HRM
ಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ ಪ್ರಶ್ನಿಸಿದರು.
ಕುಮಾರ “ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದ. “ಇದು ನೀನು ಯೋಚಿಸಲೇ ಬೇಕಾದ ಸಂಗತಿ” ಎಂದರು ಅವನ ತಂದೆ. ಕುಮಾರ ಐವತ್ತಿಕ್ಕಿಂತ ಜಾಸ್ತಿ ಮೀನುಗಳನ್ನು ಹಿಡಿದ. ಆಗ ನಡು ಮಧ್ಯಾಹ್ನ ದಾಟಿತ್ತು. ಕುಮಾರನಿಗೆ ಸುಸ್ತಾಗಿತ್ತು.
ಸ್ವಲ್ಪ ಹೊತ್ತಿನಲ್ಲೇ ತಂದೆಯೊಂದಿಗೆ ಮನೆಗೆ ಹೊರಟ ಕುಮಾರ. ಬೆಳಗ್ಗೆಯಿಂದ ಹಿಡಿದಿದ್ದ ಮೀನುಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ಹಾಕಿದ್ದ. ಒಂದೇಟಿಗೆ ಆ ಬುಟ್ಟಿಯನ್ನೆತ್ತಿ ಹಿಡಿದಿದ್ದ ಎಲ್ಲ ಮೀನುಗಳನ್ನೂ ಕೆರೆಗೆ ಎಸೆದು ಬಿಟ್ಟ! ಅವನ ತಂದೆ ಅಚ್ಚರಿಯಿಂದ ನೋಡುತ್ತಿದ್ದಂತೆ ಕುಮಾರ ಹೇಳಿದ, “ಅಪ್ಪಾ, ನನಗೆ ಬೆಳಗ್ಗೆಯಿಂದ ಅಮ್ಮನ ನೆನಪಾಗುತ್ತಲೇ ಇದೆ. ಈ ಮೀನುಗಳೂ ಹಾಗೇ ಅಲ್ವಾ? ಅದಕ್ಕೆ ಅವನ್ನು ಪುನಃ ಕೆರೆಗೆ ಹಾಕಿದೆ." ಅನಂತರ ಕುಮಾರ ಯಾವತ್ತು ಅಂತಹ ಪಂಥ ಕಟ್ಟಲಿಲ್ಲ.
ರಾತ್ರಿ ಮಲಗುವ ಮುನ್ನ ಪ್ರದೀಪನ ತಂದೆ ತನ್ನೊಂದಿಗೆ ತಾನು ಮಾತನಾಡುತ್ತಿದ್ದರು. ಬಾಲಕ ಪ್ರದೀಪ ತಂದೆಯ ಬಳಿ ಕೇಳಿದ, “ಅಪ್ಪಾ, ಅದೇನು ನಿಮ್ಮೊಂದಿಗೆ ನೀವೇ ಮಾತನಾಡುತ್ತಿದ್ದೀರಿ?" ತಂದೆ ಉತ್ತರಿಸಿದರು, "ನಾನು ನನ್ನ ಹೃದಯಕ್ಕೊಂದು ಸಂದೇಶ ಕಳಿಸುತ್ತಿದ್ದೆ.”
“ಹೌದಾ! ಅದೇನು ಸಂದೇಶ? ನನಗೂ ಹೇಳಪ್ಪಾ" ಎಂದು ಒತ್ತಾಯಿಸಿದ ಪ್ರದೀಪ. ತಂದೆ ಹೀಗೆಂದರು, "ಪ್ರದೀಪ, ನನ್ನ ಆಫೀಸಿನಲ್ಲಿ ಸಹೋದ್ಯೋಗಿ ನನಗೆ ಇವತ್ತು ಅವಮಾನ ಮಾಡಿದ. ನಾಳೆ ಅವನೊಂದಿಗೆ ನಾನು ಹೇಗೆ ವರ್ತಿಸಬೇಕು ಅನ್ನೋದು ನನಗೆ ಗೊತ್ತಾಗ್ತಾ ಇಲ್ಲ. ಅದಕ್ಕಾಗಿ ನನಗೆ ಸರಿಯಾದ ದಾರಿ ತೋರಿಸಬೇಕೆಂದು ನನ್ನ ಹೃದಯವನ್ನು ಬೇಡಿಕೊಳ್ತಾ ಇದ್ದೇನೆ. ಅನಂತರ ನಿದ್ದೆ ಮಾಡ್ತೇನೆ. ಬೆಳಗ್ಗೆ ಎದ್ದಾಗ ನಾನು ಏನು ಮಾಡಬೇಕೆಂದು ನನಗೆ ನನ್ನ ಹೃದಯ ಹೇಳುತ್ತದೆ.”
