ಸಾವಿರಸಾವಿರ ಎಕ್ರೆ ಜಮೀನಿಗೆ ನೀರಾವರಿ ಒದಗಿಸಲಿಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಅಣೆಕಟ್ಟುಗಳೇ ಈಗ ನೆರೆ ಹಾವಳಿಗೆ ಕಾರಣವಾಗುತ್ತಿವೆ ಎಂದರೆ ನಂಬುತ್ತೀರಾ?
ಕರ್ನಾಟಕದ ಬರಪೀಡಿತ ಜಿಲ್ಲೆ ಬೆಳಗಾವಿಯಲ್ಲಿ ಇಂತಹ ನೆರೆಯಿಂದಾಗಿ ೨೦೧೯ರಲ್ಲಿ ೭೧ ಜನರು ಪ್ರಾಣ ಕಳೆದುಕೊಂಡರು. ಆಗಸ್ಟ್ ೧ರಿಂದ ೭ರ ನಡುವೆ ಒಣ ಜಿಲ್ಲೆ ಬೆಳಗಾವಿಯಲ್ಲಿ ಸರಾಸರಿಗಿಂತ ಶೇ.೬೫೨ರಷ್ಟು ಜಾಸ್ತಿ ಮಳೆ ಸುರಿಯಿತು. (ಇದೇ ಅವಧಿಯಲ್ಲಿ ಕರ್ನಾಟಕದಲ್ಲಿಯೂ ಸರಾಸರಿಗಿಂತ ಶೇ.೧೨೮ ಜಾಸ್ತಿ ಮಳೆಯಾಯಿತು.) ೫ ಆಗಸ್ಟ್ ೨೦೧೯ರ ಹೊತ್ತಿಗೆ ಜಿಲ್ಲೆಯ ಎಲ್ಲ ಅಣೆಕಟ್ಟುಗಳಲ್ಲಿಯೂ ನೀರು ತುಳುಕುವಷ್ಟು ತುಂಬಿತ್ತು. ಆದರೂ ಹಿಡ್ಕಲ್ ಅಣೆಕಟ್ಟಿನ ಮೇಲ್ವಿಚಾರಕರು ಸೆಕೆಂಡಿಗೆ ಕೇವಲ ೬೮.೮ ಘನ ಮೀ. ನೀರನ್ನು ಘಟಪ್ರಭಾ ನದಿಗೆ ಬಿಡುತ್ತಿದ್ದರು. ಆಗಸ್ಟ್ ೬ರ ಮಹಾಮಳೆಯಿಂದಾಗಿ ನೀರು ಅಣೆಕಟ್ಟಿನ ಅಂಚು ಮೀರುವಂತಾಯಿತು. ಆಗ ನಿದ್ದೆಯಿಂದ ಎಚ್ಚೆತ್ತ ಮೇಲ್ವಿಚಾರಕರು ಒಮ್ಮೆಲೇ ಸೆಕೆಂಡಿಗೆ ೮೩೩ ಘನ ಮೀ. ನೀರನ್ನು ಹೊರಬಿಡಲು ಶುರು ಮಾಡಿದರು. ಆಗಸ್ಟ್ ೯ರಂದು ಈ ಪರಿಮಾಣವನ್ನು ಸೆಕೆಂಡಿಗೆ ಬರೋಬ್ಬರಿ ೨,೮೫೮ ಘನ ಮೀಟರಿಗೆ ಹೆಚ್ಚಿಸಿದರು. ಅಂದರೆ, ಅಣೆಕಟ್ಟಿಗೆ ನೀರಿನ ಒಳಹರಿವಿಗಿಂತ ಹೊರಬಿಡುವ ನೀರಿನ ಪರಿಮಾಣ ಜಾಸ್ತಿಯಾಗಿತ್ತು!
ಬೆಳಗಾವಿ ಜಿಲ್ಲೆಯ ಮಲಪ್ರಭಾ ಅಣೆಕಟ್ಟಿನಲ್ಲಿಯೂ ಇದೇ ಕತೆ! ಆಗಸ್ಟ್ ೭ರ ವರೆಗೆ ಅಲ್ಲಿನ ಮೇಲ್ವಿಚಾರಕರು ಸೆಕೆಂಡಿಗೆ ೪೪೬ ಘನ ಮೀ. ನೀರು ಹೊರಬಿಡುತ್ತಿದ್ದರೆ, ಮರುದಿನ ಆಗಸ್ಟ್ ೮ರಂದು ಅದನ್ನು ಒಮ್ಮೆಲೇ ಸೆಕೆಂಡಿಗೆ ೨,೨೯೫ ಘನ ಮೀ. (ಐದು ಪಟ್ಟು) ಹೆಚ್ಚಿಸಿದರು. ೨೦೧೮ರಲ್ಲಿ ಕೇರಳದಲ್ಲಿ ನುಗ್ಗಿ ಬಂದ ಮಹಾನೆರೆಗೂ ಇದೇ ಕಾರಣ ಎಂಬುದನ್ನು ನಾವು ಮರೆಯುವಂತಿಲ್ಲ.
