HRM
ಹತ್ತು ವರುಷದ ಹುಡುಗಿ ಕುಮುದಳಿಗೆ ಸೊಂಟದ ಕೆಳಗೆ ಬಲವಿರಲಿಲ್ಲ. ಬೇರೆಯವರೊಂದಿಗೆ ತುಂಬು ವಿನಯದ ವರ್ತನೆ ಅವಳದು. ಆಟವಾಡುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದೆಂದರೆ ಅವಳಿಗೆ ಇಷ್ಟ.
ಆದರೆ ಕೆಲವೊಮ್ಮೆ ಭಾರವಾದ ಗಾಲಿಕುರ್ಚಿಯನ್ನು ಅತ್ತಿತ್ತ ಓಡಾಡಿಸುವಾಗ ಅವಳಿಗೆ ಬೇಸರವಾಗುತ್ತಿತ್ತು. ಅದೇನಿದ್ದರೂ ಅವಳು ಬದುಕಿನಲ್ಲಿ ಭರವಸೆ ಕಳೆದುಕೊಳ್ಳಲಿಲ್ಲ. ಅಂದೊಮ್ಮೆ ಡಾಕ್ಟರರ ಕ್ಲಿನಿಕಿನಲ್ಲಿ ಅವಳ ಮಾಸಿಕ ಚೆಕ್-ಅಪ್ ನಡೆಯುತ್ತಿತ್ತು. ಆಗ ಡಾಕ್ಟರ್ ಹೇಳಿದರು: ಮೂರು ಶಸ್ತ್ರಚಿಕಿತ್ಸೆಗಳನ್ನು ಮಾಡಿದರೆ ಅವಳು ಪುನಃ ನಡೆಯಲು ಸಾಧ್ಯ ಎಂಬುದಾಗಿ.
ಒಂದು ತಿಂಗಳ ನಂತರ ಕುಮುದಳಿಗೆ ಮೊದಲನೆಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ದಿನದಿಂದ ದಿನಕ್ಕೆ ಅವಳ ಆರೋಗ್ಯ ಸುಧಾರಿಸಿತು. ತನ್ನ ಕಾಲುಗಳಿಗೆ ಬಲ ಬರುತ್ತಿದೆ ಎಂದು ಅವಳಿಗೆ ಅನಿಸಿತು. ನಂತರ ಇನ್ನೂ ಎರಡು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅದಾಗಿ ಅವಳ ಕಾಲುಗಳಲ್ಲಿ ಸಾಕಷ್ಟು ಬಲ ತುಂಬಿದಾಗ ಅವಳನ್ನು ಫಿಸಿಯೋಥೆರಪಿಗೆ ಕಳಿಸಲಾಯಿತು. ತದನಂತರ ಎರಡು ವಾರಗಳಲ್ಲಿ, ಕುಮುದ ನಿಧಾನವಾಗಿ ನಡೆಯಲು ಶುರುವಿಟ್ಟಳು. ಅನಂತರ ನಾಲ್ಕು ವಾರಗಳಲ್ಲೇ ಕುಮುದ ಉದ್ಯಾನದಲ್ಲಿ ಇತರ ಮಕ್ಕಳೊಂದಿಗೆ ಆಟ ಆಡುವಂತಾಯಿತು. “ಅಬ್ಬ, ನಾನು ಹಲವು ತಿಂಗಳು ಕಾಯಬೇಕಾಯಿತು. ಹಾಗೆ ಕಾದದ್ದು ಸಾರ್ಥಕವಾಯಿತು” ಎಂದು ನಿಟ್ಟುಸಿರಿಟ್ಟಳು ಕುಮುದ. ಬದುಕಿನ ಬಗ್ಗೆ ಸಕಾರಾತ್ಮಕ ಚಿಂತನೆಯೇ ಕುಮುದಳಿಗೆ ಪುನಃ ನಡೆಯಲು ಶಕ್ತಿ ನೀಡಿತು. ಈಗ ಅವಳು ತನ್ನಂತೆ ಸಂಕಟದಲ್ಲಿರುವ ಇತರರಿಗೆ ಸ್ಫೂರ್ತಿ.