“ಹೀಗೆ ಆದಾಗ ನೀನು ಏನು ಮಾಡಬೇಕೆಂದು ನಿನ್ನ ಹೃದಯಕ್ಕೆ ಅದು ಹೇಗೆ ಗೊತ್ತಾಗುತ್ತದೆ?” ಎಂದು ಕುತೂಹಲದಿಂದ ಪ್ರಶ್ನಿಸಿದ ಪ್ರದೀಪ. ಅವನ ತಂದೆ ನಿಧಾನವಾಗಿ ಉತ್ತರಿಸಿದರು: “ನೋಡು ಪ್ರದೀಪ. ಹೃದಯಕ್ಕೆ ಎಲ್ಲವೂ ಗೊತ್ತಿರುತ್ತದೆ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ನಮಗೆ ತೋಚದಿದ್ದಾಗ, ರಾತ್ರಿ ಮಲಗುವ ಮುನ್ನ ನಮ್ಮ ಹೃದಯಕ್ಕೆ ಸಕಾರಾತ್ಮಕ ಸಂದೇಶವೊಂದನ್ನು ಕಳಿಸಿದರೆ ಸಾಕು. ಮರುದಿನ ಬೆಳಗ್ಗೆ ಎದ್ದಾಗ, ನಿನ್ನ ಪ್ರಶ್ನೆಗೆ ಅದು ಉತ್ತರ ಕೊಟ್ಟೇ ಕೊಡುತ್ತದೆ. ನೀನು ನಂಬಿಕೆಯಿಂದ ಹೀಗೆ ಮಾಡಿದರೆ ಸಾಕು.” ತಂದೆಯ ಮಾತನ್ನು ಗಮನವಿಟ್ಟು ಕೇಳಿದ ಪ್ರದೀಪ, ತನ್ನ ಜೀವಮಾನವಿಡೀ ಅದನ್ನು ಶ್ರದ್ಧೆಯಿಂದ ಪಾಲಿಸಿದ.
ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “ನನಗೆ ಬಹಳ ಹಸಿವು ಮತ್ತು ಬಾಯಾರಿಕೆ ಆಗಿದೆ, ಸಹಾಯ ಮಾಡು." ರೈತ ಉಳುಮೆಯನ್ನು ನಿಲ್ಲಿಸಿ ಹೇಳಿದ, “ಮಹಾರಾಜಾ, ಇಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ. ನಾನು ಮನೆಗೆ ಹೋಗಿ ನಿಮಗಾಗಿ ಆಹಾರ ಮತ್ತು ನೀರು ತರುತ್ತೇನೆ.”
ರೈತ ಮನೆಗೆ ಹೋದಾಗ, ರಾಜ ಯೋಚಿಸಿದ: ನನ್ನಿಂದಾಗಿ ಅವನ ದುಡಿಮೆಗೆ ಅಡಚಣೆ ಆಯಿತು. ಅವನಿಗೆ ಸ್ವಲ್ಪ ಸಹಾಯ ಮಾಡತಕ್ಕದ್ದು. ಹೀಗೆ ಯೋಚಿಸಿದ ರಾಜ, ಹೊಲದ ಉಳುಮೆ ಮುಂದುವರಿಸಿದ. ಆತ ಹೊಲದ ಮೂಲೆಯಲ್ಲಿ ಉಳುತ್ತಿದ್ದಾಗ ನೇಗಿಲಿಗೆ ಏನೋ ತಗಲಿತು. ಅದೇನೆಂದು ನೋಡಿದಾಗ ಪಾತ್ರೆಯೊಂದು ಕಾಣಿಸಿತು. ಅದರ ಮುಚ್ಚಳ ತೆಗೆದಾಗ ಪಾತ್ರೆಯ ತುಂಬ ಚಿನ್ನದ ನಾಣ್ಯಗಳಿದ್ದವು!
