ಬಿಯೊಬಾಬ್: ದೈತ್ಯ ಮರದ ಖಂಡಾಂತರ ಪಯಣದ ಕಥನ

ದೈತ್ಯ ಬಿಯೊಬಾಬ್ ಮರಗಳು ಎಲ್ಲಿದ್ದರೂ ನಮ್ಮ ಗಮನ ಸೆಳೆದೇ ಸೆಳೆಯುತ್ತವೆ. ಆಫ್ರಿಕಾದಲ್ಲಿ ಮತ್ತು ಅದರ ಪೂರ್ವದ ಮಡಗಾಸ್ಕರ್ ದ್ವೀಪದಲ್ಲಿ ಸಹಜವಾಗಿ ಬೆಳೆಯುವ ಇವಕ್ಕೆ ಕನ್ನಡದಲ್ಲಿ ದೊಡ್ಡಹುಣಿಸೆ ಮರ ಅಥವಾ ಆನೆಹುಣಿಸೆ ಮರ ಎಂಬ ಅನ್ವರ್ಥನಾಮವಿದೆ.
ಭೂಮಿಯ ಆಳಪದರಗಳ ಚಲನೆಯಿಂದಾಗಿ ಆಫ್ರಿಕಾದಿಂದ ಬೇರ್ಪಟ್ಟ ದ್ವೀಪ ಮಡಗಾಸ್ಕರ್. ವಿಸ್ತೀರ್ಣದಲ್ಲಿ ಇದಕ್ಕೆ ಜಗತ್ತಿನಲ್ಲಿ ನಾಲ್ಕನೆಯ ಸ್ಥಾನ. ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ ಕೆಲವು ಪ್ರಾಣಿಗಳು ಇಲ್ಲಿವೆ.
ಅಪರೂಪದ ಸಸ್ಯಗಳೂ ಮಡಗಾಸ್ಕರಿನಲ್ಲಿವೆ. ಅವುಗಳಲ್ಲೊಂದು ಬಿಯೊಬಾಬ್. ಸಾವಿರ ವರುಷ ಮಿಕ್ಕಿದ ವಯಸ್ಸಿನ ಸಾವಿರಾರು ಬಿಯೊಬಾಬ್ ಮರಗಳು ಇಲ್ಲಿವೆ. ಹಲವು ದೈತ್ಯಾಕಾರದ ಮರಗಳೆದುರು ಮನುಷ್ಯ ನಿಂತರೆ ಮಹಡಿ-ಕಟ್ಟಡದ ಎದುರಿಟ್ಟ ಬೆಂಕಿಪೆಟ್ಟಿಗೆಯಂತೆ ಕಾಣಿಸುತ್ತಾನೆ.
ಬಿಯೊಬಾಬ್ ಮರಗಳ ಮೂಲಸ್ಥಾನ ಅರೇಬಿಯಾ. ಇವುಗಳ ಹೆಸರಿನ ಮೂಲವೂ ಬುಹಿಹಬ್ ಎಂಬ ಅರಾಬಿಕ್ ಪದ. ಇದರರ್ಥ ಹಲವು ಬೀಜಗಳ ಮರ. ಬಿಯೊಬಾಬ್ ಮರವನ್ನು ಫಕ್ಕನೆ ನೋಡಿದಾಗ ಮರವೊಂದನ್ನು ತಲೆಕೆಳಗಾಗಿ ನಿಲ್ಲಿಸಿದಂತೆ ಕಾಣಿಸುತ್ತದೆ!
