HRM

ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.”

“ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ, ತೆಗೆದುಕೋ” ಎಂದು ಕೈಯೆತ್ತಿ ಪೆಟ್ಟಿಗೆ ತೋರಿಸಿದ ಶಿಚಿರಿ, ಸೂತ್ರಗಳ ಪಠಣ ಮುಂದುವರಿಸಿದ.

ಕೆಲವು ನಿಮಿಷಗಳು ಸರಿದವು. ಶಿಚಿರಿ ತಲೆಯೆತ್ತಿ ಕಳ್ಳನನ್ನು ಉದ್ದೇಶಿಸಿ ಹೇಳಿದ, “ಎಲ್ಲಾ ಹಣ ತೆಗೆದುಕೊಳ್ಳಬೇಡ. ನಾಳೆ ಕಂದಾಯ ಕಟ್ಟಲಿಕ್ಕಿದೆ. ಸ್ವಲ್ಪ ಹಣ ಇಟ್ಟು ಹೋಗು.”

ಆ ಕಳ್ಳನಿಗೆ ಏನೆನ್ನಿಸಿತೋ! ಸ್ವಲ್ಪ ಹಣ ಪೆಟ್ಟಿಗೆಯಲ್ಲಿ ಉಳಿಸಿ, ಉಳಿದದ್ದನ್ನೆಲ್ಲ ತನ್ನ ಚೀಲಕ್ಕೆ ತುಂಬಿಸಿ ಹೊರಟ. ಆಗ ಶಿಚಿರಿ ಕೇಳಿದ, “ಎಂಥಾ ಮನುಷ್ಯನಯ್ಯಾ! ಉಡುಗೊರೆ ಕೊಟ್ಟವನಿಗೆ ನೀನು ಕೃತಜ್ನತೆ ಸಲ್ಲಿಸಬೇಕಲ್ಲವೇ?”

ಶಿಚಿರಿಯ ಉಡುಗೊರೆಗೆ ಧನ್ಯವಾದ ಹೇಳಿ ಕಳ್ಳ ಹೊರಟು ಹೋದ. ಕೆಲವು ದಿನಗಳ ನಂತರ ಬೇರೊಂದು ಕಡೆ ಕಳ್ಳತನ ಮಾಡುವಾಗ ಆತ ಪೊಲೀಸರಿಗೆ ಸಿಕ್ಕಿಬಿದ್ದ. ಶಿಚಿರಿಯ ಆಶ್ರಮದಲ್ಲಿ ಮಾಡಿದ ಕಳ್ಳತನದ ಸಹಿತ, ತನ್ನೆಲ್ಲ ಕಳ್ಳತನಗಳನ್ನು ತಿಳಿಸಿ, ತಪ್ಪೊಪ್ಪಿಕೊಂಡ. ಆ ಕಳ್ಳನ ವಿಚಾರಣೆಯ ಸಂದರ್ಭದಲ್ಲಿ ಶಿಚಿರಿಯನ್ನು ಸಾಕ್ಷಿಯಾಗಿ ಕರೆಸಲಾಯಿತು. ಕಳ್ಳನನ್ನು ಗುರುತಿಸಿದ ಶಿಚಿರಿ ಹೀಗೆಂದ, “ಈ ಮನುಷ್ಯ ನಮ್ಮ ಆಶ್ರಮದಲ್ಲಿ ಯಾವುದೇ ಕಳ್ಳತನ ಮಾಡಿಲ್ಲ. ಆ ದಿನ ಅವನಿಗೆ ನಾನೇ ಹಣ ಕೊಟ್ಟಿದ್ದೆ. ಅದಕ್ಕಾಗಿ ಅವನು ನನಗೆ ಧನ್ಯವಾದ ಹೇಳಿದ್ದ.”

ಅನಂತರ ಆ ಕಳ್ಳನಿಗೆ ಶಿಕ್ಷೆಯಾಯಿತು. ಜೈಲಿನಲ್ಲಿ ಶಿಕ್ಷೆಯ ಅವಧಿ ಮುಗಿದಾಗ ಕಳ್ಳನಿಗೆ  ಬಿಡುಗಡೆಯಾಯಿತು. ಅವನು ಅಲ್ಲಿಂದ ನೇರವಾಗಿ ಗುರು ಶಿಚಿರಿಯ ಆಶ್ರಮಕ್ಕೆ ಬಂದು ಅವರ ಶಿಷ್ಯನಾದ.

ಎಂಬತ್ತು ವರುಷ ವಯಸ್ಸಿನ ಕನ್‌ಫ್ಯೂಷಿಯನ್ ಪಂಡಿತನೊಬ್ಬ, ತಾನೆಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಭಾವಿಸಿದ್ದ.

ದೂರದ ರಾಜ್ಯದಲ್ಲಿ ಝೆನ್ ಗುರುವೊಬ್ಬರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಈ ಸಂಗತಿ ತಿಳಿದಾಗ, ಆತನ ಜ್ನಾನ ತನ್ನದಕ್ಕಿಂತ ಮಿಗಿಲಾದುದೇ ಎಂದು ಪರೀಕ್ಷಿಸಬೇಕೆಂಬ ತುಡಿತ ಬಲವಾಯಿತು ಪಂಡಿತನಲ್ಲಿ. ಕೊನೆಗೊಂದು ದಿನ ಆ ರಾಜ್ಯಕ್ಕೆ ಪ್ರಯಾಣ ಆರಂಭಿಸಿದ.

ಹಲವಾರು ದಿನಗಳು ನಡೆದು ಆ ರಾಜ್ಯ ತಲಪಿದ ಪಂಡಿತ. ಝೆನ್ ಗುರುಗಳನ್ನು ಕಂಡು, ತನ್ನ ಭೇಟಿಯ ಉದ್ದೇಶ ತಿಳಿಸಿದ. ತಾನು ಕಲಿತ ವಿಷಯಗಳನ್ನು ಝೆನ್ ಗುರುಗಳಿಗೆ ವಿವರಿಸಿದ. ಅದೆಲ್ಲವನ್ನೂ ಝೆನ್ ಗುರುಗಳು ಮೌನವಾಗಿ ಕೇಳಿದರು.

ಅನಂತರ, ವಯೋವೃದ್ಧ ಪಂಡಿತ ಕೇಳಿದ, “ನಿಮ್ಮ ಝೆನ್ ಧರ್ಮ ಏನು ಹೇಳುತ್ತದೆ. ವಿವರಿಸಿ ಹೇಳಿ.” ಕೆಲವು ಕ್ಷಣಗಳ ಮೌನದ ನಂತರ ಝೆನ್ ಗುರು ಹೇಳಿದ್ದು, “ಕೆಟ್ಟ ಕೆಲಸ ಮಾಡಬೇಡ, ಒಳ್ಳೆಯ ಕೆಲಸವನ್ನೇ ಮಾಡು. ಇದುವೇ ಬುದ್ಧನ ಉಪದೇಶ.”

ವಯೋವೃದ್ಧ ಪಂಡಿತ ಪೆಚ್ಚಾದ. ತೀವ್ರ ಅಸಮಾಧಾನದಿಂದ ಪಂಡಿತ ರೇಗಿದ, “ಇದೇನಿದು? ನಾನು ಎಂಬತ್ತು ವರುಷ ವಯಸ್ಸಿನ ಮುದುಕ. ಹಲವಾರು ದಿನ ಕಾಡುಮೇಡಿನಲ್ಲಿ ನಡೆದು ಬಂದಿದ್ದೇನೆ. ನಿನ್ನ ಧರ್ಮದ ಬಗ್ಗೆ ನನಗೆ ಇಷ್ಟೇ ಹೇಳಲಿಕ್ಕಿರುವುದೇ? ಇದನ್ನು ಮೂರು ವರುಷದ ಮಗು ಕೂಡ ಹೇಳುತ್ತದೆ.”

ಝೆನ್ ಗುರು ಶಾಂತಚಿತ್ತದಿಂದ ಉತ್ತರಿಸಿದರು, "ನಿಮಗೆ ಹಾಸ್ಯ ಮಾಡಬೇಕೆಂದು ನಾನು ಹಾಗೆ ಹೇಳಿದ್ದಲ್ಲ. ಮೂರು ವರುಷದ ಮಗುವೂ ನಾನು ಹೇಳಿದ್ದನ್ನೇ ಹೇಳುತ್ತದೆ ಅನ್ನೋದು ನಿಜ. ಆದರೆ, ಎಂಬತ್ತು ವರುಷದ ವಯೋವೃದ್ಧರೂ ಆ ಸರಳ ಹೇಳಿಕೆಯಂತೆಯೇ ಬದುಕಲಾಗದೆ ಸೋಲುತ್ತಾರೆ ಎಂಬುದೂ ನಿಜ.”

ಒಬ್ಬ ಝೆನ್ ಗುರುಗಳ ಬಳಿಗೆ ಕನ್‌ಫ್ಯೂಷಿಯನ್ ಪಂಡಿತನೊಬ್ಬ ಬಂದ. "ಕನ್‌ಫ್ಯೂಷಿಯನ್ ತತ್ವಗಳ ಅನುಸಾರ "ಮಾರ್ಗ" ಎಂದರೇನೆಂದು ತಿಳಿದುಕೊಂಡಿದ್ದೇನೆ. ಝೆನ್ ತತ್ವಗಳ ಅನುಸಾರ ಮಾರ್ಗ ಎಂದರೇನೆಂದು ತಿಳಿಯಲು ಬಂದಿದ್ದೇನೆ. ದಯವಿಟ್ಟು ತಿಳಿಸುವಿರಾ?" ಎಂದು ಝೆನ್ ಗುರುವನ್ನು ವಿನಂತಿಸಿದ.

ಝೆನ್ ಗುರುಗಳು ಪಂಡಿತನ ಕೆನ್ನೆಗೆ ಜೋರಾಗಿ ಒಂದೇಟು ಬಿಗಿದು, ಆತನನ್ನು ತಳ್ಳಿದರು. ಕೋಪದಿಂದ ಕುದಿದು ಹೋದ ಪಂಡಿತ ತನ್ನ ಸೊಂಟದ ಖಡ್ಗವನ್ನು ಹೊರಕ್ಕೆಳೆದು ಝಳಪಿಸಿದ. ಆ ಕ್ಷಣದಲ್ಲಿ ಭಿಕ್ಷುವೊಬ್ಬ ಪಂಡಿತನನ್ನು ಅಡ್ಡಗಟ್ಟಿ, ಅವನ ಕ್ರೋಧಕ್ಕೆ ಕಾರಣವೇನೆಂದು ಪ್ರಶ್ನಿಸಿದ. ಗುರುಗಳು ಕೆನ್ನೆಗೆ ಬಾರಿಸಿ ತಳ್ಳಿದ ಸಂಗತಿಯನ್ನು ಸಿಟ್ಟಿನಿಂದ ಕಂಪಿಸುತ್ತಲೇ ತಿಳಿಸಿದ ಪಂಡಿತ.

“ನನ್ನೊಂದಿಗೆ ಬಾ, ಚಹಾ ಕುಡಿಯೋಣ. ಅನಂತರ ಗುರುಗಳ ಕೋಪಕ್ಕೆ ಕಾರಣವೇನೆಂದು ಕೇಳೋಣ" ಎನ್ನುತ್ತಾ ಪಂಡಿತನನ್ನು ಪಕ್ಕದಲ್ಲಿದ್ದ ಚಹಾ ಕೋಣೆಗೆ ಕರೆದೊಯ್ದ ಭಿಕ್ಷು. ಪಂಡಿತನಿಗೆ ಚಹಾ ಬಟ್ಟಲನ್ನು ಕೊಟ್ಟು ಉಪಚರಿಸಿದ. ಪಂಡಿತ ಚಹಾ ಬಟ್ಟಲನ್ನೆತ್ತಿ ಇನ್ನೇನು ಚಹಾ ಕುಡಿಯಬೇಕು; ಆಗ ಪಂಡಿತನ ರಟ್ಟೆಗೆ ಒಂದೇಟು ನೀಡಿದ ಭಿಕ್ಷು. ಬಟ್ಟಲಿನಿಂದ ಚಹಾ ನೆಲಕ್ಕೆ ಚೆಲ್ಲಿತು. "ಕನ್‌ಫ್ಯೂಷಿಯನ್ ಮಾರ್ಗದ ಅರಿವು ನಿನಗಿದೆ ಎಂದೆಯಲ್ಲ. ಅದೇನೆಂದು ಈಗ ಹೇಳು” ಎಂದ ಭಿಕ್ಷು.

ಆ ಕ್ಷಣದಲ್ಲಿ ಪಂಡಿತನಿಗೆ ತಾನು ಕಲಿತದ್ದು ಯಾವುದೂ ನೆನಪಾಗಲಿಲ್ಲ. ಭಿಕ್ಷು ಸುಮ್ಮನಿರದೆ ಪಂಡಿತನ ರಟ್ಟೆಯನ್ನು ಮತ್ತೆಮತ್ತೆ ಅಲುಗಾಡಿಸುತ್ತಾ ಕೇಳಿದ, “ಹೇಳು, ಬೇಗ ಹೇಳು, ಆ ಮಾರ್ಗ ಯಾವುದು?" ಪಂಡಿತನಿಗೆ ಉತ್ತರಿಸಲಾಗಲೇ ಇಲ್ಲ.

ಆಗ, "ನಮ್ಮ ಮಾರ್ಗ ಯಾವುದೆಂದು ತಿಳಿಸಬೇಕೇನು?" ಎಂದು ಕೇಳುತ್ತಾ ಭಿಕ್ಷು, ನೆಲದಲ್ಲಿ ಚೆಲ್ಲಿದ್ದ ಚಹಾವನ್ನು ಬಟ್ಟೆಯಿಂದ ಒರಸ ತೊಡಗಿದ. ಅದನ್ನೆಲ್ಲ ಒರಸಿ ನೆಲ ಶುಚಿ ಮಾಡಿದ ನಂತರ ಭಿಕ್ಷು ಹೇಳಿದ, "ನೋಡಿದೆಯಾ? ಇದುವೇ ನಮ್ಮ ಮಾರ್ಗ."

