HRM

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ
ಭಾನು ತಣುವಾದಾನು; ಸೋಮ ಸುಟ್ಟಾನು
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು
ಮೌನದಲಿ ಸಿದ್ಧನಿರು - ಮಂಕುತಿಮ್ಮ
“ಏನಾದರಾಗಲಿ, ಆಗುವುದಾಗುತ್ತದೆ, ಸಿದ್ಧನಿರು ಅದಕೆ” ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು, ಈ ಮುಕ್ತಕದಲ್ಲಿ. ಏನೆಲ್ಲ ಭೀಕರ ಅವಘಡಗಳು ಆದೀತು ಎಂಬುದರ ಸುಳಿವನ್ನೂ ನೀಡುತ್ತಾರೆ. ನಿಗಿನಿಗಿ ಕೆಂಡದ ಗೋಲದಂತೆ ಉರಿಯುತ್ತಿರುವ ಸೂರ್ಯ ತಣ್ಣಗಾದಾನು. ತಣ್ಣಗಿರುವ ಚಂದ್ರ ಸುಟ್ಟಾನು. ಭೂಮಿ (ಕ್ಷೋಣಿ) ಕರಗಿ ಹೋದೀತು. ಎಲ್ಲವೂ ಧ್ವಂಸವಾಗಿ ಜಗತ್ತು ಶೂನ್ಯವಾದೀತು. ಆದರೆ ನೀನು ಎದೆಗುಂದದಿರು. ಎಲ್ಲವನ್ನೂ ಎದುರಿಸಲು ಮೌನದಲಿ ಸಿದ್ಧನಾಗಿರು ಎಂಬುದವರ ಸಂದೇಶ.
ಡಿಸೆಂಬರ್ ೨೦೧೫ರ ಆರಂಭದ ದಿನಗಳಲ್ಲಿ ಚೆನ್ನೈಯಲ್ಲಿ ಸುರಿದ ಕುಂಭದ್ರೋಣ ಮಳೆ ಈ ಎಚ್ಚರಿಕೆಯ ಗಂಟೆಯನ್ನು ಮಗದೊಮ್ಮೆ ಮೊಳಗಿಸಿದೆ. ಕೇದಾರನಾಥದ ಮೇಘಸ್ಫೋಟ, ನೇಪಾಳದ ಭೂಕಂಪ ಇವೂ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ಇಂತಹ ಎಚ್ಚರಿಕೆ ನೀಡಿದ್ದವು.
ಈಗ ಚೆನ್ನೈಯ ಜಲಪ್ರಳಯದ ಸರದಿ. ಅಲ್ಲಿನ ಭೀಕರತೆ ಕಂಡವರಿಗಷ್ಟೇ ಅರ್ಥವಾದೀತು. ಯಾಕೆಂದರೆ ಎಲ್ಲೆಲ್ಲೂ ನೀರು. ಕಣ್ಣು ಹಾಯಿಸಿದಲ್ಲೆಲ್ಲ ಸಮುದ್ರದಂತೆ ನೀರು. ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ತುಂಬಿ ಹರಿಯುವ ನೀರು. ಯಾರೂ ಎಲ್ಲಿಗೂ ಪ್ರಯಾಣಿಸದಂತೆ ಇವೆಲ್ಲ ಜಲಾವೃತ. ಡಿಸೆಂಬರಿನ ಮೊದಲ ದಿನ ಧಾರಾಕಾರವಾಗಿ ಸುರಿಯ ತೊಡಗಿದ ಮಳೆ ಮೂರನೇ ದಿನವೂ ನಿಲ್ಲಲಿಲ್ಲ. ಸಮುದ್ರದಂತೆ ಸುತ್ತೆಲ್ಲ ನೀರು ತುಂಬಿದ್ದರೂ ಕುಡಿಯಲು ಒಂದು ತೊಟ್ಟು ನೀರಿಲ್ಲ. ಊಟವೂ ಇಲ್ಲ, ತಿಂಡಿಯೂ ಇಲ್ಲ, ನಿದ್ದೆಯೂ ಇಲ್ಲ. ಇಂತಹ ಭಯಾನಕ ಸ್ಥಿತಿಯಲ್ಲಿ ಆಗೊಮ್ಮೆ ಈಗೊಮ್ಮೆ ಹಾರಾಡುವ ಸೇನಾ ಹೆಲಿಕಾಪ್ಟರಿನ ಸದ್ದು. ಅದನ್ನು ಕೇಳುತ್ತಲೇ, ತಮ್ಮನ್ನು ಬಚಾವ್ ಮಾಡಿಯಾರೆಂಬ ಆಸೆಯಲ್ಲಿ ಕೈಗಳನ್ನೆತ್ತಿ ಕೂಗುವ ಸಾವಿರಾರು ಜನರು.
ಅದು ಶತಮಾನದ ದಾಖಲೆ ಮಳೆ. ೨ ಡಿಸೆಂಬರ್ ೨೦೧೫ರಂದು ೨೪ ಗಂಟೆಗಳ ಅವಧಿಯಲ್ಲಿ ಚೆನ್ನೈಯಲ್ಲಿ ಸುರಿದ ಮಳೆ ೪೯ ಸೆ.ಮೀ. ಇದು ಕಳೆದ ೧೧೪ ವರುಷಗಳ ಚರಿತ್ರೆಯಲ್ಲೇ ಅತ್ಯಧಿಕ ಮಳೆ. ಇದರಿಂದಾಗಿ ಇಡೀ ನಗರವೇ ನೀರಿನಲ್ಲಿ ಮುಳುಗಿದೆ. ಅಲ್ಲೇ ಸಂತ್ರಸ್ತರಾದವರು ೧.೮೦ ಲಕ್ಷ ಜನರು. ತಮಿಳುನಾಡಿನಲ್ಲಿ ಈ ಮಳೆಯಿಂದಾಗಿ ಸಂಕಟಕ್ಕೆ ಸಿಲುಕಿದವರು ೫೦ ಲಕ್ಷ ಜನರೆಂದು ಅಂದಾಜು. ಸತ್ತವರ ಸಂಖ್ಯೆ ೩೦೦ ದಾಟಿದೆ. ಇಂತಹ ವಿಕೋಪಗಳನ್ನು ತಪ್ಪಿಸಲಾಗದು. ಹಾಗಾಗಿ ಎದುರಿಸಲು ಸನ್ನದ್ಧರಾಗಿರಬೇಕು.

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ
ನಶಿಸಲೀ ನಿನ್ನೆಲ್ಲವೇನಾದೊಡೇನು?
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ
ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ
ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ ಕುಸಿದು ಹೋಗಲಿ, ಆ ಗಗನ ಕಳಚಿ ಬೀಳಲಿ. ನಿನ್ನದೆಲ್ಲವೂ ನಾಶವಾಗಿ ಹೋಗಲಿ. ಏನಾದರೇನು? ನೀನು ಮಾತ್ರ ಅಧೀರನಾಗದಿರು; ಕಂಗಾಲಾಗಿ, ಹತಾಶನಾಗಿ ದಣಿಯದಿರು. ಆ ಜಗನ್ನಿಯಾಮಕನ ಸತ್ತ್ವದಲ್ಲಿ ನಂಬಿಕೆಯಿಟ್ಟು ಬದುಕು (ವಸಿಸು). ನಿನ್ನ ಎದೆಗಟ್ಟಿಯಿದ್ದರೆ, ನಿನಗೆ ಆತ್ಮವಿಶ್ವಾಸವಿದ್ದರೆ, ಎಲ್ಲವೂ ಒಳಿತಾಗುತ್ತದೆ.
ಚೆನ್ನೈಯಲ್ಲಿ ಡಿಸೆಂಬರ್ ೨೦೧೫ರ ಆರಂಭದಲ್ಲಿ ಆದಂತೆ ಆದಾಗ ….. ಎಲ್ಲವೂ ನಾಶವಾಗಿ, ಬದುಕೆಲ್ಲ ಕತ್ತಲಾಗಿ ಕಂಗೆಟ್ಟಾಗ ಇಂತಹ ಸಂದೇಶವೇ ಬದುಕಿನ ಆಶಾಕಿರಣ, ಅಲ್ಲವೇ?
ಚೆನ್ನೈಯ ಜಲಪ್ರಳಯವನ್ನು ಹೇಗೆ ಎದುರಿಸಲಾಯಿತು? ೩೫,೦೦೦ ನಿರಾಶ್ರಿತರ ಕೇಂದ್ರಗಳನ್ನು ತೆರೆದು ಜನರಿಗೆ ಆಹಾರ ಹಾಗೂ ವಾಸದ ವ್ಯವಸ್ಥೆ. ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮೂಲಕ ಆಹಾರ ಹಾಗೂ ಇತರ ಅಗತ್ಯ ಸಾಮಗ್ರಿ ಪೂರೈಕೆ. ಸುಮಾರು ೧,೫೦೦ ಸೈನಿಕರ ಮೂಲಕ ಸಂಕಟದಲ್ಲಿ ಸಿಲುಕಿದವರ ರಕ್ಷಣೆ. ನೌಕಾದಳದ ಬೋಟುಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾವಿರಾರು ಜನರ ರವಾನೆ. ಕಟ್ಟಡಗಳ ಮೇಲೆ ನಿಂತು ಜೀವ ಉಳಿಸಲು ಮೊರೆಯಿಡುವವರನ್ನು ಹೆಲಿಕಾಪ್ಟರಿನಿಂದ ಎತ್ತಿ ಪಾರು ಮಾಡಿದ್ದು. ಕೇಂದ್ರ ಸರಕಾರದಿಂದ ಮುಂಚಿನ ರೂ.೯೦೦ ಕೋಟಿಗಳಲ್ಲದೆ ಹೆಚ್ಚುವರಿ ರೂ.೧,೦೦೦ ಕೋಟಿ ನೆರವಿನ ಭರವಸೆ. ಇವೆಲ್ಲದರ ಪರಿಣಾಮವಾಗಿ ಕೇವಲ ಐದು ದಿನಗಳಲ್ಲಿ ಪರಿಸ್ಥಿತಿಯ ನಿಯಂತ್ರಣ.
ವ್ಯಕ್ತಿಯಾಗಿ ಮಾತ್ರವಲ್ಲ, ಸಮಾಜವಾಗಿ ನಾವು ಎದೆಗಟ್ಟಿ ಮಾಡಿಕೊಳ್ಳಲು ಕಲಿಯಲೇ ಬೇಕಾಗಿದೆ. ಸುನಾಮಿ ಅಪ್ಪಳಿಸಿದಾಗಲೂ ೨.೭೫ ಲಕ್ಷ ಜನರ ಸಾವು. ಹಲವು ಕುಟುಂಬಗಳ ಸರ್ವ ನಾಶ. ಅವೆಲ್ಲ ಆಘಾತ ಸಹಿಸಿಕೊಂಡು, ಲಕ್ಷಗಟ್ಟಲೆ ಜನರು ಮತ್ತೆ ಬದುಕು ಕಟ್ಟಿಕೊಂಡರು. ಈ ಮುಕ್ತಕಗಳ ಇನ್ನೊಂದು ಸಂದೇಶ: ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಇದನ್ನು ಒಪ್ಪಿಕೊಳ್ಳದವರು, ಚೆನ್ನೈಯಲ್ಲಿ ಪ್ರಕೃತಿಯ ರುದ್ರನಾಟಕದಿಂದಲಾದರೂ ಪಾಠ ಕಲಿಯಲಿ.
 

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ
ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ
ಬಲ್ಲವನೆ ಮುಕ್ತನಲ - ಮಂಕುತಿಮ್ಮ
ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಉತ್ತರ ನೀಡಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಅಂತಹ ವ್ಯಕ್ತಿಯ ಮೂರು ಗುಣಗಳನ್ನು ಅವರು ವಿವರಿಸಿದ್ದಾರೆ.
ಮೊದಲಾಗಿ ಆ ವ್ಯಕ್ತಿಗೆ ಎಲ್ಲರಲ್ಲಿಯೂ ತಾನು ಮತ್ತು ತನ್ನಲ್ಲಿ ಎಲ್ಲರೂ ಇದ್ದಾರೆ ಎಂಬ ರೀತಿಯಲ್ಲಿ ಬದುಕಲು ಸಾಧ್ಯವಾಗಬೇಕು. ಎಲ್ಲೆಲ್ಲಿಯೂ ಎಲ್ಲ ಸಂದರ್ಭಗಳಲ್ಲಿಯೂ ತನ್ನ ನಡೆನುಡಿಯಲ್ಲಿ ಹಾಗೆಯೇ ನಡೆಯುವ ವ್ಯಕ್ತಿ ಅವನು. ಇತರರ ಸಂತೋಷದಲ್ಲಿ ಖುಷಿ ಪಡುತ್ತ, ಪರರ ದುಃಖವನ್ನು ಹಂಚಿಕೊಳ್ಳುತ್ತ ಬದುಕುವುದು ಆ ವ್ಯಕ್ತಿಯ ಎರಡನೆಯ ಗುಣ. ಮೂರನೆಯ ಗುಣ ಲೋಕಕ್ಕೆ ಬೆಲ್ಲವಾಗಿ, ತನಗೆ ತಾನು ಕಲ್ಲಾಗಿ ಬದುಕುವುದು. ಅಂದರೆ ಇತರರಿಗೆ ಆನಂದವನ್ನು ನೀಡುತ್ತ, ತನ್ನ ಎಲ್ಲ ಸಂಕಟಗಳಿಗೆ ಕಠೋರವಾಗಿ ಇರುವವನೇ ಎಲ್ಲದರಿಂದ ಬಿಡುಗಡೆಯಾಗಬಲ್ಲ.
ಯಾರಾದರೂ ಈ ರೀತಿಯಲ್ಲಿ ಬದುಕಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಚರಿತ್ರೆಯಲ್ಲಿ ನೂರಾರು ನಿದರ್ಶನಗಳಿವೆ. ಭಾರತದ ಋಷಿಮುನಿಗಳು ಹೀಗೆಯೇ ಮುಕ್ತರಾಗಿ ಬದುಕಿದ್ದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ಅರವಿಂದರು, ಮಹಾತ್ಮಾ ಗಾಂಧಿ ಹೀಗೆಯೇ ಬಾಳಿದವರು.
ಇತ್ತೀಚೆಗಿನ ಒಂದು ಉದಾಹರಣೆ: ತಮಿಳ್ನಾಡಿನ ನಾಗಪಟ್ಟಣಂನ ದಂಪತಿ ಕೆ. ಪರಮೇಶ್ವರನ್ ಮತ್ತು ಚೂಡಾಮಣಿ. ೨೬ ಡಿಸೆಂಬರ್ ೨೦೦೪ರಂದು ಸುನಾಮಿಯ ರಕ್ಕಸ ಅಲೆಗಳು ತಮಿಳ್ನಾಡಿನ ತೀರಕ್ಕೆ ಅಪ್ಪಳಿಸಿದವು. ಅಂದು ಇವರ ಮಕ್ಕಳಾದ ರಕ್ಷಣ್ಯ (೧೨ ವರುಷ), ಕಾರುಣ್ಯ (೯ ವರುಷ) ಮತ್ತು ಕಿರುಬಾಸನ್ (೫ ವರುಷ) ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಸಮುದ್ರ ತೀರಕ್ಕೆ ಹೋಗಿ ಆಟವಾಡುತ್ತಿದ್ದರು. ಜೊತೆಗೆ ಏಳು ಬಂಧುಗಳೂ ಇದ್ದರು. ಅವರೆಲ್ಲರೂ ಸುನಾಮಿಗೆ ಬಲಿ. ಅಲ್ಲೇ ಇದ್ದ ಪರಮೇಶ್ವರನ್ ಅದು ಹೇಗೋ ಪಾರಾಗಿ, ಕೊನೆಗೆ ಮನೆಯಲ್ಲಿದ್ದ ಮಡದಿ ಚೂಡಾಮಣಿಗೆ ಸುದ್ದಿ ತಿಳಿಸಿದಾಗ ಆಕೆಗೆ ಆಘಾತ. ಎರಡು ದಿನ ಆಕೆ ಮಾತಿಲ್ಲದೆ ಕೂತಿದ್ದರು. ಮೂರನೆಯ ದಿನ ಸಮುದ್ರ ತೀರದಲ್ಲೇ ಅವರೆಲ್ಲರ ಶವ ಮಣ್ಣು ಮಾಡಿ ಮನೆಗೆ ಬಂದರು. ಇಬ್ಬರಿಗೂ ಬದುಕೆಲ್ಲ ಕತ್ತಲಾಗಿ, ಆತ್ಮಹತ್ಯೆಗೆ ತಯಾರಾಗಿದ್ದರು. ಆಗ, ನಾಗಪಟ್ಟಣಂನ ಹಲವು ಮನೆಗಳಲ್ಲಿದ್ದ ಅನಾಥ ಮಕ್ಕಳ ಅಳು ಇವರಿಬ್ಬರ ಕರುಳು ತಟ್ಟಿತು. ಸಾಯುವ ಬದಲು ಅನಾಥ ಮಕ್ಕಳನ್ನು ಸಾಕಲು ನಿರ್ಧರಿಸಿದರು. ಒಂದಲ್ಲ, ಎರಡಲ್ಲ ಮೂವತ್ತು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ. ತಮಗೆ ತಾವೇ ಕಲ್ಲಾಗಿ ಲೋಕಕ್ಕೆ ಬೆಲ್ಲವಾಗಿದ್ದಾರೆ.