ಅಣೆಕಟ್ಟಿನಲ್ಲಿ ತುಂಬಿ ತುಳುಕುವ ನೀರು ರೈತರಿಗೆ ಸಂತೋಷದ ಸಂಗತಿ ಆಗಬೇಕು. ಯಾಕೆಂದರೆ ಕಾಲುವೆಯಿಂದ ಸಾಕಷ್ಟು ನೀರು ಸಿಗುವ ಭರವಸೆಯಿಂದ ಅವರು ಭತ್ತ ನಾಟಿ ಮಾಡಬಹುದು. ಆದರೆ, ಅಣೆಕಟ್ಟಿನಿಂದ ಒಮ್ಮೆಲೇ ಹೊರಬಿಟ್ಟ ಅಗಾಧ ಪರಿಮಾಣದ ನೀರು ಇಡೀ ಜಿಲ್ಲೆಯನ್ನು ನೆರೆಯಲ್ಲಿ ಮುಳುಗಿಸಿತು. ಹಾಗಾಗಿ ಅಲ್ಲಿನ ೩೩೧ ಬಾಧಿತ ಹಳ್ಳಿಗಳಲ್ಲಿ ೧೧ ಮನೆಗಳು ನಿರ್ನಾಮ ಮತ್ತು ೫,೦೦೦ಕ್ಕಿಂತ ಅಧಿಕ ಮನೆಗಳಿಗೆ ಹಾನಿ. ಸುಮಾರು ೫೧,೦೦೦ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕಾಯಿತು.
ಕರ್ನಾಟಕದಲ್ಲಿ ಮನುಷ್ಯರ ಬೇಜವಾಬ್ದಾರಿಯಿಂದಾದ ಇಂತಹ ನೆರೆಯಿಂದಾಗಿ ಈ ವರುಷ ಹಾನಿಗೊಳಗಾದ ಮನೆಗಳ ಸಂಖ್ಯೆ ಸುಮಾರು ೪೦,೦೦೦. ಅದಲ್ಲದೆ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಸುಮಾರು ಮೂರು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಯಿತು. ಮುಖ್ಯಮಂತ್ರಿಗಳ ಕಚೇರಿ ನೀಡಿದ ಮಾಹಿತಿಯ ಅನುಸಾರ ಕೃತಕ ನೆರೆ ಮತ್ತು ಭೂಕುಸಿತದಿಂದಾಗಿ ಹಾನಿಗೊಳಗಾದ ಮುಖ್ಯರಸ್ತೆಗಳ ಸಂಖ್ಯೆ ೧೩೬. “ಎಲ್ಲ ಜಿಲ್ಲೆಗಳ ಹಾನಿ ಲೆಕ್ಕ ಹಾಕಿದರೆ, ಒಟ್ಟು ನಷ್ಟ ೪೦,೦೦೦ದಿಂದ ೫೦,೦೦೦ ಕೋಟಿ ರೂಪಾಯಿಗಳು” ಎಂದಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಪಕ್ಕದ ಮಹಾರಾಷ್ಟ್ರದಲ್ಲಿಯೂ ಅದೇ ಸಮಯದಲ್ಲಿ ಅದೇ ಕತೆ! ಕೃಷ್ಣಾ ನದಿಯ ಮೂರು ದೊಡ್ಡ ಅಣೆಕಟ್ಟುಗಳಲ್ಲಿ (ಕೊಯ್ನಾ, ವಾರ್ನಾ ಮತ್ತು ರಧನಗಿರಿ) ಮುಂಗಾರು ಮಳೆಯಿಂದಾಗಿ ನೀರು ಭರ್ತಿಯಾಗಿತ್ತು. ಭಾರತದ ಹವಾಮಾನ ಇಲಾಖೆಯ ಅನುಸಾರ, ಈ ಅಣೆಕಟ್ಟುಗಳಿರುವ ಸತಾರಾ, ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಸರಾಸರಿಗಿಂತ ಶೇ.೪೦೦ರಷ್ಟು ಅಧಿಕ ಮಳೆಯಾಗಿತ್ತು (ಆಗಸ್ಟ್ ೧ರಿಂದ ೮ರ ವರೆಗೆ). ಅದೇನಿದ್ದರೂ, ಆ ಮಳೆ ಎಂಟೂ ದಿನಗಳಲ್ಲಿ ಹಂಚಿ ಹೋಗಿತ್ತು. ಅಣೆಕಟ್ಟಿನಿಂದ ನೀರು ಬಿಡುವುದನ್ನು ಸರಿಯಾಗಿ ನಿರ್ವಹಿಸಿದ್ದರೆ, ಅದರಿಂದಾಗಿ ಉಂಟಾದ ಮಹಾನೆರೆಯನ್ನು ತಪ್ಪಿಸಬಹುದಾಗಿತ್ತು. ಅಣೆಕಟ್ಟಿನ ಅಧಿಕಾರಿಗಳು ಮತ್ತು ಕೆಳಹರಿವಿನ ಪ್ರದೇಶಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ ಎನ್ನುತ್ತಾರೆ ಮಧ್ಯಪ್ರದೇಶದ ಮಂಥನ ಅಧ್ಯಯನ ಕೇಂದ್ರದ ಶ್ರೀಪಾದ ದರ್ಮಾಧಿಕಾರಿ.