ಆ ಕ್ಷಣದಲ್ಲಿ ಪಂಡಿತನಿಗಾಯಿತು ಜ್ನಾನೋದಯ.

ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.

ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು ಅಂತಿಮ ಸಂದೇಶ ನೀಡಿದರು: “ಹಲವಾರು ವರುಷಗಳಿಂದ ನೀವೆಲ್ಲ ನನ್ನ ಶಿಷ್ಯರಾಗಿದ್ದೀರಿ. ಈಗ ಹೇಳಿ ನೋಡೋಣ, ಝೆನ್ ಎಂದರೆ ಏನಂತ. ನಿಮ್ಮಲ್ಲಿ ಝೆನ್‌ನ ಸ್ಪಷ್ಟ ಅರ್ಥ ತಿಳಿಸುವವನೇ ಮುಂದಿನ ಗುರು. ಅವನಿಗೇ ಸಿಗುತ್ತದೆ ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾಪಾತ್ರೆ.”

ಅಲ್ಲಿ ಮೌನ ನೆಲೆಸಿತು. ಎಲ್ಲ ಶಿಷ್ಯರೂ ಗುರುಗಳ ಗಂಭೀರ ಮುಖ ನೋಡುತ್ತಾ ನಿಂತರು. ಅನೇಕ ವರುಷಗಳಿಂದ ಗುರುಗಳ ಜೊತೆಗಿದ್ದ ಎಂಕೋ ನಿಧಾನವಾಗಿ ಗುರುಗಳ ಹಾಸಿಗೆಯ ಬಳಿಗೆ ಬಂದ. ಔಷಧದ ಬಟ್ಟಲನ್ನು ಆತ ಗುರುಗಳೆಡೆಗೆ ಸರಿಸಿದ.

ಆಗ ಗುರುಗಳ ಮುಖಭಾವ ಕಠಿಣವಾಯಿತು. ಮೆಲುವಾದ ಸ್ವರದಲ್ಲಿ ಗುರುಗಳು ಪ್ರಶ್ನಿಸಿದರು, “ಇಷ್ಟೇ ಏನು ನಿನಗೆ ಅರ್ಥವಾಗಿದ್ದು?"

ಎಂಕೋ ಏನೂ ಉತ್ತರಿಸಲಿಲ್ಲ. ಆದರೆ ಔಷಧ ಬಟ್ಟಲನ್ನು ಹಿಂದಕ್ಕೆ ಸರಿಸಿದ. ಆಗ ಗುರುಗಳ ಮುಖದಲ್ಲಿ ಮೂಡಿತು ಮುಗುಳುನಗು - ಅದುವೇ ಅವರ ಬದುಕಿನ ಏಕೈಕ ನಗು. ಆ ಕ್ಷಣದಲ್ಲಿ ಮುಗುಳ್ನಗುತ್ತಾ ಗುರುಗಳು ನೀಡಿದ ಅಂತಿಮ ಸಂದೇಶ: “ಎಂತಹ ಮುಠ್ಠಾಳ ನೀನು! ಕಳೆದ ಹತ್ತು ವರುಷ ನನ್ನ ಜೊತೆಗಿದ್ದು ಕಲಿತರೂ ನನ್ನ ದೇಹದ ಬಗ್ಗೆ ನೀನು ಸರಿಯಾಗಿ ತಿಳಿದುಕೊಳ್ಳಲಿಲ್ಲ. ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾ ಪಾತ್ರೆ ತಗೋ, ಇನ್ನು ಅವು ನಿನ್ನವು.”

ಅದೊಂದು ದಿನ ರಾಜನಿಗೊಂದು ಅಭಿಲಾಷೆ ಉಂಟಾಯಿತು: ಝೆನ್ ತತ್ವಗಳ ಅನುಸಾರ ತೋಟವೊಂದನ್ನು ಬೆಳೆಸಬೇಕೆಂಬಾಶೆ.

ಆತ ಹೆಸರುವಾಸಿ ಝೆನ್ ಗುರುವನ್ನು ಭೇಟಿಯಾಗಿ ತನ್ನ ಅಭಿಲಾಷೆ ತಿಳಿಸಿದ. ಆ ಗುರುಗಳು ಈ ವಿಚಾರದಲ್ಲಿ ರಾಜನಿಗೆ ಮಾರ್ಗದರ್ಶನ ಮಾಡಲು ಸಮ್ಮತಿಸಿದರು. ವಿಶಾಲವಾದ ಜಮೀನನ್ನು ತೋಟ ಬೆಳೆಸಲಿಕ್ಕಾಗಿ ಗುರುತಿಸಿದ ರಾಜ. ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುಭವಿ ಕೆಲಸಗಾರರನ್ನು ಕರೆ ತಂದ. ದಿನದಿನವೂ ತೋಟಕ್ಕೆ ಬಂದು ಕೆಲವು ತಿಂಗಳು ಆ ಗುರುಗಳಿಂದ ಮಾರ್ಗದರ್ಶನ.

ತನ್ನ ಮಾರ್ಗದರ್ಶನದ ಅನುಸಾರವೇ ತೋಟ ಬೆಳೆಸಬೇಕೆಂಬುದು ಗುರುಗಳ ಷರತ್ತು. ತೋಟದಲ್ಲಿ ನೆಟ್ಟ ಗಿಡಗಳೆಲ್ಲ ಬೆಳೆಯ ತೊಡಗಿದವು. ಅವು ಬೆಳೆದು ಮರಗಳಾಗಲು ಮೂರು ವರುಷ ಕಾಯಬೇಕಾಗಿತ್ತು. ಹಾಗಾಗಿ, ಮೂರು ವರುಷಗಳ ನಂತರ ರಾಜನ ಝೆನ್ ತೋಟಕ್ಕೆ ಮರುಭೇಟಿ; ಆಗ ಗಿಡಗಳ ಬೆಳವಣಿಗೆಯ ಪರಿಶೀಲನೆ ಎಂಬುದಾಗಿ ಗುರುಗಳಿಂದ ರಾಜನಿಗೆ ಸಂದೇಶ.

ಮೂರು ವರುಷಗಳ ನಂತರ ತೋಟದ ಭೇಟಿಗೆ ದಿನ ನಿಗದಿ ಪಡಿಸಿ ಗುರುಗಳ ಆಗಮನ. ತೋಟದಲ್ಲಿ ಕಂಗೊಳಿಸುವ ಮರಗಳು. ಗುರುಗಳನ್ನು ತೋಟದ ಉದ್ದಗಲಕ್ಕೆ ಕರೆದೊಯ್ದು ಮರಗಳನ್ನು ತೋರಿಸಿದ ರಾಜ. ಆತನಿಗೆ ಗುರುಗಳ ಪ್ರತಿಕ್ರಿಯೆ ಏನಿರಬಹುದೆಂಬ ಆತಂಕ. ಗುರುಗಳ ಮುಖದಲ್ಲಿ ಮಂದಹಾಸ.

ಕೊನೆಗೆ ರಾಜನಿಗೆ ಗುರುಗಳು ಕೇಳಿದ ಪ್ರಶ್ನೆ: “ಅದ್ಯಾಕೆ, ಈ ತೋಟದಲ್ಲಿ ಎಲ್ಲಿಯೂ ಮರದಿಂದ ಉದುರಿ ಕೆಳಗೆ ಬಿದ್ದ ಎಲೆಗಳು ಕಾಣಿಸುತ್ತಿಲ್ಲ?”

ರಾಜ ನಿಧಾನವಾಗಿ ಉತ್ತರಿಸಿದ, "ಗುರುಗಳೇ, ತೋಟದಲ್ಲೆಲ್ಲ ಎಲೆಗಳು ಉದುರಿ ಬಿದ್ದಿದ್ದವು. ಆದರೆ ನೀವು ತೋಟವನ್ನು ಪರಿಶೀಲನೆ ಮಾಡಲು ಬರುವಾಗ ತೋಟ ಚಂದ ಕಾಣಬೇಕೆಂಬುದು ನನ್ನ ಇರಾದೆ. ಅದಕ್ಕಾಗಿ ತೋಟದ ಒಣ ಎಲೆಗಳನ್ನೆಲ್ಲ ಬಾಚಿ ಮೂಲೆಗೆ ಹಾಕಬೇಕೆಂದು ಕೆಲಸಗಾರರಿಗೆ ಹೇಳಿದ್ದೆ.”

ರಾಜನನ್ನು ನಖಶಿಖಾಂತ ನೋಡಿದ ಗುರುಗಳು, “ಮರಗಳಿಂದ ಉದುರಿದ ಆ ಎಲೆಗಳನ್ನು ತರಿಸಿ ತೋಟದಲ್ಲೆಲ್ಲ ಹಾಕಿಸು" ಎಂದರು. ಅಲ್ಲಿಂದ ನಿರ್ಗಮಿಸುತ್ತಾ ಗುರುಗಳು ರಾಜನಿಗಿತ್ತ ಆದೇಶ: “ಕಳೆದ ಮೂರು ವರುಷಗಳಲ್ಲಿ ಕಲಿಯಬೇಕಾದ್ದನ್ನು ನೀನು ಕಲಿತಿಲ್ಲ. ಇನ್ನು ನಿನ್ನ ಪರೀಕ್ಷೆ ಮೂರು ವರುಷಗಳ ನಂತರ. ಆಗ ನೋಡೋಣ."

ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು.

ಹಾಗಾಗಿ, ರುಚಿರುಚಿಯಾದ ಹಾಗೂ ಪುಷ್ಟಿಕರವಾದ ಅಡುಗೆ ಸಿದ್ಧಪಡಿಸಿ ಗುರು ಬಂಕೆಯವರಿಗೆ ಬಡಿಸಲಾಯಿತು. ತಮ್ಮ ಮುಂದೆ ತಂದಿಟ್ಟ ಆಹಾರವನ್ನು ನೋಡಿದ ಗುರು ಬಂಕೆಯವರು ದೈರ್ಯೋ ಅವರನ್ನು ಕರೆಯಿಸಿದರು. ತನಗೆ ಮಾತ್ರ ಯಾಕೆ ಒಳ್ಳೆಯ ಆಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಅದಕ್ಕೆ ದೈರ್ಯೋ ನೀಡಿದ ಉತ್ತರ: “ವಯೋವೃದ್ಧರಾದ ನಿಮಗೆ ಒಳ್ಳೆಯ ಆಹಾರ ಅಗತ್ಯ, ಗುರುಗಳೇ." ತಕ್ಷಣವೇ ಗುರು ಬಂಕೆಯವರು, “ಹಾಗಾದರೆ ಇದು ನನಗೆ ಬೇಡ" ಎಂದು ಆಹಾರವನ್ನು ನಿರಾಕರಿಸಿ, ತಮ್ಮ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡರು.

ಗುರು ಬಂಕೆಯವರ ಈ ಪ್ರತಿಕ್ರಿಯೆ ದೈರ್ಯೋ ಅವರ ದಿಕ್ಕೆಡಿಸಿತು. ಅವರು ಗುರುಗಳ ಕೋಣೆಯ ಬಾಗಿಲಿನ ಬಳಿಯೇ ಕುಳಿತುಕೊಂಡು, ಬಾರಿಬಾರಿ ಗುರುಗಳ ಕ್ಷಮೆ ಕೇಳಿದರು. ಆದರೆ ಗುರು ಬಂಕೆಯವರು ಕೋಣೆಯಿಂದ ಹೊರಗೆ ಬರಲೇ ಇಲ್ಲ.

ಹೀಗೆಯೇ ದಿನಗಳು ಸರಿದವು. ಒಂದು ವಾರವೇ ದಾಟಿತು. ಕೊನೆಗೊಬ್ಬ ಶಿಷ್ಯ ಗುರು ಬಂಕೆಯವರ ಕೋಣೆಯ ಬಾಗಿಲನ್ನು ಬಡಿದು ನಿವೇದಿಸಿದ: "ಗುರುಗಳೇ, ನೀವು ಹೇಳಿದ್ದು ಸರಿಯಾಗಿರಬಹುದು. ಆದರೆ ನಿಮ್ಮ ಕೋಣೆಯ ಬಾಗಿಲಿನೆದುರು ಒಂದು ವಾರದಿಂದ ಆಹಾರವಿಲ್ಲದೆ ಕುಳಿತಿದ್ದಾರಲ್ಲ ದೈರ್ಯೋ, ಅವರಿನ್ನು ಉಪವಾಸವಿರಲು ಸಾಧ್ಯವಿಲ್ಲ.”

ಆಗ ಗುರುಗಳು ಕೋಣೆಯ ಬಾಗಿಲು ತೆರೆದರು; ಅಲ್ಲೇ ಕುಳಿತಿದ್ದ ದೈರ್ಯೋ ಅವರನ್ನು ಉದ್ದೇಶಿಸಿ ಹೀಗೆಂದರು: "ನನ್ನ ಶಿಷ್ಯರು ತಿನ್ನುವ ಆಹಾರವನ್ನೇ ನನಗೂ ಬಡಿಸಬೇಕು. ನೀನೊಬ್ಬ ಗುರು ಆದಾಗಲೂ ಇದನ್ನು ನೆನಪಿಟ್ಟುಕೊಳ್ಳಬೇಕು.”

ಮೌನದ ಮಹತ್ತನ್ನು ತಿಳಿಸುವ ಝೆನ್ ಕತೆಯೊಂದು ಇಲ್ಲಿದೆ:

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ. ಅವನಿಗೊಬ್ಬನೇ ಮಗ. ಯುವರಾಜ ಅರುವತ್ತನಾಲ್ಕು ವಿದ್ಯೆಗಳನ್ನು ಕಲಿತು ಯೌವನಕ್ಕೆ ಕಾಲಿಟ್ಟ.

