ಊರು ರಾಣಿಬೆನ್ನೂರು. ಅಲ್ಲಿಂದ ಸುಮಾರು ೧೦ ಕಿಮೀ ದೂರದ ಒಂದು ಹಳ್ಳಿ. ಅಲ್ಲಿನ ೨೦ ಕಡು ಬಡತನದ ಕುಟುಂಬಗಳಿಗೆ ಸರಕಾರ ತಲಾ ಒಂದೆಕ್ರೆ ಜಮೀನು ನೀಡಿತು. ಅವರೆಲ್ಲ ಪರಿಶಿಷ್ಟ ವರ್ಗದವರು.
ಕೇವಲ ಜಮೀನು ನೀಡಿದರೆ ಅವರ ಉದ್ಧಾರ ಆಗದು ತಾನೇ? ಅದಕ್ಕಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಕಾರ ಹಣ ಸಹಾಯದ ಯೋಜನೆ ರೂಪಿಸಲಾಯಿತು: ಬ್ಯಾಂಕಿನಿಂದ ಶೇಕಡಾ ೪ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಮತ್ತು ಗುಂಪಿಗೆ ಸಾಲ ನೀಡುವ ಕಾರಣ ಯೋಜನಾ ವೆಚ್ಚದ ಶೇಕಡಾ ೫೦ ಸಹಾಯಧನ. ಇದು ’ವ್ಯತ್ಯಾಸ ಬಡ್ಡಿ ದರ’ (ಡಿ.ಆರ್. ಐ.) ಸಾಲವಾದ್ದರಿಂದ ಸಾಲಕ್ಕೆ ಚಕ್ರಬಡ್ಡಿ ವಿಧಿಸುವಂತಿಲ್ಲ ಹಾಗೂ ಸೊತ್ತುಗಳ ವಿಮೆಯ ವೆಚ್ಚವನ್ನು ಬ್ಯಾಂಕ್ ಭರಿಸತಕ್ಕದ್ದು.
ಅಲ್ಲೊಂದು ಕೊಳವೆಬಾವಿ ಕೊರೆದು, ಅವರ ಜಮೀನಿಗೆ ನೀರು ಒದಗಿಸುವ ಯೋಜನೆ. ಈ ನೀರಿನಿಂದ ಅವರೆಲ್ಲರೂ ಅರ್ಧ ಎಕ್ರೆ ಜಮೀನಿನಲ್ಲಿ ತರಕಾರಿ ಬೆಳೆಯಬೇಕು. ಉಳಿದರ್ಧ ಜಮೀನಿನಲ್ಲಿ ಮಳೆಗಾಲದಲ್ಲಿ ಜೋಳ ಬೆಳೆಯಬೇಕು. ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೂ ಈ ಯೋಜನೆ ಯಶಸ್ವಿ ಆಗಬೇಕಿತ್ತು.
ಆದರೆ ಆದದ್ದೇನು? ಕೊಳವೆಬಾವಿಯ ಸಬ್ಮರ್ಸಿಬಲ್ ಪಂಪಿಗೆ ವಿದ್ಯುತ್ ಸಂಪರ್ಕ ನೀಡಲು (ಆಗಿನ) ಕರ್ನಾಟಕ ವಿದ್ಯುತ್ ನಿಗಮ ತಡ ಮಾಡಿತು. ಅಷ್ಟರಲ್ಲಿ ಕೊಳವೆಬಾವಿಯೊಳಗೆ ಕಿಡಿಗೇಡಿಗಳು ಕಲ್ಲು ಹಾಕಿದರು. ಆ ಕೊಳವೆಬಾವಿ ರಿಪೇರಿ ಮಾಡಲು ಸಾಧ್ಯವಿಲ್ಲದಂತಾಯಿತು. ನೀರು ಹಾಯಿಸಲಿಕ್ಕಾಗಿ ಖರೀದಿಸಿ ತಂದು ಜಮೀನಿನಲ್ಲಿ ಇಡಲಾಗಿದ್ದ ಪೈಪ್ಗಳೂ ಕೆಲವೇ ದಿನಗಳಲ್ಲಿ ಕಳವಾದವು. ಅಂತೂ ಆ ಬಡವರಿಗೆ ಕೊಳವೆಬಾವಿ ನೀರು ದಕ್ಕಲಿಲ್ಲ. ಆ ಹಳ್ಳಿಗೆ ನಾನು ಹೋಗಿದ್ದಾಗ, ಆ ಬಡವರ ಮುಖಗಳಲ್ಲಿ ಹತಾಶೆ ಮಡುಗಟ್ಟಿತ್ತು.
ಅವರು ಪುನಃ ಆ ಹಳ್ಳಿಯ ಜಮೀನ್ದಾರರ ಹೊಲಗಳಲ್ಲಿ ಕೂಲಿಗಳಾಗಿ ದುಡಿಯತೊಡಗಿದರು. ಅವರು ಇದೆಲ್ಲ ಬೆಳವಣಿಗೆಗಳ ಮುನ್ನ ಹಾಗೆಯೇ ಬದುಕುತ್ತಿದ್ದರು. ಅವರೆಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತರೆ, ಹೊಲಗಳಿಗೆ ಕೂಲಿಯಾಳುಗಳು ಸಿಗಲಿಕ್ಕಿಲ್ಲ ಎಂಬ ಕಾರಣಕ್ಕಾಗಿ ಆ ಕೊಳವೆಬಾವಿಯೊಳಗೆ ಕಲ್ಲುಗಳನ್ನು ಹಾಕಲಾಯಿತೇ?
ಬಡವರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವವರಿಗೆ ದೊಡ್ಡ ಪಾಠ ಈ ಪ್ರಕರಣದಲ್ಲಿದೆ. ಅಭಿವೃದ್ಧಿ ಅನ್ನೋದು "ಎರಡು ಕೂಡಿಸು ಎರಡು ಅಂದರೆ ನಾಲ್ಕು" ಎಂಬಷ್ಟು ಸರಳವಲ್ಲ. ಆರ್ಥಿಕ ನೆರವಿನ ಯೋಜನೆಗಳಲ್ಲಿ ಸಾಮಾಜಿಕ ಅಂಶಗಳನ್ನು ಪರಿಗಣಿಸಲೇ ಬೇಕು. ಘರ್ಷಣೆಗೆ ಹಾಗೂ ಯೋಜನೆಯ ಅಪಯಶಸ್ಸಿಗೆ ಕಾರಣವಾಗಬಹುದಾದ ಅಂಶಗಳನ್ನು ಯೋಜನೆ ಕಾರ್ಯಗತಗೊಳಿಸುವಾಗಲೇ ನಿವಾರಿಸಬೇಕು.
ಆಗ ಮಾತ್ರ ಇಂತಹ ಅಭಿವೃದ್ದಿಯ ಹಿನ್ನಡೆಯ ಕತೆಗಳು ಪುನರಾವರ್ತನೆ ಆಗೋದನ್ನು ತಡೆಯಲು ಸಾಧ್ಯ, ಅಲ್ಲವೇ?