HRM
ಕಾಡಿನಲ್ಲಿ ಅತ್ತಿ ಮರದ ಆಶ್ರಯದಲ್ಲಿ ಆನೆಯೊಂದು ವಾಸ ಮಾಡುತ್ತಿತ್ತು. ಆ ಮರದಲ್ಲಿ ರಾಬಿನ್ ಹಕ್ಕಿಯೊಂದು ಗೂಡು ಕಟ್ಟಿ ವಾಸ ಮಾಡಲು ಶುರು ಮಾಡಿತು. ಪ್ರತಿ ದಿನ ರಾಬಿನ್ ಹಕ್ಕಿ ಇಂಪಾಗಿ ಹಾಡುತ್ತಿತ್ತು ಮತ್ತು ಮರದ ಸುತ್ತಲೂ ಹಾರಾಡುತ್ತಿತ್ತು. ಇದನ್ನು ನೋಡುತ್ತಾ ಆನೆಗೆ ರಾಬಿನ್ ಹಕ್ಕಿಯ ಬಗ್ಗೆ ಮತ್ಸರ ಹುಟ್ಟಿತು - ತನಗೆ ಹಾಡಲು ಅಥವಾ ಹಾರಾಡಲು ಆಗುತ್ತಿಲ್ಲವೆಂದು. ಇದನ್ನು ಗಮನಿಸಿದ ರಾಬಿನ್ ಹಕ್ಕಿ ಆನೆಯನ್ನು ಸಂತೈಸಿತು, "ಗೆಳೆಯಾ, ಬೇಸರ ಮಾಡಿಕೊಳ್ಳಬೇಡ. ದೇವರು ನಿನ್ನನ್ನೂ ವಿಶೇಷ ಜೀವಿಯನ್ನಾಗಿ ಮಾಡಿದ್ದಾನೆ. ನಿನ್ನ ದೇಹ ಭಾರೀ ದೊಡ್ಡದು ಮತ್ತು ನೀನು ಮಹಾ ಶಕ್ತಿಶಾಲಿ.”
ಆದರೆ, ರಾಬಿನ್ ಹಕ್ಕಿಯ ಮಾತುಗಳಿಗೆ ಆನೆ ಬೆಲೆ ಕೊಡಲಿಲ್ಲ. ತಾನೂ ಹಾಡಬೇಕು ಮತ್ತು ಹಾರಾಡಬೇಕು ಎಂದು ನಿರ್ಧರಿಸಿತು ಆನೆ. ಮರುದಿನ ಅದು ಅತ್ತಿ ಮರ ಹತ್ತಲು ಪ್ರಯತ್ನಿಸಿತು. ಮರ ಹತ್ತಿ ಹಾರಾಡಬಹುದೆಂದು ಅದರ ಯೋಚನೆ. ಆದರೆ ಆನೆಗೆ ಅತ್ತಿ ಮರ ಹತ್ತಲು ಸಾಧ್ಯವಾಗಲೇ ಇಲ್ಲ. ಪ್ರತೀ ಸಲ ಪ್ರಯತ್ನಿಸಿದಾಗಲೂ ಅದು ಕೆಳಗೆ ಬಿತ್ತು. ಅನಂತರ ಹಾಡಲು ಪ್ರಯತ್ನಿಸಿತು ಆನೆ. ಆದರೆ ಅದಕ್ಕೆ ಹಾಡಲಿಕ್ಕೂ ಸಾಧ್ಯವಾಗಲಿಲ್ಲ. ಅದರ ಬಾಯಿಯಿಂದ ಬಂದ ಸದ್ದುಗಳೆಲ್ಲ ವಿಚಿತ್ರವಾಗಿದ್ದವು. ಅದನ್ನು ಕೇಳಿದ ಇತರ ಪ್ರಾಣಿಗಳು ಆನೆಗೆ ಗೇಲಿ ಮಾಡಿದವು. ಇದರಿಂದಾಗಿ ಆನೆಗೆ ಅವಮಾನವಾಯಿತು. ತಾನು ಎಂತಹ ಮೂರ್ಖ ಎಂದು ಅರ್ಥ ಮಾಡಿಕೊಂಡ ಆನೆ, ತನ್ನ ತಾಕತ್ತುಗಳ ಬಗ್ಗೆ ಹೆಮ್ಮೆ ಪಟ್ಟಿತು.
