ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ.
ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು ಕೊಟ್ಟ. ಅವುಗಳ ಆಧಾರದಿಂದ ಅವರ ಜಮೀನಿನಲ್ಲಿರುವ ನಿಧಿಯೊಂದನ್ನು ಹುಡುಕಬೇಕೆಂದ. ಆದರೆ ಅವನೊಂದು ಷರತ್ತನ್ನು ವಿಧಿಸಿದ: ಅವರು ಒಬ್ಬೊಬ್ಬರಾಗಿ ನಿಧಿಯನ್ನು ಹುಡುಕಬೇಕು. ಇಡೀ ದಿನ ಒಬ್ಬೊಬ್ಬರಾಗಿ ಹುಡುಕಿದರೂ ಅವರಲ್ಲಿ ಯಾರಿಗೂ ನಿಧಿ ಸಿಗಲಿಲ್ಲ.
ಎರಡನೇ ದಿನ ಅವರ ತಂದೆ ಷರತ್ತನ್ನು ಬದಲಾಯಿಸಿದ. ಅವರು ಜೊತೆಯಾಗಿ ನಿಧಿಯನ್ನು ಹುಡುಕಬೇಕೆಂದ. ಅವರಲ್ಲೊಬ್ಬ ಬಲಶಾಲಿಯಾಗಿದ್ದ. ಇನ್ನೊಬ್ಬ ಚುರುಕಿನ ಬಾಲಕನಾಗಿದ್ದ. ಅವರ ಸೋದರಿ ಜಾಣೆಯಾಗಿದ್ದಳು. ಆ ದಿನ ಅವರು ಮೂವರೂ ತಮ್ಮತಮ್ಮ ವಿಶೇಷ ಗುಣಗಳನ್ನು ಬಳಸಿಕೊಂಡು, ಪರಸ್ಪರರಿಗೆ ಸಹಕರಿಸುತ್ತಾ ನಿಧಿಯನ್ನು ಹುಡುಕಿದರು. ಸಂಜೆಯ ಹೊತ್ತಿಗೆ ಅವರಿಗೆ ನಿಧಿ ಸಿಕ್ಕಿತು! ಆಗ ಅವರ ತಂದೆ ಅವರು ಮೂವರಿಗೂ ತಿಳಿಯ ಹೇಳಿದ, "ನಿಮಗೆ ಬೇರೊಂದು ಅಮೂಲ್ಯ ನಿಧಿ ಸಿಕ್ಕಿದೆ. ಅದೇನೆಂದರೆ, ಪರಸ್ಪರರಿಗೆ ಸಹಾಯ ಮಾಡಿದಾಗ ನೀವು ಯಾವುದೇ ಕೆಲಸ ಸಾಧಿಸಬಲ್ಲಿರಿ ಎಂಬ ತಿಳಿವಳಿಕೆ.” ಈಗ ಮೂವರೂ ಮಕ್ಕಳಿಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಚೆನ್ನಾಗಿ ಅರ್ಥವಾಯಿತು.