HRM

ಅದೊಂದು ಹಳ್ಳಿ. ಅಲ್ಲಿನ ಐದು ಜನರಿಗೆ ಹಳ್ಳಿಯ ಪಕ್ಕದ ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಮರವೊಂದನ್ನು ಕಾಯುವುದೇ ಕೆಲಸ. ಅದರ ಹಣ್ಣುಗಳು ಮಾವಿನ ಹಣ್ಣುಗಳಂತೆಯೇ ಕಾಣಿಸುತ್ತಿದ್ದವು. ಆದರ ಅವು ವಿಷದ ಹಣ್ಣುಗಳು.

ಆ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರು ಮರದಿಂದ ನೇತಾಡುವ ಹಣ್ಣುಗಳನ್ನು ಕಂಡು, ಅವು ಮಾವಿನ ಹಣ್ಣೆಂದು ಭಾವಿಸಿ, ಅವನ್ನು ಕೊಯ್ದು ತಿನ್ನುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಕುಸಿದು ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದರು. ಆಗ ಐವರು ದುರುಳರು ಧಾವಿಸಿ ಹೋಗಿ, ಆ ಪ್ರಯಾಣಿಕರ ಸೊತ್ತುಗಳನ್ನೂ ಅವರು ಧರಿಸಿದ್ದ ಆಭರಣಗಳನ್ನೂ ಕದ್ದು, ಅವನ್ನು ಮಾರಿ ಹಣ ಗಳಿಸುತ್ತಿದ್ದರು.

ಅದೊಂದು ದಿನ ನಾಲ್ವರು ಪ್ರಯಾಣಿಕರು ಆ ಹಣ್ಣಿನ ಮರದ ಕಡೆಗೆ ನಡೆದು ಬರುತ್ತಿದ್ದುದನ್ನು ಕಂಡು ಹಳ್ಳಿಯ ದುರುಳರಿಗೆ ಖುಷಿಯೋ ಖುಷಿ. ಆ ನಾಲ್ವರು ಪ್ರಯಾಣಿಕರ ಹಿಂದೆ ಅವರ ವಾಣಿಜ್ಯಸರಕುಸಾಲು ಸಾಗಿ ಬರುತ್ತಿತ್ತು. ಇವರಲ್ಲೊಬ್ಬ ಹಣ್ಣು ತುಂಬಿದ ಮರ ಕಂಡು “ಓ, ಮಾವಿನ ಹಣ್ಣುಗಳು" ಎನ್ನುತ್ತಾ ಮರವೇರಿದ. ಹಲವಾರು ಹಣ್ಣುಗಳನ್ನು ಕಿತ್ತು, ಉಳಿದ ಮೂವರತ್ತ ಎಸೆದ. ಅವರು ಹಣ್ಣುಗಳನ್ನು ತಿನ್ನಬೇಕು ಅನ್ನುವಷ್ಟರಲ್ಲಿ, ಅವರ ಸರಕುಸಾಲು ಹತ್ತಿರ ಬಂತು. ಇವರು ಹಣ್ಣು ಕೊಯ್ಯೋದನ್ನು ಕಂಡಿದ್ದ ಸರಕುಸಾಲಿನ ಮುಂದಾಳು ಅಲ್ಲಿಂದಲೇ ಕಿರುಚಿದ, “ನಿಲ್ಲಿ, ನಿಲ್ಲಿ. ಆ ಹಣ್ಣುಗಳನ್ನು ತಿನ್ನಬೇಡಿ”.

ಮುಂದಾಳು ಬಂಡಿಯಿಂದ ಇಳಿದು, ನಾಲ್ವರತ್ತ ಓಡೋಡಿ ಬಂದ. “ಅವೆಲ್ಲ ವಿಷದ ಹಣ್ಣುಗಳು, ತಿನ್ನಬೇಡಿ” ಎಂದು ಪುನಃ ಎಚ್ಚರಿಸಿದ. ಅವರಲ್ಲೊಬ್ಬ ಕಂಗಾಲಾಗಿ ಹೇಳಿದ, “ಅಯ್ಯೋ, ನಾನು ಆಗಲೇ ಹಣ್ಣು ತಿಂದೆನಲ್ಲ." ಆಗ ಮುಂದಾಳು “ಪರವಾಗಿಲ್ಲ, ಈಗಲೇ ಪ್ರತಿವಿಷ ದ್ರಾವಣ ಕುಡಿ” ಎನ್ನುತ್ತಾ ಸೀಸೆಯೊಂದನ್ನು ಅವನಿಗಿತ್ತ. ಅವನು ಒಂದು ಗುಟುಕು ಪ್ರತಿವಿಷ ದ್ರಾವಣ ಕುಡಿದ. ಕೂಡಲೇ ತಿಂದಿದ್ದ ಹಣ್ಣನ್ನು ವಾಂತಿ ಮಾಡಿದ.

ಇದನ್ನೆಲ್ಲ ದೂರದಲ್ಲಿ ಬಂಡೆಗಲ್ಲಿನ ಮರೆಯಲ್ಲಿ ನಿಂತು ಗಮನಿಸುತ್ತಿದ್ದ ಐವರು ದುರುಳರಿಗೆ ಗಾಬರಿಯಾಯಿತು - ಇನ್ನು ಮುಂದೆ ತಮ್ಮ ಆದಾಯಕ್ಕೆ ಕುತ್ತು ಬಂದೀತೆಂದು. ಅವರು ಕುಳಿತಲ್ಲಿಂದ ಎದ್ದು ಬಂದರು. ಆ ಪ್ರಯಾಣಿಕರ ಮುಂದಾಳುವಿನ ಹತ್ತಿರ ಹೋದರು. ದುರುಳರಲ್ಲೊಬ್ಬ ಮುಂದಾಳುವಿನ ಬಳಿ ಕೇಳಿದ, “ನೀವ್ಯಾರೂ ಈ ಮರದ ಹಣ್ಣು ತಿನ್ನಲಿಲ್ಲ ತಾನೇ?" ಆಗ ಮುಂದಾಳು ಉತ್ತರಿಸಿದ, “ಇಲ್ಲ, ಇಲ್ಲ. ನಾನು ಸರಿಯಾದ ಸಮಯದಲ್ಲಿ ಬಂದು ನನ್ನ ಬಳಗದವರನ್ನು ರಕ್ಷಿಸಿದೆ."

