ಅಂತರಗಂಗೆ ನಿಯಂತ್ರಣದ ಯುದ್ಧ ಗೆಲ್ಲುವ ಕಾರ್ಯತಂತ್ರ

ಅಂತರಗಂಗೆ ಜಲಕಳೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿದೆ ಯುದ್ಧ. ಯಾಕೆಂದರೆ, ಬಿಳಿ ಹಾಗೂ ಕೆನ್ನೀಲಿ ಬಣ್ಣದ ಆಕರ್ಷಕ ಹೂಗಳಿಂದ ಯಾರನ್ನೂ ಮರುಳು ಮಾಡಬಲ್ಲ ಈ ಜಲಕಳೆ ಕೆರೆಗಳನ್ನೇ ಕೊಲ್ಲುತ್ತದೆ!

೧೮ನೇ ಶತಮಾನದ ಕೊನೆಯಲ್ಲಿ ಅಂತರಗಂಗೆಯನ್ನು ಬ್ರಿಟಿಷರು ಭಾರತಕ್ಕೆ ತಂದರು ಎನ್ನಲಾಗಿದೆ. ಆಗಿನಿಂದಲೇ ನೀರಿನಾಶ್ರಯಗಳನ್ನು ಆಕ್ರಮಿಸಿದ ಈ ಜಲಕಳೆ ಈಗ ದೇಶದಲ್ಲೆಡೆ ವ್ಯಾಪಿಸಿದೆ. ಉತ್ತರ ಭಾರತದ ಅತಿ ದೊಡ್ಡ ಹರಿಕೆ ಸರೋವರದಲ್ಲಿ ಇದರ ಹರಡುವಿಕೆಯನ್ನು ತಡೆಯಲಿಕ್ಕಾಗಿ, ೧೯೯೯ರಲ್ಲಿ ಪಂಜಾಬ್ ಸರಕಾರ ಸೈನ್ಯದ ನೆರವು ಪಡೆಯಬೇಕಾಯಿತು. ಹೈದರಾಬಾದ್ ವ್ಯಾಪ್ತಿಯ ೫೩ ಸರೋವರಗಳಿಂದ ಅಂತರಗಂಗೆಯನ್ನು ಕಿತ್ತೊರೆಯಲಿಕ್ಕಾಗಿ, ಅಲ್ಲಿನ ಆಡಳಿತವು ೨೦೧೭ರಲ್ಲಿ ರೂ.೧೭ ಕೋಟಿ ವೆಚ್ಚದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತು. ಆದರೆ, ಈ ಸಸ್ಯ ಇವಕ್ಕೆಲ್ಲ ಕ್ಯಾರೇ ಅನ್ನೋದಿಲ್ಲ. ಯಾಕೆಂದರೆ ಮಣ್ಣಿನಲ್ಲಿ ಇದರ ಬೀಜಗಳು ೩೦ ವರುಷಗಳ ವರೆಗೆ ಸುಪ್ತವಾಗಿ ಉಳಿಯಬಲ್ಲವು.

ಅಂತರಗಂಗೆ (ವಾಟರ್ ಹಯಾಸಿಂಥ್)ಯನ್ನು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವೆಂದು ಗುರುತಿಸಲಾಗಿದೆ. (ಸಸ್ಯಶಾಸ್ತ್ರೀಯ ಹೆಸರು: ಐಕಾರ್ನಿಯ ಕ್ರಸಿಪ್ಸ್) ಇದು ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ಕೇವಲ ೮-೧೦ ದಿನಗಳಲ್ಲಿ ಎರಡು ಪಟ್ಟು ಬೆಳೆಯುತ್ತದೆ. ಇಷ್ಟು ವೇಗವಾಗಿ ಬೆಳೆದು, ನೀರಿನ ಮೇಲ್ಮೈಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಆವರಿಸುತ್ತದೆ. ಈ ಧಾಳಿಯಿಂದಾಗಿ ಕೆರೆ, ಸರೋವರಗಳ ಜಲಸಸ್ಯಗಳು ಸತ್ತು ಕೊಳೆಯುತ್ತವೆ. ಆಗ, ಅಲ್ಲಿನ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಅಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಬಲಿಯಾಗುತ್ತವೆ.

