ಕಗ್ಗ ದರ್ಶನ – 15

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ-
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ
“ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು ಹೆದರಿಕೊಂಡು, ಜೀವನವನ್ನು ಬಿಟ್ಟು ಓಡಿ ಹೋಗುವವರ ಗತಿ ಏನಾದೀತು? ಅವರು ವಿಧಿಯ (ಬಿದಿಯ) ಬಾಯಿಗೆ ತುತ್ತು (ಕವಳ) ಆಗುತ್ತಾರೆ ಎಂಬುದು ಮಾನ್ಯ ಡಿ.ವಿ.ಗುಂಡಪ್ಪನವರ ಅಭಿಪ್ರಾಯ.
ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಗಮನಿಸಿ. ಅವರಿಗೆ ವಿಧಿ ಹಲವನ್ನು ಕೊಟ್ಟಿರುತ್ತದೆ; ಕೆಲವನ್ನು ಕೊಟ್ಟಿರುವುದಿಲ್ಲ, ಅಷ್ಟೇ. ಹಾಗಂತ ವಿಧಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುವುದಿಲ್ಲ. ಪ್ರತಿಯೊಬ್ಬರಿಗೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಸಂಪತ್ತಿದ್ದರೆ ಆರೋಗ್ಯವಿಲ್ಲ; ಆರೋಗ್ಯವಿದ್ದರೆ ಸಂಪತ್ತಿಲ್ಲ. “ಹಲ್ಲಿದ್ದಾಗ ತಿನ್ನಲು ಕಡಲೆಯಿಲ್ಲ, ಕಡಲೆಯಿದ್ದಾಗ ತಿನ್ನಲು ಹಲ್ಲಿಲ್ಲ” ಎಂಬ ಪರಿಸ್ಥಿತಿ ಎಲ್ಲರದು.
ಆದರೆ ಆತ್ಮಹತ್ಯೆ ಇಂಥಹ ಸಮಸ್ಯೆಗಳಿಗೆ ಪರಿಹಾರವಲ್ಲ. ಅಂಥವರು ಏನನ್ನು ಸಾಧಿಸುತ್ತಾರೆ? ಅದರ ಬದಲಾಗಿ, ನಮ್ಮೆದೆಯನ್ನು ಉಕ್ಕಿನಂತೆ ಸಶಕ್ತವಾಗಿಸಿ, ವಿವೇಕದಿಂದ ಜೀವನವನ್ನು ಎದುರಿಸಿದರೆ, ವಿಧಿ ನಮಗೆ ಒಲಿಯುತ್ತದೆ.
ಇದಕ್ಕೆ ಅದ್ಭುತವಾದ ಉದಾಹರಣೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೯೮೨ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ. ಹುಟ್ಟುವಾಗಲೇ ಕೈಗಳು ಇಲ್ಲದವರನ್ನು ಕಂಡಿದ್ದೇವೆ; ಕಾಲುಗಳೆರಡನ್ನೂ ಕಳೆದುಕೊಂಡವರನ್ನು ಕಂಡಿದ್ದೇವೆ. ಆದರ ಈತನಿಗೆ ಹುಟ್ಟುವಾಗಲೇ ಎರಡು ಕೈಗಳೂ ಎರಡು ಕಾಲುಗಳೂ ಇಲ್ಲ! ಬಡವರಾದ ತಂದೆತಾಯಿಗಳಾಗಿದ್ದರೆ, ಇಂತಹ ಮಗುವನ್ನು ಹುಟ್ಟಿದೊಡನೆ ತಿಪ್ಪೆಗುಂಡಿಗೆ ಎಸೆಯುತ್ತಿದ್ದರೇನೋ!
ಅವನ ಹೆಸರು ನಿಕ್ ವೋಯಾಚಿಚ್. ಅವನದೀಗ “ಮಿತಿಯೇ ಇಲ್ಲದ ಬದುಕು” (ಇದು ಆತನ ಆತ್ಮಕತೆಯ ಹೆಸರು). ಜೀವನದ ಪ್ರತಿಯೊಂದು ಸಂಕಟದಲ್ಲಿಯೂ ಒಂದು ಉದ್ದೇಶವಿದೆ; ಸಂಕಟದ ಬಗೆಗಿನ ನಮ್ಮ ಮನೋಭಾವವೇ ಅದರ ಪರಿಣಾಮವನ್ನು ನಿರ್ಧರಿಸುತ್ತದೆ ಎಂದು ನಂಬಿ ಬೆಳೆದವನು ನಿಕ್. ಆತ ಪದವೀಧರನೂ ಆದ; ಮದುವೆಯೂ ಆದ.
ಎಲ್ಲದಕ್ಕಿಂತ ಮಿಗಿಲಾಗಿ, ತನ್ನ ಪ್ರೇರಣಾ ಭಾಷಣಗಳಿಂದ ೫೦ ಲಕ್ಷ ಜನರ ಬದುಕಿಗೆ ಹೊಸ ಬೆಳಕು ನೀಡಿದ ಅಸಾಧಾರಣ ವ್ಯಕ್ತಿ ನಿಕ್. ಅವನಿಗೆ ವಿಧಿ ಒಲಿದಿದೆ, ಅಲ್ಲವೇ?

