ಒಂದಾನೊಂದು ಕಾಲದಲ್ಲಿ ಒಡಿಸ್ಸಾದ ನಯಾಘರ್ ಜಿಲ್ಲೆಯ ಒಡಗಾವೊನ್‌ನ ಆ ಪ್ರದೇಶ ದಟ್ಟ ಕಾಡು ಆಗಿತ್ತು. ಕ್ರಮೇಣ ಅಲ್ಲಿನ ಮೇಲ್ಮಣ್ಣು ಕೊಚ್ಚಿ ಹೋಗಿ, ಅಲ್ಲಿ ಆಳವಾದ ತೋಡುಗಳು ಉಂಟಾದವು. ಪ್ರಕೃತಿ ಅಲ್ಲಿ ಪುನಃ ಹಸುರು ಚಿಮ್ಮಿಸಲು ಪ್ರಯತ್ನಿಸಿದಾಗೆಲ್ಲ, ಆಡುಗಳು ಮತ್ತು ಕುರಿಗಳು ಹಸುರು ಚಿಗುರುಗಳನ್ನೆಲ್ಲ ಕಿತ್ತು ತಿನ್ನುತ್ತಿದ್ದವು.
ಆ ಜಮೀನಿನ ಮಾಲೀಕರಾಗಿದ್ದ ಹಳ್ಳಿಗರು ಅಲ್ಲಿ ಬೆಳೆಗಳನ್ನು ಬೆಳೆಸುವ ಕನಸುಗಳನ್ನೇ ಕಳೆದುಕೊಂಡರು. ಆದರೆ, ಸಬರಮತೀ ಮತ್ತು ಆಕೆಯ ತಂದೆ ರಾಧಾಮೋಹನ್ ಅವರಿಗೆ ಇಂತಹ ಜಾಗವೇ ಬೇಕಾಗಿತ್ತು. ಯಾಕೆಂದರೆ, ಬರಡು ಭೂಮಿ ಎಂದು ತಿರಸ್ಕರಿಸಲ್ಪಟ್ಟ ಜಮೀನನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಅವರು ಸ್ವೀಕರಿಸಿದ್ದರು. ಅವರು “ಸಂಭವ್" ಎಂಬ ಸರಕಾರೇತರ ಸಂಸ್ಥೆಯ ಸ್ಥಾಪಕರು. ಲಿಂಗ ಸಮಾನತೆ ಮತ್ತು ಪರಿಸರ - ಇವು ಆ ಸಂಸ್ಥೆಯ ಕಾರ್ಯಕ್ಷೇತ್ರಗಳು.
ದಾನದ ಹಣದಿಂದ ಅವರು ಅಲ್ಲಿ ೭೦ ಎಕ್ರೆ ಜಮೀನು ಖರೀದಿಸಿ, ತಮ್ಮ ಕಾಯಕ ಶುರು ಮಾಡಿದರು. ಮೊದಲಾಗಿ, ಅವರು ಆ ಜಮೀನಿನ ಸುತ್ತಲೂ ಬಿದಿರಿನ ಜೈವಿಕ ಬೇಲಿ ನಿರ್ಮಿಸಿದರು. ಕಂಪೌಂಡ್ ಗೋಡೆ ನಿರ್ಮಿಸಲು ಬಹಳ ಹಣ ಖರ್ಚು ಮಾಡಬೇಕು. ಅದಕ್ಕೆ ಹೋಲಿಸಿದಾಗ ಬಿದಿರಿನ ಬೇಲಿ ಕೆಲವು ವರುಷಗಳ ನಂತರ ಆದಾಯದ ಮೂಲವಾಗುತ್ತದೆ.
