“ನನ್ನ ಬಾಲ್ಯದಲ್ಲಿ ನಮ್ಮ ಕುಟುಂಬ ೧೨೦ ಎಮ್ಮೆಗಳನ್ನು ಸಾಕುತ್ತಿತ್ತು. ಈಗ ಉಳಿದಿರೋದು ಕೇವಲ ಹತ್ತು ಎಮ್ಮೆಗಳು. ಅವಕ್ಕೆ ಹಸುರು ಹುಲ್ಲು ತರೋದೇ ನಮಗೆ ಪ್ರತಿ ದಿನದ ಸವಾಲಾಗಿದೆ” ಎನ್ನುತ್ತಾಳೆ ೬೫ ವರುಷ ವಯಸ್ಸಿನ ನೀಲಾ ವಾಡಿ.
ತಮಿಳುನಾಡಿನ ಮೇಲ್-ನೀಲಗಿರಿಯ ತರ್ನಾರ್ದ್ಮುಂಡ್ ಗ್ರಾಮದಲ್ಲಿದೆ ಆಕೆಯ ಗುಡಿಸಲು. ಹಸುರು ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳಿಂದ ಆವೃತವಾದ ಗುಡ್ಡವೊಂದರ ಇಳಿಜಾರಿನಲ್ಲಿದೆ ಆ ಮನೆ. ಮೇಲ್-ನೀಲಗಿರಿಯುದ್ದಕ್ಕೂ ಶೋಲಾ ಕಾಡು ಪ್ರದೇಶದಲ್ಲಿ ಕಾಣಬರುವುದು ಅದೇ – ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳು. ಪಶ್ಚಿಮಘಟ್ಟದ ಅತ್ಯಂತ ಎತ್ತರದ (ಸಮುದ್ರಮಟ್ಟದಿಂದ ೧,೭೦೦ರಿಂದ ೨,೬೦೦ ಮೀಟರ್ ಎತ್ತರದ) ಶಿಖರಗಳು ನೀಲಗಿರಿ ಬೆಟ್ಟಸಾಲಿನಲ್ಲಿವೆ. ಅಲ್ಲಿ ಕಡಿಮೆ ಮಂಜು ಕವಿಯುವ ಪ್ರದೇಶಗಳಲ್ಲಿ ಮಾತ್ರ ಶೋಲಾ ಕಾಡುಗಳನ್ನು ಕಾಣಬಹುದು.
ನೀಲಾ ವಾಡಿಯ ಮನೆಯೆದುರು ನಿಂತಾಗ ಕಾಣಿಸುತ್ತವೆ: ದಟ್ಟ ಹಸುರಿನ ನಡುವೆ ಅಲ್ಲಲ್ಲಿ ಕ್ಯಾರೆಟ್ ಮತ್ತು ಎಲೆಕೋಸು ಬೆಳೆಯುವ ಆಯತಾಕಾರದ ತರಕಾರಿ ಹೊಲಗಳು. ನೀಲಾ ವಾಡಿ ಕುಟುಂಬದ್ದೇ ಒಂದು ತರಕಾರಿ ಹೊಲವಿದೆ. ಆದರೆ ಅದರಲ್ಲಿ ತರಕಾರಿ ಬೆಳೆಸುತ್ತಿರುವುದು ಅವಳಲ್ಲ! “ತರಕಾರಿ ಕೃಷಿಯ ಖರ್ಚು ಭರಿಸಲು ನಮ್ಮಿಂದಾಗದು. ಹಾಗಾಗಿ ನನ್ನ ಮನೆಯಾತ ತನ್ನದೇ ಹೊಲವನ್ನು ಲೀಸಿಗೆ ಕೊಟ್ಟು ಅಲ್ಲಿ ಕೆಲಸಗಾರನಾಗಿ ದುಡಿಯುತ್ತಿದ್ದಾನೆ” ಎನ್ನುತ್ತಾಳೆ ನೀಲಾ ವಾಡಿ.
