HRM
ನಳಂದಾ ವಿಶ್ವವಿದ್ಯಾಲಯದ ತಾಣ: ಈಗ ಜಾಗತಿಕ ಪಾರಂಪರಿಕ ತಾಣ
ನಳಂದಾ ವಿಶ್ವವಿದ್ಯಾಲಯ ಪ್ರದೇಶವನ್ನು ಯುನೆಸ್ಕೋ “ಜಾಗತಿಕ ಪಾರಂಪರಿಕ ತಾಣ”ವೆಂದು ಗುರುತಿಸಿದೆ. ಅಲ್ಲಿನ ಕಲಿಕಾ ಭವನಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಅಂತಹ ಒಂದು ಆಯಾತಾಕಾರದ ಕಲಿಕಾ ಭವನದ ಮಧ್ಯದಲ್ಲಿ ಕಲ್ಲಿನ ವೇದಿಕೆಯಿದೆ. ಅದು ಅಂದಿನ ಕಾಲಮಾನದಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದ ವೇದಿಕೆ. ಆ ಕಲಿಕಾ ಭವನದಲ್ಲಿ 300 ವಿದ್ಯಾರ್ಥಿಗಳು ಪಾಠ ಕೇಳಲು ಕುಳಿತಿರುತ್ತಿದ್ದರು ಎಂದು ಅಂದಾಜಿಸಬಹುದು. ಅಲ್ಲಿನ ಹೊರಭಾಗದಲ್ಲಿ ಸಾಲಾಗಿರುವ ಸಣ್ಣಸಣ್ಣ ಕೋಣೆಗಳನ್ನು ಕಾಣಬಹುದು. ಅವು ವಿದ್ಯಾರ್ಥಿಗಳ ವಾಸದ ಕೋಣೆಗಳು.
ನಳಂದಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕಾಗಿ ಪ್ರವೇಶ ಪಡೆಯುವುದು ಸುಲಭವಾಗಿರಲಿಲ್ಲ. ಪ್ರವೇಶ ಬಯಸುವ ವಿದ್ಯಾರ್ಥಿಗಳು ನಳಂದಾದ ಉನ್ನತ ಪ್ರಾಧ್ಯಾಪಕರು ನಡೆಸುವ ಕಠಿಣ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ಶ್ರೇಷ್ಠ ಪ್ರಾಧ್ಯಾಪಕರು ಶಿಕ್ಷಣ ನೀಡುತ್ತಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದ ವಿಶ್ವವಿದ್ಯಾಲಯವನ್ನು ಧರ್ಮಪಾಲ, ಶೀಲಭದ್ರ ಮುಂತಾದ ಮಹಾಗುರುಗಳು ಮುನ್ನಡೆಸುತ್ತಿದ್ದರು.
ನಳಂದಾ ವಿಶ್ವವಿದ್ಯಾಲಯದ ಗ್ರಂಥಾಲಯ: 90 ಲಕ್ಷ ತಾಳೆಗರಿ ಗ್ರಂಥಗಳ ಜ್ನಾನಖಜಾನೆ
ನಳಂದಾ ವಿಶ್ವವಿದ್ಯಾಲಯದ ಬೃಹತ್ ಗ್ರಂಥಾಲಯದಲ್ಲಿದ್ದ ಕೈಬರಹದ ತಾಳೆಗರಿ ಗ್ರಂಥಗಳ ಸಂಖ್ಯೆ ತೊಂಬತ್ತು ಲಕ್ಷ. ಅದು ಜಗತ್ತಿನಲ್ಲೇ ಸರಿಸಾಟಿಯಿಲ್ಲದ ಅಮೋಘ ಗ್ರಂಥಭಂಡಾರವಾಗಿತ್ತು. ಅವುಗಳಲ್ಲಿ ಕೆಲವೇ ಕೆಲವು ತಾಳೆಗರಿ ಗ್ರಂಥಗಳು ಮತ್ತು ಬಣ್ಣದಲ್ಲಿ ರಚಿಸಿದ ಮರದ ಫಲಕಗಳು ಬೆಂಕಿಯಲ್ಲಿ ಸುಟ್ಟು ಹೋಗದೆ ಉಳಿದಿವೆ - ನಳಂದಾಕ್ಕೆ ದುಷ್ಟ ಸೈನಿಕರು ಆಕ್ರಮಣ ಮಾಡಿದಾಗ, ವಿಶ್ವವಿದ್ಯಾಲಯವನ್ನು ತೊರೆದು ಓಡಿ ಹೋದ ಕೆಲವು ಬೌದ್ಧ ಭಿಕ್ಷುಗಳು ಅವನ್ನು ಹೊತ್ತೊಯ್ದ ಕಾರಣ. ಈಗ ಅವನ್ನು ಯುಎಸ್‌ಎ ದೇಶದ ಲಾಸ್ ಏಂಜಲೀಸ್ ಕೌಂಟಿ ಮ್ಯೂಸಿಯಮ್ ಆಫ್ ಆರ್ಟ್ಸ್ ಮತ್ತು ಟಿಬೇಟಿನ ಯಾರ್ಲಂಗ್ ಮ್ಯೂಸಿಯಮ್‌ನಲ್ಲಿ ಕಾಣಬಹುದು. ಚೀನಾದ ಹೆಸರುವಾಸಿ ಪ್ರವಾಸಿ ಮತ್ತು ಬೌದ್ಧ ಭಿಕ್ಷು ಜ್ಸುವಾನ್‌ಜಂಗ್ ನಳಂದಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಪಾಠ ಮಾಡಿದವರು. ಅವರು ಕ್ರಿ.ಶ. 645ರಲ್ಲಿ 657 ಬೌದ್ಧಗ್ರಂಥಗಳನ್ನು ಚೀನಾಕ್ಕೆ ಸಾಗಿಸಿದ್ದ ಕಾರಣ, ನಳಂದಾದ ಮಹಾನ್ ಗ್ರಂಥಾಲಯದ ಕೆಲವು ಅಮೂಲ್ಯ ಗ್ರಂಥಗಳು ಉಳಿದವು.
ರಕ್ಕಸ ಮನೋಭಾವದ ದಳಪತಿಯೂ ಅವನ ಸೈನಿಕರೂ ನಳಂದಾ ವಿಶ್ವವಿದ್ಯಾಲಯವನ್ನು ನಾಶ ಮಾಡಿದಾಗ ಅಲ್ಲಿದ್ದ ಹಲವರು ಮೃತರಾದರು ಮತ್ತು ಉಳಿದವರು ತೊರೆದು ಹೋದರು. ಅದಾಗಿ ಮುಂದಿನ ಆರು ಶತಮಾನಗಳಲ್ಲಿ ನಳಂದಾದ ಅವಶೇಷಗಳಲ್ಲಿ ಯಾರೂ ಆಸಕ್ತಿ ವಹಿಸಲಿಲ್ಲ. ಕೊನೆಗೆ 1861ರಲ್ಲಿ ಅಲ್ಲಿನ ಅವಶೇಷಗಳು ನಳಂದಾ ವಿಶ್ವವಿದ್ಯಾಲಯದವು ಎಂದು ಗುರುತಿಸಲಾಯಿತು. ತದನಂತರ ಅಲ್ಲಿ ಉತ್ಖನನಗಳನ್ನು ನಡೆಸಲಾಯಿತು. ಆಗ ಪತ್ತೆಯಾದ 13,000 ವಸ್ತುಗಳಲ್ಲಿ 350 ವಸ್ತುಗಳನ್ನು ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಬುದ್ಧನ ಕಂಚಿನ ಮೂರ್ತಿಗಳು, ಶಿಲ್ಪಗಳು ಮತ್ತು ಆನೆದಂತದ ವಸ್ತುಗಳು ಅವುಗಳಲ್ಲಿ ಸೇರಿವೆ.
ಸಾವಿರಾರು ವರುಷಗಳ ಮುಂಚೆಯೇ ನಮ್ಮ ಭಾರತ "ವಿಶ್ವ ಗುರು ದೇಶ”ವಾಗಿತ್ತು ಎಂಬುದಕ್ಕೆ ಮಗದೊಂದು ಪುರಾವೆ ಜಗದ್ವಿಖ್ಯಾತ ನಳಂದಾ ವಿಶ್ವವಿದ್ಯಾಲಯ. ಈಗ ಇನ್ನೊಮ್ಮೆ "ವಿಶ್ವ ಗುರು ದೇಶ”ವಾಗಲು ನಮ್ಮ ರಾಷ್ಟ್ರ ಸನ್ನದ್ಧವಾಗಿರುವಾಗ, ನಳಂದಾದ ಭವ್ಯ ಪರಂಪರೆಯಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ, ಅಲ್ಲವೇ? ನಮ್ಮ ವಿಶ್ವವಿದ್ಯಾಲಯಗಳ ಬಗೆಗಿನ ತಪ್ಪು ಕಲ್ಪನೆಗಳನ್ನೂ ವಿದೇಶೀ ವಿಶ್ವವಿದ್ಯಾಲಯಗಳ ಬಗೆಗಿನ ಭ್ರಾಂತುಗಳನ್ನೂ ತೊರೆದು, ಇನ್ನಾದರೂ ನಮ್ಮ ಜ್ನಾನ ದೇಗುಲಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳೋಣ. ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲಿಕ್ಕಾಗಿ ಲಕ್ಷಗಟ್ಟಲೆ ರೂಪಾಯಿ ವೆಚ್ಚ ಮಾಡುವ ಬದಲಾಗಿ, ಅವನ್ನು ಮೀರಿಸುವಂತಹ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಕಲಿತು, ಅವು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ವಿದ್ಯಾಸಂಸ್ಥೆಗಳಾಗಲು ಸಹಕರಿಸೋಣ.
ಫೋಟೋ: ನಳಂದಾ ವಿಶ್ವವಿದ್ಯಾಲಯದ ಉತ್ಖನನ ಪ್ರದೇಶದ ನೋಟ
(ಎಪ್ರಿಲ್ 2023)
ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ.
ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ ವಿಶ್ವವಿದ್ಯಾಲಯದಲ್ಲಿ 90 ಲಕ್ಷ ಪುಸ್ತಕಗಳ ಬೃಹತ್ ಗ್ರಂಥಾಲಯವಿತ್ತು. ಪೂರ್ವ ಮತ್ತು ಮಧ್ಯ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದ 10,000 ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಔಷಧಿ ಶಾಸ್ತ್ರ, ತರ್ಕ ಶಾಸ್ತ್ರ, ಗಣಿತ ಮತ್ತು ಬೌದ್ಧ ಮತ ತತ್ವಗಳನ್ನು ಆಗಿನ ಕಾಲದ ಶ್ರೇಷ್ಠ ವಿದ್ವಾಂಸರಿಂದ ಅವರು ಅಲ್ಲಿ ಕಲಿಯುತ್ತಿದ್ದರು. ಬೌದ್ಧರ ಧಾರ್ಮಿಕ ಗುರು ದಲೈ ಲಾಮಾ "ನಮ್ಮ (ಬೌದ್ಧರ) ಎಲ್ಲ ಜ್ನಾನವೂ ಬಂದಿರುವುದು ನಳಂದಾದಿಂದ” ಎಂದೊಮ್ಮೆ ಹೇಳಿದ್ದಾರೆ.
ಏಳ್ನೂರು ವರುಷಗಳ ಅವಧಿಯಲ್ಲಿ ಏಷ್ಯಾದ ವಿವಿಧ ದೇಶಗಳಿಂದ ಬಂದ ಜ್ನಾನಾರ್ಥಿಗಳಿಗೆ ನಳಂದಾ ವಿಶ್ವವಿದ್ಯಾಲಯ ಜ್ನಾನದ ಧಾರೆ ಎರೆಯಿತು. ಆ ದೀರ್ಘ ಅವಧಿಯಲ್ಲಿ ನಳಂದಾವನ್ನು ಸರಿಗಟ್ಟುವ ಬೇರೊಂದು ವಿಶ್ವವಿದ್ಯಾಲಯ ಜಗತ್ತಿನಲ್ಲಿ ಬೇರೆಲ್ಲೂ ಇರಲಿಲ್ಲ. ಬೊಲೊಂಗಾ ವಿಶ್ವವಿದ್ಯಾಲಯ ಯುರೋಪಿನ ಅತ್ಯಂತ ಹಳೆಯ ವಿಶ್ವವಿದ್ಯಾಲಯ. ನಳಂದಾ ವಿಶ್ವವಿದ್ಯಾಲಯ ಅದಕ್ಕಿಂತಲೂ ಐನೂರು ವರುಷ ಹಳೆಯದು ಎಂಬುದು ಗಮನಾರ್ಹ. ನಳಂದಾ ವಿಶ್ವವಿದ್ಯಾಲಯದಲ್ಲಿ ಅಲ್ಲಲ್ಲಿ ಮುಕ್ತ ವಾತಾವರಣದಲ್ಲಿ ಕಲಿಕಾ ಸ್ಥಳಗಳಿದ್ದು, ಅವುಗಳ ಸುತ್ತಲೂ ಪ್ರಾರ್ಥನಾ ಮಂದಿರಗಳು ಮತ್ತು ಅಧ್ಯಯನ ಕೊಠಡಿಗಳು ಇದ್ದವು.
ನಳಂದಾ ವಿಶ್ವವಿದ್ಯಾಲಯದ ಪ್ರಚಂಡ ಕೊಡುಗೆಗಳು
ಸಸ್ಯಾಧಾರಿತ ಪ್ರಾಚೀನ ಚಿಕಿತ್ಸಾ ಪದ್ಧತಿ ಆಯುರ್ವೇದವನ್ನು ನಳಂದಾದಲ್ಲಿ ಪ್ರಧಾನವಾಗಿ ಕಲಿಸಲಾಗುತ್ತಿತ್ತು. ಇಲ್ಲಿ ಅದನ್ನು ಕಲಿತವರಿಂದಲೇ ಅದು ಭಾರತದ ಉದ್ದಗಲದಲ್ಲಿ ಪಸರಿಸಿತು. ಥೈಲೆಂಡಿನ ಅಧ್ಯಾತ್ಮಿಕ ಚಿತ್ರಕಲೆಗೆ ಮತ್ತು ಟಿಬೆಟ್ ಹಾಗೂ ಮಲೇಷ್ಯಾದ ಲೋಹದ ಕಲೆಗೆ ನಳಂದಾವೇ ಮೂಲ.
ಎಲ್ಲದಕ್ಕಿಂತ ಮುಖ್ಯವಾಗಿ ಗಣಿತ ಮತ್ತು ಖಗೋಲ ವಿಜ್ನಾನದ ಬೆಳವಣಿಗೆಗೆ ನಳಂದಾ ವಿಶ್ವವಿದ್ಯಾಲಯದ ಕೊಡುಗೆ ವಿಶೇಷ. ಭಾರತದ ಗಣಿತ ಶಾಸ್ತ್ರದ ಪಿತಾಮಹ ಆರ್ಯಭಟ ಆರನೆಯ ಶತಮಾನದಲ್ಲಿ ನಳಂದಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರೆಂದು ನಂಬಲಾಗಿದೆ. "ಶೂನ್ಯವನ್ನು ಒಂದು ಅಂಕೆಯನ್ನಾಗಿ ಪ್ರಪ್ರಥಮ ಬಾರಿಗೆ ಪರಿಚಯಿಸಿದ್ದು ಆರ್ಯಭಟ ಎಂದು ನಾವು ನಂಬುತ್ತೇವೆ. ಈ ಕ್ರಾಂತಿಕಾರಿ ಪರಿಕಲ್ಪನೆ ಗಣಿತದ ಲೆಕ್ಕಾಚಾರಗಳನ್ನು ಸರಳಗೊಳಿಸಿತು ಮತ್ತು ಬೀಜಗಣಿತ ಹಾಗೂ ಕಲನಶಾಸ್ತ್ರದಂತಹ ಸಂಕೀರ್ಣ ಶಾಸ್ತ್ರಗಳ ಅಭಿವೃದ್ಧಿಗೆ ಕಾರಣವಾಯಿತು” ಎನ್ನುತ್ತಾರೆ ಕೊಲ್ಕತಾದ ಗಣಿತದ ಪ್ರೊಫೆಸರ್ ಅನುರಾಧಾ ಮಿತ್ರ. "ಶೂನ್ಯ ಇಲ್ಲದಿದ್ದರೆ ಇಂದಿನ ಕಂಪ್ಯೂಟರುಗಳು ಇರಲು ಸಾಧ್ಯವಿಲ್ಲ” ಎಂದವರು ಬೊಟ್ಟು ಮಾಡಿ ತೋರಿಸುತ್ತಾರೆ. “ವರ್ಗಮೂಲ ಮತ್ತು ಘನಮೂಲಗಳ ಲೆಕ್ಕಾಚಾರ ಮತ್ತು ಗೋಳೀಯ ಜ್ಯಾಮಿತಿಗೆ ತ್ರಿಕೋನಮಿತಿಯ ಫಲನಗಳ ಬಳಕೆಗೆ ಅಪ್ರತಿಮ ಕೊಡುಗೆ ಸಲ್ಲಿಸಿದವರು ಆರ್ಯಭಟ. ಚಂದ್ರನ ಪ್ರಕಾಶಕ್ಕೆ ಸೂರ್ಯನ ಪ್ರತಿಫಲಿತ ಬೆಳಕು ಕಾರಣವೆಂದು ಮೊಟ್ಟಮೊದಲಾಗಿ ತಿಳಿಸಿದ್ದು ಆರ್ಯಭಟ” ಎನ್ನುತ್ತಾರೆ ಅವರು. ಆತನ ಒಳನೋಟಗಳು ಭಾರತದಲ್ಲಿ ಗಣಿತ ಮತ್ತು ಖಗೋಳ ವಿಜ್ನಾನದ ಪ್ರಚಂಡ ಬೆಳವಣಿಗೆಗೆ ಕಾರಣವಾದವು.