ಅಷ್ಟರಲ್ಲಿ ರೈತ ಆಹಾರ ಮತ್ತು ನೀರು ತಗೊಂಡು ಹೊಲಕ್ಕೆ ಮರಳಿದ. ರಾಜ ಅಲ್ಲೇ ಆಹಾರ ತಿಂದು, ನೀರು ಕುಡಿದ. ಅನಂತರ, ರೈತನನ್ನು ಹೊಲದ ಮೂಲೆಗೆ ಕರೆದೊಯ್ದು ಚಿನ್ನದ ನಾಣ್ಯಗಳ ಪಾತ್ರೆಯನ್ನು ತೋರಿಸಿ, ನಡೆದದ್ದನ್ನು ತಿಳಿಸಿದ. ತಕ್ಷಣವೇ ರೈತ ಹೇಳಿದ, “ಮಹಾರಾಜಾ, ಅದೆಲ್ಲವೂ ನಿಮಗೆ ಸೇರಿದ್ದು.” ರೈತನ ದೊಡ್ಡ ಗುಣ ಕಂಡು ಮಹಾರಾಜನಿಗೆ ಮನಸ್ಸು ತುಂಬಿ ಬಂತು. ಕೊನೆಗೆ ಆ ಪಾತ್ರೆಯಲ್ಲಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧ ಭಾಗವನ್ನು ರೈತನಿಗೆ ರಾಜ ಬಹುಮಾನವಾಗಿತ್ತ.
ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ ಯುವರಾಜನನ್ನು ನನ್ನ ಬಳಿ ಕಳಿಸಿ ಕೊಡಿ” ಎಂದ ಸಲಹೆಗಾರ.
ಅಂತೆಯೇ ಮರುದಿನ ಯುವರಾಜ ಆ ಸಲಹೆಗಾರನ ಬಳಿ ಬಂದ. ಇಲ್ಲೇ ಸುತ್ತಾಡಿ ಬರೋಣ ಎನ್ನುತ್ತಾ ಯುವರಾಜನನ್ನು ಸಲಹೆಗಾರ ಕರೆದೊಯ್ದ. ಆತ ಒಂದು ಮರದ ಬಳಿ ನಿಂತು. “ಈ ಮರದ ಎಲೆಯೊಂದನ್ನು ತಿಂದು ನೋಡು. ರುಚಿ ಹೇಗಿದೆ ಹೇಳು” ಎಂದು ಯುವರಾಜನಿಗೆ ಹೇಳಿದ. ಯುವರಾಜ ಆ ಮರದ ಎಲೆಯೊಂದನ್ನು ತಿಂದು ಮುಖ ಕಿವಿಚಿಕೊಂಡ. “ಇದು ಭಾರಿ ಕಹಿ. ಇದು ವಿಷದ ಮರ ಆಗಿರಲೂ ಬಹುದು. ಇದನ್ನು ತಕ್ಷಣವೇ ಬೇರು ಸಹಿತ ಕಿತ್ತು ಹಾಕಬೇಕು. ಇಲ್ಲವಾದರೆ ಇದು ಬೆಳೆದು ದೊಡ್ಡದಾಗಿ ಹಲವರಿಗೆ ತೊಂದರೆಯಾದೀತು” ಎಂದ ಯುವರಾಜ.
ಆಗ ಸಲಹೆಗಾರ ಯುವರಾಜನಿಗೆ ತಿಳಿಯ ಹೇಳಿದ, "ಹೌದು ಯುವರಾಜಾ, ನೀನು ಹೇಳಿದ್ದು ಸರಿ. ಹಾಗೆಯೇ ನಿನ್ನ ಕೋಪ ಮತ್ತು ಉದ್ಧಟತನ ಮುಂದುವರಿದರೆ, ನಿನ್ನಿಂದ ಹಲವರಿಗೆ ತೊಂದರೆಯಾದೀತು. ಆಗ ಜನರು ನಿನ್ನನ್ನು ರಾಜನಾಗಿ ಸ್ವೀಕರಿಸುವುದಿಲ್ಲ.” ಈಗ ಯುವರಾಜನಿಗೆ ಸಲಹೆಗಾರನ ನೀತಿ ಪಾಠ ಅರ್ಥವಾಯಿತು. ಆತ ಕೋಪ ಮಾಡಿಕೊಳ್ಳದಿರಲು ನಿರ್ಧರಿಸಿದ. ಮುಂದೆ ರಾಜನಾಗಿ, ಎಲ್ಲರ ಪ್ರೀತಿಪಾತ್ರನಾದ.
ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ ಜೋರಾಗಿ ನಕ್ಕರು. ಆದರೆ ಅವರಲ್ಲಿ ಒಬ್ಬಳಾದ ಸುಗುಣ ನಗಲಿಲ್ಲ. ಅವಳು ತಕ್ಷಣವೇ ಆ ಕುರುಡನ ಬಳಿ ಓಡಿ ಹೋಗಿ ಅವನು ನೆಲದಿಂದ ಎದ್ದೇಳಲು ಸಹಾಯ ಮಾಡಿದಳು. ಅಲ್ಲೇ ಇದ್ದ ಐಸ್‌ಕ್ರೀಮ್ ಅಂಗಡಿಯಾತನೂ ಓಡಿ ಬಂದು ಕುರುಡನಿಗೆ ಸಹಾಯ ಮಾಡಿದ. ಆ ಕುರುಡ ಅಲ್ಲಿಂದ ಹೊರಡುವ ಮುಂಚೆ ಅವರಿಬ್ಬರಿಗೂ ಕೃತಜ್ನತೆ ಸಲ್ಲಿಸಿ, ಹರಸಿದ.
ಐಸ್‌ಕ್ರೀಮ್ ಅಂಗಡಿಯಾತ ಸುಗುಣಳನ್ನು ಕರೆದು ಹೇಳಿದ, "ಬಾ, ನಿನಗೆ ಇಷ್ಟವಾದ ಐಸ್‌ಕ್ರೀಮ್ ತಿನ್ನು. ಯಾಕೆಂದರೆ ನೀನು ಇವತ್ತು ಒಂದು ಒಳ್ಳೆಯ ಕೆಲಸ ಮಾಡಿದ್ದಿ.” ಸುಗುಣ ಅಂಗಡಿಯೊಳಗೆ ಹೋಗಿ, ಖುಷಿಯಿಂದ ಐಸ್‌ಕ್ರೀಮ್ ತಿಂದಳು. ಅಷ್ಟರಲ್ಲಿ ಜೋರಾಗಿ ಮಳೆ ಸುರಿಯಿತು. ಆ ಮಕ್ಕಳೆಲ್ಲರೂ ಮಳೆಗೆ ನೆನೆದು ಒದ್ದೆಯಾದರು. ಮಳೆ ನಿಂತಾಗ ಐಸ್‌ಕ್ರೀಮ್ ಅಂಗಡಿಯಾತ ಅವರ ಬಳಿ ಕೇಳಿದ, “ನೀವೆಲ್ಲರೂ ಮಳೆಗೆ ನೆನೆದಿದ್ದೀರಿ. ಒದ್ದೆಯಾದಾಗ ನಿಮಗೆ ಏನನಿಸಿತು? ಸುಗುಣಳನ್ನು ನೋಡಿ ಕಲಿಯಿರಿ. ಇನ್ನೊಬ್ಬರು ಬಿದ್ದಾಗ ನಗುವುದು ಸುಲಭ. ಆದರೆ ಅವರು ಎದ್ದೇಳಲು ಸಹಾಯ ಮಾಡುವುದು ಕಷ್ಟ.”
ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ.
ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು ಕೊಟ್ಟ. ಅವುಗಳ ಆಧಾರದಿಂದ ಅವರ ಜಮೀನಿನಲ್ಲಿರುವ ನಿಧಿಯೊಂದನ್ನು ಹುಡುಕಬೇಕೆಂದ. ಆದರೆ ಅವನೊಂದು ಷರತ್ತನ್ನು ವಿಧಿಸಿದ: ಅವರು ಒಬ್ಬೊಬ್ಬರಾಗಿ ನಿಧಿಯನ್ನು ಹುಡುಕಬೇಕು. ಇಡೀ ದಿನ ಒಬ್ಬೊಬ್ಬರಾಗಿ ಹುಡುಕಿದರೂ ಅವರಲ್ಲಿ ಯಾರಿಗೂ ನಿಧಿ ಸಿಗಲಿಲ್ಲ.
