HRM

ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗನನ್ನು ಕರೆಯಿತು. ತನ್ನ ಗರಿಯ ಕಣ್ಣನ್ನು ಹುಡುಕಿ ಕೊಡಬೇಕೆಂದಿತು.

ನರಿ ಮತ್ತು ಮಂಗ - ಇಬ್ಬರೂ ಬುದ್ಧಿವಂತರೇ. ಕಾಡಿನಲ್ಲಿ ನವಿಲಿನ ಕಣ್ಣನ್ನು ಹುಡುಕಲಿಕ್ಕಾಗಿ ನರಿ ಹಲವೆಡೆ ತಿರುಗಾಡಿತು.. ಆಗ ಅದು ಒಂದು ಹಾವನ್ನು ಕಂಡಿತು. ಆದರೆ ನವಿಲಿನ ಕಣ್ಣಿನ ಬಗ್ಗೆ ಹಾವನ್ನು ನರಿ ವಿಚಾರಿಸಲಿಲ್ಲ. ಯಾಕೆಂದರೆ ತಾನು ಹಾವಿಗಿಂತ ಬುದ್ಧಿವಂತ ಎಂಬುದು ನರಿಯ ಭಾವನೆ. ಕೊನೆಗೂ ನರಿಗೆ ನವಿಲಿನ ಬಿದ್ದುಹೋದ ಕಣ್ಣನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಮಂಗ ನರಿಯ ಹಾಗಲ್ಲ; ಮಂಗನ ಮಾತು ಜಾಸ್ತಿ. ಅದೂ ಕಾಡಿನಲ್ಲಿ ಹಲವೆಡೆ ಸುತ್ತಾಡಿ ನವಿಲಿನ ಕಣ್ಣನ್ನು ಹುಡುಕಿತು. ಮಂಗನೂ ಅದೇ ಹಾವನ್ನು ನೋಡಿತು. ಅದು ಕೂಡಲೇ ಹಾವಿಗೆ ವಂದಿಸಿತು ಮತ್ತು ನವಿಲಿನ ಬಿದ್ದುಹೋದ ಕಣ್ಣಿನ ಬಗ್ಗೆ ವಿಚಾರಿಸಿತು. ನವಿಲು ಕುಣಿಯುತ್ತಿದ್ದಾಗ ಅದರ ಗರಿಯಿಂದ “ಕಣ್ಣು" ನೆಲಕ್ಕೆ ಬಿದ್ದದ್ದನ್ನು ಹಾವು ಕಂಡಿತ್ತು. ಆ ಜಾಗವನ್ನು ಮಂಗನಿಗೆ ಹಾವು ತೋರಿಸಿತು. ಅಲ್ಲಿ ಹುಡುಕಿದಾಗ ನವಿಲಿನ ಗರಿಯ ಕಣ್ಣು ಸಿಕ್ಕಿತು! ಅದನ್ನು ನವಿಲಿಗೆ ಮಂಗ ತಲಪಿಸಿತು. ಇದಕ್ಕಾಗಿ ಮಂಗನಿಗೆ ದೊಡ್ಡ ಬಹುಮಾನವನ್ನು ನವಿಲು ಕೊಟ್ಟಿತು. ಈಗ ನರಿಗೆ ಅರ್ಥವಾಯಿತು: ಬೇರೆಯವರ ಸಹಾಯ ಕೇಳುವುದರಿಂದ ತನ್ನ ಬುದ್ಧಿವಂತಿಕೆ ಕಡಿಮೆಯಾಗೋದಿಲ್ಲ ಎಂದು.

ಗೀಜಗನ ಹಕ್ಕಿಗಳು ತಮ್ಮ ಗೂಡಿನಿಂದ ಹೊರಕ್ಕೆ ಹೋಗುವಾಗ ತಮ್ಮ ಮರಿಗಳನ್ನು ಎಚ್ಚರಿಸಿದವು - ಮರಿಗಳೆಲ್ಲ ಜೊತೆಯಾಗಿ ಇರಬೇಕು ಮತ್ತು ಎಲ್ಲೆಲ್ಲೋ ಸುತ್ತಾಡಲು ಹೋಗಬಾರದೆಂದು. ಆದರೆ ಅತ್ಯಂತ ಕಿರಿಯ ಮರಿಗೆ ತುಂಟಾಟ ಜಾಸ್ತಿ. ಅದು ಹಾರಾಡುವಾಗ ಅತ್ತಿತ್ತ ನೋಡುತ್ತಿತ್ತು; ಹೂಗಳ ಸುತ್ತ ಸುತ್ತಾಡುತ್ತಿತ್ತು ಮತ್ತು ಇತರ ಹಕ್ಕಿಗಳೊಂದಿಗೆ ಹರಟೆ ಹೊಡೆಯುತ್ತಿತ್ತು. ಅಪ್ಪನಂತೆ ಅಮ್ಮ ಗೀಜಗನೂ ದೂರಕ್ಕೆ ಹಾರಿ ಹೋದಾಗ, ಕಿರಿಯ ಮರಿ ಗೀಜಗ ಸುತ್ತಾಟಕ್ಕೆ ಹೊರಟಿತು.

