HRM

ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು.

ಅದೊಂದು ದಿನ ಉತ್ತರ ಗುರುಕುಲದ ಹುಡುಗನನ್ನು ಸಂಧಿಸಿದ ದಕ್ಷಿಣ ಗುರುಕುಲದ ಹುಡುಗ ಪ್ರಶ್ನಿಸಿದ, “ಎಲ್ಲಿಗೆ ಹೋಗೋದು ನೀನು?” ಉತ್ತರ ಗುರುಕುಲದ ಹುಡುಗ ಉತ್ತರಿಸಿದ, "ನನ್ನ ಕಾಲುಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಗೆ.”

ಇದನ್ನು ಕೇಳಿ ಗೊಂದಲಕ್ಕೆ ಒಳಗಾದ ದಕ್ಷಿಣ ಗುರುಕುಲದ ಹುಡುಗ ತನ್ನ ಗುರುಗಳಿಗೆ ನಡೆದ ಸಂಗತಿ ತಿಳಿಸಿದ. ಆಗ ಗುರುಗಳು, ಉತ್ತರ ಗುರುಕುಲದ ಹುಡುಗನ ಕೈ ಮೇಲಾಗಬಾರದೆಂದೂ, ಗೊಂದಲ ಪಡಬಾರದೆಂದೂ ತಿಳಿಸಿ, ಒಂದು ಉಪಾಯ ಸೂಚಿಸುತ್ತಾರೆ: "ನಾಳೆ ಅವನು ಎದುರಾದಾಗಲೂ ಇದೇ ಪ್ರಶ್ನೆ ಕೇಳು. ಅವನ ಉತ್ತರ ಅದೇ ಆಗಿರುತ್ತದೆ. ತಕ್ಷಣ ಇನ್ನೊಂದು ಪ್ರಶ್ನೆ ಕೇಳು: ನಿನಗೆ ಕಾಲುಗಳಿಲ್ಲ ಎಂದಿರಲಿ; ಆಗ ಎಲ್ಲಿಗೆ ಹೋಗುತ್ತಿ? ಈ ಪ್ರಶ್ನೆಯಿಂದ ನಿರುತ್ತರನಾಗುತ್ತಾನೆ ಅವನು.”

ಮರುದಿನ ಬೆಳಗ್ಗೆ ಪುನಃ ಇಬ್ಬರು ಹುಡುಗರ ಮುಖಾಮುಖಿ. “ಎಲ್ಲಿಗೆ ಹೋಗೋದು ನೀನು?” ಎಂಬ ಪ್ರಶ್ನೆಗೆ ಉತ್ತರ ಗುರುಕುಲದ ಹುಡುಗ ಉತ್ತರಿಸಿದ್ದು ಹೀಗೆ: "ಗಾಳಿ ಯಾವ ದಿಕ್ಕಿಗೆ ತೇಲಿಸಿ ಒಯ್ಯುತ್ತದೆಯೋ ಆ ದಿಕ್ಕಿಗೆ ಹೋಗುತ್ತೇನೆ.”

ಈ ಉತ್ತರದಿಂದ ಅಪ್ರತಿಭನಾದ ದಕ್ಷಿಣ ಗುರುಕುಲದ ಹುಡುಗ ತನ್ನ ಗುರುಗಳಿಗೆ ನಡೆದ ಸಂಗತಿ ನಿವೇದಿಸಿದ. ಒಂದು ಕ್ಷಣ ಯೋಚಿಸಿದ ಗುರುಗಳು ಹೀಗೆನ್ನುತ್ತಾರೆ: “ಇದಕ್ಕೆ ಸರಿಯಾದ ಉಪಾಯ ಹೇಳುತ್ತೇನೆ . ನಾಳೆ ಅವನು ನಿನಗೆ ಸಿಕ್ಕಿದಾಗಲೂ ಇದೇ ಪ್ರಶ್ನೆ ಕೇಳು. ಒಂದು ವೇಳೆ ಅವನು ಇವತ್ತಿನ ಉತ್ತರವನ್ನೇ ಕೊಟ್ಟರೆ, ನೀನು ಮರುಪ್ರಶ್ನೆ ಹಾಕು: ಗಾಳಿ ಬೀಸುತ್ತಿಲ್ಲ ಎಂದಿರಲಿ; ಆಗ ನೀನು ಹೋಗೋದೆಲ್ಲಿಗೆ?”