ಆಗಲಿಹುದಾದೀತು ಆದೊಡೇಂ ಪೋದೊಡೇಂ
ಈಗಳಿಹ ಕರ್ತವ್ಯವೇನೊ ನೋಡದನು
ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್
ಜಾಗರೂಕನೊ ಯೋಗಿ – ಮರುಳ ಮುನಿಯ
ಯೋಗಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವನ್ನು ನಮ್ಮೆದುರು ಇಟ್ಟಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅದಕ್ಕೆ ಪೂರ್ವಭಾವಿಯಾಗಿ ಇನ್ನೊಂದು ಮೂಲಭೂತ ವಿಷಯವನ್ನು ಎತ್ತುತ್ತಾರೆ: ಆಗಬೇಕಾದದ್ದು ಆದೀತು; ಹಾಗಿರುವಾಗ ಆದರೇನು ಹೋದರೇ॑ನು? ಯಾರದೋ ಹುಟ್ಟು ಅಥವಾ ಸಾವು, ಯಾವುದೋ ಅಪಘಾತ ಅಥವಾ ಕಲಹ – ಆದರೇನು ಹೋದರೇನು? ಇಂತಹ ಘಟನೆಗಳು ಆದರೆ ಅಥವಾ ಆಗದಿದ್ದರೆ, ಅದರಿಂದಾಗಿ ಈ ಜಗತ್ತಿನಲ್ಲಿ ಬದಲಾವಣೆಯೇನೂ ಆಗೋದಿಲ್ಲ. ಈ ಜಗತ್ತು ಮುಂದಕ್ಕೆ ಸಾಗುತ್ತಲೇ ಇರುತ್ತದೆ. ಆದ್ದರಿಂದ ನಿನ್ನ ಈಗಿನ ಕರ್ತವ್ಯ ಏನೆಂಬುದನ್ನು ನೋಡೆಂದು ಅವರು ಸೂಚಿಸುತ್ತಾರೆ. ಆಯಾ ಕ್ಷಣದ ಕರ್ತವ್ಯವನ್ನು ಮಾಡುವುದೇ ಮುಖ್ಯ. ತ್ಯಾಗ, ಭೋಗ, ಈಗಿನ ಕಾಯಕ (ಉದ್ಯೋಗ) – ಇವು ಎಲ್ಲದರಲ್ಲಿಯೂ ಯೋಗಿಯಾದವನು ಎಚ್ಚರದಿಂದ ಇರಬೇಕು. ಆಯಾ ಸನ್ನಿವೇಶದಲ್ಲಿ ತನ್ನ ಕರ್ತವ್ಯವನ್ನು ತಿಳಿದು ಮಾಡಬೇಕು.
ಉದಾಹರಣೆಗೆ ಸರಕಾರವನ್ನು ನಡೆಸುವವರ ಕರ್ತವ್ಯ ಏನು? ದಕ್ಷ ಹಾಗೂ ಪ್ರಾಮಾಣಿಕ ಆಡಳಿತವನ್ನು ಒದಗಿಸುವುದು. ಕರ್ನಾಟಕದಲ್ಲಿ ಆಡಳಿತದ ಅದಕ್ಷತೆಯ ಸೂಚಕ ಅಕ್ರಮ ರೇಷನ್ ಕಾರ್ಡುಗಳ ಸಂಖ್ಯೆ. ಈ ವರುಷ ೮೫ ಲಕ್ಷ ಅಕ್ರಮ ರೇಷನ್ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ ಎಂಬುದು ಸಚಿವರ ಹೇಳಿಕೆ. ಇವನ್ನು ನೀಡಿದ್ದು ಯಾರು? ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು. ಹಾಗಿದ್ದರೆ, ಆ ಇಲಾಖೆಯಲ್ಲಿ ತುಂಬಿರುವ ಅದಕ್ಷತೆ ಮತ್ತು ಭ್ರಷ್ಟತೆಯ ಅಂದಾಜು ಮಾಡಿ. ರಾಜ್ಯದಲ್ಲಿ ಸಹಬಾಳ್ವೆಗೆ ಹಾಗೂ ಶಾಂತಿಯುತ ಜನಜೀವನಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಸರಕಾರ ನಡೆಸುವವರ ಇನ್ನೊಂದು ಮುಖ್ಯ ಕರ್ತವ್ಯ. ಆದರೆ ಕರ್ನಾಟಕದ ಸರಕಾರ ಮಾಡಿದ್ದೇನು? ೧೦ ನವಂಬರ್ ೨೦೧೫ರಂದು ಟಿಪ್ಪು ಸುಲ್ತಾನ ಜಯಂತಿಯನ್ನು ಸರಕಾರಿ ವೆಚ್ಚದಲ್ಲಿ ಆಚರಿಸುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡಿದ್ದು. ಇದರಿಂದಾಗಿ ಪ್ರತಿಭಟನಾ ಗಲಭೆಗಳಿಗೆ ಮೂವರು ಬಲಿಯಾಗಿ, ಹಲವರು ಗಾಯಗೊಂಡಿದ್ದಾರೆ. ಸರಕಾರ ನಡೆಸುತ್ತಿರುವವರು ತಮ್ಮ ಕರ್ತವ್ಯದ ಬಗ್ಗೆ ಜಾಗರೂಕರಾಗಿದ್ದರೆ, ಇದನ್ನು ತಪ್ಪಿಸಬಹುದಾಗಿತ್ತು, ಅಲ್ಲವೇ?
 

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು?
ಬೆದರಿಕೆಯನದರಿಂದ ನೀಗಿಪನು ಸಖನು
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ
ವಿಧಿ ಹೇರುವ ಹೊರೆಗಳಿಂದ ತಪ್ಪಿಸಿಕೊಳ್ಳುವವನು ಎಲ್ಲಿದ್ದಾನೆ? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಎತ್ತಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಅಂಥವರು ಇಲ್ಲವೇ ಇಲ್ಲ. ಈ ಅರಿವು ಮೂಡಿದಾಗ, ವಿಧಿಯ ಹೊಡೆತಗಳ ಬಗೆಗಿನ ಬೆದರಿಕೆಯನ್ನು ನೀಗಿಸಿಕೊಳ್ಳುವವರು ಕೆಲವರಿದ್ದಾರೆ.
ಡಿ.ವಿ.ಜಿ.ಯವರವರ ಧೋರಣೆ ಸರಳ: ವಿಧಿ ಆಘಾತ ನೀಡಿದಾಗ, ಅದನ್ನು ತಡೆದುಕೊಳ್ಳಲಿಕ್ಕಾಗಿ ಎದೆಯನ್ನು ಉಕ್ಕಾಗಿಸಬೇಕು; ಬಡಪೆಟ್ಟಿಗೆ ಬಾಗದಂತೆ, ಮುರಿಯದಂತೆ ಶಕ್ತಿಯುತವಾಗಿಸಬೇಕು. ವಿಧಿಯ ಹೊರೆಗೆ ಬೆನ್ನನ್ನು ಒಡ್ಡಿಕೊಂಡು, ಆ ಹೊರೆ ಹೊತ್ತು ಸಾಗಬೇಕು. ತುಟಿ ಬಿಗಿದು, ಗೊಣಗುಟ್ಟದೆ ಬಂದ ಸಂಕಟವನ್ನೆಲ್ಲ ಎದುರಿಸುತ್ತ ಮುನ್ನಡೆಯಬೇಕು. ಯಾಕೆಂದರೆ, ವಿಧಿಯಗಸ, ನಾವೆಲ್ಲ ಕತ್ತೆಗಳು.
ಇಂಥ ಧೋರಣೆಗೆ ಅತ್ಯುತ್ತಮ ಉದಾಹರಣೆ ಸುಪ್ರಸಿದ್ಧ ಭರತನಾಟ್ಯ ಕಲಾವಿದ ಬುಸೇಗೌಡರು. ಅವರು ಮಂಡ್ಯದ ಹತ್ತಿರದ ಹಳ್ಳಿಯವರು. ಅವರಿಗೆ ಮೂರು ವರುಷ ವಯಸ್ಸಾಗಿದ್ದಾಗ ಅಪಘಾತವೊಂದರಲ್ಲಿ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಕಂಗಾಲಾದ ಹೆತ್ತವರ ಗೋಳು ಹೇಳತೀರದು. ಅನಂತರ, ವೈದ್ಯರೆಲ್ಲ ಕೈಚೆಲ್ಲಿದಾಗ, ಆ ಹೆತ್ತವರು ಕಣ್ಣುಗಳಿಲ್ಲದ ಮಗುವನ್ನು ಬೆಂಗಳೂರಿನ ರಮಣ ಮಹರ್ಷಿ ಅಂಧಮಕ್ಕಳ ಶಾಲೆಗೆ ಸೇರಿಸಿದರು.
ನಾಲ್ಕು ವರುಷಗಳ ನಂತರ ನಡೆಯಿತು, ಬುಸೇಗೌಡರ ಬದುಕು ಬೆಳಗಿಸುವ ಘಟನೆ. ಅಶೋಕ್ ಕುಮಾರ್ ಎಂಬವರಿಂದ ಕೇವಲ ಹನ್ನೆರಡು ದಿನಗಳಲ್ಲಿ ಕೋಲಾಟ ಕಲಿತು ಅದ್ಭುತವಾಗಿ ಪ್ರದರ್ಶಿಸಿದರು ಆ ಶಾಲೆಯ ಅಂಧಮಕ್ಕಳು. ಇದರಿಂದ ಉತ್ಸಾಹಿತರಾದ ಅಶೋಕ್ ಕುಮಾರ್ ಭರತನಾಟ್ಯ ಕಲಿಸಲು ಮುಂದಾದಾಗ ಸೈ ಎಂದರು ಬುಸೇಗೌಡರು. ಅಂದಿನಿಂದ ಭರತನಾಟ್ಯವೇ ಅವರ ಬದುಕಾಯಿತು. ಭರತನಾಟ್ಯದಲ್ಲಿ ಸಾಧನೆ ಮಾಡುತ್ತ ಮಾಡುತ್ತ ದಶಾವತಾರ ನೃತ್ಯರೂಪಕದಲ್ಲಿಯೂ ಅಪ್ರತಿಮ ಎನಿಸಿದರು. ಭರತನಾಟ್ಯದ ವಿಶೇಷತೆಯಾದ ಮುಖಭಾವ ಪ್ರದರ್ಶನದಲ್ಲಿ ತನ್ನ ಗುರುವಿಗೇ ಸರಿಮಿಗಿಲೆನಿಸಿದರು. ಸಾವಿರಕ್ಕೂ ಮಿಕ್ಕಿ ಭರತನಾಟ್ಯ ಪ್ರದರ್ಶನ ನೀಡಿರುವ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳೂ ದಕ್ಕಿವೆ. ವಿಧಿಯ ಹೊರೆಗಳಿಂದ ತಪ್ಪಿಸಿಕೊಳ್ಳಲಾಗದು; ಅಂತಿರುವಾಗ ಅದರ ಬಗೆಗಿನ ಹೆದರಿಕೆಯನ್ನು ತೊಡೆದು ಹಾಕಿ, ಎದೆಯನ್ನು ಉಕ್ಕಾಗಿಸಿ, ಅದನ್ನು ಎದುರಿಸುವ ಪರಿ ಇದು, ಅಲ್ಲವೇ?  