ಅದೇ ದುರುಳ ಮತ್ತೆ ಕೇಳಿದ, “ಈ ರಸ್ತೆಯಲ್ಲಿ ಹಾದು ಹೋಗುವ ಹಲವು ಪ್ರಯಾಣಿಕರು ಅವು ಮಾವಿನ ಹಣ್ಣುಗಳೆಂದು ತಪ್ಪು ತಿಳಿಯುತ್ತಾರೆ. ಅವು ಮಾವಿನ ಹಣ್ಣುಗಳಲ್ಲ, ವಿಷದ ಹಣ್ಣುಗಳೆಂದು ನಿಮಗೆ ಹೇಗೆ ಗೊತ್ತಾಯಿತು?” ಆಗ ಮುಂದಾಳು ಉತ್ತರಿಸಿದ: "ಹಳ್ಳಿಯ ಹತ್ತಿರದ ಮರದಲ್ಲಿ ಹಣ್ಣುಗಳಿದ್ದರೆ ಅವು ಮರದಲ್ಲಿ ಉಳಿಯೋದಿಲ್ಲ. ಹಳ್ಳಿಯವರು, ಮಕ್ಕಳು ಬಂದು ಅವನ್ನೆಲ್ಲ ಕೀಳುತ್ತಾರೆ. ಆದರೆ, ಈ ಮರಕ್ಕೆ ಸುಲಭವಾಗಿ ಹತ್ತಬಹುದಾಗಿದ್ದರೂ ಇದರ ಹಣ್ಣುಗಳನ್ನು ನಿಮ್ಮ ಹಳ್ಳಿಯ ಯಾರೂ ಕೊಯ್ದಿರಲಿಲ್ಲ. ಆದ್ದರಿಂದ ಇದರ ಹಣ್ಣುಗಳು ವಿಷದ ಹಣ್ಣುಗಳೆಂದು ನಾನು ತರ್ಕಿಸಿದೆ.”

ಹಾಗೆನ್ನುತ್ತಾ ವಾಣಿಜ್ಯ ಸರಕುಸಾಲಿನ ಮುಂದಾಳು ತನ್ನ ಸಂಗಡಿಗರಿಗೆ ಆ ವಿಷದ ಹಣ್ಣಿನ ಮರವನ್ನು ಕಡಿಯಲು ಹೇಳಿದ. ಸ್ವಲ್ಪ ಹೊತ್ತಿನಲ್ಲೇ ಅವರು ಆ ಮರವನ್ನು ಬುಡದಿಂದ ಕತ್ತರಿಸಿ ನೆಲಕ್ಕೆ ಉರುಳಿಸಿದರು - ಮುಂದೆ ಆ ರಸ್ತೆಯಲ್ಲಿ ಬರುವ ಯಾವ ಪ್ರಯಾಣಿಕರೂ ಅದರ ವಿಷದ ಹಣ್ಣು ತಿಂದು ಪ್ರಾಣ ಕಳೆದುಕೊಳ್ಳಬಾರದೆಂದು. ಇದನ್ನು ನೋಡುತ್ತಾ ಆ ಹಳ್ಳಿಯ ದುರುಳರು ಕೈಕೈ ಹಿಸುಕಿಕೊಂಡರು.
ಪ್ರೇರಣೆ: "ಸ್ಟೋರೀಸ್ ಆಫ್ ವಿಸ್‌ಡಮ್" - ವಿವೇಕದ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ

ಒಂದು ಹಳ್ಳಿಯ ಅವಿದ್ಯಾವಂತನಿಗೊಂದು ಪವಾಡ ನಡೆಸುವ ಶಕ್ತಿಯಿತ್ತು. ಅವನು ಕಾಡಿಗೆ ಹೋಗಿ ಒಂದು ಮರದ ಕೆಳಗೆ ನಿಂತು ಒಂದು ಮಂತ್ರ ಹೇಳುತ್ತಿದ್ದ. ತಕ್ಷಣವೇ ಆ ಮರ ಕಾಯಿಗಳ ಭಾರದಿಂದ ಬಗ್ಗುತ್ತಿತ್ತು. ಮರುಕ್ಷಣವೇ ಆ ಕಾಯಿಗಳೆಲ್ಲ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದವು. ಆತ ಅವನ್ನು ಆರಿಸಿಕೊಂಡು ಕೆಲವನ್ನು ತಾನು ತಿಂದು, ಉಳಿದವನ್ನು ಬಡವರಾದ ತನ್ನ ಅಕ್ಕಪಕ್ಕದವರಿಗೆ ಹಂಚಿಬಿಡುತ್ತಿದ್ದ.