ತಾನು ರಾಜನಾಗಬೇಕು, ಸಿಂಹಾಸನದಲ್ಲಿ ಕೂರಬೇಕು ಎಂಬ ಆಶೆ ಯುವರಾಜನ ಮನದಲ್ಲಿ ಮೊಳೆಯಿತು. ಈ ಆಶೆ ದಿನದಿಂದ ದಿನಕ್ಕೆ ಬೆಳೆಯಿತು. ಯುವರಾಜ ಮುಂಚಿನಂತಿಲ್ಲ ಎಂಬುದನ್ನು ಮಹಾರಾಜ ಗಮನಿಸಿದ. ಬದುಕಿನಲ್ಲಿ ಹಣ್ಣಾದ ಮಹಾರಾಜನಿಗೆ ಎಲ್ಲವೂ ಅರ್ಥವಾಯಿತು. ಮಗನನ್ನು ಬಳಿಗೆ ಕರೆದು ಹೇಳಿದ, “ಯುವರಾಜಾ, ನನಗೆ ವಯಸ್ಸಾಯಿತು. ಬೇಗನೇ ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ. ಆದರೆ, ಅದಕ್ಕೂ ಮುಂಚೆ ನೀನು ದೂರದ ಕಾಡಿನಲ್ಲಿ ಆಶ್ರಮದಲ್ಲಿರುವ ನನ್ನ ಗುರುಗಳ ಆಶೀರ್ವಾದ ಪಡೆಯಬೇಕಾಗಿದೆ. ಅದಕ್ಕಾಗಿ ನಾಳೆಯೇ ಹೊರಡು.”

ಮರುದಿನ ಮುಂಜಾನೆ ಕುದುರೆಯೇರಿ ಹೊರಟ ಯುವರಾಜ. ದಿನವಿಡೀ ಪ್ರಯಾಣ ಮಾಡಿ ಸಂಜೆಯ ಹೊತ್ತಿಗೆ ಗುರುಗಳ ಆಶ್ರಮ ತಲಪಿದ. ಗುರುಗಳ ಪಾದಗಳಿಗೆ ಎರಗಿ, “ಗುರುಗಳೇ, ನನ್ನ ಅಪ್ಪ, ಮಹಾರಾಜರು ನಿಮ್ಮಲ್ಲಿಗೆ ನನ್ನನ್ನು ಕಳಿಸಿದ್ದಾರೆ. ನನಗೆ ಆಶೀರ್ವಾದ ಮಾಡಿ” ಎಂದ.

ತಕ್ಷಣ ಗುರುಗಳು, “ಆಗಲಿ ಯುವರಾಜಾ, ನನ್ನ ಆಶೀರ್ವಾದ ಬೇಕಾದರೆ ನೀನೊಂದು ಪರೀಕ್ಷೆ ಎದುರಿಸಬೇಕು. ಏಳು ದಿನ ಕಾಡಿನಲ್ಲಿ ಇರಬೇಕು. ಅಲ್ಲಿ ಏನೇನು ಸದ್ದುಗಳನ್ನು ಕೇಳಿದೆಯೆಂದು ಬಂದು ಹೇಳಬೇಕು. ಈಗಲೇ ಹೊರಡು” ಎಂದು ಆದೇಶವಿತ್ತರು.

ಇದೊಂದು ಹೊಸರೀತಿಯ ಪರೀಕ್ಷೆ ಎಂದುಕೊಳ್ಳುತ್ತಾ ಯುವರಾಜ ಕಾಡಿನೊಳಕ್ಕೆ ನಡೆದ. ಒಂದೊಂದು ದಿನವನ್ನು ಕಳೆಯುವುದೂ ಯುವರಾಜನಿಗೆ ದೊಡ್ಡ ಸವಾಲಾಯಿತು. ಅಲ್ಲಿ ಅರಮನೆಯಲ್ಲಿ ಹೊತ್ತುಹೊತ್ತಿಗೆ ಮೃಷ್ಟಾನ್ನ ಭೋಜನ. ಇಲ್ಲಿ ಕಾಡಿನಲ್ಲಿ ಯಾವುದೋ ಹಣ್ಣು, ಗೆಡ್ಡೆಗೆಣಸು. ಅರಮನೆಯಲ್ಲಿ ಮಲಗಲು ಸುಪ್ಪತ್ತಿಗೆ. ಇಲ್ಲಿ ಮರದ ರೆಂಬೆಗಳೇ ಗತಿ. ಅದಲ್ಲದೆ ಹುಲಿ ದಾಳಿ ಮಾಡಿದರೆ, ಹಾವು ಕಚ್ಚಿದರೆ, ಚೇಳು ಕುಟುಕಿದರೆ ಎಂಬ ಭಯ. ರುಚಿರುಚಿಯಾದ ಊಟವಿಲ್ಲದೆ, ಸೊಂಪಾದ ನಿದ್ದೆಯಿಲ್ಲದೆ ಏಳು ದಿನಗಳನ್ನು ಕಾಡಿನಲ್ಲಿ ಹೇಗೋ ಕಳೆದು ಯುವರಾಜ ಆಶ್ರಮಕ್ಕೆ ಹಿಂತಿರುಗಿದ. ಪುನಃ ಗುರುಗಳ ಪಾದಕ್ಕೆ ಬಿದ್ದು “ಗುರುಗಳೇ, ತಾವು ಹೇಳಿದಂತೆ ಏಳು ದಿನ ಕಾಡಿನಲ್ಲಿದ್ದೆ. ನನಗೆ ಆಶೀರ್ವಾದ ಮಾಡಿ” ಎಂದ.

“ಎದ್ದೇಳು ಯುವರಾಜಾ, ಕಾಡಿನಲ್ಲಿ ಏನೇನು ಸದ್ದು ಕೇಳಿದೆ ಹೇಳು” ಎಂದಾಗ, “ಅದೇ ಗುರುಗಳೇ, ಕಾಡಿನ ಸದ್ದುಗಳನ್ನು ಕೇಳಿದೆ” ಎಂಬ ಉತ್ತರ. ಈಗ ಗುರುಗಳ ನೇರ ಪ್ರಶ್ನೆ, “ಯುವರಾಜಾ, ಕಾಡಿನ ಸದ್ದುಗಳು ಎಂದರೇನು?”
ವಿಧಿಯಿಲ್ಲದೆ ಯುವರಾಜ ಉತ್ತರಿಸಿದ, “ಕಾಡಿನಲ್ಲಿ ನರಿ ಊಳಿಡುವುದನ್ನು ಕೇಳಿದೆ, ಆನೆ ಘೀಳಿಡುವುದನ್ನು ಕೇಳಿದೆ, ಹುಲಿ ಗರ್ಜಿಸುವುದನ್ನು ಕೇಳಿದೆ, ಕೋಗಿಲೆ ಕುಹೂ ಹಾಡುವುದನ್ನು ಕೇಳಿದೆ, ದೂರದಲ್ಲಿ ಜಿಂಕೆಗಳ ಹಿಂಡು ಓಡುವಾಗ, ಅವುಗಳ ಗೊರಸು ಕಲ್ಲುಗಳಿಗೆ ತಗಲಿದಾಗ ಠಣ್ಠಣ್ ಸದ್ದು ಕೇಳಿದೆ.”

ಗುರುಗಳು ಯುವರಾಜನನ್ನು ಎವೆಯಿಕ್ಕದೆ ನೋಡಿ ಹೇಳಿದರು, “ಯುವರಾಜಾ, ನೀನು ಕಾಡಿನಲ್ಲಿ ಕೇಳಬೇಕಾದ ಸದ್ದುಗಳು ಬಹಳಷ್ಟಿವೆ. ಇನ್ನೊಮ್ಮೆ ಕಾಡಿಗೆ ಹೋಗು. ಎರಡು ವಾರ ಅಲ್ಲಿದ್ದು ಹೊಸ ಸದ್ದುಗಳನ್ನು ಗಮನವಿಟ್ಟು ಕೇಳು. ಅನಂತರ ಬಂದು ಹೇಳು.”

ಪುನಃ ಕಾಡಿನೊಳಕ್ಕೆ ಹೋದ ಯುವರಾಜ. ಈಗೀಗ ಕಾಡಿನ ಬದುಕು ಅಭ್ಯಾಸವಾಗ ತೊಡಗಿತ್ತು. ಎರಡು ವಾರಗಳ ಬಳಿಕ ವಾಪಾಸು ಬಂದ. ಗುರುಗಳ ಅಡಿಗಳಿಗೆರಗಿ, “ಗುರುಗಳೇ, ಕಾಡಿನಲ್ಲಿ ಹೊಸ ಸದ್ದುಗಳನ್ನು ಕೇಳಿದೆ. ನನಗೆ ಆಶೀರ್ವಾದ ಮಾಡುತ್ತೀರಾ” ಎಂದು ವಿನಂತಿಸಿದ.

ಗುರುಗಳು ಮುಗುಳ್ನಗುತ್ತಾ, “ಎದ್ದೇಳು ಯುವರಾಜಾ, ಏನೇನು ಹೊಸ ಸದ್ದು ಕೇಳಿದೆ” ಎಂದು ಪ್ರಶ್ನಿಸಿದರು. ನಿಧಾನವಾಗಿ ಉತ್ತರಿಸಿದ ಯುವರಾಜ, “ಗುರುಗಳೇ, ಬಾಯಾರಿದಾಗ ನೀರು ಕುಡಿಯಲು ತೊರೆಯ ಬಳಿ ಹೋದಾಗ, ನೀರಿನಲ್ಲಿ ಮೀನು ಈಜುವ ಸದ್ದು ಕೇಳಿದೆ. ಅಮ್ಮ ಹಕ್ಕಿ ಮರಿ ಹಕ್ಕಿಗೆ ಗುಟುಕು ಕೊಡುವ ಸದ್ದು ಕೇಳಿದೆ.”

“ಪರವಾಗಿಲ್ಲ ಯುವರಾಜಾ, ಮತ್ತೇನು ಸದ್ದು ಕೇಳಿದೆ” ಎಂದು ಗುರುಗಳು ಹುರಿದುಂಬಿಸಿದಾಗ ಅವನ ಉತ್ತರ, “ಕಾಡಿನ ದಟ್ಟ ಕತ್ತಲಿನಲ್ಲಿ ಜೇಡವೊಂದು  ಬಲೆ ನೇಯುವ ಸದ್ದು ಕೇಳಿದೆ. ಎತ್ತರದ ಮರದ ತುತ್ತತುದಿಯಿಂದ ಹಣ್ಣಾದ ಎಲೆಯೊಂದು ಕಳಚಿಕೊಂಡು ಗಾಳಿಯಲ್ಲಿ ತೇಲುತ್ತಾ ಕೆಳಕ್ಕಿಳಿದು, ನೆಲಕ್ಕೆ ಅಪ್ಪಳಿಸುವ ಸದ್ದು ಕೇಳಿದೆ, ಗುರುಗಳೇ.”

ಈಗ, ಯುವರಾಜನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಗುರುಗಳ ಆದೇಶ, “ಯುವರಾಜಾ, ಕಾಡಿನಲ್ಲಿ ನೀನು ಕೇಳಲೇ ಬೇಕಾದ ಸದ್ದುಗಳು ಇನ್ನೂ ಎಷ್ಟೋ ಇವೆ. ನಿನಗಿದು ಕೊನೆಯ ಅವಕಾಶ. ಮತ್ತೊಮ್ಮೆ ಕಾಡಿಗೆ ಹೋಗು. ಒಂದು ತಿಂಗಳು ಅಲ್ಲಿದ್ದು ಬಾ. ಮೈಯೆಲ್ಲ ಕಿವಿಯಾಗಿ ಸದ್ದುಗಳನ್ನು ಕೇಳಿ, ಬಂದು ಹೇಳು.”

ಯುವರಾಜ ಸಣ್ಣಗೆ ನಡುಗಿದ. ಮಹಾರಾಜರು ಗುರುಗಳಿಗೇನಾದರೂ ಸಂದೇಶ ನೀಡಿದ್ದಾರೋ ಎಂಬ ಸಂಶಯ ಹುಟ್ಟಿಕೊಂಡಿತು. ಆದರೆ ರಾಜನಾಗುವ ಕನಸು ಬೆಚ್ಚಗಿತ್ತು. ಸಿಂಹಾಸನದ ಆಶೆ ಅವನನ್ನು ಕಾಡಿನೊಳಕ್ಕೆ ಸೆಳೆಯಿತು. ಕಾಡಿನಲ್ಲಿ ದಿನಗಳು ಉರುಳಿದಂತೆ, ಅಲ್ಲಿನ ಬದುಕು ಸಹ್ಯವಾಯಿತು. ಮನ ನಿರಾಳವಾಯಿತು. ಒಂದು ತಿಂಗಳ ನಂತರ, ಗುರುಗಳ ಆಶ್ರಮಕ್ಕೆ ಮರಳಿದ ಯುವರಾಜ. ಗುರುಗಳ ಪಾದಗಳಿಗೆ ಸಾಷ್ಟಾಂಗವೆರಗಿದ. ಅವನು ಈಗ ಏನೂ ಮಾತಾಡಲಿಲ್ಲ. ಅವನ ಮಾತು ಮುಗಿದಿತ್ತು.
ಸಮಯ ಸರಿಯುತ್ತಿತ್ತು. ಕೊನೆಗೆ ಗುರುಗಳೇ ಮಾತನಾಡಿದರು, “ಎದ್ದೇಳು ಯುವರಾಜಾ. ಒಂದು ತಿಂಗಳು ಕಾಡಿನಲ್ಲಿದ್ದಾಗ ಏನೇನು ಹೊಸ ಸದ್ದು ಕೇಳಿದೆ, ಹೇಳು.”

ಹಲವಾರು ನಿಮಿಷಗಳ ಬಳಿಕ ನಿಧಾನವಾಗಿ ಮಾತಿಗೆ ತೊಡಗಿದ ಯುವರಾಜ. “ಗುರುಗಳೇ, ಕಾಡಿನಲ್ಲಿ ನನಗಾದದ್ದು ಅದ್ಭುತ ಅನುಭವ. ಜೀವನದಲ್ಲಿ ಅಂತಹ ಸದ್ದುಗಳನ್ನೇ ನಾನು ಕೇಳಿರಲಿಲ್ಲ. ಮುಂಜಾನೆ ಆಕಾಶದಲ್ಲಿ ಸೂರ್ಯ ಮೇಲೇರುತ್ತಿದ್ದಂತೆ, ಅವನ ಕಿರಣಗಳು ಮರಗಳ ಎಲೆಗಳ ನಡುವೆ ತೂರಿಕೊಂಡು ಮಣ್ಣಿನ ಕಣಗಳನ್ನು ಸೀಳಿಕೊಂಡು ಹೋಗುವ ಸದ್ದು ಕೇಳಿದೆ.”