ಎರಡನೇ ದಿನ ಅವರ ತಂದೆ ಷರತ್ತನ್ನು ಬದಲಾಯಿಸಿದ. ಅವರು ಜೊತೆಯಾಗಿ ನಿಧಿಯನ್ನು ಹುಡುಕಬೇಕೆಂದ. ಅವರಲ್ಲೊಬ್ಬ ಬಲಶಾಲಿಯಾಗಿದ್ದ. ಇನ್ನೊಬ್ಬ ಚುರುಕಿನ ಬಾಲಕನಾಗಿದ್ದ. ಅವರ ಸೋದರಿ ಜಾಣೆಯಾಗಿದ್ದಳು. ಆ ದಿನ ಅವರು ಮೂವರೂ ತಮ್ಮತಮ್ಮ ವಿಶೇಷ ಗುಣಗಳನ್ನು ಬಳಸಿಕೊಂಡು, ಪರಸ್ಪರರಿಗೆ ಸಹಕರಿಸುತ್ತಾ ನಿಧಿಯನ್ನು ಹುಡುಕಿದರು. ಸಂಜೆಯ ಹೊತ್ತಿಗೆ ಅವರಿಗೆ ನಿಧಿ ಸಿಕ್ಕಿತು! ಆಗ ಅವರ ತಂದೆ ಅವರು ಮೂವರಿಗೂ ತಿಳಿಯ ಹೇಳಿದ, "ನಿಮಗೆ ಬೇರೊಂದು ಅಮೂಲ್ಯ ನಿಧಿ ಸಿಕ್ಕಿದೆ. ಅದೇನೆಂದರೆ, ಪರಸ್ಪರರಿಗೆ ಸಹಾಯ ಮಾಡಿದಾಗ ನೀವು ಯಾವುದೇ ಕೆಲಸ ಸಾಧಿಸಬಲ್ಲಿರಿ ಎಂಬ ತಿಳಿವಳಿಕೆ.” ಈಗ ಮೂವರೂ ಮಕ್ಕಳಿಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಚೆನ್ನಾಗಿ ಅರ್ಥವಾಯಿತು.
ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ. ಆದರೆ ನಿನ್ನ ಬಳಿ ಹೆಚ್ಚು ಹಣವಿಲ್ಲ. ಒಂದು ಮನೆ ಹೊರಗಿನಿಂದ ವೈಭವದ ಅಲಂಕಾರ ಹೊಂದಿದೆ, ಆದರೆ ಒಳಗೆ ಸೌಕರ್ಯಗಳು ಚೆನ್ನಾಗಿಲ್ಲ. ಇನ್ನೊಂದು ಮನೆ ನೋಡಲು ಸಾಧಾರಣವಾಗಿದೆ, ಆದರೆ ಒಳಗೆ ಎಲ್ಲ ಸೌಕರ್ಯಗಳೂ ಚೆನ್ನಾಗಿವೆ. ಇವೆರಡರಲ್ಲಿ ನೀನು ಯಾವ ಮನೆಯನ್ನು ಆಯ್ಕೆ ಮಾಡುತ್ತಿ?”
ಶಿಷ್ಯ ಉತ್ತರಿಸಿದ, "ಗುರುಗಳೇ, ನಾನು ನೋಡಲು ಸಾಧಾರಣವಾದ, ಆದರೆ ಒಳಗೆ ಎಲ್ಲ ಸೌಕರ್ಯಗಳಿರುವ ಮನೆಯನ್ನು ಆಯ್ಕೆ ಮಾಡುತ್ತೇನೆ. ಗುರುಗಳು ಪುನಃ ಶಿಷ್ಯನನ್ನು ಪ್ರಶ್ನಿಸಿದರು: “ಒಬ್ಬ ಅಹಂಕಾರದ ವ್ಯಕ್ತಿ ಇವೆರಡರಲ್ಲಿ ಯಾವ ಮನೆಯನ್ನು ಆಯ್ಕೆ ಮಾಡುತ್ತಾನೆ?" ಶಿಷ್ಯ ಉತ್ತರಿಸಿದ, "ಅವನು ಖಂಡಿತವಾಗಿ ಹೊರಗಿನಿಂದ ವೈಭವದ ಅಲಂಕಾರವಿರುವ ಮನೆಯನ್ನು ಆಯ್ಕೆ ಮಾಡುತ್ತಾನೆ."