ನೆರೆ ಅನಾಹುತ ತಪ್ಪಿಸಲಿಕ್ಕಾಗಿ ಅಣೆಕಟ್ಟುಗಳಿಂದ ಮುಂಚೆಯೇ ನೀರು ಹೊರಬಿಡಬೇಕಾಗಿತ್ತು
ಸೌತ್ ಏಷ್ಯಾ ನೆಟ್ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಆಂಡ್ ಪೀಪಲ್ ಎಂಬ ಸಂಸ್ಥೆ ಈ ವರುಷ ಕರ್ನಾಟಕ ಮತ್ತು ಮಹಾರಾಷ್ಟ್ರದ ನೆರೆ ಅನಾಹುತದ ಅಧ್ಯಯನ ಮಾಡಿದೆ. ಅದರ ಅನುಸಾರ, ಮೇಲ್ವಿಚಾರಕರು ಅಣೆಕಟ್ಟುಗಳಿಂದ ಜುಲಾಯಿ ೨೫ರಂದೇ ನೀರು ಹೊರಬಿಡಲು ಶುರು ಮಾಡಿದ್ದರೆ (ಅಣೆಕಟ್ಟು ಶೇ.೪೦ – ೪೫ ಖಾಲಿಯಾಗಿದ್ದಾಗ) ಅಧಿಕ ಮಳೆಯಿಂದಾಗಿ ಅನಾಹುತ ಆಗುತ್ತಿರಲಿಲ್ಲ. ಹಾಗಿರುವಾಗ, ಮೇಲ್ವಿಚಾರಕರು ಅಣೆಕಟ್ಟುಗಳಿಂದ ನೀರನ್ನು ಬೇಗನೇ ಯಾಕೆ ಹೊರಬಿಡುವುದಿಲ್ಲ? ಬೇಸಗೆ ಮುಗಿಯುತ್ತಿದ್ದಂತೆ ಅಣೆಕಟ್ಟುಗಳು ಪೂರ್ತಿ ಖಾಲಿಯಾಗುತ್ತವೆ. ಮುಂಗಾರು ಆರಂಭವಾದೊಡನೆ ಮೇಲ್ವಿಚಾರಕರಿಗೆ ಅಣೆಕಟ್ಟನ್ನು ಮಳೆನೀರಿನಿಂದ ಭರ್ತಿ ಮಾಡುವ ಚಿಂತೆ. ಆದ್ದರಿಂದಲೇ ಇಂತಹ ಎಡವಟ್ಟುಗಳು ಆಗುತ್ತವೆ.