ತೋಡಾ ಸಮುದಾಯದವಳು ನೀಲಾ ವಾಡಿ. ಈ ಬುಡಕಟ್ಟು ಸಮುದಾಯದವರು ವಾಸವಿರುವುದು ನೀಲಗಿರಿಯ ಈ ನಾಲ್ಕು ತಾಲೂಕುಗಳಲ್ಲಿ ಮಾತ್ರ: ಊಟಿ, ಕೋಟಗಿರಿ, ಗುಡಲೂರು ಮತ್ತು ಕೂನೂರು. ಅವಳ ಕುಟುಂಬದ ಜಮೀನಿನ ವಿಸ್ತೀರ್ಣ ಐದು ಹೆಕ್ಟೇರ್. ಪ್ರತಿಯೊಂದು ಹೆಕ್ಟೇರಿನಲ್ಲಿ ಕೃಷಿ ಮಾಡಲು ರೂ.೪ ಲಕ್ಷ ಭಂಡವಾಳ ಅವಶ್ಯ. ಅವರ ಸಮುದಾಯದಲ್ಲಿ ಯಾರಿಂದಲೂ ಅಷ್ಟು ವೆಚ್ಚ ಮಾಡಲಾಗದು. ಆದ್ದರಿಂದ ಆಕೆಯ ಕುಟುಂಬ ಊಟಿಯ ಶ್ರೀಮಂತ ರೈತರಿಗೆ ಜಮೀನನ್ನು ಲೀಸಿಗೆ (ಗುತ್ತಿಗೆ) ಕೊಟ್ಟಿದೆ. ಹಾಗೆ ಲೀಸಿಗೆ ವಹಿಸಿಕೊಂಡವರು ಇವರ ಕುಟುಂಬಕ್ಕೆ ರೂ.೧.೪ ಲಕ್ಷ ಲೀಸ್-ಬಾಡಿಗೆ ಪಾವತಿಸುತ್ತಾರೆ. ಇವರು ತಮ್ಮದೇ ಜಮೀನಿನಲ್ಲಿ ಕೆಲಸಗಾರರಾಗಿ ದುಡಿಯುತ್ತಾರೆ!
ತಮ್ಮ ಸಮುದಾಯ ಹೈನುಗಾರಿಕೆಯಿಂದ ದೂರವಾಗಲು ಆಕ್ರಮಣಕಾರಿ ಹೊಸ ಸಸ್ಯಗಳೇ ಕಾರಣ ಎನ್ನುತ್ತಾಳೆ ನೀಲಾ ವಾಡಿ. ಉದಾಹರಣೆಗೆ ಅಕೇಷಿಯಾ,, ಸ್ಕೋಚ್ ಬ್ರೂಮ್ ಮತ್ತು ಲಂಟಾನ. “ನೀಲಗಿರಿಯ ಹುಲ್ಲುಗಾವಲುಗಳೇ ನಮ್ಮ ಹೈನಪಶುಗಳಿಗೆ ಮೇವು ಒದಗಿಸುತ್ತಿದ್ದವು. ಅವನ್ನೆಲ್ಲ ಈ ಹೊಸ ಗಿಡಮರಗಳು ಈಗ ನುಂಗಿ ಹಾಕಿವೆ” ಎಂದು ತಿಳಿಸುತ್ತಾಳೆ ನೀಲಾ ವಾಡಿ.