ಈಗ ಗುರುಗಳು ಹೇಳುತ್ತಾರೆ, "ಅಂದರೆ ನೀವಿಬ್ಬರೂ ಮನೆಯ ಹೊರಗಿನ ಅಲಂಕಾರ ಅಥವಾ ಒಳಗಿನ ಸೌಕರ್ಯವನ್ನು ಕಳೆದುಕೊಳ್ಳುತ್ತೀರಿ.” ಶಿಷ್ಯ ಒಂದು ಕ್ಷಣ ಯೋಚಿಸಿ, ಪುನಃ ಪ್ರಶ್ನಿಸಿದ, “ಹಾಗಾದರೆ ಹೊರಗಿನ ಸೌಂದರ್ಯ ಮತ್ತು ಒಳಗಿನ ಸೌಂದರ್ಯ ಎರಡೂ ಮುಖ್ಯ ಅನ್ನುತ್ತೀರಾ?” ಗುರುಗಳು ಕೊನೆಯದಾಗಿ ಹೇಳಿದರು, “ಅವು ಎರಡೂ ಒಂದಕ್ಕೊಂದು ಪೂರಕ. ಒಂದು ಮಾತ್ರ ಇದ್ದರೆ, ವ್ಯಕ್ತಿತ್ವ ಪರಿಪೂರ್ಣವಾಗುವುದಿಲ್ಲ.”
ಒಬ್ಬ ರಾಜನಿಗೆ ಸಂಗೀತವೆಂದರೆ ಪಂಚಪ್ರಾಣ. ಅವನು ಅತ್ಯುತ್ತಮ ಸಂಗೀತವಾದ್ಯಕ್ಕಾಗಿ ಜಗತ್ತಿನಲ್ಲೆಲ್ಲ ಹುಡುಕಾಡುತ್ತಿದ್ದ. ಒಮ್ಮೆ ಒಬ್ಬ ಮ್ಯಾಜಿಕ್ ಮಾಡುವಾತ ರಾಜನಿಗೊಂದು ಹಾರ್ಪ್ ಎಂಬ ಸಂಗೀತವಾದ್ಯ ಕೊಟ್ಟ. ರಾಜ ಅದನ್ನು ಸಂತೋಷದಿಂದ ಅರಮನೆಗೆ ತಂದ. ಆದರೆ ರಾಜ ಹಾರ್ಪನ್ನು ನುಡಿಸಲು ಪ್ರಯತ್ನಿಸಿದಾಗ ಅದರಿಂದ ಸ್ವರಗಳು ಹೊರಡಲೇ ಇಲ್ಲ. ರಾಜನಿಗೆ ಬೇಸರವಾಗಿ ಅದನ್ನು ಅರಮನೆಯ ಉದ್ಯಾನದ ಹೊರಕ್ಕೆ ಎಸೆದ.
ಅಲ್ಲಿ ಹಾದು ಹೋಗುತ್ತಿದ್ದ ಬಡ ಹುಡುಗಿಯೊಬ್ಬಳಿಗೆ ಆ ಹಾರ್ಪನ್ನು ಕಂಡು ಅಚ್ಚರಿಯಾಯಿತು. ಅವಳಿಗೆ ಅದನ್ನು ನುಡಿಸುವುದು ಹೇಗೆಂದು ತಿಳಿದಿರಲಿಲ್ಲ. ಆದರೂ ಅವಳು ಅದನ್ನು ಮನೆಗೆ ಒಯ್ದಳು. ಅದರಿಂದ ಸಂಗೀತ ನುಡಿಸಲು ಮತ್ತೆಮತ್ತೆ ಪ್ರಯತ್ನಿಸಿದಳು. ಕೊನೆಗೊಮ್ಮೆ ಆ ಹಾರ್ಪಿನಿಂದ ಸುಮಧುರ ಸಂಗೀತ ಹೊರಹೊಮ್ಮಿತು. ಅದೊಂದು ಮ್ಯಾಜಿಕ್ ಹಾರ್ಪ್! ಅದನ್ನು ನಂಬಿ, ಶ್ರದ್ಧೆಯಿಂದ ಪ್ರಯತ್ನಿಸಿದವರ ಕೈಯಲ್ಲಿ ಅದು ಸುಶ್ರಾವ್ಯ ಸಂಗೀತ ಹೊಮ್ಮಿಸುತ್ತದೆ. ಅವಳು ಪ್ರತಿ ದಿನ ಆ ಹಾರ್ಪಿನಿಂದ ಗಂಟೆಗಟ್ಟಲೆ ಅದ್ಭುತ ಸಂಗೀತ ನುಡಿಸಲು ಶುರು ಮಾಡಿದಳು. ಕೊನೆಗೆ ಈ ಸುದ್ದಿ ರಾಜನ ವರೆಗೆ ತಲಪಿತು. ಆತ ಆ ಹುಡುಗಿಯನ್ನು ಅರಮನೆಗೆ ಕರೆಸಿದ; ಅವಳು ಹಾರ್ಪಿನಿಂದ ಮನಮೋಹಕ ಸಂಗೀತ ನುಡಿಸುವುದನ್ನು ಕೇಳಿ ಖುಷಿ ಪಟ್ಟ. ಆ ಹುಡುಗಿಗೂ ಅವಳ ಕುಟುಂಬಕ್ಕೂ ಬಹುಮಾನಗಳನ್ನಿತ್ತು, ಅವಳನ್ನು ರಾಜಸಭೆಯ ಸಂಗೀತಗಾರಳನ್ನಾಗಿ ನೇಮಿಸಿದ.
