ದೇವರು ಇದ್ದಾನೆ ಎಂಬಂತೆ ಬದುಕಬೇಕು

ಭೂಮಿಯ ಹಾಗೂ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಅಗೋಚರ ಶಕ್ತಿಯೊಂದು ಅವೆಲ್ಲವನ್ನೂ ನಿಯಂತ್ರಿಸುತ್ತಿದೆ ಎಂದನಿಸುತ್ತದೆ. ಅದನ್ನು "ದೇವರು" ಎಂದು ಕರೆಯುವುದು ಎಲ್ಲ ಧರ್ಮಗಳಲ್ಲಿಯೂ ವಾಡಿಕೆ.

ಅಂತಹ ಆಗುಹೋಗುಗಳ ಬಗ್ಗೆ ನಮಗೆ ಎದುರಾಗುವ ಕೆಲವು ಪ್ರಶ್ನೆಗಳು: ಕೋಟಿಗಟ್ಟಲೆ ವರುಷಗಳಿಂದ ಉರಿಯುತ್ತಿರುವ ಸೂರ್ಯ ಬೂದಿಯಾಗಿ ನಾಶವಾಗುತ್ತಿಲ್ಲ ಯಾಕೆ? ನಮ್ಮ ಭೂಮಿ ತನ್ನ ಕಕ್ಷೆಯಲ್ಲಿ ಕರಾರುವಾಕ್ಕಾಗಿ ಹೇಗೆ ಸುತ್ತುತ್ತಿದೆ? ಮಂಗಳ, ಬುಧ, ಗುರು, ಶನಿ ಇತ್ಯಾದಿ ಗ್ರಹಗಳು ಹೇಗೆ ಸುತ್ತುತ್ತಿವೆ? ಅವು ಕುಸಿಯುತ್ತಿಲ್ಲ ಯಾಕೆ? ಭೂಮಿಯ ಸಾಗರಗಳ ಅಗಾಧ ಜಲರಾಶಿ ಭೂಮಿಯಿಂದ ಕಳಚಿ ಬೀಳುತ್ತಿಲ್ಲ ಯಾಕೆ? ಕಣ್ಣಿಗೆ ಕಾಣದ ಪರಮಾಣುವಿನಿಂದ ಪ್ರಚಂಡ ಶಕ್ತಿ ಹೇಗೆ ಉತ್ಪನ್ನವಾಗುತ್ತದೆ?

ಈ ವರೆಗೆ ಬೇರೆ ಯಾವುದೇ ಆಕಾಶಕಾಯದಲ್ಲಿ ಪತ್ತೆಯಾಗದ "ಜೀವಿಗಳು" ಭೂಮಿಯಲ್ಲಿ ಮಾತ್ರ ಯಾಕಿವೆ? ಈ ಜೀವಿಗಳೆಲ್ಲವೂ ನಿರಂತರವಾಗಿ ಸಂತಾನೋತ್ಪತ್ತಿ ಮಾಡುತ್ತಾ ಜೀವಿಸುವ ಸಂಕೀರ್ಣ ವ್ಯವಸ್ಥೆಯೊಂದು ಭೂಮಿಯಲ್ಲಿ ಹೇಗೆ ವಿಕಾಸ ಹೊಂದಿತು? ಪ್ರಾಣವಾಯು ಆಮ್ಲಜನಕ, ಜೀವಜಲ, ಆಹಾರದ ಆಧಾರದಿಂದ ಬದುಕಿ ಉಳಿಯಲು ಜೀವಿಗಳಿಗೆ ಹೇಗೆ ಸಾಧ್ಯವಾಯಿತು? ಪಕ್ಷಿಗಳು ಮತ್ತು ಕೆಲವು ಕೀಟಗಳು ಮಾತ್ರ ಹಾರುತ್ತವೆ ಯಾಕೆ? ಆಯಾ ಜೀವಿಗೆ ಬೇಕಾದ ಆಹಾರ ಅದಕ್ಕೆ ಹೇಗೆ ಸಿಗುತ್ತಿದೆ? ಬೇರೆಬೇರೆ ಜೀವಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಕೋಟಿಗಟ್ಟಲೆ ವರುಷಗಳಿಂದ ಹೇಗೆ ನಡೆದು ಬಂದಿದೆ?

