ಝೆನ್ ಪ್ರಸಂಗ: ತಗೊಂಡವನಲ್ಲ, ಕೊಟ್ಟವನು ಕೃತಜ್ನನಾಗಿರಬೇಕು

ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು.

ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ. ಆತ ಐನೂರು ಚಿನ್ನದ ನಾಣ್ಯಗಳನ್ನು ಮಠಕ್ಕೆ ಕಾಣಿಕೆಯಾಗಿ ಸಮರ್ಪಿಸಿದ.

“ಆಗಲಿ, ಮಠಕ್ಕಾಗಿ ಇದನ್ನು ಸ್ವೀಕರಿಸುತ್ತೇನೆ” ಎಂದರು ಅಲ್ಲಿನ ಗುರುಗಳು. ಇದನ್ನು ಕೇಳಿ ಆ ವ್ಯಾಪಾರಿ ಪೆಚ್ಚಾದ. ಒಂದಲ್ಲ, ಎರಡಲ್ಲ, ಐನೂರು ಚಿನ್ನದ ನಾಣ್ಯ ಸಮರ್ಪಿಸಿದ್ದೇನೆ. ಈ ಗುರುಗಳು ಒಂದೇ ಒಂದು ಕೃತಜ್ನತೆಯ ಮಾತು ಹೇಳುತ್ತಿಲ್ಲವಲ್ಲ ಎಂದುಕೊಂಡ ವ್ಯಾಪಾರಿ. ಕೊನೆಗೆ ತಡೆಯಲಾಗದೆ ವ್ಯಾಪಾರಿ ಹೇಳಿದ, "ಗುರುಗಳೇ, ಆ ಚೀಲದಲ್ಲಿ ಐನೂರು ಚಿನ್ನದ ನಾಣ್ಯಗಳನ್ನು ನಿಮಗೆ ಕೊಟ್ಟಿದ್ದೇನೆ.”

ಗುರುಗಳು ಏರುಪೇರಿಲ್ಲದ ಧ್ವನಿಯಲ್ಲಿ ಹೇಳಿದರು, "ಸರಿ, ಅದನ್ನು ನೀನು ಹೇಳಿದ್ದೀಯಲ್ಲ.” ವ್ಯಾಪಾರಿ ಪುನಃ ಹೇಳಿದ, "ನಾನು ಕೊಟ್ಟಿರೋದು ಐನೂರು ಚಿನ್ನದ ನಾಣ್ಯ, ಗುರುಗಳೇ. ನಾನು ಶ್ರೀಮಂತನಾಗಿರಬಹುದು. ಆದರೆ ಐನೂರು ಚಿನ್ನದ ನಾಣ್ಯಗಳು ಕಡಿಮೆಯೇನಲ್ಲ.”

ಗುರುಗಳು ತಣ್ಣಗೆ ಪ್ರಶ್ನಿಸಿದರು, “ನೀನು ಕೊಟ್ಟಿರೋದಕ್ಕೆ ನಾನು ಕೃತಜ್ನತೆ ಸಲ್ಲಿಸಬೇಕು ಎಂಬ ನಿರೀಕ್ಷೆಯಲ್ಲಿದ್ದೀಯಾ?”

ವ್ಯಾಪಾರಿಯ ಪ್ರತಿಕ್ರಿಯೆ, “ಅಲ್ಲವೇ ಮತ್ತೆ?”

ಆಗ ಗುರುಗಳು ಹೇಳಿದ ಮಾತು: "ಯಾಕೆ ನಾನು ನಿನಗೆ ಕೃತಜ್ನತೆ ಹೇಳಬೇಕು? ನೀನು ಕೊಟ್ಟದ್ದನ್ನು ತಗೊಂಡಿದ್ದೇನಲ್ಲ. ಅದಕ್ಕಾಗಿ ನೀನೇ ನನಗೆ ಕೃತಜ್ನತೆ ಹೇಳಬೇಕು.”