ಬೌದ್ಧ ಮತದ ಬೋಧನೆ ಮತ್ತು ತತ್ವಗಳ ಪ್ರಚಾರಕ್ಕಾಗಿ ಚೀನಾ, ಕೊರಿಯಾ, ಜಪಾನ್, ಇಂಡೋನೇಷ್ಯಾ, ಶ್ರೀಲಂಕಾ ಇತ್ಯಾದಿ ದೇಶಗಳಿಗೆ ನಳಂದಾ ವಿಶ್ವವಿದ್ಯಾಲಯವು ವಿದ್ವಾಂಸರನ್ನು ಕಳಿಸುತ್ತಿತ್ತು. ಈ ಸಾಂಸ್ಕೃತಿಕ ವಿನಿಮಯವು ಏಷ್ಯಾ ಖಂಡದಲ್ಲಿ ಬೌದ್ಧ ಮತದ ಪ್ರಸಾರಕ್ಕೆ ಸಹಕಾರಿಯಾಯಿತು.
ದುಷ್ಟ ರಾಜನ ಸೈನ್ಯದ ನೀಚ ಕೃತ್ಯ: ನಳಂದಾ ವಿಶ್ವವಿದ್ಯಾಲಯದ ನಾಶ
1190ರಲ್ಲಿ ಟರ್ಕಿ-ಅಫಘಾನಿಸ್ಥಾನದ ದಳಪತಿ ಭಕ್ತಿಯಾರ್ ಖಿಲ್ಜಿ ಮುನ್ನಡೆಸಿದ ದುಷ್ಟ ಸೈನ್ಯದ ಆಕ್ರಮಣದಿಂದ ನಳಂದಾ ವಿಶ್ವವಿದ್ಯಾಲಯ ನಾಶವಾಯಿತು. ಅಲ್ಲಿನ ಬೌದ್ಧ ಜ್ನಾನ ಕೇಂದ್ರವನ್ನು ನಿರ್ನಾಮ ಮಾಡುವುದೇ ಪೂರ್ವ ಮತ್ತು ಉತ್ತರ ಭಾರತಕ್ಕೆ ಧಾಳಿ ಮಾಡಿದ ಆ ನೀಚ ದಳಪತಿಯ ಉದ್ದೇಶವಾಗಿತ್ತು. ಅವನ ರಾಕ್ಷಸೀ ಪ್ರವೃತ್ತಿಯ ಸೈನಿಕರು ನಳಂದಾ ವಿಶ್ವವಿದ್ಯಾಲಯದಲ್ಲಿ ಸಿಕ್ಕಸಿಕ್ಕಲ್ಲಿ ಹಚ್ಚಿದ ಬೆಂಕಿ ಮೂರು ತಿಂಗಳುಗಳ ಕಾಲ ಉರಿಯುತ್ತಿತ್ತು ಎಂದರೆ ಅವರು ಮಾಡಿದ ಅಪಾರ ಹಾನಿಯನ್ನು ಕಲ್ಪಿಸಿಕೊಳ್ಳಬಹುದು. ಈಗ ನಳಂದಾ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಅಧ್ಯಯನಕ್ಕಾಗಿ 23 ಹೆಕ್ಟೇರ್ ಪ್ರದೇಶದಲ್ಲಿ ಉತ್ಖನನ ನಡೆಸಲಾಗಿದೆ. ಇದು ಶತಮಾನಗಳ ಮುಂಚಿನ ಜಗತ್ತಿನ ಪರಮೋನ್ನತ ವಿಶ್ವವಿದ್ಯಾಲಯದ ಒಂದು ಪುಟ್ಟ ಭಾಗ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನಗಳು ಮತ್ತು ಬೌದ್ಧ ಗುರುಕುಲಗಳು ತುಂಬಿರುವ ಈ ಪ್ರದೇಶದಲ್ಲಿ ನಡೆದಾಡಿದರೆ, ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದ ಭವ್ಯ ಪರಿಸರದಲ್ಲಿ ಸಾವಿರಾರು ಜ್ನಾನದಾಹಿಗಳ ಅಧ್ಯಯನ ಹೇಗಿದ್ದಿರಬಹುದು ಎಂಬುದನ್ನು ಊಹಿಸಬಹುದು.
(ಭಾಗ 2ರಲ್ಲಿ ಮುಂದುವರಿದಿದೆ)
ಫೋಟೋ: ನಳಂದಾ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಈಗಿನ ಸ್ಥಿತಿ
ಪ್ರತಿ ವರುಷ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲ್ಪಡುತ್ತಿದ್ದು, ಇದು "ವಿಶ್ವ ಗುರು"ವಾಗಿ ನಮ್ಮ ದೇಶ ಭಾರತದ ಮಗದೊಂದು ಆಯಾಮ. ಕಳೆದ ವರುಷ ಭಾರತದಲ್ಲಿ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾದವರು ಲಕ್ಷಗಟ್ಟಲೆ ಜನರು ಎಂಬುದು ನಮಗೆಲ್ಲರಿಗೂ ಅಭಿಮಾನದ ಸಂಗತಿ.
2022ರಲ್ಲಿ ಮೈಸೂರು ಅರಮನೆ ಆವರಣದಲ್ಲಿ ಮುಂಜಾನೆ ಜರಗಿದ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ಅಲ್ಲಿ ಅವರ ಜೊತೆ ಯೋಗಾಸನಗಳನ್ನು ಮಾಡಿದ ಜನರ ಸಂಖ್ಯೆ 15 ಸಾವಿರ. ಆ ಸಂದರ್ಭದಲ್ಲಿ ಪ್ರಧಾನಿಯವರು ಹೇಳಿದ ಒಂದು ಮಾತು ಯೋಗದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತದೆ: "ಯೋಗ ನಮ್ಮೆಲ್ಲರಿಗೂ ಸಮಸ್ಯಾ ಪರಿಹಾರಕ ಆಗಬಲ್ಲದು.”
ಭಾರತದ ಯೋಗಕ್ಕೆ ಸುಮಾರು 5000 ವರುಷಗಳ ಪರಂಪರೆ. ಇದು ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧಿಸಲು ಅತ್ಯಂತ ಪರಿಣಾಮಕಾರಿ ಆಚರಣೆ. ಆದ್ದರಿಂದಲೇ 11 ಡಿಸೆಂಬರ್ 2014ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಇದರಿಂದಾಗಿ ಭಾರತದ ಯೋಗವು ಮಾನವರೆಲ್ಲರ ಆರೋಗ್ಯ ರಕ್ಷಣೆ ಹಾಗೂ ಯೋಗಕ್ಷೇಮ ಸಾಧನೆಯ ಸೂತ್ರವೆಂದು ಜಾಗತಿಕ ಆಂದೋಲನದ ಸ್ವರೂಪ ಪಡೆಯಿತು. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಸಂಗತಿ.
ಯೋಗದ ಬಗ್ಗೆ ನಾವು ತಿಳಿದಿರಲೇ ಬೇಕಾದ ಇನ್ನೂ ಹಲವು ಸಂಗತಿಗಳಿವೆ. ಯೋಗ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ಇದು ಸಂಸ್ಕೃತದ “ಯುಜ್" ಎಂಬುದರಿಂದ ಉತ್ಪತ್ತಿಯಾದ ಪದ. ಕೂಡಿಸು ಮತ್ತು ಮನಸ್ಸನ್ನು ನಿರ್ದೇಶಿಸಿ ಕೇಂದ್ರೀಕರಿಸು ಎಂಬ ಅರ್ಥಗಳನ್ನು ಇದು ಹೊಮ್ಮಿಸುತ್ತದೆ. ಜ್ನಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗ - ಇವು ಯೋಗದ ನಾಲ್ಕು ವಿಧಗಳು.
ಜೀವಾತ್ಮವನ್ನು ಪರಮಾತ್ಮನೆಡೆಗೆ ಒಯ್ಯುತ್ತಾ ಆತ್ಮಸಾಕ್ಷಾತ್ಕಾರಕ್ಕೆ ಸಾಧನವಾಗುವುದೇ ಯೋಗದ ಪ್ರಧಾನ ಉದ್ದೇಶ. ಇದನ್ನೇ ನಮ್ಮ ಹಿರಿಯರು ಸರಳ ಭಾಷೆಯಲ್ಲಿ ಹೀಗೆಂದು ತಿಳಿಸಿದ್ದಾರೆ:
-ದೇಹದ ಉನ್ನತಿಗಾಗಿ ಯೋಗಾಸನಗಳ ಸಾಧನೆ ಮಾಡು.
-ಉಸಿರಿನ ಉನ್ನತಿಗಾಗಿ ಪ್ರಾಣಾಯಾಮದ ಸಾಧನೆ ಮಾಡು.
-ಆತ್ಮದ ಉನ್ನತಿಗಾಗಿ ಧ್ಯಾನದ ಸಾಧನೆ ಮಾಡು.
-ಆತ್ಮಸಾಕ್ಷಾತ್ಕಾರಕ್ಕಾಗಿ ಪರಮಾತ್ಮನಲ್ಲಿ ಸಮರ್ಪಣಾ ಭಾವದಿಂದ ಪ್ರಾರ್ಥನೆ ಮಾಡು.
ಆದರೆ ನೆನಪಿರಲಿ. ಯೋಗ ಎಂಬುದು ಅತ್ಯಂತ ಗಹನವಾದ ಶಾಸ್ತ್ರ. ಹಲವರು ಯೋಗ ಅಂದರೆ ಕೇವಲ ಯೋಗಾಸನಗಳು ಎಂದು ಭಾವಿಸಿದ್ದಾರೆ. ಯೋಗಸೂತ್ರಗಳನ್ನು ದಾಖಲಿಸಿರುವ ಮಹಾಮುನಿ ಪತಂಜಲಿ ಯೋಗದಲ್ಲಿ ಎಂಟು ಮೆಟ್ಟಲುಗಳಿವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅವನ್ನೇ ಒಟ್ಟಾಗಿ "ಅಷ್ಟಾಂಗ ಯೋಗ" ಎನ್ನುವುದು. ಅವು:
ಯಮ, ನಿಯಮ, ಆಸನ, ಪ್ರಾಣಾಯಾಮ,
ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
ಕೆಲವು ತಿಂಗಳು ಕೇವಲ ಯೋಗಾಸನಗಳನ್ನು ಅಭ್ಯಾಸ ಮಾಡಿ, “ಯೋಗ"ದ ಇತರ ಏಳು ಹಂತಗಳನ್ನು ನಿರ್ಲಕ್ಷಿಸಿ, ಕೊನೆಗೆ “ಯೋಗದಿಂದ ಏನೂ ಪ್ರಯೋಜನವಿಲ್ಲ” ಎನ್ನುವವರು "ಯೋಗ" ಎಂದರೇನು? ಎಂಬುದನ್ನೇ ಅರ್ಥ ಮಾಡಿ ಕೊಂಡಿರುವುದಿಲ್ಲ. “ಯೋಗ”ದ ಪ್ರಯೋಜನ ಅನುಭವಕ್ಕೆ ಬರಬೇಕಾದರೆ, ಪ್ರತಿ ದಿನವೂ ಪ್ರತಿ ಕ್ಷಣವೂ ಆ ಎಂಟು ಹಂತಗಳ ಅನುಸಾರವೇ ಬದುಕಬೇಕಾಗುತ್ತದೆ.
“ಯೋಗ"ದ ಎಂಟೂ ಹಂತಗಳ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹಲವು ವರುಷಗಳ ಅಧ್ಯಯನ ಅಗತ್ಯ. ಉದಾಹರಣೆಗೆ, ಪತಂಜಲಿ ಬರೆದಿರುವ 195 ಯೋಗ ಸೂತ್ರಗಳಲ್ಲಿ ಎರಡನೆಯದು: "ಯೋಗಶ್ಚಿತ್ತವೃತ್ತಿ ನಿರೋಧಃ” ಅಂದರೆ, ನಮ್ಮ ಮನಸ್ಸು ಒಂದಲ್ಲ ಒಂದು ಚಟುವಟಿಕೆಯಲ್ಲಿ (ಚಿತ್ತವೃತ್ತಿ) ಮುಳುಗಿರುತ್ತದೆ. ಹಿಂದೆ ಆದ ಘಟನೆಗಳನ್ನು ನೆನಪು ಮಾಡಿಕೊಳ್ಳುವುದು, ಈಗಿನ ಕೆಲಸಕಾರ್ಯಗಳ ಬಗ್ಗೆ ಚಿಂತಿಸುವುದು, ಮುಂದೆ ಆಗಬಹುದಾದ ಘಟನೆಗಳ ಬಗ್ಗೆ ಯೋಚಿಸುವುದು. ಇವೆಲ್ಲವನ್ನು ನಿವಾರಿಸಲು ಯೋಗದ ಆಚರಣೆಗಳನ್ನು ರೂಪಿಸಲಾಗಿದೆ.
ಅಂತೆಯೇ, ಆರನೆಯ ಸೂತ್ರದಲ್ಲಿ ಪತಂಜಲಿ ಗುರುತಿಸಿರುವ ಐದು ಚಿತ್ತವೃತ್ತಿಗಳು: “ಪ್ರಮಾಣ ವಿಪರ್ಯಾಯ ವಿಕಲ್ಪ ನಿದ್ರಾ ಸ್ಮೃತಿ” ಇದರ ಬಗ್ಗೆ ಒಂದು ವರುಷ ಅಧ್ಯಯನ ನಡೆಸಿದ ನಂತರವೂ “ಇನ್ನಷ್ಟು ತಿಳಿಯಲಿಕ್ಕಿದೆ” ಎಂಬ ಭಾವ ನಿಮಲ್ಲಿ ಬೆಳೆಯುತ್ತದೆ ಹೊರತು ಈ ಸೂತ್ರ ಅರ್ಥವಾಯಿತು ಎನ್ನುವಂತಿಲ್ಲ. ಹಾಗಿದ್ದರೆ 195 ಯೋಗ ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಎಂತಹ ಪರಿಶ್ರಮ,ತಾಳ್ಮೆ ಹಾಗೂ ಶ್ರದ್ಧೆ ಅಗತ್ಯ ಎಂದು ಚಿಂತಿಸಿ. ಆ ಅಧ್ಯಯನಕ್ಕೆ ಅಗತ್ಯವಾದ ಸಾವಿರಾರು ಪುಸ್ತಕಗಳು ಹಲವು ಭಾಷೆಗಳಲ್ಲಿ ಲಭ್ಯ.
“ಯೋಗಾಸನ"ಗಳ ಬಗ್ಗೆ ಸಮಗ್ರವಾಗಿ ತಿಳಿಯ ಬೇಕೆಂದರೆ, ಪ್ರಸಿದ್ಧ ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ ಬರೆದಿರುವ "ಯೋಗ ದೀಪಿಕಾ" ಪುಸ್ತಕವನ್ನು ಅಧ್ಯಯನ ಮಾಡಬಹುದು. ಮುಖ್ಯ ಆಸನಗಳ ಫೋಟೋಗಳ ಸಹಿತ ಆಸನಗಳನ್ನು ಮಾಡುವ ವಿಧಾನ, ಅದರ ಪ್ರಯೋಜನಗಳು ಎಲ್ಲವನ್ನು ವಿವರವಾಗಿ ತಿಳಿಸುವ ಆ ಪುಸ್ತಕ ಹಲವು ಭಾಷೆಗಳಲ್ಲಿ ಲಭ್ಯ. ಹಾಗೆಯೇ ಯೋಗಾಸನಗಳ ಭಂಗಿಗಳ ಕಲಿಕೆಗಾಗಿ “ಆಯುರ್ ವಿಕಿ” ಎಂಬ ಉಚಿತ ಆಪ್ ಡೌನ್ಲೋಡ್ ಮಾಡಿ, ಅದರಲ್ಲಿರುವ ಯೋಗಾಸನಗಳನ್ನು ಮಾಡುವುದನ್ನು ತೋರಿಸುವ ರೇಖಾಚಿತ್ರಗಳಿಂದ ಮಾಹಿತಿ ಪಡೆಯಬಹುದು.