ಒಬ್ಬ ಅಲೆಮಾರಿ ತರುಣ ಇದನ್ನು ನೋಡಿದ. ಆ ಹಳ್ಳಿಯವನ ಕಾಲಿಗೆ ಬಿದ್ದು, ತನಗೆ ಆ ಮಂತ್ರ ಕಲಿಸಿಕೊಡಬೇಕೆಂದು ಅಂಗಲಾಚಿದ. ಆ ಹಳ್ಳಿಯವನು ಇಷ್ಟವಿಲ್ಲದಿದ್ದರೂ ಮಂತ್ರ ಕಲಿಸಲು ಸಮ್ಮತಿಸಿದ. ಆದರೆ ಈ ಎಚ್ಚರಿಕೆ ಕೊಟ್ಟ, “ಈ ಮಂತ್ರಶಕ್ತಿಯನ್ನು ನೀನು ನಿನ್ನ ದುರಾಶೆ ತೀರಿಸಿಕೊಳ್ಳಲು ಬಳಸಬಾರದು. ಅದೂ ಅಲ್ಲದೆ, ನೀನು ಯಾವತ್ತಿನ ತನಕ ಸುಳ್ಳು ಹೇಳುವುದಿಲ್ಲವೋ ಆವತ್ತಿನ ತನಕ ಮಾತ್ರ ಈ ಮಂತ್ರಶಕ್ತಿ ಕೆಲಸ ಮಾಡುತ್ತದೆ.”

ಆ ತರುಣ ತನ್ನ ಹಳ್ಳಿಗೆ ಮರಳಿದ. ಪ್ರತಿದಿನವೂ ಆ ಮಂತ್ರವನ್ನು ಅನೇಕ ಸಲ ಪ್ರಯೋಗ ಮಾಡುತ್ತ, ನೂರಾರು ಮಾವಿನ ಹಣ್ಣುಗಳನ್ನು ಪಡೆಯತೊಡಗಿದ. ಅವನ್ನು ಸಂತೆಗಳಲ್ಲಿ ಮಾರಿ, ಕೆಲವೇ ತಿಂಗಳುಗಳಲ್ಲೇ ಭಾರಿ ಶ್ರೀಮಂತನಾದ.

ಈ ಪವಾಡದ ಸುದ್ದಿ ರಾಜನ ಕಿವಿಗೂ ಬಿತ್ತು. ರಾಜ ಆ ತರುಣನನ್ನು ಕರೆಸಿ ಕೇಳಿದ, “ಈ ಮಂತ್ರಗಾರಿಕೆ ಎಲ್ಲಿ ಕಲಿತೆ?" ಅಹಂಕಾರಿಯಾದ ಆ ತರುಣ ಹಳ್ಳಿಗನೊಬ್ಬನಿಂದ ಇದನ್ನು ಕಲಿತೆನೆಂದು ಹೇಳಲು ಇಷ್ಟ ಪಡಲಿಲ್ಲ. “ರಾಜನೇ, ಬಹಳ ದೂರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮಹಾ ಪಂಡಿತರುಗಳ ಸೇವೆ ಮಾಡುತ್ತಾ, ಹಲವು ವರುಷ ಅಭ್ಯಾಸ ಮಾಡಿ ಇದನ್ನು ಕಲಿತೆ” ಎಂದು ಸುಳ್ಳು ಹೇಳಿದ.

"ಸರಿ, ನಮ್ಮೆದುರು ಈ ಪವಾಡ ಮಾಡಿ ತೋರಿಸು’ ಎಂದು ರಾಜ ಆಜ್ನೆ ಮಾಡಿದ. ರಾಜನೂ ಆತನ ಪರಿವಾರದವರೂ, ಮಂತ್ರಿಗಳೂ, ಅಧಿಕಾರಿಗಳೂ ದೊಡ್ಡ ಗುಂಪಾಗಿ ರಾಜನ ತೋಟಕ್ಕೆ ಹೋದರು. ಆ ತರುಣ ಒಂದು ದೊಡ್ಡ ಮಾವಿನ ಮರವನ್ನು ಆರಿಸಿಕೊಂಡು ಮಂತ್ರೋಚ್ಚಾರ ಮಾಡಿದ. ಆದರೆ ಅಲ್ಲೇನೂ ಪವಾಡ ನಡೆಯಲಿಲ್ಲ. ಯಾಕೆಂದರೆ ಅವನು ಸುಳ್ಳು ಹೇಳಿದ್ದ.

ಅವಮಾನದಿಂದ ತಲೆಯೆತ್ತಲಾಗದ ಆ ತರುಣ ರಾಜನಿಗೆ ನಿಜ ಹೇಳಿ, ತನ್ನ ತಪ್ಪನ್ನು ಒಪ್ಪಿಕೊಂಡ. “ಅಹಂಕಾರದಿಂದ ನೀನು ನಿನ್ನ ಗುರುವಿನ ಆದೇಶವನ್ನು ಧಿಕ್ಕರಿಸಿದೆ. ಈಗ ಹೋಗಿ ಆತನ ಕ್ಷಮೆ ಕೇಳು. ಆ ಮಂತ್ರ ಮತ್ತೆ ಕೆಲಸ ಮಾಡಲೂ ಬಹುದು" ಎಂದು ರಾಜ ಅವನಿಗೆ ಹೇಳಿದ.

ಆ ತರುಣ ರಾಜ ಹೇಳಿದಂತೆಯೇ ಮಾಡಿದ. ಆದರೆ ಆ ಮಂತ್ರಶಕ್ತಿ ಮತ್ತೆ ಕೆಲಸ ಮಾಡಲಿಲ್ಲ. ಏಕೆಂದರೆ ಅವನು ಅದನ್ನು ತನ್ನ ದುರಾಶೆ ತೀರಿಸಿಕೊಳ್ಳಲು ಬಳಸಿದ್ದ.