ಅದೊಂದು ದಿನ ಯಜಮಾನನೊಂದಿಗೆ ಅವನ ಕತ್ತೆ ಮತ್ತು ನಾಯಿಮರಿ ಹಳ್ಳಿಯಿಂದ ಪೇಟೆಗೆ ಹೊರಟವು. ಮೂರು ತಾಸು ನಡೆದ ನಂತರ ಯಜಮಾನ ಕತ್ತೆಯ ಬೆನ್ನಿನಲ್ಲಿದ್ದ ಹೊರೆ ಇಳಿಸಿ, ಒಂದು ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ.
ಕತ್ತೆ ಮತ್ತು ನಾಯಿಮರಿಗೆ ಹಸಿವಾಗಿತ್ತು. ಅಲ್ಲಿ ಬೆಳೆದಿದ್ದ ಹುಲ್ಲನ್ನು ಮೇಯತೊಡಗಿತು ಕತ್ತೆ. ನಾಯಿ ಮರಿಗೆ ಅಲ್ಲಿ ತಿನ್ನಲು ಏನೂ ಸಿಗಲಿಲ್ಲ. ಕತ್ತೆಯ ಬೆನ್ನಿನಿಂದ ಇಳಿಸಿದ ಹೊರೆಯಲ್ಲಿ ತಿನಿಸು ಇದೆಯೆಂದು ನಾಯಿಮರಿಗೆ ತಿಳಿದಿತ್ತು. ಅದರಿಂದ ಸ್ವಲ್ಪ ತಿನಿಸು ತೆಗೆದು ಕೊಡಬೇಕೆಂದು ಕತ್ತೆಯನ್ನು ವಿನಂತಿಸಿತು ನಾಯಿಮರಿ. ಆಗ ಕತ್ತೆಯ ಪ್ರತಿಕ್ರಿಯೆ ಹೀಗಿತ್ತು: “ಸಾಧ್ಯವಿಲ್ಲ ಗೆಳೆಯಾ. ಯಜಮಾನ ನಿದ್ದೆಯಿಂದ ಎದ್ದೇಳಲಿ. ಆಗ ಅವನೇ ನಿನಗೆ ತಿನಿಸು ಕೊಡುತ್ತಾನೆ. “
ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೊಂದು ತೋಳ ಬಂತು. ಕತ್ತೆಗೆ ಗಾಬರಿಯಾಯಿತು. ಜೋರಾಗಿ ಬೊಗಳಿ ತೋಳವನ್ನು ಹೆದರಿಸಬೇಕೆಂದು ನಾಯಿಮರಿಯನ್ನು ಕತ್ತೆ ವಿನಂತಿಸಿತು. ಆಗ ನಾಯಿಮರಿಯ ಪ್ರತಿಕ್ರಿಯೆ ಹೀಗಿತ್ತು: “ಸಾಧ್ಯವಿಲ್ಲ ಗೆಳೆಯಾ. ಯಾಕೆಂದರೆ ನಾನು ತೋಳವನ್ನು ಎದುರಿಸುವಷ್ಟು ಬಲಶಾಲಿಯಲ್ಲ. ಯಜಮಾನ ನಿದ್ದೆಯಿಂದ ಎದ್ದೇಳಲಿ. ಅವನೇ ನಿನ್ನನ್ನು ರಕ್ಷಿಸುತ್ತಾನೆ.” ಈಗ ಕತ್ತೆಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ನಾಯಿಮರಿಯ ಕ್ಷಮೆ ಕೇಳಿತು ಕತ್ತೆ.
ಮಹಾರಾಜನಿಗೆ ಇಬ್ಬರು ಗಂಡುಮಕ್ಕಳು. ಅವರಿಗೆ ಸಕಲ ವಿದ್ಯೆ ಕಲಿಸಲು ಮಹಾರಾಜ ಗುರುಗಳನ್ನು ನೇಮಿಸಿದ. ಕೆಲವು ವರುಷಗಳ ನಂತರ, ತನ್ನ ಮಗಂದಿರ ಸಾಮರ್ಥ್ಯ ಪರೀಕ್ಷಿಸಬೇಕೆಂದು ಮಹಾರಾಜ ನಿರ್ಧರಿಸಿದ.
ಅವನು ಇಬ್ಬರು ರಾಜಕುಮಾರರನ್ನೂ ಕರೆಸಿಕೊಂಡ. ಇಬ್ಬರಿಗೂ ಪ್ರತ್ಯೇಕ ಕೋಣೆ ಒದಗಿಸಿ, ಹೀಗೆಂದ: “ನಿಮ್ಮ ನಿಮ್ಮ ಕೋಣೆಯಲ್ಲಿ ನೀವು ಏನನ್ನಾದರೂ ತುಂಬಿಸಬೇಕು. ನಾನು ನಾಳೆ ಪರಿಶೀಲಿಸುತ್ತೇನೆ.”