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು
ದುಷ್ಟ ಸಾಸದೆ ಶಿಷ್ಟತನವ ಪರಿಕಿಪುದು
ಎಷ್ಟ ನೀಂ ಸೈಸಲಹುದೆನ್ನುವನು ವಿಧಿರಾಯ
ಶಿಷ್ಟ ಶೋಧಕನವನು – ಮರುಳ ಮುನಿಯ
ವಿಧಿರಾಯ ವಿಧಿಸುವ ಅಗ್ನಿಪರೀಕ್ಷೆಗಳನ್ನು ಈ ಮುಕ್ತಕದಲ್ಲಿ ಸೂಚಿಸಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ನಮಗೆ ಇಷ್ಟವಾಗಿರುವುದನ್ನು ನಾಶ ಮಾಡುವುದು; ಸಾಲುಸಾಲಾಗಿ ಕಷ್ಟಗಳನ್ನು ನೀಡುವುದು; ದುಷ್ಟ ಸಾಹಸಗಳ ಮೂಲಕ ನಮ್ಮ ಒಳ್ಳೆಯತನವನ್ನು ಪರೀಕ್ಷೆಗೊಡ್ಡುವುದು; ಇಂತಹ ಸಂಕಟಗಳನ್ನೆಲ್ಲ ನಾವು ಎಷ್ಟು ಸಹಿಸಬಲ್ಲೆವು ಎಂದು ಪರೀಕ್ಷಿಸುವುದು ವಿಧಿರಾಯನ ಉದ್ದೇಶ. ಈ ಜಗತ್ತಿನ ಸಜ್ಜನ(ಶಿಷ್ಟ)ರ ಪತ್ತೆಗೆ ಆತ ಬಳಸುವ ಮಾರ್ಗಗಳು ಇವು.
ಆದ್ದರಿಂದ ಇಂತಹ ಪರೀಕ್ಷೆಗಳನ್ನೆಲ್ಲ ಸಮಚಿತ್ತದಿಂದ ಎದುರಿಸುವ ಬದುಕು ನಮ್ಮದಾಗಬೇಕು. ಇದನ್ನು ಹೇಳುವುದು ಸುಲಭ. ಆದರೆ ಮಾಡಿ ತೋರಿಸಿದವರಿದ್ದಾರೆಯೇ?
ಹೌದು, ಇದ್ದಾರೆ, ಮುಂಬಯಿಯಲ್ಲಿ ಪ್ರದೀಪ್ ತನ್ನಾ ಮತ್ತು ದಮಯಂತಿ ದಂಪತಿ. ಸಿಹಿತಿಂಡಿಗಳ ಅಂಗಡಿಯ ಮಾಲೀಕ ಪ್ರದೀಪ್ ಅವರ ಬದುಕು ಆಗಸ್ಟ್ ೨೦೧೧ರ ವರೆಗೆ ಸಿಹಿಯಾಗಿಯೇ ಇತ್ತು. ಆಗ ಮಗ ನಿಮಿಷ್ ವಯಸ್ಸು ೨೨. ಮನೆಯೆಲ್ಲ ಹರುಷ ತುಂಬಿ ತುಳುಕಿತ್ತು. ಫೋಟೋಗ್ರಾಫಿಯನ್ನು ವೃತ್ತಿಯಾಗಿ ಆಯ್ದುಕೊಂಡ ನಿಮಿಷ್, ಅದರ ಸಲುವಾಗಿ ಸಭೆಯೊಂದಕ್ಕೆ ಹಾಜರಾಗಿ ರಾತ್ರಿ ತಡವಾಗಿ ಮನೆಗೆ ಬರುತ್ತೇನೆಂದು ಫೋನ್ ಮಾಡಿ ತಿಳಿಸಿ, ಲೋಕಲ್ ಟ್ರೈನ್ ಏರಿದ್ದ. ಆಗ ಅದೇನಾಯಿತೋ? ಜನದಟ್ಟಣೆಯಿದ್ದ ರೈಲು ಬೋಗಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳಕೊಂಡ. ಹೆತ್ತವರ ದುಃಖ ಹೇಳಲುಂಟೇ? ಮುಂದಿನ ಒಂದೂವರೆ ವರುಷ ಬದುಕೇ ಮುದುಡಿತ್ತು.
ಅದೊಂದು ದಿನ ಅಮ್ಮ ದಮಯಂತಿ ದುಃಖವನ್ನೆಲ್ಲ ಕೊಡವಿ ಎದ್ದರು. ತನ್ನ ಮಗ ನಿಮಿಷ್ ಮಾಡುತ್ತಿದ್ದ ಒಳ್ಳೆಯ ಕೆಲಸವನ್ನು ನೆನೆದರು. ನಿರಾಶ್ರಿತರಿಗೆ, ವೃದ್ಧರಿಗೆ ಮಗ ಸಹಾಯ ಮಾಡುತ್ತಿದ್ದ. ಅದನ್ನೇ ಮುಂದುವರಿಸಲು ನಿರ್ಧರಿಸಿದರು. ಮುಂಬೈನ ಮುಲುಂದದಲ್ಲಿ ಕಾಯಿಲೆಗಳಿಂದ ನರಳುವ, ರಸ್ತೆ ಬದಿಯಲ್ಲೇ ಬದುಕುವ ವೃದ್ಧರನ್ನೂ, ನಿರಾಶ್ರಿತರನ್ನೂ ಗುರುತಿಸಿದರು. ಅವರಿಗೆ ತಾವೇ ಅಡುಗೆ ಮಾಡಿ, ಬಾಕ್ಸುಗಳಲ್ಲಿ ಆಹಾರ ನೀಡಲು ಶುರು ಮಾಡಿದರು. ಈ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದರು ಪತಿ ಪ್ರದೀಪ್. ಬಿಸಿ ಆಹಾರ ತಿನ್ನುವ ಆ ನಿರಾಶ್ರಿತರ ಧನ್ಯತಾ ಭಾವ ಕಾಣುತ್ತಾ, ಈ ಒಳ್ಳೆಯ ಕೆಲಸದ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿ, ಅದಕ್ಕಾಗಿ ನಿಮಿಷ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ.
ಈಗ ಹತ್ತು ಹಲವು ಒಳ್ಳೆಯ ಕೆಲಸಗಳು ಆ ಟ್ರಸ್ಟಿನಿಂದ ನಡೆಯುತ್ತಿವೆ: ಪ್ರತಿ ತಿಂಗಳೂ ನಿರಾಶ್ರಿತರಿಗೆ ಔಷಧಿ ಒದಗಣೆ; ಎರಡು ವನವಾಸಿ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ವಿತರಣೆ. ವಿಧಿರಾಯ ಎಂತಹ ಶೋಧಕ! ತನ್ನಾ ದಂಪತಿಯ ಮಗನನ್ನೇ ಕಿತ್ತುಕೊಂಡ. ಆ ದುಃಖ ಮರೆಯಲಿಕ್ಕಾಗಿ ನೊಂದವರ ನೆರವಿಗೆ ನಿಂತಿದ್ದಾರೆ ಇವರು. 
   
 

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು
ತೇಲುತ್ತ ಭಯವ ಕಾಣದೆ ಸಾಗುತಿರಲು
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ
ಮೇಲ ಕೀಳಾಗಿಪುದು - ಮಂಕುತಿಮ್ಮ
ಕಾಲವೆಂಬ ನದಿಯಲ್ಲಿ ಸಾಗುವ ಬಾಳೆಂಬ ದೋಣಿ – ಇದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಕೊಡುವ ಸರಳ ರೂಪಕ. ಬಾಳಿನಲ್ಲಿ ಯಾವ ಭಯವೂ ಇಲ್ಲದೆ, ದೋಣಿಯಂತೆ ಹಾಯಾಗಿ ಸಾಗುತ್ತಿರಲು ಅಚಾನಕ್ ಆಘಾತ: ಎಲ್ಲಿಂದಲೋ ಬೀಸಿ ಬರುವ ಬಿರುಗಾಳಿ ದೋಣಿಯನ್ನು ತಲೆಕೆಳಗಾಗಿಸುತ್ತದೆ. ಬದುಕಿನಲ್ಲಿಯೂ ಆಘಾತದಿಂದಾಗಿ ಅಲ್ಲೋಲಕಲ್ಲೋಲ.
ಕಳೆದ ಹತ್ತು ವರುಷಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿ ಸತ್ತವರ ಸಂಖ್ಯೆ ೧೦ ಲಕ್ಷ. ಅಂದರೆ ಪ್ರತಿ ಗಂಟೆಗೆ ೧೫ ಜನರ ಸಾವು. ಪ್ರತಿದಿನವೂ ರಸ್ತೆ ಅಪಘಾತಗಳಿಗೆ ಬಲಿಯಾಗುವ ಮಕ್ಕಳ ಸಂಖ್ಯೆ ೨೦. ರಸ್ತೆಯ ಪಕ್ಕ ನಡೆದುಕೊಂಡು ಹೋಗುವವರೂ ಸುರಕ್ಷಿತರಲ್ಲ. ಯಾಕೆಂದರೆ, ಕಳೆದ ದಶಕದಲ್ಲಿ ರಸ್ತೆ ಅಪಘಾತಗಳಿಂದಾಗಿ ೧.೨ಲಕ್ಷ ಪಾದಚಾರಿಗಳ ಮರಣ.
ಹೀಗೆ ಸತ್ತವರ ಬದುಕು ನದಿಯ ಮೇಲಣ ದೋಣಿಯಂತೆ ಚೆನ್ನಾಗಿ ಸಾಗುತ್ತಿತ್ತು. ಅಪ್ಪಳಿಸಿತು ನೋಡಿ ಅಪಘಾತ – ಯಾರದೋ ತಪ್ಪಿನಿಂದಾಗಿ ಇವರ ಕುಟುಂಬಕ್ಕೆ ಎಂದಿಗೂ ಮುಗಿಯದ ನೋವು.
ಅಪಘಾತದಲ್ಲಿ ಸತ್ತವರ ಕುಟುಂಬದವರಿಗೆ ಪರಿಹಾರ ಸಿಕ್ಕೀತು – ಆದರೆ ಅದಕ್ಕಾಗಿ ಎಷ್ಟೆಲ್ಲ ಯಾತನೆ. ಆಸ್ಪತ್ರೆಯಿಂದ ಸತ್ತವರ ಶವ ಬಿಡಿಸಿಕೊಳ್ಳಲಿಕ್ಕೂ ಲಂಚ ಕೊಡಬೇಕಾದ ಸಂಕಟ. ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಲಿಕ್ಕಾಗಿ ಮತ್ತೆಮತ್ತೆ ಭೇಟಿ. ವಿಮಾ ಕಂಪೆನಿಯವರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಿಕ್ಕಾಗಿ ಓಡಾಟ. ಮೋಟಾರು ವಾಹನಗಳ ಅಪಘಾತ ಪರಿಹಾರ ಕೋರ್ಟಿಗೆ ಅಲೆದಲೆದು ಸುಸ್ತು. ಐದು ವರುಷ ದಾಟಿದರೂ ಕೋರ್ಟಿನಿಂದ ಪರಿಹಾರ ಸಿಗದಿರುವ ಪ್ರಕರಣಗಳು ಸಾವಿರಾರು.
ಈ ವರುಷ ಯುರೋಪಿಗೆ ನೌಕೆಗಳಲ್ಲಿ ಅಥವಾ ದೋಣಿಗಳಲ್ಲಿ ನುಸುಳುವಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಮಡಿದ ೨,೦೦೦ ಜನರು; ಜೂನ್ ೨೦೧೩ರಲ್ಲಿ ಕೇದಾರನಾಥ ಹಾಗೂ ಉತ್ತರಖಂಡದ ರುದ್ರಪ್ರಯಾಗ, ಉತ್ತರಕಾಶಿಗಳಲ್ಲಿ ಜಲಪ್ರಳಯಕ್ಕೆ ಬಲಿಯಾದ ೫,೦೦೦ ಜನರು; ಭಯಂಕರ ಸುನಾಮಿಯಲ್ಲಿ ಸತ್ತ ೨,೭೫,೦೦೦ ಜನರು; ಇತ್ತೀಚೆಗೆ ನೇಪಾಳದ ತೀವ್ರ ಭೂಕಂಪದಲ್ಲಿ ಜೀವ ಕಳೆದುಕೊಂಡ ಸಾವಿರಾರು ಜನರು. ಇವರೆಲ್ಲರ ಕುಟುಂಬಗಳ ಪಾಡು ನದಿಯಲ್ಲಿ ಅಡಿಮೇಲಾದ ದೋಣಿಯಂತೆ. ಇದರ ಪಾಠ: ಯಾವುದೂ ಭೂಮಿಯಲ್ಲಿ ಸ್ಥಿರವಲ್ಲ, ಇಂದಿನಂತೆ ನಾಳೆಯಿಲ್ಲ.

