ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ (ಭಾಗ 1)

ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ.

ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ ವಿಶ್ವವಿದ್ಯಾಲಯದಲ್ಲಿ 90 ಲಕ್ಷ ಪುಸ್ತಕಗಳ ಬೃಹತ್ ಗ್ರಂಥಾಲಯವಿತ್ತು. ಪೂರ್ವ ಮತ್ತು ಮಧ್ಯ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದ 10,000 ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಔಷಧಿ ಶಾಸ್ತ್ರ, ತರ್ಕ ಶಾಸ್ತ್ರ, ಗಣಿತ ಮತ್ತು ಬೌದ್ಧ ಮತ ತತ್ವಗಳನ್ನು ಆಗಿನ ಕಾಲದ ಶ್ರೇಷ್ಠ ವಿದ್ವಾಂಸರಿಂದ ಅವರು ಅಲ್ಲಿ ಕಲಿಯುತ್ತಿದ್ದರು. ಬೌದ್ಧರ ಧಾರ್ಮಿಕ ಗುರು ದಲೈ ಲಾಮಾ "ನಮ್ಮ (ಬೌದ್ಧರ) ಎಲ್ಲ ಜ್ನಾನವೂ ಬಂದಿರುವುದು ನಳಂದಾದಿಂದ” ಎಂದೊಮ್ಮೆ ಹೇಳಿದ್ದಾರೆ.

ಏಳ್ನೂರು ವರುಷಗಳ ಅವಧಿಯಲ್ಲಿ ಏಷ್ಯಾದ ವಿವಿಧ ದೇಶಗಳಿಂದ ಬಂದ ಜ್ನಾನಾರ್ಥಿಗಳಿಗೆ ನಳಂದಾ ವಿಶ್ವವಿದ್ಯಾಲಯ ಜ್ನಾನದ ಧಾರೆ ಎರೆಯಿತು. ಆ ದೀರ್ಘ ಅವಧಿಯಲ್ಲಿ ನಳಂದಾವನ್ನು ಸರಿಗಟ್ಟುವ ಬೇರೊಂದು ವಿಶ್ವವಿದ್ಯಾಲಯ ಜಗತ್ತಿನಲ್ಲಿ ಬೇರೆಲ್ಲೂ ಇರಲಿಲ್ಲ. ಬೊಲೊಂಗಾ ವಿಶ್ವವಿದ್ಯಾಲಯ ಯುರೋಪಿನ ಅತ್ಯಂತ ಹಳೆಯ ವಿಶ್ವವಿದ್ಯಾಲಯ. ನಳಂದಾ ವಿಶ್ವವಿದ್ಯಾಲಯ ಅದಕ್ಕಿಂತಲೂ ಐನೂರು ವರುಷ ಹಳೆಯದು ಎಂಬುದು ಗಮನಾರ್ಹ. ನಳಂದಾ ವಿಶ್ವವಿದ್ಯಾಲಯದಲ್ಲಿ ಅಲ್ಲಲ್ಲಿ ಮುಕ್ತ ವಾತಾವರಣದಲ್ಲಿ ಕಲಿಕಾ ಸ್ಥಳಗಳಿದ್ದು, ಅವುಗಳ ಸುತ್ತಲೂ ಪ್ರಾರ್ಥನಾ ಮಂದಿರಗಳು ಮತ್ತು ಅಧ್ಯಯನ ಕೊಠಡಿಗಳು ಇದ್ದವು.

ನಳಂದಾ ವಿಶ್ವವಿದ್ಯಾಲಯದ ಪ್ರಚಂಡ ಕೊಡುಗೆಗಳು
ಸಸ್ಯಾಧಾರಿತ ಪ್ರಾಚೀನ ಚಿಕಿತ್ಸಾ ಪದ್ಧತಿ ಆಯುರ್ವೇದವನ್ನು ನಳಂದಾದಲ್ಲಿ ಪ್ರಧಾನವಾಗಿ ಕಲಿಸಲಾಗುತ್ತಿತ್ತು. ಇಲ್ಲಿ ಅದನ್ನು ಕಲಿತವರಿಂದಲೇ ಅದು ಭಾರತದ ಉದ್ದಗಲದಲ್ಲಿ ಪಸರಿಸಿತು. ಥೈಲೆಂಡಿನ ಅಧ್ಯಾತ್ಮಿಕ ಚಿತ್ರಕಲೆಗೆ ಮತ್ತು ಟಿಬೆಟ್ ಹಾಗೂ ಮಲೇಷ್ಯಾದ ಲೋಹದ ಕಲೆಗೆ ನಳಂದಾವೇ ಮೂಲ.