ಆಸನಗಳ ಬಗ್ಗೆಯೂ ನಾವು ತಿಳಿಯಬೇಕಾದ್ದು ಬಹಳಷ್ಟಿದೆ. ಉದಾಹರಣೆಗೆ ಶವಾಸನ. ಇದು ಅತ್ಯಂತ ಸುಲಭವಾದ ಆಸನ ಅನಿಸುತ್ತದೆ. ಯಾಕೆಂದರೆ ಶವದಂತೆ ಮಲಗಿದರಾಯಿತು. ಆದರೆ, ಶವಾಸನ ಮಾಡುವಾಗ ಕೆಲವರು ತಪ್ಪುಗಳನ್ನು ಮಾಡುತ್ತಾರೆ! ಶವಾಸನದಲ್ಲಿರುವಾಗ, ನಾಲಗೆ ನೇರವಾಗಿ ಇಟ್ಟುಕೊಳ್ಳಬಾರದು; ಬಾಯಿಯೊಳಗೆ ನಾಲಗೆ ಮುದ್ದೆಯಾಗಿ ಬಿದ್ದುಕೊಂಡಿರಬೇಕು. ಶವಾಸನದಲ್ಲಿ ಗಮನಿಸಬೇಕಾದ ಎರಡನೆಯ ಸಂಗತಿ: ಉಸಿರಾಡುವಾಗ ಹೊಟ್ಟೆಯ ಏರುಪೇರು ಇರಬಾರದು. ಕೆಲವೇ ನಿಮಿಷಗಳಲ್ಲಿ ಆ ಏರುಪೇರು ಕೆಲವೇ ಮಿಲಿಮೀಟರುಗಳಿಗೆ ಸೀಮಿತವಾಗಬೇಕು. ಮೂರನೆಯದಾಗಿ, ಶವಾಸನದಲ್ಲಿ ಇರುವಾಗ ಮನಸ್ಸು “ಜಗತ್ತಿನ ಸಂಚಾರ”ಕ್ಕೆ ಹೊರಡಬಾರದು; ಬದಲಾಗಿ, ಶರೀರದ ಪ್ರತಿಯೊಂದು ಅಂಗಕ್ಕೂ “ನಿರಾಳವಾಗಿರು" ಎಂಬ ಸ್ವಸಂದೇಶ ಕೊಟ್ಟ ಬಳಿಕ, ಕೇವಲ ಉಸಿರಾಟ ಗಮನಿಸುತ್ತಾ, ಕ್ಷಣದಿಂದ ಕ್ಷಣಕ್ಕೆ ಇನ್ನಷ್ಟು ನಿರಾಳವಾಗಬೇಕು.
ಯೋಗಾಸನಗಳನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವವರು, ತಾವು ಮಾಡಿದ್ದು ಸರಿಯಾಗಿದೇಯೇ ಇಲ್ಲವೇ? ಎಂಬುದನ್ನು ಪರೀಕ್ಷೆ ಮಾಡಲೊಂದು ಸುಲಭದ ವಿಧಾನವಿದೆ: ಯೋಗಾಸನ ಮಾಡಿದ ನಂತರ ದೇಹ ಮತ್ತು ಮನಸ್ಸಿನಲ್ಲಿ ಹೆಚ್ಚಿನ ಚೈತನ್ಯ ಅನುಭವಕ್ಕೆ ಬರುತ್ತಿದೆಯೇ? ಎಂದು ಗಮನಿಸುವುದು. ಹಾಗಾಗಿಲ್ಲ ಎಂದಾದರೆ, ಯೋಗಾಸನಗಳನ್ನು ಮಾಡಿದ್ದು ಸರಿಯಾಗಿಲ್ಲ ಎಂದರ್ಥ. ಅದಕ್ಕಾಗಿಯೇ, ಯೋಗಾಸನಗಳನ್ನು ಗುರುವಿನಿಂದಲೇ ಕಲಿಯಬೇಕೆಂಬ ನಿಯಮ.
ನಮ್ಮ ಬದುಕು ಸಂಪನ್ನವಾಗಬೇಕಾದರೆ, "ಯೋಗ" ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು, ಅಲ್ಲವೇ?
(ಮಾರ್ಚ್ 2023)
“ಮಂಕುತಿಮ್ಮನ ಕಗ್ಗ”ದ ಇನ್ನೂ ಕೆಲವು ಮುಕ್ತಕಗಳಲ್ಲಿ "ದೇವರು" ಎಂಬ ಪರಿಕಲ್ಪನೆಯ ಇನ್ನಷ್ಟು ಆಯಾಮಗಳನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಪ್ರಸ್ತುತಪಡಿಸುತ್ತಾರೆ:
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ
ನಾನೆನುವ ಚೇತನದಿ ರೂಪುಗೊಂಡಿಹುದೋ?
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ
ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ
ಈ ಮುಕ್ತಕದಲ್ಲಿ ಅವರು ಎತ್ತಿರುವ ಮೂಲಭೂತ ಪ್ರಶ್ನೆ: ಆಕಾಶದಿಂದ ಆಚೆಗೆ ಇರುವ ವಿರಾಟ್ ಶಕ್ತಿ (ವಿಶ್ವಸತ್ತ್ವ) ತಾನು ಈ ಪ್ರಪಂಚಕ್ಕೆ (ಇಳೆಗೆ) ಇಳಿದು, ನಾನು ಎನ್ನುವ ಚೇತನವಾಗಿ ರೂಪುಗೊಂಡಿದೆಯೋ ಅಥವಾ "ನಾನು" ಎನ್ನುವ ಕೇಂದ್ರದಿಂದ ಹೊರಟ ಸತ್ತ್ವದ ಪರಿಧಿಯು ಆಕಾಶದಾಚೆಗೆ ಹಬ್ಬಿದೆಯೋ?
ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು
ಬಿಳಲೂರೆಗಳ ಲೆಕ್ಕಕ್ಕಿಲ್ಲ ಕೊನೆ ಮೊದಲು
ಬೆಳೆವುದೀ ಪರಿಯರಳಿಮರದಂತೆ ನರ ಕೋಟಿ
ನಲಿವನದರಲಿ ಬೊಮ್ಮ - ಮಂಕುತಿಮ್ಮ
ತಲೆಯ ಮೇಲೆ ಬೇರು, ಕೆಳಗಡೆ ಕೊಂಬೆ, ಎಲೆ ಮತ್ತು ಚಿಗುರು. ಬಿಳಲು ಮತ್ತು ಊರೆಗಳಂತೂ ಲೆಕ್ಕವಿಲ್ಲದಷ್ಟು. ಇವುಗಳಿಗೆ ಕೊನೆಯೂ ಇಲ್ಲ, ಮೊದಲೂ ಇಲ್ಲ. ಹೀಗೆ ಅರಳಿ ಮರ ಬೆಳೆದಂತೆ, ನರಕೋಟಿಯೂ ಬೆಳೆಯುತ್ತಲೇ ಇರುತ್ತದೆ. ಪರಬ್ರಹ್ಮನು ಇದರಲ್ಲಿ ನಲಿಯುತ್ತಾನೆ. ಈ ಮುಕ್ತಕದ ಅರ್ಥಕ್ಕೆ ಪೂರಕವಾದ ಭಾವ ಮುಂಚಿನ (“ಬಾನಾಚೆಯಿಂ ….) ಮುಕ್ತಕದಲ್ಲಿದೆ. ಮರಕ್ಕೆ ಬೇರು ಸತ್ವವನ್ನು ತುಂಬುತ್ತದೆ; ಹಾಗೆಯೇ ಬ್ರಹ್ಮಾಂಡಕ್ಕೆ ಸತ್ವವನ್ನು ತುಂಬುವ ಅವ್ಯಕ್ತ ಶಕ್ತಿ ಬಾನಾಚೆಯಲ್ಲಿದೆ. ಅದು ತನ್ನ ಲೀಲೆಗಾಗಿ ಸೃಷ್ಟಿಸಿರುವ ಬ್ರಹ್ಮಾಂಡದ ಒಂದು ತುಣುಕು ಈ ಭೂಮಿ. ಇದರಲ್ಲಿರುವ ಜೀವಿಗಳು, ಜೀವಜಾಲಗಳು ಅಸಂಖ್ಯ. ಈ ಲೀಲೆಯೊಳಗೆ ಆ ಅವ್ಯಕ್ತ ಶಕ್ತಿ ಲೀನವಾಗಿದ್ದು, ಕ್ಷಣಕ್ಷಣವೂ ನಲಿಯುತ್ತಿದೆ.
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ
ಬೀಜದಿಂದ ಮರ ಬೆಳೆಯುತ್ತದೆ; ಮರವನ್ನು ಹೆತ್ತ ಬೀಜ ಇಲ್ಲವಾಗಿ, ಮರ ವಿಸ್ತರಿಸುತ್ತದೆ. ಹಾಗೆಯೇ, ಸೃಷ್ಟಿ ತನ್ನ ಮೂಲವಾದ ಅವ್ಯಕ್ತ ಶಕ್ತಿಯನ್ನು ಮರೆಮಾಚಿ ಮೆರೆಯುತ್ತಿದೆ - ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಹಾಲನ್ನು ಸುರಿದಾಗ, ನೊರೆ ಉಕ್ಕಿ ಬಂದು ಹಾಲು ಮರೆಯಾಗುವಂತೆ.
ಈ ಹಿನ್ನೆಲೆಯಲ್ಲಿ, ಜ್ನಾನದ ಸಾಗರಗಳಾದ ಉಪನಿಷತ್ತುಗಳು ಯಾವ ತತ್ವಜ್ನಾನವನ್ನು ಪ್ರತಿಪಾದಿಸುತ್ತವೆ? ಎಂಬುದನ್ನು ಗಮನಿಸುವುದು ಅವಶ್ಯ. ಅವುಗಳಲ್ಲಿ ವ್ಯಕ್ತವಾಗಿರುವುದು ಆಸ್ತಿಕತೆಯೇ ಅಥವಾ ನಾಸ್ತಿಕತೆಯೇ ಎಂದು ನಿರ್ಣಯಿಸುವುದು ಸುಲಭವಲ್ಲ. ಅವುಗಳ ನೆಲೆ ಆಸ್ತಿಕವಲ್ಲ ಯಾಕೆಂದರೆ ಅವು ಯಾವ ದೇವರನ್ನೂ ಆರಾಧಿಸುವುದಿಲ್ಲ. ಅವುಗಳ ನೆಲೆ ನಾಸ್ತಿಕವೂ ಅಲ್ಲ ಯಾಕೆಂದರೆ ಅವುಗಳಲ್ಲಿ ಬ್ರಹ್ಮದ ಪ್ರಸ್ತಾಪವಿದೆ. ಆದರೆ ಬ್ರಹ್ಮನನ್ನು ದೇವರು ಎನ್ನುವಂತಿಲ್ಲ ( ಬ್ರಹ್ಮನ ದೇವಸ್ಥಾನ ವಿರಳಾತಿ ವಿರಳ.)
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕೆ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ
ಈ ಸೃಷ್ಟಿಯ ಕುರಿತಾಗಿ ನಾವೆಷ್ಟು ಚಿಂತನೆ ನಡೆಸಿದರೂ ನಮ್ಮಲ್ಲಿ ಶಂಕೆಯೇ ಬೆಳೆಯುತ್ತದೆ. ಇದರಲ್ಲೇನಾದರೂ ಸಿದ್ಧಾಂತವಿದೆಯೇ ಎಂದು ಬೆದಕುತ್ತಾ ಹೋದರೆ, ನಾವು ಕಷ್ಟ ಪಡುತ್ತಲೇ ಇರಬೇಕೆಂಬುದು ಬ್ರಹ್ಮವಿಧಿಯೆನೋ? ಅಷ್ಟೇ ನಮ್ಮಯ ಪಾಡು ಎನ್ನುತ್ತಾರೆ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ.
ಯಾಕೆಂದರೆ, ದೇವರು ಇದ್ದಾನೆ ಎನ್ನುವವರು ದೇವರನ್ನು ಕಂಡಿಲ್ಲ. ದೇವರು ಇಲ್ಲ ಎನ್ನುವವರು ಈ ಸೃಷ್ಟಿಗೆ ಕಾರಣ ಯಾವುದು ಎಂಬುದನ್ನು ಸಾಬೀತು ಪಡಿಸಿಲ್ಲ. ಹೀಗಿರುವಾಗ, ಅಂತಿಮವಾಗಿ ನಾವು ಯಾವುದಕ್ಕೆ ಶರಣಾಗಬೇಕು ಎಂಬುದನ್ನು “ಮಂಕುತಿಮ್ಮನ ಕಗ್ಗ”ದ ಕೊನೆಯ (945ನೆಯ) ಮುಕ್ತಕದಲ್ಲಿ ಡಿ.ವಿ. ಗುಂಡಪ್ಪನವರು ಹೀಗೆ ನಿವೇದಿಸಿದ್ದಾರೆ:
ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರಪ್ರಶಾಂತಿಯಲಿ
ಶರಣು ವಿಶ್ವಾತ್ಮದಲಿ - ಮಂಕುತಿಮ್ಮ
ಜೀವನದ ರಹಸ್ಯಕ್ಕೆ, ಸತ್ವಕ್ಕೆ, ಜೀವನವು ಹೂವಿನಂತೆ ಅರಳಲು ಮಾಡುವ ಪ್ರಯತ್ನಕ್ಕೆ, ಎಲ್ಲದಕ್ಕಿಂತ ಮುಖ್ಯವಾಗಿ ಅಂತರಾತ್ಮದ ಗಂಭೀರ ಪ್ರಶಾಂತಿಗೆ ಹಾಗೂ ವಿಶ್ವಾತ್ಮಕ್ಕೆ ಶರಣಾಗು; ಮೂಢತನ ತೊರೆದು ಜ್ನಾನದ ಬೆಳಕಿನತ್ತ ನಡೆ ಎಂದು ನಮಗೆಲ್ಲರಿಗೂ ದಾರಿ ತೋರಿದ್ದಾರೆ.
(ಜನವರಿ 2023 ಮತ್ತು ಫೆಬ್ರವರಿ 2023)
ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ" ಬದುಕಿನ ಹಲವು ಪ್ರಶ್ನೆಗಳಿಗೆ ಅಧ್ಯಾತ್ಮದ ನೆಲೆಯಲ್ಲಿ ಉತ್ತರಗಳನ್ನು ಒಳಗೊಂಡಿರುವ ಕನ್ನಡದ ಜ್ನಾನ ಖಜಾನೆ.
ಮನುಷ್ಯನನ್ನು ಯಾವಾಗಲೂ ಕಾಡುವ ನಿಗೂಢ ಪ್ರಶ್ನೆ: ದೇವರು ಇದ್ದಾನೆಯೇ? ಎಂಬುದು. ದೇವರು ಇದ್ದಾನೆ ಎನ್ನುವವರು ಆಸ್ತಿಕರು. ದೇವರು ಇಲ್ಲ ಎನ್ನುವವರು ನಾಸ್ತಿಕರು. ಈ ಎರಡೂ ವರ್ಗದವರಿಗೆ ಅದು ಅವರವರ ನಂಬಿಕೆ.
ಈ ಹಿನ್ನೆಲೆಯಲ್ಲಿ, “ಮಂಕುತಿಮ್ಮನ ಕಗ್ಗ”ದ ಹಲವು ಮುಕ್ತಕಗಳು ದೇವರ ಬಗ್ಗೆ ಡಿ.ವಿ.ಜಿ.ಯವರ ನಿಲುವನ್ನು ಸೂಚಿಸುವ ಪರಿ ಅನನ್ಯ. ಮೊದಲ ಐದು ಮುಕ್ತಕಗಳು ದೇವರ ಕುರಿತಾದ ಅವರ ಮನೋಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ.
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ
ಆವುದನು ಕಾಣದೊಡಮುಳ್ತಿಯಿಂ ನಂಬಿಹುದೊ
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ
ಯಾವುದನ್ನು ಕಾಣದಿದ್ದರೂ ಅದನ್ನು ಶ್ರೀ ವಿಷ್ಣು, ವಿಶ್ವಕ್ಕೆ ಆದಿ ಮತ್ತು ಮೂಲನಾಗಿರುವವನು, ಮಾಯಾಲೋಲನು, ದೇವರು, ಸರ್ವರ ಈಶ ಮತ್ತು ಪರಬ್ರಹ್ಮ - ಈ ಎಲ್ಲ ನಾಮಾವಳಿಗಳಿಂದ ಜನರು ಪ್ರೀತಿಯಿಂದ (ಅಳ್ತಿಯಿಂ) ನಂಬಿ ನಡೆಯುತ್ತಿದ್ದಾರೆ. ಇದೊಂದು ವಿಚಿತ್ರ. ಅದಕ್ಕೆ ನಮಿಸು ಎನ್ನುತ್ತಾರೆ ಮೊದಲನೆಯ ಮುಕ್ತಕದಲ್ಲಿ ಡಿ.ವಿ.ಜಿ.ಯವರು.
ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ
ಜೀವವಿರುವ ಹಾಗೂ ಜಡವಾಗಿರುವ ಈ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು (ಒಳನೆರೆದು) ಇದೆ; ನಮ್ಮೆಲ್ಲರ ಅರಿವಿಗೆ ಬರುವ ಅದು ಭಾವಕ್ಕೆ ಸಿಗುವುದಿಲ್ಲ, ಅಳತೆಗೆ ಎಟಕುವುದಿಲ್ಲ. ಆ ವಿಶೇಷಕ್ಕೆ ತಲೆಬಾಗು (ಮಣಿ) ಎಂಬುದು ಎರಡನೆಯ ಮುಕ್ತಕದಲ್ಲಿ ಡಿ.ವಿ.ಜಿ.ಯವರ ನುಡಿ.