ಪ್ರೇರಣೆ: “ಸಾರ್ವಕಾಲಿಕ ಪುಸ್ತಕಗಳು” - ಮನೋಜ್ ದಾಸ್, ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, 2004

ಸುರೇಶ ಮಹಾ ಸ್ವಾರ್ಥಿ. ಒಮ್ಮೆ ಅವನು ಮೂವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡ. ಸ್ವಲ್ಪ ಹೊತ್ತಿನ ನಂತರ, ಸುರೇಶನನ್ನು ಭೇಟಿಯಾಗಲು ರಮೇಶ ಬಂದ. ಅವನಿಗೆ ಹಾದಿಯಲ್ಲಿ ಮೂವತ್ತು ಬಂಗಾರದ ನಾಣ್ಯಗಳು ಸಿಕ್ಕವು.

ಆಗ, ತಾನು ಬಂಗಾರದ ನಾಣ್ಯಗಳನ್ನು ಕಳೆದುಕೊಂಡಿದ್ದೇನೆಂದು ಸುರೇಶ ತಿಳಿಸಿದ. ಪ್ರಾಮಾಣಿಕನೂ ಸತ್ಯಸಂಧನೂ ಆದ ರಮೇಶ ತನಗೆ ಸಿಕ್ಕಿದ್ದ ಎಲ್ಲ ಬಂಗಾರದ ನಾಣ್ಯಗಳನ್ನೂ  “ಇವು ನಿನ್ನವೇ ಆಗಿರಬೇಕು” ಎನ್ನುತ್ತಾ ರಮೇಶನ ಕೈಗಿತ್ತ.

ಸುರೇಶ ಆ ನಾಣ್ಯಗಳನ್ನು ಎಣಿಸಿ, "ಇದರಲ್ಲಿ ಹತ್ತು ಬಂಗಾರದ ನಾಣ್ಯಗಳು ಕಡಿಮೆ ಇವೆ” ಎಂದು ಆಪಾದಿಸಿದ. ಅನಂತರ, ಸುರೇಶ ಕೋರ್ಟಿನಲ್ಲಿ ದಾವೆ ಹೂಡಿ, ರಮೇಶನ ಮೇಲೆ ತನ್ನ ಹತ್ತು ಬಂಗಾರದ ನಾಣ್ಯಗಳನ್ನು ಕದ್ದ ಆರೋಪ ಹೊರಿಸಿದ.

ಕೋರ್ಟಿನಲ್ಲಿ ನ್ಯಾಯಾಧೀಶರು ರಮೇಶನನ್ನು ಪ್ರಶ್ನಿಸಿದರು: ನಿನಗೆ ಎಷ್ಟು ಬಂಗಾರದ ನಾಣ್ಯಗಳು ಸಿಕ್ಕವು ಎಂಬುದಾಗಿ. ತನಗೆ ಸಿಕ್ಕಿದ್ದು ಮೂವತ್ತು ಬಂಗಾರದ ನಾಣ್ಯಗಳು ಮಾತ್ರ ಎಂದು ರಮೇಶ ಉತ್ತರಿಸಿದ. ಈಗ ನ್ಯಾಯಾಧೀಶರು ಸುರೇಶನ ಬಳಿ “ನೀನು ಎಷ್ಟು ಬಂಗಾರದ ನಾಣ್ಯಗಳನ್ನು ಕಳೆದುಕೊಂಡೆ?" ಎಂದು ಕೇಳಿದಾಗ ಅವನು ನಲುವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡೆ ಎಂದು ಹೇಳಿದ. ಕೂಡಲೇ ನ್ಯಾಯಾಧೀಶರು ಆ ಮೂವತ್ತು ಬಂಗಾರದ ನಾಣ್ಯಗಳು ಸುರೇಶನಿಗೆ ಸೇರಿದ್ದಲ್ಲ; ಯಾಕೆಂದರೆ ಅವನು ಕಳೆದುಕೊಂಡದ್ದು ನಲುವತ್ತು ಬಂಗಾರದ ನಾಣ್ಯಗಳನ್ನು ಎಂದು ಘೋಷಿಸಿದರು. ಆ ಮೂವತ್ತು ಬಂಗಾರದ ನಾಣ್ಯಗಳನ್ನು ರಮೇಶನಿಗೆ ಅವರು ಕೊಟ್ಟರು. ತನ್ನ ಮೋಸದ ಕೆಲಸ ಕೈಗೂಡಲಿಲ್ಲವೆಂದು ಸುರೇಶ ಪೆಚ್ಚಾದ.

ಅದೊಂದು ಪ್ರಾಣಿಗಳನ್ನು ಸಾಕುವ ಆಶ್ರಮ. ಅದರ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಆನೆಗಳನ್ನು ಗಮನಿಸಿದ. ಅವನಿಗೆ ಅಚ್ಚರಿಯಾಯಿತು. ಯಾಕೆಂದರೆ, ಆ ಭಾರೀ ಗಾತ್ರದ ಆನೆಗಳ ಮುಂಗಾಲಿಗೆ ಯಾವುದೇ ಸರಪಳಿ ಹಾಕಿರಲಿಲ್ಲ. ಬದಲಾಗಿ ಸಪೂರದ ಹಗ್ಗ ಕಟ್ಟಿ ಬಂಧಿಸಲಾಗಿತ್ತು! ಅವು ತಪ್ಪಿಸಿಕೊಳ್ಳಬೇಕೆಂದರೆ, ಆ ಹಗ್ಗವನ್ನು ಒಮ್ಮೆ ಜಾಡಿಸಿದರೆ ಸಾಕಿತ್ತು.

ಅಲ್ಲಿನ ತರಬೇತಿದಾರನನ್ನು ಈ ಬಗ್ಗೆ ಆ ವ್ಯಕ್ತಿ ಪ್ರಶ್ನಿಸಿದ: ಅಲ್ಲಿದ್ದ ಆನೆಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಯಾಕೆ ಮಾಡುತ್ತಿಲ್ಲ ಎಂಬುದಾಗಿ.