ಕೆರೆ, ಸರೋವರಗಳನ್ನು ಆಕ್ರಮಿಸಿ, ಭತ್ತದ ಹೊಲಗಳಲ್ಲಿ ಹರಡಿ, ನೀರು ಸರಬರಾಜು ಪೈಪುಗಳಲ್ಲಿಯೂ ನುಗ್ಗಿ ಬೆಳೆಯುತ್ತದೆ ಅಂತರಗಂಗೆ. ಇದರ ಅವಾಂತರಗಳನ್ನೆಲ್ಲ ನಿಭಾಯಿಸಲು ನಮಗಿರುವ ಒಂದು ದಾರಿ: ವಿಷ ರಾಸಾಯನಿಕಗಳ ಸಿಂಪಡಣೆ. ಇದರ ಬದಲಾಗಿ, ಅಳವಡಿಸಬಹುದಾದ ಪರಿಣಾಮಕಾರಿ ದಾರಿ: ಆದಾಯ ಹುಟ್ಟುವ ರೀತಿಯಲ್ಲಿ ಇದನ್ನು ಬಳಸುವುದು.

ಮಣಿಪುರದ ಉಕ್ರುಲ್ ಜಿಲ್ಲೆಯ ಜುಹಿ ಅಂಗಮ್ ಇದೇ ವಿಧಾನ ಅನುಸರಿಸುತ್ತಿದ್ದಾರೆ. ಅವರ ಸ್ವಸಹಾಯ ಸಂಘದಲ್ಲಿ ೧೦೦ ಸದಸ್ಯರಿದ್ದಾರೆ. ಅವರೆಲ್ಲರೂ ಅಂತರಗಂಗೆಯ ಬಳ್ಳಿಗಳನ್ನು ಒಣಗಿಸಿ, ಅವುಗಳನ್ನು ಹೆಣೆದು, ಬ್ಯಾಗ್, ಬುಟ್ಟಿ ಇತ್ಯಾದಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಚುಯಿಮಿಯಾವೊ ಹ್ಯಾಂಡ್‌ಲೂಮ್ ವೀವರ್ಸ್ ಕಮ್ ಹ್ಯಾಂಡಿಕ್ರಾಫ್ಟ್ಸ್ ಸಿಎಸ್ ಲಿಮಿಟೆಡ್ ಎಂಬ ಸ್ಥಳೀಯ ಸಂಸ್ಥೆ ಈ ಉತ್ಪನ್ನಗಳನ್ನು ದೂರದ ಢೆಲ್ಲಿಯಲ್ಲಿ ಮಾರಾಟ ಮಾಡುತ್ತಿದೆ.

“ಇದರಿಂದಾಗಿ ಹಣದ ವಿಷಯದಲ್ಲಿ ನಾವೀಗ ಸ್ವಾವಲಂಬಿಗಳು. ಅಷ್ಟೇ ಅಲ್ಲ, ನಮಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯೂ ಸಿಕ್ಕಿದೆ” ಎನ್ನುತ್ತಾರ ಅಂಗಮ್. ಸುಮಾರು ೧.೫ ಅಡಿ ಉದ್ದ, ಒಂದಡಿ ಅಗಲ ಅಳತೆಯ ಬ್ಯಾಗ್ ಹೆಣೆಯಲು ಒಂದು ದಿನ ತಗಲುತ್ತದೆ. ಇವನ್ನು, ಢೆಲ್ಲಿ ಹಾತ್ (ಮಾರುಕಟ್ಟೆ) ಪ್ರದರ್ಶನ ಮಳಿಗೆಯಲ್ಲಿ ತಲಾ ರೂ.೭೦೦ರಿಂದ ರೂ.೧,೦೦೦ ಬೆಲೆಗೆ ಮಾರಲಾಗುತ್ತದೆ ಎಂದು ತಿಳಿಸುತ್ತಾರೆ.