ಬಿಯೊಬಾಬ್ ಮರಗಳು ಸಾವಿರಾರು ವರುಷ ಬದುಕಬಲ್ಲವು. ಅವು ಕಾಂಡದಲ್ಲಿ ಅಸ್ಪಷ್ಟ “ವಯಸ್ಸಿನ ವರ್ತುಲ” (ಗ್ರೋತ್ ರಿಂಗ್)ಗಳನ್ನು ಮೂಡಿಸುವ ಕಾರಣ ಅವುಗಳ ವಯಸ್ಸು ಪತ್ತೆ ಮಾಡುವುದು ಸುಲಭವಲ್ಲ. ಆದ್ದರಿಂದ ರೇಡಿಯೋ ಕಾರ್ಬನ್ ಅಧ್ಯಯನ ಮಾಡಿದಾಗ ತಿಳಿದುಬಂದಿರುವ ಸಂಗತಿ: ಅತ್ಯಂತ ಹಳೆಯ ಬಿಯೊಬಾಬ್ ಮರದ ಆಯುಷ್ಯ ೨,೫೦೦ ವರುಷಕ್ಕಿಂತಲೂ ಜಾಸ್ತಿ (ಈಗ ಆ ಮರ ಸತ್ತಿದೆ.). ಅತಿ ಒಣ ಹವಾಮಾನದಲ್ಲಿಯೂ ಮುಗಿಲೆತ್ತರಕ್ಕೆ ಬೆಳೆಯಬಲ್ಲ ಇವು ಅತ್ಯಂತ ಗಡುಸಾದ ಮರಗಳು.
ಇವುಗಳ ಕಾಂಡ ಭಾರೀ ಗಾತ್ರದ್ದು. ದೂರದಿಂದ ಇವನ್ನು ನೋಡಿದಾಗ ಆನೆಯೊಂದು ಹಿಂಗಾಲುಗಳನ್ನೂರಿ ಕುಳಿತಂತೆ ಕಾಣಿಸುತ್ತದೆ. ಹಲವು ಮರಗಳ ವ್ಯಾಸ ೨೦ರಿಂದ ೩೦ ಅಡಿ. ದಕ್ಷಿಣ ಆಫ್ರಿಕಾದ ಒಂದು ಬಿಯೊಬಾಬ್ ಮರದ ವ್ಯಾಸ ೧೫೪ ಅಡಿ (೪೬.೯ ಮೀ.) ಇದೆಷ್ಟು ದೊಡ್ಡದೆಂದರೆ, ಇದರ ಕಾಂಡವನ್ನು ಬಗೆದು ೫೦ ಜನರು ಕೂರಬಹುದಾದ ಬಾರ್ ನಿರ್ಮಿಸಲಾಗಿದೆ.
ಇವುಗಳ ಮುಕುಟದಲ್ಲಿ ವರುಷದ ಒಂದೆರಡು ತಿಂಗಳು ಮಾತ್ರ ಎಲೆಗಳನ್ನು ಕಾಣಬಹುದು. ಎಲೆಗಳೆಲ್ಲ ಉದುರಿದ ನಂತರ ಮರದಲ್ಲಿ ಹಣ್ಣುಗಳು ನೇತಾಡುತ್ತಾ ಇರುತ್ತವೆ – ಕರಬೂಜ ಗಾತ್ರದ ತೆಳು ಹಸುರು ಬಣ್ಣದ ಹಣ್ಣುಗಳು. ಈ ಮರಗಳ ರಾತ್ರಿ ಅರಳುವ ಹೂಗಳ ಪರಾಗಸ್ಪರ್ಶ ಮಾಡುವುದು ಬಾವಲಿಗಳು. ಇವುಗಳ ನಯವಾದ ಕಾಂಡದ ಬಣ್ಣ ಕಂದು, ನಸುಗೆಂಪು ಅಥವಾ ಬೂದು.