ಅದಕ್ಕೆ ತರಬೇತಿದಾರ ನೀಡಿದ ಉತ್ತರ ಮಾರ್ಮಿಕವಾಗಿತ್ತು: “ಈ ಆನೆಗಳು ಚಿಕ್ಕದಿದ್ದಾಗ ನಾವು ಇದೇ ಹಗ್ಗಗಳಿಂದ ಅವನ್ನು ಕಟ್ಟಿ ಹಾಕಿದ್ದೆವು. ಆ ವಯಸ್ಸಿನಲ್ಲಿ ಅವು ತಪ್ಪಿಸಿಕೊಳ್ಳದಂತೆ ಬಂಧನದಲ್ಲಿಡಲು ಆ ಹಗ್ಗಗಳು ಸಾಕಾಗಿದ್ದವು. ಆನೆಗಳು ದೊಡ್ಡದಾಗಿ ಬೆಳೆದರೂ, ಆ ಹಗ್ಗ ತುಂಡು ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿವೆ. ಹಾಗಾಗಿ ಅವು ಇಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ.”

ಮನುಷ್ಯರ ಅವಸ್ಥೆಯೂ ಇದೇ ಅಲ್ಲವೇ? ವಿವಿಧ ಮಾನಸಿಕ ಭ್ರಮೆಗಳಲ್ಲಿ ಬಂಧನದಲ್ಲಿದ್ದು, ಅವುಗಳಿಂದ ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಅಲ್ಲವೇ?

ಹಳ್ಳಿಯ ರೈತನೊಬ್ಬ ಪ್ರತಿ ದಿನವೂ ಬೇಕರಿಯ ಮಾಲೀಕನಿಗೆ ಒಂದು ಕಿಲೋ ಗ್ರಾಮ್ ಬೆಣ್ಣೆ ಮಾರುತ್ತಿದ್ದ. ಅದೊಂದು ದಿನ ಬೇಕರಿ ಮಾಲೀಕ ಬೆಣ್ಣೆಯನ್ನು ತೂಕ ಮಾಡಿದ. ಆ ಬೆಣ್ಣೆಯ ತೂಕ 100 ಗ್ರಾಮ್ ಕಡಿಮೆಯಾಗಿತ್ತು. ಹಾಗಾಗಿ, ರೈತನ ಮೇಲೆ ಬೇಕರಿ ಮಾಲೀಕ ಕೋರ್ಟಿನಲ್ಲಿ ದಾವೆ ಹೂಡಿದ: ರೈತ ತನಗೆ ಮೋಸ ಮಾಡಿದ್ದಾನೆಂದು.

ಕೋರ್ಟಿನಲ್ಲಿ ನ್ಯಾಯಾಧೀಶರು ರೈತನನ್ನು ಪ್ರಶ್ನಿಸಿದರು: ಬೆಣ್ಣೆ ತೂಕ ಮಾಡಲು ರೈತ ಯಾವ ತೂಕದ ಬಟ್ಟು ಬಳಸುತ್ತಿದ್ದಾನೆ ಎಂಬುದಾಗಿ. ರೈತ ಉತ್ತರಿಸಿದ, "ಮಾನ್ಯ ನ್ಯಾಯಾಧೀಶರೇ, ನಾನೊಬ್ಬ ಬಡ ರೈತ. ನನ್ನ ಹತ್ತಿರ ಯಾವುದೇ ತೂಕದ ಬಟ್ಟು ಇಲ್ಲ. ಆದರೆ ತಕ್ಕಡಿ ಇದೆ.”

“ಹಾಗಾದರೆ, ನೀನು ಬೆಣ್ಣೆಯನ್ನು ಹೇಗೆ ತೂಕ ಮಾಡುತ್ತೀ?” ಎಂದು ಕೇಳಿದರು ನ್ಯಾಯಾಧೀಶರು. ಅದಕ್ಕೆ ರೈತನ ಉತ್ತರ ಹೀಗಿತ್ತು: “ಮಾನ್ಯ ನ್ಯಾಯಾಧೀಶರೇ, ಬೇಕರಿ ಮಾಲೀಕ ನನ್ನಿಂದ ಬೆಣ್ಣೆ ಖರೀದಿಸಲು ಶುರು ಮಾಡುವುದಕ್ಕಿಂತ ಬಹಳ ಮುಂಚಿನಿಂದಲೂ ನಾನು ಅವನಿಂದ ಪ್ರತಿ ದಿನವೂ ಒಂದು ಕಿಲೋ ಗ್ರಾಮ್ ತೂಕದ ಬ್ರೆಡ್ ಖರೀಸುತ್ತಿದ್ದೇನೆ. ಪ್ರತಿ ದಿನವೂ ಬೇಕರಿ ಮಾಲೀಕ ಬ್ರೆಡ್ ತಂದು ಕೊಟ್ಟಾಗ ನಾನು ತಕ್ಕಡಿಯ ಒಂದು ತಟ್ಟೆಯಲ್ಲಿ ಆ ಬ್ರೆಡ್ ಇಡುತ್ತೇನೆ. ಇನ್ನೊಂದು ತಟ್ಟೆಯಲ್ಲಿ ಅಷ್ಟೇ ತೂಕದ ಬೆಣ್ಣೆ ತೂಗಿ ಅವನಿಗೆ ಕೊಡುತ್ತೇನೆ. ಈ ವ್ಯವಹಾರದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ, ಅದು ಈ ಬೇಕರಿ ಮಾಲೀಕನೇ.” ನ್ಯಾಯಾಧೀಶರಿಗೆ ಬೇಕರಿ ಮಾಲೀಕನ ಮೋಸ ಅರ್ಥವಾಯಿತು. ಅವರು ಅವನಿಗೆ ಎಚ್ಚರಿಕೆ ನೀಡಿ ಕಳಿಸಿದರು.

ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆಗಾಲ ಸಮೀಪಿಸಿದೆ ಎಂದು ಅರಿತುಕೊಂಡ ತಂದೆ, ಅದೊಂದು ದಿನ ಮಕ್ಕಳಿಬ್ಬರನ್ನೂ ಕರೆಸಿಕೊಂಡ. ಅವನು ಮಕ್ಕಳಿಗೆ ಅಂತಿಮ ಮಾತು ಹೇಳಿದ, “ನೀವು ಬಿತ್ತಿದ್ದನ್ನೇ ಬೆಳೆದುಕೊಳ್ಳುತ್ತೀರಿ ಎಂಬುದು ನಿಮಗೆ ಗೊತ್ತಿರಲಿ. ನನ್ನ ಜಮೀನನ್ನು ನಿಮಗಿಬ್ಬರಿಗೂ ಬಿಟ್ಟು ಹೋಗುತ್ತಿದ್ದೇನೆ. ಅದನ್ನು ಪಾಲು ಮಾಡಿಕೊಂಡು, ಇಬ್ಬರೂ ಜೊತೆಯಾಗಿ ದುಡಿದು ಬಾಳುವೆ ಮಾಡಿ."

ತಂದೆಯ ಮರಣಾ ನಂತರ ತಮ್ಮನನ್ನು ಅಣ್ಣ ಮನೆಯಿಂದ ಹೊರಕ್ಕೆ ಹಾಕಿದ. ಅವನು ಹಳ್ಳಿಯನ್ನೇ ಬಿಟ್ಟು ಹೊರಟ. ಮುಂದೇನು ದಾರಿ ಎಂದು ಚಿಂತಿಸುತ್ತಾ ಸಾಗುತ್ತಿದ್ದಾಗ, ಒಂದು ಮರದ ಮೇಲಿನಿಂದ ಚೀರುವ ಸದ್ದು ಕೇಳಿ ಬಂತು. ಅದೇನೆಂದು ತಮ್ಮ ಪರಿಶೀಲಿಸಿದಾಗ, ಪುಟ್ಟ ಹಕ್ಕಿಯ ಮೇಲೆ ಹಾವೊಂದು ದಾಳಿ ಮಾಡುತ್ತಿತ್ತು. ಆ ಹಾವನ್ನು ಕೋಲಿನಿಂದ ಓಡಿಸಿ, ಪುಟ್ಟ ಹಕ್ಕಿಯನ್ನು ರಕ್ಷಿಸಿದ ತಮ್ಮ. ಆ ಹಕ್ಕಿ ಅವನಿಗೊಂದು ಬೀಜ ಕೊಟ್ಟು, ಅದನ್ನು ಬಿತ್ತ ಬೇಕೆಂದು ಸೂಚಿಸಿತು.

ಮುಂದಿನ ಹಳ್ಳಿ ತಲಪಿದ ತಮ್ಮ ಅಲ್ಲೇ ಜಮೀನೊಂದನ್ನು ಗೇಣಿಗೆ ಪಡೆದು ನೆಲೆಸಿದ. ಹಕ್ಕಿಯ ಸೂಚನೆಯಂತೆ ಆ ಬೀಜವನ್ನು ಜಮೀನಿನಲ್ಲಿ ಬಿತ್ತಿದ. ಒಂದೇ ದಿನದಲ್ಲಿ ಆ ಬೀಜ ಮೊಳೆತು ಅದರಿಂದ ಹತ್ತಡಿ ಉದ್ದದ ಬಳ್ಳಿ ಬೆಳೆಯಿತು. ಮರುದಿನವೇ ಅದರಲ್ಲೊಂದು ಕುಂಬಳಕಾಯಿ ಬೆಳೆದು, ಸಂಜೆಯ ಹೊತ್ತಿಗೆ ಕೊಯ್ಲಿಗೆ ತಯಾರಾಗಿತ್ತು! ಕುಂಬಳಕಾಯಿ ಕೊಯ್ದು ಮನೆಗೆ ತಂದ ತಮ್ಮ ಕುತೂಹಲದಿಂದ ಅದನ್ನು ಕೊಯ್ದು ನೋಡಿದ. ಅದರೊಳಗೆ ಬಂಗಾರದ ನಾಣ್ಯಗಳು ತುಂಬಿದ್ದವು! ಆಗ ತಮ್ಮನಿಗೆ ತಂದೆ ಹೇಳಿದ ಮಾತು ನೆನಪಾಯಿತು: “ನೀವು ಬಿತ್ತಿದ್ದನ್ನೇ ಬೆಳೆದುಕೊಳ್ಳುತ್ತೀರಿ.” ಕೆಲವೇ ದಿನಗಳಲ್ಲಿ ಶ್ರೀಮಂತನಾದ ತಮ್ಮ ನೆಮ್ಮದಿಯ ಜೀವನ ನಡೆಸತೊಡಗಿದ.

ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ.
“ಅದೊಂದು ಕಾಗೆ" ಎಂದು ಹೇಳಿದ ಶರತ್. ಕೆಲವು ನಿಮಿಷಗಳ ನಂತರ ಕೇಶವನ ತಂದೆ ಪುನಃ ಅದೇ ಪ್ರಶ್ನೆ ಕೇಳಿದರು. “ಅಪ್ಪ, ನಿಮಗೆ ಈಗಷ್ಟೇ ಹೇಳಿದೆ; ಅದೊಂದು ಕಾಗೆ" ಎಂದು ಉತ್ತರಿಸಿದ ಕೇಶವ.