ಪುಟ್ಟ ಬೀಜದಿಂದ ದೊಡ್ಡ ಮರವೊಂದು ಹೇಗೆ ಬೆಳೆದು ಬರುತ್ತದೆ? ಗಿಡಮರಗಳಲ್ಲಿ ಬೇರೆಬೇರೆ ಬಣ್ಣಗಳ ಹೂಗಳು ಹೇಗೆ ಅರಳುತ್ತವೆ? ಹೂಗಳಿಂದ ಹಣ್ಣುಗಳು, ಹಣ್ಣುಗಳಿಂದ ಬೀಜಗಳು ಹೇಗೆ ಮೂಡಿ ಬರುತ್ತವೆ? ಭೂಮಿಯಲ್ಲಿರುವ ಸುಮಾರು 800 ಕೋಟಿ ಮನುಷ್ಯರಿಗೆ ದಿನದಿನವೂ ವಿಭಿನ್ನ ಆಹಾರ ಹೇಗೆ ಸಿಗುತ್ತದೆ? ಸೂಕ್ಷ್ಮಜೀವಿಗಳಿಂದ ಹರಡುವ ಕೊರೋನಾದಂತಹ ರೋಗಗಳನ್ನು ತಕ್ಷಣವೇ ನಿಯಂತ್ರಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

ಇವೆಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ: ದೇವರು ಎಂದು ಕರೆಯಲಾಗುವ ಅಗೋಚರ ಶಕ್ತಿಯೊಂದು ಇವೆಲ್ಲವನ್ನೂ ನಿಯಂತ್ರಿಸುತ್ತಿದೆ. ಇದು ಯಾವುದನ್ನೂ ಹುಲುಮಾನವ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇನ್ನೂ ಕೆಲವು ಆಗುಹೋಗು ಪರಿಶೀಲಿಸೋಣ. ಉಲ್ಕೆಯೊಂದು ಬಂದು ಭೂಮಿಗೆ ಅಪ್ಪಳಿಸಿ, ಇಲ್ಲಿಯ ಹಲವು ಜೀವವರ್ಗಗಳು ನಿರ್ನಾಮವಾಗುವುದು ಯಾಕೆ? ಅಗ್ನಿಪರ್ವತಗಳ ಸ್ಫೋಟ, ಭೂಕಂಪಗಳ ರಂಪ, ಅತಿವೃಷ್ಟಿ. ಅನಾವೃಷ್ಟಿ, ನೆರೆಹಾವಳಿ, ಕಾಡಿನ ಬೆಂಕಿ - ಇವೆಲ್ಲದರಿಂದ ಸಾವಿರಾರು ಜನರ ಹಾಗೂ ಜೀವಿಗಳ ಸಾವು ಯಾಕೆ?

ಕೋವಿಡ್-19 ಎಂಬ ಒಂದು ವೈರಸಿನ ಧಾಳಿಗೆ ಜಗತ್ತಿನ 60.36 ಕೋಟಿ ಜನರು ತತ್ತರಿಸಿದ್ದು ಯಾಕೆ? ಅದರಿಂದಾಗಿ 64.80 ಲಕ್ಷ ಜನರು ಕೇವಲ ಎರಡು ವರುಷಗಳ ಅವಧಿಯಲ್ಲಿ ಸತ್ತದ್ದು ಯಾಕೆ? ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಇದ್ದರೂ, ಅತ್ಯುತ್ತಮ ರೋಗಪತ್ತೆ ಮತ್ತು ರೋಗಚಿಕಿತ್ಸಾ ವಿಧಾನಗಳು ಲಭ್ಯವಿದ್ದರೂ ಅವರಲ್ಲಿ ಅರೆವಾಸಿ ರೋಗಿಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ?