ಅಣೆಕಟ್ಟಿನ ನೀರಿನ ನಿರ್ವಹಣೆ ಬಗ್ಗೆ ನಿರ್ದಿಷ್ಟ ನಿಯಮಗಳಿವೆ. ಅವುಗಳ ಹೆಸರು “ರೂಲ್ ಕರ್ವ್”. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲಿಸಲಾಗುತ್ತದೆ. ಯಾವಾಗ ಮತ್ತು ಹೇಗೆ ಒಂದು ಅಣೆಕಟ್ಟನ್ನು ನೀರಿನಿಂದ ಭರ್ತಿ ಮಾಡಬೇಕು ಮತ್ತು ಖಾಲಿ ಮಾಡಬೇಕು ಎಂಬುದನ್ನು ಅದು ತಿಳಿಸುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ, ಮುಂಗಾರು ಮುಗಿಯುತ್ತಿದ್ದಂತೆ ಅಣೆಕಟ್ಟು ಭರ್ತಿಯಾಗುತ್ತದೆ. ಮಾತ್ರವಲ್ಲ, ಅಧಿಕ ಮಳೆಯ ಸಂದರ್ಭದಲ್ಲಿ ಕೆಳಹರಿವಿನ ಪ್ರದೇಶಗಳಲ್ಲಿ ನೆರೆ ತಪ್ಪಿಸಲು ಸಾಧ್ಯವಾಗುತ್ತದೆ. ಆದರೆ, ಭಾರತದ ಅಣೆಕಟ್ಟುಗಳ ಮೇಲ್ವಿಚಾರಕರು ಇದನ್ನು ಯಾವತ್ತೂ ಪಾಲಿಸುವುದಿಲ್ಲ. ಆದ್ದರಿಂದಲೇ, ನಮ್ಮ ದೇಶದ ಇತ್ತೀಚೆಗಿನ ನೆರೆಗಳೆಲ್ಲವಕ್ಕೆ ಕಾರಣ ಅಣೆಕಟ್ಟುಗಳಿಂದ ಒಮ್ಮೆಲೇ ನೀರನ್ನು ಹೊರಬಿಟ್ಟದ್ದು!
ಇನ್ನೊಂದು ಸಂಗತಿ: ೧೯೫೦ರಲ್ಲಿ, ಆಗಿನ ಮಳೆ ನಮೂನೆ ಆಧರಿಸಿ ರಚಿಸಲಾದ ರೂಲ್ ಕರ್ವನ್ನು ಈಗಿನ ಬದಲಾದ ಮಳೆ ಸನ್ನಿವೇಶಕ್ಕೆ ಹೊಂದುವಂತೆ ತುರ್ತಾಗಿ ಬದಲಾಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಅಣೆಕಟ್ಟುಗಳ ನೀರಿನ ಸಮರ್ಥ ನಿರ್ವಹಣೆಗಾಗಿ, ೧೦೧ ನದಿಗಳಲ್ಲಿ ನಿರೀಕ್ಷಿತ ಮಳೆನೀರಿನ ಪರಿಮಾಣದ ಬಗ್ಗೆ ಮುನ್ಸೂಚನೆ ನೀಡಲು ಭಾರತದ ಹವಾಮಾನ ಇಲಾಖೆ ಆಗಸ್ಟ್ ೨೦೧೯ರಿಂದ ಶುರು ಮಾಡಿದೆ. ಆದರೆ ಈ ಮಾಹಿತಿಯನ್ನು ಅಣೆಕಟ್ಟುಗಳ ಮೇಲ್ವಿಚಾರಕರು, ಕೇಂದ್ರ ಜಲ ಮಂಡಲಿ ಅಥವಾ ರಾಜ್ಯ ಜಲ ಸಂಪನ್ಮೂಲ ಇಲಾಖೆಗಳು ಉಪಯೋಗಿಸಿದಂತೆ ಕಾಣುತ್ತಿಲ್ಲ.
ಅಣೆಕಟ್ಟುಗಳು ಈಗಿನ ಬದಲಾದ ಮಳೆ ಪರಿಸ್ಥಿತಿಗೆ ಸೂಕ್ತವಲ್ಲ ಎನ್ನುವುದು ತಜ್ನರ ಅಭಿಪ್ರಾಯ. ಅವು ಕೆಳಹರಿವಿನ ಪ್ರದೇಶಗಳ ಜನರಲ್ಲಿ ತಾವು ಸುರಕ್ಷಿತ ಎಂಬ ತಪ್ಪು ಕಲ್ಪನೆ ಮೂಡಿಸಿ, ಕೊನೆಗೆ ಅನಾಹುತಕ್ಕೆ ಕಾರಣವಾಗುತ್ತಿವೆ.
ಜೊತೆಗೆ, ಅಣೆಕಟ್ಟುಗಳು ಹಳೆಯದಾಗುತ್ತಿವೆ ಮತ್ತು ಅವುಗಳಲ್ಲಿ ಹೂಳು ತುಂಬುತ್ತಿದೆ. ಇದರಿಂದಾಗಿಯೂ ನೆರೆಯ ಅಪಾಯ ಸಾಧ್ಯತೆಗಳು ಹೆಚ್ಚುತ್ತಿವೆ. ಉದಾಹರಣೆಗೆ, ಈ ವರುಷ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ತಿವರೆ ಅಣೆಕಟ್ಟು ಒಡೆದು ಜೂನ್ ೨ರಂದು ೧೯ ಜನರು ನೆರೆಗೆ ಬಲಿಯಾದರು.