೨೦೧೧ರಿಂದ ಪರಿಸರ ಸಂರಕ್ಷಣಾ ಸಂಸ್ಥೆ ವಲ್ಡ್ ವೈಲ್ಡ್ ಲೈಫ್ ಫಂಡ್ ಈ ಜಲಕಳೆಯಿಂದ ಮಾಡಲಾದ ಕರಕುಶಲ ವಸ್ತುಗಳ ಮಾರಾಟಕ್ಕಾಗಿ ಪಂಜಾಬ್ ಅರಣ್ಯ ಇಲಾಖೆಯ ಜೊತೆಗೆ ಕೈಜೋಡಿಸಿದೆ. ಹರಿಕೆ ಸರೋವರದ ಪಕ್ಕದ ಚುರಿಯನ್ ಮತ್ತು ಸುಧಿಯನ್ ಗ್ರಾಮಗಳ ಮಹಿಳೆಯರಿಂದ ಆ ಸಂಸ್ಥೆ ಈ ಕರಕುಶಲ ವಸ್ತುಗಳನ್ನು ಮಾಡಿಸುತ್ತಿದೆ. ಈ ವಸ್ತುಗಳ ಮಾರಾಟದಿಂದ ಬರುವ ಲಾಭದ ಹಣದಿಂದ ಸರೋವರದಲ್ಲಿ ಅಂತರಗಂಗೆ ಕೀಳುವ ವೆಚ್ಚ ಭರಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ವಕ್ತಾರ.

ಅಸ್ಸಾಮಿನ ಈಶಾನ್ಯ ಅಭಿವೃದ್ಧಿ ಆರ್ಥಿಕ ಕಾರ್ಪೊರೇಷನ್ ಈ ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದೆ - ತನ್ನ “ಅಕ್ವಾ ವೀವ್ಸ್” ಎಂಬ ಅಂತರ್ಜಾಲದ ಮಾರಾಟ ಪೋರ್ಟಲಿನ ಮೂಲಕ. ಯಾಕೆಂದರೆ, ಈ ಕಿರುಉದ್ದಿಮೆಗೆ ಬೇಕಾದ ಕಚ್ಚಾವಸ್ತು ಪುಕ್ಕಟೆಯಾಗಿ ಮತ್ತು ಹೇರಳವಾಗಿ ಸಿಗುತ್ತದೆ. ಎಷ್ಟೇ ಕೊಯ್ಲು ಮಾಡಿದರೂ, ಅಷ್ಟೇ ಪರಿಮಾಣದಲ್ಲಿ ಕೇವಲ ೧೫ ದಿನಗಳಲ್ಲಿ ಬೆಳೆಯುತ್ತದೆ ಅಂತರಗಂಗೆ! ಅದಲ್ಲದೆ, ಇದರ ಬಳ್ಳಿಗಳನ್ನು ತೆಗೆಯುವುದು ಬಹಳ ಸುಲಭದ ಕೆಲಸ. ೪೦-೭೦ ಸೆ.ಮೀ. ಉದ್ದದ ಮತ್ತು ೧-೩ ಸೆ.ಮೀ. ದಪ್ಪದ ಬಳ್ಳಿಗಳನ್ನು ಕಿತ್ತರಾಯಿತು. ಅನಂತರ, ಎಲೆಗಳನ್ನೆಲ್ಲ ಕಿತ್ತು, ಬಳ್ಳಿಗಳನ್ನು ಬಿಸಿಲಿನಲ್ಲಿ ಒಣಗಿಸಿದರಾಯಿತು. ೫-೬ ದಿನಗಳಲ್ಲಿ ಒಣಗಿ ಕಂದು ಬಣ್ಣಕ್ಕೆ ತಿರುಗುವ ಬಳ್ಳಿಗಳಿಂದ ಬ್ಯಾಗು, ಬುಟ್ಟಿ ಇತ್ಯಾದಿಗಳನ್ನು ಹೆಣೆಯುತ್ತಾರೆ. ಬೆತ್ತ ಅಥವಾ ಬಿದಿರಿನಷ್ಟೇ ಗಟ್ಟಿಯಾಗಿರುವ ಅಂತರಗಂಗೆ ಬಳ್ಳಿಗಳಿಂದ ಪೀಠೋಪಕರಣಗಳು ಮತ್ತು ಫೋಟೋ ಚೌಕಟ್ಟುಗಳನ್ನೂ ರಚಿಸಬಹುದು.

