ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?
ಈ ಕರಾಳ ಪ್ರಕರಣ ನಡೆದದ್ದು ಭೋಪಾಲದ ಷಹಜೇಹಾನ್ಬಾದ್ ಪ್ರದೇಶದಲ್ಲಿ, ೧೩ ಮೇ ೨೦೦೯ರಂದು. ಅಲ್ಲಿನ ಸಂಜಯನಗರ ಬಸ್ತಿಯಲ್ಲಿ ಕುಡಿಯುವ ನೀರಿಗಾಗಿ ಆರಂಭವಾದ ಜಗಳ ಅವಸಾನವಾದದ್ದು ಚೂರಿ ಇರಿತದಿಂದ ಒಂದೇ ಕುಟುಂಬದ ತಂದೆ-ತಾಯಿ-ಮಗನ ಕೊಲೆಯಲ್ಲಿ! ಕೊಲೆಯಾದವರು ಜೀವನ್ ಮಾಳವೀಯ (೪೩ ವರುಷ), ಅವರ ಪತ್ನಿ ಸವಿತಾ ಮತ್ತು ಮಗ ರಾಜು (೧೯ ವರುಷ). ಕೊಲೆ ಮಾಡಿದವರು ದೀನೂ ಮತ್ತು ಅವನ ಸಂಗಡಿಗರು.
ಸಂಜಯನಗರಕ್ಕೆ ಮುನಿಸಿಪಾಲಿಟಿ ನೀರಿನ ಸರಬರಾಜು ವ್ಯವಸ್ಠೆ ಇಲ್ಲ. ಹಾಗಾಗಿ, ಆ ಕಾಲೋನಿಯ ನಿವಾಸಿಗಳು ರಸ್ತೆಯ ಮಧ್ಯದಲ್ಲೇ ಹೊಂಡ ತೋಡಿ, ಅಲ್ಲಿ ಹಾದು ಹೋಗುವ ನೆಲದಾಳದ ನೀರಿನ ಪೈಪಿಗೆ ಹಾದಿ ಮಾಡಿದ್ದಾರೆ. ಆ ಪೈಪಿಗೆ ಒಂದು ತೂತು ಕೊರೆದು, ಅದರಿಂದ ಕಾನೂನುಬಾಹಿರವಾಗಿ ಅವರು ನೀರು ಸೆಳೆಯುತ್ತಾರೆ. ನೀರು ಬರುತ್ತಿದ್ದುದು ಎರಡು ದಿನಗಳಿಗೊಮ್ಮೆ, ಅದೂ ಕೇವಲ ೧೫ ನಿಮಿಷಗಳ ಅವಧಿಗೆ. ಅಲ್ಲಿನ ಸುಮಾರು ೨೦೦ ನಿವಾಸಿಗಳು ಅಲ್ಪಾವಧಿಯಲ್ಲಿ ಸಿಗುವ ನೀರಿಗಾಗಿ ಪರದಾಡುವ ದೃಶ್ಯ ಕಲ್ಪಿಸಿಕೊಳ್ಳಿರಿ.
ಮಾಳವೀಯ ಕುಟುಂಬದ ಮನೆ ಆ ಹೊಂಡದ ಎದುರಿನಲ್ಲೇ ಇದೆ. ಹಾಗಾಗಿ, ಯಾವಾಗಲೂ ನೀರು ಬಂದಾಗ ನೀರು ಸೆಳೆಯುತ್ತಿದ್ದವರಲ್ಲಿ ಸವಿತಾಳೇ ಮೊದಲಿಗಳು. ಇದರಿಂದಾಗಿ, ಅವಳಿಗೂ ಕೆಲವು ಮನೆಗಳಾಚೆಯ ದೀನೂನ ಪತ್ನಿ ರೇಖಾಳಿಗೂ ಯಾವತ್ತೂ ಜಗಳ.