ಮರುದಿನ ರಾಜ ಮೊದಲಾಗಿ ಹಿರಿಯ ಮಗನ ಕೋಣೆ ಪರಿಶೀಲಿಸಿದ. ಆ ಕೋಣೆಯಲ್ಲಿ ಭರ್ತಿ ಹುಲ್ಲು ತುಂಬಿಸಲಾಗಿತ್ತು. ಅವನ ಮೂರ್ಖತನ ಕಂಡು ಮಹಾರಾಜನಿಗೆ ಬೇಸರವಾಯಿತು.
ಅನಂತರ ಮಹಾರಾಜ ಕಿರಿಯ ಮಗನ ಕೋಣೆ ಪರಿಶೀಲಿಸಲು ಬಂದ. ಕಿರಿಯ ಮಗ ಮಹಾರಾಜನಿಗೆ ಕೋಣೆಯೊಳಗೆ ಬಂದು ಬಾಗಿಲು ಹಾಕಿಕೊಳ್ಳಲು ವಿನಂತಿಸಿದ. ಒಳ ಬಂದ ಮಹಾರಾಜನಿಗೆ ಕೋಣೆಯೊಳಗೆ ತುಂಬಿದ್ದ ಕತ್ತಲು ಕಂಡು ಸಿಟ್ಟು ಬಂತು. ಆಗ ಕಿರಿಯ ಮಗ ಒಂದು ಮೊಂಬತ್ತಿ ಬೆಳಗಿಸಿ ಹೇಳಿದ, “ಅಪ್ಪಾ, ನಾನೀಗ ಈ ಕೋಣೆಯಲ್ಲಿ ಬೆಳಕನ್ನು ತುಂಬಿದ್ದೇನೆ.” ಮಹಾರಾಜನಿಗೆ ಸಂತೋಷವಾಯಿತು. ಜೊತೆಗೆ, ತನ್ನ ರಾಜ್ಯವನ್ನು ತನ್ನ ನಂತರ ಆಳಲು ಕಿರಿಯ ಮಗನೇ ಸೂಕ್ತ ಉತ್ತರಾಧಿಕಾರಿ ಎಂದು ಸ್ಪಷ್ಟವಾಯಿತು.
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಗೆ ಭಾರೀ ನೆರೆ ಬಂತು. ಆ ನೆರೆ ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ವಸ್ತುಗಳು ಹಲವಾರು. ಒಂದು ತಾಮ್ರದ ಪಾತ್ರೆ, ಇನ್ನೊಂದು ಮಣ್ಣಿನ ಮಡಕೆ ಕೂಡ ತೇಲಿಕೊಂಡು ಹೋಗುತ್ತಿದ್ದವು.
ಮಣ್ಣಿನ ಮಡಕೆಗೆ ತಾಮ್ರದ ಪಾತ್ರೆ ಹೇಳಿತು, "ಗೆಳೆಯಾ, ನಿನ್ನನ್ನು ಮೆತ್ತಗಿನ ಮಣ್ಣಿನಿಂದ ಮಾಡಲಾಗಿದೆ. ಹಾಗಾಗಿ ನೀನು ಬಹಳ ದುರ್ಬಲ. ನನ್ನ ಹತ್ತಿರ ಬಾ. ನಾನು ನಿನ್ನನ್ನು ಅಪಾಯದಿಂದ ರಕ್ಷಿಸುತ್ತೇನೆ.” ಅದಕ್ಕೆ ಮಣ್ಣಿನ ಮಡಕೆ ಹೀಗೆಂದು ಉತ್ತರಿಸಿತು: “ನಿನ್ನ ಕರುಣೆಗಾಗಿ ಧನ್ಯವಾದಗಳು. ಆದರೆ ನಾನು ನನ್ನ ಪಾಡಿಗೆ ತೇಲಿಕೊಂಡು ದಡಕ್ಕೆ ಹೋಗುತ್ತೇನೆ. ಯಾಕೆಂದರೆ, ನಾವಿಬ್ಬರು ಢಿಕ್ಕಿಯಾದರೆ, ನೂರಾರು ಚೂರುಗಳಾಗಿ ಒಡೆದು ಹೋಗೋದು ನಾನು. ಆದ್ದರಿಂದ ನನ್ನ ಒಳಿತನ್ನು ಬಯಸುತ್ತಿ ಎಂದಾದರೆ ನೀನು ನನ್ನಿಂದ ದೂರವಿರು."