ಎರಡೇ ವರುಷಗಳಲ್ಲಿ ಅಲ್ಲೆಲ್ಲ ಹುಲ್ಲು ಹುಟ್ಟಿತು. ಅನಂತರ ಭತ್ತ, ಹಣ್ಣು ಮತ್ತು ತರಕಾರಿ ಬೆಳೆಸುವ ತಮ್ಮ ಯೋಜನೆಯನ್ನು ಅವರು ಕೈಗೆತ್ತಿಕೊಂಡರು. ಈಗ, ಮೂವತ್ತು ವರುಷಗಳ ನಂತರ, ಸಬರಮತಿ ಮತ್ತು ರಾಧಾಮೋಹನ್, ಅಂದೊಮ್ಮೆ ಬರಡಾಗಿದ್ದ ಜಮೀನಿನಲ್ಲಿ ಬೆಳೆದು ನಿಂತಿರುವ “ಆಹಾರ ಕಾಡ"ನ್ನು ನೋಡುತ್ತಾ ಮಂದಹಾಸ ಬೀರುತ್ತಾರೆ. ಈ ಸಾಧನೆಗಾಗಿಯೇ ಅವರಿಗೆ ೨೦೨೦ರ "ಪದ್ಮಶ್ರೀ" ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಅಲ್ಲೀಗ ೫೦೦ ವಿವಿಧ ತಳಿ ಭತ್ತ, ೧೦೦ ವಿಭಿನ್ನ ತರಕಾರಿಗಳು ಮತ್ತು ೪೦ ಬೇರೆಬೇರೆ ಹಣ್ಣುಗಳು ಬೆಳೆಯುತ್ತಿವೆ. ಸಬರಮತಿ ಮತ್ತು ರಾಧಾಮೋಹನ್ ಈ ಬೆಳೆಗಳ ಫಸಲಿನ ವಿವರಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಬೀಜಗಳನ್ನು ರಕ್ಷಿಸುತ್ತಿದ್ದಾರೆ.
ಅವರು ಅಲ್ಲಿ ೧೯೮೦ರ ದಶಕದಲ್ಲಿ ತಮ್ಮ ಯೋಜನೆಯನ್ನು ಕೈಗೆತ್ತಿಕೊಂಡಾಗ, ಪಾರಂಪರಿಕ ವಿಧಾನಗಳ ಬಗ್ಗೆ ನಂಬಿಕೆಯಿರಲಿಲ್ಲ. “ನೀತಿ ನಿರೂಪಕರು ಮತ್ತು ಪರಿಣತರು ಎನಿಸಿಕೊಂಡವರು, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಇವರ ಆಹಾರದ ಅಗತ್ಯ ಪೂರೈಸಲು ಪಾರಂಪರಿಕ ಕೃಷಿ ವಿಧಾನಗಳಿಂದ ಸಾಧ್ಯವಿಲ್ಲ ಎನ್ನುತ್ತಿದ್ದರು” ಎಂದು ನೆನಪು ಮಾಡಿಕೊಳ್ಳುತ್ತಾರೆ ರಾಧಾಮೋಹನ್. ಅವರು, ಮಾಹಿತಿ ಹಕ್ಕು ಕಾಯಿದೆಯ ಅನುಸಾರ ಒಡಿಸ್ಸಾದ ಮೊದಲ ಮಾಹಿತಿ ಆಯುಕ್ತ ಆಗಿದ್ದವರು. ನೀತಿ ನಿರೂಪಕರು ಮತ್ತು ಸರಕಾರಿ ಅಧಿಕಾರಿಗಳೊಂದಿಗೆ ಅವರ ಸಂಪರ್ಕ, ನಯಾಘರ್ ಯೋಜನೆ ಕೈಗೆತ್ತಿಕೊಳ್ಳಲು ನೆರವಾಯಿತು. ಒಳ್ಳೆಯ ಹುದ್ದೆಯಲ್ಲಿದ್ದ ಸಬರಮತಿ ತಮ್ಮ ಹುದ್ದೆಗೆ ರಾಜೀನಾಮೆಯಿತ್ತು, ತಂದೆಯೊಂದಿಗೆ ಕೈಜೋಡಿಸಲು ತಯಾರಾದರು.