ಆಕ್ರಮಣಕಾರಿ ಗಿಡಮರಗಳು ೧೯೭೩ರಿಂದ ೨೦೧೭ರ ತನಕದ ೪೪ ವರುಷಗಳಲ್ಲಿ ಶೇಕಡಾ ೬೬ರಷ್ಟು ಅಂದರೆ ೩೪೦ ಚದರ ಕಿಲೋಮೀಟರ್ ಪ್ರದೇಶವನ್ನು ಕಬಳಿಸಿವೆ ಎಂಬುದನ್ನು ಅತ್ರಿ (ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆಂಡ್ ಎನ್ವಿರಾನ್ಮೆಂಟ್) ನಡೆಸಿದ ೨೦೧೮ರ ಅಧ್ಯಯನ ದಾಖಲಿಸಿದೆ. ಆ ವರದಿ ಬಯೋಲಾಜಿಕಲ್ ಕನ್ಸರ್ವೇಷನ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಮದ್ರಾಸ್ ಹೈಕೋರ್ಟಿನಲ್ಲಿ ೨೦೧೪, ೨೦೧೬ ಮತ್ತು ೨೦೧೭ರಲ್ಲಿ ಮೂರು ವ್ಯಾಜ್ಯ ಹೂಡಲಾಗಿದೆ – ಆಕ್ರಮಣಕಾರಿ ಗಿಡಮರಗಳ ವಿಸ್ತರಣೆ ನಿಷೇಧಿಸಬೇಕೆಂದು. ಈ ಸಮಸ್ಯೆಯ ಪರಿಶೀಲನೆಗಾಗಿ ಮದ್ರಾಸ್ ಹೈಕೋರ್ಟ್ ತಜ್ನರ ಸಮಿತಿಯೊಂದನ್ನು ನೇಮಿಸಿತು. ಸಪ್ಟಂಬರ್ ೨೦೧೯ರಲ್ಲಿ ಬಿಡುಗಡೆಯಾದ ಈ ಸಮಿತಿಯ ಮಧ್ಯಂತರ ವರದಿಯಲ್ಲಿ ಆಕ್ರಮಣಕಾರಿ ಗಿಡಮರಗಳು ಬೇಗನೇ ನೀಲಗಿರಿ ಬೆಟ್ಟಗಳನ್ನು ಪೂರ್ತಿ ಆಕ್ರಮಿಸಲಿವೆ ಎಂದು ಎಚ್ಚರಿಸಲಾಗಿದೆ.
ಶೋಲಾ ಕಾಡುಗಳ ಅವಸಾನ ಶುರುವಾದದ್ದು ಐವತ್ತು ವರುಷಗಳ ಹಿಂದೆ – ಆರ್ಥಿಕ ಲಾಭಕ್ಕಾಗಿ ಅಕೇಷಿಯಾ ತೋಟಗಳನ್ನು ಬೆಳೆಸಲು ಸರಕಾರ ನಿರ್ಧರಿಸಿದಾಗ. “ಅತ್ರಿ” ಅಧ್ಯಯನ ವರದಿಯ ಸಹ-ಲೇಖಕರಾದ ಮಿಲಿಂದ್ ಬುಯಾನ್ ಇದನ್ನು ಹೀಗೆ ವಿವರಿಸುತ್ತಾರೆ: “ಅರಣ್ಯ ಇಲಾಖೆಯ ಅಧಿಕಾರಷಾಹಿ ಹುಲ್ಲು ಬೆಳೆಯುವ ಪ್ರದೇಶಗಳು ವ್ಯರ್ಥ ಎಂದು ಪರಿಗಣಿಸುತ್ತದೆ. ೧೯೬೦ರ ದಶಕದಲ್ಲಿ ಆಫ್ರಿಕಾದಿಂದ ಟ್ಯಾನಿನ್ ಆಮದನ್ನು ಭಾರತ ನಿಲ್ಲಿಸಿತು; ಆಗ, ಆ ಅಧಿಕಾರಷಾಹಿ ನೀಲಗಿರಿ ಪ್ರದೇಶದಲ್ಲಿ ಅಕೇಷಿಯಾ ಬೆಳೆಸಲು ನಿರ್ಧರಿಸಿತು. ಅಕೇಷಿಯಾದ ತೊಗಟೆ, ಎಲೆ ಮತ್ತು ಕಾಯಿಗಳಲ್ಲಿ ಟ್ಯಾನಿನ್ ಇದೆ; ಇದನ್ನು ಚರ್ಮ ಸಂಸ್ಕರಣಾ ಘಟಕಗಳು ಬಳಸುತ್ತವೆ.”