ಮಣ್ಣಿನ ಮಡಕೆ ನಿಧಾನವಾಗಿ ದಡದತ್ತ ತೇಲತೊಡಗಿತು. ತಾಮ್ರದ ಪಾತ್ರೆ ತೇಲುತ್ತಿದ್ದಂತೆ, ಅದರೊಳಗೆ ನೀರು ತುಂಬಿ, ಅದು ನೆರೆ ನೀರಿನಲ್ಲಿ ಮುಳುಗಿ ಹೋಯಿತು. ಮಣ್ಣಿನ ಮಡಕೆ ತೇಲುತ್ತಾ ತೇಲುತ್ತಾ ದಡ ತಲಪಿತು. ಕೇವಲ ಹೊರನೋಟದಿಂದ ಒಂದು ವಸ್ತುವಿನಲ್ಲಿ ದುರ್ಬಲತೆ ಇದೆಯೋ ಇಲ್ಲವೋ ಎನ್ನಲಾಗದು.
ಗುಲಾಬಿ ಗಿಡವೊಂದು ಚಂದದ ಹೂ ಬಿಡುತ್ತಿತ್ತು. ಅದರಲ್ಲೊಂದು ಕಂಬಳಿಹುಳದ ವಾಸ. ಗುಲಾಬಿ ಗಿಡದ ಹೂವೊಂದು ಕಂಬಳಿಹುಳಕ್ಕೆ ಪ್ರತಿ ದಿನವೂ ಗೇಲಿ ಮಾಡುತ್ತಿತ್ತು: “ನೀನೆಷ್ಟು ಅಸಹ್ಯ ಕೀಟ" ಎಂಬುದಾಗಿ. ದಿನದಿನವೂ ಕಂಬಳಿಹುಳ ರಾತ್ರಿ ಕಾಣಿಸುವ ಚಂದ್ರನನ್ನು ಪ್ರಾರ್ಥಿಸುತ್ತಿತ್ತು: “ನನಗೂ ಗುಲಾಬಿ ಹೂವಿನಂತೆ ಸುಂದರ ರೂಪ ದಯಪಾಲಿಸು.” ಆದರೆ ಕಂಬಳಿಹುಳ ಹಾಗೆಯೇ ಇತ್ತು.
ಆ ಗುಲಾಬಿ ಹೂ ಕಂಬಳಿಹುಳಕ್ಕೆ ಹಾಸ್ಯ ಮಾಡುತ್ತಾ ಮಾಡುತ್ತಾ ದಿನಗಳು ಸರಿದವು. ಅದೊಂದು ದಿನ ಚಮತ್ಕಾರವೊಂದು ನಡೆಯಿತು. ಕಂಬಳಿಹುಳ ತನ್ನ ಕೋಶದಿಂದ ಸುಂದರ ಚಿಟ್ಟೆಯಾಗಿ ಹೊರ ಬಂತು. ಈಗ ಚಿಟ್ಟೆ ಹಕ್ಕಿಯಂತೆ ಅಲ್ಲಿ ಹಾರತೊಡಗಿತು. ಆಕಾಶದಲ್ಲಿ ಹಾರುತ್ತಾ ಹಾರುತ್ತಾ ಚಿಟ್ಟೆ ಕೆಳಕ್ಕೆ ನೋಡಿತು. ಆಗ ಅದಕ್ಕೆ ಆ ಗುಲಾಬಿ ಗಿಡವೂ ಕಾಣಿಸಿತು.
ಅದರಲ್ಲಿದ್ದ ಚಂದದ ಗುಲಾಬಿ ಹೂಗಳೆಲ್ಲವೂ ಬಾಡಿ ಹೋಗಿದ್ದವು. ಗಾಳಿ ರಭಸದಿಂದ ಬೀಸಿದಾಗ ಆ ಹೂಗಳ ಪಕಳೆಗಳು ಕಿತ್ತು ಬರುತ್ತಿದ್ದವು. ಅಸಹ್ಯವಾಗಿದ್ದ ಕಂಬಳಿಹುಳ ಈಗ ಅದ್ಭುತ ಸೌಂದರ್ಯದ ಚಿಟ್ಟೆಯಾಗಿತ್ತು. ಆದರೆ ಅಂದೊಮ್ಮೆ ತನ್ನ ಚಂದಕ್ಕೆ ಬೀಗುತ್ತಿದ್ದ ಗುಲಾಬಿ ಹೂ ಚಿಂದಿಯಾಗಿತ್ತು.