ಅವರು ಜಮೀನಿಗಾಗಿ ಹುಡುಕಾಡುತ್ತಿದ್ದಾಗ, ಸರಕಾರವು ಧೆನ್‌ಕನಾಲ್ ಜಿಲ್ಲೆಯಲ್ಲಿ ಬ್ರಾಮನಿ ನದಿಯ ಹತ್ತಿರದ ಜಮೀನೊಂದನ್ನು ಗುರುತಿಸಿತು - ಸಾವಯವ ಕೃಷಿಯ ಸಂಪನ್ಮೂಲ ಕೇಂದ್ರ ಸ್ಥಾಪಿಸಲಿಕ್ಕಾಗಿ. “ಫಲವತ್ತಾದ ಜಮೀನಿನಲ್ಲಿ ಹಸುರು ಎಬ್ಬಿಸಿದರೆ, ಅದರಿಂದ ರೈತರು ಪ್ರೇರಣೆ ಪಡೆಯುವುದಿಲ್ಲ ಎಂದು ನಮಗೆ ತಿಳಿಯಿತು. ನಮಗೆ ಬರಡು ಭೂಮಿಯೇ ಬೇಕಾಗಿತ್ತು - ಪಾರಂಪರಿಕ ಕೃಷಿ ವಿಧಾನಗಳನ್ನು ಅಂತಹ ಜಮೀನಿನಲ್ಲಿಯೂ ಬಳಸಬಹುದು ಎಂಬುದನ್ನು ತೋರಿಸಲಿಕ್ಕಾಗಿ" ಎನ್ನುತ್ತಾರೆ ರಾಧಾಮೋಹನ್. ಆದ್ದರಿಂದಲೇ, ಅವರು ನಯಾಘರ್ ಜಿಲ್ಲೆಯ ಬರಡು ಜಮೀನನ್ನು ಆಯ್ಕೆ ಮಾಡಿದರು.
ಮಣ್ಣಿನ ಸವಕಳಿ ತಡೆಯಲಿಕ್ಕಾಗಿ ಅವರು ದ್ವಿದಳ ಧಾನ್ಯಗಳನ್ನು ಬೆಳೆಯತೊಡಗಿದರು. ಕತ್ತರಿಸಿದ ಹುಲ್ಲನ್ನು ಅವರು ಜಮೀನಿನಲ್ಲಿ ಹರಡುತ್ತಿದ್ದರು - ಗೆದ್ದಲು ಹುಳಗಳು ಆ ಹುಲ್ಲಿನ ಅಡಿಯಲ್ಲಿ ಪುಟ್ಟ ಸುರಂಗಗಳನ್ನು ತೋಡಲಿ ಎಂಬ ಉದ್ದೇಶದಿಂದ. ಇದು ಮಣ್ಣಿನಲ್ಲಿ ಗಾಳಿ ಸುಳಿದಾಡಲು ಮತ್ತು ಮಳೆನೀರು ಇಂಗಲು ಕಾರಣವಾಯಿತು. ಕ್ರಮೇಣ ಅಲ್ಲಿ ಹಕ್ಕಿಗಳ ಹಿಕ್ಕೆಯಲ್ಲಿದ್ದ ಬೀಜಗಳು ಮೊಳೆಯತೊಡಗಿದವು.
೧೯೯೦-೯೧ರಲ್ಲಿ ಅಲ್ಲಿ ಅಧಿಕ ಮಳೆಯಾಯಿತು. ಆಗ ಅವರು ಮಾವಿನ ಗಿಡಗಳನ್ನು ನೆಟ್ಟರು. ತಗ್ಗು ಪ್ರದೇಶದಲ್ಲಿ ತೋಟಗಾರಿಕಾ
ಬೆಳೆಗಳನ್ನು ಬೆಳೆಸಿದರು - ಹಲಸು, ಲಿಂಬೆ, ಲಿಚಿ ಮತ್ತು ತೆಂಗು. ಎರಡೂವರೆ ಎಕ್ರೆಯಲ್ಲಿ ಭತ್ತ ಬೆಳೆಸಿದರು. ಹೆಚ್ಚೆಚ್ಚು ಭತ್ತದ ತಳಿಗಳನ್ನು ಬೆಳೆಯುತ್ತಾ, ಇದೀಗ ೫೦೦ ವಿವಿಧ ಭತ್ತದ ತಳಿಗಳ ಕೃಷಿ ಮಾಡುತ್ತಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ಅವರು ಯಾವುದೇ ಕೃಷಿ ಮಾಡಲಿಲ್ಲ. ಅಲ್ಲಿ ಕಾಡು ಬೆಳೆಸುವುದೇ ಅವರ ಗುರಿಯಾಗಿತ್ತು. ಇನ್ನುಳಿದ ಜಾಗದಲ್ಲಿ ಬೀಜದುಂಡೆಗಳನ್ನು ಅವರು ಎಸೆದರು. ಈ ಎಲ್ಲ ಪ್ರಯತ್ನಗಳೂ ಫಲ ನೀಡಿದವು. ಈಗ, ೯೦ ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ “ಸಂಭವ್" ಜಮೀನಿನಲ್ಲಿ ೧,೦೦೦ಕ್ಕಿಂತ ಅಧಿಕ ಜಾತಿಯ ಸಸ್ಯಗಳಿವೆ.