ಒಂದು ತೊರೆ ಕಂಡೊಡನೆ ಕಿರಿಯ ಗೀಜಗ ಮರಿ ಅಲ್ಲಿ ನೀರು ಕುಡಿಯಲಿಕ್ಕಾಗಿ ನೆಲಕ್ಕೆ ಇಳಿಯಿತು. ನಂತರ ಅಲ್ಲಿನ ಒಂದು ಹೂವಿನ ಬಳಿ ಹಾರಾಡುತ್ತಿದ್ದ ಚಿಟ್ಟೆಯ ಜೊತೆ ಹರಟೆ ಹೊಡೆಯಲು ಶುರು ಮಾಡಿತು. ಅಷ್ಟರಲ್ಲಿ ಇತರ ಗೀಜಗ ಮರಿಗಳು ದೂರಕ್ಕೆ ಹಾರಿ ಹೋದವು. ಕಿರಿಯ ಗೀಜಗ ಮರಿಗೆ ತಾನೀಗ ದಿಕ್ಕು ತಪ್ಪಿದ್ದೇನೆಂದು ತಿಳಿಯಿತು. ಅದು ಗಾಬರಿಯಿಂದ ಅತ್ತಿತ್ತ ಹಾರಾಡಿತು; ಅದಕ್ಕೆ ಅಪ್ಪ-ಅಮ್ಮ ಗೀಜಗ ಕಾಣಿಸಲಿಲ್ಲ; ಇತರ ಗೀಜಗನ ಮರಿಗಳೂ ಕಾಣಿಸಲಿಲ್ಲ. ಅದಕ್ಕೆ ಅಳುವೇ ಬಂತು. ಕೊನೆಗೆ ತನ್ನ ಅಪ್ಪ-ಅಮ್ಮನನ್ನು ಜೋರಾಗಿ ಕರೆಯುತ್ತಾ ಅದು ಹಾರತೊಡಗಿತು. ಇದನ್ನು ಕಂಡ ಒಂದು ಗಿಳಿಕುಟುಂಬದ ಗಿಳಿಗಳೂ ಗೀಜಗ ಅಪ್ಪ-ಅಮ್ಮನನ್ನು ಕೂಗಿ ಕರೆಯತೊಡಗಿದವು. ಅಂತೂ, ಗೀಜಗ ಅಪ್ಪ-ಅಮ್ಮನನ್ನು ಗಿಳಿಗಳು ಪತ್ತೆ ಮಾಡಿದವು. ಕಿರಿಯ ಗೀಜಗ ಮರಿ ಅಪ್ಪ-ಅಮ್ಮನನ್ನು ತಬ್ಬಿಕೊಂಡಿತು. ಅವರ ಮಾತು ಕೇಳದಿದ್ದ ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡಿತು. ಅನಂತರ ಗಿಳಿ ಕುಟುಂಬದ ಗಿಳಿಗಳಿಗೆ ಧನ್ಯವಾದ ತಿಳಿಸಿತು.

ಶೌರಿಯನ್ನು ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು. ಅವನಿಗೆ ಗೇಲಿ ಮಾಡುವುದು, ಅವನನ್ನು ಹೀಯಾಳಿಸುವುದು ಅವರ ದಿನನಿತ್ಯದ ಕೆಲಸ. ಒಂದು ದಿನ ತನ್ನ ಅಜ್ಜನಿಗೆ ಶೌರಿ ಇದೆಲ್ಲವನ್ನು ತಿಳಿಸಿದ. ಅವನ ಅಜ್ಜ ಮುಗುಳ್ನಕ್ಕು, ಕೋಣೆಯೊಳಗೆ ಹೋಗಿ, ಹಳೆಯ ಟ್ರಂಕ್ ತೆರೆದರು. ಹುಲಿಯ ಬಾಲದಿಂದ ಮಾಡಿದ ಬೆಲ್ಟನ್ನು ಟ್ರಂಕಿನಿಂದ ತೆಗೆದರು. ಅದನ್ನು ಶೌರಿಗೆ ಕೊಡುತ್ತಾ ಅಜ್ಜ ಹೇಳಿದರು, “ಇದನ್ನು ಹಾಕಿಕೊಂಡು ಶಾಲೆಗೆ ಹೋಗು. ಅವರು ನಿನಗೆ ಗೇಲಿ ಮಾಡಿದಾಗ, ಧೈರ್ಯದಿಂದ ಅವರನ್ನು ಎದುರಿಸು. ನೀನು ಹುಲಿಯಾಗಿ ಪರಿವರ್ತನೆ ಆಗುತ್ತಿ.”