ಮರುದಿನ ಬೆಳಗ್ಗೆ ಹಾದಿಯಲ್ಲಿ ಇಬ್ಬರು ಹುಡುಗರು ಪುನಃ ಎದುರುಬದುರಾದರು. “ಎಲ್ಲಿಗೆ ಹೋಗೋದು ನೀನು?” ಎಂಬ ಪ್ರಶ್ನೆಗೆ ಉತ್ತರ ಗುರುಕುಲದ ಹುಡುಗನ ನೇರ ಉತ್ತರ: "ನಾನು ಗುರುಕುಲಕ್ಕೆ ತರಕಾರಿ ತರಲಿಕ್ಕಾಗಿ ಮಾರುಕಟ್ಟೆಗೆ ಹೋಗುತ್ತಿದ್ದೇನೆ.”

 

ಝೆನ್ ವಿದ್ಯಾರ್ಥಿ ಯಮಒಕನಿಗೆ ಎಲ್ಲವನ್ನೂ ತಿಳಿಯಬೇಕೆಂಬ ಬಯಕೆ. ಒಬ್ಬರಾದ ನಂತರ ಇನ್ನೊಬ್ಬ ಝೆನ್ ಗುರುಗಳನ್ನು ಕಂಡು ಮುಂದುವರಿಯುತ್ತಿದ್ದ.

ಕೊನೆಗೆ ಝೆನ್ ಗುರು ಡೊಕುಓನ್ ಅವರ ದರ್ಶನ ಪಡೆದ. ತನ್ನ ಬಗ್ಗೆ ಅವರಿಗೆ ತಿಳಿಸುತ್ತಾ, ತನ್ನ ಜ್ನಾನ ಪ್ರದರ್ಶಿಸಲಿಕ್ಕಾಗಿ ಹೀಗೆಂದ, "ಗುರುಗಳೇ, ನಮನಗಳು. ನಾನು ತಿಳಿದದ್ದು ಏನೆಂದರೆ ಮನಸ್ಸು ಎಂಬುದಿಲ್ಲ, ದೇಹ ಎಂಬುದೂ ಇಲ್ಲ. ಒಳ್ಳೆಯದು, ಕೆಟ್ಟದ್ದು ಎರಡೂ ಇಲ್ಲ. ಅರಿವು ಎಂಬುದಿಲ್ಲ, ಭ್ರಮೆ ಎಂಬುದೂ ಇಲ್ಲ. ನಾವು ನೋಡುತ್ತೇವೆ ಹಾಗೂ ಅನುಭವಿಸುತ್ತೇವೆ ಅನ್ನೋದೂ ಸತ್ಯವಲ್ಲ. ನಮಗೆ ಕಾಣುವ, ನಮ್ಮ ಗ್ರಹಿಕೆಗೆ ಸಿಗುವ ಯಾವ ವಸ್ತುವಿಗೂ ಅಸ್ತಿತ್ವವಿಲ್ಲ. ನಿಜವಾಗಿ ಇರುವುದು ಮಹಾಶೂನ್ಯ ಒಂದೇ.”

ಗುರು ಡೊಕುಓನ್ ಗುಡಗುಡಿ ಸೇದುತ್ತಾ ಕೂತಿದ್ದರು. ಈತ ಹೇಳಿದ ಎಲ್ಲವನ್ನೂ ಶಾಂತ ಚಿತ್ತದಿಂದ ಕೇಳಿದರು. ತಟ್ಟನೆ ತನ್ನ ದಂಡವನ್ನೆತ್ತಿ, ಬೀಸಿ, ಯಮಒಕನಿಗೊಂದು ಬಲವಾದ ಏಟು ಕೊಟ್ಟರು. ರಭಸದಿಂದ ಅಪ್ಪಳಿಸಿದ ದಂಡದ ಏಟಿಗೆ ಆತ ನಡುಗಿದ. ನೋವಿನಿಂದ ಕಿರುಚಿದ. ಅವನ ಕಣ್ಣುಗಳು ಕೋಪದಿಂದ ಕೆಂಡವಾದವು.

ಇದೀಗ ಗುರು ಡೊಕುಓನ್ ತಣ್ಣಗಿನ ಸ್ವರದಲ್ಲಿ ಕೇಳಿದರು, “ಏನು ಹೇಳಿದ್ದು ನೀನು? ಇಲ್ಲಿರುವ ಯಾವ ವಸ್ತುವಿಗೂ ಸತ್ಯವಾದ ಅಸ್ತಿತ್ವವಿಲ್ಲ. ನಿಜವಾಗಿ ಇರುವುದು ಮಹಾಶೂನ್ಯ ಒಂದೇ ಎಂದು ಹೇಳಿದೆ. ಆದರೂ ಈಗ ನಿನಗೆ ಕೋಪ ಬಂತು ನೋಡು. ಅದು ಎಲ್ಲಿಂದ ಬಂತು?”

