ಒಂದು ಹಳ್ಳಿಯ ಅವಿದ್ಯಾವಂತನಿಗೊಂದು ಪವಾಡ ನಡೆಸುವ ಶಕ್ತಿಯಿತ್ತು. ಅವನು ಕಾಡಿಗೆ ಹೋಗಿ ಒಂದು ಮರದ ಕೆಳಗೆ ನಿಂತು ಒಂದು ಮಂತ್ರ ಹೇಳುತ್ತಿದ್ದ. ತಕ್ಷಣವೇ ಆ ಮರ ಕಾಯಿಗಳ ಭಾರದಿಂದ ಬಗ್ಗುತ್ತಿತ್ತು. ಮರುಕ್ಷಣವೇ ಆ ಕಾಯಿಗಳೆಲ್ಲ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದವು. ಆತ ಅವನ್ನು ಆರಿಸಿಕೊಂಡು ಕೆಲವನ್ನು ತಾನು ತಿಂದು, ಉಳಿದವನ್ನು ಬಡವರಾದ ತನ್ನ ಅಕ್ಕಪಕ್ಕದವರಿಗೆ ಹಂಚಿಬಿಡುತ್ತಿದ್ದ.
ಒಬ್ಬ ಅಲೆಮಾರಿ ತರುಣ ಇದನ್ನು ನೋಡಿದ. ಆ ಹಳ್ಳಿಯವನ ಕಾಲಿಗೆ ಬಿದ್ದು, ತನಗೆ ಆ ಮಂತ್ರ ಕಲಿಸಿಕೊಡಬೇಕೆಂದು ಅಂಗಲಾಚಿದ. ಆ ಹಳ್ಳಿಯವನು ಇಷ್ಟವಿಲ್ಲದಿದ್ದರೂ ಮಂತ್ರ ಕಲಿಸಲು ಸಮ್ಮತಿಸಿದ. ಆದರೆ ಈ ಎಚ್ಚರಿಕೆ ಕೊಟ್ಟ, “ಈ ಮಂತ್ರಶಕ್ತಿಯನ್ನು ನೀನು ನಿನ್ನ ದುರಾಶೆ ತೀರಿಸಿಕೊಳ್ಳಲು ಬಳಸಬಾರದು. ಅದೂ ಅಲ್ಲದೆ, ನೀನು ಯಾವತ್ತಿನ ತನಕ ಸುಳ್ಳು ಹೇಳುವುದಿಲ್ಲವೋ ಆವತ್ತಿನ ತನಕ ಮಾತ್ರ ಈ ಮಂತ್ರಶಕ್ತಿ ಕೆಲಸ ಮಾಡುತ್ತದೆ.”
ಆ ತರುಣ ತನ್ನ ಹಳ್ಳಿಗೆ ಮರಳಿದ. ಪ್ರತಿದಿನವೂ ಆ ಮಂತ್ರವನ್ನು ಅನೇಕ ಸಲ ಪ್ರಯೋಗ ಮಾಡುತ್ತ, ನೂರಾರು ಮಾವಿನ ಹಣ್ಣುಗಳನ್ನು ಪಡೆಯತೊಡಗಿದ. ಅವನ್ನು ಸಂತೆಗಳಲ್ಲಿ ಮಾರಿ, ಕೆಲವೇ ತಿಂಗಳುಗಳಲ್ಲೇ ಭಾರಿ ಶ್ರೀಮಂತನಾದ.
ಈ ಪವಾಡದ ಸುದ್ದಿ ರಾಜನ ಕಿವಿಗೂ ಬಿತ್ತು. ರಾಜ ಆ ತರುಣನನ್ನು ಕರೆಸಿ ಕೇಳಿದ, “ಈ ಮಂತ್ರಗಾರಿಕೆ ಎಲ್ಲಿ ಕಲಿತೆ?" ಅಹಂಕಾರಿಯಾದ ಆ ತರುಣ ಹಳ್ಳಿಗನೊಬ್ಬನಿಂದ ಇದನ್ನು ಕಲಿತೆನೆಂದು ಹೇಳಲು ಇಷ್ಟ ಪಡಲಿಲ್ಲ. “ರಾಜನೇ, ಬಹಳ ದೂರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮಹಾ ಪಂಡಿತರುಗಳ ಸೇವೆ ಮಾಡುತ್ತಾ, ಹಲವು ವರುಷ ಅಭ್ಯಾಸ ಮಾಡಿ ಇದನ್ನು ಕಲಿತೆ” ಎಂದು ಸುಳ್ಳು ಹೇಳಿದ.
"ಸರಿ, ನಮ್ಮೆದುರು ಈ ಪವಾಡ ಮಾಡಿ ತೋರಿಸು’ ಎಂದು ರಾಜ ಆಜ್ನೆ ಮಾಡಿದ. ರಾಜನೂ ಆತನ ಪರಿವಾರದವರೂ, ಮಂತ್ರಿಗಳೂ, ಅಧಿಕಾರಿಗಳೂ ದೊಡ್ಡ ಗುಂಪಾಗಿ ರಾಜನ ತೋಟಕ್ಕೆ ಹೋದರು. ಆ ತರುಣ ಒಂದು ದೊಡ್ಡ ಮಾವಿನ ಮರವನ್ನು ಆರಿಸಿಕೊಂಡು ಮಂತ್ರೋಚ್ಚಾರ ಮಾಡಿದ. ಆದರೆ ಅಲ್ಲೇನೂ ಪವಾಡ ನಡೆಯಲಿಲ್ಲ. ಯಾಕೆಂದರೆ ಅವನು ಸುಳ್ಳು ಹೇಳಿದ್ದ.
ಅವಮಾನದಿಂದ ತಲೆಯೆತ್ತಲಾಗದ ಆ ತರುಣ ರಾಜನಿಗೆ ನಿಜ ಹೇಳಿ, ತನ್ನ ತಪ್ಪನ್ನು ಒಪ್ಪಿಕೊಂಡ. “ಅಹಂಕಾರದಿಂದ ನೀನು ನಿನ್ನ ಗುರುವಿನ ಆದೇಶವನ್ನು ಧಿಕ್ಕರಿಸಿದೆ. ಈಗ ಹೋಗಿ ಆತನ ಕ್ಷಮೆ ಕೇಳು. ಆ ಮಂತ್ರ ಮತ್ತೆ ಕೆಲಸ ಮಾಡಲೂ ಬಹುದು" ಎಂದು ರಾಜ ಅವನಿಗೆ ಹೇಳಿದ.
ಆ ತರುಣ ರಾಜ ಹೇಳಿದಂತೆಯೇ ಮಾಡಿದ. ಆದರೆ ಆ ಮಂತ್ರಶಕ್ತಿ ಮತ್ತೆ ಕೆಲಸ ಮಾಡಲಿಲ್ಲ. ಏಕೆಂದರೆ ಅವನು ಅದನ್ನು ತನ್ನ ದುರಾಶೆ ತೀರಿಸಿಕೊಳ್ಳಲು ಬಳಸಿದ್ದ.
ಪ್ರೇರಣೆ: “ಸಾರ್ವಕಾಲಿಕ ಪುಸ್ತಕಗಳು” - ಮನೋಜ್ ದಾಸ್, ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, 2004