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ
ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ
ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು
ಬಾಳು ತಾಳುಮೆ ಕಲಿತು – ಮರುಳ ಮುನಿಯ
ನಾವು ಹೇಗೆ ಬದುಕಬೇಕು? ಎಂಬದನ್ನು ತೋರಿಸಿ ಕೊಡಲು ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಕೊಡುವ ಉಪಮೆ ನದಿ ಮತ್ತು ಬೆಟ್ಟ. ಕಾಲವೆಂಬ ನದಿ ನಿರಂತರವಾಗಿ ಹರಿಯುತ್ತಿರುವಾಗ ಅದರ ನಡುವೆ ಶೀಲದ ಬೆಟ್ಟ (ಶೈಲ) ಸ್ಥಿರವಾಗಿ ನಿಂತಿರುತ್ತದೆ. ನದಿಯ ನೀರಿನ ರಭಸ, ಹೊಡೆತಗಳನ್ನು ಎದುರಿಸುತ್ತ ಅಲುಗಾಡದೆ ನಿಂತಿರುತ್ತದೆ. ಗಾಳಿ ಎಷ್ಟೇ ಬಿರುಸಿನಿಂದ ಬೀಸಿದರೂ ಆತ್ಮವೆಂಬ ಗಿರಿಯೂ ಅಚಲವಾಗಿ ಇರುತ್ತದೆ.
ಮರದಿಂದ ಬಿದ್ದ ಹಲಸಿನ ಹಣ್ಣು ಹೋಳು ಹೋಳಾಗಿ ಕೊಳೆತು ಹಾಳಾಗುವಂತೆ ಸಾಮಾನ್ಯ ಜನರೂ ತಮ್ಮ ಬದುಕಿನಲ್ಲಿ ಹಾಳಾಗುತ್ತಿದ್ದಾರೆ. ನೀನು ಹಾಗಾಗ ಬೇಡ; ತಾಳುಮೆ ಕಲಿತು ಬಾಳು ಎಂಬುದು ಅವರ ಹಿತನುಡಿ.
ಮೋಹನದಾಸ ಕರಮಚಂದ ಎಂಬ ವ್ಯಕ್ತಿ ಮಹಾತ್ಮನಾಗಿ ಬೆಳೆದ ಬಗೆಯನ್ನು ಗಮನಿಸಿ. ದಕ್ಷಿಣ ಆಫ್ರಿಕಾದಲ್ಲಿ ಅವರದು ಗೌರವಾನ್ವಿತ ವಕೀಲ ವೃತ್ತಿ. ಟಿಕೇಟು ಪಡೆದು ರೈಲಿನಲ್ಲಿ ಕುಳಿತಿದ್ದರೂ ಇವರ ಚರ್ಮದ ಬಣ್ಣ ಬಿಳಿಯಲ್ಲ ಎಂಬ ಕಾರಣಕ್ಕಾಗಿ ಸೊಕ್ಕಿನ ಬಿಳಿವ್ಯಕ್ತಿಯೊಬ್ಬ ಇವರನ್ನು ರೈಲು ಬೋಗಿಯಿಂದ ಹೊರದಬ್ಬಿಸುತ್ತಾನೆ. ಆಗಲೇ ಅವರು ಮಾಡಿದ ಸಂಕಲ್ಪ: ಇಂತಹ ಅವಮಾನ ನನ್ನ ದೇಶಬಾಂಧವರು ಯಾರಿಗೂ ಇನ್ನು ಆಗಬಾರದು. ಮುಂದಿನ ವರುಷಗಳಲ್ಲಿ ಎಲ್ಲ ವಿರೋಧ, ಟೀಕೆಗಳನ್ನು ತಮ್ಮ ಸದಾಚಾರದ ಬಲದಿಂದ ಎದುರಿಸಿ ಮುನ್ನಡೆದರು ಮಹಾತ್ಮಾ ಗಾಂಧಿ. ಮತ್ತೆಮತ್ತೆ ಬ್ರಿಟಿಷ್ ಆಡಳಿತ ಜೈಲಿಗೆ ತಳ್ಳಿದರೂ ಅವರ ಆತ್ಮಬಲ ಕಿಂಚಿತ್ತೂ ಅಲುಗಾಡಲಿಲ್ಲ. ಉಪ್ಪಿನ ಸತ್ಯಾಗ್ರಹದ ಮೂಲಕ ಇಡೀ ದೇಶದಲ್ಲೇ ಸಂಚಲನ ಮೂಡಿಸಿದರು. ಕೊನೆಗೆ ಬ್ರಿಟಿಷರಿಗೆ “ದೇಶ ಬಿಟ್ಟು ತೊಲಗಿ” ಎಂಬ ಆದೇಶ ನೀಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರು. ಹೋರಾಟದ ಹಾದಿಯಲ್ಲಿ ಅವರ ಸದಾಚಾರ ಬೆಟ್ಟದಂತೆ ಅಚಲ.
ಈ ವರುಷ ನಮ್ಮನ್ನು ಅಗಲಿದ ಇನ್ನೊಬ್ಬ ಧೀಮಂತ ವ್ಯಕ್ತಿ ಎ.ಪಿ.ಜೆ. ಅಬ್ದುಲ್ ಕಲಾಂ. ಬಡಕುಟುಂಬದಲ್ಲಿ ಹುಟ್ಟಿ, ಬಾಲ್ಯದಲ್ಲಿ ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತ ಕಲಿತು, ವಿಜ್ನಾನಿಯಾದರು. ಕೊನೆಗೆ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನ ಅಲಂಕರಿಸಿ, ಅದಕ್ಕೂ ಘನತೆ ತಂದುಕೊಟ್ಟರು. “ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ೨೦೨೫ರಲ್ಲಿ ಭಾರತವನ್ನು ಮಹಾನ್ ದೇಶ ಮಾಡೋಣ” ಎಂದು ಲಕ್ಷಗಟ್ಟಲೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹುರಿದುಂಬಿಸಿದರು. ೧೨೫ ಕೋಟಿ ಜನರಿರುವ ದೇಶದಲ್ಲಿ ಎಲ್ಲರ ಪ್ರೀತಿ-ಗೌರವಕ್ಕೆ ಪಾತ್ರರಾಗಿ ಬಾಳುವುದು ಹೇಗೆಂದು ತೋರಿಸಿಕೊಟ್ಟರು. ಈ ಇಬ್ಬರ ಬದುಕು ತಾಳುಮೆ ಕಲಿತು ಬಾಳುವುದು ಹೇಗೆಂಬುದಕ್ಕೆ ನಿದರ್ಶನ.
 

ಶಕ್ತಿ ಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ
ಯುಕ್ತಿ ಮೀರ್ದ ಪ್ರಶ್ನೆಗಳನು ಕೇಳುತಿರೆ
ಚಿತ್ತವನು ತಿರುಗಿಸೊಳಗಡೆ ನೋಡು ನೋಡಲ್ಲಿ
ಸತ್ವದಚ್ಛಿನ್ನ ಝರಿ - ಮಂಕುತಿಮ್ಮ
ವಿಧಿ ನಮ್ಮನ್ನು ಮತ್ತೆಮತ್ತೆ ಪರೀಕ್ಷಿಸುತ್ತಲೇ ಇರುತ್ತದೆ – ನಮ್ಮ ಸಾಮರ್ಥ್ಯ ಮೀರಿದ ಪರೀಕ್ಷೆಗಳಿಗೆ ಒಡ್ಡುವ ಮೂಲಕ, ನಮ್ಮ ಬುದ್ಧಿವಂತಿಕೆ ಮೀರಿದ ಪ್ರಶ್ನೆಗಳನ್ನು ಎದುರಾಗಿಸುವ ಮೂಲಕ. ಅಂತಹ ಸವಾಲುಗಳನ್ನು ಎದುರಿಸುವುದು ಹೇಗೆ? ಎಂಬ ಮಹಾನ್ ಪ್ರಶ್ನೆಗೆ ಈ ಮುಕ್ತಕದಲ್ಲಿ ಸರಳ ಉತ್ತರ ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಅಂತಹ ಸವಾಲುಗಳು ಎದುರಾದಾಗ ನಮ್ಮ ಚಿತ್ತವನ್ನು ಒಳಕ್ಕೆ ತಿರುಗಿಸಬೇಕು; ಅಲ್ಲಿ ನಿರಂತರವಾಗಿ (ಅಚ್ಛಿನ್ನ) ಹರಿಯುತ್ತಿರುವ ಸತ್ವದ ಝರಿ ಇದೆ. ನಮ್ಮೊಳಗಿನ ಸತ್ವವೇ ನಮ್ಮ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ದಾರಿ ತೋರಿಸುತ್ತದೆ.
ಬಿಹಾರದ ಬೆಟ್ಟದ ಮೂಲೆಯ ಹಳ್ಳಿಯಲ್ಲಿದ್ದರು ದಶರಥ ಮಾಂಜಿ. ಅವರ ಪತ್ನಿಯನ್ನು ಆಸ್ಪತ್ರೆಗೆ ಒಯ್ಯಲಾಗದೆ, ಆಕೆ ತೀರಿಕೊಂಡರು.ಆಗ ದಶರಥ ಮಾಂಜಿ ನಿರ್ಧರಿಸಿದರು: ಈ ಗತಿ ಇನ್ನಾರಿಗೂ ಬರಬಾರದೆಂದು. ಆದರೆ ಪರಿಹಾರ ಏನು? ಬೆಟ್ಟ ಸುತ್ತಿ ಇಳಿಯಬೇಕಾದರೆ ೭೦ ಕಿಮೀ ದೂರ. ಆ ಬೆಟ್ಟ ಕಡಿದರೆ ಕೇವಲ ಒಂದು ಕಿಮೀ ಅಂತರದಲ್ಲಿತ್ತು ರಸ್ತೆ. ಮಾಂಜಿ ತನ್ನೊಳಗಿನ ಶಕ್ತಿಯನ್ನೇ ನಂಬಿ ಬೆಟ್ಟ ಕಡಿಯಲು ತೊಡಗಿದರು. ಮುಂದಿನ ೨೨ ವರುಷ ದಿನದಿನವೂ  ಏಕಾಂಗಿಯಾಗಿ ಆ ಬೆಟ್ಟ ಕಡಿದು, ೩೦ ಅಡಿ ಅಗಲದ ರಸ್ತೆ ನಿರ್ಮಿಸಿದರು. ಎಂತಹ ಸಾಧನೆ!
ಥೋಮಸ್ ಆಲ್ವಾ ಎಡಿಸನಿಗೆ ಒಂದು ಕನಸು: ವಿದ್ಯುತ್ತಿನಿಂದ ಬೆಳಕು ಬೆಳಗಿಸಬೇಕೆಂದು. ಆದರೆ ಹೇಗೆ? ಒಂದಾದ ಮೇಲೊಂದು ವಿಧಾನವನ್ನು ಪರೀಕ್ಷಿಸುತ್ತ ನಡೆದರು. ಹಾಗಲ್ಲ, ಹಾಗಲ್ಲ ಎಂಬುದನ್ನು ದಾಖಲಿಸುತ್ತ ಸಾಗಿದರು. ೯೯೯ ವಿಧಾನಗಳಿಂದ ಯಶಸ್ಸು ಸಿಗಲಿಲ್ಲ. ಅವರು ಎದೆಗುಂದಲಿಲ್ಲ. ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿಯೇ ಸಿಗುತ್ತದೆಂಬ ನಂಬಿಕೆ ಅವರಿಗೆ – ಆ ನಂಬಿಕೆಗೆ ಬಲ ಬಂದದ್ದು ಅವರೊಳಗಿನ ಸತ್ವದಿಂದಲೇ. ಕೊನೆಗೂ ಅವರ ೧೦೦೦ನೇ ಪ್ರಯತ್ನದಲ್ಲಿ ವಿದ್ಯುತ್ ಬಲ್ಬ್ ಬೆಳಗಿತು! ಬದುಕಿನ ಎಲ್ಲ ಪರೀಕ್ಷೆಗಳನ್ನು, ಎಲ್ಲ ಪ್ರಶ್ನೆಗಳನ್ನು ನಮ್ಮೊಳಗಿನ ಸತ್ವದ ಬಲದಿಂದಲೇ ಎದುರಿಸುತ್ತೇವೆ ಎಂಬ ಸಂಕಲ್ಪ ತೊಟ್ಟರೆ ಆಂತರಿಕ ಶಕ್ತಿ ಚಿಮ್ಮುತ್ತದೆ; ಹೊಸಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ಕಷ್ಟ ಭಯ ತೋರ್ದಂದು, ನಷ್ಟ ನಿನಗಾದಂದು
ದೃಷ್ಟಿಯನು ತಿರುಗಿಸೊಳಗಡೆ ನೋಡಲ್ಲಿ
ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ  
ಪುಷ್ಟಿಗೊಳ್ಳದರಿಂದೆ – ಮರುಳ ಮುನಿಯ
ಅದೇ ಚಿಂತನೆಯನ್ನು ಈ ಮುಕ್ತದಲ್ಲಿಯೂ ಮಿನುಗಿಸಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ಕಷ್ಟನಷ್ಟಗಳು ನಿನಗಾದಾಗ ನಿನ್ನೊಳಗೆ ನೋಡು, ಸೃಷ್ಟಿಯ ಅಮೃತದ್ರವ ಗುಪ್ತವಾಗಿ ಅಲ್ಲಿ ಸ್ರವಿಸುತ್ತಿದೆ; ಅದರಿಂದ ಶಕ್ತಿ ಪಡೆದುಕೋ ಎನ್ನುತ್ತಾರೆ.
ಆಂಧ್ರಪ್ರದೇಶದ ಗೋದಾವರಿ ನದಿ ತೀರದ ಹಳ್ಳಿ ತೀಪಾರು. ಅಲ್ಲಿನ ಹುಡುಗ ನಾಗನರೇಶ. ೧೯೯೩ರ ಜನವರಿ ತಿಂಗಳಿನಲ್ಲಿ ಲಾರಿ ಚಾಲಕನ ಬಲಪಕ್ಕದಲ್ಲಿ ಕೂತಿದ್ದಾತ, ಫಕ್ಕನೆ ಕೆಳಕ್ಕೆ ಬಿದ್ದು, ಆಸ್ಪತ್ರೆ ಸೇರಬೇಕಾಯಿತು. ಕೊನೆಗೆ ಅವನ ಎರಡೂ ಕಾಲುಗಳನ್ನು ತೊಡೆಯ ತನಕ ಕತ್ತರಿಸಬೇಕಾಯಿತು. ಎಂಟನೆಯ ಕ್ಲಾಸಿನಲ್ಲಿದ್ದ ಆತ “ತನ್ನದೆಲ್ಲ ಮುಗಿಯಿತೆಂದು” ಕೈ ಚೆಲ್ಲಲಿಲ್ಲ. ಹಟಕ್ಕೆ ಬಿದ್ದು ಓದಿದ. ಚೆನ್ನೈನ ಐಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತೇ ಬಿಟ್ಟ. ಅವನೀಗ ಬೆಂಗಳೂರಿನಲ್ಲಿ ಗೂಗಲ್ ಕಂಪೆನಿಯಲ್ಲಿ ದೊಡ್ದ ಹುದ್ದೆಯಲ್ಲಿದ್ದಾನೆ. ದುಷ್ಟರು ರೈಲಿನಿಂದ ತಳ್ಳಿದಾಗ, ರೈಲಿನ ಚಕ್ರಗಳಡಿ ಬಿದ್ದು ಕಾಲು ಕಳೆದುಕೊಂಡ ಅರುಣಿಮಾ ಸಿನ್ಹಾ ಅನಂತರ ಎರಡೇ ವರುಷಗಳಲ್ಲಿ ಕೃತಕ ಕಾಲು ತೊಟ್ಟು, ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್ ಏರಿದ್ದು ಈಗ ಇತಿಹಾಸ.
ಕನ್ನಡದ ಪ್ರಸಿದ್ಧ ಲೇಖಕಿ ಡಾ. ಅನುಪಮ ನಿರಂಜನ ಅವರನ್ನು ಕ್ಯಾನ್ಸರ್ ಕಾಡಿತು. ಅವರು ಅಂಜಲಿಲ್ಲ, ಅಳುಕಲಿಲ್ಲ. ಅನಂತರ, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತ ೧೩ ವರುಷ ಅತ್ಯಂತ ಜೀವನೋತ್ಸಾಹದಿಂದ ಬದುಕಿದರು. ಕ್ಯಾನ್ಸರ್ ಪೀಡೆಯನ್ನು ಎದೆಗಾರಿಕೆಯಿಂದ ಎದುರಿಸಿದ ಇನ್ನೊಬ್ಬ ಕನ್ನಡದ ಬರಹರಾರ್ತಿ ಕುಸುಮಾ ಶಾನಭಾಗ. ಕ್ಯಾನ್ಸರ್ ಜೊತೆ ಹೋರಡುತ್ತಲೇ “ಪುಟಗಳ ನಡುವಿನ ನವಿಲುಗರಿ” ಅಂಕಣ ಬರಹಗಳನ್ನು, ವೇಶ್ಯಾ ಸಮಸ್ಯೆ ಬಗ್ಗೆ ದಶಕದ ಅಧ್ಯಯನ ಆಧಾರಿತ “ಕಾಯದ ಕಾರ್ಪಣ್ಯ” ಪುಸ್ತಕವನ್ನು ಹಾಗೂ ಕಾದಂಬರಿಗಳನ್ನು ಬರೆದರು. ಅಮೆರಿಕದಲ್ಲಿ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿ ಸಂಭ್ರಮಿಸುತ್ತಿದ್ದ ಮಾಯಾ ತಿವಾರಿ ತತ್ತರಿಸಿದ್ದು ಅವರಲ್ಲಿ ಕ್ಯಾನ್ಸರ್ ಪತ್ತೆಯಾದಾಗ. ಆಗ ಅವರು ತಮ್ಮ ಬದುಕಿನ ದಾರಿಯನ್ನೇ ಬದಲಾಯಿಸಿದರು – ಯೋಗದ ದಾರಿಯಲ್ಲಿ ಮುನ್ನಡೆದು, ಕ್ಯಾನ್ಸರ್ ಪೀಡೆಯನ್ನೇ ಗೆದ್ದು, ಸಾವಿರಾರು ಜನರಿಗೆ ದಾರಿದೀಪವಾದರು. ಇಂತಹ ಹಲವರ ಬದುಕನ್ನು ಗಮನಿಸಿದಾಗ ಗೊತ್ತಾಗುತ್ತದೆ: ಕಷ್ಟನಷ್ಟ ಎದುರಾದಾಗ ಅವರು ಪರಿಹಾರಕ್ಕಾಗಿ ಹೊರಗೆ ನೋಡಲಿಲ್ಲ; ಬದಲಾಗಿ ತಮ್ಮ ದೃಷ್ಟಿ ಒಳಗೆ ತಿರುಗಿಸಿಕೊಂಡರು; ತಮ್ಮೊಳಗಿನ ಅಮೃತಸತ್ವ ಕಂಡರು. ಅದರ ಬಲದಿಂದ ಬದುಕು ಬೆಳಗಿಸಿಕೊಂಡರು.   
 