 

ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”

ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು, “ಕೆರೆ ಹೇಗಿದೆ?” ಶಿಷ್ಯ ಕೆರೆಯನ್ನೊಮ್ಮೆ ನೋಡಿ ಹೇಳಿದ, “ಕೆರೆ ಶಾಂತವಾಗಿದೆ.” “ಬಾಗಿ ನೋಡು, ಏನು ಕಾಣಿಸುತ್ತಿದೆ?” ಎಂದು ಪುನಃ ಪ್ರಶ್ನಿಸಿದರು ಗುರು. ಶಿಷ್ಯ ಬಾಗಿ ನೋಡಿ, "ನನ್ನ ಮುಖ ಕಾಣಿಸುತ್ತಿದೆ” ಎಂದು ಉತ್ತರಿಸಿದ.

ಅದಾಗಿ ಒಂದು ತಿಂಗಳ ನಂತರ ಗುರು ಮತ್ತು ಶಿಷ್ಯ ಪುನಃ ಅದೇ ಕೆರೆಯ ಬಳಿಗೆ ಬಂದರು. ಈಗಲೂ ಗುರುವಿನ ಅದೇ ಪ್ರಶ್ನೆಗೆ ಅದೇ ಉತ್ತರ ನೀಡಿದ ಶಿಷ್ಯ. ಐದಾರು ಸಲ ಇದರ ಪುನರಾವರ್ತನೆ ಆಯಿತು.

ಅದಾದ ನಂತರ, ಗುರು ಅದೇ ಪ್ರಶ್ನೆ ಕೇಳಿದಾಗ, ಶಿಷ್ಯ ನೀಡಿದ ಮಾರ್ಮಿಕ ಉತ್ತರ ಹೀಗಿತ್ತು: ”ನಾನೀಗ ಕೆರೆಯ ನೀರಿನಲ್ಲಿ ಕಾಣುತ್ತಿರುವುದು ನನ್ನ ಬಿಂಬವನ್ನಲ್ಲ, ಧ್ಯಾನಿಯಂತೆ ತೇಲುತ್ತಿರುವ ಬಾತುಕೋಳಿಯ ಪಾದಗಳನ್ನು, ನೈದಿಲೆಯ ಬೇರುಗಳನ್ನು, ತಾವರೆಯ ದಳಗಳನ್ನು ಮತ್ತು ಬಣ್ಣಬಣ್ಣದ ಮೀನುಗಳ ಮೌನಸಂವಾದವನ್ನು.”

“ಹೀಗೆ ಆತ್ಮಮೋಹವನ್ನು ಬಿಟ್ಟು ಹೊರಜಗತ್ತನ್ನು ನೋಡಲು ಶುರು ಮಾಡುವುದೇ ಸೌಂದರ್ಯದ ಮೊದಲ ಅನುಭವ “ ಎನ್ನುತ್ತಾ ಗುರು ತನ್ನ ಪಾಠ ಆರಂಭಿಸಿದರು. 

ಸಂಜೆಯ ಹೊತ್ತು. ಕೆರೆಯ ದಡದಲ್ಲಿ ಕುಳಿತಿದ್ದ ಗುರು-ಶಿಷ್ಯರ ಮಾತುಕತೆ ನಡೆದಿತ್ತು.

ಅಲ್ಲೇ ದೂರದಲ್ಲಿ ಬಹಳ ಹೊತ್ತಿನಿಂದ ಹಕ್ಕಿಯೊಂದು ನೀರನ್ನು ನೋಡುತ್ತಾ ಕುಳಿತಿತ್ತು. ಅದನ್ನು ಗಮನಿಸಿದ ಶಿಷ್ಯನೊಬ್ಬನ ಉದ್ಗಾರ, “ನೋಡಿ, ಅಲ್ಲೊಂದು ಹಕ್ಕಿ, ನಾವು ಇಲ್ಲಿಗೆ ಬಂದಾಗಿನಿಂದ ಸುಮ್ಮನೆ ಕುಳಿತಿದೆ!” ಮತ್ತೊಬ್ಬ ಶಿಷ್ಯ ತಕ್ಷಣ ಪ್ರತಿಕ್ರಿಯಿಸಿದ, “ಹಾಗಲ್ಲ, ಆ ಹಕ್ಕಿ ಧ್ಯಾನ ಮಾಡುತ್ತಿದೆ.”