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ
ಮಹಿಮೆಯಿಂ ಜಗವಾಗಿ ಜೀವವೇಷದಲಿ
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ
ಗಹನ ತತ್ವಕೆ ಶರಣೊ - ಮಂಕುತಿಮ್ಮ
ಒಂದು ವಸ್ತು ಇದೆಯೋ ಇಲ್ಲವೋ ನಮಗೆ ತಿಳಿಯಲಾಗದು, ನಿಜ. ಅದು ತನ್ನ ಮಹಿಮೆಯಿಂದ ಜಗತ್ತು ಎಂದಾಗಿ ಜೀವಿಗಳ ವೇಷದಲ್ಲಿ ವಿಹರಿಸುತ್ತಿದೆ. ಅದು ಒಳ್ಳೆಯದು (ಅದು ಒಳ್ಳಿತು) ಎಂಬುದು ಸತ್ಯ(ನಿಸದ)ವಾದರೆ, ಆ ಗಹನವಾದ ತತ್ವಕ್ಕೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ.ಯವರು ಈ ಮೂರನೆಯ ಮುಕ್ತಕದಲ್ಲಿ.
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ನಾನ ಪ್ರಮಾಣವೇಂ? - ಮಂಕುತಿಮ್ಮ
ನಾಲ್ಕನೆಯ ಮುಕ್ತಕದಲ್ಲಿ ಸರಳ ಆದರೆ ಗಹನವಾದ ಪ್ರಶ್ನೆಗಳ ಮೂಲಕ ನಮ್ಮನ್ನು ದೇವರ ಬಗ್ಗೆ ಜಿಜ್ನಾಸೆಗೆ ಹಚ್ಚುತ್ತಾರೆ ಡಿ.ವಿ.ಜಿ.ಯವರು: ನಮ್ಮ ಜೀವನದ ಅರ್ಥವೇನು? ಈ ಪ್ರಪಂಚದ ಅರ್ಥವೇನು? ಇಲ್ಲಿನ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು? ನಮಗೆ ಕಾಣದಿರುವುದು ಇಲ್ಲಿ ಏನಾದರೂ ಇದೆಯೇ? ಅದೇನು? ಅದಕ್ಕೆ ಜ್ನಾನ ಪ್ರಮಾಣವೇನು? ಅಥವಾ ಅದು ನಮ್ಮ ಜ್ನಾನವ್ಯಾಪ್ತಿಯನ್ನು ಮೀರಿದ್ದುದೋ?
ದೇವರೆಂಬುದದೇನು ಕಗ್ಗತ್ತಲೆಯೆ ಗವಿಯೆ?
ನಾನರಿಯಲಾರೆಲ್ಲದರೊಟ್ಟು ಹೆಸರೆ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ
ದೇವರು ಎಂಬುದು ಅದೇನು? ಅದು ಕಗ್ಗತ್ತಲೆ ತುಂಬಿದ ಗುಹೆಯೇ? ಅಥವಾ ನಮಗೆ ತಿಳಿಯದಿರುವ ಎಲ್ಲವನ್ನೂ ಒಟ್ಟುಗೂಡಿಸಿ, ಅದಕ್ಕೆ "ದೇವರು" ಎಂಬ ಹೆಸರಿಟ್ಟು ಕರೆಯುತ್ತಿದ್ದೇವೆಯೇ? ಈ ಜಗತ್ತನ್ನು ಕಾಪಾಡುವವನೊಬ್ಬ ಇರುವುದಾದಲ್ಲಿ ಈ ಜಗತ್ತಿನ ಕಥೆ ಏಕೆ ಹೀಗಿದೆ? ಸಾವಿನ ಅರ್ಥವೇನು? ಹುಟ್ಟಿನ ಅರ್ಥವೇನು? ಹೀಗೆ ಐದನೆಯ ಮುಕ್ತಕದಲ್ಲಿಯೂ ಮನುಷ್ಯನನ್ನು ಅನಾದಿ ಕಾಲದಿಂದ ಕಾಡುವ ಪ್ರಶ್ನೆಗಳನ್ನು ಮುಂದಿಡುತ್ತಾರೆ ಡಿ.ವಿ.ಜಿ.ಯವರು.
(ಭಾಗ 2ರಲ್ಲಿ ಮುಂದುವರಿದಿದೆ)
ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು ಯುದ್ಧ ಮಾಡಲಾರೆ” ಎನ್ನುತ್ತಾನೆ.
ಆಗ ಅರ್ಜುನನಿಗೆ ಬದುಕಿನ ಪರಮಪಾಠವನ್ನು ಶ್ರೀಕೃಷ್ಣ ರಣರಂಗದಲ್ಲಿಯೇ ಉಪದೇಶಿಸುತ್ತಾನೆ. ಅವನ ಧರ್ಮ ಏನೆಂಬುದನ್ನು ಶ್ರೀಕೃಷ್ಣ ತಿಳಿಸುತ್ತಾನೆ. ಧರ್ಮದ ರಕ್ಷಣೆಗಾಗಿ ಅವನು ಅಧರ್ಮಿಗಳ ವಿರುದ್ಧ ಯುದ್ಧ ಮಾಡಲೇ ಬೇಕೆಂದು ವಿವರಿಸುತ್ತಾನೆ. ಇದುವೇ ಹದಿನೆಂಟು ಅಧ್ಯಾಯಗಳಲ್ಲಿರುವ “ಭಗವದ್ಗೀತೆ". ಇದರ ಸಾರವನ್ನು ತಿಳಿದುಕೊಳ್ಳೋಣ.
ನಿನ್ನ ಕಾಯಕವನ್ನು ಪ್ರೀತಿಸು
ಕಾಯಕ ಮಾಡುವಾಗ, ಅದರ ಫಲದ ಬಗ್ಗೆ ಯೋಚನೆ ಮಾಡಬೇಡ; ಬದಲಾಗಿ ಅದರ ಪ್ರಕ್ರಿಯೆಯ ಮೇಲೆ ಗಮನ ಹರಿಸು. ಕಾಯಕದ ಫಲಕ್ಕಿಂತಲೂ ಕಾಯಕವೇ ನಿನಗೆ ಸಂತೋಷ ನೀಡಬೇಕು. ಕಾಯಕದ ಫಲವೇ ನಿನ್ನ ಕಾಯಕದ ಉದ್ದೇಶ ಆಗಬಾರದು. ಪ್ರಯಾಣದ ಗುರಿಗಿಂತಲೂ ಹೆಚ್ಚಿನ ಸಂತೋಷವನ್ನು ಪ್ರಯಾಣದಿಂದಲೇ ಪಡೆದುಕೋ. ಎಲ್ಲ ಮಹಾ ಕಲಾವಿದರು, ಯೋಧರು, ವಿಜ್ನಾನಿಗಳು ಈ ಪಥವನ್ನು ಅನುಸರಿಸಿ ಮಹತ್ತಾದುದನ್ನು ಸಾಧಿಸಿದರು.
ನಿನ್ನ ಭಾವನೆಗಳನ್ನು ನಿಯಂತ್ರಿಸು
ಭಗವದ್ಗೀತೆಯು ಭಾವನೆಗಳನ್ನು ಮತ್ತು ಮೋಹವನ್ನು ನಿಯಂತ್ರಿಸುವ ಬಗ್ಗೆ ಮತ್ತೆಮತ್ತೆ ತಿಳಿವಳಿಕೆ ನೀಡುತ್ತದೆ. ಗಾಬರಿ ಮತ್ತು ಮೋಹ ನಿನ್ನ ಶತ್ರುಗಳೆಂಬುದು ಅದರ ಸ್ಪಷ್ಟ ಸಂದೇಶ. ಅತ್ಯಂತ ಆತಂಕದ ಸನ್ನಿವೇಶಗಳಲ್ಲಿಯೂ ಶಾಂತವಾಗಿದ್ದು, ಭಾವನೆಗಳ ಬದಲಾಗಿ ತರ್ಕದ ಮೂಲಕ ಯೋಚಿಸಿ ಕಾರ್ಯಾಚರಿಸಬೇಕೆಂದು ಹಲವು ಉದಾಹರಣೆಗಳ ಮೂಲಕ ವಿವರಿಸುತ್ತದೆ. ಒಬ್ಬ ವ್ಯಕ್ತಿಯ ಕಾಯಕಗಳೆಲ್ಲ ಆತಂಕದಿಂದ ಮುಕ್ತವಾಗಿದ್ದರೆ, ಆತನೇ ವಿವೇಕಿ ಎನ್ನುತ್ತದೆ ಭಗವದ್ಗೀತೆ.
ಭಾವನೆಗಳ ನಿಯಂತ್ರಣಕ್ಕಾಗಿ ನೀನು ಮಾಡಬೇಕಾದ್ದು
ಭಾವನೆಗಳ ನಿಯಂತ್ರಣಕ್ಕಾಗಿ ಅಷ್ಟಾಂಗ ಯೋಗದ ಸಾಧನೆ ಮತ್ತು ಸೂಕ್ತ ಆಹಾರದ ಸೇವನೆ ಅತ್ಯಗತ್ಯವೆಂದು ಭಗವದ್ಗೀತೆ ಸಾರುತ್ತದೆ. ಭಗವದ್ಗೀತೆಯು ಆಹಾರವನ್ನು ಮೂರು ವಿಧಗಳಾಗಿ ವಿಂಗಡಿಸಿದೆ: ಸಾತ್ವಿಕ, ರಜಸ್ ಮತ್ತು ತಮಸ್. ಹಣ್ಣುಗಳು, ಹಸುರು ತರಕಾರಿಗಳು ಮತ್ತು ಹಾಲು ಸಾತ್ವಿಕ ಆಹಾರ. ಮಸಾಲೆಭರಿತ ಮತ್ತು ಸ್ಟೀರಾಯಿಡ್ ಆಹಾರ ರಜಸ್. ಕೊಬ್ಬಿನ ಆಹಾರ ಮತ್ತು ಹಳಸಿದ ಆಹಾರ ತಮಸ್. ಭಗವದ್ಗೀತೆಯ ಅನುಸಾರ, ಸಾತ್ವಿಕ ಆಹಾರವು ವಿವೇಕಕ್ಕೆ ಮತ್ತು ರಜಸ್ ಆಹಾರವು ದುರಾಸೆಗೆ ಕಾರಣ. ತಾಮಸಿಕ ಆಹಾರವು ತಪ್ಪು-ತಿಳಿವಳಿಕೆ, ಭ್ರಾಂತಿ ಮತ್ತು ಮೌಢ್ಯಕ್ಕೆ ಕಾರಣ.
ಇನ್ನೊಬ್ಬ ಬದುಕಿದಂತೆ ಬದುಕಲು ಪ್ರಯತ್ನಿಸಬೇಡ
ಪ್ರತಿಯೊಬ್ಬನ ಬದುಕು ಕೂಡ ವಿಶೇಷ. ರೈತನ ಬದುಕು ಸಂತೋಷಭರಿತ ಮತ್ತು ಆಹ್ಲಾದದಾಯಕ ಎಂದು ಒಬ್ಬ ಯೋಧ ಯೋಚಿಸಬಹುದು. ಹಾಗೆಯೇ, ಯೋಧನ ಬದುಕು ಚೈತನ್ಯಭರಿತ ಮತ್ತು ಕ್ರಿಯಾಶೀಲ ಎಂದು ರೈತ ಯೋಚಿಸಬಹುದು. ಹಾಗಾಗಿಯೇ ದೂರದ ಬೆಟ್ಟ ನುಣ್ಣಗೆ ಎಂಬ ವಿವೇಕದ ಮಾತು ಬಳಕೆಯಲ್ಲಿದೆ. ಇವರಿಬ್ಬರ ಬದುಕಿಗೂ ಈ ಜಗತ್ತಿನಲ್ಲಿ ಸಮಾನ ಪ್ರಾಮುಖ್ಯತೆ ಇದೆ. ಇನ್ನೊಬ್ಬರು ಬದುಕಿದಂತೆಯೇ ಲೋಪದೋಷಗಳಿಲ್ಲದೆ ಬದುಕುವ ಬದಲಾಗಿ ನಿಮ್ಮದೇ ಬದುಕನ್ನು ಲೋಪದೋಷಗಳ ಸಹಿತ ಬದುಕುವುದೇ ಉತ್ತಮ.
ನಿನ್ನ ಬದುಕಿನ ಗುರಿಗಳು ಎಂದೆಂದಿಗೂ ನಿಶ್ಚಿತವಾಗಿರಲಿ
ಇನ್ನೊಬ್ಬರನ್ನು ಅನುಕರಿಸಲು ಪ್ರಯತ್ನಿಸುವಾಗ ನಿಮ್ಮ ಬದುಕಿನ ಗುರಿಗಳನ್ನು ಮರೆತು ಬಿಡುತ್ತೀರಿ. ಇನ್ನೊಬ್ಬನ ಅನುಕರಣೆ ನಿರರ್ಥಕ ಎಂದು ತಿಳಿದಿದ್ದರೂ, ಆ “ಇನ್ನೊಬ್ಬ"ನಿಗಿಂತಲೂ ನಾನು ಉತ್ತಮ ಎಂದು ತೋರಿಸಿಕೊಳ್ಳಲು (ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಮಾಡುತ್ತಿರುವಂತೆ) ಪ್ರಯತ್ನಿಸುತ್ತೀರಿ. ನಿಮ್ಮ ಬದುಕಿನ ಗುರಿಗಳ ಬಗ್ಗೆ ಅನಿಶ್ಚಿತತೆ ಇದ್ದರೆ ಹೀಗಾಗುತ್ತದೆ.
ಪ್ರತಿಯೊಬ್ಬರೂ ನಿನ್ನ ಗೌರವವನ್ನು ಸಮಾನವಾಗಿ ಪಡೆಯಲು ಅರ್ಹರು
ಸರಳವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸು. ಶತ್ರುಗಳ ಜೊತೆಗೂ ಚೆನ್ನಾಗಿಯೇ ನಡೆದುಕೋ. ಯಾಕೆಂದರೆ ಅದು ನಿನ್ನೊಳಗಿನ ಸಂಘರ್ಷಕ್ಕೆ ಕಾರಣವಾಗುವ ಪಾಪಪ್ರಜ್ನೆಯನ್ನು ಮತ್ತು ಭಾವನಾತ್ಮಕ ಭಾರವನ್ನು ಕಡಿಮೆ ಮಾಡುತ್ತದೆ. ಪ್ರತಿಯೊಂದು ಜೀವಿಯಲ್ಲಿಯೂ ದೇವರನ್ನು ಕಾಣುವವನೇ ತನಗೆ ಮತ್ತು ಇತರರಿಗೆ ಹಾನಿ ಮಾಡುವುದಿಲ್ಲ.
ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಒಳ್ಳೆಯದನ್ನು ಮಾಡು
ನೀನು ಒಳ್ಳೆಯದನ್ನು ಮಾಡಿದ್ದೆ ಎಂಬ ಕಾರಣಕ್ಕಾಗಿ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡ. ಇದರ ಬಗ್ಗೆ ಭಗವದ್ಗೀತೆ ವಿವಿಧ ರೀತಿಗಳಲ್ಲಿ ವಿವರಿಸಿ, ಇದರ ನೈತಿಕ ಮೌಲ್ಯಕ್ಕಿಂತಲೂ ಹೆಚ್ಚಾಗಿ ಇದು ವಾಸ್ತವದ ಪಥ (ಪ್ರಾಕ್ಟಿಕಲ್) ಎಂದು ತಿಳಿಸುತ್ತದೆ. ಒಂದು ಕೊಡುಗೆಯನ್ನು ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಕೊಟ್ಟಾಗ ಹಾಗೂ ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆ ಇದ್ದಾಗಲೇ ಅದು ಪವಿತ್ರವಾದದ್ದು ಎಂದು ಸ್ಪಷ್ಟಪಡಿಸುತ್ತದೆ.
ಕಾರ್ಯಪ್ರವೃತ್ತನಾಗು. ಕೇವಲ ಯೋಚಿಸುತ್ತಾ ಕೂರಬೇಡ.
ನೀನು ಕೃತಿಗಿಳಿಸದ ಕೆಲಸಗಳ ಬಗ್ಗೆ ಅತಿಯಾಗಿ ವಿಶ್ಲೇಷಣೆ ಮಾಡುತ್ತಾ ಇರುತ್ತಿ. “ಬಹಳ ತಿಳಿದವರು” ಎಂದು ಕರೆಸಿಕೊಳ್ಳುವ ವ್ಯಕ್ತಿಗಳಲ್ಲಿ ಈ ಪ್ರವೃತ್ತಿ ಜಾಸ್ತಿ. ಆ ಕೆಲಸಗಳನ್ನು ಕೃತಿಗಿಳಿಸುವ ಬದಲಾಗಿ ಅವುಗಳ ಬಗ್ಗೆ ಮಾತನಾಡುವುದು ಮತ್ತು ವಿಶ್ಲೇಷಣೆ ಮಾಡುವುದೇ ನಿನಗೆ ಖುಷಿ. ಜೀವನದಲ್ಲಿ ಪರಿಪಕ್ವ ಆಗದವರು ಒಂದು ಕೆಲಸದ ಜ್ನಾನ ಮತ್ತು ಅದರ ಅನುಷ್ಠಾನ ಬೇರೆಬೇರೆ ಎಂದು ಯೋಚಿಸಿದರೆ ವಿವೇಕಿಗಳು ಅವೆರಡೂ ಒಂದೇ ಎಂಬುದನ್ನು ತಿಳಿದಿರುತ್ತಾರೆ.