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು?
ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ?
ಜೀವಕಂ ಸಾವಿಗಂ ಸಮಸಿದ್ಧನಾದವನೆ
ಕೋವಿದನು ತತ್ವದಲಿ – ಮರುಳ ಮುನಿಯ
“ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ. ಗುಂಡಪ್ಪನವರು ಹೇಳುತ್ತಾರೆ: ಜೀವ ಹೊರೆಯಲ್ಲ. ಹಾಗಾಗಿ ಅದನ್ನು ಎತ್ತಿ ಬಿಸಾಡು ಎನ್ನುವುದು ಯಾಕೆ? ಜೀವ ಇರುವುದೇ ಬದುಕಲಿಕ್ಕೆ. ಜೀವನದಿಯಲ್ಲಿ ಈಸಬೇಕು, ಈಸಿ ಜಯಿಸಬೇಕು. ಹಾಗೆಯೇ ಸಾವು ಎಂದರೆ ನಾಶ ಎಂದಲ್ಲ. ಸಾವಿನಿಂದ ಯಾವುದೂ ನಷ್ಟವಾಗುವುದಿಲ್ಲ. ಹಾಗಿರುವಾಗ, ಸಾಯಲು ಭಯವೇಕೆ? ಎಂದು ಕೇಳುತ್ತಾರೆ.
ಬದುಕಿನ ದೊಡ್ಡ ಸತ್ಯ ಸಾವು. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಈ ಸತ್ಯವನ್ನು ಒಪ್ಪಿಕೊಳ್ಳುವುದೇ ವಿವೇಕ. ಜೀವನವನ್ನೂ, ಜೀವನದ ಕೊನೆಯಾದ ಸಾವನ್ನೂ ಸಮಚಿತ್ತದಿಂದ ಎದುರಿಸುವವನೇ ಬದುಕಿನ ತತ್ವವನ್ನು ತಿಳಿದ ವಿವೇಕಿಯಾಗುತ್ತಾನೆ.
ಅರುಣಿಮಾ ಸಿನ್ಹಾ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ (ಜನನ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ೧೯೮೮ರಲ್ಲಿ). ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯನ್ನು ದುಷ್ಟರು ರೈಲಿನಿಂದ ಹೊರಕ್ಕೆ ದೂಡಿದ್ದು ೧೧ ಎಪ್ರಿಲ್ ೨೦೧೧ರಂದು. ಓಡುವ ರೈಲಿನಡಿಗೆ ಬಿದ್ದ ಆಕೆಯ ಎಡಗಾಲೇ ತುಂಡಾಯಿತು. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಬದುಕೇ ಭಾರವೆನಿಸುತ್ತಿತ್ತು. ಆದರೆ ಅರುಣಿಮಾ ತನ್ನ ಬದುಕನ್ನು ಸವಾಲಾಗಿ ಸ್ವೀಕರಿಸಿದಳು. ದೊಡ್ಡ ಕನಸು ಕಂಡಳು – ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರವನ್ನೇ ಏರುವ ಕನಸು. ಎಡಗಾಲು ಕಳೆದುಕೊಂಡ ಎರಡೇ ವರುಷಗಳಲ್ಲಿ (೧ ಎಪ್ರಿಲ್ ೨೦೧೩ರಂದು) ಆ ದೊಡ್ಡ ಕನಸನ್ನು ಛಲದಿಂದ ನನಸು ಮಾಡಿದಳು ಅರುಣಿಮಾ.
ಈಗ ಅವಳು ಈ ಜಗತ್ತಿನಲ್ಲೇ ಅಪ್ರತಿಮ ಮಹಿಳೆ – ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿದ ಜಗತ್ತಿನ ಮೊತ್ತಮೊದಲ ಕಾಲಿಲ್ಲದ ಮಹಿಳೆ. ಅಬ್ಬ ಎಂಥ ಸಾಧನೆ! ಇದನ್ನು ದಾಖಲಿಸಿದ್ದಾಳೆ “ಪರ್ವತದಲ್ಲಿ ಮರುಹುಟ್ಟು” ಎಂಬ ಆತ್ಮಕತೆಯಲ್ಲಿ.
ಈಗ, ತನಗೆ ಬರುತ್ತಿರುವ ಪ್ರಶಸ್ತಿಗಳ ಹಣವನ್ನೆಲ್ಲ ತನ್ನ ಎರಡನೇ ಕನಸಿನ ಸಾಧನೆಗಾಗಿ ಧಾರೆ ಎರೆಯುತ್ತಿದ್ದಾಳೆ – ಅದು ಬಡ ವಿಕಲಚೇತನ ವ್ಯಕ್ತಿಗಳಿಗಾಗಿ ಕ್ರೀಡಾ ಅಕಾಡೆಮಿ ಕಟ್ಟುವ ಕನಸು. ೨೦೧೫ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಅರುಣಿಮಾ ಸಿನ್ಹಾಳನ್ನು ಗೌರವಿಸಿದೆ. ಈಗ ಹೇಳಿ, ಬದುಕು ಭಾರವೇ?