ಸ್ವಲ್ಪ ಹೊತ್ತಿನ ಬಳಿಕ ಕೇಶವನ ತಂದೆ ಮೂರನೇ ಸಲ ಅದೇ ಪ್ರಶ್ನೆ ಕೇಳಿದರು. ಕೇಶವನಿಗೆ ಕಿರಿಕಿರಿ ಆಯಿತು. ಅವನು ತಂದೆ ಅಬ್ಬರಿಸಿ ಹೇಳಿದ, “ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಯಾಕೆ ಕೇಳ್ತೀರಿ? ಇಷ್ಟು ಸರಳ ಸಂಗತಿ ಒಮ್ಮೆ ಹೇಳಿದರೆ ನಿಮಗೆ ಅರ್ಥ ಆಗೋದಿಲ್ವಾ?"

ಅವನ ತಂದೆ ಅಲ್ಲಿಂದ ಎದ್ದು ಹೋದರು. ಐದಾರು ನಿಮಿಷಗಳ ನಂತರ, ಹಳೆಯ ಡೈರಿಯೊಂದನ್ನು ಹಿಡಿದುಕೊಂಡು ಅವರು ಕೇಶವನ ಬಳಿಗೆ ಬಂದರು. ಅದರ ಒಂದು ಪುಟವನ್ನು ತೆರೆದು ಅವರು ಕೇಶವನಿಗೆ ತೋರಿಸಿದರು. ಅದರಲ್ಲಿ ಹೀಗೆ ಬರೆದಿತ್ತು: “ಇವತ್ತು ನನ್ನ ಪುಟ್ಟ ಮಗ ಒಂದು ಕಾಗೆಯನ್ನು ಕಂಡು ಅದೇನೆಂದು ನನ್ನ ಬಳಿ 23 ಸಲ ಕೇಳಿದ. ನಾನು ಅದೊಂದು ಕಾಗೆ ಎಂದು 23 ಸಲ ಅವನಿಗೆ ಉತ್ತರಿಸಿದೆ. ಅವನ ಕುತೂಹಲ ಮತ್ತು ಮುಗ್ಧತೆಯನ್ನು ನಾನು ಪ್ರೀತಿಸುತ್ತೇನೆ.” ಇದನ್ನೋದಿದ ಶರತ್ ದಂಗು ಬಡಿದು ಹೋದ. ತನ್ನ ತಂದೆಯ ಕ್ಷಮೆ ಕೇಳುತ್ತಾ ಅವರನ್ನು ತಬ್ಬಿಕೊಂಡ.

ಒಂದಾನೊಂದು ಕಾಲದಲ್ಲಿ ಕೇಶವ ಎಂಬಾತ ಕತ್ತೆಯೊಂದನ್ನು ಸಾಕಿದ್ದ. ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಕೇಶವ ಒಂದು ದಿನ ಕತ್ತೆಯ ಬೆನ್ನಿನಲ್ಲಿ ಹೊರೆ ಹೊರಿಸಿ, ಪರ್ವತದ ಮೇಲಿದ್ದ ಹಳ್ಳಿಯತ್ತ ಹೊರಟ.

ಅವರು ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದರು. ಹಾದಿಯ ಬಲ ಬದಿಯಲ್ಲಿ ಆಳವಾದ ಕಣಿವೆ. ಅಚಾನಕ್ ಕತ್ತೆ ಹಾದಿಯ ಬಲ ಬದಿಗೆ ಸರಿಯ ತೊಡಗಿತು. ಕೇಶವ ಅದನ್ನು ಎಡಕ್ಕೆ ಎಳೆದಷ್ಟೂ ಕತ್ತೆ ಬಲಕ್ಕೆ ಕಣಿವೆಯತ್ತ ಸರಿಯುತ್ತಿತ್ತು.

ಕತ್ತೆಯನ್ನು ಎಳೆದೂ ಎಳೆದೂ ಕೇಶವ ಸುಸ್ತಾದ. ಹಟಮಾರಿ ಕತ್ತೆ ಹಾದಿಯ ಬಲಬದಿಗೆ ಸರಿದೂ ಸರಿದೂ ಅಂಚಿಗೆ ಬಂದಿತ್ತು. ಈಗ ಕತ್ತೆಯ ಜೀವಕ್ಕೆ ಅಪಾಯ ಕಾದಿದೆಯೆಂದು ಕೇಶವನಿಗೆ ಚಿಂತೆಯಾಯಿತು. ಅವನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಕೊನೆಗೆ ಕತ್ತೆಯ ಬಾಲವನ್ನು ಹಿಡಿದು, ತನ್ನೆಲ್ಲ ಬಲ ಹಾಕಿ, ಅದನ್ನು ಎಳೆದ. ಆದರೆ ಕತ್ತೆ ಒಂದಿಂಚೂ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ “ಓ ಪೆದ್ದ ಕತ್ತೆಯೇ, ನಿನ್ನ ಹಟಮಾರಿತನದಿಂದ ನೀನು ಸಾಯುತ್ತೀ” ಎನ್ನುತ್ತಾ ಅದರ ಬಾಲದ ಹಿಡಿತ ಬಿಟ್ಟ. ತಕ್ಷಣವೇ ಹಾದಿಯ ಬಲಬದಿಯ ಆಳವಾದ ಕಣಿವೆಗೆ ಜಾರಿ ಬಿದ್ದ ಕತ್ತೆ ಸತ್ತು ಹೋಯಿತು.

ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು.