ನಿನ್ನ ಕರ್ತವ್ಯಗಳ ಮೇಲೆ ಗಮನವಿರಲಿ
ನೀನು ಯಾವುದೇ ಭಾಷೆ (ಆಶ್ವಾಸನೆ) ಕೊಟ್ಟಿದ್ದರೆ ಅದನ್ನು ಪಾಲಿಸು. ಅದನ್ನು ಅತಿಯಾಗಿ ವಿಶ್ಲೇಷಿಸುತ್ತಾ ಕೂರಬೇಡ ಮತ್ತು ಹಾಗೆ ವಿಶ್ಲೇಷಿಸುತ್ತಾ ನಿಷ್ಕ್ರಿಯನಾಗುವುದನ್ನು ಬದುಕಿನಲ್ಲಿ ಮಹತ್ತಾದದ್ದನ್ನು ಸಾಧಿಸಲು ಸಾಧ್ಯವಾಗದ್ದಕ್ಕೆ ನೆವನವಾಗಿ ಬಳಸಬೇಡ.
ನೀನು ಇನ್ನೊಬ್ಬರ ಕರ್ತವ್ಯವನ್ನು ಇಷ್ಟ ಪಡಬಹುದು ಮತ್ತು ನಿನ್ನ ಕರ್ತವ್ಯವನ್ನು ಇಷ್ಟ ಪಡದೇ ಇರಬಹುದು. ಆದರೂ ನಿನ್ನ ಕರ್ತವ್ಯವನ್ನೇ ಮಾಡು; ಇನ್ನೊಬ್ಬರ ಕರ್ತವ್ಯವನ್ನು ಅವರಿಗಿಂತ ಚೆನ್ನಾಗಿ ಮಾಡಲು ನಿನಗೆ ಸಾಧ್ಯವಿದ್ದರೂ ಅದನ್ನು ಮಾಡಬೇಡ. ಯಾಕೆಂದರೆ ನೀನು ವೈರುಧ್ಯಗಳ ಸುಳಿಯಲ್ಲಿ ಸಿಲುಕುತ್ತಿ ಮತ್ತು ನಿನಗೆ ಅದರಿಂದ ಬಿಡುಗಡೆಯೇ ಇರುವುದಿಲ್ಲ.
ಅತ್ಯಂತ ದೊಡ್ಡ ಶಕ್ತಿಗಿಂತಲೂ ದೊಡ್ಡದಾದ ಶಕ್ತಿ ಇದ್ದೇ ಇರುತ್ತದೆ.
ಯಾವುದೇ ಕಾಯಕದ ಬಗ್ಗೆ ನಿನಗೆ ಏನೂ ಮಾಡಲು ಸಾಧ್ಯವಿಲ್ಲವೆಂದು ನೀನು ನಿರಾಶನಾಗಬಹುದು. ಕೊನೆಗೆ ಇದು ನನ್ನಿಂದಾಗದು ಎಂದು ನೀನು ಕೈಚೆಲ್ಲಬಹುದು. ಆದರೆ ಒಂದಲ್ಲ ಒಂದು ರೀತಿಯಲ್ಲಿ ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಭಗವದ್ಗೀತೆ ಘೋಷಿಸುತ್ತದೆ. ಆದ್ದರಿಂದ, ನಿನ್ನ ಶತ್ರು ಪ್ರಚಂಡ ಎಂದು ಅನಿಸಿದರೂ, ನೀನು ನಿನ್ನ ಕಾಯಕವನ್ನು ಮಾಡುತ್ತಲೇ ಇದ್ದರೆ, ಅದರಿಂದ ನಿನಗೇ ಸಹಾಯ.
ಧರ್ಮಶ್ರದ್ಧೆಯನ್ನು ಜಗತ್ತಿಗೆ ನೀಡಲಿಕ್ಕಾಗಿ ಮತ್ತು ಅಧರ್ಮಿಗಳನ್ನು ನಾಶ ಮಾಡಲಿಕ್ಕಾಗಿ ಹಾಗೂ ಸತ್ಯದ ತತ್ತ್ವಗಳನ್ನು ಮತ್ತೆಮತ್ತೆ ಸ್ಥಾಪನೆ ಮಾಡಲಿಕ್ಕಾಗಿ ಪರಮಾತ್ಮ ಅವಶ್ಯವಿದ್ದಾಗೆಲ್ಲ ಈ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಘೋಷಿಸುತ್ತದೆ ಭಗವದ್ಗೀತೆ.
ಫೋಟೋ: ಕುರುಕ್ಷೇತ್ರದ ರಣಾಂಗಣದಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನ
(ಡಿಸೆಂಬರ್ 2022)
ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ನಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು ಮೂರ್ತಿಯ ರೂಪದಲ್ಲಿ ನಾವು ಪೂಜಿಸುತ್ತೇವೆ; ಇದು ನಮಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಭಕ್ತಿಯ ಪಥದಲ್ಲಿ ಮುನ್ನಡೆಯಲು ಆಧಾರ.
ಈ ಉತ್ತರ ತಪ್ಪೆಂದು ಸಾಧಿಸಲಿಕ್ಕಾಗಿ ಮೂರ್ತಿಪೂಜೆಯ ಟೀಕಾಕಾರರಿಗೆ ಯಾವುದೇ ತರ್ಕವನ್ನು ಮುಂದೊಡ್ಡಲು ಸಾಧ್ಯವಾಗಿಲ್ಲ. “ಅದು ತಪ್ಪೆಂದು ನಾವು ಹೇಳುತ್ತೇವೆ; ಆದ್ದರಿಂದ ಅದು ತಪ್ಪು” ಎಂಬುದೇ ಅವರ ಉಡಾಫೆಯ ಮಾತು.
ಅವರೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಮುಖ್ಯ ಸಂಗತಿ ಏನೆಂದರೆ, ಯಾವುದೇ ದೇವಸ್ಥಾನವನ್ನು ನಿರ್ಮಿಸಿ, ಅಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮುಂಚೆ ಹಲವಾರು ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲೊಂದು “ಪಾಣ ಪ್ರತಿಷ್ಠಾಪನೆ”. ಇದರ ಉದ್ದೇಶ ಅಲ್ಲಿ ಪೂಜಿಸಲ್ಪಡುವ ಮೂರ್ತಿಯಲ್ಲಿ ಪ್ರಾಣವನ್ನು ಆಹ್ವಾನಿಸುವುದು. ಗಮನಿಸಿ: ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಹಿಂದೂ ವ್ಯಕ್ತಿ, ದೇವರ ಮೂರ್ತಿಗೆ ತಲೆ ಬಾಗಿ, ಅಡ್ಡ ಬಿದ್ದು, ದೇವರ ದಯೆಗಾಗಿ ಪ್ರಾರ್ಥಿಸುತ್ತಾನೆ. ಆ ಸಂದರ್ಭದಲ್ಲಿ ದೇವರ ಮೂರ್ತಿಗೆ ಮುಖಾಮುಖಿಯಾಗಲು ಸರ್ವ ಪ್ರಯತ್ನ ಮಾಡುತ್ತಾನೆ. ದೇವರ ಮೂರ್ತಿಯ ದೃಷ್ಟಿಯ ಅಳವಿನೊಳಗೆ ಬರಬೇಕೆಂಬುದು ಅವನ ಏಕಮಾತ್ರ ಉದ್ದೇಶ. ಆತನ/ ಆಕೆಯ ನಂಬಿಕೆ ಏನೆಂದರೆ, ಇಲ್ಲಿ ಮೂರ್ತಿ ರೂಪದಲ್ಲಿರುವ ದೇವರು ನನ್ನನ್ನು ನೋಡುತ್ತಾನೆ, ನನ್ನ ಮಾತುಗಳನ್ನು ಕೇಳುತ್ತಾನೆ ಮತ್ತು ನನಗೆ ಸ್ಪಂದಿಸುತ್ತಾನೆ. ಇದರ ಆಳದಲ್ಲಿರುವ ಭಾವ ಏನೆಂದರೆ, "ದೇವರೇ, ಇಲ್ಲಿ ನೋಡು, ನಿನ್ನ ಚರಣಗಳಿಗೆ ಭಕ್ತಿಯಿಂದ ನಮಿಸುತ್ತಿದ್ದೇನೆ; ನನ್ನ ಶರಣಾಗತಿಯನ್ನು ಸ್ವೀಕರಿಸಿ, ನನ್ನನ್ನು ಹರಸು, ನನ್ನನ್ನು ರಕ್ಷಿಸು."
ನಮ್ಮ ದೇಶದ ಚರಿತ್ರೆಯಲ್ಲಿ ಸಾವಿರಾರು ದೇವಸ್ಥಾನಗಳನ್ನು ಅನ್ಯ ಮತೀಯರು ಧ್ವಂಸ ಮಾಡಿದ್ದು ದಾಖಲಾಗಿದೆ. ಆ ದೇವಸ್ಥಾನಗಳಲ್ಲಿದ್ದ ದೇವರ ಮೂರ್ತಿಯ ಬಗ್ಗೆ ಹಿಂದೂಗಳಲ್ಲಿ ಯಾವ ಮಟ್ಟದ ಭಕ್ತಿಭಾವ ತುಂಬಿತ್ತು, ಅದನ್ನು ರಕ್ಷಿಸಲಿಕ್ಕಾಗಿ ಅವರು ಎಂತಹ ತ್ಯಾಗ ಮಾಡಿದರು ಎಂಬುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಉದಾಹರಣೆಗೆ, ಗೋವಾದಲ್ಲಿ ಕ್ರೈಸ್ತರು ದೇವಸ್ಥಾನವನ್ನು ಧ್ವಂಸ ಮಾಡುವ ಕೆಲವೇ ದಿನಗಳ ಮುಂಚೆ, ಅಲ್ಲಿನ ಮೂರ್ತಿಯನ್ನು ಭಕ್ತರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದರು. ಅನಂತರ, ಆ ಹೊಸ ಸ್ಥಳದಲ್ಲಿ ದೇವಸ್ಥಾನ ಕಟ್ಟಿ, ಅಲ್ಲಿ ದೇವರ ಮೂರ್ತಿ ಇರಿಸಿ, ಅದರಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿದ್ದರು. ಗಮನಿಸಿ: ಈ ಕಾಯಕದಲ್ಲಿ ಅವರ ಪ್ರಾಣಕ್ಕೆ ಅಪಾಯವಿದ್ದರೂ ಅವರು ಅದನ್ನು ಮಾಡಿಯೇ ಮಾಡಿದರು.
ಇನ್ನು ಕೆಲವು ದೇವಸ್ಥಾನಗಳ ಮೂರ್ತಿಗಳನ್ನು ಮಣ್ಣಿನೊಳಗೆ ಹೂತು ಅಥವಾ ಕೆರೆ/ ಸರೋವರದಲ್ಲಿ ಮುಳುಗಿಸಿ, ದೇವಸ್ಥಾನ ಧ್ವಂಸ ಮಾಡಲು ಬಂದಿದ್ದ ಮತಾಂಧರಿಂದ ಅವನ್ನು ರಕ್ಷಿಸಿದ್ದರು. ಮುಂದೊಮ್ಮೆ, ದೇವರ ಮೂರ್ತಿಯನ್ನು ಅವಿತಿಟ್ಟಿದ್ದ ಜಾಗದಿಂದ ಹೊರತೆಗೆದು, ಪುನಃ ದೇವಸ್ಥಾನದಲ್ಲಿ ಇರಿಸಿ, ಮತ್ತೆ ಪ್ರಾಣಪ್ರತಿಷ್ಠಾಪನೆ ಮಾಡುವುದು ಅವರ ಉಪಾಯವಾಗಿತ್ತು. ದೇವಸ್ಥಾನದ ದೇವರ ಮೂರ್ತಿಯನ್ನು ರಕ್ಷಿಸಲಿಕ್ಕಾಗಿ ಭಕ್ತರು ತಮ್ಮ ಪ್ರಾಣವನ್ನೇ ಬಲಿಗೊಟ್ಟ ಉದಾಹರಣೆಗಳೂ ಇವೆ.
ಹಿಂದೂ ರಾಜ್ಯಗಳನ್ನು ಆಕ್ರಮಿಸಿ, ಅಲ್ಲಿಯ ಸಂಪತ್ತನ್ನೆಲ್ಲ ಲೂಟಿ ಮಾಡಿ, ಕೊನೆಗೆ ಅಲ್ಲಿನ ಪ್ರಜೆಗಳನ್ನು ತಮ್ಮ ಅಡಿಯಾಳುಗಳಾಗಿ ಮಾಡಲು, ಮುಸ್ಲಿಂ ಮತಾಂಧ ರಾಜರು ಅನುಸರಿಸುತ್ತಿದ್ದ ತಂತ್ರ: ದೇವಸ್ಥಾನಗಳ ಪ್ರಧಾನ ಮೂರ್ತಿಯನ್ನು ನೆಲಕ್ಕೆ ಕೆಡವಿ, “ನಿಮ್ಮ ದೇವರು ತನ್ನನ್ನೇ ರಕ್ಷಿಸಿಕೊಳ್ಳಲಾಗಲಿಲ್ಲ, ನೋಡಿ” ಎನ್ನುತ್ತಾ, ಅಲ್ಲಿನ ಹಿಂದೂಗಳ ಆತ್ಮಸ್ಥೈರ್ಯವನ್ನೇ ಅಲುಗಾಡಿಸುವುದು. ಯಾವೆಲ್ಲ ಕ್ರೂರ ರೀತಿಗಳಲ್ಲಿ ಅವರು ಹಿಂದೂಗಳ ಆತ್ಮಸ್ಥೈರ್ಯ ಅಲುಗಾಡಿಸಲು ಪ್ರಯತ್ನಿಸಿದರು ಎಂಬುದನ್ನು ತಿಳಿಯಬೇಕಾದರೆ ಜನಮನ್ನಣೆ ಗಳಿಸಿರುವ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ “ಆವರಣ" ಕಾದಂಬರಿಯನ್ನು ಓದಬೇಕು. ಆ ಕಾದಂಬರಿಯಲ್ಲಿ ಪ್ರಸ್ತಾಪಿಸಲಾದ ಚಾರಿತ್ರಿಕ ಸತ್ಯಸಂಗತಿಗಳಿಗೆ ಆಧಾರವಾಗಿ ಅದರ ಕೊನೆಯಲ್ಲಿ ಕೊಟ್ಟಿರುವ ಸುಮಾರು 150 ರೆಫರೆನ್ಸ್-ಗಳನ್ನು ಮನನ ಮಾಡಬೇಕು.
ನೆನಪಿರಲಿ: ದೇವಸ್ಥಾನಗಳನ್ನು ಧ್ವಂಸ ಮಾಡಿದ ಮತಾಂಧರು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರು ಧ್ವಂಸ ಮಾಡಿದ ದೇವಸ್ಥಾನಗಳು ಹಿಂದೂಗಳ ಅಖಂಡ ನಂಬಿಕೆಯ ಶಾಶ್ವತ ಆಧಾರಸ್ತಂಭಗಳಾಗಿ ಮತ್ತೆಮತ್ತೆ ತಲೆಯೆತ್ತಿ ನಿಂತಿವೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ: ಅಯೋಧ್ಯೆಯ ಶ್ರೀರಾಮ ದೇವಸ್ಥಾನ. ಅಲ್ಲಿನ ಭವ್ಯ ಶ್ರೀರಾಮ ದೇವಸ್ಥಾನದಲ್ಲಿ ಹಿಂದೂಗಳ ಮಹಾನ್ ಧಾರ್ಮಿಕ ಗ್ರಂಥ “ರಾಮಾಯಣ"ದ ಆರಾಧ್ಯ ಪುರುಷೋತ್ತಮ ಶ್ರೀರಾಮನ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದದ್ದು 22 ಜನವರಿ 2024ರಂದು. ಅಂದಿನಿಂದ ಪ್ರತಿದಿನವೂ ಒಂದು ಲಕ್ಷಕ್ಕಿಂತ ಅಧಿಕ ಹಿಂದೂಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಾ ಭಕ್ತಿ ಪರವಶರಾಗುತ್ತಿದ್ದಾರೆ. ಸಾವಿರಾರು ವರುಷಗಳಿಂದ ಹಿಂದೂಗಳು ನಂಬಿಕೊಂಡು ಬಂದಿರುವ ಮೌಲ್ಯಗಳು ಅಜರಾಮರ ಎಂಬುದಕ್ಕೆ ಇದು ಮಗದೊಂದು ನಿದರ್ಶನ, ಅಲ್ಲವೇ?