"ಮೇಲ್ಮಣ್ಣನ್ನು ಸೃಷ್ಟಿ ಮಾಡುವುದು ದೊಡ್ಡ ಸವಾಲಾಗಿತ್ತು. ಒಣ ಎಲೆಗಳನ್ನು ಮತ್ತು ಬೆಳೆಗಳ ಉಳಿಕೆಯನ್ನು ನಾವು ಮಣ್ಣಿನ ಮೇಲೆ ಹರಡಿದೆವು. ಅವು ಕೊಳೆತು, ಕ್ರಮೇಣ ಮೇಲ್ಮಣ್ಣು ರೂಪುಗೊಂಡಿತು” ಎಂದು ವಿವರಿಸುತ್ತಾರೆ ಸಬರಮತಿ. ಮೇಲ್ಮಣ್ಣನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ ಬಿದಿರು ಮತ್ತು ಹುಲ್ಲಿನ ಬೆಳೆಗಳನ್ನು ಬೆಳೆದರು. ಮಳೆನೀರು ಕೊಯ್ಲಿನ ಸಂರಚನೆಗಳನ್ನೂ ನಿರ್ಮಿಸಿದರು.
“ಸಸ್ಯಗಳು ವಿವಿಧ ಜೀವಿಗಳ ಜೊತೆ ಬೆಳೆಯುತ್ತವೆ. ಕೀಟಗಳು, ನೀರೊಳಗಿನ ಜೀವಸಂಕುಲ, ಉಭಯವಾಸಿಗಳು, ಹಕ್ಕಿಗಳು ಮತ್ತು ಸಸ್ತನಿಗಳು - ಇವೆಲ್ಲ ಸಮೃದ್ಧ ಜೀವವೈವಿಧ್ಯ ಇಲ್ಲಿದೆ” ಎಂದು ತಿಳಿಸುತ್ತಾರೆ ಸಬರಮತಿ.
“ಸಂಭವ್ ಬೀಜ ಬ್ಯಾಂಕ್"
ತಮ್ಮ ಜಮೀನಿನಲ್ಲಿ ಬೆಳೆಸಲಿಕ್ಕಾಗಿ ಭತ್ತ, ತರಕಾರಿಗಳು ಮತ್ತು ಹಣ್ಣುಗಳ ವಿವಿಧ ತಳಿಗಳನ್ನು ಸಂಗ್ರಹಿಸತೊಡಗಿದರು ಸಬರಮತಿ. ಇದು "ಬೀಜ ಬ್ಯಾಂಕ್” ಸ್ಥಾಪಿಸಲು ನೆರವಾಯಿತು. ಈಗ “ಸಂಭವ್ ಬೀಜ ಬ್ಯಾಂಕಿ"ನಲ್ಲಿ ೭೦೦ ದೇಸಿ ಬೀಜತಳಿಗಳ ಸಂಗ್ರಹವಿದೆ. "ಬೀಜ ದತ್ತು” ಯೋಜನೆಯ ಅನುಸಾರ, ರೈತರಿಗೆ ಆಯಾ ಪ್ರದೇಶಕ್ಕೆ ಸೂಕ್ತವಾದ ಬೀಜಗಳನ್ನು ಉಚಿತವಾಗಿ ನೀಡುತ್ತದೆ “ಸಂಭವ್". ಆ ಬೀಜಗಳನ್ನು ಜನಪ್ರಿಯಗೊಳಿಸ ಬೇಕೆಂಬುದು ಈ ಯೋಜನೆಯ ಫಲಾನುಭವಿಗಳಿಗೆ ಅವರು ವಿಧಿಸುವ ಷರತ್ತು.