ಎಲ್ಲದಕ್ಕಿಂತ ಮುಖ್ಯವಾಗಿ ಗಣಿತ ಮತ್ತು ಖಗೋಲ ವಿಜ್ನಾನದ ಬೆಳವಣಿಗೆಗೆ ನಳಂದಾ ವಿಶ್ವವಿದ್ಯಾಲಯದ ಕೊಡುಗೆ ವಿಶೇಷ. ಭಾರತದ ಗಣಿತ ಶಾಸ್ತ್ರದ ಪಿತಾಮಹ ಆರ್ಯಭಟ ಆರನೆಯ ಶತಮಾನದಲ್ಲಿ ನಳಂದಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರೆಂದು ನಂಬಲಾಗಿದೆ. "ಶೂನ್ಯವನ್ನು ಒಂದು ಅಂಕೆಯನ್ನಾಗಿ ಪ್ರಪ್ರಥಮ ಬಾರಿಗೆ ಪರಿಚಯಿಸಿದ್ದು ಆರ್ಯಭಟ ಎಂದು ನಾವು ನಂಬುತ್ತೇವೆ. ಈ ಕ್ರಾಂತಿಕಾರಿ ಪರಿಕಲ್ಪನೆ ಗಣಿತದ ಲೆಕ್ಕಾಚಾರಗಳನ್ನು ಸರಳಗೊಳಿಸಿತು ಮತ್ತು ಬೀಜಗಣಿತ ಹಾಗೂ ಕಲನಶಾಸ್ತ್ರದಂತಹ ಸಂಕೀರ್ಣ ಶಾಸ್ತ್ರಗಳ ಅಭಿವೃದ್ಧಿಗೆ ಕಾರಣವಾಯಿತು” ಎನ್ನುತ್ತಾರೆ ಕೊಲ್ಕತಾದ ಗಣಿತದ ಪ್ರೊಫೆಸರ್ ಅನುರಾಧಾ ಮಿತ್ರ. "ಶೂನ್ಯ ಇಲ್ಲದಿದ್ದರೆ ಇಂದಿನ ಕಂಪ್ಯೂಟರುಗಳು ಇರಲು ಸಾಧ್ಯವಿಲ್ಲ” ಎಂದವರು ಬೊಟ್ಟು ಮಾಡಿ ತೋರಿಸುತ್ತಾರೆ. “ವರ್ಗಮೂಲ ಮತ್ತು ಘನಮೂಲಗಳ ಲೆಕ್ಕಾಚಾರ ಮತ್ತು ಗೋಳೀಯ ಜ್ಯಾಮಿತಿಗೆ ತ್ರಿಕೋನಮಿತಿಯ ಫಲನಗಳ ಬಳಕೆಗೆ ಅಪ್ರತಿಮ ಕೊಡುಗೆ ಸಲ್ಲಿಸಿದವರು ಆರ್ಯಭಟ. ಚಂದ್ರನ ಪ್ರಕಾಶಕ್ಕೆ ಸೂರ್ಯನ ಪ್ರತಿಫಲಿತ ಬೆಳಕು ಕಾರಣವೆಂದು ಮೊಟ್ಟಮೊದಲಾಗಿ ತಿಳಿಸಿದ್ದು ಆರ್ಯಭಟ” ಎನ್ನುತ್ತಾರೆ ಅವರು. ಆತನ ಒಳನೋಟಗಳು ಭಾರತದಲ್ಲಿ ಗಣಿತ ಮತ್ತು ಖಗೋಳ ವಿಜ್ನಾನದ ಪ್ರಚಂಡ ಬೆಳವಣಿಗೆಗೆ ಕಾರಣವಾದವು.