ಈ ಸಂವಾದ ಕೇಳಿಸಿಕೊಂಡ ಗುರು ಎತ್ತಿದ ಪ್ರಶ್ನೆ: “ಧ್ಯಾನ, ಏನು ಅದರರ್ಥ?” ಎಲ್ಲ ಶಿಷ್ಯರ ಒಕ್ಕೊರಲ ಉತ್ತರ, “ನಮಗೆ ಚೆನ್ನಾಗಿ ಗೊತ್ತಿದೆ.”

ಅವರಲ್ಲೊಬ್ಬ “ಧ್ಯಾನ ಅಂದರೆ ಕಣ್ಣುಮುಚ್ಚಿಕೊಂಡು ಏಕಾಗ್ರತೆ ಸಾಧಿಸುವುದು” ಎಂದರೆ ಇನ್ನೊಬ್ಬ, “ಧ್ಯಾನವೆಂದರೆ ಈಗಿನ ಕ್ಷಣದಲ್ಲಿ ಇರುವುದು” ಎಂದ. ಮತ್ತೊಬ್ಬ “ಧ್ಯಾನದ ಅರ್ಥ ನಿರಂತರ ಎಚ್ಚರ" ಎಂದುಲಿದ.

“ಧ್ಯಾನವೆಂದರೆ ಇದೇ ಅರ್ಥವೆಂದು ನೀವು ಹೇಗೆ ತಿಳಿದಿರಿ?” ಎಂದು ಗುರು ಅವರನ್ನು ಪ್ರಶ್ನಿಸಿದಾಗ, "ನಾವು ಅರ್ಥಕೋಶದಿಂದ ತಿಳಿದುಕೊಂಡೆವು” ಎಂಬುದು ಶಿಷ್ಯರ ಉತ್ತರ.

ಗುರು ಮುಗುಳ್ನಕ್ಕು ಹೇಳಿದ, “ಅರ್ಥಕೋಶದಲ್ಲಿ ಧ್ಯಾನದ ಅರ್ಥ ಹುಡುಕಬಾರದು. ಅರಳುವ ಹೂಗಳಲ್ಲಿ, ಚಿಗುರುವ ಕೊಂಬೆಗಳಲ್ಲಿ, ಮೊಳೆಯುವ ಬೀಜಗಳಲ್ಲಿ ಹುಡುಕಬೇಕು.”

"ಗುರುಗಳೇ, ಅಲ್ಲೆಲ್ಲ ಹುಡುಕಾಡಿದರೆ ಧ್ಯಾನ ಎಂದರೇನೆಂದು ಅರ್ಥವಾದೀತೇ?” ಎಂಬ ಶಿಷ್ಯರ ಪ್ರಶ್ನೆಗೆ, ಕೆಲವು ಕ್ಷಣಗಳ ಮೌನದ ನಂತರ ಗುರುವಿನ ಉತ್ತರ: “ಇಲ್ಲ, ಅರ್ಥವಾಗುವುದಿಲ್ಲ. ಅರ್ಥವಾದರೆ ಅದು ಧ್ಯಾನವಲ್ಲ ಎಂಬುದನ್ನು ತಿಳಿಯಿರಿ. ಧ್ಯಾನ ಅರ್ಥವಾಯಿತು ಅನ್ನೋದು ಇಂಪಾದ ರಾಗ ಅರ್ಥವಾಯಿತು ಎನ್ನುವಷ್ಟೇ ಅಸಂಬದ್ಧ.” 

ಗಿಡದಲ್ಲಿ ಅರಳಿದ್ದ ಹೂವನ್ನು ನೋಡುತ್ತಿದ್ದ ಶಿಷ್ಯ ಉದ್ಗರಿಸಿದ, “ಈ ಹೂ ನನಗೆ ಬಹಳ ಇಷ್ಟವಾಯಿತು.”
“ಅದ್ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ಶಿಷ್ಯನ ಉತ್ತರ: “ಈ ಹೂ ಬಹಳ ಚಂದ; ಅದಕ್ಕೆ…" ಈ ಉತ್ತರದಿಂದ ಸಮಾಧಾನವಾಗದ ಗುರುಗಳು ಇನ್ನೊಬ್ಬ ಶಿಷ್ಯನನ್ನು ಪ್ರಶ್ನಿಸಿದರು, “ಏನಯ್ಯಾ? ನಿನಗ್ಯಾವುದು ಇಷ್ಟ?"