ಮರುದಿನ ಶೌರಿ ಆ ಬೆಲ್ಟ್ ಧರಿಸಿಕೊಂಡು ಶಾಲೆಗೆ ಹೋದ. ಹಿರಿಯ ವಿದ್ಯಾರ್ಥಿಗಳು ಇವನಿಗಾಗಿ ಕಾಯುತ್ತಿದ್ದರು. ಶೌರಿ ದೀರ್ಘವಾಗಿ ಉಸಿರೆಳೆದುಕೊಂಡು ಅವರನ್ನು ನೇರಾನೇರ ಎದುರಿಸಿದ. ಗಟ್ಟಿಯಾದ ಧ್ವನಿಯಲ್ಲಿ ಶೌರಿ ಅವರಿಗೆ ಹೇಳಿದ, “ನೀವು ಇನ್ನು ಯಾವತ್ತಾದರೂ ನನ್ನ ತಂಟೆಗೆ ಬಂದರೆ ಜಾಗ್ರತೆ.” ಇದನ್ನು ಹೇಳುತ್ತಿದ್ದಂತೆ, ಶೌರಿಗೆ ತಾನು ಹುಲಿಯಷ್ಟು ಬಲಿಷ್ಠನಾದಂತೆ ಅನಿಸಿತು. ಆ ಹಿರಿಯ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ನೋಡಿ, ಅಲ್ಲಿಂದ ಕಾಲ್ತೆಗೆದರು. ಶೌರಿ ಗೆಲುವಿನ ಭಾವದಿಂದ ಅವತ್ತು ಸಂಜೆ ಮನೆಗೆ ಬಂದು ಅಜ್ಜನಿಗೆ ನಡೆದದ್ದನ್ನು ತಿಳಿಸಿದ. ಅಜ್ಜ ಪುನಃ ಮುಗುಳ್ನಕ್ಕರು. ಶೌರಿಯ ಧೈರ್ಯವನ್ನು ಕಂಡು ಪುಂಡ ವಿದ್ಯಾರ್ಥಿಗಳು ತೆಪ್ಪಗೆ ತೆರಳಿದರು ವಿನಃ ಅವನು ಧರಿಸಿದ ಬೆಲ್ಟಿನಿಂದಾಗಿ ಅಲ್ಲವೆಂದು ಅವರು ವಿವರಿಸಿದರು. ಶೌರಿ ತಲೆಯಾಡಿಸುತ್ತಾ ಇನ್ನು ಮುಂದೆ ಎಲ್ಲ ಭಯವನ್ನೂ ನಿವಾರಿಸಿಕೊಳ್ಳುವುದಾಗಿ ಅಜ್ಜನಿಗೆ ತಿಳಿಸಿದ.

ಚಿನ್ನು ಭಾರೀ ತುಂಟ ಕೋಳಿಮರಿ. ಅದು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅದರ ತಾಯಿಕೋಳಿ ಆಗಾಗ ಎಚ್ಚರಿಸುತ್ತಿತ್ತು, “ಚಿನ್ನೂ, ನಿನ್ನ ಸೋದರ-ಸೋದರಿಯರ ಜೊತೆಗೇ ಇರಬೇಕು. ಆ ಬಾವಿಯ ಹತ್ತಿರ ಯಾವತ್ತೂ ಹೋಗಬೇಡ.” ಆದರೆ ಚಿನ್ನುಗೆ ಆ ಬಾವಿಯೊಳಗೆ ಏನು ವಿಶೇಷ ಇದೆಯೆಂದು ನೋಡುವ ಕುತೂಹಲ. ಒಂದು ದಿನ ತಾಯಿಕೋಳಿ ದೂರ ಹೋಗಿದ್ದಾಗ, ಚಿನ್ನು ಬಾವಿಯ ದಂಡೆಯ ಮೇಲೆ ಹತ್ತಿ ನಿಂತಿತು. ಆಗ ಅದರ ಸೋದರಿಯರು ಚೀರಿದವು, “ಚಿನ್ನೂ, ಆ ಬಾವಿಯಿಂದ ದೂರ ಇರಬೇಕೆಂದು ಅಮ್ಮ ಹೇಳಿದ್ದಲ್ಲವೇ?”