ಬೌದ್ಧ ಮತದ ಬೋಧನೆ ಮತ್ತು ತತ್ವಗಳ ಪ್ರಚಾರಕ್ಕಾಗಿ ಚೀನಾ, ಕೊರಿಯಾ, ಜಪಾನ್, ಇಂಡೋನೇಷ್ಯಾ, ಶ್ರೀಲಂಕಾ ಇತ್ಯಾದಿ ದೇಶಗಳಿಗೆ ನಳಂದಾ ವಿಶ್ವವಿದ್ಯಾಲಯವು ವಿದ್ವಾಂಸರನ್ನು ಕಳಿಸುತ್ತಿತ್ತು. ಈ ಸಾಂಸ್ಕೃತಿಕ ವಿನಿಮಯವು ಏಷ್ಯಾ ಖಂಡದಲ್ಲಿ ಬೌದ್ಧ ಮತದ ಪ್ರಸಾರಕ್ಕೆ ಸಹಕಾರಿಯಾಯಿತು.

ದುಷ್ಟ ರಾಜನ ಸೈನ್ಯದ ನೀಚ ಕೃತ್ಯ: ನಳಂದಾ ವಿಶ್ವವಿದ್ಯಾಲಯದ ನಾಶ
1190ರಲ್ಲಿ ಟರ್ಕಿ-ಅಫಘಾನಿಸ್ಥಾನದ ದಳಪತಿ ಭಕ್ತಿಯಾರ್ ಖಿಲ್ಜಿ ಮುನ್ನಡೆಸಿದ ದುಷ್ಟ ಸೈನ್ಯದ ಆಕ್ರಮಣದಿಂದ ನಳಂದಾ ವಿಶ್ವವಿದ್ಯಾಲಯ ನಾಶವಾಯಿತು. ಅಲ್ಲಿನ ಬೌದ್ಧ ಜ್ನಾನ ಕೇಂದ್ರವನ್ನು ನಿರ್ನಾಮ ಮಾಡುವುದೇ ಪೂರ್ವ ಮತ್ತು ಉತ್ತರ ಭಾರತಕ್ಕೆ ಧಾಳಿ ಮಾಡಿದ ಆ ನೀಚ ದಳಪತಿಯ ಉದ್ದೇಶವಾಗಿತ್ತು. ಅವನ ರಾಕ್ಷಸೀ ಪ್ರವೃತ್ತಿಯ ಸೈನಿಕರು ನಳಂದಾ ವಿಶ್ವವಿದ್ಯಾಲಯದಲ್ಲಿ ಸಿಕ್ಕಸಿಕ್ಕಲ್ಲಿ ಹಚ್ಚಿದ ಬೆಂಕಿ ಮೂರು ತಿಂಗಳುಗಳ ಕಾಲ ಉರಿಯುತ್ತಿತ್ತು ಎಂದರೆ ಅವರು ಮಾಡಿದ ಅಪಾರ ಹಾನಿಯನ್ನು ಕಲ್ಪಿಸಿಕೊಳ್ಳಬಹುದು. ಈಗ ನಳಂದಾ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಅಧ್ಯಯನಕ್ಕಾಗಿ 23 ಹೆಕ್ಟೇರ್ ಪ್ರದೇಶದಲ್ಲಿ ಉತ್ಖನನ ನಡೆಸಲಾಗಿದೆ. ಇದು ಶತಮಾನಗಳ ಮುಂಚಿನ ಜಗತ್ತಿನ ಪರಮೋನ್ನತ ವಿಶ್ವವಿದ್ಯಾಲಯದ ಒಂದು ಪುಟ್ಟ ಭಾಗ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನಗಳು ಮತ್ತು ಬೌದ್ಧ ಗುರುಕುಲಗಳು ತುಂಬಿರುವ ಈ ಪ್ರದೇಶದಲ್ಲಿ ನಡೆದಾಡಿದರೆ, ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದ ಭವ್ಯ ಪರಿಸರದಲ್ಲಿ ಸಾವಿರಾರು ಜ್ನಾನದಾಹಿಗಳ ಅಧ್ಯಯನ ಹೇಗಿದ್ದಿರಬಹುದು ಎಂಬುದನ್ನು ಊಹಿಸಬಹುದು.
(ಭಾಗ 2ರಲ್ಲಿ ಮುಂದುವರಿದಿದೆ)

ಫೋಟೋ: ನಳಂದಾ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಈಗಿನ ಸ್ಥಿತಿ