ಆತ ಕಣ್ಣು ಮಿಟುಕಿಸದೆ ನೀಡಿದ ಉತ್ತರ, “ನನಗೆ ದೇವರು ಬಹಳ ಇಷ್ಟ." ಇವನಿಗೂ ಗುರುಗಳಿಂದ ಅದೇ ಮರುಪ್ರಶ್ನೆ: "ಯಾಕೆ?"
ಇವನ ನೇರ ಉತ್ತರ: "ದೇವರು ಜಗನ್ನಿಯಾಮಕ, ಅದಕ್ಕೆ…" ಈ ಉತ್ತರದಿಂದಲೂ ಸಮಾಧಾನವಿಲ್ಲ ಗುರುಗಳಿಗೆ. ಅನಂತರ ಮೂರನೆಯ ಶಿಷ್ಯನಿಗೂ ಗುರುಗಳಿಂದ ಅದೇ ಪ್ರಶ್ನೆ.

ಅವನು ಮುಜುಗರ ಪಡುತ್ತಾ ನೀಡಿದ ಉತ್ತರ, "ನನ್ನ ಪ್ರಿಯತಮೆ ನನಗೆ ಬಹಳ ಇಷ್ಟ." ತಟ್ಟನೆ ಬಂತು ಗುರುಗಳಿಂದ ಮರುಪ್ರಶ್ನೆ, "ಯಾಕೆ?" ಇನ್ನಷ್ಟು ಮುಜುಗರ ಪಡುತ್ತಾ ಯೋಚಿಸುತ್ತಾ ನಿಧಾನವಾಗಿ ಉತ್ತರಿಸಿದ, “ಅದ್ಯಾಕೆಂದು ಗೊತ್ತಿಲ್ಲ.”

ಗುರುಗಳು ಸ್ವಲ್ಪ ಹೊತ್ತು ಮೌನವಾಗಿದ್ದರು. ಅನಂತರ ಮುಗುಳ್ನಗುತ್ತಾ ಗುರುಗಳು ಹೇಳಿದರು, “ಸರಿಯಾಗಿದೆ ಕಣಯ್ಯಾ ನಿನ್ನ ಉತ್ತರ. ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಲು ಸಾಧ್ಯವಿಲ್ಲ. ಗೊತ್ತಿಲ್ಲ ಅನ್ನೋದು ಅಜ್ನಾನವಲ್ಲ. ಅದು ಕೂಡ ಜ್ನಾನ, ನಿಚ್ಚಳ ಜ್ನಾನ."

ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು.

ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ. ಆತ ಐನೂರು ಚಿನ್ನದ ನಾಣ್ಯಗಳನ್ನು ಮಠಕ್ಕೆ ಕಾಣಿಕೆಯಾಗಿ ಸಮರ್ಪಿಸಿದ.

“ಆಗಲಿ, ಮಠಕ್ಕಾಗಿ ಇದನ್ನು ಸ್ವೀಕರಿಸುತ್ತೇನೆ” ಎಂದರು ಅಲ್ಲಿನ ಗುರುಗಳು. ಇದನ್ನು ಕೇಳಿ ಆ ವ್ಯಾಪಾರಿ ಪೆಚ್ಚಾದ. ಒಂದಲ್ಲ, ಎರಡಲ್ಲ, ಐನೂರು ಚಿನ್ನದ ನಾಣ್ಯ ಸಮರ್ಪಿಸಿದ್ದೇನೆ. ಈ ಗುರುಗಳು ಒಂದೇ ಒಂದು ಕೃತಜ್ನತೆಯ ಮಾತು ಹೇಳುತ್ತಿಲ್ಲವಲ್ಲ ಎಂದುಕೊಂಡ ವ್ಯಾಪಾರಿ. ಕೊನೆಗೆ ತಡೆಯಲಾಗದೆ ವ್ಯಾಪಾರಿ ಹೇಳಿದ, "ಗುರುಗಳೇ, ಆ ಚೀಲದಲ್ಲಿ ಐನೂರು ಚಿನ್ನದ ನಾಣ್ಯಗಳನ್ನು ನಿಮಗೆ ಕೊಟ್ಟಿದ್ದೇನೆ.”

ಗುರುಗಳು ಏರುಪೇರಿಲ್ಲದ ಧ್ವನಿಯಲ್ಲಿ ಹೇಳಿದರು, "ಸರಿ, ಅದನ್ನು ನೀನು ಹೇಳಿದ್ದೀಯಲ್ಲ.” ವ್ಯಾಪಾರಿ ಪುನಃ ಹೇಳಿದ, "ನಾನು ಕೊಟ್ಟಿರೋದು ಐನೂರು ಚಿನ್ನದ ನಾಣ್ಯ, ಗುರುಗಳೇ. ನಾನು ಶ್ರೀಮಂತನಾಗಿರಬಹುದು. ಆದರೆ ಐನೂರು ಚಿನ್ನದ ನಾಣ್ಯಗಳು ಕಡಿಮೆಯೇನಲ್ಲ.”