ಮೇ ೧೩ರ ಮುಂಚಿನ ೩ ದಿನಗಳಲ್ಲಿ ಪೈಪಿನಲ್ಲಿ ನೀರು ಬಂದಿರಲಿಲ್ಲ. ಎಲ್ಲ ನಿವಾಸಿಗಳಲ್ಲೂ ನೀರಿನ ನಿರೀಕ್ಷೆ , ನೀರು ಬಾರದ್ದಕ್ಕಾಗಿ ಚಡಪಡಿಕೆ, ಅಸಹನೆ. "ನೀರು ಬಂತೇ?" ಎಂದು ಆಗಾಗ ಹೊಂಡವನ್ನು ಇಣುಕಿ ನೋಡುತ್ತಿದ್ದರು.
ರಾತ್ರಿ ೮ ಗಂಟೆಯ ಹೊತ್ತಿಗೆ ಪೈಪಿನಿಂದ ನೀರು ಚಿಮ್ಮಿತು. "ಪಾನೀ ಆ ಗಯಾ" (ನೀರು ಬಂದಿದೆ) ಎಂಬ ಕೂಗು ಕಾಲೊನಿಯ ಎಲ್ಲ್ಲ ಮನೆಗಳಿಗೂ ಹಬ್ಬಿತು. ಬಕೆಟ್ ಹಾಗೂ ಕ್ಯಾನ್ಗಳ ಸದ್ದಿನ ಗದ್ದಲ. ಯಥಾಪ್ರಕಾರ ಜೀವನ್ ಮಾಳವೀಯನ ಮಡದಿ ಸವಿತಾ ಮೊದಲಾಗಿ ಹೊಂಡಕ್ಕೆ ಇಳಿದಳು. ಆಗ ದೀನೂ ಅವಳಿಗೆ ಅಡ್ಡ ನಿಂತು, ಅವಳ ಕೆನ್ನೆಗೆ ಹೊಡೆಯತೊಡಗಿದ ಎಂದು ನೆನಪು ಮಾಡಿಕೊಳ್ಳುತ್ತಾಳೆ ಸವಿತಾಳ ಮಗಳು ಉಮಾ (೧೫ ವರುಷ). ತನಗೂ ತನ್ನ ಪತ್ನಿಗೂ ಮೊದಲಾಗಿ ನೀರು ಪಡೆಯಲು ಬಿಡಬೇಕು ಎಂಬುದು ದೀನೂನ ತಗಾದೆ. ಅವರ ಜಗಳ ಜೋರಾಯಿತು. ಜೀವನ್ ಮತ್ತು ಮಗ ರಾಜು ಸವಿತಾಳ ಬೆಂಬಲಕ್ಕೆ ನಿಂತರು. ದೀನೂನ ಜೊತೆ ಇನ್ನೂ ಆರು ಜನ ಸೇರಿಕೊಂಡರು. ಅವರ ಕೈಯಲ್ಲಿ ಚೂರಿಗಳು ಹಾಗೂ ಲಾಠಿಗಳು. ಬೈಯುತ್ತ, ಹೊಡೆಯುತ್ತ ಜಗಳ ಮಾಡುತ್ತಿದ್ದ ದೀನೂ ಮತ್ತು ಸಂಗಡಿಗರು ಚೂರಿಗಳಿಂದ ಇರಿಯತೊಡಗಿದರು - ಜೀವನ್, ಸವಿತಾ ಮತ್ತು ರಾಜೂಗೆ. ಅವರನ್ನು ಕಳಕ್ಕೆ ಕೆಡವಿ ಕುತ್ತಿಗೆಗೆ ತುಳಿದು ಉಸಿರುಕಟ್ಟಿಸಿದರು.
ಇವರು ಬಡಿದಾಡುತ್ತಿದ್ದಂತೆಯೇ ಉಳಿದ ಕುಟುಂಬದವರು ತಮ್ಮ ಪಾತ್ರೆ, ಬಕೆಟ್ಗಳಲ್ಲಿ ನೀರು ತುಂಬಿಸಿಕೊಂಡು ತಮ್ಮ ಮನೆಗೆ ವಾಪಾಸಾದರು. ಮನೆಯ ಬಾಗಿಲು ಜಡಿದು ಸುರಕ್ಷಿತವಾಗಿ ಉಳಿದರು.