ಈಗ ನಮ್ಮ ದೇಶದಲ್ಲಿ ೫,೭೪೫ ಅಣೆಕಟ್ಟುಗಳಿವೆ; ಅವುಗಳಲ್ಲಿ ೨೯೩ ಅಣೆಕಟ್ಟುಗಳು ೧೦೦ ವರುಷಗಳಿಗಿಂತ ಹಳೆಯವು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಲೋಕಸಭೆಗೆ ತಿಳಿಸಿದ್ದಾರೆ. ಶೇ.೨೫ರಷ್ಟು ಅಣೆಕಟ್ಟುಗಳು ೫೦ರಿಂದ ೧೦೦ ವರುಷ ಹಳೆಯವು. ಹಾಗಾಗಿ ೨೦೨೫ರ ಹೊತ್ತಿಗೆ ಪರಿಸ್ಥಿತಿ ಬಿಗಡಾಯಿಸಲಿದೆ; ಯಾಕೆಂದರೆ, ಆಗ ೩೦೧ ಅಣೆಕಟ್ಟುಗಳು ೭೫ ವರುಷ ಹಾಗು ೪೯೬ ಅಣೆಕಟ್ಟುಗಳು ೫೦ ವರುಷ ಹಳೆಯವು ಆಗಿರುತ್ತವೆ ಎಂದು ಇಕನಾಮಿಕ್ ಆಂಡ್ ಪಾಲಿಟಿಕಲ್ ವೀಕ್ಲಿ ಎಂಬ ವಾರಪತ್ರಿಕೆ ಮಾಹಿತಿ ನೀಡಿದೆ.
ಆದರೆ, ಅಣೆಕಟ್ಟುಗಳ ವಯಸ್ಸಿಗೂ ಸುರಕ್ಷಿತತೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಕೇಂದ್ರ ಜಲಮಂಡಲಿಯ ಅಧಿಕಾರಿಗಳ ಅಭಿಪ್ರಾಯ. ಒಡೆದ ಅಣೆಕಟ್ಟುಗಳಲ್ಲಿ, ನಿರ್ಮಾಣದ ನಂತರದ ಮೊದಲ ಐದು ವರುಷಗಳಲ್ಲಿ ಒಡೆದವುಗಳು ಶೇ.೪೪ರಷ್ಟು ಮತ್ತು ನೂರು ವರುಷ ಹಳೆಯ ಅಣೆಕಟ್ಟುಗಳು ಒಡೆದದ್ದು ಕೇವಲ ಶೇ.೫.೫೬ ಎಂಬ ಮಾಹಿತಿ ನೀಡುತ್ತಾರೆ ಅವರು.
“ಅಣೆಕಟ್ಟು ಸುರಕ್ಷಿತತೆ ಮಸೂದೆ, ೨೦೧೯” ಶಾಸನವಾದರೆ ಪರಿಸ್ಥಿತಿ ಸುಧಾರಿಸಬಹುದೆಂಬ ಆಶಾಭಾವನೆ ಕೇಂದ್ರ ಜಲ ಮಂಡಲಿಯ ಮುಖ್ಯ ಇಂಜಿನಿಯರ್ ಗುಲ್ಷನ್ ರಾಜ್ ಅವರದು. ಆದರೆ ಆ ಮಸೂದೆಯಲ್ಲಿ ಅಣೆಕಟ್ಟು ನಿರ್ವಹಣೆ ಮತ್ತು ನೆರೆ ನಿಯಂತ್ರಣ ಬಗ್ಗೆ ಯಾವುದೇ ಅಂಶವಿಲ್ಲ! ಬೇಜವಾಬ್ದಾರಿಯಿಂದ ಅಣೆಕಟ್ಟಿನ ನೀರು ಹೊರಬಿಟ್ಟು ನೂರಾರು ಜನರ ಪ್ರಾಣ ಹಾನಿಗೆ ಮತ್ತು ಕೋಟಿಗಟ್ಟಲೆ ರೂಪಾಯಿ ಸೊತ್ತು ನಾಶಕ್ಕೆ ಕಾರಣರಾದ ಯಾವುದೇ ಅಧಿಕಾರಿಗೂ ಈ ವರೆಗೆ ಶಿಕ್ಷೆಯಾಗಿಲ್ಲ. ಹಾಗಾಗಿ, ಮನುಷ್ಯರ ತಪ್ಪಿನಿಂದಾಗುವ ನೆರೆ ಹಾನಿ ತಡೆಗಟ್ಟುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ.
ಫೋಟೋ: ತುಂಗಭದ್ರಾ ಅಣೆಕಟ್ಟು, ಹೊಸಪೇಟೆ, ಕರ್ನಾಟಕ