ಬಗೆಬಗೆಯ ಬಿಯೊಬಾಬ್ ಉಪಯೋಗಗಳು
ಮಡಗಾಸ್ಕರಿನ ಪಶ್ಚಿಮ ತೀರದ ಪಟ್ಟಣ ಮೊರೊನ್‍ಡವಕ್ಕೆ ಸಾಗುವ ಹಾದಿಯ ಮಾರುಕಟ್ಟೆಗಳಲ್ಲಿ ಬಿಯೊಬಾಬ್ ಮರದ ಹಲವಾರು ಉತ್ಪನ್ನಗಳು ಮಾರಾಟಕ್ಕಿವೆ. ರಕ್ತಹೀನತೆ, ಹಲ್ಲುನೋವು, ಜ್ವರ, ಭೇದಿ, ಮಲೇರಿಯಾ, ಸೂಕ್ಷ್ಮಜೀವಿಗಳ ಸೋಂಕು – ಇಂತಹ ಹತ್ತಾರು ಕಾಯಿಲೆ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಬಿಯೊಬಾಬ್ ಮರದಿಂದ ತಯಾರಿಸಿದ ಅನೇಕ ಔಷಧಿಗಳು ಲಭ್ಯ. ಅಧಿಕ ಕಬ್ಬಿಣಾಂಶವಿರುವ ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ, ಸ್ಪಿನಾಚಿನಂತೆ ತಿನ್ನಬಹುದು. ಬೀಜಗಳನ್ನು ಹುರಿದು, ಅವುಗಳಿಂದ ಕಾಫಿಯಂತಹ ಪಾನೀಯ ತಯಾರಿಸ ಬಹುದು. ಬೀಜಗಳಿಂದ ಅಡುಗೆ ಎಣ್ಣೆಯನ್ನೂ ಮಾಡಿಕೊಳ್ಳಬಹುದು. ಇದೇ ಎಣ್ಣೆ ಸೌಂದರ್ಯವರ್ಧಕ ವಸ್ತುಗಳ ತಯಾರಿಗೂ ಬಳಕೆ. ಇದರ ಹಣ್ಣಿನಲ್ಲಿ ಕಿತ್ತಳೆಗಿಂತ ಆರು ಪಟ್ಟು ಜಾಸ್ತಿ ವಿಟಮಿನ್ “ಸಿ” ಇದೆ ಎನ್ನಲಾಗುತ್ತದೆ. ಹಾಗಾಗಿ ಅದು ಉತ್ತಮ ಪೋಷಕ ಆಹಾರ. ಸ್ಥಳೀಯರು ಇದರ ಹಣ್ಣಿನ ತಿರುಳಿನಿಂದ ಜ್ಯೂಸ್ ಹಾಗೂ ಜಾಮ್ ಮಾಡುತ್ತಾರೆ ಅಥವಾ ಹುಳಿ ಬರಿಸಿ ಬಿಯರ್ (ಮದ್ಯ) ತಯಾರಿಸುತ್ತಾರೆ. ಬಿಯೊಬಾಬ್‍ನ ಎಳೆ ಸಸಿಗಳ ತಾಯಿಬೇರನ್ನು ಕ್ಯಾರೆಟಿನಂತೆ ತಿನ್ನಬಹುದು. ಇದರ ಹೂಗಳನ್ನೂ ತಿನ್ನಬಹುದು. ಇದರ ಬೇರು ಕೆಂಪು ಬಣ್ಣ ತಯಾರಿಗೆ ಬಳಕೆ. ತೊಗಟೆಯಿಂದ ಹಗ್ಗ ಮತ್ತು ಬುಟ್ಟಿಗಳ ತಯಾರಿ.
ಇಷ್ಟೆಲ್ಲ ಉಪಯೋಗವಿರುವ ಬಿಯೊಬಾಬ್ ಮರಗಳಿಗೆ ಅತಿಬಳಕೆಯ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಮಡಗಾಸಿಕರ ವೊಯಕಾಜಿ ಎಂಬ ಸರಕಾರೇತರ ಸಂಸ್ಥೆಯು ಗ್ಲೋಬಲ್ ಟ್ರೀಸ್ ಕ್ಯಾಂಪೆಯ್ನ್ ನೆರವಿನಿಂದ, ಇವುಗಳ ಸಂರಕ್ಷಣೆಗಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ; ಸ್ಥಳೀಯ ಸಮುದಾಯಗಳ ಜೊತೆಗೂಡಿ ಬಿಯೊಬಾಬ್ ಕಾಡುಗಳ ನಿರ್ವಹಣೆಯಲ್ಲಿ ನಿರತವಾಗಿದೆ.