ಎರಡು ಗುರುಕುಲಗಳಿದ್ದವು: ಪೂರ್ವ ಮತ್ತು ಪಶ್ಚಿಮ. ಅಲ್ಲಿನ ಶಿಷ್ಯರೊಳಗೆ ಯಾವಾಗಲೂ ಪೈಪೋಟಿ. ಅದೊಂದು ದಿನ, ಮಾರುಕಟ್ಟೆಗೆ ಹೋಗುವ ಹಾದಿಯಲ್ಲಿ ಪೂರ್ವ ಗುರುಕುಲದ ಒಬ್ಬ ಶಿಷ್ಯ ಮತ್ತು ಪಶ್ಚಿಮ ಗುರುಕುಲದ ಇನ್ನೊಬ್ಬ ಶಿಷ್ಯನ ಮುಖಾಮುಖಿ.
ಆಗ ಪೂರ್ವ ಗುರುಕುಲದ ಶಿಷ್ಯ, ದೂರದ ದೇವಾಲಯದ ಮೇಲೆ ಹಾರಾಡುತ್ತಿದ್ದ ಧ್ವಜವನ್ನು ತೋರಿಸುತ್ತಾ ಹೇಳುತ್ತಾನೆ, “ಧ್ವಜ ಅಲ್ಲಾಡುತ್ತಿದೆ ನೋಡು.” ತಕ್ಷಣವೇ ಪಶ್ಚಿಮ ಗುರುಕುಲದ ಶಿಷ್ಯನ ಪ್ರತಿಕ್ರಿಯೆ: “ಧ್ವಜ ಅಲ್ಲಾಡುತ್ತಿಲ್ಲ, ಗಾಳಿ ಅಲ್ಲಾಡುತ್ತಿದೆ.” ಇಬ್ಬರೂ ತಮ್ಮದೇ ಸರಿ ಎಂದು ವಾದ ಮಾಡುತ್ತಾ, ಹೊಡೆದಾಡಲು ಮುನ್ನುಗ್ಗುತ್ತಾರೆ.
ಆಗ, ಅಲ್ಲಿ ಹಾದು ಹೋಗುತ್ತಿದ್ದ ಹಿರಿಯರೊಬ್ಬರು ಧಾವಿಸಿ ಬಂದು, ಇಬ್ಬರನ್ನೂ ತಡೆಯುತ್ತಾರೆ. “ಏನು ನಿಮ್ಮ ಜಗಳ” ಎಂದು ಅವರು ಪ್ರಶ್ನಿಸಿದಾಗ, ಇಬ್ಬರೂ ಶಿಷ್ಯರಿಂದ ತಮ್ಮತಮ್ಮ ವಾದ ಮಂಡನೆ. ಆಗ ಹಿರಿಯರು ಮುಗುಳ್ನಗುತ್ತಾ, “ಧ್ವಜವೂ ಅಲ್ಲಾಡುತ್ತಿಲ್ಲ, ಗಾಳಿಯೂ ಅಲ್ಲಾಡುತ್ತಿಲ್ಲ; ಅಲ್ಲಾಡುತ್ತಿರುವುದು ನಿಮ್ಮ ಮನಸ್ಸು” ಎಂದಾಗ ಶಿಷ್ಯರ ವಾಗ್ವಾದ ಅಂತ್ಯ.
ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ ಮುಗಿದೀತೆಂದು ದಿನ ಲೆಕ್ಕ ಹಾಕುತ್ತಿದ್ದ.
ಕೊನೆಗೂ ಆ ದಿನ ಬಂದಿತು. ಅವತ್ತು ಮುಂಜಾನೆ ಉತ್ಸಾಹದಿಂದ ಎದ್ದ ಆ ವಿದ್ಯಾರ್ಥಿ. ನಿತ್ಯಕಾರ್ಯಗಳನ್ನು ಪೂರೈಸಿ, ತನ್ನ ಮನೆಗೆ ಮರಳಲು ತಯಾರಾದ. ಗುರುಗಳ ಅನುಮತಿ ಪಡೆಯಲಿಕ್ಕಾಗಿ ಅವರ ನಿವಾಸಕ್ಕೆ ಹೋದ. ಗುರುಗಳು ಎಂದಿನಂತೆ ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಧ್ಯಾನ ಕೋಣೆಯ ಬಾಗಿಲಿನೆದುರು ಕಾದು ನಿಂತ ವಿದ್ಯಾರ್ಥಿ. ಸುಮಾರು ಒಂದು ತಾಸು ಕಳೆಯಿತು.
