ಅನ್ನುವಂತಿಲ್ಲ. ಅಲ್ಲಿದ್ದ ಪುರಾತನ ಮರಗಳನ್ನು ಅರಣ್ಯ ಇಲಾಖೆಯವರು ಎರಡು ದಶಕಗಳ ಮುನ್ನ ಕಡಿದು ತೇಗ ನೆಟ್ಟಿದ್ದರು. ಆ ಮರಗಳು ಎತ್ತರಕ್ಕೆ ಬೆಳೆದಿದ್ದರೂ ನಿಬಿಡವಾಗಿಲ್ಲ. ಆದ್ದರಿಂದ ಅಲ್ಲಿ ಬಿದ್ದ ಮಳೆ ನೀರು ಇಂಗದೆ ಹರಿದು ಹೋಗುತ್ತಿತ್ತು. ಅದನ್ನೆಲ್ಲ ಇಂಗಿಸಲು ಆಳದ ಇಂಗುಗುಂಡಿಗಳೇ ಬೇಕು.
"ಮಳೆ ಬಂದಾಗೆಲ್ಲ ನಮ್ಮ ಮನೆ ಎದುರಿನ ತೋಡಿನಲ್ಲಿ ನೀರು ತುಂಬಿ ರಭಸದಿಂದ ಹರೀತಿತ್ತು. ಇದನ್ನಾದರೂ ಇಂಗಿಸಬೇಕೆಂಬ ಯೋಚನೆ. ಆದರೆ ಹೇಗೆ ಅಂತ ತಲೆಕೆಡಿಸಿಕೊಂಡೆವು. ಆಗ ನೆನಪಾಯಿತು. "ಅಡಿಕೆ ಪತ್ರಿಕೆ"ಯ ನೆಲ-ಜಲ ಉಳಿಸುವ ಲೇಖನಮಾಲೆಯಲ್ಲಿ ಓದಿದ್ದು. ಕೂಡಲೇ ಅಗಳು ತೆಗೆಯೋ ಕೆಲಸ ಶುರು ಮಾಡಿದೆವು" ಎಂದು ನೆನಪು ಮಾಡಿಕೊಳ್ಳುತ್ತಾ ನಮ್ಮನ್ನೆಲ್ಲ ತಮ್ಮ ಮನೆಯತ್ತ ಕರೆ ತಂದರು ಶ್ರೀಪತಿ ಭಟ್. "ಇದೇ ತೋಡು ನೋಡಿ" ಎಂದು ಆ ತೋಡನ್ನು ನಮಗೆ ತೋರಿಸುತ್ತ ಹೇಳಿದರು, "ಈಗ ಮಳೆಗಾಲದಲ್ಲಿ ಇದರಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಯಾಕೆಂದರೆ ಗುಡ್ಡದಲ್ಲಿ ಬಿದ್ದ ಹೆಚ್ಚಿನ ಮಳೆ ನೀರೆಲ್ಲ ಅಲ್ಲೇ ಇಂಗುತ್ತದೆ."
"ಹಾಗೆ ಇಂಗಿದ ನೀರೆಲ್ಲ ನಮಗೇ ಸಿಗ್ತದೆ. ನಮ್ಮ ಬಾವಿಯಲ್ಲಿ ನೀರೆಷ್ಟಿದೆ ನೋಡಿ" ಎಂದು ನಮ್ಮನ್ನು ಕರೆದೊಯ್ದರು. ಮನೆಗೆ ಹತ್ತಿರದಲ್ಲೇ ಇರುವ ೩೧ ಅಡಿ ವ್ಯಾಸದ ಆ ಬಾವಿ ಅವರ ಮುಖ್ಯ ನೀರಿನ ಆಸರೆ. ತಂದೆಯ ಕಾಲದಿಂದಲೂ ಅಡಿಕೆ ತೋಟಕ್ಕೆ ಮತ್ತು ಮನೆ ಬಳಕೆಗೆ ನೀರೊದಗಿಸಿದ ಬಾವಿ ಅದು. ನಾವು ನೋಡಿದಾಗ (೧೬ ಮೇ ೨೦೦೪) ಅದರಲ್ಲಿ ಸಮೃದ್ಧ ನೀರು. "ಎರಡು ವರುಷದ ಹಿಂದೆ, ಮಾರ್ಚ್ ತಿಂಗಳಲ್ಲೇ ಇದು ಒಣಗಿತ್ತು ಅಂದರೆ ನಂಬ್ತೀರಾ? ನಾವಾಗ ಕಂಗಾಲು. ಈಗ ನೋಡಿ, ಧಾರಾಳ ನೀರಿದೆ. ಇದೆಲ್ಲ ನಾವು ಗುಡ್ಡದಲ್ಲಿ ಇಂಗಿಸಿದ ನೀರು" ಎಂಬ ವಿವರಣೆ ಅವರಿಂದ.