ಅಲ್ಲೇ ಬಲೆ ಹೆಣೆಯುತ್ತಿದ್ದ ಒಂದು ಜೇಡ ಅಳುತ್ತಿದ್ದ ಪಾರುವನ್ನು ಕಂಡಿತು. ಅವಳನ್ನು ಸಂತೈಸಲಿಕ್ಕಾಗಿ ತನ್ನ ಕೆಲಸ ನಿಲ್ಲಿಸಿ ಬಂದಿತು. "ಯಾಕೆ ನೀನು ಅಳುತ್ತಿದ್ದಿ?” ಎಂದು ಪಾರುವನ್ನು ಜೇಡ ಕೇಳಿತು. “ಅಯ್ಯೋ, ನನ್ನ ಮೆಚ್ಚಿನ ಫ್ರಾಕ್ ಹರಿಯಿತು" ಎಂದು ಉತ್ತರಿಸಿದಳು ಪಾರು.

ಇದನ್ನು ಕೇಳಿದ ಜೇಡ ಹೇಳಿತು, "ನನ್ನ ಅವಸ್ಥೆ ನೋಡು. ನಾನು ಬಹಳ ಕಷ್ಟ ಪಟ್ಟು ಒಂದು ಬಲೆ ಹೆಣೆಯುತ್ತೇನೆ. ಒಂದು ಬಲೆ ಹೆಣೆಯಲು ಗಂಟೆಗಟ್ಟಲೆ ಕೆಲಸ ಮಾಡಬೇಕು. ಆದರೆ ಅದನ್ನು ನಾಶ ಮಾಡಲು ಒಂದೇ ಒಂದು ಕ್ಷಣ ಸಾಕು. ನಿನ್ನೆ ತಾನೇ ನಾನೊಂದು ಬಲೆ ಹೆಣೆದಿದ್ದೆ. ಇವತ್ತು ಬೆಳಗ್ಗೆ ಮನೆ-ಕೆಲಸದವಳು ಅದನ್ನು ಒಂದೇಟಿಗೆ ಗುಡಿಸಿ ಹಾಕಿದಳು. ನನಗೂ ದುಃಖವಾಯಿತು. ಆದರೆ ನಾನು ದುಃಖಿಸುತ್ತಾ ಕೂರುವ ಬದಲು ಇನ್ನೊಂದು ಬಲೆ ಹೆಣೆಯಲು ಶುರು ಮಾಡಿದೆ. ನೀನೂ ಅಳಬೇಡ. ನಿನ್ನ ಅಮ್ಮನಿಗೆ ಹೇಳಿದರೆ ಅವರು ಹರಿದ ಫ್ರಾಕನ್ನು ಹೊಲಿದು ಕೊಡುತ್ತಾರೆ. ಹೋಗು, ಆಟವಾಡು.”

ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು.

ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು ಬಿಗಿದು ಎಳೆಯದಿದ್ದರೆ ನಾನು ಇನ್ನೂ ಎತ್ತರಕ್ಕೆ ಏರುತ್ತಿದ್ದೆ” ಎಂಬುದೇ ಅದರ ಕೊರಗು. ತನ್ನನ್ನು ದಾರದಿಂದ ಬಿಡಿಸಿಕೊಳ್ಳಲಿಕ್ಕಾಗಿ ಅದು ದಾರವನ್ನು ಎಳೆಯಿತು. ಯಾಕೆಂದರೆ, ಮೋಡಗಳಿಗಿಂತಲೂ ಎತ್ತರದಲ್ಲಿ ಹಾರಬೇಕೆಂಬುದು ಅದರ ಹೆಬ್ಬಯಕೆ.

ಆದರೆ ಗಾಳಿಪಟದ ದಾರ ಬಲವಾಗಿತ್ತು. ಆ ದಾರ ಸುಲಭದಲ್ಲಿ ತುಂಡಾಗುವಂತಿರಲಿಲ್ಲ. ಗಾಳಿಪಟಕ್ಕೆ ಇನ್ನು ತಡೆಯಲಾಗಲಿಲ್ಲ. ಅದು ತನ್ನೆಲ್ಲ ಬಲ ಹಾಕಿ ದಾರವನ್ನು ಎಳೆಯಿತು. ಆಗ ಅದರ ದಾರ ತುಂಡಾಯಿತು. ಸ್ವಲ್ಪ ಹೊತ್ತು ಅಲ್ಲೇ ತೇಲಾಡಿದ ಗಾಳಿಪಟಕ್ಕೆ ಖುಷಿಯೋ ಖುಷಿ.

ತಟಕ್ಕನೆ ಗಾಳಿಪಟ ಕೆಳಕ್ಕೆ ಕುಸಿಯತೊಡಗಿತು. ಏನು ಮಾಡಿದರೂ ಆ ಬಿರುಸಿನ ಕುಸಿತವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಧುಸ್ಸೆಂದು ಸಮುದ್ರದ ನೀರಿಗೆ ಬಿದ್ದ ಗಾಳಿಪಟ ಒದ್ದೆಮುದ್ದೆಯಾಯಿತು. ಸಮುದ್ರದ ತೆರೆಗಳ ರಭಸದಲ್ಲಿ ಗಾಳಿಪಟ ಕೊಚ್ಚಿಕೊಂಡು ಹೋಯಿತು. ಈಗ ಗಾಳಿಪಟ ಸೋತು ಸುಣ್ಣವಾಗಿ ಕೂಗಿತು, “ಓ, ಇದೇನಿದು? ನಾನು ಆಕಾಶದಲ್ಲಿ ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಹಾರಬೇಕೆಂದಿದ್ದೆ. ನನ್ನಷ್ಟು ಎತ್ತರದಲ್ಲಿ ಬೇರಾರೂ ಹಾರಲು ಸಾಧ್ಯವಿಲ್ಲವೆಂದು ಜಂಭ ಪಟ್ಟಿದ್ದ ನನಗಿದು ತಕ್ಕ ಪಾಠ.”

Pages