ಧ್ಯಾನ ಮುಗಿಸಿ, ಧ್ಯಾನ ಕೋಣೆಯಿಂದ ಹೊರಬಂದ ಗುರುಗಳು, ಪಾಠಶಾಲೆಯತ್ತ ನಡೆಯುತ್ತ ವಿದ್ಯಾರ್ಥಿಯನ್ನು ಗಮನಿಸಿದರು. “ಇಲ್ಲಿ ಯಾಕೆ ಬಂದಿದ್ದಿ?” ಎಂದು ಕೇಳಿದರು. "ಗುರುಗಳೇ, ಮನೆಗೆ ಹಿಂತಿರುಗಲು ನಿಮ್ಮ ಅನುಮತಿ ಕೊಡಿ; ಆವಾಗಿನಿಂದ ಕಾದಿದ್ದೇನೆ” ಎಂದ ವಿದ್ಯಾರ್ಥಿ.
“ಏನು, ಮನೆಗೆ ಹಿಂತಿರುಗುತ್ತೀಯಾ? ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ವಿದ್ಯಾರ್ಥಿಯ ಉತ್ತರ, "ಹೌದು ಗುರುಗಳೇ, ಇಲ್ಲಿ ಬಂದು ೧೫ ವರುಷವಾಯಿತು. ನಾನಿಲ್ಲಿ ಕಲಿತು ಮುಗಿಸಿದೆ.”
“ಏನಂದಿ? ಕಲಿತಾಯಿತೇ? ಹಾಗಿದ್ದರೆ, ನೀನು ಆವಾಗಿನಿಂದ ಕಾಯುತ್ತಾ ನಿಂತಿದ್ದೆಯಲ್ಲ, ನಿನ್ನೆದುರಿನ ಬಾಗಿಲಿನ ಚೌಕಟ್ಟಿನ ಮೂಲೆಯಲ್ಲಿ ಏನಿತ್ತು?” ಎಂಬ ಗುರುಗಳ ಮರುಪ್ರಶ್ನೆಗೆ ವಿದ್ಯಾರ್ಥಿಯ ಉತ್ತರ, "ಆ ಬಾಗಿಲಿನ ಚೌಕಟ್ಟಿನ ಮೂಲೆಯಲ್ಲೊಂದು ಕೋಲು ಇದ್ದ ಹಾಗಿತ್ತು, ಗುರುಗಳೇ." ಗುರುಗಳು ಮತ್ತೆ ಪ್ರಶ್ನಿಸಿದರು, “ಕೋಲು ಇದ್ದ ಹಾಗಿತ್ತೋ ಅಥವಾ ಅಲ್ಲಿ ಕೋಲು ಇತ್ತಾ?” ಈಗೊಮ್ಮೆ ಕಂಪಿಸಿದ ವಿದ್ಯಾರ್ಥಿ, ನಡುಗುವ ಧ್ವನಿಯಲ್ಲಿ ಉತ್ತರಿಸಿದ, “ಹಾಗಲ್ಲ ಗುರುಗಳೇ, ಅಲ್ಲಿ ಒಂದು ಕೋಲಿತ್ತು.”
“ಓ ಹಾಗೋ, ಆ ಕೋಲಿನ ತುದಿಯಲ್ಲಿ ಏನಿತ್ತು?” ಎಂದು ಮುನ್ನಡೆಯುತ್ತಾ ವಿದ್ಯಾರ್ಥಿಯನ್ನು ಪುನಃ ಪ್ರಶ್ನಿಸಿದರು ಗುರುಗಳು. ಈಗ ವಿದ್ಯಾರ್ಥಿ ತಲ್ಲಣಿಸಿದ. "ಕ್ಷಮಿಸಿ ಗುರುಗಳೇ, ಅದನ್ನು ನಾನು ಗಮನ ಕೊಟ್ಟು ನೋಡಲಿಲ್ಲ" ಎಂದ.
“ಇದೇನಿದು? ಕಲಿತಾಯಿತು ಅನ್ನುತ್ತೀಯಲ್ಲ! ನೀನು ಬದುಕಿನ ಮೊದಲ ಪಾಠಗಳನ್ನೇ ಕಲಿತಿಲ್ಲ. ಹೋಗು, ಹೋಗು, ಕಲಿಯಲು ಶುರು ಮಾಡು" ಎಂದು ಆದೇಶಿಸಿದರು ಗುರುಗಳು. ಪೆಚ್ಚಾದ ವಿದ್ಯಾರ್ಥಿ, ಗುರುಗಳ ಕಾಲಿಗೆರಗಿ, ಇನ್ನೊಂದು ದೀರ್ಘಾವಧಿಯ ಕಲಿಕೆ ಶುರು ಮಾಡಲು ಸಿದ್ಧನಾದ.
ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್‌ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ.
ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ. ಆತನೆದುರು ಚಹಾ ಲೋಟವನ್ನಿಟ್ಟು ಗುರು ತಾನೇ ಚಹಾ ಸುರಿಯತೊಡಗಿದ. ಲೋಟದಲ್ಲಿ ಚಹಾ ತುಂಬಿ ಚೆಲ್ಲ ತೊಡಗಿತು. ಆದರೂ ಗುರು ಚಹಾ ಸುರಿಯುತ್ತಲೇ ಇದ್ದ.
