ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು ಯುದ್ಧ ಮಾಡಲಾರೆ” ಎನ್ನುತ್ತಾನೆ.
ಆಗ ಅರ್ಜುನನಿಗೆ ಬದುಕಿನ ಪರಮಪಾಠವನ್ನು ಶ್ರೀಕೃಷ್ಣ ರಣರಂಗದಲ್ಲಿಯೇ ಉಪದೇಶಿಸುತ್ತಾನೆ. ಅವನ ಧರ್ಮ ಏನೆಂಬುದನ್ನು ಶ್ರೀಕೃಷ್ಣ ತಿಳಿಸುತ್ತಾನೆ. ಧರ್ಮದ ರಕ್ಷಣೆಗಾಗಿ ಅವನು ಅಧರ್ಮಿಗಳ ವಿರುದ್ಧ ಯುದ್ಧ ಮಾಡಲೇ ಬೇಕೆಂದು ವಿವರಿಸುತ್ತಾನೆ. ಇದುವೇ ಹದಿನೆಂಟು ಅಧ್ಯಾಯಗಳಲ್ಲಿರುವ “ಭಗವದ್ಗೀತೆ". ಇದರ ಸಾರವನ್ನು ತಿಳಿದುಕೊಳ್ಳೋಣ.
ನಿನ್ನ ಕಾಯಕವನ್ನು ಪ್ರೀತಿಸು
ಕಾಯಕ ಮಾಡುವಾಗ, ಅದರ ಫಲದ ಬಗ್ಗೆ ಯೋಚನೆ ಮಾಡಬೇಡ; ಬದಲಾಗಿ ಅದರ ಪ್ರಕ್ರಿಯೆಯ ಮೇಲೆ ಗಮನ ಹರಿಸು. ಕಾಯಕದ ಫಲಕ್ಕಿಂತಲೂ ಕಾಯಕವೇ ನಿನಗೆ ಸಂತೋಷ ನೀಡಬೇಕು. ಕಾಯಕದ ಫಲವೇ ನಿನ್ನ ಕಾಯಕದ ಉದ್ದೇಶ ಆಗಬಾರದು. ಪ್ರಯಾಣದ ಗುರಿಗಿಂತಲೂ ಹೆಚ್ಚಿನ ಸಂತೋಷವನ್ನು ಪ್ರಯಾಣದಿಂದಲೇ ಪಡೆದುಕೋ. ಎಲ್ಲ ಮಹಾ ಕಲಾವಿದರು, ಯೋಧರು, ವಿಜ್ನಾನಿಗಳು ಈ ಪಥವನ್ನು ಅನುಸರಿಸಿ ಮಹತ್ತಾದುದನ್ನು ಸಾಧಿಸಿದರು.
ನಿನ್ನ ಭಾವನೆಗಳನ್ನು ನಿಯಂತ್ರಿಸು
ಭಗವದ್ಗೀತೆಯು ಭಾವನೆಗಳನ್ನು ಮತ್ತು ಮೋಹವನ್ನು ನಿಯಂತ್ರಿಸುವ ಬಗ್ಗೆ ಮತ್ತೆಮತ್ತೆ ತಿಳಿವಳಿಕೆ ನೀಡುತ್ತದೆ. ಗಾಬರಿ ಮತ್ತು ಮೋಹ ನಿನ್ನ ಶತ್ರುಗಳೆಂಬುದು ಅದರ ಸ್ಪಷ್ಟ ಸಂದೇಶ. ಅತ್ಯಂತ ಆತಂಕದ ಸನ್ನಿವೇಶಗಳಲ್ಲಿಯೂ ಶಾಂತವಾಗಿದ್ದು, ಭಾವನೆಗಳ ಬದಲಾಗಿ ತರ್ಕದ ಮೂಲಕ ಯೋಚಿಸಿ ಕಾರ್ಯಾಚರಿಸಬೇಕೆಂದು ಹಲವು ಉದಾಹರಣೆಗಳ ಮೂಲಕ ವಿವರಿಸುತ್ತದೆ. ಒಬ್ಬ ವ್ಯಕ್ತಿಯ ಕಾಯಕಗಳೆಲ್ಲ ಆತಂಕದಿಂದ ಮುಕ್ತವಾಗಿದ್ದರೆ, ಆತನೇ ವಿವೇಕಿ ಎನ್ನುತ್ತದೆ ಭಗವದ್ಗೀತೆ.