ಜಗತ್ತಿನಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ “ತುಲನಾತ್ಮಕ ಧಾರ್ಮಿಕ ಪಾಠ"ಗಳನ್ನು ಕಲಿಸಲಾಗುತ್ತದೆ. ಅದನ್ನು ಕಲಿಸುವವರಿಗೆ ಒಂದು ದೊಡ್ಡ ಜವಾಬ್ದಾರಿ ಇದೆ. ಅದೇನೆಂದರೆ, ಹಿಂದೂ ಧರ್ಮದ ಬಗ್ಗೆ ಮಾತನಾಡುವ ಮುನ್ನ ಅದರ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದು. ಯಾಕೆಂದರೆ, ಕೆಲವು ಪಾಶ್ಚಾತ್ಯ "ವಿದ್ವಾಂಸರು", ಹಿಂದೂ ಧರ್ಮವು ಶ್ರೇಷ್ಠವಲ್ಲ ಎಂಬುದನ್ನು ಪ್ರತಿಪಾದಿಸಲಿಕ್ಕಾಗಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರವನ್ನೇ ಮಾಡಿದ್ದಾರೆ. ಅವರು ಬರೆದದ್ದನ್ನೇ ಓದಿಕೊಂಡವರು (ಸಂಸ್ಕೃತದ ಮೂಲಪಠ್ಯಗಳನ್ನು ಓದದವರು) ಆ ಅಪಪ್ರಚಾರವನ್ನೇ ನಂಬಿಕೊಂಡು ಹಿಂದೂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಂಡಿದ್ದಾರೆ.
ಅದೃಷ್ಟವಶಾತ್, ಅಂತಹ ತಪ್ಪು ಕಲ್ಪನೆಗಳಲ್ಲಿ ಮುಳುಗಿರುವ ಎಲ್ಲರಿಗೂ ಸತ್ಯ ಏನೆಂದು ತಿಳಿಯಲು ಒಂದು ಸುಲಭದ ದಾರಿ ಇದೆ. ಅದೇನೆಂದರೆ, ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ 1893ರಲ್ಲಿ “ವಲ್ಡ್ ಪಾರ್ಲಿಮೆಂಟ್ ಆಫ್ ರಿಲಿಜಿಯನ್ಸ್”ನಲ್ಲಿ ನೀಡಿದ ಜಗತ್ಪ್ರಸಿದ್ಧ ಉಪನ್ಯಾಸವನ್ನು ಓದುವುದು. ಅದನ್ನೋದಿದ ನಂತರ, ಹಿಂದೂ ವೇದಾಂತವನ್ನು ಅರೆದು ಕುಡಿದು, ಅದನ್ನು ಇಂಗ್ಲಿಷ್ ಭಾಷೆಯಲ್ಲೇ ಜಗತ್ತಿಗೆ ಧಾರೆಯೆರೆದಿರುವ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮೂಲಭೂತ ತತ್ವಗಳ ಬಗ್ಗೆ ನೀಡಿದ ಇತರ ಉಪನ್ಯಾಸಗಳನ್ನೂ ಓದಿ ಅರ್ಥ ಮಾಡಿಕೊಳ್ಳುವುದು.
ಕೊನೆಗೊಂದು ಮಾತು: ಎಲ್ಲರಿಗೂ ಅವರವರ ಉದಾತ್ತ ನಂಬಿಕೆಗಳಿಗೆ ಅನುಸಾರವಾಗಿ ಬದುಕುವ ಹಕ್ಕು ಇದೆ. ಅದನ್ನು ಎಲ್ಲರೂ ಗೌರವಿಸುವುದೇ ನಾಗರಿಕತೆಯ ಪ್ರಧಾನ ಲಕ್ಷಣ. “ನಿನ್ನ ನಂಬಿಕೆ ತಪ್ಪು. ಯಾಕೆಂದರೆ ನಾನು ಹೇಳುತ್ತಿದ್ದೇನೆ” ಎನ್ನುವುದು ಅನಾಗರಿಕತೆಯ ಲಕ್ಷಣ. ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸಲಿ; ಅದು ಅವರ ನಂಬಿಕೆ, ಅದು ಅವರ ಆಚರಣೆ, ಅದು ಅವರ ಬದುಕಿನ ಅವಿಭಾಜ್ಯ ಸಂಗತಿ. "ಸರ್ವ ಧರ್ಮ ಸಮನ್ವಯ”, “ಧಾರ್ಮಿಕ ಸಹಿಷ್ಣುತೆ" ಎಂದೆಲ್ಲ ಮಾತನಾಡುವವರು ಹಿಂದೂಗಳ ಸಾಂವಿಧಾನಿಕ ಹಕ್ಕನ್ನು ಗೌರವಿಸಲೇ ಬೇಕು, ಅಲ್ಲವೇ?
ಫೋಟೋ: ಅಯೋಧ್ಯಾ ನೂತನ ದೇವಸ್ಥಾನದ ಅಲಂಕೃತ ಶ್ರೀರಾಮಲಲ್ಲಾ …ಕೃಪೆ: ಇಂಡಿಯಾ ಟುಡೇ
(ನವಂಬರ್ 2022)
ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ.
ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನುವುದಕ್ಕಿಂತಲೂ ಅದೊಂದು “ಬದುಕುವ ರೀತಿ” (ವೇ ಆಫ್ ಲೈಫ್). ಶತಮಾನಗಳು ಉರುಳಿದಂತೆ, ಹಿಂದುತ್ವವು ಕೆಲವು ಉದಾತ್ತ ಮೌಲ್ಯಗಳು, ತತ್ವಗಳು ಮತ್ತು ನಂಬಿಕೆಗಳನ್ನು ಬೆಳೆಸಿಕೊಂಡಿದೆ. ಈ ಮೂಲಭೂತ ಮೌಲ್ಯಗಳೇ ಹಿಂದುತ್ವವು ನಿರಂತರವಾಗಿ ವಿಕಾಸ ಹೊಂದುತ್ತಿರುವುದಕ್ಕೆ ಕಾರಣ.
ಹಿಂದುತ್ವದ ಅಡಿಪಾಯವಾಗಿರುವ ಈ ಮೂಲಭೂತ ಮೌಲ್ಯಗಳು 5,000 ವರುಷಗಳಿಗಿಂತ ದೀರ್ಘ ಅವಧಿಯಲ್ಲಿ ಅದನ್ನು ಮುನ್ನಡೆಸಿವೆ. ಇವು, ಹಿಂದೂಗಳ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು, ಅವರ ದೈನಂದಿನ ಬದುಕಿನ ಭಾಗವಾಗಿವೆ. ಇದನ್ನೇ “ಸನಾತನ ಧರ್ಮ” ಎಂದು ಕರೆಯಲಾಗುತ್ತದೆ. ಕಾಲದೇಶಗಳನ್ನು ಮೀರಿದ ಈ ಜೀವನಮೌಲ್ಯಗಳು ವಿಶ್ವಮಾನ್ಯವಾಗಿವೆ. ಅವುಗಳಲ್ಲಿ ಕೆಲವನ್ನು ಪರಿಶೀಲಿಸೋಣ.
ಜಗತ್ತೇ ಒಂದು ಕುಟುಂಬ
"ವಸುದೈವ ಕುಟುಂಬಕಮ್" ಅಂದರೆ ಜಗತ್ತೇ ಒಂದು ಕುಟುಂಬ ಎಂಬುದು ಹಿಂದೂಗಳ ನಂಬಿಕೆ. ಕೂಡುಕುಟುಂಬದಲ್ಲಿ ಬದುಕುವುದು ಹಿಂದೂಗಳ ಒಂದು ಮೂಲಭೂತ ಮೌಲ್ಯ. ಹಿಂದೂ ಸಂಸ್ಕೃತಿಯ ಅನುಸಾರ ವ್ಯಕ್ತಿಗಿಂತ ಕುಟುಂಬ ಮುಖ್ಯ. "ನಾನು ಇಂತಹ ಕುಟುಂಬಕ್ಕೆ ಸೇರಿದವನು/ ಸೇರಿದವಳು” ಎಂಬುದು ಪ್ರತಿಯೊಬ್ಬ ಹಿಂದೂವಿಗೂ ಅಭಿಮಾನದ ಸಂಗತಿ. ಎಲ್ಲ ಹಿಂದೂ ಆಚರಣಿಗಳಿಗೂ ಕುಟುಂಬವೇ ಕೇಂದ್ರ ಬಿಂದು. ಹಿಂದೂ ಹುಟ್ಟುವುದು, ಬೆಳೆಯುವುದು ಮತ್ತು ಮೌಲ್ಯಗಳನ್ನು ಕಲಿಯುವುದು ಕುಟುಂಬದಲ್ಲಿಯೇ. ಕುಟುಂಬದ ಸದಸ್ಯನಾಗಿ ಬದುಕುವುದು ಹಿಂದೂವಿಗೆ ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಲು ಮಾನಸಿಕ ಹುಮ್ಮಸ್ಸು ನೀಡುತ್ತದೆ.
ಹಿಂದೂಗಳಲ್ಲಿ ಮಕ್ಕಳನ್ನು ಬೆಳೆಸುವುದು ಮತ್ತು ತಮ್ಮ ತಂದೆತಾಯಿಯರ ಯೋಗಕ್ಷೇಮ ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ. ಯಾವುದೇ ಹಿಂದೂ ಕುಟುಂಬದ ಎಲ್ಲ ಸದಸ್ಯರೂ ಒಂದೇ ಚಾವಣಿಯಡಿಯಲ್ಲಿ ವಾಸ ಮಾಡದಿದ್ದರೂ, ಅವರೊಳಗಿನ ಭಾವನಾತ್ಮಕ ಸಂಬಂಧ ಗಾಢವಾಗಿರುತ್ತದೆ.
ನ್ಯಾಷನಲ್ ಜೋಗ್ರಫಿಕ್ ಸಂಶೋಧಕ ಡಾನ್ ಬ್ಯುಟ್ಟನರ್ ಕಂಡುಕೊಂಡ ಒಂದು ಮುಖ್ಯವಾದ ಸಂಗತಿ ಏನೆಂದರೆ ಅತ್ಯಂತ ಜಾಸ್ತಿ ಸಂಖ್ಯೆಯ ಶತಾಯುಷಿಗಳು ಇರುವ ಸಮುದಾಯಗಳಲ್ಲಿ ಗಮನಿಸಬೇಕಾದ ಒಂದು ಸಾಮಾನ್ಯ ವಿದ್ಯಮಾನ: ಕುಟುಂಬದ ಸದಸ್ಯರನ್ನು ಮತ್ತು ಇತರ ಪ್ರೀತಿಯ ವ್ಯಕ್ತಿಗಳನ್ನು ಪ್ರತಿ ದಿನದ ಆದ್ಯತೆ (ಮುಖ್ಯ ಕರ್ತವ್ಯ)ಗಳಲ್ಲಿ ಒಂದಾಗಿ ಪರಿಗಣಿಸುವುದು. ಆತನ ಸಂಶೋಧನೆಯ ಅನುಸಾರ, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ಒಂದು ಜಾಣ್ಮೆಯ ನಡವಳಿಕೆ ಮತ್ತು ಇದು ವ್ಯಕ್ತಿಗಳ ನಿರೀಕ್ಷಿತ ಆಯುಷ್ಯವನ್ನು ಆರು ವರುಷಗಳಷ್ಟು ಹೆಚ್ಚಿಸುತ್ತದೆ!
ಹೆತ್ತವರನ್ನು ಮತ್ತು ಹಿರಿಯರನ್ನು ಗೌರವಿಸುವುದು
ಹಿಂದೂಗಳಲ್ಲಿ ಪ್ರತಿಯೊಂದು ಮಗುವಿಗೂ ಹೆತ್ತವರು ಮತ್ತು ಹಿರಿಯರನ್ನು ಗೌರವಿಸಲು ಮತ್ತು ಅವರಿಗೆ ವಿಧೇಯವಾಗಿರಲು ಕಲಿಸಲಾಗುತ್ತದೆ. ಹಿಂದೂಗಳ ಅನುಸಾರ “ಮಾತೃ ದೇವೋಭವ, ಪಿತೃ ದೇವೋಭವ” ಅಂದರೆ ತಾಯಿ ಮತ್ತು ತಂದೆ ದೇವರಿಗೆ ಸಮಾನ. ರಾಮಾಯಣವನ್ನು ನೆನಪಿಸಿಕೊಂಡರೆ, ಶ್ರೀರಾಮನು ತನ್ನ ತಂದೆಯ ವಚನ ಪಾಲನೆಗಾಗಿ ರಾಜ್ಯವನ್ನೇ ತೊರೆದು ವನವಾಸಕ್ಕೆ ಹೋದ. ಹಿಂದೂಗಳಲ್ಲಿ ಹೆತ್ತವರನ್ನು ದೇವರ ಪ್ರತಿರೂಪವೆಂದೇ ಪರಿಗಣಿಸಲಾಗುತ್ತದೆ. ಹಿಂದೂ ಪುರಾಣಕತೆಗಳಲ್ಲಿ ಇಂತಹ ಹಲವು ದೃಷ್ಟಾಂತಗಳಿವೆ. ಶ್ರವಣ ಕುಮಾರನು ತನ್ನ ಕಣ್ಣುಕಾಣದ ಹೆತ್ತವರನ್ನು ಹೆಗಲಿನಲ್ಲಿ ಹೊತ್ತುಕೊಂಡು ಅವರಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ. ಜನ್ಮ ನೀಡಿದ ತಾಯಿಗಿಂತ ದೊಡ್ದ ದೇವರಿಲ್ಲ ಎಂಬುದು ಹಿಂದೂಗಳ ನಂಬಿಕೆ.
ಪಾಶ್ಚಾತ್ಯ ಕುಟುಂಬಗಳಲ್ಲಿ ಮಕ್ಕಳು ಹೆತ್ತವರಿಗೆ ಅವಿಧೇಯರಾಗಿ ವರ್ತಿಸುವುದು ಸಾಮಾನ್ಯ. ಆದರೆ ಹಿಂದೂ ಕುಟುಂಬಗಳಲ್ಲಿ ಅಂತಹ ನಡವಳಿಕೆ ಅಪರೂಪ. ಹೆತ್ತವರನ್ನು ಮಾತ್ರವಲ್ಲ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾವಂದಿರು, ಅತ್ತೆಯಂದಿರು - ಹೀಗೆ ಕುಟುಂಬದ ಎಲ್ಲ ಹಿರಿಯರನ್ನೂ ಗೌರವಿಸುವುದನ್ನು ಹಿಂದೂ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಲಾಗುತ್ತದೆ. ಹಿರಿಯರಿಗೆ ಅಡ್ಡಬಿದ್ದು, ಅವರ ಆಶೀರ್ವಾದ ಪಡೆಯುವುದು ಹಿಂದೂಗಳ ಪದ್ಧತಿ.
ಹಾಗೆಯೇ ಶಿಕ್ಷಕರನ್ನು ಹಿಂದೂಗಳು "ಗುರುಗಳು" ಎಂದು ಪೂಜಿಸುತ್ತಾರೆ. ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿ ಎಂದಲ್ಲ; ಗುರು ಎಂದರೆ, ಮಾರ್ಗದರ್ಶಕ, ಮಿತ್ರ, ತತ್ವಜ್ನಾನಿ ಮತ್ತು ಬದುಕನ್ನೇ ರೂಪಿಸುವಾತ ಎಂದು ಗೌರವಿಸಲಾಗುತ್ತದೆ.
ಅತಿಥಿಗಳನ್ನು ಗೌರವಿಸುವುದು
ಅತಿಥಿಗಳ ಬಗ್ಗೆ "ಅತಿಥಿ ದೇವೋಭವ” ಎಂಬ ಭಾವನೆಯನ್ನು ಇತರ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಕಾಣುವುದು ವಿರಳ. ಮನೆಗೆ ಬರುವ ಅತಿಥಿಗಳಿಗೆ ಎಲ್ಲ ರೀತಿಯ ಆತಿಥ್ಯ ನೀಡಿ ಹಿಂದೂಗಳು ಆದರಿಸುತ್ತಾರೆ. ಕೆಲವೊಮ್ಮೆ ಅತಿಥಿಗಳಿಗೇ ಮುಜುಗರ ಆಗುವಷ್ಟು ಗೌರವಾದರಾಗಳಿಂದ ಸತ್ಕರಿಸಲಾಗುತ್ತದೆ. ಅತಿಥಿಗಳನ್ನು ಹೆತ್ತವರು ಪೂಜ್ಯ ಭಾವನೆಯಿಂದ ಕಾಣುವುದನ್ನು ನೋಡಿದ ಮಕ್ಕಳೂ ಅದೇ ಆಚರಣೆಗಳನ್ನು ಕಲಿತುಕೊಳ್ಳುತ್ತಾರೆ.