ಇದನ್ನು ಕಂಡು ದೂರದಿಂದ ಬಂದವನಿಗೆ ಗೊಂದಲವಾಯಿತು. "ಗುರುಗಳೇ, ಲೋಟದಲ್ಲಿ ಚಹಾ ತುಂಬಿ ಹೊರಕ್ಕೆ ಚೆಲ್ಲುತ್ತಿದೆ” ಎಂದ.
ಆಗ ಗುರು ಚಹಾ ಸುರಿಯುವುದನ್ನು ನಿಲ್ಲಿಸಿ, ಬಂದಿದ್ದವನತ್ತ ನೆಟ್ಟ ನೋಟದಿಂದ ನೋಡುತ್ತಾ ಕೇಳಿದ, "ಹೌದು, ಲೋಟದಲ್ಲಿ ಚಹಾ ತುಂಬಿದೆ. ಹಾಗೆಯೇ ನಿನ್ನಲ್ಲಿ ನಿನ್ನ ಚಿಂತನೆಗಳೇ ತುಂಬಿವೆ. ನೀನು ಅವನ್ನು ಬಿಟ್ಟು ಖಾಲಿಯಾಗದಿದ್ದರೆ, ನಿನ್ನಲ್ಲಿ ನಾನು ಝೆನ್ ಹೇಗೆ ಸುರಿಯಲಿ?"
ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು.
ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯೊಬ್ಬಳು. ಅಂದವಾದ ರೇಷ್ಮೆ ಉಡುಪು ಧರಿಸಿದ್ದ ಅವಳು ಆತಂಕದಲ್ಲಿದ್ದಳು. ಯಾಕೆಂದರೆ ರಸ್ತೆಯಲ್ಲಿ ಮೊಳಕಾಲೆತ್ತರದ ಕೆಸರು ನೀರು ಹರಿಯುತ್ತಿತ್ತು ಹಾಗೂ ಅವಳಿಗೆ ರಸ್ತೆ ದಾಟಿ ಹೋಗಬೇಕಿತ್ತು.
ತನ್‌ಜನ್ ಅವಳ ಪಕ್ಕಕ್ಕೆ ಹೋಗಿ, “ರಸ್ತೆ ದಾಟಬೇಕೇನು? ಬಾ" ಎನ್ನುತ್ತಾ ತೋಳುಗಳಿಂದ ಅವಳನ್ನು ಎತ್ತಿಕೊಂಡು, ರಸ್ತೆ ದಾಟಿ, ಆ ಬದಿಯಲ್ಲಿ ಕೆಳಗಿಳಿಸಿದ.
ಅನಂತರ, ಭಿಕ್ಷುಗಳಿಬ್ಬರೂ ಮುಂದೆ ಸಾಗಿದರು. ಒಂದೂ ಮಾತನ್ನಾಡದೆ ನಡೆದು ತಮ್ಮ ವಿಹಾರಕ್ಕೆ ಮರಳಿದರು.
ಆ ದಿನ ರಾತ್ರಿ, ಅವರಿಬ್ಬರೇ ಇದ್ದಾಗ, ಎಕಿಡೋ ಕೇಳಿದ, “ಅಲ್ಲಯ್ಯಾ, ನಾವು ಭಿಕ್ಷುಗಳು ಹೆಂಗಸರ ಹತ್ತಿರ ಹೋಗಬಾರದು. ಆ ಹುಡುಗಿಯೋ ಚೆಂದುಳ್ಳಿ ಚೆಲುವೆ. ನೀನು ಹಾಗೆ ಮಾಡಿದ್ದು ಸರಿಯಾ?”
ತನ್‌ಜೆನ್ ನೇರಾನೇರ ಉತ್ತರಿಸಿದ, “ಅಯ್ಯಾ, ನಿನ್ನದೊಳ್ಳೇ ಕತೆಯಾಯಿತಲ್ಲ! ನಾನು ಆ ಹುಡುಗಿಯನ್ನೆತ್ತಿ, ರಸ್ತೆ ದಾಟಿಸಿ, ಅಲ್ಲೇ ಕೆಳಕ್ಕಿಳಿಸಿ ಬಂದೆ. ನೀನು ಅವಳನ್ನು ಇನ್ನೂ ಹೊತ್ತುಕೊಂಡೇ ಇದ್ದೀಯಾ?”
ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ.
ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು ಕೇಳು.”