ಭಾವನೆಗಳ ನಿಯಂತ್ರಣಕ್ಕಾಗಿ ನೀನು ಮಾಡಬೇಕಾದ್ದು
ಭಾವನೆಗಳ ನಿಯಂತ್ರಣಕ್ಕಾಗಿ ಅಷ್ಟಾಂಗ ಯೋಗದ ಸಾಧನೆ ಮತ್ತು ಸೂಕ್ತ ಆಹಾರದ ಸೇವನೆ ಅತ್ಯಗತ್ಯವೆಂದು ಭಗವದ್ಗೀತೆ ಸಾರುತ್ತದೆ. ಭಗವದ್ಗೀತೆಯು ಆಹಾರವನ್ನು ಮೂರು ವಿಧಗಳಾಗಿ ವಿಂಗಡಿಸಿದೆ: ಸಾತ್ವಿಕ, ರಜಸ್ ಮತ್ತು ತಮಸ್. ಹಣ್ಣುಗಳು, ಹಸುರು ತರಕಾರಿಗಳು ಮತ್ತು ಹಾಲು ಸಾತ್ವಿಕ ಆಹಾರ. ಮಸಾಲೆಭರಿತ ಮತ್ತು ಸ್ಟೀರಾಯಿಡ್ ಆಹಾರ ರಜಸ್. ಕೊಬ್ಬಿನ ಆಹಾರ ಮತ್ತು ಹಳಸಿದ ಆಹಾರ ತಮಸ್. ಭಗವದ್ಗೀತೆಯ ಅನುಸಾರ, ಸಾತ್ವಿಕ ಆಹಾರವು ವಿವೇಕಕ್ಕೆ ಮತ್ತು ರಜಸ್ ಆಹಾರವು ದುರಾಸೆಗೆ ಕಾರಣ. ತಾಮಸಿಕ ಆಹಾರವು ತಪ್ಪು-ತಿಳಿವಳಿಕೆ, ಭ್ರಾಂತಿ ಮತ್ತು ಮೌಢ್ಯಕ್ಕೆ ಕಾರಣ.
ಇನ್ನೊಬ್ಬ ಬದುಕಿದಂತೆ ಬದುಕಲು ಪ್ರಯತ್ನಿಸಬೇಡ
ಪ್ರತಿಯೊಬ್ಬನ ಬದುಕು ಕೂಡ ವಿಶೇಷ. ರೈತನ ಬದುಕು ಸಂತೋಷಭರಿತ ಮತ್ತು ಆಹ್ಲಾದದಾಯಕ ಎಂದು ಒಬ್ಬ ಯೋಧ ಯೋಚಿಸಬಹುದು. ಹಾಗೆಯೇ, ಯೋಧನ ಬದುಕು ಚೈತನ್ಯಭರಿತ ಮತ್ತು ಕ್ರಿಯಾಶೀಲ ಎಂದು ರೈತ ಯೋಚಿಸಬಹುದು. ಹಾಗಾಗಿಯೇ ದೂರದ ಬೆಟ್ಟ ನುಣ್ಣಗೆ ಎಂಬ ವಿವೇಕದ ಮಾತು ಬಳಕೆಯಲ್ಲಿದೆ. ಇವರಿಬ್ಬರ ಬದುಕಿಗೂ ಈ ಜಗತ್ತಿನಲ್ಲಿ ಸಮಾನ ಪ್ರಾಮುಖ್ಯತೆ ಇದೆ. ಇನ್ನೊಬ್ಬರು ಬದುಕಿದಂತೆಯೇ ಲೋಪದೋಷಗಳಿಲ್ಲದೆ ಬದುಕುವ ಬದಲಾಗಿ ನಿಮ್ಮದೇ ಬದುಕನ್ನು ಲೋಪದೋಷಗಳ ಸಹಿತ ಬದುಕುವುದೇ ಉತ್ತಮ.
ನಿನ್ನ ಬದುಕಿನ ಗುರಿಗಳು ಎಂದೆಂದಿಗೂ ನಿಶ್ಚಿತವಾಗಿರಲಿ
ಇನ್ನೊಬ್ಬರನ್ನು ಅನುಕರಿಸಲು ಪ್ರಯತ್ನಿಸುವಾಗ ನಿಮ್ಮ ಬದುಕಿನ ಗುರಿಗಳನ್ನು ಮರೆತು ಬಿಡುತ್ತೀರಿ. ಇನ್ನೊಬ್ಬನ ಅನುಕರಣೆ ನಿರರ್ಥಕ ಎಂದು ತಿಳಿದಿದ್ದರೂ, ಆ “ಇನ್ನೊಬ್ಬ"ನಿಗಿಂತಲೂ ನಾನು ಉತ್ತಮ ಎಂದು ತೋರಿಸಿಕೊಳ್ಳಲು (ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಮಾಡುತ್ತಿರುವಂತೆ) ಪ್ರಯತ್ನಿಸುತ್ತೀರಿ. ನಿಮ್ಮ ಬದುಕಿನ ಗುರಿಗಳ ಬಗ್ಗೆ ಅನಿಶ್ಚಿತತೆ ಇದ್ದರೆ ಹೀಗಾಗುತ್ತದೆ.