“ಮತ್ತೇನು ಸದ್ದು ಕೇಳಿದೆ” ಎಂದು ಗುರುಗಳು ಮೀಟಿದಾಗ, ಯುವರಾಜ ಕಣ್ಣು ಮುಚ್ಚಿ ತನ್ಮಯನಾಗಿ ಉತ್ತರಿಸಿದ, “ಒದ್ದೆ ಮಣ್ಣಿನಲ್ಲಿ ಬಿದ್ದ ಬೀಜವೊಂದು ಟಿಸಿಲ್ಲನೆ ಮೊಳಕೆಯೊಡೆಯುವ ಸದ್ದು ಕೇಳಿದೆ. ಗಿಡದಲ್ಲಿ ಮೊಗ್ಗೊಂದು ಅರಳಿ ಹೂವಾಗುವ ಸದ್ದು ಕೇಳಿದೆ. ಸೂರ್ಯ ಮೇಲೇರಿದಂತೆ, ಎಲೆಯ ಮೇಲಿದ್ದ ಇಬ್ಬನಿಯ ಹನಿಗಳು ಎಲೆಯ ತುದಿಗೆ ಜಾರಿ, ನೀರ ಬಿಂದುವಾಗಿ ಮಣ್ಣಿಗೆ ಬಿದ್ದು, ನೆಲದಾಳಕ್ಕೆ ಇಳಿಯುವ ಸದ್ದು ಕೇಳಿದೆ. ಗುರುಗಳೇ, ಮೌನದ ಸದ್ದು ಕೇಳಿದೆ.”

ಆಗ ಅಲ್ಲಿ ಕವಿದ ಮೌನವನ್ನು ಮುರಿಯುತ್ತಾ ಗುರುಗಳ ಉದ್ಗಾರ, “ಭೇಷ್, ಯುವರಾಜಾ ಭೇಷ್. ಸದ್ದಲ್ಲದ ಸದ್ದನ್ನು ಕೇಳಲು ಕಲಿತಿದ್ದಿ. ಇದೇ ರೀತಿಯಲ್ಲಿ ಮಾತಲ್ಲದ ಮಾತನ್ನು ಕೇಳಲು ಕಲಿತುಕೋ. ನಿನ್ನ ಪ್ರಜೆಗಳು ಬಾಯಿಬಿಟ್ಟು ಹೇಳದ್ದನು ಕೇಳಲು ಶುರು ಮಾಡು. ಹಾಗೆ ಕೇಳುತ್ತಾ ಕೇಳುತ್ತಾ ಚೆನ್ನಾಗಿ ರಾಜ್ಯಭಾರ ಮಾಡು. ನಿನಗೆ ನನ್ನ ಆಶೀರ್ವಾದ.”

ನಾವೆಲ್ಲರೂ ನೆಮ್ಮದಿಯ ಹುಡುಕಾಟದಲ್ಲಿದ್ದೇವೆ. ಬದುಕಿನಲ್ಲಿ ನೆಮ್ಮದಿ ಬೇಕಾದರೆ ಮೌನಕ್ಕೆ ಶರಣಾಗಬೇಕು. ನಾವು ಕೆಲಸ ಮಾಡುವಲ್ಲಿ ನಮ್ಮೊಂದಿಗೆ ಇರುವವರು ಬಾಯಿಬಿಟ್ಟು ಹೇಳದ್ದನ್ನು ಕೇಳಿದಾಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ ಮನೆಯವರೆಲ್ಲ ಬಾಯಿಬಿಟ್ಟು ಹೇಳದ್ದನ್ನು ಕೇಳಿದಾಗ ಮನೆಯಲ್ಲಿ ಶಾಂತಿ ಮನೆ ಮಾಡುತ್ತದೆ. ನಮ್ಮೊಳಗಿನ ಮೌನದಲ್ಲಿ ಚಿಮ್ಮುವ ಮಾತುಗಳಿಗೆ ಕಿವಿಗೊಟ್ಟಾಗ ನಮ್ಮ ಬದುಕಿನಲ್ಲಿ ನೆಮ್ಮದಿ ತುಂಬಿಕೊಳ್ಳುತ್ತದೆ, ಅಲ್ಲವೇ?   


 


ಮಕ್ಕಳ ಆಸಕ್ತಿ ಏನೆಂದು ತಿಳಿದರೆ, ಮಕ್ಕಳಿಗೆ ಶಾಲಾ ಪಾಠಗಳಲ್ಲಿ ಆಸಕ್ತಿ ಕುದುರಿಸಲು ಸಾಧ್ಯ - ಚಿಟ್ಟೆಗಳ ಕುರಿತು ಮಾತಾಡುತ್ತಾ ಶಿಕ್ಷಕಿಯೊಬ್ಬರು ಬಾಲಕಿಗೆ ಗಣಿತ ಕಲಿಸಿದಂತೆ.

ಆಕೆ ಮಕ್ಕಳ ಅಚ್ಚುಮೆಚ್ಚಿನ ಗಣಿತ ಟೀಚರ್. ಒಬ್ಬ ತಾಯಿ ಗಣಿತದಲ್ಲಿ ಫೇಲಾದ ತನ್ನ ಮಗಳನ್ನು ಇವರ ಬಳಿ ಕರೆ ತರುತ್ತಾಳೆ. "ಹೇಗಾದರು ಮಾಡಿ ಇವಳಿಗೆ ಗಣಿತ ಕಲಿಸಿ" ಎಂದು ವಿನಂತಿಸುತ್ತಾಳೆ.

ಕೂಡಲೇ ಏಳನೇ ಕ್ಲಾಸಿನ ಆ ಬಾಲಕಿಯೊಂದಿಗೆ ಗಣಿತ ಟೀಚರ್ ಮತುಕತೆ ಶುರುವಿಟ್ಟರು. ಒಂದು ತಾಸು ಮಾತಾಡಿದಾಗ ಟೀಚರ್ಗೆ ಅರ್ಥವಾಗಿತ್ತು, ಆ ಬಾಲಕಿಗೆ ಚಿಟ್ಟೆಗಳೆಂದರೆ ಪಂಚಪ್ರಾಣ; ಚಿಟ್ಟಿಗಳ ಬಗ್ಗೆ ಸಾಕಷ್ಟು ತಿಳಿದಿದ್ದಾಳೆ ಬಾಲಕಿ. "ನಾಳೆ ಬಾ, ಚಿಟ್ಟೆಗಳ ವಿಷಯ ಇನ್ನಷ್ಟು ಹೇಳು ನಂಗೆ" ಎನ್ನುತ್ತಾ ಗಣಿತ ಟೀಚರ್ ಪ್ರಥಮ ದಿನದ ಕ್ಲಾಸ್ ಮುಗಿಸಿದಾಗ ಬಾಲಕಿಗೆ ಅಚ್ಚರಿ. ಯಾಕೆಂದರೆ ಅವರು ಗಣಿತದ ಬಗ್ಗೆ ಏನೂ ಮಾತಾಡಿರಲಿಲ್ಲ!

ಎರಡನೇ ದಿನವೂ ಅದೇ ಕತೆ. ಗಣಿತ ಟೀಚರ್ ಚಿಟ್ಟಿಗಳ ವಿಷಯವನ್ನೇ ಕೇಳಿದರು ವಿನಃ ಗಣಿತದ ಬಗ್ಗೆ ಚಕಾರ ಎತ್ತಲಿಲ್ಲ. ನಿಧಾನವಾಗಿ ಬಾಲಕಿಯ ಆತ್ಮವಿಶ್ವಾಸ ಹೆಚ್ಚುತ್ತಿತ್ತು. "ನಾನೂ ಕಲಿತಿದ್ದೇನೆ, ಚಿಟ್ಟೆಗಳ ವಿಷಯ ಬಹಳಷ್ಟು ಕಲಿತಿದ್ದೇನೆ, ನಮ್ಮ ಊರಿನ ಹೆಸರುವಾಸಿ ಗಣಿತ ಟೀಚರ್ಗೆ ಕಲಿಸುವಷ್ಟು ಕಲಿತಿದ್ದೇನೆ" ಎಂಬ ಭಾವ ಬಲಿಯುತ್ತಿತ್ತು ಅವಳಲ್ಲಿ.

ಮರುದಿನ ಆ ಬಾಲಕಿ ತಂದಳು ತನ್ನ ಚಿಟ್ಟೆಗಳ ಸಂಗ್ರಹವನ್ನು - ಗಣಿತ ಟೀಚರ್ಗೆ ಚಿಟ್ಟೆ ಕ್ಲಾಸ್ ಮಾಡಲಿಕ್ಕಾಗಿ. ಅವರು ಆ ಚಿಟ್ಟೆಗಳನ್ನು ಮಗುವಿನ ಕುತೂಹಲದಿಂದ ನೋಡಿದರು. ಮತ್ತೆಮತ್ತೆ ಬಾಲಕಿಯ ಜೊತೆ ಪ್ರಶ್ನೆ ಕೇಳಿ ತಿಳಿದುಕೊಂಡರು. ಅನಂತರ ಚಿಟ್ಟೆಗಳ ರೆಕ್ಕೆಗಳ ಆಕಾರದ ಬಗ್ಗೆ ಮಾತಾಡಿದರು. ತ್ರಿಕೋನ, ಆಯತ, ವೃತ್ತ - ಇವುಗಳ ಸಂಖ್ಯೆ, ಆ ಸಂಖ್ಯೆಗಳ ಸಂಬಂಧ ವಿವರಿಸಿದರು. ಅದಾದ ಬಳಿಕ ಬಳಿಕ ಗಣಿತ ಟೀಚರ್ ಹೇಳಿದ್ದು ಚಿಟ್ಟೆಗಳ ಹಾರಾಟ ಪಥವನ್ನು ಹೋಲುವ ಜ್ಯಾಮಿತಿಯ ಆಕೃತಿಗಳ ಬಗ್ಗೆ. ಅವರೀಗ ಗಣಿತದ ಪಾಠವನ್ನೇ ಮಾಡುತ್ತಿದ್ದರು. ಆದರೆ ಆ ಬಾಲಕಿಗೆ ಅದು ಗಣಿತದ ಪಾಠ ಅನ್ನಿಸಲೇ ಇಲ್ಲ. ಅವಳ ಪ್ರಕಾರ ಅದು ಚಿಟ್ಟೆಗಳ ಪಾಠ. ಗಣಿತದ ಪಾಠ ಅವಳಿಗೆ ಇಷ್ಟವಾದ ಚಿಟ್ಟೆಗಳ ಪಾಠವಾಗಿ ಪರಿವರ್ತನೆ ಆಗಿತ್ತು - ಗಣಿತ ಟೀಚರರ ಜಾಣತನದಿಂದಾಗಿ.

ಈ ರೀತಿ ಮಕ್ಕಳಿಗೆ ಆಸಕ್ತಿ ಇರುವ ವಿಷಯದಿಂದ ಶುರು ಮಾಡಿ, ಅವರಿಗೆ ಕಷ್ಟವೆನೆಸುವ ವಿಷಯದತ್ತ ಕಲಿಕೆ ತಿರುಗಿಸಲು ಸಾಧ್ಯವಿದೆ. ಹೀಗೆ ಮಾಡಿದರೆ ತಮ್ಮ ಕಲಿಕಾ ಸಾಮರ್ಥ್ಯದ ಬಗ್ಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಆಗ ಅವರಿಗೆ ಟ್ಯೂಷನ್ನ ಅಗತ್ಯ ಇರಲಾರದು.

೩ ತಾಸು ಮಗುವೇ ಮಾತಾಡಿದ್ದು:     ಜಪಾನಿನ ಪುಟ್ಟ ಬಾಲಕಿ ತೊತ್ತೊಚಾನ್. ಸುಮಾರು ಎಂಟು ವರುಷ ವಯಸ್ಸಿನಲ್ಲಿ ಅವಳನ್ನು ಶಾಲೆಯಿಂದ ಕಿತ್ತು ಹಾಕುತ್ತಾರೆ - ಅವಳು ತುಂಟಿ, ಸರಿಯಾಗಿ ಪಾಠ ಕಲಿಯುತ್ತಿಲ್ಲ ಎಂಬ ಕಾರಣಕ್ಕಾಗಿ.

ಅವಳ ತಾಯಿಗೆ ಚಿಂತೆಯೋ ಚಿಂತೆ. ಮರುದಿನ ಮಗಳನ್ನು ಊರಿನ ಹೊರವಲಯದ ಶಾಲೆಗೆ ಕರೆದೊಯ್ಯುತ್ತಾಳೆ. ಕಟ್ಟಡಗಳಿಲ್ಲದ ಆ ಶಾಲೆ ಕಂಡು ತೊತ್ತೊಚಾನ್ಗೆ ಖುಷಿಯೋ ಖುಷಿ. ಅಲ್ಲಿ ತರಗತಿ ಕೋಣೆಗಳೆಂದರೆ ಹಳೆಯ ರೈಲ್ವೇ ವ್ಯಾಗನ್ಗಳು.

ಆ ಶಾಲೆಯ ಹೆಡ್ಮಾಸ್ಟರ್ಗೆ ಅಮ್ಮ ಎಲ್ಲ ಸಂಗತಿ ನಿವೇದಿಸುತ್ತಾಳೆ. ಹೆಡ್ಮಾಸ್ಟರ್ ಕೇಳುತ್ತಾರೆ, "ಅವಳೇನು ತುಂಟತನ ಮಾಡುತ್ತಿದ್ದಳು?" ಅಮ್ಮ ಉತ್ತರಿಸುತ್ತಾಳೆ, "ಅವಳ ಶಾಲೆಯ ಪಕ್ಕದಲ್ಲಿ ರಸ್ತೆ. ಆ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ಒಂದು ಬ್ಯಾಂಡ್ ತಂಡವು ಬ್ಯಾಂಡ್ ಬಾರಿಸುತ್ತಾ ಹೋಗುತ್ತಿತ್ತು. ಇವಳು ಬೆಂಚಿನಿಂದ ಎದ್ದು ಅದನ್ನು ನೋಡುತ್ತಾ ನಿಲ್ಲುತ್ತಿದ್ದಳು."