ಗುರುಗಳು ತಣ್ಣಗೆ ಪ್ರಶ್ನಿಸಿದರು, “ನೀನು ಕೊಟ್ಟಿರೋದಕ್ಕೆ ನಾನು ಕೃತಜ್ನತೆ ಸಲ್ಲಿಸಬೇಕು ಎಂಬ ನಿರೀಕ್ಷೆಯಲ್ಲಿದ್ದೀಯಾ?”

ವ್ಯಾಪಾರಿಯ ಪ್ರತಿಕ್ರಿಯೆ, “ಅಲ್ಲವೇ ಮತ್ತೆ?”

ಆಗ ಗುರುಗಳು ಹೇಳಿದ ಮಾತು: "ಯಾಕೆ ನಾನು ನಿನಗೆ ಕೃತಜ್ನತೆ ಹೇಳಬೇಕು? ನೀನು ಕೊಟ್ಟದ್ದನ್ನು ತಗೊಂಡಿದ್ದೇನಲ್ಲ. ಅದಕ್ಕಾಗಿ ನೀನೇ ನನಗೆ ಕೃತಜ್ನತೆ ಹೇಳಬೇಕು.”

ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ.
ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ?
ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ.
ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ?
ಜ್ನಾಹದಾಹಿಯ ಉತ್ತರ: ಪಕ್ಕದ ರಾಜ್ಯದ ಸರೋವರದ ಹತ್ತಿರದ ಮಠದಲ್ಲಿ.
ಗುರುವಿನ ಪ್ರಶ್ನೆ: ಅಲ್ಲಿಂದ ಯಾವಾಗ ಹೊರಟದ್ದು?
ಜ್ನಾನದಾಹಿಯ ಉತ್ತರ: ಅಲ್ಲಿಂದ ಹುಣ್ಣಿಮೆಯಂದು ಇಲ್ಲಿಗೆ ಹೊರಟೆ.
ಈಗ ಗುರುವಿನ ಪ್ರತಿಕ್ರಿಯೆ: ಒಂದು ಕೋಲು ತಗೊಂಡು ಮೂರು ಏಟು ಬಾರಿಸಬೇಕು ನಿನಗೆ. ಆದರೆ ಇವತ್ತು ನಿನಗೆ ಕ್ಷಮೆ ನೀಡಿದ್ದೇನೆ. ಗೊತ್ತಾಯಿತಾ?
ಜ್ನಾನದಾಹಿಗೆ ಗುರುವಿನ ಮಾತಿನ ಮರ್ಮ ತಿಳಿಯಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ಬೆಪ್ಪನಂತೆ ನಿಂತ ಅವನಿಗೆ ಗುರು ಹೇಳಿದ ಮಾತು: “ಅಯೋಗ್ಯ ನೀನು! ಮಠದಿಂದ ಮಠಕ್ಕೆ ಅಲೆಯುವುದೇ ಕೆಲಸವಾಗಿದೆ ನಿನಗೆ."
ತಕ್ಷಣವೇ ಆ ಜ್ನಾನದಾಹಿಗೆ ಅರಿವು ಮೂಡಿತು.

 

ಝೆನ್ ಗುರು ಸೋಯೆನ್ ಶಕುವಿನ ಶಿಷ್ಯರು, ಬಿರು ಬೇಸಗೆಯಲ್ಲಿ ಕೆಲವೊಮ್ಮೆ ಸೆಕೆ ತಾಳಲಾಗದೆ ಹಗಲು ಹೊತ್ತಿನಲ್ಲೇ ನಿದ್ದೆ ಮಾಡುತ್ತಿದ್ದರು. ಸೋಯೆನ್ ಶಕು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಮಾತ್ರ ದಿನವಿಡೀ ಸದಾ ಚಟುವಟಿಕೆಯಿಂದಿರುತ್ತಿದ್ದ. ಇದಕ್ಕೆ ಕಾರಣ ಆತ ಶಿಷ್ಯನಾಗಿದ್ದಾಗ ನಡೆದ ಒಂದು ಘಟನೆ.