ಒಂದು ತಾಸಿನ ಬಳಿಕ ಪೊಲೀಸರು ಬಂದರು. ರಕ್ತ ಸುರಿಸುತ್ತಾ, ನೋವಿನಿಂದ ನರಳುತ್ತಾ ಬಿದ್ದಿದ್ದ ಜೀವನ್, ಸವಿತಾ ಮತ್ತು ರಾಜು ಅವರನ್ನು ಆಸ್ಪತ್ರೆಗೆ ಹೊತ್ತೊಯ್ದರು. ಅಲ್ಲಿ ಅವರು ಸತ್ತಿದ್ದಾರೆಂದು ಘೋಷಿಸಿದರು.
ಈ ಜಗಳದಲ್ಲಿ ಗಾಯಗೊಂಡಿರುವ ಸುನಿಲ್ ಎಂಬಾತ ಹೇಳುತ್ತಾನೆ, "ದೀನೂ ಮತ್ತು ಅವನ ಗ್ಯಾಂಗನ್ನು ಎದುರು ಹಾಕಿಕೊಳ್ಳಲು ಎಲ್ಲರಿಗೂ ಭಯ. ಪೊಲೀಸರಿಗೆ ಮಾಹಿತಿ ನೀಡುವವರನ್ನು ಕೊಲ್ಲುವುದಾಗಿ ಅವರು ಬೆದರಿಸಿದ್ದಾರೆ." ದೀನೂ ಹಾಗೂ ಸಂಗಡಿಗರನ್ನು ಬಂಧಿಸಲಾಗಿದೆ. ಆದರೆ ಸುನಿಲ್ ಪೊಲೀಸರಿಗಿತ್ತ ಹೇಳಿಕೆ ಬದಲಾಯಿಸಬೇಕೆಂದು ಅವರು ಎಚ್ಚರಿಸಿದ್ದಾರೆ.
ಜೀವನ್ ಮಾಳವೀಯರ ಮಕ್ಕಳಾದ ಉಮಾ, ಅವಳ ಇಬ್ಬರು ತಂಗಿಯಂದಿರು ಮತ್ತು ಒಬ್ಬ ತಮ್ಮ ಈಗ ಅನಾಥರು. ಸರಕಾರ ಇವರಿಗೆ ತಲಾ ರೂ.೧೦,೦೦೦ ಪರಿಹಾರ ಘೋಷಿಸಿದೆ. ಉಮಾ ಅದನ್ನು ಪಡೆಯಲಿಕ್ಕಾಗಿ ಅಧಿಕಾರಿಗಳನ್ನು ಭೇಟಿ ಮಾಡಲು ಹಲವು ಬಾರಿ ಹೋದಳು. ಆದರೆ ಈ ವರೆಗೂ ಅಧಿಕಾರಿಗಳನ್ನು ಕಾಣಲು ಅವಳಿಗೆ ಸಾಧ್ಯವಾಗಿಲ್ಲ. ಮುಂದಿನ ಬದುಕು ಹೇಗೆ? ಇಂದಿನ ಮನೆಬಳಕೆಗೆ ನೀರು ಹೇಗೆ? ಎಂಬುದೇ ಉಮಾಳ ತಕ್ಷಣದ ಚಿಂತೆ.
ಈಗ ಭೋಪಾಲದ ಸಂಜಯನಗರ ಬಸ್ತಿಯ ನೆಲದಾಳದ ಪೈಪಿನಲ್ಲಿ ಎರಡು ದಿನಗಳಿಗೊಮ್ಮೆ ಒಂದು ತಾಸಿನವಧಿ ನೀರು ಬರುತ್ತದೆ. ಆಗ ಅಲ್ಲಿ ಪೊಲೀಸರು ಗಸ್ತು ನಿಂತಿರುತ್ತಾರೆ. ಇದರಿಂದಾಗಿ ಜನರು ಕ್ಯೂನಲ್ಲಿ ನಿಂತು ನೀರು ತುಂಬಿಸಿಕೊಳ್ಳುತ್ತಾರೆ.
ಈಗ ಹೇಳಿ. ಭಾರತ ಎಂಬ ಪುಣ್ಯ ಭೂಮಿಯಲ್ಲಿ ಹುಟ್ಟಿದ ಮಾಳವೀಯ ಕುಟುಂಬದವರು ಕುಡಿಯುವ ನೀರಿಗಾಗಿ ಕೊಲೆ ಆಗಬೇಕಿತ್ತೇ?