ಆದರೆ ಚಿನ್ನು ಕೋಳಿಮರಿ ಅವರ ಚೀರುವಿಕೆಗೆ ಬೆಲೆ ಕೊಡಲಿಲ್ಲ. ಅದು ಬಾವಿಯ ನೀರನ್ನು ಬಾಗಿ ನೋಡಿದಾಗ ಅದಕ್ಕೆ ಅಲ್ಲಿ ಇನ್ನೊಂದು ಪುಟ್ಟ ಕೋಳಿಮರಿ ಕಾಣಿಸಿತು. ಅದರ ಜೊತೆ ಆಟವಾಡಬೇಕೆಂದು ಚಿನ್ನುಗೆ ಆಶೆಯಾಯಿತು. ಚಿನ್ನು ಒಂದೇಟಿಗೆ ಬಾವಿಯೊಳಗೆ ಜಿಗಿಯಿತು. ದೊಡ್ಡ ಸದ್ದಿನೊಂದಿಗೆ ಅದು ಬಾವಿಯ ನೀರಿಗೆ ಬಿತ್ತು. ಈಗ ಚಿನ್ನು ಗಾಬರಿಯಿಂದ ಚೀರತೊಡಗಿತು. ಆದರೆ ಅದರ ಸೋದರಸೋದರಿಯರು ಅದಕ್ಕೆ ಸಹಾಯ ಮಾಡುವಂತಿರಲಿಲ್ಲ. ಅಷ್ಟರಲ್ಲಿ, ಈ ಗಲಾಟೆ ಕೇಳಿಸಿಕೊಂಡ ತಾಯಿಕೋಳಿ ಅಲ್ಲಿಗೆ ಓಡಿ ಬಂತು. ನೀರಿನಲ್ಲಿ ಮುಳುಗಿ ಏಳುತ್ತಿದ್ದ ಚಿನ್ನುವಿನತ್ತ ಹಗ್ಗವೊಂದನ್ನು ತಾಯಿಕೋಳಿ ಎಸೆಯಿತು. ಚಿನ್ನು ಅದನ್ನು ಹಿಡಿದುಕೊಂಡ ಕೂಡಲೇ ತಾಯಿಕೋಳಿ ಮತ್ತು ಮರಿಗಳೆಲ್ಲ ಸೇರಿ, ಚಿನ್ನುವನ್ನು ಬಾವಿಯಿಂದ ಹೊರಕ್ಕೆ ಎಳೆದವು. ಅಂತೂ ಚಿನ್ನು ಕೋಳಿಮರಿ ಬಚಾವಾಯಿತು. ಇನ್ನು ಯಾವತ್ತೂ ತಾಯಿಕೋಳಿಯ ಮಾತು ಮೀರುವುದಿಲ್ಲ ಎಂದು ಅದು ಭಾಷೆ ಕೊಟ್ಟಿತು.

ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋಡಿತು. ಕಳ್ಳನನ್ನು ಕಣ್ಣಾರೆ ಕಂಡರೂ ಚಿರತೆ ಇತರ ಪ್ರಾಣಿಗಳನ್ನು ಎಚ್ಚರಿಸಲಿಲ್ಲ. ಮರುದಿನ ಬೆಳಗ್ಗೆ, ಹಲವು ಪ್ರಾಣಿಪಕ್ಷಿಗಳು ತಮ್ಮ ವಸ್ತುಗಳು ಕಾಣೆಯಾದ ಬಗ್ಗೆ ಮಾತಾಡಿಕೊಳ್ಳುತ್ತಿದ್ದವು. ಆನೆಯ ಕಿವಿಯೋಲೆಗಳು, ಹುಲಿಯ ಭುಜಕೀರ್ತಿ, ಗಿಳಿಯ ಕೈಬೀಸಣಿಕೆ ಇತ್ಯಾದಿ ಕದಿಯಲಾಗಿತ್ತು. ಆ ಪ್ರಾಣಿಪಕ್ಷಿಗಳು ತಮ್ಮ ಕದ್ದು ಹೋದ ವಸ್ತುಗಳ ಬಗ್ಗೆ ಪರಸ್ಪರ ಮಾತಾಡಿಕೊಂಡವು.  ಇದನ್ನೆಲ್ಲ ಕೇಳಿಸಿಕೊಂಡರೂ ಚಿರತೆ ಸುಮ್ಮನಿತ್ತು.

ಅದೊಂದು ದಿನ ರಾತ್ರಿ ಎಂದಿನಂತೆ ಚಿರತೆ ಬೇಟೆಗೆ ಹೋಗಿತ್ತು. ತಾನು ಮಲಗುವ ದೊಡ್ಡ ಮರದ ಬಳಿಗೆ ಮರಳಿದಾಗ ಅದಕ್ಕೆ ಆಘಾತವಾಯಿತು. ಅದು ಮಲಗುತ್ತಿದ್ದ ಕೊಂಬೆ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಅದು ಮರಕುಟುಕನ ಉಪಟಳವೆಂದು ಕಾಣಿಸುತ್ತಿತ್ತು. “ಅಯ್ಯೋ, ನನಗೆ ಸಹಾಯ ಮಾಡಿ” ಎಂದು ಚಿರತೆ ಬೊಬ್ಬೆ ಹಾಕಿತು. ಅದರ ಬೊಬ್ಬೆ ಕೇಳಿದ ಹಲವಾರು ಪ್ರಾಣಿಪಕ್ಷಿಗಳು ಅದರ ಸುತ್ತಲೂ ಸೇರಿಕೊಂಡು ಏನಾಯಿತೆಂದು ವಿಚಾರಿಸಿದವು. ಮರಕುಟುಕ ಕಳ್ಳತನ ಮಾಡುತ್ತಿತ್ತೆಂದೂ, ಈಗ ತನ್ನ ಮಲಗುಕೊಂಬೆ ಮುರಿದು ಹಾಕಿದೆಯೆಂದೂ ಚಿರತೆ ತಿಳಿಸಿತು. “ಮರಕುಟುಕನ ಕಳ್ಳತನ ನೋಡಿದಾಗಲೇ ಬೇರೆಯವರ ತೊಂದರೆಗಳು ನಿನ್ನ ತೊಂದರೆಗಳೆಂದು ನೀನು ಯೋಚಿಸಬೇಕಾಗಿತ್ತು" ಎಂದು ಇತರ ಪ್ರಾಣಿಪಕ್ಷಿಗಳು ಚಿರತೆಗೆ ತಿಳಿಯಹೇಳಿದವು. ಅನಂತರ ಆ ಎಲ್ಲ ಪ್ರಾಣಿಪಕ್ಷಿಗಳು ಮರಕುಟುಕವನ್ನು ಹಿಡಿದು, ಗದರಿಸಿದವು. ಮಾತ್ರವಲ್ಲ, ಅದು ತಮ್ಮ ಕಾಡನ್ನು ತೊರೆದು ಹೋಗಬೇಕೆಂದು ತಾಕೀತು ಮಾಡಿದವು.