ಇದನ್ನು ಕೇಳಿ ಮುಗುಳ್ನಕ್ಕ ಹೆಡ್ಮಾಸ್ಟರ್, ಅಮ್ಮನಿಗೆ ಮನೆಗೆ ಹಿಂತಿರುಗಲು ಹೇಳುತ್ತಾರೆ. ಅನಂತರ ತನ್ನೆದುರು ಕೂತಿದ್ದ ತೊತ್ತೊಚಾನ್ಗೆ ಒಂದು ಪ್ರಶ್ನೆ ಕೇಳುತ್ತಾರೆ, "ಮಗೂ, ನಿನಗೇನು ಇಷ್ಟ?" ಪಟಪಟನೆ ಮಾತು ಶುರು ಮಾಡುತ್ತಾಳೆ ತೊತ್ತೊಚಾನ್. ಮಧ್ಯಾಹ್ನದ ಊಟದ ಬಿಡುವಿನ ತನಕ ತೊತ್ತೊಚಾನ್ ಮಾತನಾಡುತ್ತಲೇ ಇರುತ್ತಾಳೆ; ಹೆಡ್ಮಾಸ್ಟರ್ ತದೇಕಚಿತ್ತದಿಂದ ಕೇಳುತ್ತಲೇ ಇರುತ್ತಾರೆ - ೩ ತಾಸುಗಳ ಅವಧಿ.

ಅಬ್ಬ, ಎಂಥ ತಾಳ್ಮೆ! ತೊತ್ತೊಚಾನ್ಗೆ ಎಂಥ ಸಂದೇಶ! ಅವಳ ಕೀಳರಿಮೆ ಎಲ್ಲವೂ ಆ ದಿನ ನಾಶವಾಯಿತು. ಅದನ್ನು ಸಾಧಿಸಿದವರು ಆ ಹೆಡ್ಮಾಸ್ಟರ್ - "ಮಗೂ, ಈ ದಿನ ಈ ಪ್ರಪಂಚದಲ್ಲಿ ನೀನು ನನ್ನ ಪಾಲಿಗೆ ಎಲ್ಲರಿಗಿಂತ ಮುಖ್ಯ ವ್ಯಕ್ತಿ" ಎಂಬ ಸಂದೇಶ ನೀಡುತ್ತಾ. ಆ ಪರಿಯಲ್ಲಿ ಅವಳ ಜೀವಮಾನಕ್ಕೆ ಸಾಕಾಗುವಷ್ಟು ಆತ್ಮವಿಶ್ವಾಸ ತುಂಬಿದರು ಅವರು.

ಕುಣಿಯಲು ಗೊತ್ತಿಲ್ಲದವರು:     "ಕುಣಿಯಲು ಗೊತ್ತಿಲ್ಲದವನು ರಂಗಸ್ಥಳ ಓರೆ (ಸರಿಯಾಗಿಲ್ಲ) ಎಂದನಂತೆ" ಎಂಬ ಗಾದೆ ಮಾತು ನಮಗೆಲ್ಲ ಗೊತ್ತು. ಆದರೆ ಮಕ್ಕಳಲ್ಲಿ ಈ ಪ್ರವೃತ್ತಿ ಬೆಳೆಯಲು
ಹೆತ್ತವರು ಎಷ್ಟರ ಮಟ್ಟಿಗೆ ಕಾರಣರು?

ಹೊಟ್ಟೆ ತೆವಳಿಕೊಂಡು ಸಾಗುವ ಮಗು ಕೈ ಊರಿ ಎದ್ದು ನಡೆಯಲು ಕಲಿಯುವ ಸನ್ನಿವೇಶ ನೆನಪು ಮಾಡಿಕೊಳ್ಳಿರಿ. ಅಂಥ ಮಗು ಆಯ ತಪ್ಪಿ ಬಿದ್ದು, ಮುಖ ನೆಲಕ್ಕೆ ಜಜ್ಜಿ, ರಕ್ತ ಜಿನುಗುವಾಗ ಅತ್ತು ರಂಪ ಮಾಡುವುದು ಸಹಜ. ಆಗ ಎಷ್ಟು ಮುದ್ದು ಮಾಡಿದರೂ ಮಗು ಅಳು ನಿಲ್ಲಿಸುವುದಿಲ್ಲ. ಆ ಕ್ಷಣದಲ್ಲಿ ಹೆತ್ತವರು ಏನು ಮಾಡುತ್ತಾರೆ? ಮಗುವಿನ ಅಮ್ಮ ಅಥವಾ ಅಪ್ಪ ತಟಕ್ಕನೆ ಕೈಯಿಂದ ನೆಲಕ್ಕೆ ಬಡಿದು ಹೀಗೆನ್ನುತ್ತಾರೆ, "ಅಬ್ಬ ನೆಲವೇ! ನನ್ನ ಮಗೂನ್ನ ಬೀಳಿಸಿ ಬಿಟ್ಟಿತು. ಈ ನೆಲದ್ದೇ ತಪ್ಪು. ಏಟು ಕೊಟ್ಟೆ ನೋಡು. ನೀನಿನ್ನು ಅಳಬೇಡ". ಆಗ ಮಗುವಿನ ಗಮನ ಗಾಯದ ನೋವಿನಿಂದ ಬೇರೆಡೆ ತಿರುಗಿ ಮಗು ಅಳು ನಿಲ್ಲಿಸಬಹುದು. ಆದರೆ ಮಗುವಿಗೆ ಸಿಗುವ ಸಂದೇಶ ಏನು? "ತಪ್ಪು ತನ್ನದೇ ಆಗಿದ್ದರೂ ಅದಕ್ಕಾಗಿ ಬೇರೆ ವಸ್ತು ಅಥವಾ ವ್ಯಕ್ತಿಯನ್ನು ದೂಷಿಸುವುದು ಸರಿ". ಇದು ಆತ್ಮವಿಶ್ವಾಸ ಬೆಳೆಯಲು ಸಹಾಯಕವೇ?

ಚಾಲಕ ಪರವಾನಗಿ - ಆತ್ಮವಿಶ್ವಾಸದ ಪರೀಕ್ಷೆ:     ನನ್ನ ಮಗಳಿಗೆ ೧೮ ವರುಷ ಆದಾಗ ದ್ವಿಚಕ್ರ ವಾಹನದ ಚಾಲಕ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಅರ್ಜಿ ಬರೆದಳು. ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ಟಿಓ) ಕೊಟ್ಟಳು. ಅಲ್ಲಿದ್ದ ಅಧಿಕಾರಿ ಅರ್ಜಿಯ ಮೇಲೆ ಕಣ್ಣಾಡಿಸಿ ಕೇಳಿದ್ದೇನು? "ನೀನು ಕನ್ನಡಕ ಹಾಕಿಕೊಂಡಿದ್ದಿ. ನಿನಗೆ ಕಣ್ಣು ಸರಿಯಾಗಿ ಕಾಣಿಸುತ್ತದೇನು? ರೇರ್-ವಿವ್ ಮಿರರ್ನಲ್ಲಿ ಹಿಂದಿನ ವಾಹನ ನಿನಗೆ ಕಾಣಲಾದೀತೇ?" ಮಾತ್ರವಲ್ಲ, ರೇಷನ ಕಾರ್ಡಿನಲ್ಲಿ ಅವಳ ಹೆಸರು ತಪ್ಪಾಗಿ ಮುದ್ರಿತವಾದ ಬಗ್ಗೆ ತಗಾದೆ ಎತ್ತಿ, ಅವಳ ಅರ್ಜಿಯನ್ನು ತಿರಸ್ಕರಿಸಿದರು.

ಮನೆಗೆ ನಿರಾಶಳಾಗಿ ಮರಳಿದ ಅವಳಿಗೆ "ಹೀಗೆಹೀಗೆ ಮಾಡು, ಹೀಗೆಹೀಗೆ ಮಾತಾಡು" ಎಂದು ತಿಳಿಸಿದೆ. "ಅದೇ ಅಧಿಕಾರಿ ನಿನ್ನ ಅರ್ಜಿಯನ್ನು ಪರೀಕ್ಷೆಗೆ ಶಿಫಾರಸ್ ಮಾಡಿಯೇ ಮಾಡುತ್ತಾರೆ - ಅದೂ ಇನ್ನು ಒಂದು ಗಂಟೆಯೊಳಗೆ, ನೀನೇ ನೋಡು" ಎಂದು ಹುರಿದುಂಬಿಸಿದೆ.

ಅನಂತರ ಅವಳು ಎಸ್ಎಸ್ಎಲ್ಸಿ ಸರ್ಟಿಫಿಕೇಟಿಗೆ ಒಬ್ಬರು ನೋಟರಿಯ ಸಹಿ ಪಡೆದುಕೊಂಡಳು. ಈ ದಾಖಲೆಯೊಂದಿಗೆ ಅದೇ ಅಧಿಕಾರಿಯ ಎದುರು ನಿಂತು ಪುನಃ ಅರ್ಜಿ ನೀಡಿದಳು. "ಪುನಃ ಯಾಕೆ ಬಂದದ್ದು?" ಎಂದವರು ಕೇಳಿದಾಗ, ಎಸ್ಎಸ್ಎಲ್ಸಿ ಸರ್ಟಿಫಿಕೇಟಿನ ಯಥಾಪ್ರತಿ ತೋರಿಸಿದಳು; ಅರ್ಜಿಯಲ್ಲಿ  ಬರೆದಿರುವುದೇ ನನ್ನ ಸರಿಯಾದ ಹೆಸರು ಎಂಬುದಕ್ಕೆ ಇದು ಪುರಾವೆ ಎಂದಳು. ಅಧಿಕಾರಿ ಮುಗುಮ್ಮಾಗಿ "ಇದು ಆಗೋದಿಲ್ಲ" ಎಂದಾಗ ಅವಳ ಉತ್ತರ, "ಯಾಕೆ ಆಗೋದಿಲ್ಲ? ನೋಟರಿ ಸಹಿ ಹಾಕಿದ ಸರ್ಟಿಫಿಕೇಟ್ ನೀವು ಒಪ್ಪೋದಿಲ್ಲ ಎಂದು ಬರೆದು ಕೊಡಿ".

ಆಗ ಅಧಿಕಾರಿ ತಾತ್ಕಾಲಿಕ ರೇಷನ್ ಕಾರ್ಡಿನಲ್ಲಿ ಹೆಸರು ತಪ್ಪಾಗಿರುವುದನ್ನು ಸರಿಪಡಿಸಬೇಕೆಂದು ತಕರಾರು ತೆಗೆದರು. "ಅದು ತಪ್ಪು ಮಾಡಿದ್ದು ಕರ್ನಾಟಕ ಸರಕಾರದ ಇನ್ನೊಂದು ಇಲಾಖೆಯವರು. ಅದಕ್ಕೆ ನಾನು ಜವಾಬ್ದಾರಿ ಅಲ್ಲ. ಆ ತಪ್ಪನ್ನು ಸರಿಪಡಿಸಬೇಕೆಂದು ಪತ್ರ ಕೊಟ್ಟು ಒಂದು ವರ್ಷ ದಾಟಿದೆ. ಇಲ್ಲಿ ನೋಡಿ" ಎಂದು ಅದನ್ನೂ ತೋರಿಸಿದಳು. ಈಗ ಆ ಅಧಿಕಾರಿಗೆ ಇನ್ಯಾವುದೇ ತಕರಾರು ತೆಗೆಯಲು ಸಾಧ್ಯವಾಗಲಿಲ್ಲ. ಕಣ್ಣಿನ ದೃಷ್ಟಿ ಬಗ್ಗೆ ಆಸಾಮಿ ತುಟಿ ಪಿಟಕ್ಕೆನ್ನಲಿಲ್ಲ. (ಯಾಕೆಂದರೆ ಕಣ್ಣಿನ ದೃಷ್ಟಿ ಬಗ್ಗೆ ಪರೀಕ್ಷೆ ಮಾಡಬೇಕಾದವರು ಆರ್ಟಿಓ ಅಧಿಕಾರಿಗಳಲ್ಲ, ಕಣ್ಣಿನ ವೈದ್ಯರು) ಒಂದು ತಾಸಿನ ಮುಂಚೆ ತಿರಸ್ಕರಿಸಿದ ಅರ್ಜಿಯನ್ನೇ ಈಗ ಪರೀಕ್ಷೆಗೆ ಶಿಫಾರಸ್ ಮಾಡಿದರು.

ಹೆತ್ತವರು ಹೇಳಿದ್ದನ್ನು ಮಕ್ಕಳು ಕಲಿಯಲಿಕ್ಕಿಲ್ಲ, ಆದರೆ ಹೆತ್ತವರು ಮಾಡುವುದನ್ನು ಅನುಸರಿಸುತ್ತಾರೆ. ಅದಕ್ಕಾಗಿ ಹೆತ್ತವರು ಮಕ್ಕಳಿಗೆ ಹೇಗೆ ಮಾದರಿ ಆಗಬೇಕು ಎಂಬುದಕ್ಕೆ ನಿದರ್ಶನಗಳು ಇಲ್ಲಿರುವ ಪ್ರಕರಣಗಳು. ಮಕ್ಕಳನ್ನು ಆತ್ಮವಿಶ್ವಾಸ ತುಂಬಿದ ವ್ಯಕ್ತಿಗಳನ್ನಾಗಿ ರೂಪಿಸುವ ಆಯ್ಕೆ ಹೆತ್ತವರ ಕೈಯಲ್ಲೇ ಇದೆ. ಮಕ್ಕಳನ್ನು ಆ ರೀತಿ ಬೆಳೆಸಲು ಹೆತ್ತವರು ಕಲಿಯೋಣ.  

     
 


ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು ಗಮನಿಸೋಣ.