ಆಗ ಸೊಯೇನ್ ಶಕುವಿಗೆ ಹನ್ನೆರಡರ ವಯಸ್ಸು. ಆತ “ತೆಂಡೆ" ತತ್ತ್ವಜ್ನಾನ ಕಲಿಯುತ್ತಿದ್ದ. ಅದೊಂದು ಬೇಸಗೆಯ ನಡುಹಗಲು. ಉರಿ ಬಿಸಿಲು. ದಣಿದಿದ್ದ ಸೋಯೆನ್ ಶಕುವಿಗೆ ತಂಪುಗಾಳಿ ಬೀಸಿದಾಗ ಮಂಪರು. ಆಶ್ರಮದ ಹೊಸ್ತಿಲಲ್ಲೇ ಮಲಗಿ ಬಿಟ್ಟ.

ಸಮಯ ಸರಿಯುತ್ತಲೇ ಇತ್ತು. ಮೂರು ತಾಸುಗಳ ನಂತರ ಸೋಯೆನ್ ಶಕುವಿಗೆ ಅಚಾನಕ್ ಎಚ್ಚರವಾದಾಗ ಗಾಬರಿ. ಯಾಕೆಂದರೆ, ಎಲ್ಲೋ ಹೋಗಿದ್ದ ಅವನ ಗುರುಗಳು ಆಶ್ರಮಕ್ಕೆ ಮರಳಿ, ಆಗಷ್ಟೇ ಅವನಿದ್ದಲ್ಲಿಗೆ ಬಂದು ನಿಂತಿದ್ದರು.

ಇನ್ನೂ ಮಲಗಿಯೇ ಇದ್ದ ಸೋಯೆನ್ ಶಕುವನ್ನು ಉದ್ದೇಶಿಸಿ, "ದಯವಿಟ್ಟು ಮನ್ನಿಸಬೇಕು, ದಯವಿಟ್ಟು ಮನ್ನಿಸಬೇಕು" ಎನ್ನುತ್ತಾ ಗುರುಗಳು ಅಪಾರ ಎಚ್ಚರದಿಂದ ಅವನಿಗೆ ಕಾಲು ಸೋಕದಂತೆ ಅವನನ್ನು ದಾಟಿ ಆಶ್ರಮದ ಒಳಕ್ಕೆ ಕಾಲಿಟ್ಟರು.

ಅದೇ ಕೊನೆ. ಅನಂತರ ಸೋಯೆನ್ ಶಕು ಯಾವತ್ತೂ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಲಿಲ್ಲ.

ಗುರು ಸೆನ್‌ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್ರಮದ ಗೋಡೆ ಹಾರಿ ಪೇಟೆಗೆ ಹೋಗುತ್ತಿದ್ದ; ಮರುದಿನ ಮುಂಜಾವ ಮೆತ್ತಗೆ ಮರಳುತ್ತಿದ್ದ.

ಅದೊಂದು ದಿನ ರಾತ್ರಿ ಗುರು ಸೆನ್‌ಗೈ ಆಶ್ರಮದ ಗೋಡೆಗೆ ಐದು ಮೆಟ್ಟಲುಗಳ ಪುಟ್ಟ ಏಣಿ ತಗಲಿಸಿ ಇಟ್ಟದ್ದನ್ನು ನೋಡಿದ. ಶಿಷ್ಯರನ್ನೆಲ್ಲ ಗಮನಿಸಿದಾಗ ಒಬ್ಬ ಶಿಷ್ಯ ನಾಪತ್ತೆ ಎಂಬುದು ಪತ್ತೆ. ಸೆನ್‌ಗೈಗೆ ಎಲ್ಲವೂ ಅರ್ಥವಾಯಿತು.

ಅನಂತರ, ಆ ಪುಟ್ಟ ಏಣಿಯನ್ನು ಆಚೆಗಿಟ್ಟು, ಅದಿದ್ದ ಜಾಗದಲ್ಲಿ ನಿಂತುಕೊಂಡ ಗುರು ಸೆನ್‌ಗೈ. ಪೇಟೆಯ ತಿರುಗಾಟ ಮುಗಿಸಿದ ಶಿಷ್ಯ ಎಂದಿನಂತೆ ಮುಂಜಾವ ವಾಪಾಸು ಬಂದ. ಆಶ್ರಮದ ಗೋಡೆಯಿಂದ ಕೆಳಗೆ ಇಳಿಯುವಾಗ, ಏಣಿಯ ಮೆಟ್ಟಲೆಂದು ಭಾವಿಸಿ, ಗುರುವಿನ ತಲೆಯ ಮೇಲೇ ಕಾಲಿಟ್ಟು ಕೆಳಕ್ಕೆ ಜಿಗಿದ. ತಕ್ಷಣವೇ ಪ್ರಮಾದವಾಯಿತೆಂದು ತಿಳಿದ ಶಿಷ್ಯ ಕಕ್ಕಾಬಿಕ್ಕಿಯಾಗಿ ಗುರುವಿನ ಎದುರು ತಲೆ ತಗ್ಗಿಸಿ ನಿಂತ.