ಸ್ಥಳೀಯ ಕರಕುಶಲಗಾರರಿಗೆ ಥಾಯ್ಲೆಂಡಿನ ನುರಿತ ಕರಕುಶಲಗಾರರಿಂದ ಕಾರ್ಪೊರೇಷನ್ ಆಗಾಗ ತರಬೇತಿ ನೀಡುತ್ತದೆ - ಅಂತರಗಂಗೆ ಬಳ್ಳಿಗಳಿಂದ ಆಭರಣ ಮತ್ತು ಚಪ್ಪಲಿಗಳ ತಯಾರಿ ಬಗ್ಗೆ. ಇವಕ್ಕೆ ಭವ್ಯ ಹೋಟೆಲುಗಳ ಗ್ರಾಹಕರಿಂದ ಭಾರೀ ಬೇಡಿಕೆಯಿದೆ.

ಕೇರಳದ ಅಳಪುಜಾದ ಸನಾತನ ಧರ್ಮ ಕಾಲೇಜಿನ ಡಾ.ಜಿ. ನಾಗೇಂದ್ರ ಪ್ರಭು ಮತ್ತು ಅವರ ತಂಡದವರು ಅಭಿವೃದ್ಧಿ ಪಡಿಸಿದ ಅಂತರಗಂಗೆಯ ಬಳಕೆಯ ವಿವಿಧ ವಿಧಾನಗಳೂ ಗಮನಾರ್ಹ. ಅವರು ಅಲ್ಲಿನ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್. ಅಂತರಗಂಗೆಯಲ್ಲಿರುವ ಲಿಗ್ನೋ ಸೆಲ್ಯುಲೊಸಿಕ್ ಪದಾರ್ಥವನ್ನು ಬಳಸಿ, ಎಲ್-ಗ್ಲುಟಮಿನೇಸ್ ಬೇರ್ಪಡಿಸುವ ವಿಧಾನ ಕಂಡು ಹಿಡಿದಿದ್ದಾರೆ ಡಾ. ನಾಗೇಂದ್ರ ಪ್ರಭು. ಇದು ವೈದ್ಯಕೀಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಕಿಣ್ವ (ಎನ್-ಝೈಮ್).