ತಪ್ಪುಗಳಿಂದ ಕಲಿಯುವುದು:      ಆರು ವರುಷಗಳ ಪುಟ್ಟ ಹುಡುಗಿ ಫ್ರಿಜ್‍ನಿಂದ ಜ್ಯೂಸಿನ ಬಾಟಲಿ ಹೊರ ತೆಗೆಯುತ್ತಿದ್ದಳು. ಅದು ಕೈಜಾರಿ ಬಿದ್ದು ಒಡೆಯಿತು. ಜ್ಯೂಸ್ ನೆಲಕ್ಕೆ ಚೆಲ್ಲಿತು. ಅಮ್ಮನಿಂದ ಬಯ್ಗುಳದ ಸುರಿಮಳೆ ನಿರೀಕ್ಷಿಸುತ್ತ ನಿಂತಿದ್ದ ಆ ಬಾಲಕಿಗೆ ಅಚ್ಚರಿ ಕಾದಿತ್ತು.

ಅವಳ ಅಮ್ಮ ಮಗಳ ಮೈದಡವಿ ಶಾಂತಚಿತ್ತದಿಂದ ಕೇಳಿದಳು, "ಜ್ಯೂಸ್ ಚೆಲ್ಲಿ ಹೋಯಿತಾ? ಹೋಗಲಿ ಬಿಡು, ಈಗ ಏನು ಮಾಡೋಣ?" ("ಈಗ ಏನು ಮಾಡುತ್ತೀ?" ಎಂದು ಅಮ್ಮ ಕೇಳಲಿಲ್ಲ) "ನೀನೀಗ ಒಂದು ಹೊಸ ಆಡಬಹುದು. ಒಂದು ಕಡ್ಡಿ ತಗೋ. ನೆಲಕ್ಕೆ ಚೆಲ್ಲಿದ ಜ್ಯೂಸಿನಲ್ಲಿ ಕಡ್ಡಿ ಆಡಿಸ್ತಾ ಒಂದಷ್ಟು ಹೊತ್ತು ಆಡಿಕೋ" ಎನ್ನುತಾ ಅಮ್ಮ ಅತ್ತ ಹೋದಳು.

ಪುಟ್ಟ ಹುಡುಗಿ ಉಸಿರೆಳೆದು ಕೊಂಡಳು. ಅಮ್ಮ ಹೇಳಿದ್ದನ್ನು ನಂಬಲು ಅವಳಿಗೆ ಕೆಲವು ನಿಮಿಷಗಳೇ ತಗಲಿದವು. ಒಂದು ಕಡ್ಡಿ ತಂದು ನಿಧಾನವಾಗಿ ಹೊಸ ಆಟಕ್ಕಿಳಿದಳು. ಹತ್ತು ನಿಮಿಷಗಳಲ್ಲಿ ಇತ್ತ ಬಂದ ಅಮ್ಮ ಕೇಳಿದಳು, "ಹೇಗಿತ್ತು ಹೊಸ ಆಟ? ಚೆನ್ನಾಗಿತ್ತು ಅಲ್ಲವೇ? " ಈಗ ಮಗಳ ಆತಂಕವೆಲ್ಲ ಮಾಯ.

ಮಗಳು ಮುಗುಳ್ನಗುತ್ತಿದ್ದಂತೆ ಅಮ್ಮ ಹೇಳಿದಳು, "ಇದನ್ನೆಲ್ಲ ತೆಗೆಯೋಣ ಬಾ. ನಂಗೆ ಸ್ವಲ್ಪ ಸಹಾಯ ಮಾಡು. ಕಸಬರಿಕೆ ತಾ. ನೆಲ ಒರಸುವ ಬಟ್ಟೆ ತಾ. ಕಸಬರಿಕೆಯಿಂದ ಮೊದಲು ಜೋಪಾನವಾಗಿ ಗ್ಲಾಸಿನ ಚೂರು ತೆಗೆಯೋಣ. ಅನಂತರ ಚೆಲ್ಲಿದ ಜ್ಯೂಸನ್ನು ಬಟ್ಟೆಯಿಂದ ಒರಸೋಣ". ಅದೇ ರೀತಿಯಲ್ಲಿ, ಅಮ್ಮ-ಮಗಳು ಸೇರಿ ನೆಲ ಶುಚಿ ಮಾಡಿದರು. ("ಬಾಟಲಿ ಒಡೆದು ಹಾಕಿದ್ದೀಯಲ್ಲಾ, ನೀನೇ ಶುಚಿ ಮಾಡು" ಎನ್ನಲಿಲ್ಲ ಅಮ್ಮ.)

ಈಗ ಪುಟ್ಟ ಮಗಳ ಕೈ ಹಿಡಿದು ಫ್ರಿಜ್ಜಿನ ಹತ್ತಿರ ಅಮ್ಮ ಬಂದಳು. ಒಂದು ಪ್ಲಾಸ್ಟಿಕ್ ಸೀಸೆಯಲ್ಲಿ ನೀರು ತುಂಬಿ ಮಗಳ ಕೈಗೆ ಕೊಟ್ಟಳು. "ಇದನ್ನು ಫ್ರಿಜ್‍ನಲ್ಲಿಡು. ಇಟ್ಟ ಕೂಡಲೇ ನಿಧಾನವಾಗಿ ಹೊರಗೆ ತೆಗಿ. ಇದು ನಿನ್ನ ಕೈಯಿಂದ ಜಾರಿ ಬಿದ್ದರೂ ಒಡೆಯೋದಿಲ್ಲ" ಎಂದಳು. ಮಗಳು ಹಾಗೆಯೇ ಮಾಡಿದಳು. ಆದರೆ ಆ ಸೀಸೆ ಅವಳ ಪುಟ್ಟ ಕೈಗಳಿಂದ ಜಾರಿ ಬಿತ್ತು. "ಹಾಗಲ್ಲ, ಹೀಗೆ ಹಿಡಿ. ಎರಡು ಕೈಗಳ ಬೆರಳುಗಳಿಂದ ಸೀಸೆಯ ಕತ್ತು ಬಲವಾಗಿ ಹಿಡಿದು ಎತ್ತು" ಎನ್ನುತ್ತಾ ಅಮ್ಮ ಮಗಳಿಗೆ ತೋರಿಸಿ ಕೊಟ್ಟಳು.

ಎರಡನೇ ಸಲ ಕೈಗಳಿಂದ ಸೀಸೆ ಜಾರುತ್ತಿದ್ದಂತೆ ಮಗಳು ಸಂಭಾಳಿಸಿಕೊಂಡಳು. ಇನ್ನೆರಡು ಸಲ ಅದನ್ನೇ ಅಭ್ಯಾಸ ಮಾಡಿದಳು. ಕೆಲವೇ ನಿಮಿಷಗಳಲ್ಲಿ ಫ್ರಿಜ್‍ನಿಂದ ಸೀಸೆಯನ್ನು ಕೈಜಾರದಂತೆ ಹೊರ ತೆಗೆಯುವ ವಿಧಾನ ಕಲಿತು ಬಿಟ್ಟಳು ಆ ಪುಟ್ಟ ಬಾಲಕಿ.

ಅಂದು ಆ ಮಮತೆಯ ತಾಯಿ ತನ್ನ ಮಗಳಿಗೆ ಆ ಸನ್ನಿವೇಶದಲ್ಲಿ ಬದುಕಿನ ಪಾಠವನ್ನೇ ಕಲಿಸಿದಳಲ್ಲವೇ? ಮಕ್ಕಳು ತಪ್ಪು ಮಾಡಿದಾಗ ಮಕ್ಕಳ ಮೇಲೆ ಎಗರಾಡುವ, ಮಕ್ಕಳನ್ನು ಬಡಿದು ಹಾಕುವ ಹೆತ್ತವರು ಮಕ್ಕಳಿಗೆ ಎಂತಹ ಮಾದರಿ ಆಗುತ್ತಾರೆ? ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ ಎಂಬುದನ್ನು ಹೆತ್ತವರು ಈ ಘಟನೆಯಿಂದ ಕಲಿಯಬಹುದು.

ಪಕ್ಷಿಯ ಹೆಸರೇನು?     ನನ್ನ ಮಗಳಿಗೆ ೩ ವರುಷ ತುಂಬಿದಾಗ ನಾನು ಮಾಡಿದ ಕೆಲಸ ಮಂಗಳೂರಿನ ಪುಸ್ತಕದಂಗಡಿಯಿಂದ ಚಿತ್ರಗಳಿರುವ ನೂರು ಪುಸ್ತಕಗಳನ್ನು ಖರೀದಿಸಿ ಮನೆಗೆ ತಂದದ್ದು. (ಯಾಕೆಂದರೆ ಮಕ್ಕಳಿಗೆ ಭಾಷೆ ಮತ್ತು ವಿಷಯ ಕಲಿಸಲು ಪುಸ್ತಕಗಳು ಸಹಕಾರಿ. ಚಿತ್ರಗಳನ್ನು ತೋರಿಸುತ್ತ ಕತೆ ಹೇಳುತ್ತಿದ್ದರೆ ಮಕ್ಕಳ ನೆನಪಿನಲ್ಲಿ ತುಂಬಿಕೊಳ್ಳುತ್ತವೆ ಚಿತ್ರಗಳು ಮತ್ತು ಅವುಗಳ ಹೆಸರುಗಳು.)

ಅನಂತರ ನಮ್ಮ ಮನೆಯಲ್ಲಿ ಪ್ರತಿದಿನ ಸಂಜೆ ಆ ಪುಸ್ತಕಗಳ "ಓದು". ನಾನು ಆಫೀಸಿನಿಂದ ಬರುವುದು, ಮಗಳು ಒಂದು ಪುಸ್ತಕ ತರುವುದು, ನಾನು ಅದರಲ್ಲಿದ್ದ ಚಿತ್ರಗಳನ್ನು ತೋರಿಸುತ್ತ ಅವಳೊಂದಿಗೆ ಮಾತನಾಡುವುದು.

ಅದೊಂದು ದಿನ ಪುಟ್ಟ ಮಗಳು ತಂದ ಪುಸ್ತಕದಲ್ಲಿ ಇದ್ದದ್ದು ಪಕ್ಷಿಗಳ ಚಿತ್ರಗಳು. ಅವಳು ಒಂದೊಂದೇ ಪುಟ ತಿರುವಿ ಹಾಕಲು ತೊಡಗಿದಳು. ಆಯಾ ಪುಟದಲ್ಲಿದ್ದ ಚಿತ್ರದ ಪಕ್ಷಿಯ ಬಗ್ಗೆ ನಾನು ಹೇಳತೊಡಗಿದೆ: ಗಿಡುಗ, ಗುಬ್ಬಚ್ಚಿ, ಕಾಗೆ, ಕೋಗಿಲೆ, ಕೋಳಿ, ಬಾತುಕೋಳಿ, ಪಾರಿವಾಳ, ಮಿಂಚುಳ್ಳಿ ಇತ್ಯಾದಿ. ಮುಂದಿನ ಪುಟವನ್ನು ಮಗಳು ತೆರೆದಾಗ ನಾನು ಮಾತಿಲ್ಲದೆ ಕೂತೆ. ಯಾಕೆಂದರೆ ಆ ಪಕ್ಷಿಯ ಹೆಸರು ನನಗೆ ಗೊತ್ತಿರಲಿಲ್ಲ. ನನ್ನ ಮೌನ ಗಮನಿಸಿದ ಮಗಳು ಕೇಳಿದಳು, "ಇದ್ಯಾವ ಪಕ್ಷಿ?" ಒಂದು ಪಕ್ಷಿಯ ಹೆಸರು ಗೊತ್ತಿಲ್ಲವಲ್ಲ ಎಂದು ನನಗೆ ನನ್ನ ಬಗ್ಗೆ ಅಸಮಾಧಾನ. ಮಗಳು ಮತ್ತೆಮತ್ತೆ ಅದೇ ಪ್ರಶ್ನೆ ಕೇಳಿದಾಗ ಕಿರಿಕಿರಿ. ಪುಟದ ಕೆಳಗಿನ ವಿವರಣೆ ಓದಿ ತಿಳಿಯಲಾಗದ ಅಸಹಾಯಕತೆ. (ಯಾಕೆಂದರೆ ಅದು ರಷ್ಯನ್ ಭಾಷೆಯ ಪುಸ್ತಕ.) "ಗೊತ್ತಿಲ್ಲ" ಎಂದು ಮಗುವಿನೊಂದಿಗೆ ಒಪ್ಪಿಕೊಳ್ಳಲು ನನ್ನ ದೊಡ್ಡತನ ಅಡ್ಡಿ.

ಈ ಸಂಕಟದಿಂದ ಪಾರಾಗಲು ದೊಡ್ಡವರ ಬುದ್ಧಿವಂತಿಕೆ ಬಳಸಿದೆ. "ಮುಂದಿನ ಪುಟ ತೆಗಿ" ಎಂದೆ. "ಇದೇನು ಹೇಳಿ" ಮಗುವಿನ ಆಗ್ರಹದ ಪ್ರಶ್ನೆ. "ಅದು ಇರಲಿ ಬಿಡು, ಆಚೆ ಪುಟದ್ದು ನೋಡೋಣ" ಎಂದೆ. ನನ್ನ ಪುಸಲಾಯಿಸುವಿಕೆ ಅರ್ಥವಾಗದೆ, ಪುಟ್ಟ ಮಗಳು ಒಂದು ಕ್ಷಣ ನನ್ನನ್ನು ದಿಟ್ಟಿಸಿ ನೋಡಿದಳು. ಏನನ್ನಿಸಿತೋ, ಆ ಪುಸ್ತಕವನ್ನು ಮಡಿಚಿಟ್ಟು ಎದ್ದು ಹೋದಳು.