ಅದಾಗಿ ಮೂರು ವರುಷಗಳು ದಾಟಿದವು. ಆದರೆ “ಒಂದೇ ಕೈಯ ಚಪ್ಪಾಳೆ ಸದ್ದಿ"ನ ಅಧ್ಯಯನದ ಪರೀಕ್ಷೆಯಲ್ಲಿ ಆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಹತಾಶನಾದ ಆತ ಒಂದು ದಿನ ಗುರುಗಳ ಬಳಿ ಬಂದು ಹೇಳಿದ, "ಜ್ನಾನ ಗಳಿಸದವನಾಗಿ ನಮ್ಮಊರಿಗೆ ಹಿಂತಿರುಗಬೇಕಾದ ಅವಮಾನ ನನ್ನ ಪಾಲಿಗೆ ಕಾದಿದೆ. ನಿಮ್ಮ ಒಗಟನ್ನು ಬಿಡಿಸುವುದು ಹೇಗೆಂದು ನನಗೆ ತಿಳಿಯುತ್ತಿಲ್ಲ.”
ಗುರು ಸ್ವಿವೋ ಆ ವಿದ್ಯಾರ್ಥಿಗೆ ಧೈರ್ಯ ತುಂಬುತ್ತಾ ಹೇಳಿದ, “ಚಿಂತಿಸಬೇಡ. ಇನ್ನೂ ಒಂದು ವಾರ ಎಡೆಬಿಡದೆ ಆ ಒಗಟಿನ ಬಗ್ಗೆ ಧ್ಯಾನ ಮಾಡು." ಒಂದು ವಾರದವಧಿ ಸರಿಯಿತು. ಆದರೆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಗುರು ಸ್ವಿವೋ ಪುನಃ ಆ ವಿದ್ಯಾರ್ಥಿಯನ್ನು ಹುರಿದುಂಬಿಸಿದ, “ಇನ್ನೊಂದು ವಾರ ಶ್ರದ್ಧೆಯಿಂದ ಧ್ಯಾನ ಮಾಡು." ಆದರೆ ವಿದ್ಯಾರ್ಥಿಯ ಪಾಲಿಗೆ ನಿರಾಸೆಯೇ ಕಾದಿತ್ತು.
ಮೂರನೆಯ ಬಾರಿ “ಮತ್ತೊಂದು ವಾರ”ದ ಗಡುವು ನೀಡಿದ ಗುರು ಸ್ವಿವೋ. ಆದರೆ ವಿದ್ಯಾರ್ಥಿ ಪುನಃ ವಿಫಲನಾದ. ಹತಾಶೆಯಿಂದ ಗುರುಗಳನ್ನು ಬೇಡಿಕೊಂಡ, “ಇನ್ನು ನನ್ನಿಂದಾಗದು, ಗುರುಗಳೇ. ನಾನು ವಾಪಾಸು ಹೋಗುತ್ತೇನೆ.”
ಆದರೆ ಗುರುವಿಗೆ ಶಿಷ್ಯನ ಬಗ್ಗೆ ಇನ್ನೂ ಭರವಸೆಯಿತ್ತು. ಹಾಗಾಗಿ, ಇನ್ನೂ ಐದು ದಿನ ಪ್ರಚಂಡ ಏಕಾಗ್ರತೆಯಿಂದ ಧ್ಯಾನ ಮಾಡಲು ಆಗ್ರಹಿಸಿದ. ಆದರೆ ವಿದ್ಯಾರ್ಥಿ ಸೋತು ಸುಣ್ಣವಾದ.
ಅಂತಿಮವಾಗಿ ಗುರು ಸ್ವಿವೋ ಆದೇಶಿಸಿದ, "ನಿನಗೆ ಕೊನೆಯ ಅವಕಾಶ ಕೊಡುತ್ತೇನೆ. ಇನ್ನು ಮೂರೇ ದಿನ ಧ್ಯಾನದಲ್ಲಿ ಮುಳುಗು. ಅನಂತರವೂ ನಿನಗೆ ಜ್ನಾನೋದಯ ಆಗದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳೋದೇ ನಿನಗೆ ಉಳಿದ ದಾರಿ!"
ಇದಾಗಿ ಎರಡನೆಯ ದಿನವೇ ಆ ವಿದ್ಯಾರ್ಥಿ ಒಗಟು ಬಿಡಿಸಿದ. ಆ ಕ್ಷಣದಲ್ಲಿ ಅವನಿಗಾಯಿತು ಜ್ನಾನೋದಯ!