ಇನ್ನೇನು ಮತ್ತೇನು ಗತಿಯೆಂದು ಬೆದರದಿರು
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು
ತಣ್ಣಗಿರಿಸಾತ್ಮವನು - ಮಂಕುತಿಮ್ಮ
ಇನ್ನು ಮುಂದೇನು? ಮತ್ತೇನು ಗತಿ? ಎಂದೆಲ್ಲ ಯಾವತ್ತೂ ಅಂಜದಿರು. ಯಾಕೆಂದರೆ ವಿಧಿಯ ಲೆಕ್ಕಣಿಕೆ (ಪೆನ್ನು) ನಿನ್ನ ಕೈಯಲ್ಲಿಲ್ಲ ಎಂದು ಸೂಚಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ. ನಾವು ಹುಟ್ಟುವಾಗಲೇ ನಮ್ಮ ಹಣೆಬರಹವನ್ನು ವಿಧಿ ಬರೆದಿರುತ್ತದೆ ಎಂಬುದೊಂದು ನಂಬಿಕೆ.
ಇತ್ತೇಚೆಗಿನ ದುರುಂತಗಳ ಸರಮಾಲೆ ಗಮನಿಸಿರಿ: ಮಲೇಷ್ಯಾದ ಎರಡು ವಿಮಾನಗಳು ಸಮುದ್ರದಲ್ಲಿ ಮುಳುಗಿ ಪ್ರಯಾಣಿಕರೆಲ್ಲರ ಸಾವು. ಚೀನಾದ ನೌಕೆಯೊಂದು ಮುಳುಗಿ ಸುಮಾರು ೫೦೦ ಜನರ ಮರಣ. ೨೫ ಎಪ್ರಿಲ್ ೨೦೧೫ರಂದು ನೇಪಾಳವನ್ನು ನಡುಗಿಸಿದ ಭೂಕಂಪಕ್ಕೆ ೮,೦೦೦ ಜನರ ಬಲಿ; ಅಲ್ಲಿನ ಗಾಯಾಳುಗಳು ೧೭,೦೩೭.
ನಮ್ಮದೇ ಕರ್ನಾಟಕದಲ್ಲಿ ೨೦೧೫ರ ಜೂನ್ ತಿಂಗಳಿನಿಂದ ತೊಡಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೫೦ ದಾಟಿದೆ. ಅವರೆಲ್ಲರೂ ಜಮೀನಿನ ಒಡೆಯರು. ಮಾತ್ರವಲ್ಲ, ನಮಗೆಲ್ಲ ಅನ್ನದಾತರು. ಆದರೂ ಯಾಕೆ ಪ್ರಾಣತ್ಯಾಗ ಮಾಡಿದರು? ತಾವು ಕಷ್ಟಪಟ್ಟು ಬೆಳೆಸಿದ ಕಬ್ಬಿನ ಬೆಳೆಗೆ ಬೆಂಕಿಯಿಟ್ಟು, ಅದರ ಉರಿಜ್ವಾಲೆಗೇ ಹಾರಿದರಲ್ಲ!
ಇದನ್ನು ವಿಧಿಲಿಖಿತ ಎನ್ನಬೇಡವೇ? ಅವರೆಲ್ಲರ ಕೈಯಲ್ಲಿ ಮೊಬೈಲ್ ಫೋನುಗಳಿದ್ದವು. ಸರಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಹತ್ತಾರು “ಸಹಾಯವಾಣಿ”ಗಳಲ್ಲಿ ಯಾವುದೇ ಫೋನ್ ನಂಬರಿಗೆ ಒಂದು ಫೋನ್ ಕರೆ ಮಾಡಿದ್ದರೆ …. ಅಥವಾ, ಮಡದಿಮಕ್ಕಳೊಡನೆ ಮನಬಿಚ್ಚಿ ಮಾತಾಡಿದ್ದರೆ “ಇನ್ನೇನು ಗತಿ” ಎಂಬ ದುಗುಡ ಮರೆಯಾಗಿ ಜೀವ ಉಳಿಯುತ್ತಿತ್ತು.
ಅದಕ್ಕೇ ಅನ್ನುವುದು ಆ ದೈವದ ಸಂಚು ನಮ್ಮ ಕಣ್ಣಿಗೆ ಕಾಣಿಸದಂತೆ (ಎಟುಕದೆ) ಸಾಗುತ್ತಿದೆ ಎಂದು. ದೈವ ನಮಗಾಗಿ ಏನನ್ನು ಕಾದಿರಿಸಿದೆ ಎಂಬುದನ್ನು ನಾವೆಂದೂ ತಿಳಿಯಲಾರೆವು. ಅದಕ್ಕಾಗಿಯೇ ನಮ್ಮ ಆತ್ಮವನ್ನು ತಣ್ಣಗಿರಿಸಬೇಕು. ಅಲ್ಲಿ ಯಾವುದೇ ಅಲ್ಲೋಲಕಲ್ಲೋಲಕ್ಕೆ ಆಸ್ಪದ ಕೊಡಬಾರದು. ಬದುಕಿನಲ್ಲಿ ಎದುರಾದದ್ದನ್ನೆಲ್ಲ “ಏನೇ ಬರಲಿ, ನಾನು ತಣ್ಣಗಿರುವೆ” ಎಂದು ಸ್ವೀಕರಿಸಬೇಕು.

ಸಹಿಸುವುದು ಸವಿಯುವುದು ಕಹಿಯೂಟ ಸಹಿಸುವುದು
ಬಹುವಾಯಿತೆಂದೆನದೆ ಕಹಿಯ ಸಹಿಸುವುದು
ಕಹೆ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ
ಸಹಿಸುವುದು ಬಂದುದನು – ಮರುಳ ಮುನಿಯ
ನಮ್ಮ ಬದುಕಿನಲ್ಲಿ ಸಹಿಸುವುದು ಮಾತ್ರವಲ್ಲ ಸವಿಯುವುದು ಅತ್ಯಗತ್ಯ. ಯಾವುದನ್ನು? ಕಹಿಯೂಟವನ್ನು! ಅಂದರೆ ಬದುಕು ನಮಗೆ ನೀಡುವ ನೋವು, ಸೋಲು, ಸಂಕಟ,ಕಷ್ಟನಷ್ಟ – ಎಲ್ಲವನ್ನೂ ಸಹಿಸುವುದು ಅಗತ್ಯ. ಇವೆಲ್ಲ ನಮಗೆ ಸುಖ ಅಥವಾ ನಲಿವು ನೀಡುವುದಿಲ್ಲ. ಬದಲಾಗಿ ದುಃಖದುಮ್ಮಾನಕ್ಕೆ ನಮ್ಮನ್ನು ತಳ್ಳುತ್ತವೆ. ಆದರೂ ಅವನ್ನು ಸಹಿಸಿಕೊಂಡು, ನಿಧಾನವಾಗಿ ಸವಿಯಲು ಕಲಿಯುವುದು ಅತ್ಯವಶ್ಯ ಎಂಬ ಸಂದೇಶ ನೀಡುತ್ತಾರೆ ಮಾನ್ಯ ಡಿ.ವಿ.ಜಿ.
ಒಂದು ಕುಟುಂಬಕ್ಕೆ ಬಡಿಯಬಹುದಾದ ಸಂಕಟಗಳನ್ನು ಗಮನಿಸಿ. ಗಂಡ, ಹೆಂಡತಿ, ಮಗ ಮತ್ತು ಮಗಳ ಸುಖಸಂಸಾರ. ತಟಕ್ಕನೆ ತಂದೆ ಅಪಘಾತದಲ್ಲಿ ಮೃತನಾದರೆ, ಮಗ ಪರೀಕ್ಷೆಯಲ್ಲಿ ಫೇಲಾಗುತ್ತಾನೆ. ಅನಂತರ ಮಗ ಮಾದಕದ್ರವ್ಯ ವ್ಯಸನಿಯೂ ಆಗುತ್ತಾನೆ. ಅತ್ತ ಮಗಳು ಪ್ರೇಮಪಾಶಕ್ಕೆ ಸಿಲುಕಿ ಪ್ರಿಯಕರನೊಂದಿಗೆ ಓಡಿಹೋಗುತ್ತಾಳೆ. ಮಗ ಅಪಘಾತದಲ್ಲಿ ಕಾಲು ಮುರಿದುಕೊಂಡರೆ, ಪ್ರಿಯಕರ ಮಾಡಿದ ಮೋಸದಿಂದ ಆಘಾತಕ್ಕೊಳಗಾದ ಮಗಳು, ಮನೆಗೆ ಮರಳಿ ಮಂಕಾಗಿ ಕೂರುತ್ತಾಳೆ. ಇವರು ಬಾಡಿಗೆಗಿದ್ದ ಮನೆಯ ಮಾಲೀಕ ತಕ್ಷಣವೇ ಮನೆ ಖಾಲಿ ಮಾಡಬೇಕೆಂದು ತಾಕೀತು ಮಾಡುತ್ತಾನೆ (ಬಾಡಿಗೆ ಕೊಡಲಿಲ್ಲವೆಂಬ ಕಾರಣಕ್ಕೆ) ಇವೆಲ್ಲ ಆಘಾತಗಳನ್ನು ಸಹಿಸಿಕೊಂಡು ಆ ತಾಯಿ ತನ್ನ ಬದುಕು ಸಾಗಿಸುವುದು ಹೇಗೆ?
ಐದು ವರುಷಗಳು ಇವೆಲ್ಲ ನೋವು ನುಂಗಿಕೊಂಡು ಹೈರಾಣಾಗಿ ದಿನ ತಳ್ಳಿದ ಆ ತಾಯಿಗೆ ವಾಹನ ಅಪಘಾತ ಟ್ರಿಬ್ಯುನಲಿನ ತೀರ್ಪಿನಂತೆ, ಗಂಡನ ಸಾವಿಗಾಗಿ ರೂ.೩೦ ಲಕ್ಷ ಪರಿಹಾರ ಸಿಕ್ಕಿದಾಗ, ಹೋದ ಜೀವ ಬಂದಂತಾಗುತ್ತದೆ. ಆ ತೀರ್ಪಿನ ಅನುಸಾರ, ರೂ.೨೫ ಲಕ್ಷ ಬ್ಯಾಂಕಿನಲ್ಲಿ ಹತ್ತು ವರುಷದ ಠೇವಣಿಯಿಟ್ಟು, ಆಕೆ ಹೊಸ ಬದುಕು ಕಟ್ಟಿಕೊಳ್ಳುತ್ತಾಳೆ.
ಜೀವನದಲ್ಲಿ ಕಹಿ-ಸಿಹಿಗಳು ಬೇರೆಯಲ್ಲ; ಅವೆರಡೂ ಒಂದೇ ಎನಿಸುವ ವರೆಗೆ ಬಂದುದನ್ನೆಲ್ಲ ಸಹಿಸುವುದು ಎಂದರೆ ಇದೇ ಆಲ್ಲವೇ? ಬದುಕಿನ ಕಠಿಣ ಕಷ್ಟಗಳನ್ನೆಲ್ಲ ಎದೆಯೊಡ್ಡಿ ಎದುರಿಸಿ, ನೋವುನಲಿವುಗಳ ಬಗ್ಗೆ ಸಮಭಾವ ಬೆಳೆಸಿಕೊಂಡ ಹಲವರು ಇದ್ದಾರೆ. ಅವರಿಂದ ಕಲಿಯೋಣ; ಕಲಿತು ಬೆಳೆಯೋಣ.
 