ಶಾಮು ಮತ್ತು ಸೋಮು ಬುದ್ಧಿವಂತ ಸೋದರರು. ಆದರೆ ಶಾಮು ಸ್ವಾರ್ಥಿ. ತನ್ನ ಬುದ್ಧಿವಂತಿಕೆಯನ್ನು ತನ್ನ ಲಾಭಕ್ಕಾಗಿಯೇ ಬಳಸುತ್ತಿದ್ದ. ಅವನು ಹಲವು ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನಗಳನ್ನು ಪಡೆದಿದ್ದ. ಸೋಮು ಪರೋಪಕಾರಿ. ತನ್ನ ಬುದ್ಧಿವಂತಿಕೆಯನ್ನು ಜನರ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತಿದ್ದ. ಅದೊಂದು ದಿನ ಧಾರಾಕಾರ ಮಳೆ ಸುರಿದು, ಅವರ ಊರಿನಲ್ಲಿ ನೆರೆ ಬಂತು. ಶಾಮು ಎತ್ತರದ ಕಟ್ಟಡವೊಂದನ್ನು ಹತ್ತಿ ಅಲ್ಲೇ ಉಳಿದ.

ಸೋಮುವನ್ನು ಕರೆಯುತ್ತಾ ಶಾಮು ಹೇಳಿದ, “ಸೋಮು, ಬೇಗ ಈ ಕಟ್ಟಡಕ್ಕೆ ಬಾ. ಇಲ್ಲಿ ನೀನು ಕ್ಷೇಮವಾಗಿ ಇರಬಹುದು.”
ಶಾಮುವಿನ ಕರೆಗೆ ಸೋಮು ಓಗೊಡಲಿಲ್ಲ. ಬದಲಾಗಿ, “ನಾನು ಕಟ್ಟಡಕ್ಕೆ ಬರೋದಿಲ್ಲ. ಜನರ ಪ್ರಾಣ ಉಳಿಸುತ್ತೇನೆ” ಎಂದು ಜನರಿಗೆ ಸಹಾಯ ಮಾಡಲು ಹೋದ ಸೋಮು. ಅವನಿಗೆ ನೆರೆಯಲ್ಲಿ ತೇಲುತ್ತ ಬಂದ ಮರದ ದೊಡ್ಡ ಕಾಂಡವೊಂದು ಸಿಕ್ಕಿತು. ಅದನ್ನು ದೋಣಿಯಂತೆ ಬಳಸಿದ ಸೋಮು, ಹಲವಾರು ಸ್ಥಳಗಳಿಗೆ ಹೋಗಿ, ಅಲ್ಲಿ ಸಿಕ್ಕಿಹಾಕಿ ಕೊಂಡಿದ್ದ ಜನರನ್ನು ನೆರೆಯಿಂದ ಪಾರು ಮಾಡಿದ. ಆ ಜನರಿಗೂ ಸೋಮುವಿಗೂ ಕೆಲವರು ಆಹಾರ ತಂದಿತ್ತರು. ಖಾಲಿ ಕಟ್ಟಡದ ತಾರಸಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಶಾಮುವಿಗೆ ಎರಡು ದಿನ ತಿನ್ನಲು ಏನೂ ಸಿಗದೆ ಕಂಗಾಲಾದ. ತಾನೊಬ್ಬನೇ ನೆರೆಯಿಂದ ಬಚಾವಾದರೆ ಸಾಕೆಂದು ಯೋಚಿಸಿದ್ದಕ್ಕೆ ಈಗ ಶಾಮು ಪಶ್ಚಾತ್ತಾಪ ಪಟ್ಟ. ಮರುದಿನ ಸೋಮು ಆ ಕಟ್ಟಡಕ್ಕೆ ಬಂದು ಶಾಮುವನ್ನು ರಕ್ಷಿಸಿದ. ಇನ್ನು ಮುಂದೆ ತಾನೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕೆಂದು ಶಾಮು ನಿರ್ಧರಿಸಿದ.