ಒಬ್ಬ ಶ್ರೀಮಂತನಿಗೊಂದು ಯೋಚನೆ ಬಂತು: ತನ್ನ ಕುಟುಂಬದವರ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸುಭಾಷಿತವನ್ನು ಗುರುಗಳಿಂದ ಬರೆಯಿಸಬೇಕೆಂದು. ಅದಕ್ಕಾಗಿ ಗುರು ಸೆನ್‌ಗೈ ಅವರನ್ನು ತನ್ನ ಬಂಗಲೆಗೆ ಕರೆ ತಂದು ವಿನಂತಿಸಿದ.
ಗುರು ಸೆನ್‌ಗೈ ಕಾಗದದ ದೊಡ್ಡ ಹಾಳೆ ತರಿಸಿಕೊಂಡು, ಅದರಲ್ಲಿ ಹೀಗೆ ಬರೆದರು: “ಅಜ್ಜ ತೀರಿಕೊಂಡು, ಅಪ್ಪ ತೀರಿಕೊಂಡು, ಮಗ ತೀರಿಕೊಂಡು ಸಾಗಲಿ ಕುಟುಂಬ."
ಇದನ್ನು ಓದಿದ ಶ್ರೀಮಂತನಿಗೆ ಸಿಟ್ಟು ಬಂತು. “ಏನು ಗುರುಗಳೇ, ನಮ್ಮ ಕುಟುಂಬದ ನೆಮ್ಮದಿಗಾಗಿ, ಸಮೃದ್ಧಿಗಾಗಿ ಒಳ್ಳೆಯ ಮಾತು ಬರೆದು ಕೊಡಿ ಅಂದರೆ ಇಂತಹ ಕೆಟ್ಟ ಸಂದೇಶ ಬರೆಯುವುದೇ?" ಎಂದು ಕೋಪದಿಂದ ಕೇಳಿದ.
ಆಗ ಗುರು ಸೆನ್‌ಗೈ ತನ್ನ ಸಂದೇಶದ ಅರ್ಥ ವಿವರಿಸಿದರು, “ನಿನ್ನ ಕುಟುಂಬದವರ ಒಳಿತಿಗಾಗಿ ಮಂಗಳಕರವಾದ ಸಂದೇಶವನ್ನೇ ಬರೆದಿದ್ದೇನೆ. ನೀನು ಬದುಕಿರುವಾಗಲೇ ನಿನ್ನ ಮಗ ಸತ್ತರೆ, ನಿನಗೆ ಅಪಾರ ದುಃಖವಾಗದೇ? ಹಾಗೆಯೇ, ನೀನು ಮತ್ತು ನಿನ್ನ ಮಗ ಜೀವದಿಂದ ಇರುವಾಗಲೇ ನಿನ್ನ ಮೊಮ್ಮಗ ತೀರಿಕೊಂಡರೆ ನಿಮಗಿಬ್ಬರಿಗೂ ಸಹಿಸಲಾಗದ ದುಃಖ, ಅಲ್ಲವೇ?ಅದಕ್ಕಾಗಿ, ಯಾವ ಮಗನೂ ತನ್ನ ತಂದೆಗಿಂತ ಮುಂಚೆ ಸಾಯದಿರಲಿ ಎಂದು ಹಾರೈಸಿದ್ದೇನೆ. ಯಾವುದೇ ಕುಟುಂಬದವರಿಗೆ ಇದಕ್ಕಿಂತ ಹೆಚ್ಚಿನ ಭಾಗ್ಯ ಒದಗೀತೇ?”
ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು.
ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ ಹಲವಾರು ಅನುಯಾಯಿಗಳೂ ಗುರು ಬಂಕೆಯ ಮಾತು ಕೇಳಲು ಹೋಗುತ್ತಿದ್ದುದು ಈತನ ಮತ್ಸರಕ್ಕೆ ಕಾರಣವಾಗಿತ್ತು.
ಅದೊಂದು ದಿನ ಗುರು ಬಂಕೆ ಪ್ರವಚನ ನೀಡುತ್ತಿದ್ದ ಮಂದಿರಕ್ಕೆ ಈ ಅರ್ಚಕ ನುಗ್ಗಿದ. ಗುರು ಬಂಕೆಗೆ ಏರು ಧ್ವನಿಯಲ್ಲಿ ಸವಾಲೆಸೆದ, “ಏ ಝೆನ್ ಗುರುವೇ, ಇಲ್ಲಿ ಕೇಳು! ನಿನ್ನ ಮಾತನ್ನು ಯಾರು ಬೇಕಾದರೂ ಅನುಸರಿಸಲಿ, ಆದರೆ ನಾನು ಪಾಲಿಸಲಾರೆ. ಅದೇನು ಮಾಡುತ್ತಿ ನೋಡೋಣ. ನಿನ್ನ ಮಾತನ್ನು ನಾನು ಪಾಲಿಸುವಂತೆ ಮಾಡು ನೋಡೋಣ."