ಒಲ್ಲೆನೆನದಿರು ಬಾಳನ್; ಒಲವದೇನೆನದಿರು
ಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತು
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ
ಎಲ್ಲಕಂ ಸಿದ್ಧನಿರು - ಮಂಕುತಿಮ್ಮ
ಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ. ಕಾಲಸರಿದಂತೆ ಅವು ಹೆಚ್ಚಾಗುತ್ತವೆ ವಿನಃ ಕಡಿಮೆಯಾಗುವುದಿಲ್ಲ. ಇದನ್ನು ಕಂಡಾಗ ಈ ಬದುಕೇ ಬೇಡ ಎನಿಸುತ್ತದೆ. ಒಲವು ಎಂಬುದರ ವಿಷಯದಲ್ಲಿಯೂ ನಮ್ಮ ಅನುಭವ ಹಾಗೆಯೇ. ಯಾರನ್ನೋ ಪ್ರೀತಿಸುತ್ತೇವೆ; ಕೊನೆಗೆ ಅವರು ಮೋಸ ಮಾಡುತ್ತಾರೆ. ಯಾರಲ್ಲೋ ಪ್ರೀತಿವಿಶ್ವಾಸ ಇಟ್ಟುಕೊಳ್ಳುತ್ತೇವೆ; ಕೊನೆಗೊಮ್ಮೆ ಅವರಿಂದ ನಮಗೆ ದ್ರೋಹ! ಹಾಗಾಗಿ ಒಲವಿನ ಬಗ್ಗೆ ವೈರಾಗ್ಯ ಬೆಳೆಯುತ್ತದೆ. ಯಾರಾದರೂ ಪ್ರೀತಿವಿಶ್ವಾಸದ ಬಗ್ಗೆ ಮಾತಾಡಿದಾಗ ಅಸಡ್ಡೆಯಿಂದ “ಅದೇನದು?” ಅಂತೇವೆ.
ಇವು ಎರಡು ಧೋರಣೆಗಳೂ ಸರಿಯಲ್ಲ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಅದರ ಬದಲಾಗಿ, ನಾವು ಬದುಕಿನ ಬಗ್ಗೆ ಸಕಾರತ್ಮಕ ಧೋರಣೆ ಬೆಳೆಸಿಕೊಳ್ಳ ಬೇಕು ಎಂಬುದವರ ಸಂದೇಶ. ಅದಕ್ಕಾಗಿ ಅವರು ತೋರಿಸುವ ಎರಡು ದಾರಿಗಳು: ಇತರರ ಉಲ್ಲಾಸಕ್ಕಾಗಿ ನಮ್ಮಿಂದಾದಷ್ಟು ಸಹಾಯ ಮಾಡುವುದು ಮತ್ತು ಅನ್ಯಾಯಗಳ ವಿರುದ್ಧ ದಿಟ್ಟತನದಿಂದ ಹೋರಾಡುವುದು.
ಯಾವುದೇ ಹಣ ವೆಚ್ಚ ಮಾಡದೆ, ಇತರರಿಗೆ ಸಹಾಯ ಮಾಡಲು ನೂರಾರು ದಾರಿಗಳಿವೆ. ಒಂದು ಮುಗುಳ್ನಗು, ಒಂದು ಒಳ್ಳೆಯ ಮಾತು, ಬೆನ್ನು ತಟ್ಟಿ ಬೆಂಬಲಿಸುವುದು, ಕೈಕುಲುಕಿ ಅಭಿನಂದಿಸುವುದು, ಸಾಧನೆಯ ಬಗ್ಗೆ ಒಂದು ಮೆಚ್ಚುಗೆಯ ನುಡಿ – ಇದಕ್ಕೆಲ್ಲ ಯಾವ ಖರ್ಚೂ ಇಲ್ಲ, ಅಲ್ಲವೇ? ನಮ್ಮ ಸುತ್ತೆಲ್ಲ ಅನ್ಯಾಯ ತುಂಬಿರುವಾಗ, ಅದನ್ನು ಅಳಿಸಿ ಹಾಕಲು ಕೆಚ್ಚೆದೆಯಿಂದ ಕೆಲಸ ಮಾಡುವುದು ಅವರು ನೀಡುವ ಎರಡನೇ ಸೂತ್ರ. ಇದು ಉದಾತ್ತ ಕಾಯಕ. ಪರಿಸರದ ನಾಶ, ನಿಸರ್ಗ ಸಂಪತ್ತಿನ ಲೂಟಿ, ಜೀವವೈವಿಧ್ಯದ ಧ್ವಂಸ, ಇನ್ನೊಬ್ಬರ ಸೊತ್ತಿನ ನಾಶ, ಪರರಿಗೆ ಕಿರುಕುಳ, ಮೋಸ, ಜಾತಿಯ ಹೆಸರಿನಲ್ಲಿ ಹಿಂಸೆ, ಮಹಿಳೆಯರ ಮೇಲಿನ ದೌರ್ಜನ್ಯ – ಇವೆಲ್ಲವೂ ಅನ್ಯಾಯದ ವಿವಿಧ ರೂಪಗಳು. ಇವುಗಳ ವಿರುದ್ಧ ಹೋರಾಟ ಮಾಡಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವುದು ದೊಡ್ಡ ಸಾಧನೆ.
ಅಂತೂ ಜೀವನದಲ್ಲಿ ನಾವು ಎಲ್ಲದಕ್ಕೂ ತಯಾರಾಗಿರಬೇಕು ವಿನಃ ಜೀವನವೇ ಬೇಡ ಎನ್ನಬಾರದು. ಮುಂದಿನ ಕ್ಷಣದಲ್ಲಿ ಏನಾದೀತು ಎಂಬುದು ನಮಗಾರಿಗೂ ಗೊತ್ತಿಲ್ಲ. ಅದುವೇ ಬದುಕಿನ ಸ್ವಾರಸ್ಯ. ಬಾಳಿನಲ್ಲಿ ಏನೇ ಬರಲಿ, ಅದನ್ನು ಸ್ವೀಕರಿಸಲು ಸಿದ್ಧರಾಗೋಣ.

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ
ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ
ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ
ಕಡಿಯೆಲ್ಲ ಪಾಶಗಳ – ಮರುಳ ಮುನಿಯ
ಬದುಕಿನಲ್ಲಿ ಎಲ್ಲದಕ್ಕೂ ಸಿದ್ಧರಾದ ನಂತರ ….. ಈ ಜಗತ್ತಿನ ಎಲ್ಲ ತೊಡಕುಗಳಿಂದ ನಮ್ಮ ಜೀವವನ್ನು ಬಿಡಿಸಿಕೊಳ್ಳಬೇಕು; ಎಲ್ಲ ಮಮತೆ ಮಾತ್ರವಲ್ಲ ಪುಣ್ಯದ ಆಶೆಯನ್ನೂ ತ್ಯಜಿಸಬೇಕು ಎನ್ನುತ್ತಾರೆ ಮಾನ್ಯ ಡಿ.ವಿ.ಜಿ.
ಅದು ಸಾಧ್ಯವೇ? ಹಸಿವಾದಾಗ ತಿನ್ನಲೇ ಬೇಕು. ಅದಕ್ಕಾಗಿ ಹಣ ಗಳಿಸಬೇಕು – ದುಡಿತ ಅಥವಾ ವ್ಯವಹಾರದಿಂದ. ಮೈಮುಚ್ಚಲು ಉಡುಪು ಬೇಕೇ ಬೇಕು. ಅದಕ್ಕೂ ಹಣ ಬೇಕು. ರಾತ್ರಿ ಮಲಗಲೇ ಬೇಕು – ಅದಕ್ಕೊಂದು ಸೂರು ಬೇಕೇ ಬೇಕು. ಹೀಗೆ, ನಮ್ಮ ಮೂಲಭೂತ ಅಗತ್ಯಗಳೇ ನಮ್ಮನ್ನು ತೊಡಕುಗಳಲ್ಲಿ ಸಿಲುಕುಸುತ್ತವೆ. ಇಂತಹ ತೊಡಕುಗಳಿಂದ ಬಿಡುಗಡೆ ಮೊದಲ ಹಂತ.
ಮುಂದಿನ ಹಂತದಲ್ಲಿ, ನಮ್ಮನ್ನು ಕ್ಷಣಕ್ಷಣವೂ ಆವರಿಸಿಕೊಳ್ಳುವ ಮಾಯೆಯಿಂದ ಹುಟ್ಟುವ ಮಮತೆಯಿಂದ ವಿಮೋಚನೆ ಸಾಧಿಸಬೇಕು. ನನಗೊಬ್ಬನಿಗೇ ಒಳಿತಾಗಬೇಕು, ಒಳ್ಳೆಯದೆಲ್ಲವೂ ನನಗೇ ಸಿಗಬೇಕು ಎಂಬ ಸ್ವಾರ್ಥ; ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು, ಇತರರೆಲ್ಲ ನನ್ನ ಅಡಿಯಾಳಾಗಿರಬೇಕು ಎಂಬ ಅಧಿಕಾರ ಲಾಲಸೆ; ನಾನೇ ಸರಿ, ನನಗೆಲ್ಲ ಗೊತ್ತಿದೆ ಎಂಬ ಅಹಂಕಾರ – ಇವೆಲ್ಲವೂ ಮಮತೆಯ ವಿವಿಧ ರೂಪಗಳು. ಇವುಗಳನ್ನೆಲ್ಲ ತೊರೆಯಬೇಕು ಮಾತ್ರವಲ್ಲ ಪುಣ್ಯ ಗಳಿಸುವ ಆಶೆಯನ್ನೂ ಬಿಟ್ಟು ಬಿಡಬೇಕು.
ಇದಕ್ಕೆ ಸುಲಭದ ದಾರಿ ಯಾವುದು? ಜಗದ ಜಂಜಡಗಳ ಕಡಿತಕ್ಕೆ ಜಡನಾಗಿ ದುಡಿಯುವುದು. ದುಡಿಮೆಯಲ್ಲೇ ಮುಳುಗುವುದು – ಕಾಯಕವೇ ಕೈಲಾಸ ಎಂದು ನಂಬಿಕೊಂಡು. ಬೇಕಿದ್ದರೆ ಪರೀಕ್ಷಿಸಿ: ನೀವು ಅಪಾರ ದುಃಖದಲ್ಲಿ ಇರುವಾಗ, ಕ್ಷಣ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಳ್ಳಿ. ದುಃಖ ಪಡಲು ಪುರುಸೊತ್ತಿಲ್ಲದಂತೆ ದುಡಿದರೆ, ದುಃಖವೇ ಹತ್ತಿರ ಬರೋದಿಲ್ಲ. ಈ ಜಗತ್ತಿನ ಎಲ್ಲ ಪಾಶಗಳನ್ನು ಕಡಿದು, ನಮ್ಮ ಜೀವವನ್ನು ಮುಕ್ತಗೊಳಿಸಲು ಇದೇ ದಾರಿ.
 

ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು
ತಿರೆಗುರುಳುವುದು ತನ್ನ ಬಲವ ತಾಂ ಕಳೆದು
ನರನುಮಂತೆಯೆ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ - ಮಂಕುತಿಮ್ಮ
ಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್ಕೆ ಬಿಗಿಯಾಗಿ ನೂಲು ಸುತ್ತಿದ ಬಳಿಕ, ರೊಯ್ಯನೆ ನೆಲಕ್ಕೆಸೆದಾಗ ಸರ್ರನೆ ತಿರುಗಲು ಶುರು. ಹಾಗೆ ತಿರುಗುತ್ತ ನಿಧಾನವಾಗಿ ತನ್ನ ಬಲ ಹಾಗೂ ವೇಗ ಕಳೆದುಕೊಳ್ಳುತ್ತಿದ್ದ ಬುಗುರಿ ಕೊನೆಗೆ ನೆಲಕ್ಕೆ ಉರುಳಿ ಬೀಳುತ್ತಿತ್ತು; ಅದರ ಚಲನೆ ನಿಲ್ಲುತ್ತಿತ್ತು. ಮನುಷ್ಯನೂ ಹಾಗೆಯೇ ಎಂದು ಮನಮುಟ್ಟುವ ಮಾತನ್ನಾಡಿದ್ದಾರೆ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು.
ಯಾಕೆಂದರೆ ಮನುಷ್ಯನೂ ಬದುಕಿನುದ್ದಕ್ಕೂ ವೇಗವಾಗಿ ಸುತ್ತುತ್ತಾನೆ. ಏನೆಲ್ಲ ಚಟುವಟಿಕೆಗಳು! ಎಷ್ಟೆಲ್ಲ ಕಾರುಬಾರುಗಳು! ಒದ್ದಾಟಗಳು, ಸಂಕಟಗಳು, ಜಂಜಾಟಗಳು! ವಿದ್ಯಾಭ್ಯಾಸದ, ಯೌವನದ, ಸಂಸಾರದ ಸಮಸ್ಯೆಗಳು. ಇವುಗಳ ಸುಳಿಯಲ್ಲಿ ಸುತ್ತುತ್ತಾ ಸುತ್ತುತ್ತಾ, ಆರಂಭದ ವರುಷಗಳ ಉತ್ಸಾಹವನ್ನೂ ಬಲವನ್ನೂ ಕಳೆದುಕೊಳ್ಳುತ್ತಾ ಕೊನೆಗೊಂದು ದಿನ ಮಣ್ಣಿನಲ್ಲಿ ಮಣ್ಣಾಗುತ್ತಾನೆ (ತೆರುವನಸ್ಥಿಯ ಧರೆಗೆ).
೨೫ ಎಪ್ರಿಲ್ ೨೦೧೫ರಂದು ನೇಪಾಳದಲ್ಲಿ ೭.೯ ತೀವ್ರತೆಯ ಭೂಕಂಪದಲ್ಲಿ ಒಂದೇಟಿಗೆ ಸುಮಾರು ೮,೦೦೦ ಜನರು ಮಣ್ಣಾದರು. ಗಾಯಾಳುಗಳ ಸಂಖ್ಯೆ ಸುಮಾರು ೧೭,೦೦೦. ಭೂಕಂಪದ ಕ್ಷಣದ ವರೆಗೆ ಎಂತಹ ಜಂಜಡದ ಜೀವನ! ಅದಕಾಗಿ ಇದಕಾಗಿ ಮತ್ತೊಂದಕಾಗಿ ಬಿಡುವಿಲ್ಲದ ಬಡಿದಾಟ: ಪದವಿಗಾಗಿ, ಉದ್ಯೋಗಕ್ಕಾಗಿ, ವೇತನಕ್ಕಾಗಿ, ಭಡ್ತಿಗಾಗಿ, ಭದ್ರತೆಗಾಗಿ, ಸಂಸಾರಕ್ಕಾಗಿ, ಮಕ್ಕಳಿಗಾಗಿ, ಮನೆಗಾಗಿ, ಜಮೀನಿಗಾಗಿ – ಹೀಗೆ ಜೋರಾಗಿ ಸುತ್ತಿಸುತ್ತಿ ಹೆಣಗಿ ಹೆಣಗಿ ಕೊನೆಗೆ ಎಲ್ಲವೂ ಒಮ್ಮೆಲೇ ನಿಶ್ಚಲ!
೨,೫೦೦ ಕಿಮೀ ಉದ್ದದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭೂಕಂಪದ ಅಪಾಯದ ಗಂಟೆ ಮೊಳಗುತ್ತಲೇ ಇದೆ – ಭಾರತ ಭೂಖಂಡದ ಉತ್ತರದ ಗಡಿ ನೇಪಾಳದ ದಕ್ಷಿಣದ ಗಡಿಗೆ ೪೦ – ೫೦ ದಶಲಕ್ಷ ವರುಷಗಳ ಮುಂಚೆ ಅಪ್ಪಳಿಸಿದಾಗಿನಿಂದ. ಇಂತಹ ಆತಂಕದ ಭೂವಲಯದಲ್ಲಿ ಭೂಕಂಪದ ತೀವ್ರತೆ ತಡೆಯುವಂತಹ (ಜಪಾನಿನ ಮಾದರಿಯಂತೆ) ಮನೆಗಳನ್ನು ನಿರ್ಮಿಸಬೇಕಾಗಿತ್ತು. ಅದಕ್ಕೆ ಗಮನ ನೀಡದ ಕಾರಣ ಈಗ ೨,೮೦,೦೦೦ ಮನೆಗಳ ನಾಶ, ಅಪಾರ ಸಾವುನೋವು. ಮನುಷ್ಯನ ಬದುಕಿನ ದೊಡ್ದ ವಾಸ್ತವ ಸಾವು ಎಂಬ ಅರಿವು ನಮ್ಮಲ್ಲಿ ಬೆಳೆಯಲಿ.   

ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ
ತೆರೆಯ ಬೀಳೇಳುಗಳು ಕಾಲನದಿಯಳವು
ಪರಿಪರಿಯ ರೂಪು ತಳೆಯುವುದೊಂದೆ ವಾರಿಕಣ
ಪರಿದಾಟವದರಾಟ – ಮರುಳ ಮುನಿಯ
ಸಾವೆಂಬುದು ನಮ್ಮ ಬದುಕಿನ ದೊಡ್ದ ಸತ್ಯ. ಆದರೆ ಮರಣವೇ ಅಂತ್ಯವಲ್ಲ. ಹಾಗೆಯೇ, ಹುಟ್ಟೆಂಬುದು ಆರಂಭವೂ ಅಲ್ಲ ಎಂದು ಮಾರ್ಮಿಕವಾಗಿ ಸೂಚಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಹುಟ್ಟುಸಾವುಗಳು ಕಾಲನದಿಯ ತೆರೆಯ ಏಳುಬೀಳುಗಳು ಎನ್ನುವ ಮೂಲಕ, ಅವುಗಳ ಬಗ್ಗೆ ನಮ್ಮ ಅರಿವನ್ನು ಉನ್ನತ ಮಜಲಿಗೆ ಏರಿಸುತ್ತಾರೆ.
ಕೋಟಿಕೋಟಿ ಜನರ ಜನನ ಮತ್ತು ಮರಣ, ಈ ಲೋಕದಲ್ಲಿ ನಿರಂತರ. ಅನಂತವಾಗಿ ಹರಿಯುವ ಕಾಲನದಿಯಲ್ಲಿ ಇವೆಲ್ಲ ಕೇವಲ ಅಲೆಗಳು. ಈ ರೀತಿಯಲ್ಲಿ ಅರ್ಥ ಮಾಡಿಕೊಂಡಾಗ, ಸಾವಿನ ಆಘಾತದಿಂದ ಹೊರಬರಲು ಸಾಧ್ಯವಾಗುತ್ತದೆ. ನೇಪಾಳದ ಭೀಕರ ಭೂಕಂಪ ಅಥವಾ ದೇಶದೇಶಗಳನ್ನು ಆಕ್ರಮಿಸಿದ ಸುನಾಮಿಯಿಂದಾಗಿ ಸಾವಿರಾರು ಜನರು ಒಂದೇಟಿಗೆ ಇಲ್ಲವಾದ ಸಂದರ್ಭದಲ್ಲಿಯೂ ಉಳಿದವರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಆ ಅರಿವಿನಿಂದ ಸಹಾಯವಾಗುತ್ತದೆ.
ನೀರಿನ (ವಾರಿ) ಒಂದು ಕಣವನ್ನು ಗಮನಿಸಿರಿ. ಅದು ಬಗೆಬಗೆಯ ರೂಪ ತಾಳುತ್ತದೆ. ಹಾಗೆಯೇ ಮನುಜರಾದ ನಾವು ಪರಿಪರಿಯ ರೂಪ ತಾಳಿ ಈ ಭೂಮಿಗೆ ಬರುತ್ತೇವೆ. ಆ ನೀರಿನ ಕಣದಂತೆ ನಮ್ಮದೂ ಬರಿಯ ಹೆಣಗಾಟ. ಮಳೆಹನಿಯಾಗಿ ಮಣ್ಣಿಗೆ ಬೀಳುವ ನೀರಿನ ಕಣ, ಮಣ್ಣಿನಾಳಕ್ಕೆ ಇಳಿಯಬಹುದು. ಅಥವಾ ಇತರ ಅಸಂಖ್ಯ ನೀರಿನ ಕಣಗಳ ಜೊತೆ ಸೇರಿ, ನೀರ ಧಾರೆಯಾಗಿ, ತೊರೆಯಾಗಿ, ಹೊಳೆಯಾಗಿ, ನದಿಯಾಗಿ ಕೊನೆಗೆ ಸಾಗರ ಸೇರಬಹುದು. ಮಣ್ಣಿನಾಳದಿಂದ ಯಾವತ್ತಾದರೂ ಮೇಲೆತ್ತಿದಾಗ ಅಥವಾ ಸಾಗರದ ಉರಿಬಿಸಿಲಿಗೆ ಆವಿಯಾದಾಗ ಆಕಾಶಕ್ಕೇರಿ ಮೋಡವಾಗಿ ಅದರ ಅಲೆದಾಟ. ಮತ್ತೆ ಯಾವತ್ತಾದರೂ ವಾಯುವಿನ ಒತ್ತಡದ ಏರುಪೇರಿನಿಂದಾಗಿ, ಪುನಃ ಮಳೆಹನಿಯಾಗಿ ಭೂಮಿಗಿಳಿಯುವ ಪಾಡು. ಲಕ್ಷಗಟ್ಟಲೆ ವರುಷಗಳಲ್ಲಿ ನೀರಿನ ಕಣಕಣ ಪಟ್ಟ ಪಾಡು ನಮಗರಿವಾಗದು.
ನಮ್ಮ ಬದುಕೂ ಹಾಗೆಯೇ ಎಂಬ ಅರಿವು ಬೆಳೆಸಿಕೊಳ್ಳುವುದು ನಮ್ಮ ಅಳವಿನಲ್ಲಿದೆ. ಈ ಅರಿವಿನಿಂದಾಗಿ ನಮ್ಮ ಜೀವನ ಸಹನೀಯವಾದೀತು, ಅಲ್ಲವೇ?
 

ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನು
ಆತನೆಲ್ಲರನರೆವನ್; ಆರನುಂ ಬಿಡನು
ಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆ
ಘಾತಿಸುವನೆಲ್ಲರನು - ಮಂಕುತಿಮ್ಮ
“ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ ಸ್ಥಿತಿಯನ್ನು ಮರ್ಮಕ್ಕೆ ನಾಟುವಂತೆ ತೋರಿಸಿ ಕೊಡುತ್ತಾರೆ, ಮಾನ್ಯ ಡಿ.ವಿ. ಗುಂಡಪ್ಪನವರು. ಆ ಎಣ್ಣೆಯ ಗಾಣಕ್ಕೆ ಹಾಕಿದ ಎಳ್ಳು ಕಾಳಿನ ಗತಿ ಏನು? ಅದನ್ನು ಗಾಣ ಅರೆದು ಎಣ್ಣೆ ಹಿಂಡಿ ತೆಗೆಯುತ್ತದೆ. ಸೃಷ್ಟಿಕರ್ತನೂ ನಮ್ಮನ್ನೆಲ್ಲ ಹಾಗೆಯೇ ಬದುಕಿನಲ್ಲಿ ಕ್ಷಣಕ್ಷಣವೂ ಅರೆಯುತ್ತಾನೆ.
ಇತ್ತೀಚೆಗೆ ಆಂಧ್ರಪ್ರದೇಶದ ರಕ್ತಚಂದನದ ಕಾಡಿಗೆ ಮರಕಡಿಯಲು ನುಗ್ಗಿದ ತಮಿಳ್ನಾಡಿನ ಇಪ್ಪತ್ತು ಜನರು ಪೊಲೀಸರ ಗುಂಡಿಗೆ ಬಲಿಯಾದರು. ಎಪ್ರಿಲ್ ೨೦೧೫ರಲ್ಲಿ ಯುರೋಪಿಗೆ ಕಳ್ಳದಾರಿಯಲ್ಲಿ ನುಸುಳಲಿಕ್ಕಾಗಿ ಒಂದು ನೌಕೆಯಲ್ಲಿ ಬರುತ್ತಿದ್ದ ೯೦೦ ಜನರು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತರು. ೨೦೧೫ರಲ್ಲಿ ಆ ಸಮುದ್ರದಲ್ಲಿ ಹೀಗೆ ಸತ್ತವರ ಸಂಖ್ಯೆ (ಮೊದಲ ೪ ತಿಂಗಳುಗಳಲ್ಲಿ) ೧,೫೦೦. ಮುಂಚಿನ ವರುಷ ಹೀಗೆ ಬಲಿಯಾದವರು ೩,೨೦೦ ಜನರು.
ಜಗನ್ನಿಯಾಮಕ ಯಾರನ್ನೂ ಬಿಡುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೊರಟವರ ಮೇಲೂ ಆತನಿಗೆ ಕರುಣೆಯಿಲ್ಲ. ಜೂನ್ ೨೦೧೩ರಲ್ಲಿ ಕೇದಾರನಾಥದಲ್ಲಿ ಮತ್ತು ಉತ್ತರಖಂಡದ ರುದ್ರಪ್ರಯಾಗ, ಚಮೋಲಿ, ಉತ್ತರಕಾಶಿಗಳಲ್ಲಿ ಕಂಡುಕೇಳರಿಯದ ನೆರೆ ಬಂದಾಗ ಸತ್ತವರ ಸಂಖ್ಯೆ ೫,೦೦೦ ಎಂದು ಉತ್ತರಾಂಚಲ ಸರಕಾರ ಘೋಷಿಸಿದೆ.
ಹುಲುಮಾನವರಿಗೆ ಇಂತಹ ಗತಿ ಕಾಣಿಸುವಾಗ ಆತನಿಗೆ ಆತುರವಿಲ್ಲ; ಮರೆತು ಹೋಗುವುದೂ (ವಿಸ್ಮೃತಿ) ಇಲ್ಲ; ಯಾರನ್ನೂ ಆತ ಕಡೆಗಣಿಸುವುದಿಲ್ಲ. ಅಗ್ನಿಪರ್ವತಗಳು ಸ್ಫೋಟಿಸಿದಾಗ ಸತ್ತವರೆಷ್ಟು? ಭೂಕಂಪಗಳು ಆದಾಗೆಲ್ಲ ಬಲಿಯಾದವರೆಷ್ಟು? ಭಯಂಕರ ಪ್ರಳಯ “ಸುನಾಮಿ”ಯಲ್ಲಿ ಮಡಿದವರ ಸಂಖ್ಯೆ ೨,೭೫,೦೦೦ ಎಂದು ಅಂದಾಜು!
ಬ್ರಹ್ಮ ಎಲ್ಲರನ್ನು ಘಾತಿಸುತ್ತಾನೆ. ಯಾರೂ ಊಹಿಸದ ರೀತಿಯಲ್ಲಿ ಏಟು ನೀಡುತ್ತಾನೆ. ಮಲೇಷ್ಯಾದಿಂದ ಮೇಲೇರಿದ ವಿಮಾನವೊಂದು ನಾಪತ್ತೆಯಾಗಿ ಅವಶೇಷಗಳು ಇನ್ನೂ ಪತ್ತೆಯಾಗಿಲ್ಲ. ಅದಾಗಿ ಕೆಲವೇ ತಿಂಗಳುಗಳಲ್ಲಿ ಹಾಗೆಯೇ ಇನ್ನೊಂದು ವಿಮಾನ ಪತನ. ಆದ್ದರಿಂದ ಯಾವತ್ತೂ ನೆನಪಿರಲಿ: ನೀನು ಬ್ರಹ್ಮನ ಎಣ್ಣೆಗಾಣದ ಎಳ್ಳುಕಾಳು.  