ಕ್ರಮೇಣ ಬದಲಾದ ಹವಾಮಾನದಿಂದಾಗಿ ಆಕ್ರಮಣಕಾರಿ ಅಕೇಷಿಯಾ ಗಿಡಗಳು ವಿಸ್ತಾರ ಪ್ರದೇಶಕ್ಕೆ ಲಗ್ಗೆಯಿಟ್ಟವು. ಇತ್ತೀಚೆಗಿನ ವರುಷಗಳಲ್ಲಿ, ನೀಲಗಿರಿಯಲ್ಲಿ ರಾತ್ರಿಗಳು ಬೆಚ್ಚಗಿರುತ್ತವೆ ಮತ್ತು ಹಿಮಪಾತ ಕಡಿಮೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಆರ್. ಸುಕುಮಾರ್ ತಿಳಿಸುತ್ತಾರೆ. ಹಾಗಾಗಿ ಅಕೇಷಿಯಾ ಗಿಡಗಳು ಶೋಲಾ ಕಾಡುಗಳ ಎಲ್ಲೆ ಮೀರಿ ಹುಲ್ಲು ಬೆಳೆಯುವ ಪ್ರದೇಶಗಳಿಗೆ ವಿಸ್ತರಿಸಿವೆ. (ಮುಂಚೆ ಕಾಡಿನ ಮರಗಳ ಬೀಜಗಳು ಮೊಳಕೆ ಒಡೆಯದಂತೆ ಹಿಮಪಾತ ತಡೆಯುತ್ತಿತ್ತು.)
ಅಕೇಷಿಯಾ ಮತ್ತು ಪೈನ್ ಮರಗಳು ಹಬ್ಬುತ್ತಿರುವ ಕಾರಣ, ತೇವಮಯ (ತರಿ) ಪ್ರದೇಶದ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ಇದರಿಂದಾಗಿ ಕೆಲವು ಜಾತಿಯ ಹುಲ್ಲುಗಳು ನಿರ್ನಾಮವಾಗುತ್ತಿವೆ. ಉದಾಹರಣೆಗೆ ಅವ್ವುಲ್ ಹುಲ್ಲು. “ಇದೀಗ ಕಾಣ ಸಿಗುವುದು ಅಪರೂಪ. ಇದು ಬೇರೆಲ್ಲೂ ಬೆಳೆಯೋದಿಲ್ಲ. ಇದನ್ನು ತೋಡರು ತಮ್ಮ ದೇವಸ್ಥಾನಗಳ ಚಾವಣಿ ಮಾಡಲು ಬಳಸುತ್ತಾರೆ” ಎಂಬ ಮಾಹಿತಿ ನೀಡುತ್ತಾರೆ ತರುಣ್ ಛಬ್ರಾ. ಇವರು “ತೋಡಾ ಲ್ಯಾಂಡ್ಸ್ಕೇಪ್” ಪುಸ್ತಕದ ಲೇಖಕರು.