ಕಾಡಿನಲ್ಲಿದ್ದ ಆ ದೈತ್ಯ ಮರದ ನೆರಳು ವಿಶಾಲ ಪ್ರದೇಶದಲ್ಲಿ ಹರಡಿತ್ತು. ಆದರೆ ಆ ಮರಕ್ಕೆ ತನ್ನ ಗಾತ್ರದ ಬಾಗ್ಗೆ ಭಾರೀ ಅಹಂಕಾರ. ಅದು ತನ್ನ ಕೊಂಬೆಗಳಲ್ಲಿ ಗೂಡು ಕಟ್ಟಲು ಯಾವ ಹಕ್ಕಿಗೂ ಬಿಡುತ್ತಿರಲಿಲ್ಲ; ತನ್ನ ನೆರಳಿನಲ್ಲಿ ವಿಶ್ರಮಿಸಲು ಯಾವುದೇ ಪ್ರಾಣಿಗೂ ಅವಕಾಶ ಕೊಡುತ್ತಿರಲಿಲ್ಲ. ಎಲ್ಲ ಪಕ್ಷಿಗಳೂ ಪ್ರಾಣಿಗಳು ಅದರಿಂದ ದೂರ ಇರುತ್ತಿದ್ದವು. ಆದ್ದರಿಂದ ಆ ದೈತ್ಯ ಮರಕ್ಕೆ ಯಾರೂ ಗೆಳೆಯರು ಇರಲಿಲ್ಲ.

ಅದೊಂದು ವರುಷ ಭೀಕರ ಚಳಿಗಾಲ. ಆ ದೈತ್ಯ ಮರ ತನ್ನೆಲ್ಲ ಎಲೆಗಳನ್ನು ಉದುರಿಸಿತ್ತು. ಈಗ ಚಳಿಯಿಂದ ತತ್ತರಿಸಿತು. ಇದನ್ನು ಕಂಡ ಒಂದು ಕರಡಿ ಕಂಬಳಿಯೊಂದನ್ನು ತಂದು ಮರದ ಕಾಂಡಕ್ಕೆ ಸುತ್ತಿತು. ಇದನ್ನು ನೋಡಿದ ಇತರ ಪ್ರಾಣಿಗಳು ಕರಡಿಗೆ ಹೇಳಿದವು, “ಈ ಮರ ಯಾರ ಜೊತೆಯೂ ಸ್ನೇಹದಿಂದಿಲ್ಲ. ಹಾಗಾಗಿ ಅದಕ್ಕೆ ಯಾರೂ ಸಹಾಯ ಮಾಡಬಾರದು.” ಆದರೆ ಕರುಣಾಮಯಿ ಕರಡಿ ದೈತ್ಯ ಮರಕ್ಕೆ ಸಹಾಯ ಮಾಡಬೇಕೆಂದು ನಿರ್ಧರಿಸಿತು; ಅದು ತಾನು ಹೊದೆಸಿದ ಕಂಬಳಿಯನ್ನು ತೆಗೆಯಲಿಲ್ಲ. ಇದನ್ನು ಗಮನಿಸಿದ ದೈತ್ಯ ಮರಕ್ಕೆ ನಾಚಿಕೆಯಾಯಿತು. ಅನಂತರ ಅದು ಎಲ್ಲ ಪ್ರಾಣಿಪಕ್ಷಿಗಳಿಗೆ ಸಹಾಯ ಮಾಡಲು ಶುರುವಿಟ್ಟಿತು. ಮುಂದಿನ ವಸಂತಕಾಲದಲ್ಲಿ, ಹಲವು ಪಕ್ಷಿಗಳು ಆ ಮರದಲ್ಲಿ ಗೂಡು ಕಟ್ಟಿದವು ಮತ್ತು ಅನೇಕ ಪ್ರಾಣಿಗಳು ಅದರ ನೆರಳಿನಲ್ಲಿ ವಿರಮಿಸಿದವು.