ಗೋಪಾಲಯ್ಯ ಒಬ್ಬ ರಾಜಕಾರಣಿ. ಚುನಾವಣೆಗೆ ಸ್ಪರ್ಧಿಸಿದ್ದ ಆತ ತನ್ನ ಉಮೇದುವಾರಿಕೆಯ ಪ್ರಚಾರಕ್ಕಾಗಿ ಹಲವಾರು ಜನರನ್ನು ಭೇಟಿ ಮಾಡಬೇಕಾಗಿತ್ತು. ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಗೋಪಾಲಯ್ಯನನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದ. ಗೋಪಾಲಯ್ಯನ ಬೆಂಬಲಿಗನೊಬ್ಬ ಇದರಿಂದ ವಿಚಲಿತನಾಗಿ ಕೇಳಿದ, “ಇದನ್ನೆಲ್ಲ ನೀನು ಯಾಕೆ ಸಹಿಸಿಕೊಳ್ಳುತ್ತಿ?” ಗೋಪಾಲಯ್ಯ ಉತ್ತರಿಸಿದ, "ಹೋಗಲಿ ಬಿಡು.” ಆದರೆ ಬೆಂಬಲಿಗನಿಗೆ ಸಮಾಧಾನವಾಗಲಿಲ್ಲ. ಅವನು ಗೋಪಾಲಯ್ಯನಿಗೆ ಒತ್ತಾಯಿಸಿದ, “ನೀನು ಆ ವ್ಯಕ್ತಿಗೆ ಸಾರ್ವಜನಿಕರ ಎದುರಿನಲ್ಲೇ ಉತ್ತರ ಕೊಡಬೇಕು.” ಗೋಪಾಲಯ್ಯ ಮುಗುಳ್ನಕ್ಕು, ಸಂಜೆ ತನ್ನ ಕಚೇರಿಯಲ್ಲಿ ತನ್ನನ್ನು ಭೇಟಿಯಾಗಬೇಕೆಂದು ಬೆಂಬಲಿಗನನ್ನು ವಿನಂತಿಸಿದ.
ಆ ದಿನ ಸಂಜೆ ಬೆಂಬಲಿಗ ಕಚೇರಿಗೆ ಬಂದಾಗ, ಆತನಿಗೆ ಗೊಪಾಲಯ್ಯ ಹರಿದ ಷರ್ಟು ಒಂದನ್ನು ಕೊಟ್ಟು ಹೇಳೀದ, "ನೀನೀಗ ಇದನ್ನು ಹಾಕಿಕೋ. ಇದರ ಅಳತೆ ನಿನಗೆ ಸರಿಯಾಗಿದೆ.” ಆಗ ಬೆಂಬಲಿಗ ಉತ್ತರಿಸಿದ, “ಇದೇನು ಮಾತಾಡುತ್ತೀರಿ? ನಾನು ಒಳ್ಳೆಯ ಉಡುಪು ಧರಿಸಿದ್ದೇನೆ; ನನಗೆ ಈ ಹರಿದ ಷರ್ಟು ಬೇಡವೇ ಬೇಡ." ಗೋಪಾಲಯ್ಯ ಉತ್ತರಿಸಿದ, "ಸರಿ, ಸರಿ. ಹಾಗೆಯೇ ನನಗೂ ಆ ವ್ಯಕ್ತಿಯ ನಿಂದನೆಯ ಮಾತುಗಳು ಬೇಡ; ನಾನು ಅವನ್ನು ತಿರಸ್ಕರಿಸುತ್ತೇನೆ.”