ಆ ಸಭೆಯಲ್ಲಿದ್ದ ಎಲ್ಲರೂ ಅವಾಕ್ಕಾದರು. ಗುರು ಬಂಕೆ ನಸು ನಗುತ್ತ ಅರ್ಚಕನನ್ನು ಕರೆದರು, “ಇಲ್ಲಿ ಬಾ, ನನ್ನ ಹತ್ತಿರ ಬಾ.” ಜನರ ನಡುವೆ ದಾರಿ ಮಾಡಿಕೊಂಡು ಬಂದು, ಗುರು ಬಂಕೆಯ ಎದುರು ನಿಂತ ಬುಸುಗುಡುತ್ತಿದ್ದ ಅರ್ಚಕ.
ಈಗ ಗುರು ಬಂಕೆ ಮುಗುಳ್ನಗುತ್ತಾ ಹೇಳಿದರು, “ನೀನು ಇತ್ತ ಎಡಗಡೆಗೆ ಬಂದು ನಿಲ್ಲು.” ಗುರುವಿನ ಎಡ ಬದಿಗೆ ಬಂದ ಅರ್ಚಕ.
ಅಷ್ಟರಲ್ಲಿ ಗುರು ಬಂಕೆ ಹೀಗೆಂದರು, “ಇಲ್ಲ, ನೀನು ನನ್ನ ಬಲಗಡೆಗೆ ಬಂದರೆ ಚೆನ್ನಾಗಿತ್ತು. ನಾವು ಮಾತನಾಡಬಹುದು.” ಅವರೆಂದಂತೆ ಬಲಬದಿಗೆ ಹೋಗಿ ನಿಂತು ಗುರುಗಳತ್ತ ನೋಡಿದ ಅರ್ಚಕ.
ಇದೀಗ ಗುರು ಬಂಕೆ ಹೇಳಿದರು, "ನೋಡಿದೆಯಾ! ನೀನು ನನ್ನ ಪ್ರತಿಯೊಂದು ಮಾತನ್ನೂ ಪಾಲಿಸಿದೆ, ನಾನು ಹೇಳಿದಂತೆಯೇ ಮಾಡಿದೆ. ನೀನು ಒಬ್ಬ ಒಳ್ಳೆಯ ಮನುಷ್ಯ ಅಂತೇನೆ ನಾನು. ಈಗ ಅಲ್ಲಿ ಸುಮ್ಮನೆ ಕುಳಿತುಕೋ. ನನ್ನ ಮಾತು ಕೇಳು.”
ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು.
ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ ದೀಪಗಳು ಮಂದವಾಗ ತೊಡಗಿದವು. ಬೆಳಗ್ಗೆಯಿಂದ ಮಾತನ್ನೆಲ್ಲ ಅದುಮಿ ಕೂತಿದ್ದ ಒಬ್ಬ ಶಿಷ್ಯನಿಗೆ ಇನ್ನು ತಡೆಯಲಾಗಲಿಲ್ಲ. ಕೊನೆಗೆ ಆತ "ಆ ದೀಪಗಳನ್ನು ತೆಗೆದಿಡು” ಎಂದು ಗುರುಕುಲದ ಸೇವಕನಿಗೆ ಕೂಗಿ ಹೇಳಿದ.
ಮೊದಲನೆಯ ಶಿಷ್ಯ ಮಾತಾಡಿದ್ದನ್ನು ಕೇಳಿ ಎರಡನೆಯ ವಿದ್ಯಾರ್ಥಿ ಗೊಂದಲಕ್ಕೊಳಗಾದ. ಆತ ಮೊದಲನೆಯವನನ್ನು ಎಚ್ಚರಿಸಿದ, "ನಾವು ನಾಲ್ವರೂ ಮೌನ ವ್ರತದಲ್ಲಿ ಇದ್ದೇವೆ. ಒಂದು ಮಾತನ್ನೂ ಆಡಬಾರದು.”
ಈಗ ಮೂರನೆಯವನಿಗೆ ಸುಮ್ಮನಿರಲಾಗಲಿಲ್ಲ. “ನೀವಿಬ್ಬರಿಗೆ ಬುದ್ಧಿ ಇಲ್ಲವೇ? ವ್ರತ ಮುರಿದು ಮಾತಾಡಿದ್ದು ಯಾಕೆ?" ಎಂದು ರೇಗಿದ.