ಈ ಸಂಸ್ಕಾರವೇ ಹಿಂದೂ ಸಂಸ್ಕೃತಿಗೆ ಮುಳುವಾಯಿತು ಅನಿಸುತ್ತದೆ. ಯಾಕೆಂದರೆ, ಎಲ್ಲ ಪರಕೀಯ ಧರ್ಮಗಳನ್ನೂ ಹಿಂದೂಗಳು ಸ್ವಾಗತಿಸಿದರು. ಆದರೆ, ಅದೇ ಸಂಸ್ಕಾರವಿಲ್ಲದ ಪರಕೀಯ ಧರ್ಮಗಳು ಹಿಂಸೆ ಮಾಡಿ, ಭಯ ಹುಟ್ಟಿಸಿ, ಕ್ರೌರ್ಯ-ದಬ್ಬಾಳಿಕೆಯಿಂದ ಹಿಂದೂಗಳ ಮತಾಂತರ ಮಾಡಿದವು. ಗಮನಿಸಿ: ಜಗತ್ತಿನ ಆರು ಪ್ರಮುಖ ಧರ್ಮಗಳ ಅನುಯಾಯಿಗಳು ಭಾರತದಲ್ಲಿ ನಿರಾತಂಕವಾಗಿ ಬದುಕುತ್ತಿದ್ದಾರೆ. ಹಿಂದೂಗಳ ವಿಶಾಲ ಮನೋಧರ್ಮವೇ ಇದಕ್ಕೆ ಕಾರಣ.
ಎಲ್ಲರೊಂದಿಗೆ ಸಹಬಾಳ್ವೆ
ದೇವಸ್ಥಾನಗಳಿಗೆ ಹೋಗುವುದು ಮತ್ತು ಧಾರ್ಮಿಕ ಪ್ರಾರ್ಥನೆಗಳನ್ನು ಹೇಳುವುದು ಹಲವು ಹಿಂದೂಗಳ ದೈನಂದಿನ ಪರಿಪಾಠ.
ಈ ಪ್ರಾರ್ಥನೆಗಳ ಎರಡು ಪ್ರಮುಖ ಅಂಶಗಳನ್ನು ಗಮನಿಸಿ: "ವಿಶ್ವ ಕಾ ಕಲ್ಯಾಣ್ ಹೋ” ಅಂದರೆ "ಇಡೀ ವಿಶ್ವಕ್ಕೇ ಒಳಿತಾಗಲಿ” ಮತ್ತು “ಪ್ರಾಣಿಯೋನ್ ಮೇನ್ ಸದ್ಭಾವನಾ ಹೋ” ಅಂದರೆ “ಎಲ್ಲ ಜೀವಿಗಳೂ ಪರಸ್ಪರ ಶಾಂತಿಯಿಂದ ಬಾಳುವಂತಾಗಲಿ”.
ಇದಕ್ಕಿಂತ ಉದಾತ್ತವಾದ ಪ್ರಾರ್ಥನೆಯನ್ನು ಕಲ್ಪಿಸಲು ಸಾಧ್ಯವೇ?
ಒಬ್ಬ ಹಿಂದೂ ಕೇವಲ ತಾನು ಮತ್ತು ತನ್ನ ಕುಟುಂಬದ ಹಿತದ ಬಗ್ಗೆ ಯೋಚಿಸುವುದಿಲ್ಲ. ಎಲ್ಲ ಜೀವಿಗಳ ಕಲ್ಯಾಣದ ಬಗ್ಗೆ ಯೋಚಿಸುತ್ತಾನೆ. “ಪ್ರಾಣಿಯೋನ್" ಎಂದರೆ ಎಲ್ಲ ಜೀವಿಗಳು - ಪ್ರಾಣಿಗಳು, ಪಕ್ಷಿಗಳು, ಉರಗಗಳು, ನೀರಿನಲ್ಲಿ ವಾಸಿಸುವ ಜೀವಿಗಳು, ಗಿಡಮರಬಳ್ಳಿಗಳು - ಎಂದರ್ಥ.
“ಪಂಚತತ್ವ”ಗಳಾದ ನೀರು, ಗಾಳಿ, ಭೂಮಿ, ಆಕಾಶ ಮತ್ತು ಬೆಂಕಿಯನ್ನೂ ಹಿಂದೂಗಳು ಜೀವಂತ ಸಂಗತಿಗಳೆಂದು ನಂಬುತ್ತಾರೆ ಮತ್ತು ಹಾಗೆಯೇ ಪೂಜಿಸುತ್ತಾರೆ. ನದಿಗಳು, ಸಾಗರಗಳು, ಪರ್ವತಗಳು, ಅಗ್ನಿ, ಆಕಾಶ, ಅರಣ್ಯ - ಇವೆಲ್ಲವೂ ಹಿಂದೂಗಳಿಗೆ ಪೂಜನೀಯ. ಅವುಗಳ ಶ್ರದ್ಧಾಭಕ್ತಿಪೂರ್ವಕ ಆರಾಧನೆ ಹಿಂದೂಗಳ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗ.
"ವಿಶ್ವ ಕಾ ಕಲ್ಯಾಣ್ ಹೋ” ಎಂಬ ಪ್ರಾರ್ಥನೆಯ ವಿಶಾಲ ವ್ಯಾಪ್ತಿಯನ್ನೂ ಸಮಗ್ರ ಭಾವವನ್ನೂ ಗಮನಿಸಿ. ಹಿಂದೂ ತನಗೆ ಮತ್ತು ತನ್ನವರಿಗೆ ಮಾತ್ರ ಒಳಿತಾಗಲೆಂದು ಪ್ರಾರ್ಥಿಸುವುದಿಲ್ಲ; ಬದಲಾಗಿ ವಿಶ್ವದ ಪ್ರತಿಯೊಂದು ಜೀವಿಗೂ ಒಳಿತಾಗಲೆಂದು ಪ್ರಾರ್ಥಿಸುತ್ತಾನೆ. ಇದುವಲ್ಲವೇ ಉದಾತ್ತ ಮಾನವತೆ ಮತ್ತು ವಿಶ್ವಬಂಧುತ್ವ?
ಆದ್ದರಿಂದಲೇ ಈ ಭೂಮಿ ಎಲ್ಲ ಜೀವಿಗಳೂ ಸುಖಶಾಂತಿಯಿಂದ ಬಾಳುವ ನೆಲೆ ಆಗಬೇಕಾದರೆ, ಹಿಂದುತ್ವದ ಉದಾತ್ತ ತತ್ವಗಳನ್ನೂ ಜೀವನಮೌಲ್ಯಗಳನ್ನೂ ಎಲ್ಲ ಧರ್ಮಗಳೂ ಅಳವಡಿಸಿಕೊಳ್ಳಬೇಕಾಗಿದೆ, ಅಲ್ಲವೆ?
(ಅಕ್ಟೋಬರ್ 2022)
ಭೂಮಿಯ ಹಾಗೂ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಅಗೋಚರ ಶಕ್ತಿಯೊಂದು ಅವೆಲ್ಲವನ್ನೂ ನಿಯಂತ್ರಿಸುತ್ತಿದೆ ಎಂದನಿಸುತ್ತದೆ. ಅದನ್ನು "ದೇವರು" ಎಂದು ಕರೆಯುವುದು ಎಲ್ಲ ಧರ್ಮಗಳಲ್ಲಿಯೂ ವಾಡಿಕೆ.
ಅಂತಹ ಆಗುಹೋಗುಗಳ ಬಗ್ಗೆ ನಮಗೆ ಎದುರಾಗುವ ಕೆಲವು ಪ್ರಶ್ನೆಗಳು: ಕೋಟಿಗಟ್ಟಲೆ ವರುಷಗಳಿಂದ ಉರಿಯುತ್ತಿರುವ ಸೂರ್ಯ ಬೂದಿಯಾಗಿ ನಾಶವಾಗುತ್ತಿಲ್ಲ ಯಾಕೆ? ನಮ್ಮ ಭೂಮಿ ತನ್ನ ಕಕ್ಷೆಯಲ್ಲಿ ಕರಾರುವಾಕ್ಕಾಗಿ ಹೇಗೆ ಸುತ್ತುತ್ತಿದೆ? ಮಂಗಳ, ಬುಧ, ಗುರು, ಶನಿ ಇತ್ಯಾದಿ ಗ್ರಹಗಳು ಹೇಗೆ ಸುತ್ತುತ್ತಿವೆ? ಅವು ಕುಸಿಯುತ್ತಿಲ್ಲ ಯಾಕೆ? ಭೂಮಿಯ ಸಾಗರಗಳ ಅಗಾಧ ಜಲರಾಶಿ ಭೂಮಿಯಿಂದ ಕಳಚಿ ಬೀಳುತ್ತಿಲ್ಲ ಯಾಕೆ? ಕಣ್ಣಿಗೆ ಕಾಣದ ಪರಮಾಣುವಿನಿಂದ ಪ್ರಚಂಡ ಶಕ್ತಿ ಹೇಗೆ ಉತ್ಪನ್ನವಾಗುತ್ತದೆ?
ಈ ವರೆಗೆ ಬೇರೆ ಯಾವುದೇ ಆಕಾಶಕಾಯದಲ್ಲಿ ಪತ್ತೆಯಾಗದ "ಜೀವಿಗಳು" ಭೂಮಿಯಲ್ಲಿ ಮಾತ್ರ ಯಾಕಿವೆ? ಈ ಜೀವಿಗಳೆಲ್ಲವೂ ನಿರಂತರವಾಗಿ ಸಂತಾನೋತ್ಪತ್ತಿ ಮಾಡುತ್ತಾ ಜೀವಿಸುವ ಸಂಕೀರ್ಣ ವ್ಯವಸ್ಥೆಯೊಂದು ಭೂಮಿಯಲ್ಲಿ ಹೇಗೆ ವಿಕಾಸ ಹೊಂದಿತು? ಪ್ರಾಣವಾಯು ಆಮ್ಲಜನಕ, ಜೀವಜಲ, ಆಹಾರದ ಆಧಾರದಿಂದ ಬದುಕಿ ಉಳಿಯಲು ಜೀವಿಗಳಿಗೆ ಹೇಗೆ ಸಾಧ್ಯವಾಯಿತು? ಪಕ್ಷಿಗಳು ಮತ್ತು ಕೆಲವು ಕೀಟಗಳು ಮಾತ್ರ ಹಾರುತ್ತವೆ ಯಾಕೆ? ಆಯಾ ಜೀವಿಗೆ ಬೇಕಾದ ಆಹಾರ ಅದಕ್ಕೆ ಹೇಗೆ ಸಿಗುತ್ತಿದೆ? ಬೇರೆಬೇರೆ ಜೀವಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಕೋಟಿಗಟ್ಟಲೆ ವರುಷಗಳಿಂದ ಹೇಗೆ ನಡೆದು ಬಂದಿದೆ?
ಪುಟ್ಟ ಬೀಜದಿಂದ ದೊಡ್ಡ ಮರವೊಂದು ಹೇಗೆ ಬೆಳೆದು ಬರುತ್ತದೆ? ಗಿಡಮರಗಳಲ್ಲಿ ಬೇರೆಬೇರೆ ಬಣ್ಣಗಳ ಹೂಗಳು ಹೇಗೆ ಅರಳುತ್ತವೆ? ಹೂಗಳಿಂದ ಹಣ್ಣುಗಳು, ಹಣ್ಣುಗಳಿಂದ ಬೀಜಗಳು ಹೇಗೆ ಮೂಡಿ ಬರುತ್ತವೆ? ಭೂಮಿಯಲ್ಲಿರುವ ಸುಮಾರು 800 ಕೋಟಿ ಮನುಷ್ಯರಿಗೆ ದಿನದಿನವೂ ವಿಭಿನ್ನ ಆಹಾರ ಹೇಗೆ ಸಿಗುತ್ತದೆ? ಸೂಕ್ಷ್ಮಜೀವಿಗಳಿಂದ ಹರಡುವ ಕೊರೋನಾದಂತಹ ರೋಗಗಳನ್ನು ತಕ್ಷಣವೇ ನಿಯಂತ್ರಿಸಲು ಯಾಕೆ ಸಾಧ್ಯವಾಗುತ್ತಿಲ್ಲ?
ಇವೆಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ: ದೇವರು ಎಂದು ಕರೆಯಲಾಗುವ ಅಗೋಚರ ಶಕ್ತಿಯೊಂದು ಇವೆಲ್ಲವನ್ನೂ ನಿಯಂತ್ರಿಸುತ್ತಿದೆ. ಇದು ಯಾವುದನ್ನೂ ಹುಲುಮಾನವ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಇನ್ನೂ ಕೆಲವು ಆಗುಹೋಗು ಪರಿಶೀಲಿಸೋಣ. ಉಲ್ಕೆಯೊಂದು ಬಂದು ಭೂಮಿಗೆ ಅಪ್ಪಳಿಸಿ, ಇಲ್ಲಿಯ ಹಲವು ಜೀವವರ್ಗಗಳು ನಿರ್ನಾಮವಾಗುವುದು ಯಾಕೆ? ಅಗ್ನಿಪರ್ವತಗಳ ಸ್ಫೋಟ, ಭೂಕಂಪಗಳ ರಂಪ, ಅತಿವೃಷ್ಟಿ. ಅನಾವೃಷ್ಟಿ, ನೆರೆಹಾವಳಿ, ಕಾಡಿನ ಬೆಂಕಿ - ಇವೆಲ್ಲದರಿಂದ ಸಾವಿರಾರು ಜನರ ಹಾಗೂ ಜೀವಿಗಳ ಸಾವು ಯಾಕೆ?
ಕೋವಿಡ್-19 ಎಂಬ ಒಂದು ವೈರಸಿನ ಧಾಳಿಗೆ ಜಗತ್ತಿನ 60.36 ಕೋಟಿ ಜನರು ತತ್ತರಿಸಿದ್ದು ಯಾಕೆ? ಅದರಿಂದಾಗಿ 64.80 ಲಕ್ಷ ಜನರು ಕೇವಲ ಎರಡು ವರುಷಗಳ ಅವಧಿಯಲ್ಲಿ ಸತ್ತದ್ದು ಯಾಕೆ? ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಇದ್ದರೂ, ಅತ್ಯುತ್ತಮ ರೋಗಪತ್ತೆ ಮತ್ತು ರೋಗಚಿಕಿತ್ಸಾ ವಿಧಾನಗಳು ಲಭ್ಯವಿದ್ದರೂ ಅವರಲ್ಲಿ ಅರೆವಾಸಿ ರೋಗಿಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ?
ಉತ್ತಮ ರಸ್ತೆಗಳಿದ್ದರೂ, ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳು ಇದ್ದರೂ ಪ್ರತಿ ವರುಷ ಕಾರು ಅಪಘಾತಗಳಿಂದಾಗಿ 12 ಲಕ್ಷ ಜನರು ಸಾಯುವುದು, ಲಕ್ಷಗಟ್ಟಲೆ ಜನರು ಅಂಗವಿಕಲರಾಗುವುದು ಯಾಕೆ?
ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ವಿವಿಧ ವ್ಯವಸ್ಥೆಗಳಿದ್ದರೂ ಲಕ್ಷಗಟ್ಟಲೆ ಕೊಲೆ, ಹಲ್ಲೆ, ಮಾನಭಂಗ, ದರೋಡೆ, ಸುಲಿಗೆ, ಕಳ್ಳತನ ಆಗುತ್ತಿರೋದು ಯಾಕೆ? ಅವೆಲ್ಲ ಅನ್ಯಾಯ ಮಾಡಿದ ಹಲವರು ಸಿಕ್ಕಿ ಬೀಳುತ್ತಿಲ್ಲ ಯಾಕೆ? ಅವೆಲ್ಲ ಅನ್ಯಾಯ ಮಾಡಿದ ಅನೇಕರಿಗೆ ಯಾವ ಶಿಕ್ಷೆಯೂ ಆಗುತ್ತಿಲ್ಲ ಯಾಕೆ? ಬಡತನದಲ್ಲಿ ಹುಟ್ಟಿದ ಹಲವರು ಬಡತನದಲ್ಲೇ ಕೊನೆ ತನಕ ಬದುಕಬೇಕಾಗುತ್ತದೆ ಯಾಕೆ? ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಯಾಕೆ? ನ್ಯಾಯದಿಂದ ಬದುಕುವ ಜನಸಾಮಾನ್ಯರು ಬದುಕಿನಲ್ಲಿ ಹೈರಾಣಾಗುತ್ತಿದ್ದಾರೆ ಯಾಕೆ?
ಇವೆಲ್ಲ ಪ್ರಶ್ನೆಗಳಿಗೆ ನೇರ ಉತ್ತರ ಸಿಗೋದಿಲ್ಲ. ಜಗತ್ತಿನ ಎಲ್ಲ ಆಗುಹೋಗು ನಿಯಂತ್ರಿಸುವ ದೇವರೆಂಬ ಶಕ್ತಿ ಧರ್ಮದ ರಕ್ಷಣೆ ಮಾಡುತ್ತದೆಂಬ ನಂಬಿಕೆ ಜನರಲ್ಲಿದೆ. ಹಾಗಾದರೆ, ಇವೆಲ್ಲ ಯಾಕೆ ಆಗುತ್ತಿವೆ? ಎಂಬ ಪ್ರಶ್ನೆಯನ್ನು ಉತ್ತರಿಸಲಾಗೋದಿಲ್ಲ. ಹಾಗಾಗಿ, ದೇವರು ಇದ್ದಾನೋ ಇಲ್ಲವೋ ಎಂದು ಗೊಂದಲವಾಗುತ್ತದೆ.
ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದಾಗಿನಿಂದಲೂ ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದು ಎಂದಿಗೂ ಮುಗಿಯದ ಚರ್ಚೆ. ಹಾಗಾದರೆ, ನಾವು ಯಾವುದನ್ನು ನಂಬಿ ಬದುಕಬೇಕು? ಈ ಪ್ರಶ್ನೆಗೆ ಉತ್ತರ: ದೇವರು ಇದ್ದಾನೆ ಎಂಬಂತೆ ಬದುಕಬೇಕು. ಯಾಕೆಂದರೆ, ಅದುವೇ ನೆಮ್ಮದಿಯ ದಾರಿ, ಅಲ್ಲವೇ?
ಫೋಟೋ ಕೃಪೆ: ನ್ಯಾಷನಲ್ ಜಿಯೋಗ್ರಾಫಿ
(ಸಪ್ಟಂಬರ್ 2022)
ಜೀವನದಲ್ಲಿ ಯಾವ ಕೆಲಸದಲ್ಲೇ ಆಗಲಿ, ಯಶಸ್ಸು ಸಾಧಿಸಲು ಕೆಲವು ಸೂತ್ರಗಳನ್ನು ಅನುಸರಿಸ ಬೇಕಾಗುತ್ತದೆ. ಒಂದು ಯುದ್ಧದಲ್ಲಿ ಗೆಲುವು ಸಾಧಿಸಬೇಕಾದರೆ ಏನೆಲ್ಲ ಅಗತ್ಯವೆಂದು ಯೋಚಿಸಿ: ನಿಖರ ಮಾಹಿತಿ ಸಂಗ್ರಹ, ಯೋಧರ ಸನ್ನದ್ಧತೆ, ಆಯುಧ-ಪರಿಕರಗಳ ಕ್ಷಮತೆ, ಪೂರ್ವಸಿದ್ಧತೆ, ವ್ಯೂಹ ರಚನೆ, ಕಾರ್ಯತಂತ್ರಗಳು, ಕದನೋತ್ಸಾಹ, ಮುನ್ನುಗ್ಗುವಿಕೆ, ಹಿಮ್ಮೆಟ್ಟದ ಛಲ, ಯೋಜನೆಯಂತೆ ಕಾರ್ಯಾಚರಣೆ – ಇವೆಲ್ಲ ಅವಶ್ಯ, ಅಲ್ಲವೇ?
ಹಾಗೆಯೇ, ಉತ್ಪಾದನಾ ಘಟಕ, ವ್ಯಾಪಾರ ಮಳಿಗೆ, ಸಂಸ್ಥೆ ಅಥವಾ ಸಂಘಟನೆಯ ಮುನ್ನಡೆ ಹಾಗೂ ಯಶಸ್ಸಿಗೆ ಹತ್ತಾರು ಸೂತ್ರಗಳನ್ನು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದ ಐದು ಸೂತ್ರಗಳ ಬಗ್ಗೆ ಪುಟ್ಟ ವಿವರಣೆ ಇಲ್ಲಿದೆ.
1) ನಮ್ಮ ಗುರಿಯ ಬಗ್ಗೆ ಸ್ಪಷ್ಟ ಅರಿವು
ಒಂದು ಘಟಕ ಅಥವಾ ಸಂಸ್ಥೆ ಸ್ಥಾಪಿಸುವಾಗ “ಇದು ಯಾತಕ್ಕಾಗಿ?” ಎಂಬುದರ ಬಗ್ಗೆ ಸ್ಪಷ್ಟತೆ ಬೇಕು. ಇಲ್ಲವಾದರೆ ಗೊಂದಲ ಮೂಡುತ್ತದೆ, ಗುರಿ ಸಾಧನೆಗೆ ತೊಡಕಾಗುತ್ತದೆ. ಕಿಂಗ್-ಫಿಷರ್ ಏರ್-ಲೈನ್ಸಿನ ಉದ್ದೇಶ ಏನಾಗಿತ್ತು? ಅತ್ಯುತ್ತಮ ವಾಯುಯಾನ ಸೇವೆ ಒದಗಿಸುವುದು. “ಗ್ರಾಹಕರನ್ನು ನಮ್ಮ ಮನೆಯ ಅತಿಥಿಯಂತೆ ಸತ್ಕರಿಸುತ್ತೇವೆ” ಎಂದು ಪ್ರತಿಯೊಂದು ವಿಮಾನ ಹಾರಾಟದಲ್ಲಿಯೂ ಅದರ ಮಾಲೀಕರಾದ ವಿಜಯ ಮಲ್ಯರು ಘೋಷಿಸುತ್ತಿದ್ದರು. ಗ್ರಾಹಕರಿಗೆ ಅತ್ಯುತ್ತಮ ಯಾನದ ಅನುಭವ ಒದಗಿಸಬೇಕಾದರೆ, ಹಲವಾರು ಬಾಬ್ತುಗಳಿಗೆ ಖರ್ಚು ಮಾಡಲೇ ಬೇಕು. ಆದರೆ, ಡೆಕ್ಕನ್ ಏರ್ವೇಸ್ ಖರೀದಿಸಿದಾಗ ಸಮಸ್ಯೆ ಶುರುವಾಯಿತು. ಯಾಕೆಂದರೆ, ಡೆಕ್ಕನ್ ಏರ್ವೇಸ್ನ ಉದ್ದೇಶ ಕಡಿಮೆ ವೆಚ್ಚದಲ್ಲಿ ವಿಮಾನ ಯಾನಸೇವೆ ಒದಗಿಸುವುದು. ಹೀಗೆ ಉದ್ದೇಶಗಳ ತಾಕಲಾಟದಿಂದಾಗಿ, ಕಿಂಗ್-ಫಿಷರ್ ಏರ್-ಲೈನ್ಸ್ ಪತನ. ಈಗ ಬ್ಯಾಂಕುಗಳಿಗೆ ಅದರಿಂದ ರೂ.7,000 ಕೋಟಿ ಸಾಲ ಬಾಕಿ.
2)ಮಾಡಬೇಕಾದ್ದನ್ನು ಮಾತ್ರ ಮಾಡುವುದು
ಯಶಸ್ಸು ಸಾಧಿಸಬೇಕಾದರೆ, ಅದಕ್ಕಾಗಿ ಮಾಡಬೇಕಾದ್ದನ್ನೇ ಮಾಡಬೇಕು ವಿನಃ ಮಾಡಬಾರದ್ದಕ್ಕೆ ಕೈಹಾಕಬಾರದು. ಮಹಾತ್ಮಾ ಗಾಂಧಿಯವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ಅಧ್ಯಯನ ಮಾಡಿದರೆ ನಮಗೆ ಈ ಸೂತ್ರ ಚೆನ್ನಾಗಿ ಅರ್ಥವಾಗುತ್ತದೆ. ಅವರು ಮಾಡಬೇಕಾದ್ದನ್ನೇ ಮಾಡುತ್ತ ಹೋದರು. ಹೋರಾಟಕ್ಕಾಗಿ ಅವರು ಆಯ್ಕೆ ಮಾಡಿದ್ದು ಅಹಿಂಸೆಯ ಹಾದಿ. ಅದರಲ್ಲೇ ಮುಂದೆ ಸಾಗಿದರು. ತಮ್ಮ ಅನುಯಾಯಿಗಳು ಹಿಂಸೆಯ ಹಾದಿಯಲ್ಲಿ ಹೆಜ್ಜೆಯಿಟ್ಟಾಗ ಖಂಡಿಸಿದರು. ಮಾತ್ರವಲ್ಲ, ಅನುಯಾಯಿಗಳ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಉಪವಾಸ ಮಾಡಿ ತನ್ನನ್ನೇ ದಂಡಿಸಿಕೊಂಡರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಗಳಿಸಿ ಕೊಟ್ಟ ನಂತರ, ತನಗೆ ಅಧಿಕಾರ ಬೇಡ ಎಂದು ಹಿಂದೆ ಸರಿದರು. ಸಮಾಜದ ಉದ್ಧಾರದ ಕೆಲಸಗಳಲ್ಲಿ ತೊಡಗಿಸಿಕೊಂಡರು. ಮಾಡಬೇಕಾದ್ದನ್ನೇ ಮಾಡುವುದಕ್ಕೆ ಅವರ ಜೀವನವೇ ಮಾದರಿ.
3)ಕಾರ್ಯದಕ್ಷತೆ
ಯಶಸ್ಸು ಬೇಕಿದ್ದರೆ, ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಕೆಲಸ ಯಾವುದೇ ಇರಲಿ, ಶ್ರದ್ಧೆಯಿಂದ, ದಕ್ಷತೆಯಿಂದ ಮಾಡಿದರೆ ಅಚ್ಚುಕಟ್ಟಾಗಿರುತ್ತದೆ. ಕೊಂಕಣ ರೈಲ್ವೇ ಮತ್ತು ಢೆಲ್ಲಿ ಮೆಟ್ರೋ ರೈಲು – ಇವು ಇಂದು ಇಂಜಿನಿಯರಿಂಗ್ ಕಾರ್ಯದಕ್ಷತೆಗೆ ಇಡೀ ಜಗತ್ತಿನಲ್ಲೇ ಮಾದರಿಯಾಗಿವೆ. ಈ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸಿದವರು ಶ್ರೀ ಶ್ರೀಧರನ್. ಅವರ ಕಾರ್ಯದಕ್ಷತೆಯಿಂದಾಗಿ ಈ ಯೋಜನೆಗಳಲ್ಲಿ ಎದುರಾದ ಎಲ್ಲ ಎಡರುತೊಡರುಗಳನ್ನು ನಿವಾರಿಸಿ, ಯೋಜಿತ ಅವಧಿಗಿಂತ ಮುಂಚೆಯೇ ಅವನ್ನು ಪೂರ್ತಿ ಮಾಡಲು ಸಾಧ್ಯವಾಯಿತು. ಅವರ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳು ಯಶಸ್ಸಿಗಾಗಿ ಹಂಬಲಿಸುವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾದ ಗುಣಗಳು. ಮಂಗಳೂರಿನಲ್ಲಿ ಅರ್ಧ ಕಿಲೋಮೀಟರಿನ ಒಂದು ಮೇಲ್ ಸೇತುವೆ ಕಟ್ಟಿ ಮುಗಿಸಲು ಎಂಟು ವರುಷ ತಗಲಿದೆ. ಗೋವಾದಲ್ಲಿ ಕಟ್ಟಿದ ಒಂದು ದೊಡ್ಡ ಸೇತುವೆ ಕೆಲವೇ ವರುಷಗಳಲ್ಲಿ ಮುರಿದು ಬಿದ್ದಿದೆ. ಇವನ್ನು ಗಮನಿಸಿದಾಗ ಶ್ರೀಧರನ್ ಅವರ ಕಾರ್ಯದಕ್ಷತೆಯ ಮೌಲ್ಯ ನಮಗೆ ಮನದಟ್ಟಾಗುತ್ತದೆ.
4)ಆದ್ಯತೆಯ ನಿರ್ಧಾರ
ಯಶ ಸಾಧನೆಗಾಗಿ ಮಾಡಬೇಕಾದ ಕೆಲಸಗಳು ಹತ್ತು ಹಲವು. ಅವುಗಳಲ್ಲಿ ಮೊದಲು ಮಾಡಬೇಕಾದ್ದು ಯಾವುದೆಂದು ಆದ್ಯತಾ ಪಟ್ಟಿ ನಿರ್ಧರಿಸುವುದು ಅತ್ಯಗತ್ಯ. ಮನೆ ಕಟ್ಟಬೇಕಾದರೆ ಅಡಿಪಾಯ ಮೊದಲು ಕಟ್ಟಬೇಕಲ್ಲವೇ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಪ್ರಪ್ರಥಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ 15 ಆಗಸ್ಟ್ 2014ರಂದು ಮಾಡಿದ ಮುಖ್ಯ ಘೋಷಣೆ ಏನು? “ಮುಂದಿನ ಸ್ವಾತಂತ್ರ್ಯ ದಿನದಂದು ನಮ್ಮ ದೇಶದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಒಂದೇ ಒಂದು ಶಾಲೆಯೂ ಇರಬಾರದು”. ಭಾರತದ ಉದ್ದಗಲದಲ್ಲಿ ಎಂಟೂವರೆ ಲಕ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, 15 ಆಗಸ್ಟ್ 2015ರಲ್ಲಿ ಆ ಗುರಿ ಸಾಧಿಸಲಾಯಿತು. ಸ್ವಾತಂತ್ರ್ಯಾ ನಂತರದ 67 ವರುಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಒಂದೇ ವರುಷದಲ್ಲಿ ಸಾಧಿಸಿದ್ದು ವಿಶೇಷ.
5)ನಿಮ್ಮ ಜೊತೆಗಾರರಿಗೆ ಕನಸುಗಳನ್ನು ಕಟ್ಟಿ ಕೊಡಿ.
ಯಾಕೆಂದರೆ ಕನಸುಗಳು ವ್ಯಕ್ತಿಗಳನ್ನು ಸಾಧನೆಯತ್ತ ಮುನ್ನುಗ್ಗಿಸುತ್ತವೆ. ನಮ್ಮನ್ನಗಲಿದ ಜನಪ್ರಿಯ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕನಸುಗಳ ಬಗ್ಗೆ ಹೇಳಿದ ಮಾತು ನಮ್ಮ ದೇಶದಲ್ಲೀಗ ಮನೆಮಾತು: “ನಿಮಗೆ ನಿದ್ದೆಯಲ್ಲಿ ಕಾಣುವುದು ಕನಸುಗಳಲ್ಲ. ನಿಮಗೆ ನಿದ್ದೆ ಮಾಡಲು ಬಿಡದಿರುವ ಸಂಗತಿಗಳೇ ಕನಸುಗಳು.” ಮೇ 2014ರಲ್ಲಿ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೊಂದು ಕನಸಿತ್ತು: ಭಾರತದ ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಒಂದು ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಕನಸು. ಅದರ ಯಾರನ್ನೂ ಅಧೀರರಾಗಿಸುವಂತಹ ಕನಸು. ಯಾಕೆಂದರೆ ಅದು 15 ಕೋಟಿ ಹೊಸ ಬ್ಯಾಂಕ್ ಅಕೌಂಟುಗಳನ್ನು ತೆರೆಯುವ ಗುರಿ: 2014ರ ಸ್ವಾತಂತ್ರ್ಯ ದಿನದಿಂದ ತೊಡಗಿ, 2015ರ ಪ್ರಜಾಪ್ರಭುತ್ವ ದಿನದ ವರೆಗಿನ ಕೇವಲ ಐದು ತಿಂಗಳ ಅವಧಿಯಲ್ಲಿ. “ಇದು ಸಾಧ್ಯವೇ?” ಎಂದು ಪ್ರಶ್ನಿಸಿದವರಿಗೆ ಉತ್ತರವಾಗಿ ಅವರು ಘೋಷಿಸಿದ್ದು “ಪ್ರಧಾನಮಂತ್ರಿ ಜನಧನ ಯೋಜನೆ”. ಅದರ ಅನುಸಾರ, ಕೇವಲ ಐದು ತಿಂಗಳಲ್ಲಿ 17.5 ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದ ಸಾಧನೆ, ಕನಸುಗಳ ತಾಕತ್ತಿನ ಪುರಾವೆ. ಜನವರಿ ೨೦೧೯ರಲ್ಲಿ 33 ಕೋಟಿ ಜನಧನ ಖಾತೆಗಳಲ್ಲಿರುವ ಠೇವಣಿ ರೂ.90,000 ಕೋಟಿ!
ಈ ಐದು ಸೂತ್ರಗಳು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಖಂಡಿತವಾಗಿ ಸಹಕಾರಿ. ಇವನ್ನು ಕೃತಿಗಿಳಿಸುವಾಗ, ಆಯಾ ಸನ್ನಿವೇಶಕ್ಕೆ ಅನುಗುಣವಾಗಿ ನಾಯಕನಾದವನು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ನೆನಪಿರಲಿ: ಕಟ್ಟಿಕೊಟ್ಟ ಬುತ್ತಿ ಮುಗಿದೇ ಮುಗಿಯುತ್ತದೆ. ನಿಮ್ಮ ಬದುಕಿನ ಪಯಣದಲ್ಲಿ, ಪ್ರತಿಯೊಂದು ಅನುಭವದಿಂದ ಕಲಿಯುತ್ತ, ತಪ್ಪುಗಳನ್ನು ತಿದ್ದಿಕೊಳ್ಳುತ್ತ ಮುನ್ನಡಿ ಇಡುತ್ತಿದ್ದರೆ, ಯಶಸ್ಸು ನಿಮ್ಮದಾಗುತ್ತದೆ. ಆಗ, ಯಶಸ್ಸಿನ ಅಮಲು ತಲೆಗೇರದಂತೆ ಸಮತೋಲನ ಕಾಯ್ದುಕೊಳ್ಳುವುದು ಮುಂದಿನ ಯಶಸ್ಸುಗಳಿಗೆ ರಹದಾರಿ.
(ಸಪ್ಟಂಬರ್ 2019)