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು
ಚಿಣ್ಣರಾಟವೆನೆ ನೋಡುತ ನಿನ್ನ ಪಾಡುಗಳ
ತಣ್ಣಗಿರುವನು ಶಿವನು – ಮರುಳ ಮುನಿಯ
ಸೃಷ್ತಿಕರ್ತನು ನಿನ್ನನ್ನು ಎಣ್ಣೆಗಾಣದಲ್ಲಿ ಸಿಲುಕಿದ ಎಳ್ಳು ಕಾಳಿನಂತೆ ಅರೆಯುತ್ತಿದ್ದರೆ, ಲಯಕರ್ತನಾದ ಶಿವ ನಿನ್ನನ್ನು ಏನು ಮಾಡುತ್ತಾನೆಂದು ಈ ಮುಕ್ತಕದಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾರೆ ಮಾನ್ಯ ಡಿ.ವಿ.ಜಿ. ನಿನ್ನ ಎಲ್ಲ ಸಂಕಷ್ಟಗಳನ್ನು ತನ್ನ ಮಕ್ಕಳ (ಚಿಣ್ಣರ) ಆಟವೆಂಬಂತೆ ನೋಡುತ್ತ ಶಿವನು ತಣ್ಣಗಿರುತ್ತಾನೆ; ಏನೂ ಆಗಿಲ್ಲ ಎಂಬಂತೆ ಇರುತ್ತಾನೆ ಎಂದು ವಿವರಿಸಿದ್ದಾರೆ.
ಹೌದಲ್ಲ! ನಾಗನರೇಶ್ ಎಂಬಾತ ಎಂಟನೆಯ ಕ್ಲಾಸಿನಲ್ಲಿ ಓದುತ್ತಿದ್ದ. ಒಂದು ದಿನ ಲಾರಿ ಡ್ರೈವರಿನ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ. ಆಗೊಂದು ಅಪಘಾತ. ನಾಗನರೇಶ್ ಲಾರಿಯಿಂದ ರಸ್ತೆಗೆ ಬಿದ್ದ. ಲಾರಿಯಲ್ಲಿದ್ದ ಕಬ್ಬಿಣದ ಪೈಪುಗಳು ಅವನ ಕಾಲುಗಳ ಮೇಲೆ ಉರುಳಿ ಬಿದ್ದವು. ಕೊನೆಗೆ ಅವನ ಎರಡೂ ಕಾಲುಗಳನ್ನು ಡಾಕ್ಟರ್ ಕತ್ತರಿಸಬೇಕಾಯಿತು. ಕಾಲುಗಳು ಹೋದರೇನಂತೆ, ಕೈಗಳು ಇವೆಯಲ್ಲ ಎಂಬಂತೆ ಬದುಕಿದ ನಾಗನರೇಶ್ ಈಗ ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಅಧಿಕಾರಿ. ಅವನ ಮುಗುಳ್ನಗು ಅವನ ಆತ್ಮವಿಶ್ವಾಸದ ಸಂಕೇತ.
ಅವಳ ಹೆಸರು ಜೆಸ್ಸಿಕಾ ಕಾಕ್ಸ್. ಅಮೇರಿಕಾದ ಅರಿಜೋನಾ ಪ್ರಾಂತ್ಯದವಳು. ಅವಳು ಪದವೀಧರೆ, ಕರಾಟೆಪಟು, ಈಜಿನ ಚಾಂಪಿಯನ್, ಚೆನ್ನಾಗಿ ಕಾರು ಚಲಾಯಿಸುತ್ತಾಳೆ, ವಿಮಾನವನ್ನೂ ಹಾರಿಸುತ್ತಾಳೆ. ಅದರಲ್ಲೇನು ವಿಶೇಷ ಅಂತೀರಾ? ಅವಳಿಗೆ ಹುಟ್ಟುವಾಗಲೇ ಎರಡೂ ಕೈಗಳಿಲ್ಲ. ಕೈಗಳು ಇಲ್ಲದಿದ್ದರೇನಂತೆ, ಕಾಲುಗಳು ಇವೆಯಲ್ಲ ಎಂಬಂತೆ ಬದುಕಿ ಬೆಳೆದಿರುವ ಜೆಸ್ಸಿಕಾಳದು ಅಪ್ರತಿಮ ಸಾಧನೆ: ಕಾಲುಗಳಿಂದ ವಿಮಾನ ಹಾರಿಸುವ ಮೊತ್ತಮೊದಲ ಪೈಲಟ್.
ಆಸ್ಟ್ರೇಲಿಯಾದ ನಿಕ್ ಮೊಯಾಚಿಚ್ - ಹುಟ್ಟುವಾಗಲೇ ಎರಡೂ ಕೈಗಳಿಲ್ಲದ, ಎರಡೂ ಕಾಲುಗಳಿಲ್ಲದ ವ್ಯಕ್ತಿ. ಆದ್ದರಿಂದಲೇ ಅವನ ಬದುಕು “ಮಿತಿಯಿಲ್ಲದ ಬದುಕು” ಆಗಿದೆ. ನಮ್ಮ ಬದುಕನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಈ ಮೂವರು ಮಾದರಿ. ಗಮನಿಸಿ, ಇಂತಹ ಸಾವಿರಾರು ಜನರಿದ್ದಾರೆ. ಕಣ್ಣಿಲ್ಲದ ಹಲವು ಕುರುಡರು ಕಣ್ಣಿದ್ದವರಿಗೇ ಬೆಳಕಾಗಿದ್ದಾರೆ, ಅಲ್ಲವೇ?
ಬದುಕಿನಲ್ಲಿ ನಾವು ಎಲ್ಲವನ್ನೂ ಅನುಭವಿಸಬೇಕಾಗುತ್ತದೆ – ದುಃಖ, ಕೋಪ, ಕೆರಳುವಿಕೆ, ಪ್ರಾಣವೇ ಹೋಗುವಂತಹ ಸಂಕಟ. ಹಾಗೆಯೇ ನಮ್ಮ ಆಸೆ, ಹೆದರಿಕೆ, ಗರ್ವ, ಪಾಂಡಿತ್ಯ ಪ್ರದರ್ಶನ, ಭಿನ್ನಹ, ದುಡಿತ – ಇವೆಲ್ಲವೂ ನಮಗೆ ಉತ್ಕಟ ಅನುಭವ, ಆದರೆ ಆ ಸದಾಶಿವನಿಗೆ ಇವೆಲ್ಲ ಮಕ್ಕಳಾಟ.
 

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ-
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ
“ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು ಹೆದರಿಕೊಂಡು, ಜೀವನವನ್ನು ಬಿಟ್ಟು ಓಡಿ ಹೋಗುವವರ ಗತಿ ಏನಾದೀತು? ಅವರು ವಿಧಿಯ (ಬಿದಿಯ) ಬಾಯಿಗೆ ತುತ್ತು (ಕವಳ) ಆಗುತ್ತಾರೆ ಎಂಬುದು ಮಾನ್ಯ ಡಿ.ವಿ.ಗುಂಡಪ್ಪನವರ ಅಭಿಪ್ರಾಯ.
ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಗಮನಿಸಿ. ಅವರಿಗೆ ವಿಧಿ ಹಲವನ್ನು ಕೊಟ್ಟಿರುತ್ತದೆ; ಕೆಲವನ್ನು ಕೊಟ್ಟಿರುವುದಿಲ್ಲ, ಅಷ್ಟೇ. ಹಾಗಂತ ವಿಧಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುವುದಿಲ್ಲ. ಪ್ರತಿಯೊಬ್ಬರಿಗೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಸಂಪತ್ತಿದ್ದರೆ ಆರೋಗ್ಯವಿಲ್ಲ; ಆರೋಗ್ಯವಿದ್ದರೆ ಸಂಪತ್ತಿಲ್ಲ. “ಹಲ್ಲಿದ್ದಾಗ ತಿನ್ನಲು ಕಡಲೆಯಿಲ್ಲ, ಕಡಲೆಯಿದ್ದಾಗ ತಿನ್ನಲು ಹಲ್ಲಿಲ್ಲ” ಎಂಬ ಪರಿಸ್ಥಿತಿ ಎಲ್ಲರದು.
ಆದರೆ ಆತ್ಮಹತ್ಯೆ ಇಂಥಹ ಸಮಸ್ಯೆಗಳಿಗೆ ಪರಿಹಾರವಲ್ಲ. ಅಂಥವರು ಏನನ್ನು ಸಾಧಿಸುತ್ತಾರೆ? ಅದರ ಬದಲಾಗಿ, ನಮ್ಮೆದೆಯನ್ನು ಉಕ್ಕಿನಂತೆ ಸಶಕ್ತವಾಗಿಸಿ, ವಿವೇಕದಿಂದ ಜೀವನವನ್ನು ಎದುರಿಸಿದರೆ, ವಿಧಿ ನಮಗೆ ಒಲಿಯುತ್ತದೆ.
ಇದಕ್ಕೆ ಅದ್ಭುತವಾದ ಉದಾಹರಣೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೯೮೨ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ. ಹುಟ್ಟುವಾಗಲೇ ಕೈಗಳು ಇಲ್ಲದವರನ್ನು ಕಂಡಿದ್ದೇವೆ; ಕಾಲುಗಳೆರಡನ್ನೂ ಕಳೆದುಕೊಂಡವರನ್ನು ಕಂಡಿದ್ದೇವೆ. ಆದರ ಈತನಿಗೆ ಹುಟ್ಟುವಾಗಲೇ ಎರಡು ಕೈಗಳೂ ಎರಡು ಕಾಲುಗಳೂ ಇಲ್ಲ! ಬಡವರಾದ ತಂದೆತಾಯಿಗಳಾಗಿದ್ದರೆ, ಇಂತಹ ಮಗುವನ್ನು ಹುಟ್ಟಿದೊಡನೆ ತಿಪ್ಪೆಗುಂಡಿಗೆ ಎಸೆಯುತ್ತಿದ್ದರೇನೋ!
ಅವನ ಹೆಸರು ನಿಕ್ ವೋಯಾಚಿಚ್. ಅವನದೀಗ “ಮಿತಿಯೇ ಇಲ್ಲದ ಬದುಕು” (ಇದು ಆತನ ಆತ್ಮಕತೆಯ ಹೆಸರು). ಜೀವನದ ಪ್ರತಿಯೊಂದು ಸಂಕಟದಲ್ಲಿಯೂ ಒಂದು ಉದ್ದೇಶವಿದೆ; ಸಂಕಟದ ಬಗೆಗಿನ ನಮ್ಮ ಮನೋಭಾವವೇ ಅದರ ಪರಿಣಾಮವನ್ನು ನಿರ್ಧರಿಸುತ್ತದೆ ಎಂದು ನಂಬಿ ಬೆಳೆದವನು ನಿಕ್. ಆತ ಪದವೀಧರನೂ ಆದ; ಮದುವೆಯೂ ಆದ.
ಎಲ್ಲದಕ್ಕಿಂತ ಮಿಗಿಲಾಗಿ, ತನ್ನ ಪ್ರೇರಣಾ ಭಾಷಣಗಳಿಂದ ೫೦ ಲಕ್ಷ ಜನರ ಬದುಕಿಗೆ ಹೊಸ ಬೆಳಕು ನೀಡಿದ ಅಸಾಧಾರಣ ವ್ಯಕ್ತಿ ನಿಕ್. ಅವನಿಗೆ ವಿಧಿ ಒಲಿದಿದೆ, ಅಲ್ಲವೇ?

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು?
ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ?
ಜೀವಕಂ ಸಾವಿಗಂ ಸಮಸಿದ್ಧನಾದವನೆ
ಕೋವಿದನು ತತ್ವದಲಿ – ಮರುಳ ಮುನಿಯ
“ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ. ಗುಂಡಪ್ಪನವರು ಹೇಳುತ್ತಾರೆ: ಜೀವ ಹೊರೆಯಲ್ಲ. ಹಾಗಾಗಿ ಅದನ್ನು ಎತ್ತಿ ಬಿಸಾಡು ಎನ್ನುವುದು ಯಾಕೆ? ಜೀವ ಇರುವುದೇ ಬದುಕಲಿಕ್ಕೆ. ಜೀವನದಿಯಲ್ಲಿ ಈಸಬೇಕು, ಈಸಿ ಜಯಿಸಬೇಕು. ಹಾಗೆಯೇ ಸಾವು ಎಂದರೆ ನಾಶ ಎಂದಲ್ಲ. ಸಾವಿನಿಂದ ಯಾವುದೂ ನಷ್ಟವಾಗುವುದಿಲ್ಲ. ಹಾಗಿರುವಾಗ, ಸಾಯಲು ಭಯವೇಕೆ? ಎಂದು ಕೇಳುತ್ತಾರೆ.
ಬದುಕಿನ ದೊಡ್ಡ ಸತ್ಯ ಸಾವು. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಈ ಸತ್ಯವನ್ನು ಒಪ್ಪಿಕೊಳ್ಳುವುದೇ ವಿವೇಕ. ಜೀವನವನ್ನೂ, ಜೀವನದ ಕೊನೆಯಾದ ಸಾವನ್ನೂ ಸಮಚಿತ್ತದಿಂದ ಎದುರಿಸುವವನೇ ಬದುಕಿನ ತತ್ವವನ್ನು ತಿಳಿದ ವಿವೇಕಿಯಾಗುತ್ತಾನೆ.
ಅರುಣಿಮಾ ಸಿನ್ಹಾ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ (ಜನನ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ೧೯೮೮ರಲ್ಲಿ). ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯನ್ನು ದುಷ್ಟರು ರೈಲಿನಿಂದ ಹೊರಕ್ಕೆ ದೂಡಿದ್ದು ೧೧ ಎಪ್ರಿಲ್ ೨೦೧೧ರಂದು. ಓಡುವ ರೈಲಿನಡಿಗೆ ಬಿದ್ದ ಆಕೆಯ ಎಡಗಾಲೇ ತುಂಡಾಯಿತು. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಬದುಕೇ ಭಾರವೆನಿಸುತ್ತಿತ್ತು. ಆದರೆ ಅರುಣಿಮಾ ತನ್ನ ಬದುಕನ್ನು ಸವಾಲಾಗಿ ಸ್ವೀಕರಿಸಿದಳು. ದೊಡ್ಡ ಕನಸು ಕಂಡಳು – ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರವನ್ನೇ ಏರುವ ಕನಸು. ಎಡಗಾಲು ಕಳೆದುಕೊಂಡ ಎರಡೇ ವರುಷಗಳಲ್ಲಿ (೧ ಎಪ್ರಿಲ್ ೨೦೧೩ರಂದು) ಆ ದೊಡ್ಡ ಕನಸನ್ನು ಛಲದಿಂದ ನನಸು ಮಾಡಿದಳು ಅರುಣಿಮಾ.
ಈಗ ಅವಳು ಈ ಜಗತ್ತಿನಲ್ಲೇ ಅಪ್ರತಿಮ ಮಹಿಳೆ – ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿದ ಜಗತ್ತಿನ ಮೊತ್ತಮೊದಲ ಕಾಲಿಲ್ಲದ ಮಹಿಳೆ. ಅಬ್ಬ ಎಂಥ ಸಾಧನೆ! ಇದನ್ನು ದಾಖಲಿಸಿದ್ದಾಳೆ “ಪರ್ವತದಲ್ಲಿ ಮರುಹುಟ್ಟು” ಎಂಬ ಆತ್ಮಕತೆಯಲ್ಲಿ.
ಈಗ, ತನಗೆ ಬರುತ್ತಿರುವ ಪ್ರಶಸ್ತಿಗಳ ಹಣವನ್ನೆಲ್ಲ ತನ್ನ ಎರಡನೇ ಕನಸಿನ ಸಾಧನೆಗಾಗಿ ಧಾರೆ ಎರೆಯುತ್ತಿದ್ದಾಳೆ – ಅದು ಬಡ ವಿಕಲಚೇತನ ವ್ಯಕ್ತಿಗಳಿಗಾಗಿ ಕ್ರೀಡಾ ಅಕಾಡೆಮಿ ಕಟ್ಟುವ ಕನಸು. ೨೦೧೫ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಅರುಣಿಮಾ ಸಿನ್ಹಾಳನ್ನು ಗೌರವಿಸಿದೆ. ಈಗ ಹೇಳಿ, ಬದುಕು ಭಾರವೇ?
 

Pages