ನೀಲಗಿರಿ ಪ್ರದೇಶದಲ್ಲಿ ಮಳೆಯೂ ಕಡಿಮೆಯಾಗುತ್ತಿದೆ (ಮಳೆಪ್ರಮಾಣ ಮತ್ತು ಮಳೆದಿನಗಳು) ಎಂದು ಎಚ್ಚರಿಸುತ್ತಾರೆ ಪರಿಸರ ತಜ್ನರು. ಇದರಿಂದಾಗಿ ನೀಲಗಿರಿಯ ಸಸ್ಯಗಳು ಹೂ ಬಿಡುವ ಅವಧಿ ವ್ಯತ್ಯಾಸವಾಗಿದೆ. “ಡಿಸೆಂಬರಿನಿಂದ ಮಾರ್ಚ್ ಅಲ್ಲಿ ಸಸ್ಯಗಳು ಹೂ ಬಿಡುವ ಸಮಯ. ಇತ್ತೀಚೆಗಿನ ವರುಷಗಳಲ್ಲಿ ಮಳೆ ಬದಲಾವಣೆಯಿಂದಾಗಿ ಬಿಳಿ ಕುರುಂಜಿ ಮತ್ತು ಜಾಮೂನ್ ಮರಗಳು ಹೂ ಬಿಡುವುದು ಕಡಿಮೆಯಾಗಿದೆ. ಜೇನ್ನೊಣಗಳಿಗೆ ಪರಾಗ ಮುಖ್ಯವಾಗಿ ಸಿಗುವುದು ಈ ಮರಗಳಿಂದ” ಎನ್ನುತ್ತಾರೆ ಪಿ. ಚಂದ್ರನ್. ಅವರು ನೀಲಗಿರಿಯ ಜೇನು ಸಂಗ್ರಹಿಸುವ ಬುಡಕಟ್ಟು ಕುರುಂಬಾಸ್ಗೆ ಸೇರಿದವರು. ಇಪ್ಪತ್ತು ವರುಷಗಳ ಮುಂಚೆ ಬೆಟ್ಟಗಳ ಕಡಿದಾದ ಪಾರ್ಶ್ವದಲ್ಲಿ ೬೦-೭೦ ಜೇನು ಕುಟುಂಬಗಳಿದ್ದರೆ, ಈಗ ಕೇವಲ ೪-೫ ಇವೆ ಎಂದು ಅವರು ತಿಳಿಸುತ್ತಾರೆ.
ನೀಲಗಿರಿ ಬೆಟ್ಟಗಳ ಪರಿಸರ ವ್ಯವಸ್ಥೆ ಹಾಗೂ ಜೀವಜಾಲದ ಅವನತಿಯಿಂದಾಗಿ, ಬುಡಕಟ್ಟು ಜನರು ಹತ್ತಿರದ ಮೆಟ್ಟುಪಾಳಯಮ್, ತಿರುಪ್ಪುರ್ ಮತ್ತು ಕೊಯಂಬತ್ತೂರು ಜಿಲ್ಲೆಗಳ ನಗರಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ ಎನ್ನುತ್ತದೆ ನೀಲಗಿರಿ ಜಿಲ್ಲೆಯ ೨೦೧೭ರ ಮಾನವ ಅಭಿವೃದ್ಧಿ ವರದಿ. ಈ ಜಿಲ್ಲೆಯ ಜನಸಂಖ್ಯೆ ೨೦೦೧ರಿಂದ ೨೦೧೧ರ ದಶಕದಲ್ಲಿ ಶೇ.೩.೫೫ ಕಡಿಮೆಯಾಗಿದೆ ಎಂದು ಜನಗಣತಿ ದಾಖಲಿಸಿದೆ.
ಆಕ್ರಮಣಕಾರಿ ಸಸ್ಯಜಾತಿಗಳನ್ನು ನಿಯಂತ್ರಿಸದಿದ್ದರೆ, ಹೈನುಗಾರಿಕೆ, ಜೇನುಸಂಗ್ರಹಣೆ ಹಾಗೂ ಕಾಡು ಉತ್ಪನ್ನಗಳ ಸಂಗ್ರಹಣೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಬುಡಕಟ್ಟು ಜನರ ನಗರವಲಸೆ ಹೆಚ್ಚಲಿದೆ. ಅವರಿಲ್ಲದಿದ್ದರೆ, ನೀಲಗಿರಿ ಬೆಟ್ಟಗಳ ಶೋಲಾಕಾಡುಗಳ ಸೂಕ್ಷ್ಮ-ಪರಿಸರ-ಜಾಲವೇ ನಿರ್ನಾಮವಾದೀತು.
ಫೋಟೋ: ಅಕೇಸಿಯಾ ಕಾಡು