ಬೆಟ್ಟದ ಕಾಡಿನಲ್ಲಿ ಬೆಳೆಯುತ್ತಿದ್ದ ಆ ಪೈನ್ ಮರದ ಸೂಜಿಯೆಲೆಗಳು ಸದಾ ಹಸುರು. ಆದರೆ ಆ ಮರಕ್ಕೆ ಸಮಾಧಾನವಿಲ್ಲ. "ನನ್ನ ಸೂಜಿಯೆಲೆಗಳು ಬೇರೆ ಮರಗಳ ಹಸುರೆಲೆಗಳಂತೆ ಚಂದವಿಲ್ಲ. ನನಗೆ ಬಂಗಾರದ ಬಣ್ಣದ ಎಲೆಗಳಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಾರ್ಥಿಸಿತು.
ಆ ಮರದ ಪ್ರಾರ್ಥನೆ ಕೇಳಿಸಿಕೊಂಡ ಪ್ರಕೃತಿಮಾತೆ ಅದನ್ನು ದಯಪಾಲಿಸಿದಳು. ಮರುದಿನ ಆ ಮರವು ಬಂಗಾರದ ಬಣ್ಣದ ಎಲೆಗಳಿಂದ ಕಂಗೊಳಿಸುತ್ತಿತ್ತು. ಅಲ್ಲಿ ಹಾದು ಹೋಗುತ್ತಿದ್ದ ಮನುಷ್ಯನೊಬ್ಬ ಇದನ್ನು ಕಂಡು, ಆ ಬಂಗಾರದ ಎಲೆಗಳನ್ನು ಕೀಳತೊಡಗಿದ. ಬೇಗನೇ ಆ ಮರ ಬೋಳಾಗಿ ಹೋಯಿತು! ಆ ಪೈನ್ ಮರ ಪುನಃ ಪ್ರಾರ್ಥಿಸಿತು: "ನನ್ನಿಂದ ತಪ್ಪಾಯಿತು. ನನಗೆ ಗಾಜಿನ ಎಲೆಗಳಿದ್ದರೆ ಚೆನ್ನಾಗಿತ್ತು. ಅವು ಚೆನ್ನಾಗಿ ಕಾಣಿಸುತ್ತವೆ ಮತ್ತು ಅವನ್ನು ಯಾರೂ ಕದಿಯುವುದಿಲ್ಲ." ಮರುದಿನ ಬೆಳಗ್ಗೆ ಪೈನ್ ಮರದಲ್ಲಿ ಗಾಜಿನ ಎಲೆಗಳು ತುಂಬಿಕೊಂಡಿದ್ದವು. ಆದರೆ ಆಗಲೇ ಬಿರುಗಾಳಿ ಬೀಸಿತು ಮತ್ತು ಅದರ ಬಿರುಸಿಗೆ ಪೈನ್ ಮರದ ಗಾಜಿನ ಎಲೆಗಳೆಲ್ಲವೂ ಚೂರುಚೂರಾದವು. ಅದು ಪುನಃ ಬೋಳುಬೋಳಾಗಿ ನಿಂತಿತು.
“ಅಯ್ಯೋ, ನಾನೆಂತಹ ಮೂರ್ಖ!” ಎಂದು ದುಃಖಿಸಿದ ಪೈನ ಮರ ಪುನಃ ಪ್ರಾರ್ಥಿಸಿತು, “ನನಗೆ ಸೂಜಿಯೆಲೆಗಳೇ ಸೂಕ್ತ. ಅವು ಪುನಃ ನನ್ನಲ್ಲಿ ಮೂಡಿದ್ದರೆ ಎಷ್ಟು ಚೆನ್ನಾಗಿತ್ತು.” ದಯಾಮಯಿ ಪ್ರಕೃತಿ ಮಾತೆ ಮತ್ತೊಮ್ಮೆ ಪೈನ್ ಮರದ ಪ್ರಾರ್ಥನೆ ದಯಪಾಲಿಸಿದಳು. ಈಗ ಪೈನ್ ಮರ ಸೂಜಿಯೆಲೆಗಳಿಂದ ನಳನಳಿಸಿತು.
ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ ಸಾಕೋ ಸಾಕಾಗುತ್ತಿತ್ತು. ಯಾಕೆಂದರೆ ಅವರಿಗೆ ದಿನದ ಮೂರು ಹೊತ್ತೂ ಅವನಿಂದ ಮಾವಿನ ಹಣ್ಣಿನ ಉಪಚಾರ!
ಹಾಗೆ ಬಂದಿದ್ದ ಅವನ ಬಂಧುವೊಬ್ಬ ಆ ಸೋಮಾರಿಯನ್ನು ಎಚ್ಚರಿಸಿದ, “ನೋಡು, ನಿನ್ನ ಮಾವಿನ ಮರ ಒಳ್ಳೆಯ ಫಸಲು ಕೊಡುತ್ತಿದೆ ಎಂಬುದೇನೋ ನಿಜ. ಆದರೆ ಇದೊಂದೇ ಆದಾಯ ಮೂಲವನ್ನು ನೀನು ನಂಬಿ ಕೂತರೆ ಅಪಾಯ ಖಂಡಿತ. ನಿನ್ನ ಮೇಲಿನ ಹೊಟ್ಟೆಕಿಚ್ಚಿನಿಂದ ಅಥವಾ ನಿನಗೆ ತೊಂದರೆ ಮಾಡಲಿಕ್ಕಾಗಿ ಯಾರಾದರೂ ಆ ಮಾವಿನ ಮರವನ್ನು ಕಡಿದರೆ, ಜೀವನಕ್ಕಾಗಿ ನೀನೇನು ಮಾಡುತ್ತಿ? ನೀನು ಈಗಿನಿಂದಲೇ ಬೇರೆ ಆದಾಯ ಮೂಲಗಳನ್ನೂ ಮಾಡಿಕೊಳ್ಳುವುದು ಒಳ್ಳೆಯದು.”
ಆ ಬಂಧು ಹೊರಟು ಹೋದ ಬಳಿಕ ಸೋಮಾರಿ ಮನುಷ್ಯ ಅವನ ಮಾತುಗಳ ಬಗ್ಗೆ ಗಂಭೀರವಾಗಿ ಯೋಚಿಸಿದ. ಆತನು ಹೇಳಿದ್ದು ಸರಿಯೆಂದು ಸೋಮಾರಿಗೆ ಅರ್ಥವಾಯಿತು. ಅನಂತರ ಅವನು ಇತರ ಕೆಲಸಗಳನ್ನು ಮಾಡತೊಡಗಿದ. ಇದರಿಂದಾಗಿ ಹೆಚ್ಚಿನ ಆದಾಯ ಗಳಿಸಲು ಅವನಿಗೆ ಸಾಧ್ಯವಾಯಿತು. ಕೆಲವು ವರುಷಗಳ ನಂತರ ಆ ಬಂಧು ಪುನಃ ಸೋಮಾರಿಯ ಮನೆಗೆ ಭೇಟಿಯಿತ್ತ. ತನಗಿತ್ತ ಸಲಹೆಗಾಗಿ ಆ ಬಂಧುವಿಗೆ ಸೋಮಾರಿ ಕೃತಜ್ನತೆ ಸಲ್ಲಿಸಿದ.
ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳೇ ಅವರ “ಗುರಿ". ಆ ಮಡಕೆಗಳತ್ತ ಗುರಿಯಿಟ್ಟು ಅವರು ಗುಂಡುಗಳನ್ನು ಹೊಡೆದದ್ದೇ ಹೊಡೆದದ್ದು. ಆದರೆ ಒಂದೇ ಒಂದು ಮಡಕೆಯನ್ನೂ ಗುಂಡಿನಿಂದ ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ, ಅವರು ಮಾತಾಡುತ್ತಾ ನಗುತ್ತಾ ಮಡಕೆಗಳತ್ತ ಗುರಿ ಇಡುತ್ತಿದ್ದರು.