ಇಂತಹ ಸಂಧರ್ಭಗಳಲ್ಲಿ ಹೆತ್ತವರು ಮಕ್ಕಳನ್ನು ಬೇರೆಬೇರೆ ರೀತಿಗಳಲ್ಲಿ ಮ್ಯಾನಿಪುಲೇಟ್ ಮಾಡಬಹುದು. "ಬಾ, ಟಿವಿ ನೋಡುವಾ", "ಆ ಬಾಲ್ ತಾ, ಆಟವಾಡೋಣ" ಇತ್ಯಾದಿ. ಅದರ ಬದಲಾಗಿ ಮಕ್ಕಳೆದುರು ತಪ್ಪು ಒಪ್ಪಿಕೊಂಡರೆ, ಮಕ್ಕಳಿಗೆ ಹೆತ್ತವರ ಬಗ್ಗೆ ಸದಭಿಪ್ರಾಯ ಬೆಳೆದೀತು ಅಲ್ಲವೇ?

ವಿವಿಧ ವಿಷಯಗಳಲ್ಲಿ ಮಕ್ಕಳ ಆಸಕ್ತಿ ಕುದುರಿಸಬೇಕಾದರೆ ಅವುಗಳ ಬಗ್ಗೆ ಹೆತ್ತವರೂ ಒಂದಷ್ಟು ಕಲಿಯ ಬೇಕಾಗುತ್ತದೆ. ಹೆತ್ತವರು ಈ ಜವಾಬ್ದಾರಿ ನಿರ್ವಹಿಸದೆ, ಕೊನೆಗೆ ಶಿಕ್ಷಕರು ಅಥವಾ ಸಿಲೆಬಸ್‍ನ ಮೇಲೆ ತಪ್ಪು ಹೊರಿಸುತ್ತಾರೆ ಅನಿಸುವುದಿಲ್ಲವೇ? ಹೆತ್ತವರಲ್ಲಿ ಓದಿ-ಬರೆಯುವ ಅಭ್ಯಾಸ ಇಲ್ಲದಿದ್ದರೆ, ಮಕ್ಕಳಲ್ಲಿ ಇದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?

ಅದು ಮಾಡಬೇಡ, ಇದು ಮಾಡಬೇಡ:     ಬೆಳಿಗ್ಗೆ ನಿದ್ದೆಯಿಂದೇಳುವ ಮಗು ಹೆತ್ತವರಿಂದ ಎಂತಹ ಮಾತುಗಳನ್ನು ಕೇಳುತ್ತದೆ? ಮುಖ ತೊಳೆಯಲಿಕ್ಕಾಗಿ ಮಗ್‍ನಲ್ಲಿ ನೀರೆತ್ತಲು ಹೋದರೆ "ನೀನು ನೀರು ತೆಗೀಬೇಡ, ಚೆಲ್ಲುತ್ತಿ, ನಾನೇ ಕೊಡ್ತೇನೆ" ಎಂಬ ಮಾತು. ಕುಡಿಯಲಿಕ್ಕಾಗಿ ಲೋಟದಲ್ಲಿ ನೀರು ತೆಗೆಯಲು ಹೋದರೆ, "ಅದೆಲ್ಲ ನಿನ್ನಿಂದ ಆಗೋದಿಲ್ಲ, ನಾನೇ ಕೊಡ್ತೇನೆ" ಎಂಬ ಹೇಳಿಕೆ. ರಾತ್ರಿ ಮಲಗುವ ವರೆಗೂ ಇಂತಹ ಮಾತುಗಳನ್ನೇ ಹೆತ್ತವರಿಂದ ಮಗು ಕೇಳುವುದು ಜಾಸ್ತಿ. ಪುಟ್ಟ ಮಗು ಮೆಟ್ಟಲು ಇಳಿಯಲು ಹೋದಾಗ, "ಬೇಡಬೇಡ, ಬೀಳ್ತೀಯಾ" ಎನ್ನುವ ಹೆತ್ತವರು, ಆ ಮಗು ಮೆಟ್ಟಲು ಹತ್ತಲು ಹೋದಾಗಲೂ ಅದೇ ಮಾತು ಹೇಳ್ತಾರೆ. ಇದರಿಂದ ಮಗುವಿಗೆ ಗೊಂದಲ.

ಇಂಥ ಮಾತುಗಳು, ಅದೂ ಹೆತ್ತವರಿಂದ , ಮಗುವಿನ ಆತ್ಮವಿಶ್ವಾಸವನ್ನೇ ಅದುಮುತ್ತವೆ. ತನ್ನಿಂದ ಯಾವ ಕೆಲಸವನ್ನೂ ಸರಿಯಾಗಿ ಮಾಡಲಿಕ್ಕಾಗದು ಎಂಬ ನಕಾರಾತ್ಮಕ ಭಾವನೆಯನ್ನು ಮಗುವಿನಲ್ಲಿ ಬೆಳೆಸುತ್ತವೆ. ಇದರ ಬದಲಾಗಿ ಹೆತ್ತವರು ಸಕಾರಾತ್ಮಕವಾಗಿ ಅದನ್ನೇ ಹೇಳತೊಡಗಿದರೆ..... ಉದಾಹರಣೆಗೆ, ಮಗು ಮೆಟ್ಟಲು ಇಳಿಯುವಾಗ, "ಮೆಟ್ಟಲು ನೋಡ್ಕೊಂಡು ಇಳಿ, ಒಂದೊಂದೇ ಮೆಟ್ಟಲು ಇಳಿದು ಬಾ, ನಿನಗೆ ಇಳೀಲಿಕ್ಕೆ ಆಗ್ತದೆ" ಎನ್ನುತ್ತಾ ಪ್ರೋತ್ಸಾಹಿಸಿದರೆ ..... ಬಾಲ್ಯದಲ್ಲಿ ಕೇಳಿದ ಇಂತಹ ಮಾತುಗಳು ಬದುಕಿನುದ್ದಕ್ಕೂ ವ್ಯಕ್ತಿಗೆ ಧನಾತ್ಮಕ ಸಂದೇಶ ನೀಡಬಲ್ಲವು.

ಅದೇನು, ಇದೇನು?     ಪ್ರಶ್ನೆ ಕೇಳುವುದು ಮಗುವಿನ ಸಹಜ ಗುಣ. ಆದರೆ ತನ್ನದೇ ಮಗು ಮುಗ್ಧ ಪ್ರಶ್ನೆಗಳನ್ನು ಕೇಳಿದಾಗ ಹೆತ್ತವರ ಪ್ರತಿಕ್ರಿಯೆ ಹೇಗಿರುತ್ತದೆ?

ಐದು ವರುಷಗಳ ಒಂದು ಮಗು ಮತ್ತು ಮಗುವಿನ ತಂದೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ರಸ್ತೆ ಪಕ್ಕದ ಮರಗಿಡಗಳನ್ನು ಗಮನಿಸುತ್ತಿದ್ದ ಮಗು ಕೇಳಿತು, "ಅಪ್ಪ, ಅದ್ಯಾವ ಮರ?" "ಅದು ಮಾವಿನ ಮರ, ಬೇಗ ನಡಿ" ಎಂಬ ಉತ್ತರ ಅಪ್ಪನಿಂದ. ತುಸು ಮುಂದೆ ನಡೆದಾಗ, ಮಗುವಿನ ಎರಡನೇ ಪ್ರಶ್ನೆ, "ಅಪ್ಪ, ಇದ್ಯಾವ ಮರ?" ಈಗ ಗದರಿಕೆಯೇ ಅಪ್ಪನ ಉತ್ತರ.

"ಏನೋ ಒಂದು ಮರ, ನಿಂಗೆ ಮಾತಾಡದೆ ಬರೋಕಾಗಲ್ವ?" ಅದಾಗಿ ಸ್ವಲ್ಪ ಹೊತ್ತಿನಲ್ಲಿ ಅಂಜುತ್ತಲೇ ೩ನೇ ಪ್ರಶ್ನೆ ಕೇಳಿತು ಮಗು, "ಅಪ್ಪ, ಅದೆಂಥ ಮರ?"

ಈಗ ಅಪ್ಪನ ಸಿಟ್ಟು ಕೆರಳಿತು. ’ಬಾಯಿ ಮುಚ್ಕೊಂಡು ಬಾರದಿದ್ರೆ ಎರಡು ಬಿಗಿತೇನೆ ನೋಡು" ಎಂದು ಅಪ್ಪ ಅಬ್ಬರಿಸಿದಾಗ, ಮಗುವಿನ ಪ್ರಶ್ನೆಗಳೆಲ್ಲ ಗಂಟಲಿನಲ್ಲೇ ಉಳಿದವು. ಹೀಗೆ ಮುದುಡಿ ಹೋದ ಮಕ್ಕಳ "ಪ್ರಶ್ನಿಸುವ ಹೂಮನಸ್ಸು" ಮತ್ತೆ ಅರಳೀತೇ? ಮಕ್ಕಳ ಪ್ರಶ್ನೆಗಳನ್ನು ಎದುರಿಸುವ ತಾಳ್ಮೆ ಹಾಗೂ ಉತ್ತರಿಸುವ ಕೌಶಲ್ಯ ಹೆತ್ತವರು ಕಲಿಯಬೇಡವೇ? ಇಲ್ಲವಾದರೆ ಮಕ್ಕಳ ಕುತೂಹಲ ಕಮರಿ ಹೋಗಲು, ಆತ್ಮವಿಶ್ವಾಸ ನಾಶವಾಗಲು ಹೆತ್ತವರು ಕಾರಣ ಆಗೋದಿಲ್ಲವೇ?     
 

ಕುಂದಾಪುರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ನಾನು ಕೇಳಿದ ಪ್ರಶ್ನೆ: "ನೀವು ಯಾವ ವಿಷಯದ ಪರಿಣತರಾಗ ಬೇಕೆಂದಿದ್ದೀರಿ?"
ಅವರ ಉತ್ತರಗಳು: ಇಂಜಿನಿಯರ್, ಡಾಕ್ಟರ್, ಹಲ್ಲಿನ ಡಾಕ್ಟರ್, ಕಂಪ್ಯೂಟರ್ ಪರಿಣತ, ಅಕೌಂಟೆಂಟ್, ವಕೀಲ, ಲೆಕ್ಚರರ್, ನರ್ಸ್, ಕೈಗಾರಿಕೋದ್ಯಮಿ, ವ್ಯಾಪಾರಿ ಇತ್ಯಾದಿ.

ಅವರಿಗೆ ನಾನು ಕೇಳಿದ ಎರಡನೆಯ ಪ್ರಶ್ನೆ: "ನಿಮ್ಮ ಕನಸು ನನಸಾಗಬೇಕೆಂದರೆ ನಿಮಗಿರುವ ದೊಡ್ಡ ಅಡ್ಡಿ ಯಾವುದು?" ಇದಕ್ಕೆ ಬಹುಪಾಲು ಜನರ ಉತ್ತರ, "ಸಮಯದ ಅಭಾವ".

ಎಲ್ಲಿ ಪೋಲಾಗುತ್ತಿದೆ ಸಮಯ?
ಆ ಸಂದರ್ಭದಲ್ಲಿ ಹತ್ತು ಯಶಸ್ವಿ ವ್ಯಕ್ತಿಗಳ ಹೆಸರನ್ನು ಅವರಿಂದ ಬರೆಯಿಸಿದೆ. ಅನಂತರ ಒಂದು ನೇರ ಪ್ರಶ್ನೆ ಕೇಳಿದೆ, "ನೀವು ಹೆಸರು ಬರೆದಿರುವ ಯಶಸ್ವಿ ವ್ಯಕ್ತಿಗಳಲ್ಲಿ ಯಾರಿಗಾದರೂ ದಿನಕ್ಕೆ ೨೪ ಗಂಟೆಗಳಿಗಿಂತ ಜಾಸ್ತಿ ಸಮಯ ಸಿಗುತ್ತಿದೆಯೇ?" ಆಗ ಎಲ್ಲರೂ ಮುಗುಳ್ನಕ್ಕರು.

ಅವರಿಗೆಲ್ಲ ನನ್ನ ಮುಂದಿನ ಪ್ರಶ್ನೆ: ಪ್ರತಿದಿನ ನಿಮ್ಮ ಎಷ್ಟೆಷ್ಟು ಸಮಯವನ್ನು ಯಾವ್ಯಾವ ಉದ್ದೇಶಕ್ಕೆ ಬಳಸುತ್ತಿದ್ದೀರಿ? ಅವರ ಉತ್ತರಗಳ ವಿಶ್ಲೇಷಣೆ ಮಾಡಿದಾಗ, ಅವರೆಲ್ಲರಿಗೂ ಸೋಜಿಗ. ಯಾಕೆಂದರೆ, ಪ್ರತಿಯೊಬ್ಬರೂ ದಿನದಿನವೂ   ೩ - ೪ ಗಂಟೆಗಳನ್ನು ಪೋಲು ಮಾಡುತ್ತಿದ್ದಾರೆ - ಹಗಲುಗನಸು, ಕಾಡುಹರಟೆ, ಒಣಚರ್ಚೆ,, ಉದ್ದೇಶವಿಲ್ಲದೆ ಟಿವಿ ನೋಡುವುದು ಇಂತಹ ಕೆಲಸಗಳಲ್ಲಿ.

ನಿಮ್ಮ ದಿನನಿತ್ಯದ ಸಮಯದ ಲೆಕ್ಕಾಚಾರ ನೀವೇ ಮಾಡಿ ನೋಡಿ. ಪ್ರತಿದಿನ ನಿದ್ದೆ, ಊಟ, ಸ್ನಾನ, ಪತ್ರಿಕೆ ಓದು, ಪ್ರಯಾಣ, ಹರಟೆ, ಬರವಣಿಗೆ ಇತ್ಯಾದಿ ಕೆಲಸಕಾರ್ಯಗಳಿಗೆ ಎಷ್ಟೆಷ್ಟು ಸಮಯ ವಿನಿಯೋಗಿಸುತ್ತಿದ್ದೀರಿ? ಹೀಗೆ ಪಟ್ಟಿ ಮಾಡಿದಾಗ ನಿಮ್ಮ ಸಮಯವನ್ನು ಯಾವುದರಲ್ಲಿ ಕಳೆದುಕೊಳ್ಳುತ್ತಿದ್ದೀರಿ ಎಂದು ತಿಳಿಯುತ್ತದೆ. ನಿಮ್ಮ ಕಾಲಹರಣದ ಅಭ್ಯಾಸ ಬದಲಾಯಿಸಿ ಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.