ಪ್ರತಿಯೊಬ್ಬರೂ ನಿನ್ನ ಗೌರವವನ್ನು ಸಮಾನವಾಗಿ ಪಡೆಯಲು ಅರ್ಹರು
ಸರಳವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸು. ಶತ್ರುಗಳ ಜೊತೆಗೂ ಚೆನ್ನಾಗಿಯೇ ನಡೆದುಕೋ. ಯಾಕೆಂದರೆ ಅದು ನಿನ್ನೊಳಗಿನ ಸಂಘರ್ಷಕ್ಕೆ ಕಾರಣವಾಗುವ ಪಾಪಪ್ರಜ್ನೆಯನ್ನು ಮತ್ತು ಭಾವನಾತ್ಮಕ ಭಾರವನ್ನು ಕಡಿಮೆ ಮಾಡುತ್ತದೆ. ಪ್ರತಿಯೊಂದು ಜೀವಿಯಲ್ಲಿಯೂ ದೇವರನ್ನು ಕಾಣುವವನೇ ತನಗೆ ಮತ್ತು ಇತರರಿಗೆ ಹಾನಿ ಮಾಡುವುದಿಲ್ಲ.
ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಒಳ್ಳೆಯದನ್ನು ಮಾಡು
ನೀನು ಒಳ್ಳೆಯದನ್ನು ಮಾಡಿದ್ದೆ ಎಂಬ ಕಾರಣಕ್ಕಾಗಿ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡ. ಇದರ ಬಗ್ಗೆ ಭಗವದ್ಗೀತೆ ವಿವಿಧ ರೀತಿಗಳಲ್ಲಿ ವಿವರಿಸಿ, ಇದರ ನೈತಿಕ ಮೌಲ್ಯಕ್ಕಿಂತಲೂ ಹೆಚ್ಚಾಗಿ ಇದು ವಾಸ್ತವದ ಪಥ (ಪ್ರಾಕ್ಟಿಕಲ್) ಎಂದು ತಿಳಿಸುತ್ತದೆ. ಒಂದು ಕೊಡುಗೆಯನ್ನು ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಕೊಟ್ಟಾಗ ಹಾಗೂ ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆ ಇದ್ದಾಗಲೇ ಅದು ಪವಿತ್ರವಾದದ್ದು ಎಂದು ಸ್ಪಷ್ಟಪಡಿಸುತ್ತದೆ.
ಕಾರ್ಯಪ್ರವೃತ್ತನಾಗು. ಕೇವಲ ಯೋಚಿಸುತ್ತಾ ಕೂರಬೇಡ.
ನೀನು ಕೃತಿಗಿಳಿಸದ ಕೆಲಸಗಳ ಬಗ್ಗೆ ಅತಿಯಾಗಿ ವಿಶ್ಲೇಷಣೆ ಮಾಡುತ್ತಾ ಇರುತ್ತಿ. “ಬಹಳ ತಿಳಿದವರು” ಎಂದು ಕರೆಸಿಕೊಳ್ಳುವ ವ್ಯಕ್ತಿಗಳಲ್ಲಿ ಈ ಪ್ರವೃತ್ತಿ ಜಾಸ್ತಿ. ಆ ಕೆಲಸಗಳನ್ನು ಕೃತಿಗಿಳಿಸುವ ಬದಲಾಗಿ ಅವುಗಳ ಬಗ್ಗೆ ಮಾತನಾಡುವುದು ಮತ್ತು ವಿಶ್ಲೇಷಣೆ ಮಾಡುವುದೇ ನಿನಗೆ ಖುಷಿ. ಜೀವನದಲ್ಲಿ ಪರಿಪಕ್ವ ಆಗದವರು ಒಂದು ಕೆಲಸದ ಜ್ನಾನ ಮತ್ತು ಅದರ ಅನುಷ್ಠಾನ ಬೇರೆಬೇರೆ ಎಂದು ಯೋಚಿಸಿದರೆ ವಿವೇಕಿಗಳು ಅವೆರಡೂ ಒಂದೇ ಎಂಬುದನ್ನು ತಿಳಿದಿರುತ್ತಾರೆ.