ಒಂದು ದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಹಿಪ್ಪುನೇರಳೆ ಬೀಜಗಳನ್ನು ಹಂಚಿ, ಅವುಗಳಿಂದ ಗಿಡಗಳನ್ನು ಬೆಳೆಸಬೇಕೆಂದರು. ಇದನ್ನು ಕೇಳಿ ರಾಜುವಿಗೆ ಖುಷಿಯೋ ಖುಷಿ. ಅವನು ಜೋಪಾನದಿಂದ ಬೀಜ ಬಿತ್ತಿ, ಅದಕ್ಕೆ ದಿನವೂ ನೀರೆರೆದ.  ಬೀಜ ಮೊಳೆತು, ಸಸಿಯಾಗಿ, ಮೊದಲ ಎಲೆ ಕಾಣಿಸಿತು. ರಾಜು ಆತುರದಿಂದ ಅಧ್ಯಾಪಕರನ್ನು ಕೇಳಿದ, "ನಾನು ಇದರ ಬೀಜಗಳನ್ನು ತಿನ್ನಬಹುದೇ?" “ಇಲ್ಲ, ಇಲ್ಲ. ನೀನು ಇನ್ನೂ ಕಾಯಬೇಕು. ಒಂದು ತಿಂಗಳ ನಂತರ ಗಿಡದಲ್ಲಿ ಕಾಯಿ ಬಿಟ್ಟಾಗ ನೀನು ಅದರ ಬೀಜಗಳನ್ನು ತಿನ್ನಬಹುದು" ಎಂದು ಉತ್ತರಿಸಿದರು ಅಧ್ಯಾಪಕರು.

ರಾಜುವಿಗೆ ನಿರಾಶೆಯಾದರೂ ಅವನು ಜತನದಿಂದ ಸಸಿಗೆ ನೀರು ಹಾಕುತ್ತಿದ್ದ. ಆದರೆ ಅವನಲ್ಲಿ ದಿನದಿಂದ ದಿನಕ್ಕೆ ಅಸಹನೆ ಹೆಚ್ಚಾಗುತ್ತಿತ್ತು. ಅವನು ಅಧ್ಯಾಪಕರ ಬಳಿ ಹಲವಾರು ಸಲ ಅದೇ ಪ್ರಶ್ನೆ ಕೇಳಿದ. ಅಧ್ಯಾಪಕರು "ಬೇಡ, ಬೇಡ. ತಾಳ್ಮೆಯಿಂದಿರು” ಎಂದು ಹೇಳುತ್ತಿದ್ದರು. ಗಿಡದಲ್ಲಿ ಮೊದಲ ಹಣ್ಣು ಕಾಣಿಸಿದ ಕೂಡಲೇ ಅವನು ಗಿಡವನ್ನು ನೆಲದಿಂದ ಕಿತ್ತು ತೆಗೆದ. ಆದರೆ ಗಿಡದಲ್ಲಿ ಹಣ್ಣುಗಳು ಪಕ್ವವಾಗಿರಲಿಲ್ಲ. ಅವನ ಅಸಹನೆಯಿಂದಾಗಿ ಅವನ ಎಲ್ಲ ಪ್ರಯತ್ನವೂ ವ್ಯರ್ಥವಾಯಿತು. ಆದರೆ ತಾಳ್ಮೆಯಿಂದ ಕಾಯುತ್ತಿದ್ದ ಅವನ ಸಹಪಾಠಿಗಳ ಗಿಡಗಳು ಚೆನ್ನಾಗಿ ಬೆಳೆದು ಹಣ್ಣುಗಳನ್ನು ನೀಡಿದವು. ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ತಾಳ್ಮೆಯಿಂದಿರಬೇಕು ಎಂಬ ಪಾಠ ಕಲಿತ ರಾಜು.

ಎರಡು ಕಪ್ಪೆಗಳು ಆಹಾರ ಹುಡುಕುತ್ತಾ ಗೋಪಾಲಕನ ಮನೆಗೆ ಹೋದವು. ಅಕಸ್ಮಾತಾಗಿ ಹಾಲಿನ ಪಾತ್ರೆಯೊಳಕ್ಕೆ ಜಿಗಿದವು. ಆ ಪಾತ್ರೆಯ ಬದಿಗಳು ಜಾರುತ್ತಿದ್ದ ಕಾರಣ ಕಪ್ಪೆಗಳಿಗೆ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ದೊಡ್ಡ ಕಪ್ಪೆ ಹೇಳಿತು, "ಗೆಳೆಯಾ, ಇದರೊಳಗೆ ಈಜುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವಿಬ್ಬರೂ ಹಾಲಿನಲ್ಲಿ ಮುಳುಗಿ ಹೋಗುತ್ತೇವೆ. ಹಾಗಾಗಿ ಈಜುವುದನ್ನು ನಿಲ್ಲಿಸೋಣ.” ಸಣ್ಣ ಕಪ್ಪೆ ಹೇಳಿತು, “ತಾಳ್ಮೆಯಿಂದಿರು ಗೆಳೆಯಾ! ಈಜುತ್ತಲೇ ಇರು. ಯಾರಾದರೂ ಬಂದು ನಮ್ಮನ್ನು ಪಾತ್ರೆಯಿಂದ ಹೊರಕ್ಕೆ ಹಾಕುತ್ತಾರೆ.”