ಗುರು ಸೆನ್‌ಗೈ ಶಾಂತ ಸ್ವರದಲ್ಲಿ ಹೇಳಿದ, “ಬೆಳ್ಳಂಬೆಳಗ್ಗೆ ಹೊರಗೆ ಬಹಳ ಚಳಿ ಇರುತ್ತದೆ. ನಿನಗೆ ಶೀತವಾಗದಂತೆ ಎಚ್ಚರದಿಂದಿರು ಮಗೂ!"

ಅದೇ ಕೊನೆ. ಅನಂತರ ಯಾವತ್ತೂ ಆ ಶಿಷ್ಯ ರಾತ್ರಿ ಆಶ್ರಮದಿಂದ ಹೊರಗೆ ಹೋಗಲಿಲ್ಲ.

ಝೆನ್ ಗುರು ಮೊಕುಸೆನ್ ಬಳಿಗೆ ಅವನ ಅನುಯಾಯಿಯೊಬ್ಬ ಬಂದ. ತನ್ನ ಸಂಕಟಗಳನ್ನು ಹೇಳಿಕೊಂಡು, ಕೊನೆಗೆ ತನ್ನ ಮಡದಿಯ ಜಿಪುಣ ಬುದ್ಧಿಯ ಬಗ್ಗೆ ತಿಳಿಸಿದ.

ಮುಂದೊಂದು ದಿನ ಅವನ ಮನೆಗೆ ಗುರು ಮೊಕುಸೆನ್‌ನ ಆಗಮನ. ಅವನ ಪತ್ನಿಯೆದುರು ನಿಂತು, ತನ್ನ ಕೈಯನ್ನು ಅವಳ ಮುಖದೆದುರು ಎತ್ತಿ ಹಿಡಿದು ಮುಷ್ಟಿ  ಬಿಗಿ ಮಾಡಿದ.

ಅವಳಿಗೆ ಗೊಂದಲ. ಕೆಲವು ಕ್ಷಣಗಳ ನಂತರ ಇದೇನೆಂದು ಅವಳು ಕೇಳಿದಾಗ, ಮೊಕುಸೆನ್‌ನ ಪ್ರಶ್ನೆ: "ನಾನು ಯಾವಾಗಲೂ ಹೀಗೇ ಮುಷ್ಟಿ ಬಿಗಿ ಹಿಡಿದಿದ್ದರೆ, ನೀನು ಏನನ್ನುತ್ತಿ?” ಅವಳ ಉತ್ತರ, “ಅದೊಂದು ವಿಕಲತೆ ಅಂತೇನೆ.”

ಅನಂತರ, ಮೊಕುಸೆನ್ ತನ್ನ ಅಂಗೈಯ ಬೆರಳುಗಳನ್ನು ಅಗಲವಾಗಿ ಬಿಡಿಸಿ, ಪುನಃ ಅವಳ ಮುಖದೆದುರು ಹಿಡಿದು ಕೇಳಿದ, "ನಾನು ಯಾವಾಗಲೂ ಅಂಗೈ ಹೀಗೆ ಬಿಡಿಸಿಟ್ಟರೆ, ಇದನ್ನು ಏನನ್ನುತ್ತಿ?” ಅವಳು ತಕ್ಷಣ ಹೇಳಿದ್ದು, “ಇದನ್ನೂ ವಿಕಲತೆ ಅಂತೇನೆ.”

“ಓ, ಇಷ್ಟು ಅರ್ಥ ಮಾಡಿಕೊಂಡಿದ್ದೀಯಲ್ಲ, ಸಾಕು. ನೀನು ಒಳ್ಳೆಯ ಹೆಂಡತಿ, ಗೊತ್ತಾಯಿತಾ?” ಎಂದವನೇ ಗುರು ಮೊಕುಸೆನ್ ಅಲ್ಲಿಂದ ಹೊರಟು ಹೋದ.

ಇದಾದ ನಂತರ ಆ ಮಡದಿ, ಖರ್ಚು ಮತ್ತು ಉಳಿತಾಯ ಮಾಡುವುದರಲ್ಲಿ ಯಾವತ್ತೂ ತನ್ನ ಗಂಡನಿಗೆ ಅನುಕೂಲೆಯಾಗಿದ್ದಳು.

Pages