ಉತ್ತಮ ರಸ್ತೆಗಳಿದ್ದರೂ, ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳು ಇದ್ದರೂ ಪ್ರತಿ ವರುಷ ಕಾರು ಅಪಘಾತಗಳಿಂದಾಗಿ 12 ಲಕ್ಷ ಜನರು ಸಾಯುವುದು, ಲಕ್ಷಗಟ್ಟಲೆ ಜನರು ಅಂಗವಿಕಲರಾಗುವುದು ಯಾಕೆ?

ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ವಿವಿಧ ವ್ಯವಸ್ಥೆಗಳಿದ್ದರೂ ಲಕ್ಷಗಟ್ಟಲೆ ಕೊಲೆ, ಹಲ್ಲೆ, ಮಾನಭಂಗ, ದರೋಡೆ, ಸುಲಿಗೆ, ಕಳ್ಳತನ ಆಗುತ್ತಿರೋದು ಯಾಕೆ? ಅವೆಲ್ಲ ಅನ್ಯಾಯ ಮಾಡಿದ ಹಲವರು ಸಿಕ್ಕಿ ಬೀಳುತ್ತಿಲ್ಲ ಯಾಕೆ? ಅವೆಲ್ಲ ಅನ್ಯಾಯ ಮಾಡಿದ ಅನೇಕರಿಗೆ ಯಾವ ಶಿಕ್ಷೆಯೂ ಆಗುತ್ತಿಲ್ಲ ಯಾಕೆ? ಬಡತನದಲ್ಲಿ ಹುಟ್ಟಿದ ಹಲವರು ಬಡತನದಲ್ಲೇ ಕೊನೆ ತನಕ ಬದುಕಬೇಕಾಗುತ್ತದೆ ಯಾಕೆ? ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಯಾಕೆ? ನ್ಯಾಯದಿಂದ ಬದುಕುವ ಜನಸಾಮಾನ್ಯರು ಬದುಕಿನಲ್ಲಿ ಹೈರಾಣಾಗುತ್ತಿದ್ದಾರೆ ಯಾಕೆ?

ಇವೆಲ್ಲ ಪ್ರಶ್ನೆಗಳಿಗೆ ನೇರ ಉತ್ತರ ಸಿಗೋದಿಲ್ಲ. ಜಗತ್ತಿನ ಎಲ್ಲ ಆಗುಹೋಗು ನಿಯಂತ್ರಿಸುವ ದೇವರೆಂಬ ಶಕ್ತಿ ಧರ್ಮದ ರಕ್ಷಣೆ ಮಾಡುತ್ತದೆಂಬ ನಂಬಿಕೆ ಜನರಲ್ಲಿದೆ. ಹಾಗಾದರೆ, ಇವೆಲ್ಲ ಯಾಕೆ ಆಗುತ್ತಿವೆ? ಎಂಬ ಪ್ರಶ್ನೆಯನ್ನು ಉತ್ತರಿಸಲಾಗೋದಿಲ್ಲ. ಹಾಗಾಗಿ, ದೇವರು ಇದ್ದಾನೋ ಇಲ್ಲವೋ ಎಂದು ಗೊಂದಲವಾಗುತ್ತದೆ.

ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದಾಗಿನಿಂದಲೂ ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದು ಎಂದಿಗೂ ಮುಗಿಯದ ಚರ್ಚೆ. ಹಾಗಾದರೆ, ನಾವು ಯಾವುದನ್ನು ನಂಬಿ ಬದುಕಬೇಕು? ಈ ಪ್ರಶ್ನೆಗೆ ಉತ್ತರ: ದೇವರು ಇದ್ದಾನೆ ಎಂಬಂತೆ ಬದುಕಬೇಕು. ಯಾಕೆಂದರೆ, ಅದುವೇ ನೆಮ್ಮದಿಯ ದಾರಿ, ಅಲ್ಲವೇ?

ಫೋಟೋ ಕೃಪೆ: ನ್ಯಾಷನಲ್ ಜಿಯೋಗ್ರಾಫಿ
(ಸಪ್ಟಂಬರ್ 2022)