ಇದನ್ನೆಲ್ಲ ನೋಡುತ್ತಿದ್ದ ಸನ್ಯಾಸಿಯೊಬ್ಬ ಪೆಚ್ಚಾಗಿ ನಿಂತಿದ್ದ ಗೆಳೆಯರನ್ನು ಕಂಡು ನಗತೊಡಗಿದ. ಆಗ ಗೆಳೆಯರಲ್ಲೊಬ್ಬ ಆ ಸನ್ಯಾಸಿಯ ಹತ್ತಿರ ಹೋಗಿ ಕೇಳಿದ, “ನೀವು ಯಾಕೆ ನಗುತ್ತಿದ್ದೀರಿ? ನಿಮಗೆ ಬಂದೂಕಿನಿಂದ ಗುಂಡು ಹೊಡೆಯಲು ಗೊತ್ತೇ?” ಅವನ ಕೋವಿಯನ್ನು ಕೈಗೆತ್ತಿಕೊಂಡ ಸನ್ಯಾಸಿ, ಗುರಿಯಿಟ್ಟು ಗುಂಡು ಹಾರಿಸಿ ಎಲ್ಲ ಮಡಕೆಗಳನ್ನು ಚೂರುಚೂರು ಮಾಡಿದ.
ನಾಲ್ವರು ಗೆಳೆಯರು ಪುನಃ ಪೆಚ್ಚಾದರು. “ನೀವು ಮ್ಯಾಜಿಕ್ ಮಾಡುವವರೇ?” ಎಂದು ಸನ್ಯಾಸಿಯನ್ನು ಗೆಳೆಯರು ಪ್ರಶ್ನಿಸಿದರು. ಆಗ ಸನ್ಯಾಸಿ ಉತ್ತರಿಸಿದರು, "ನಾನು ಮ್ಯಾಜಿಕ್ ಮಾಡುವವನೂ ಅಲ್ಲ, ನಿಪುಣ ಗುರಿಕಾರನೂ ಅಲ್ಲ. ನಾವು ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಬೇಕಾದರೆ, ಏಕಾಗ್ರತೆಯಿಂದ ಆ ಕೆಲಸವನ್ನು ಮಾಡಬೇಕು. ನಾನು ನನ್ನ ಕೆಲಸವನ್ನು ಅಪ್ಪಟ ಏಕಾಗ್ರತೆಯಿಂದ ಮಾಡಿದೆ; ಅದರ ಫಲಿತಾಂಶ ನಿಮ್ಮ ಕಣ್ಣೆದುರಿಗಿದೆ. ನಮ್ಮ ಎಲ್ಲ ಕೆಲಸಕಾರ್ಯಗಳಲ್ಲಿ ಯಶಸ್ಸು ಸಾಧಿಸುವ ಮಂತ್ರ ಏಕಾಗ್ರತೆ."
ಆ ದಿನ ಸುಧೀರ ಶಾಲೆಗೆ ನಡೆದು ಹೋಗುತ್ತಿದ್ದ. ದೂರದಲ್ಲಿ ನಿಂತಿದ್ದ ಕೆಲವು ಹುಡುಗರು ಬೊಬ್ಬೆ ಹಾಕುತ್ತಿರುವುದು ಅವನಿಗೆ ಕೇಳಿಸಿತು: "ಜೋರಾಗಿ ಕಲ್ಲು ಹೊಡಿ”, “ಅದರ ತಲೆಗೇ ಕಲ್ಲು ಹೊಡಿ”.
ಅದೇನೆಂದು ಸುಧೀರ ಹತ್ತಿರ ಹೋಗಿ ನೋಡಿದ. ಶಾಲೆಯ ಆವರಣ ಗೋಡೆಗೆ ಅಂಟಿಕೊಂಡು ಒಂದು ನಾಯಿಮರಿ ಜೀವಭಯದಿಂದ ಕುಳಿತಿತ್ತು. ಈ ಪೋಲಿ ಹುಡುಗರು ಅದಕ್ಕೆ ಕಲ್ಲು ಹೊಡೆಯುತ್ತಿದ್ದರು. ಸುಧೀರ ಒಂದು ಕ್ಷಣ ಯೋಚಿಸಿದ. ಅವರೆಲ್ಲರೂ ಶಾಲೆಯ ಪೋಲಿ ಹುಡುಗರು. ಇವನೇನಾದರೂ ಅವರ ಮಜಾಕ್ಕೆ ಅಡ್ಡ ಬಂದರೆ, ಅವರು ಇವನನ್ನು ಸುಮ್ಮನೆ ಬಿಡುವವರಲ್ಲ.