ಏನು ಸಾಧಿಸಬೇಕೆಂದಿದ್ದೀರಿ?
ಅದಕ್ಕಾಗಿ, ಮುಂದಿನ ೨೫ ವರುಷಗಳಲ್ಲಿ ನೀವು ಏನನ್ನು ಸಾಧಿಸಬೇಕಾಗಿದೆ ಎಂದು ನಿರ್ಧರಿಸಿ. ಇದನ್ನು ಒಂದರಿಂದ ಹತ್ತು ವಾಕ್ಯಗಳಲ್ಲಿ ಬರೆಯಿರಿ.

ಈ ಗುರಿ ಸಾಧಿಸಲು ನಿಮಗೆ ಸಾಧ್ಯವಿದೆಯೇ? ಎಂದು ಪರಿಶೀಲಿಸಿ. ಉದಾಹರಣೆಗೆ ಭಾರತದ ಕ್ರಿಕೆಟ್ ಟೀಂಗೆ ಆಯ್ಕೆ ಆಗಬೇಕೆಂಬ ಗುರಿ ನಿಮಗಿರಬಹುದು. ಆದರೆ ಕಳೆದ ೧೦ - ೧೫ ವರುಷಗಳಲ್ಲಿ ನೀವು ಕ್ರಮಬದ್ಧವಾಗಿ ಕ್ರಿಕೆಟ್ ಆಡಿದ್ದರೆ ಮಾತ್ರ ಆ ಗುರಿ ಸಾಧನೆ ನಿಮಗೆ ಸಾಧ್ಯ.

ಅಂತಿಮವಾಗಿ, ನಿಮ್ಮ ಗುರಿಯಲ್ಲಿ ನಿಮಗೆ ಅಚಲ ಹಾಗೂ ಗಾಢವಾದ ಆಸಕ್ತಿ ಇದೆಯೇ? ಇಲ್ಲವೆಂದಾದರೆ, ಅಂತಹ ಆಸಕ್ತಿ ಇರುವ ಕ್ಷೇತ್ರದಲ್ಲೇ ನಿಮ್ಮ ಗುರಿಯನ್ನು ಗುರುತಿಸಿಕೊಳ್ಳಿ. ಯಾವ ವಿಷಯ ನಿಮ್ಮನ್ನು ಪ್ರಬಲವಾಗಿ ಸೆಳೆಯುತ್ತದೆ? ಯಾವ ಕೆಲಸವನ್ನು ಗಂಟೆಗಟ್ಟಲೆ ಮಾಡಿದರೂ ನಿಮಗೆ ದಣಿವು ಅಥವಾ ಬೋರ್ ಎನಿಸುವುದಿಲ್ಲ? ಅದುವೇ ನಿಮಗೆ ಅಪಾರ ಆಸಕ್ತಿ ಇರುವ ವಿಷಯ. ಯಂತ್ರಗಳು, ಸಸ್ಯಗಳು, ಪಕ್ಷಿಗಳು, ಕೀಟಗಳು, ಚಿತ್ರಗಳು, ಸಂಗೀತ - ಇಂತಹ ಯಾವುದೇ ವಿಷಯ ಅದಾಗಿರಬಹುದು. ಒಮ್ಮೆ ಇದನ್ನು ಗುರುತಿಸಿದರೆ, ನಂತರ ಸಮಯದ ಸದ್ಬಳಕೆ ನಿಮ್ಮ ಕೈಗೆಟಕುವ ಹಣ್ಣು.

ಬೇಕಾದ್ದು, ಬೇಡವಾದದ್ದು
ಈಗ, ಪ್ರತಿದಿನ ಏನೇನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಪುನಃ ಪರಿಶೀಲಿಸಿ. ನಿಮ್ಮ ಮುಂದಿನ ೨೫ ವರುಷಗಳ ಪ್ರಮುಖ ಗುರಿಗೆ ಪೂರಕವಲ್ಲದ್ದನ್ನು ನೀವು ಮಾಡುತ್ತಿರಬಹುದು. ಉದಾಹರಣೆಗೆ, ಉತ್ತಮ ಚಿತ್ರಕಾರನಾಗ ಬೇಕು ಎಂಬುದು ನಿಮ್ಮ ಗುರಿ ಆಗಿರಬಹುದು. ನೀವು ಕ್ರಿಕೆಟ್ ಆಟದಲ್ಲಿ ಅಥವಾ ಚಲನಚಿತ್ರಗಳ ಹಾಡುಗಳನ್ನು ಕಲಿಯುವುದರಲ್ಲಿ ಸಮಯ ಕಳೆಯುತ್ತಿದ್ದರೆ, ಇದು ನಿಮ್ಮ ಪ್ರಧಾನ ಗುರಿಗೆ ಪೂರಕವಲ್ಲ. ನಿಮ್ಮ ಗುರಿ ಸಾಧಿಸಬೇಕೆಂದಾದರೆ, ಇಂಥದ್ದನ್ನೆಲ್ಲ ಬಿಟ್ಟು, ಅದೇ ಸಮಯವನ್ನು ಚಿತ್ರಕಲೆಯ ಅಭ್ಯಾಸಕ್ಕೆ ತೊಡಗಿಸಬೇಕು. ಇಲ್ಲವಾದರೆ, ಜೀವಮಾನವಿಡೀ ನಿಮ್ಮ ಶೇಕಡಾ ೮೦ ಸಮಯ ನಿಮಗೆ ಮುಖ್ಯವಲ್ಲದ ಕೆಲಸಗಳಲ್ಲೇ ಕಳೆದು ಹೋಗುತ್ತದೆ.

ನೀವು ಏನನ್ನು ಓದುತ್ತಿದ್ದೀರಿ, ಬರೆಯುತ್ತಿದ್ದೀರಿ, ಮಾತಾಡುತ್ತಿದ್ದೀರಿ, ಯೋಚಿಸುತ್ತಿದ್ದೀರಿ, ಯಾವ ಪುಸ್ತಕಗಳನ್ನು ಓದುತ್ತೀರಿ, ಪತ್ರಿಕೆಯಲ್ಲಿ ಏನು ಓದುತ್ತೀರಿ, ಟಿವಿಯಲ್ಲಿ ಯಾವ ಕಾರ್ಯಕ್ರಮ ನೋಡುತ್ತೀರಿ, ಗೆಳೆಯರೊಂದಿಗೆ ಏನು ಮಾತಾಡುತ್ತೀರಿ? ಇವೆಲ್ಲದರಲ್ಲಿಯೂ ಇದೇ ಪರೀಕ್ಷೆಗೆ ಒಡ್ಡಿಕೊಳ್ಳಿ. ನಿಮ್ಮ ಪ್ರಧಾನ ಗುರಿಗೆ ಪೂರಕವಾದದ್ದಕ್ಕೆ ಮಾತ್ರ ನಿಮ್ಮ ಸಮಯ ಮೀಸಲಿಟ್ಟಾಗ ನಿಮಗೆ ಪ್ರತಿದಿನವೂ ಕೈತುಂಬ ಸಮಯ ಸಿಗುತ್ತದೆ.

ನಿಮ್ಮ ದೀರ್ಘಕಾಲಿಕ ಗುರಿಗೆ ಪೂರಕವಾದ ಅಲ್ಪಕಾಲಿಕ ಗುರಿಗಳೂ ಮುಖ್ಯ. ಉದಾಹರಣೆಗೆ ಪದವಿ ಅಥವಾ ಡಿಪ್ಲೊಮಾ ಮುಗಿಸುವುದು, ಕಂಪ್ಯೂಟರ್ ಬಳಕೆ ಕಲಿಯುವುದು ಇತ್ಯಾದಿ. ಇವುಗಳ ಸಾಧನೆಗಾಗಿ ನೀವು ಶಿಸ್ತುಬದ್ಧ ದೈನಂದಿನ ವೇಳಾಪಟ್ಟಿ ಅನುಸರಿಸುವುದು ಅಗತ್ಯ.

ದಕ್ಷತೆಯ ಹೊತ್ತಿನ ಬಳಕೆ
ನಿಮ್ಮ ದಕ್ಷತೆಯ ಹೊತ್ತನ್ನು ನೀವು ಚೆನ್ನಾಗಿ ದುಡಿಸಿಕೊಳ್ಳ ಬೇಕು. ಕೆಲವರಿಗೆ ಬೆಳಗ್ಗೆ ಪ್ರಶಾಂತ ವಾತಾವರಣದಲ್ಲಿ ಓದಿದ್ದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ನೆನಪಿರುತ್ತದೆ. ಇನ್ನು ಕೆಲವರಿಗೆ ರಾತ್ರಿಯ ನಿಶ್ಶಬ್ದ ಪರಿಸರದ ಓದು ಆಹ್ಲಾದಕರ. ನಿಮ್ಮ ದಕ್ಷತೆಯ ಅವಧಿ ಗುರುತಿಸಿಕೊಳ್ಳಿ. ಆ ಅವಧಿಯನ್ನು ಚಿಂತನೆ ಹಾಗೂ ಅಧ್ಯಯನಕ್ಕಾಗಿ ಮೀಸಲಿಡಬೇಕು. ಪ್ರತಿದಿನ ಮುಂಜಾನೆ ಅಥವಾ ರಾತ್ರಿ, ಮುಂದಿನ ೨೪ ಗಂಟೆಗಳ ನಿಮ್ಮ ಮುಖ್ಯ ಕೆಲಸಕಾರ್ಯಗಳ ಬಗ್ಗೆ ಯೋಚಿಸಿ, ನಿರ್ಧರಿಸಿ. ಆ ನಿರ್ಧಾರಗಳನ್ನು ಬರೆದಿಟ್ಟರೆ ಸ್ಪಷ್ಟವಾಗಿರುತ್ತದೆ. ಇದು ಸಮಯದ ಸದ್ಬಳಕೆಯ ಸನ್ನೆಗೋಲು.

ತತ್ಕಾಲದ ಮುಖ್ಯ ಕೆಲಸ ಗುರುತಿಸಿಕೊಂಡು, ಮುಂದಿನ ೨೪ ಗಂಟೆಗಳೊಳಗೆ ಅದನ್ನು ಆರಂಭಿಸಿ. ಮುಹೂರ್ತಕ್ಕಾಗಿ ಕಾಯಬೇಡಿ. ಕಾಯುತ್ತಾ ಕುಳಿತರೆ, ಕೆಲವೇ ದಿನಗಳಲ್ಲಿ ಅದು ತುರ್ತಿನ ಕೆಲಸವಾಗಿ ಕಾಡುತ್ತದೆ. ಆಗ ಅದನ್ನು ನಿಭಾಯಿಸಲಾಗದೆ, ಪರದಾಟ. ಇದರಿಂದಾಗಿ ಸಮಯದ ನಷ್ಟ.

ದೊಡ್ಡ ಕೆಲಸ ಪೂರೈಸಲಿಕ್ಕಾಗಿ ನಿರಂತರವಾಗಿ ಒಂದು ವಾರ ಅಥವಾ ಒಂದು ತಿಂಗಳು ಪುರುಸೊತ್ತು ಸಿಗಬೇಕೆಂದು ಕಾದು ಕೂರಬೇಡಿ. ಅಂತಹ ಪುರುಸೊತ್ತು ಯಾವತ್ತೂ ಸಿಗುವುದಿಲ್ಲ. ಕೆಲಸಗಳ ನಡುವೆ ನಿಮಿಷಗಳ ಬಿಡುವು ಸಿಕ್ಕಾಗ, ಬಸ್ ಕಾಯುವಾಗ, ಪ್ರಯಾಣಿಸುವಾಗ ಆ ದೊಡ್ಡ ಕೆಲಸದ ಪುಟ್ಟ ಅಂಶಗಳನ್ನು ಮಾಡುತ್ತಾ ಹೋಗಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಶೇಕಡಾ ೫೦ ಕೆಲಸ ಮುಗಿದಿರುತ್ತದೆ!

ಮರೆವು ನಿಮ್ಮ ಸಮಸ್ಯೆಯೇ?
ಒಂದು ನೋಟ್ಪುಸ್ತಕ ಯಾವಾಗಲೂ ನಿಮ್ಮ ಜೇಬಿನಲ್ಲಿರಲಿ. ನಿಮ್ಮ ಐಡಿಯಾಗಳನ್ನು, ಮಾಡಬೇಕಾದ ಕೆಲಸಗಳನ್ನು, ನಿರ್ಧಾರಗಳನ್ನು ಅದರಲ್ಲಿ ಬರೆಯುತ್ತಾ ಹೋಗಿ. ಆಗ ಅವು ಸದಾ ನೆನಪಿನಲ್ಲಿರುತ್ತವೆ ಮತ್ತು ನೋಟ್ಪುಸ್ತಕ ನಿಮ್ಮನ್ನು ಎಚ್ಚರಿಸುತ್ತಿರುತ್ತದೆ. ಮರೆವಿನ ಸಮಸ್ಯೆ ಪರಿಹರಿಸಲಿಕ್ಕಾಗಿ ಪಟ್ಟಿ ಮಾಡುವುದು, ಡೈರಿ ಬರೆಯುವುದು, ಟೈಮರ್ ಬಳಕೆ, ಕ್ಯಾಲೆಂಡರ್ನಲ್ಲಿ ಗುರುತಿಸುವುದು, ವಿಷಯವಾರು ಫೈಲ್ ಅಥವಾ ಇಂಡೆಕ್ಸ್ (ವಿಷಯಸೂಚಿ) ಮಾಡುವುದು ಇಂತಹ ಸರಳ ಉಪಾಯಗಳನ್ನೂ ಬಳಸಿಕೊಳ್ಳಿ.

ಸಮಯದ ಹಕ್ಕಿ ಹಾರಿ ಹೋಗುವುದನ್ನು ಅಸಹಾಯಕರಾಗಿ ನೋಡುವ ಬದಲಾಗಿ, ಸಮಯದ ಹಕ್ಕಿಯ ಬೆನ್ನೇರಿ ಹಾರುವ ಅಪೂರ್ವ ಅನುಭವ ನಿಮ್ಮದಾಗಲಿ.

Pages