ನಿನ್ನ ಕರ್ತವ್ಯಗಳ ಮೇಲೆ ಗಮನವಿರಲಿ
ನೀನು ಯಾವುದೇ ಭಾಷೆ (ಆಶ್ವಾಸನೆ) ಕೊಟ್ಟಿದ್ದರೆ ಅದನ್ನು ಪಾಲಿಸು. ಅದನ್ನು ಅತಿಯಾಗಿ ವಿಶ್ಲೇಷಿಸುತ್ತಾ ಕೂರಬೇಡ ಮತ್ತು ಹಾಗೆ ವಿಶ್ಲೇಷಿಸುತ್ತಾ ನಿಷ್ಕ್ರಿಯನಾಗುವುದನ್ನು ಬದುಕಿನಲ್ಲಿ ಮಹತ್ತಾದದ್ದನ್ನು ಸಾಧಿಸಲು ಸಾಧ್ಯವಾಗದ್ದಕ್ಕೆ ನೆವನವಾಗಿ ಬಳಸಬೇಡ.
ನೀನು ಇನ್ನೊಬ್ಬರ ಕರ್ತವ್ಯವನ್ನು ಇಷ್ಟ ಪಡಬಹುದು ಮತ್ತು ನಿನ್ನ ಕರ್ತವ್ಯವನ್ನು ಇಷ್ಟ ಪಡದೇ ಇರಬಹುದು. ಆದರೂ ನಿನ್ನ ಕರ್ತವ್ಯವನ್ನೇ ಮಾಡು; ಇನ್ನೊಬ್ಬರ ಕರ್ತವ್ಯವನ್ನು ಅವರಿಗಿಂತ ಚೆನ್ನಾಗಿ ಮಾಡಲು ನಿನಗೆ ಸಾಧ್ಯವಿದ್ದರೂ ಅದನ್ನು ಮಾಡಬೇಡ. ಯಾಕೆಂದರೆ ನೀನು ವೈರುಧ್ಯಗಳ ಸುಳಿಯಲ್ಲಿ ಸಿಲುಕುತ್ತಿ ಮತ್ತು ನಿನಗೆ ಅದರಿಂದ ಬಿಡುಗಡೆಯೇ ಇರುವುದಿಲ್ಲ.
ಅತ್ಯಂತ ದೊಡ್ಡ ಶಕ್ತಿಗಿಂತಲೂ ದೊಡ್ಡದಾದ ಶಕ್ತಿ ಇದ್ದೇ ಇರುತ್ತದೆ.
ಯಾವುದೇ ಕಾಯಕದ ಬಗ್ಗೆ ನಿನಗೆ ಏನೂ ಮಾಡಲು ಸಾಧ್ಯವಿಲ್ಲವೆಂದು ನೀನು ನಿರಾಶನಾಗಬಹುದು. ಕೊನೆಗೆ ಇದು ನನ್ನಿಂದಾಗದು ಎಂದು ನೀನು ಕೈಚೆಲ್ಲಬಹುದು. ಆದರೆ ಒಂದಲ್ಲ ಒಂದು ರೀತಿಯಲ್ಲಿ ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಭಗವದ್ಗೀತೆ ಘೋಷಿಸುತ್ತದೆ. ಆದ್ದರಿಂದ, ನಿನ್ನ ಶತ್ರು ಪ್ರಚಂಡ ಎಂದು ಅನಿಸಿದರೂ, ನೀನು ನಿನ್ನ ಕಾಯಕವನ್ನು ಮಾಡುತ್ತಲೇ ಇದ್ದರೆ, ಅದರಿಂದ ನಿನಗೇ ಸಹಾಯ.
ಧರ್ಮಶ್ರದ್ಧೆಯನ್ನು ಜಗತ್ತಿಗೆ ನೀಡಲಿಕ್ಕಾಗಿ ಮತ್ತು ಅಧರ್ಮಿಗಳನ್ನು ನಾಶ ಮಾಡಲಿಕ್ಕಾಗಿ ಹಾಗೂ ಸತ್ಯದ ತತ್ತ್ವಗಳನ್ನು ಮತ್ತೆಮತ್ತೆ ಸ್ಥಾಪನೆ ಮಾಡಲಿಕ್ಕಾಗಿ ಪರಮಾತ್ಮ ಅವಶ್ಯವಿದ್ದಾಗೆಲ್ಲ ಈ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಘೋಷಿಸುತ್ತದೆ ಭಗವದ್ಗೀತೆ.
ಫೋಟೋ: ಕುರುಕ್ಷೇತ್ರದ ರಣಾಂಗಣದಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನ
(ಡಿಸೆಂಬರ್ 2022)