ಆದರೆ, ನಾಯಿಮರಿಯ ಪಾಡು ಕಂಡು ಸುಧೀರನಿಗೆ ಸುಮ್ಮನಿರಲಾಗಲಿಲ್ಲ. “ನಿಲ್ಲಿಸಿ, ನಾಯಿ ಮರಿಗೆ ಕಲ್ಲು ಹೊಡೆಯೋದನ್ನು ನಿಲ್ಲಿಸಿ. ಅದು ಸತ್ತರೆ ನಿಮಗೇ ತೊಂದರೆ. ಆಗ ಶಾಲೆಯ ಮೆನೇಜ್‌ಮೆಂಟಿನವರು ಪೊಲೀಸರಿಗೆ ಹೇಳ್ತಾರೆ. ಪೊಲೀಸರು ಬಂದು ತನಿಖೆ ಮಾಡಿದರೆ ನೀವು ಸಿಕ್ಕಿ ಬೀಳ್ತೀರಿ.” ಇದನ್ನು ಕೇಳಿದ ಪೋಲಿ ಹುಡುಗರು ಅಲ್ಲಿಂದ ಓಟ ಕಿತ್ತರು. ಅಷ್ಟರಲ್ಲಿ ಹಿರಿಯರೊಬ್ಬರು ಅಲ್ಲಿಗೆ ಬಂದರು. “ಓ, ನಾನು ಈ ನಾಯಿ ಮರಿಯನ್ನು ಹುಡುಕುತ್ತಾ ಇದ್ದೆ. ಅದು ಇಲ್ಲೇ ಇದೆ. ಅದನ್ನು ಪೋಲಿ ಹುಡುಗರಿಂದ ನೀನು ಬಚಾವ್ ಮಾಡಿದ್ದನ್ನು ನೋಡಿದೆ. ನಿನಗೆ ಒಳ್ಳೆಯದಾಗಲಿ” ಎನ್ನುತ್ತಾ ಅವರು ನಾಯಿ ಮರಿಯನ್ನು ಎತ್ತಿ ಕೊಂಡರು.
ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು.
ಹಬ್ಬದೂಟದ ತಯಾರಿ ನೋಡಿ ರಾಜುವಿಗೆ ಅಚ್ಚರಿ. ಅವನ ಸಹಪಾಠಿಗಳೆಲ್ಲರೂ ರಾಜುವಿನ ಊಟಕ್ಕೆ ಗಮನ ನೀಡಿದರು. ಅವನು ಇಷ್ಟಪಟ್ಟ ತಿನಿಸುಗಳನ್ನು ಅವನಿಗೆ ಬೇಕಷ್ಟು ಬಡಿಸಿದರು. ಹಬ್ಬದೂಟ ಸವಿದ ರಾಜುವಿಗೆ ಖುಷಿಯೋ ಖುಷಿ.
ಮನೆಗೆ ಮರಳಿದ ರಾಜು, ಅಮ್ಮನಿಗೆ ಶಾಲೆಯ ಹಬ್ಬದೂಟದ ಬಗ್ಗೆ ವಿವರವಾಗಿ ತಿಳಿಸಿದ. ಆಗ ಅವನ ಅಮ್ಮ ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಬುದ್ಧಿಯ ಮಾತುಗಳನ್ನು ಹೇಳಿದಳು: "ರಾಜೂ, ಇನ್ನಾದರೂ ನಿನ್ನ ಸಹಪಾಠಿಗಳೊಂದಿಗೆ ನಿನ್ನ ದುರ್ವತನೆ ನಿಲ್ಲಿಸು. ಅವರೆಲ್ಲರೂ ಒಳ್ಳೆಯವರೇ. ಅವರೆಲ್ಲರ ಜೊತೆ ಸ್ನೇಹದಿಂದ ಇರಲು ಕಲಿತುಕೋ. ಎಲ್ಲರನ್ನೂ ಗೌರವಿಸು. ಯಾರಿಗೂ ತೊಂದರೆ ಕೊಡಬೇಡ.” ತನ್ನ ತಪ್ಪನ್ನು ತಿಳಿದುಕೊಂಡ ರಾಜು, ಅಂದಿನಿಂದ ಎಲ್ಲ ಸಹಪಾಠಿಗಳ ಜೊತೆ ಸ್ನೇಹದಿಂದ ಇರುತ್ತಾ ಅವರೆಲ್ಲರ ಮೆಚ್ಚಿನ ಗೆಳೆಯನಾದ.