ಶೂರ ಶರ್ಮನ ತಂದೆ ಕುದುರೆ ತರಬೇತಿದಾರ. ಇದರಿಂದಾಗಿ ಆತ ಒಂದು ಕುದುರೆಗಾವಲಿನಿಂದ ಇನ್ನೊಂದಕ್ಕೆ ಹೋಗುತ್ತಾ ಅಲ್ಲಿನ ಕುದುರೆಗಳಿಗೆ ತರಬೇತಿ ನೀಡುತ್ತಿದ್ದ. ಅದೊಂದು ದಿನ ಶೂರ ಶರ್ಮನ ಟೀಚರ್ ಎಲ್ಲ ವಿದ್ಯಾರ್ಥಿಗಳಿಗೂ ಕಾಗದದ ಹಾಳೆ ನೀಡಿ, ಅವರು ದೊಡ್ಡವರಾದಾಗ ಏನಾಗಲು ಬಯಸುತ್ತಾರೆಂದು ಬರೆದು ತರಲು ಹೇಳಿದರು. ಶೂರ ಶರ್ಮ ಹೀಗೆ ಬರೆದ: "ನಾನು ದೊಡ್ಡವನಾದಾಗ ಒಂದು ದೊಡ್ಡ ಕುದುರೆಗಾವಲಿನ ಮಾಲೀಕನಾಗಲು ಬಯಸುತ್ತೇನೆ.” ತನ್ನ ಕಾಗದದ ಹಾಳೆಯಲ್ಲಿ ಅವನು ಕುದುರೆಗಾವಲಿನ ಮತ್ತು ಒಂದು ಮನೆಯ ಚಿತ್ರವನ್ನೂ ಬರೆದಿದ್ದ.
ಎರಡು ದಿನಗಳ ನಂತರ ಎಲ್ಲ ವಿದ್ಯಾರ್ಥಿಗಳಿಗೂ ಅವರ ಕಾಗದದ ಹಾಳೆ ವಾಪಾಸು ನೀಡಿದರು ಟೀಚರ್. ಶೂರ ಶರ್ಮನ ಕಾಗದದಲ್ಲಿ, “ಎಫ್" ಗ್ರೇಡ್ ಎಂದು ಬರೆದಿದ್ದರು ಟೀಚರ್. ಆಕೆ ಶೂರ ಶರ್ಮನಿಗೆ ಹೇಳಿದರು, “ನಿನ್ನ ಕನಸು ಪ್ರಾಯೋಗಿಕವಲ್ಲ. ನೀನು ಆ ಗುರಿಗಳನ್ನು ಸಾಧಿಸುವ ಸಾಧ್ಯತೆ ಇಲ್ಲ. ನಿನ್ನ ಕಾಗದದ ಹಾಳೆಯಲ್ಲಿ ಹೊಸ ಗುರಿಗಳನ್ನು ಬರೆದು ತಾ."
ಶೂರ ಶರ್ಮ ಇದನ್ನು ತನ್ನ ತಂದೆಗೆ ತಿಳಿಸಿದ. ಆಗ ತಂದೆ ಅವನಿಗಿತ್ತ ಸಲಹೆ: “ಮಗನೇ, ಯಾವಾಗಲೂ ನಿನ್ನ ಹೃದಯ ಏನು ಹೇಳುತ್ತದೆಯೋ ಅದನ್ನೇ ಅನುಸರಿಸು; ಬೇರೆ ಯಾರೋ ನಿನ್ನ ಕನಸುಗಳನ್ನು ಕಿತ್ತೆಸೆಯಲು ಯಾವತ್ತೂ ಬಿಡಬೇಡ.” ಒಂದು ವಾರದ ನಂತರ, ಶೂರ ಶರ್ಮ ಅದೇ ಗುರಿಗಳನ್ನು ಕಾಗದದ ಹಾಳೆಯಲ್ಲಿ ಪುನಃ ಬರೆದು ಟೀಚರಿಗೆ ಕೊಟ್ಟ. ಅವನು ಟೀಚರಿಗೆ ಹೇಳಿದ, “ನೀವು ನನಗೆ ಪುನಃ ಎಫ್ ಗ್ರೇಡ್ ಕೊಡಬಹುದು; ಆದರೆ ನಾನು ನನ್ನ ಕನಸಿನ ಬೆನ್ನತ್ತುತ್ತೇನೆ.”
ಇದಾಗಿ ಇಪ್ಪತ್ತು ವರುಷಗಳು ದಾಟಿವೆ. ಈಗ ಶೂರ ಶರ್ಮ 4,000 ಚದರಡಿಯ ಮನೆ ಮತ್ತು 200 ಎಕರೆ ಕುದುರೆಗಾವಲಿನ ಮಾಲೀಕ.