ಸ್ವಲ್ಪ ಸಮಯದ ನಂತರ ದೊಡ್ಡ ಕಪ್ಪೆ ಹತಾಶೆಯಿಂದ ಹೇಳಿತು, "ನನ್ನಿಂದ ಈಜಲು ಸಾಧ್ಯವೇ ಇಲ್ಲ, ನಾನು ಸುಸ್ತಾಗಿದ್ದೇನೆ. ನಾನಂತೂ ಈಜೋದನ್ನು ನಿಲ್ಲಿಸುತ್ತೇನೆ.” ಸಣ್ಣ ಕಪ್ಪೆ ಹುರಿದುಂಬಿಸುವ ಮಾತನ್ನಾಡಿತು, “ಹತಾಶೆ ಬೇಡ. ಈಜುತ್ತಲೇ ಇರು.” ಎರಡು ಗಂಟೆಗಳು ಸರಿದವು. ದೊಡ್ಡ ಕಪ್ಪೆ ಹೇಳಿತು, "ನನಗೆ ಈಜಲು ಆಗುತ್ತಲೇ ಇಲ್ಲ. ನಾವಿಬ್ಬರೂ ಮುಳುಗಿ ಸಾಯುತ್ತೇವೆ.” ಅದು ಈಜೋದನ್ನು ನಿಲ್ಲಿಸಿತು ಮತ್ತು ಹಾಲಿನಲ್ಲಿ ಮುಳುಗಿ ಸತ್ತಿತು. ಸಣ್ಣ ಕಪ್ಪೆ ಹಠದಿಂದ ಈಜುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ, ಸಣ್ಣ ಕಪ್ಪೆಗೆ ತನ್ನ ಕಾಲುಗಳ ಕೆಳಗೆ ಏನೋ ತಗಲಿದಂತಾಯಿತು. ಗಂಟೆಗಟ್ಟಲೆ ಈಜಿದ ಕಾರಣ ಹಾಲಿನಲ್ಲಿ ಬೆಣ್ಣೆ ಮೂಡಿತ್ತು. ತಕ್ಷಣವೇ ಸಣ್ಣ ಕಪ್ಪೆ ಬೆಣ್ಣೆಗೆ ಹಿಂಗಾಲುಗಳನ್ನೂರಿ ಪಾತ್ರೆಯಿಂದ ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡಿತು.

ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ. ಉದ್ಯಾನದ ಮಧ್ಯದಲ್ಲಿದ್ದ ಹಳೆಯ ದೊಡ್ಡ ಮರವೊಂದನ್ನು ಕಂಡಾಗೆಲ್ಲ ರಾಜನಿಗೆ ಅಸಮಾಧಾನವಾಗುತ್ತಿತ್ತು. ಕೊನೆಗೊಂದು ದಿನ ಆ ಮರವನ್ನು ಕಡಿದು, ಅದು ಇರುವ ಜಾಗದಲ್ಲಿ ಕಾರಂಜಿಯನ್ನು ನಿರ್ಮಿಸಬೇಕೆಂದು ತನ್ನ ಸೇವಕರಿಗೆ ರಾಜ ಆಜ್ನಾಪಿಸಿದ.

ಅದಾಗಿ ಕೆಲವೇ ದಿನಗಳಲ್ಲಿ ಪಕ್ಷಿಗಳು, ಚಿಟ್ಟೆಗಳು ಮತ್ತು ಪ್ರಾಣಿಗಳು ಉದ್ಯಾನದಿಂದ ಕಾಣೆಯಾದವು. ರಾಜನಿಗೆ ಅಚ್ಚರಿ. ಯಾಕೆ ಅವು ಕಾಣಿಸುತ್ತಿಲ್ಲ? ಎಂದು ಮಂತ್ರಿಯನ್ನು ಪ್ರಶ್ನಿಸಿದಾಗ ಮಂತ್ರಿ ಉತ್ತರಿಸಿದ, “ಮಹಾರಾಜರೇ, ಪಕ್ಷಿಗಳು ಮತ್ತು ಪ್ರಾಣಿಗಳು ಆ ಹಳೆಯ ದೊಡ್ಡ ಮರದ ಹಣ್ಣು ಮತ್ತು ಬೀಜಗಳನ್ನು ತಿನ್ನುತ್ತಿದ್ದವು. ಚಿಟ್ಟೆಗಳು ಮತ್ತು ಜೇನ್ನೊಣಗಳು ಅದರ ಹೂಗಳ ಮಕರಂದ ಹೀರುತ್ತಿದ್ದವು. ಈಗ ಇಲ್ಲಿ ಆ ಮರ ಇಲ್ಲದಿರುವ ಕಾರಣ, ಅವೆಲ್ಲವೂ ಬೇರೆ ಉದ್ಯಾನಕ್ಕೆ ಹೋಗಿವೆ.” ಈಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಹಾಗಾಗಿ, ತನ್ನ ಉದ್ಯಾನದಲ್ಲಿ ಮತ್ತು ರಾಜ್ಯದಲ್ಲಿ ಎಲ್ಲೆಡೆ ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ರಾಜ ಆದೇಶಿಸಿದ.

Pages