ಮೊರೊನ್‍ಡವ ಪಟ್ಟಣದಿಂದ ೨೦ ಕಿಮೀ ದೂರದಲ್ಲಿದೆ ಜಗತ್ಪ್ರಸಿದ್ಧ ಬಿಯೊಬಾಬ್ ಪಥ. ಈ ರಸ್ತೆಯ ಇಬ್ಬದಿಗಳಲ್ಲಿ ದೈತ್ಯ ಬಿಯೊಬಾಬ್ ಮರಗಳ ಸಾಲು. ರಸ್ತೆಯ ಅಂಚಿನಲ್ಲಿರುವ ಎರಡು ಮುಗಿಲೆತ್ತರದ ಮರಗಳ ನಡುವೆ ದಿಗಂತದಲ್ಲಿ ಸೂರ್ಯಾಸ್ತಮಾನದ ದೃಶ್ಯ ಮನಮೋಹಕ. ಇದನ್ನು ನೋಡಲಿಕ್ಕಾಗಿಯೇ ಸಂಜೆಯ ಹೊತ್ತಿನಲ್ಲಿ ಬಿಯೊಬಾಬ ಪಥಕ್ಕೆ ನೂರಾರು ಸ್ಥಳೀಯ ಹಾಗೂ ವಿದೇಶೀ ಪ್ರವಾಸಿಗರ ಆಗಮನ. ಕಿರಿಂಡಿಯಿಂದ ಮೊರೊನ್‍ಡವಕ್ಕೆ ಸಾಗುವ ರಸ್ತೆಯಿಂದ ಮೂರು ಕಿಮೀ. ಒಳಕ್ಕೆ ಹೋದರೆ, ಒಂದನ್ನೊಂದು ಬಳುಕಿ ಅಪ್ಪಿಕೊಂಡಿರುವ ಬಿಯೊಬಾಬ್ ಜೋಡಿ ಮರಗಳಿರುವ ತಾಣವೂ ಪ್ರವಾಸಿಗಳ ಆಕರ್ಷಣೆಯ ಕೇಂದ್ರ.
ಮಡಗಾಸ್ಕರಿನಲ್ಲಿ ಬಿಯೊಬಾಬ್ ಮರದ ಆರು ಸ್ಪಿಷೀಸ್‍ಗಳಿವೆ. ಅಡಾನ್‍ಸೊನಿಯಾ ಡಿಜಿಟಾಟ (ಸಸ್ಯಶಾಸ್ತ್ರೀಯ ಹೆಸರು) ಸ್ಪಿಷೀಸಿನ ಮರಗಳು ಅಧಿಕ ಸಂಖ್ಯೆಯಲ್ಲಿವೆ. ದಕ್ಷಿಣದ ಬಂದರು -ಪಟ್ಟಣ ಡೌಫಿನ್ ಸುತ್ತಲಿನ ಕಾಡುಗಳಿಂದ ತೊಡಗಿ ಉತ್ತರದ ಪಟ್ಟಣ ಡೀಗೊ ಸುಯಾರೆಜ್ ತನಕ ಇವು ವ್ಯಾಪಿಸಿವೆ. ಅಡಾನ್‍ಸೊನಿಯಾ ಡಿಜಿಟಾಟ ಮರಗಳು ಸಮುದ್ರ ತೀರಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ದೈತ್ಯ ಬಿಯೊಬಾಬ್ ಮರಗಳ ಸುತ್ತಲು ಹಳ್ಳಿಗಳು ಇರುವುದು ಇಲ್ಲಿನ ವಿಶೇಷ. ಕಿರಿಂಡಿ ಸಂರಕ್ಷಿತ ಅರಣ್ಯದ ಒಳಗಿನ ರಸ್ತೆಯಲ್ಲಿ ಸಮುದ್ರ ತೀರದ ಮೊರೊನ್‍ಡವ ಪಟ್ಟಣಕ್ಕೆ ಸಾಗುವಾಗ ಹೆಚ್ಚು ವ್ಯಾಸದ ಮತ್ತು ಹೆಚ್ಚು ಎತ್ತರದ ಬಿಯೊಬಾಬ್ ಮರಗಳನ್ನು ಕಾಣಬಹುದು.