ಅಂತರಗಂಗೆಯಂತಹ ಜಲಕಳೆಗಳಿಂದ ಬ್ಯಾಕ್ಟೀರಿಯಾದ ಮೂಲಕ ಜೀವಕೋಶಗಳ ಕಿಣ್ವ ಉತ್ಪಾದಿಸುವ ಪ್ರಯೋಗಶಾಲೆ ಹಂತದ ತಂತ್ರಗಳನ್ನು ಅಭಿವೃದ್ಧಿ ಪಡಿಸಿದವರು ಡಾ.ಪ್ರಭು. ಕ್ರಮೇಣ ಇತರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅವರ ಜೊತೆಗೂಡಿ, ಅಂತರಗಂಗೆಯಿಂದ ವಿವಿಧ ಉಪಯುಕ್ತ ವಸ್ತುಗಳನ್ನು ಉತ್ಪಾದಿಸುವ ವಿಧಾನಗಳನ್ನು ಆವಿಷ್ಕಾರ ಮಾಡಿದರು.
“ಜೈವಿಕ ಇಟ್ಟಿಗೆಗಳನ್ನು ಮತ್ತು ಅಣಬೆ ಬೆಳೆಸಲಿಕ್ಕೆ ಹಾಗೂ ಹೈಡ್ರೊಫೋನಿಕ್ಸಿಗೆ ಅಗತ್ಯವಾದ ಬುಡವಸ್ತುವನ್ನು ಅಂತರಗಂಗೆಯಿಂದ ತಯಾರಿಸಬಹುದೆಂದು ನಮ್ಮ ಸಂಶೋಧನೆ ತೋರಿಸಿಕೊಟ್ಟಿತು” ಎನ್ನುತ್ತಾರೆ ಡಾ. ಪ್ರಭು. ಜೈವಿಕ ಇಟ್ಟಿಗೆಗಳನ್ನು ಅಂತರಗಂಗೆಯಂತಹ ಹಸುರುಕಸ ಮತ್ತು ಸಾವಯವ ವಸ್ತುಗಳಿಂದ ತಯಾರಿಸಲಾಗುತ್ತದೆ. ವಿದ್ಯುತ್ ಮತ್ತು ಉಷ್ಣ ಉತ್ಪಾದನೆಗೆ ಇಂಧನವಾಗಿ ಮತ್ತು ಪುನರ್ ಬಳಕೆಯ ಇಂಧನವಾಗಿ ಇವಕ್ಕೆ ಭಾರೀ ಬೇಡಿಕೆಯಿದೆ.
ಅಂತರಗಂಗೆಯ ಪಲ್ಪಿನಿಂದ ಹಣ್ಣು ಮತ್ತು ಕೋಳಿಮೊಟ್ಟೆ ಟ್ರೇ, ಬಳಸಿ-ಎಸೆಯುವ ಪ್ಲೇಟು, ಬಹುಬಳಕೆಯ ಬೋರ್ಡ್ ಮತ್ತು ಪೈಂಟಿಂಗ್ ಕ್ಯಾನ್-ವಾಸ್ ತಯಾರಿಸಬಹುದು ಎಂಬುದನ್ನೂ ಇವರ ಸಂಶೋಧನಾ ತಂಡ ತೋರಿಸಿಕೊಟ್ಟಿದೆ. ಅವಲ್ಲದೆ, ಆಟಿಕೆಗಳು, ಪಾತ್ರೆಗಳು ಮತ್ತು ವಿವಿಧ ವಸ್ತುಗಳ ಪುಟ್ಟ-ಮಾದರಿಗಳ ತಯಾರಿಕೆಗೂ ಅಂತರಗಂಗೆಯ ಪಲ್ಪ್ ಬಳಸಬಹುದು.
ಅವರ ವಿದ್ಯಾರ್ಥಿಗಳಾದ ಜಿ. ಗೋಪಿಕಾ ಮತ್ತು ವಿ. ಅನೂಪ್ ಕುಮಾರ್ ಅಂತರಗಂಗೆಯ ದಟ್ಟ ಕೆನ್ನೀಲಿ ಹೂಗಳಿಂದ ಬಣ್ಣ ತಯಾರಿಸುವ ಸಂಶೋಧನೆ ಮಾಡಿದರು. ಆ ಹೂಗಳಿಂದ ಅವರು ಬೇರ್ಪಡಿಸಿದ ಸಹಜ ಬಣ್ಣವನ್ನು ಬಟ್ಟೆಗಳಿಗೆ ಬಣ್ಣ ನೀಡಲು ಬಳಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಸಂಶೋಧನೆಗೆ ೨೦೧೭ರಲ್ಲಿ ಜರಗಿದ ೨೭ನೇ ಸ್ವದೇಶೀ ವಿಜ್ನಾನ ಸಮ್ಮೇಳನದಲ್ಲಿ ಅತ್ಯುನ್ನತ ಪುರಸ್ಕಾರ ಲಭಿಸಿದೆ.
ಅಂತೂ, ನೀರಿನಾಶ್ರಯಗಳನ್ನು ನಾಶ ಮಾಡುತ್ತಿರುವ ಅಂತರಗಂಗೆ ಜಲಕಳೆಯನ್ನು ನಿಯಂತ್ರಿಸಲು ಖಂಡಿತ ಸಾಧ್ಯವೆಂದು ಈ ಮೇಲಿನ ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಜೊತೆಗೆ, ಅದರಿಂದ ಉಪಯುಕ್ತ ಉತ್ಪನ್ನಗಳನ್ನು ತಯಾರಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯವರ್ಗದ ಜನರಿಗೆ ಆದಾಯ ಗಳಿಸುವ ಕಸುಬು ಒದಗಿಸಲು ಸಾಧ್ಯವೆಂದೂ ಸಾಬೀತಾಗಿದೆ. ಜಲಕಳೆ ನಿಯಂತ್ರಣದಂತಹ ಯುದ್ಧ ಗೆಲ್ಲಲು ಇಂತಹ ಕಾರ್ಯತಂತ್ರಗಳೇ ಸೂಕ್ತ, ಅಲ್ಲವೇ?
ಫೋಟೋ: ಅಂತರಗಂಗೆ ಬಳ್ಳಿಯ ಚೀಲ