ಮನೆಯೆದುರಿನ ಅಡಿಕೆ ತೋಟದಲ್ಲಿ ಕಳೆದ ವರುಷ ತೋಡಿದ ಎರಡನೆಯ ಬಾವಿಯಲ್ಲೂ ಹೇರಳ ನೀರು. ಹನ್ನೊಂದು ಅಡಿ ವ್ಯಾಸದ ರಿಂಗ್ ಗಳನ್ನು ಇಳಿಸಿದ ೨೦ ಅಡಿ ಆಳದ ಬಾವಿ ಅದು. ಪಂಪಿನಿಂದ ಈ ದಿನ ತಳದ ತನಕ ನೀರೆತ್ತಿದರೂ ಮರುದಿನ ಮುಂಜಾನೆ ಅದರಲ್ಲಿ ೧೪ ಅಡಿ ಆಳಕ್ಕೆ ನೀರು ತುಂಬಿರುತ್ತದೆ, ಎನ್ನುವಾಗ ಅವರ ದನಿಯಲ್ಲೇ ಒಂದು ಝಳಕ್.
"ನಮ್ಮ ಹೊಸ ಬಾವಿ ನೀವು ನೋಡಲೇ ಬೇಕು" ಎಂದು ಬೀಸುಗಾಲು ಹಾಕಿ ೩ನೆಯ ಬಾವಿಯತ್ತ ಸಾಗಿದರು. ಅದೇ ವಾರ ಕಲ್ಲು ಕಟ್ಟಿ ಮುಗಿಸಿದ್ದ ಆ ಬಾವಿಯ ವ್ಯಾಸ ೨೦ ಅಡಿ. ಅದರಲ್ಲೂ ಒಂಭತ್ತು ಅಡಿ ಆಳದ ನೀರು ನಿಂತು ನಗುತ್ತಿತ್ತು.
ಈ ೩ ಬಾವಿಗಳೂ ಇಳಿಜಾರಿನಲ್ಲಿ ಒಂದೇ ಸರಳರೇಖೆಯಲ್ಲಿವೆ. ಅವನ್ನು ತೋರಿಸಿದ ಶ್ರೀಪತಿ ದೇವರು ಭಟ್ ನಮಗೆ ಯಾವುದೇ ಸಿದ್ಧಾಂತದ ಪಾಠ ಮಾಡಿರಲಿಲ್ಲ. ಆದರೆ ಮಳೆಕೊಯ್ಲಿನ ಸರಳ ತತ್ವ ತೋರಿಸಿಕೊಟ್ಟಿದ್ದರು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಶಿರಸಿಯಲ್ಲಿ ನಡೆಸಿದ ನಾಲ್ಕು ದಿನಗಳ "ನೀರ ನೆಮ್ಮದಿಗೆ ಪತ್ರಿಕೋದ್ಯಮ" ತರಬೇತಿ ಶಿಬಿರಕ್ಕೆ ಬಂದಿದ್ದ ಶಿಬಿರಾರ್ಥಿಗಳಿಗೆ ದೊರಕಿದ ಮರೆಯಲಾಗದ ಪಾಠ ಅದಾಗಿತ್ತು. ನಮ್ಮೊಂದಿಗಿದ್ದ ’ಶ್ರೀ’ಪಡ್ರೆಯವರ ಮಾತಿನಲ್ಲಿ ಹೇಳಬೇಕೆಂದರೆ "ಮಳೆಗಾಲದಲ್ಲಿ ಮೇಲಿನ ಗುಡ್ದದಲ್ಲಿ ನೀರಿಂಗಿಸಿ ನೀರ ಠೇವಣಿ ಇಟ್ಟಿದ್ದಾರೆ. ಬೇಸಗೆಯಲ್ಲಿ ಕೆಳಮಟ್ಟದ ಬಾವಿಗಳಲ್ಲಿ ನೀರು ತೆಗೆಯುತ್ತಿದ್ದಾರೆ. ಇದು ಕೈಯಲ್ಲಿ ಕಾಸಿದ್ದಾಗ ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಅಗತ್ಯವಿದ್ದಾಗ ಚೆಕ್ ಕೊಟ್ಟು ಹಣ ತೆಗೆಯುವಂತೆ."
ಹೌದಲ್ಲ, ಮಳೆ ನೀರನ್ನು ಗುಡ್ಡದಲ್ಲಿ ಇಂಗಿಸಲು ದೇವರು ಭಟ್ ಸೋದರರಿಗೆ ಆದ ವೆಚ್ಚ ಕೇವಲ ೫,೦೦೦ ರೂಪಾಯಿ. ಆದರೆ ಅದರಿಂದಾದ ಲಾಭ ಲಕ್ಷಗಟ್ಟಲೆ ರೂಪಾಯಿ.
ಈಗ ಹೇಳಿ, ಉಮೇಶ ಪೂಜಾರಿ ಜೀವ ಕಳೆದುಕೊಳ್ಳಬೇಕಿತ್ತೇ?