ಭಾರತದಲ್ಲಿ ಸುಮಾರು ೫೦ ಬಿಯೊಬಾಬ್ ಮರಗಳಿವೆ ಎಂದು ಅಂದಾಜಿಸಲಾಗಿದೆ. ಆಫ್ರಿಕಾಮೂಲದ ಈ ಮರಗಳು ನಮ್ಮ ದೇಶದಲ್ಲಿ ಬೆಳೆದದ್ದು ಹೇಗೆ? ಅರಬ್ ವರ್ತಕರು, ಮೊಘಲರು, ಅನಂತರ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಮತ್ತು ಫ್ರೆಂಚರು ೧೫ರಿಂದ ೧೯ನೇ ಶತಮಾನದ ಅವಧಿಯಲ್ಲಿ ನಮ್ಮ ದೇಶಕ್ಕೆ ತಂದ ಇದರ ಹಣ್ಣುಗಳ ಬೀಜಗಳಿಂದ ಮರಗಳು ಬೆಳೆದಿರಬೇಕು. ಅವರೊಂದಿಗೆ ಇದ್ದ ಆಫ್ರಿಕಾದ ಕೆಲಸಗಾರರು, ತುರ್ತಿನ ಆಹಾರವಾಗಿ ತಂದಿದ್ದ ಬಿಯೊಬಾಬ್ ಹಣ್ಣುಗಳ ಬೀಜಗಳೂ ಕೆಲವೆಡೆ ಮೊಳೆತು ಮರಗಳಾಗಿರಬೇಕು. ಉದಾಹರಣೆಗೆ ಜೆಮ್‍ಷೆದ್‍ಪುದಲ್ಲಿ ಒಂದು ಮತ್ತು ಹೈದರಾಬಾದಿನಲ್ಲಿ ಐದು ಬಿಯೊಬಾಬ್ ಮರಗಳನ್ನು ದಾಖಲಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿಯೂ ಈ ಮರಗಳು ಇರುವುದು ದಾಖಲಾಗಿದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರಿನ ಹೊರವಲಯದಲ್ಲಿ ಅಕ್ಕಪಕ್ಕದಲ್ಲಿರುವ ಮೂರು ಬಿಯೊಬಾಬ್ ಮರಗಳನ್ನು ಹತ್ತು ವರುಷಗಳ ಮುಂಚೆ ನೋಡಿದ್ದೆ.
ಎಲ್ಲಿಯದೋ ಮರದ ಬೀಜಗಳು ಸಾಗರಗಳನ್ನು ದಾಟಿ, ಸಾವಿರಾರು ಕಿಲೋಮೀಟರ್ ದೂರ ಪಯಣಿಸಿ, ಇನ್ನೊಂದು ಪ್ರದೇಶದಲ್ಲಿ ಮೊಳೆತು, ದೈತ್ಯಾಕಾರದ ಮರಗಳಾಗಿ ಬೆಳೆದು, ನೂರಾರು ವರುಷ ಬದುಕುವುದು ಪ್ರಕೃತಿಯ ವಿಸ್ಮಯ. ನಿಗೂಢ ನಿಸರ್ಗಕ್ಕೆ ನಮೋ.
ಫೋಟೋ: ಮಡಗಾಸ್ಕರಿನ ದೈತ್ಯ ಬಿಯೊಬಾಬ್ ಮರ