ಕೊನೆಗೆ ಇದೆಲ್ಲವನ್ನು ಗಮನಿಸುತ್ತಿದ್ದ ನಾಲ್ಕನೆಯವನು ಉದ್ಗರಿಸಿದ, "ನಾವು ನಾಲ್ವರಲ್ಲಿ ನಾನೊಬ್ಬನೇ ಮಾತನಾಡದೆ ಇದ್ದದ್ದು.”
ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ.
ಆ ಯುವ ಶಿಷ್ಯ ಮುಂಚೆಯೂ ಹಲವಾರು ಸಲ ಫ್ಯುಜಿ ಪರ್ವತ ಏರಿದ್ದ. ಈ ಭೇಟಿಯಲ್ಲಿ ಗುರುವಿನೊಂದಿಗೆ ಪರ್ವತ ಏರುತ್ತಿದ್ದಂತೆ ಪರ್ವತವನ್ನು ಹೊಸ ನೆಲೆಯಿಂದ ಕಾಣಲು ಅವನಿಗೆ ಸಾಧ್ಯವಾಯಿತು.
ಹಿಮದಿಂದ ಆವರಿಸಿದ ಆ ಪರ್ವತದ ಚೆಲುವಿನ ಹಾಗೂ ವಿಸ್ಮಯದ ಬಗ್ಗೆ ಅವನು ಉತ್ಸಾಹದಿಂದ ಬಣ್ಣಿಸ ತೊಡಗಿದ. ಅಲ್ಲಿನ ಮರಗಳ ಹಸುರು, ಪೈನ್ ಮರಗಳ ಶಂಖಾಕೃತಿ, ಹಕ್ಕಿಗಳ ಸ್ವರಮೇಳ ಹಾಗೂ ಹಾರಾಟ, ಕಾಡು ಹೂಗಳ ಬಣ್ಣಬಣ್ಣದ ವಿನ್ಯಾಸ, ಮುಂಬೆಳಗಿನ ಪರಿ - ಇವೆಲ್ಲದರ ವರ್ಣನೆ ಮಾಡತೊಡಗಿದ. "ಗುರುಗಳೇ, ಇವೆಲ್ಲ ಪ್ರಕೃತಿಯ ಅದ್ಭುತಗಳು, ಅಲ್ಲವೇ? ಆ ಹೂವಿನ ವರ್ಣಸಂಯೋಜನೆಯೋ… ಆ ಹಕ್ಕಿಯ ಹಾಡಿನ ಮಾಧುರ್ಯವೋ… ಹಿಮತುಂಬಿದ ಶ್ವೇತಮಯ ಪರಿಸರವೋ… ಇಲ್ಲಿ ಎಲ್ಲವೂ ಪವಾಡ. ಇನ್ನೇನೆಂದು ಹೇಳಲಿ?”
ಯುವ ಶಿಷ್ಯ ಇಷ್ಟೆಲ್ಲ ವರ್ಣನೆ ಮಾಡುತ್ತಿರುವಾಗ, ಗುರು ಮೌನವಾಗಿ ಮುಂದೆ ಸಾಗುತ್ತಿದ್ದ. ನಿಸರ್ಗದ ಮನಮೋಹಕತೆಯನ್ನು ಮಾತಿಗಿಳಿಸುವುದರಲ್ಲಿ ಮುಳುಗಿದ್ದ ಶಿಷ್ಯ ಗುರುವಿನ ಮೌನವನ್ನು ಗಮನಿಸಲಿಲ್ಲ. ಕೊನೆಗೊಮ್ಮೆ ಗುರು ಏನೂ ಮಾತನಾಡುತ್ತಿಲ್ಲ ಎಂಬುದು ಶಿಷ್ಯನ ಗಮನಕ್ಕೆ ಬಂತು. “ನೀವೆನ್ನನ್ನುತ್ತೀರಿ ಗುರುಗಳೇ? ಈ ಪರ್ವತ, ಕಣಿವೆ, ಕಾಡು, ನದಿ, ಹೂಗಳು, ಹಕ್ಕಿಗಳು, ಬೆಳಗು ಎಲ್ಲವೂ ಪವಾಡ ಅಲ್ಲವೇ?” ಎಂದು ಕೇಳಿದ.
ವೃದ್ಧ ಗುರು ಈಗ ಶಿಷ್ಯನತ್ತ ತಿರುಗಿ ಉದ್ಗರಿಸಿದ, "ಹೌದು! ಅದು ಮಾತಿಗೆ ಮೀರಿದ್ದು. ಆದರೆ ನೀನು ಅದನ್ನೆಲ್ಲ ಬಾಯಿ ಬಿಟ್ಟು ಮಾತಿನಲ್ಲಿ ಹೇಳುತ್ತಿದ್ದಿಯಲ್ಲ!”