“ಸಂಭವ್" ಬೀಜಗಳ ಮ್ಯೂಸಿಯಮ್ ಅಲ್ಲ ಎಂದು ಎಚ್ಚರಿಸುತ್ತಾರೆ ಸಬರಮತಿ. “ಬೀಜಗಳಿಗೆ ಜೀವವಿದೆ. ಅವನ್ನು ನಿರಂತರವಾಗಿ ಬಿತ್ತಿ ಬೆಳೆಸಬೇಕು" ಎನ್ನುತ್ತಾರೆ ಅವರು. ಈ ಯೋಜನೆಗೆ ಅವಶ್ಯವಾದ ಹಣ, ಕೃಷಿ ಉತ್ಪನ್ನಗಳ ಮಾರಾಟದಿಂದ ಮತ್ತು ದಾನಿಗಳ ದಾನದಿಂದ ಲಭ್ಯವಾಗುತ್ತಿದೆ.
ರಾಧಾಮೋಹನ್ ೧೯೯೦ರಲ್ಲಿ ಅರಣ್ಯ ಸಂರಕ್ಷಣೆಗಾಗಿ ಪಾದಯಾತ್ರೆಯೊಂದನ್ನು ಸಂಘಟಿಸಿದ್ದರು. "ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಹಸುರು ಓಯಸಿಸ್ ಒಂದನ್ನು ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ ಆಗಿರಲಿಲ್ಲ” ಎಂದು ಸ್ಪಷ್ಟ ಪಡಿಸುತ್ತಾರೆ ಅವರು. ಪಾದಯಾತ್ರೆಯಲ್ಲಿ ಹಂಚಿದ ಸಸಿಗಳು ಬೆಳೆಯ ತೊಡಗಿದಂತೆ, ಸಾವಿರಾರು ಎಕರೆ ಪ್ರದೇಶದಲ್ಲಿ ಅರಣ್ಯ ತನ್ನಿಂತಾನೇ ಪುನರುಜ್ಜೀವನಗೊಂಡಿತು.
ಪಾರಂಪರಿಕ ಕೃಷಿಗೆ ಒತ್ತು ನೀಡುತ್ತದೆ “ಸಂಭವ್”. ರಾಸಾಯನಿಕ ಗೊಬ್ಬರಗಳು ಮತ್ತು ವಿಷರಾಸಾಯನಿಕ ಬಳಸದಿದ್ದರೆ ಕೃಷಿಯಲ್ಲಿ ಅದ್ಭುತಗಳನ್ನು ಸಾಧಿಸಬಹುದು ಎಂಬುದು ಅವರ ಅಭಿಪ್ರಾಯ. “ಸಾವಯವ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯನ್ನು ಪ್ರತ್ಯೇಕ ಖರೀದಿ ವ್ಯವಸ್ಥೆಯ ಮೂಲಕ ಬಲಪಡಿಸಬೇಕು” ಎನ್ನುತ್ತಾರೆ ರಾಧಾಮೋಹನ್.
“ಸಾವಯವಉತ್ಪನ್ನಗಳ ಬಗ್ಗೆ ಆಸಕ್ತಿ ಹೆಚ್ಚಿಸಲಿಕ್ಕಾಗಿ, ನಮ್ಮ ವಿಜ್ನಾನ ಪರಿಣತರ ಯೋಚನೆಯನ್ನೇ ಬದಲಾಯಿಸಬೇಕಾಗಿದೆ ಮತ್ತು ಕೃಷಿ ಶಿಕ್ಷಣದಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ” ಎಂಬುದು ರಾಧಾಮೋಹನ್ ಅವರ ಸಲಹೆ.